ಸ್ಟೇಟಸ್ ಕತೆಗಳು (ಭಾಗ ೫೭೯) - ಸಾಧನೆ
"ನಿನಗೆ ವಿಷಯ ಗೊತ್ತಾ? ವಿಶ್ವದಾಖಲೆ 8ನೇಯದ್ದು ಆಯ್ತಂತೆ" "ಹೌದು ಮಾರಾಯ ಅದ್ಭುತ ಅಲ್ವಾ" "ಏನ್ ಅದ್ಬುತಾನೋ ಏನೋ , ದುಡ್ಡು ಕೊಟ್ರೆ ಎಲ್ಲವೂ ಸಿಕ್ತದೆ"
" ನಿನ್ನ ಪ್ರಕಾರ ಅವರ ಮನೆಯಲ್ಲಿ ಬೇಕಾದಷ್ಟು ದುಡ್ಡಿದೆ. ಆ ದುಡ್ಡು ಖರ್ಚು ಮಾಡೋದಕ್ಕೆ ಅವರಿಗೇನು ದಾರಿ ಕಾಣುತ್ತಿಲ್ಲ"
" ಏ ಹಾಗೇನಿಲ್ಲ ಈಗ ಏನು ಮಾಡಿದ್ರೂ ದಾಖಲೆಯಾಗಿ ಬಿಡುತ್ತೆ" "ಹಾಗಾದ್ರೆ ಒಂದ್ಸಲ ನೀನು ಮಾಡಿ ತೋರಿಸು. ಇಷ್ಟರವರೆಗೆ ಮಾಡಿದ ಅಷ್ಟು ದಾಖಲೆಗಳಿದ್ಯಲ್ಲ ಅದು ಪ್ರತಿಯೊಂದು ಜನರ ಮುಂದೆ ಕಾಣುವಂತದ್ದು. ಅಲ್ಲಿ ಪ್ರತಿಭೆ ಇರೋ ಕಾರಣಕ್ಕೆ ಸಂಸ್ಥೆಯವರು ಅದನ್ನು ಒಪ್ಪಿಕೊಂಡದ್ದು. ಮಗಳಲ್ಲಿರುವ ಪ್ರತಿಭೆಯನ್ನ ಜಗತ್ತಿಗೆ ತೋರಿಸಬೇಕು ಅನ್ನುವಂತಹ ಆಸೆ ತಂದೆ ತಾಯಿಗಳದ್ದು. ಅದಕ್ಕೋಸ್ಕರ ಸಾಲ ಸೋಲ ಮಾಡಿ ಕಷ್ಟಪಟ್ಟು ಒಂದಷ್ಟು ವೇದಿಕೆಗಳನ್ನು ಸೃಷ್ಟಿಸಿದ್ದಾರೆ. ನಿಮಗೆ ಅದು ಯಾವುದೂ ಕಾಣೋದಿಲ್ಲ. ಕಳೆದುಕೊಂಡಿರುವುದು ಗೊತ್ತಾಗೋದಿಲ್ಲ. ಅನುಭವಿಸಿದ ನೋವು ಗೊತ್ತಾಗೊದಿಲ್ಲ? ಒಂದಷ್ಟು ಹೆಸರಾದಾಗ ಮಾತನಾಡುವುದಕ್ಕೆ ಸಾಲಾಗಿ ಬರ್ತೀರಾ? ಸಮಯ ಸಿಕ್ಕರೆ ಒಂದು ಸಲ ಕುಳಿತು ಮಾತನಾಡು. ಒಂದು ಸಾಧನೆ ಮಾಡಬೇಕು ಅಂತ ಅಂದ್ರೆ ಅದರ ಹಿಂದಿನ ಪರಿಶ್ರಮ ಏನು? ಎಷ್ಟು ಕಷ್ಟವನ್ನು ಅನುಭವಿಸಿದ್ದಾರೆ? ಯಾರಿಂದ ಯಾವ ತರದ ಮಾತುಗಳನ್ನು ಕೇಳಿದ್ದಾರೆ? ಅನ್ನೋದನ್ನ ತಿಳಿದುಕೋ, ಸಾಧ್ಯವಾದರೆ ಕೈ ತಟ್ಟಿ ಪ್ರೋತ್ಸಾಹಿಸು. ಅದು ಬಿಟ್ಟು ಅನಗತ್ಯ ಮಾತುಗಳನ್ನ ಆಡಿ ಕಾಲಹರಣ ಮಾಡಬೇಡ." ಮಾತುಕತೆಗಳು ದಾರಿ ಉದ್ದಕ್ಕೂ ಹೀಗೆ ಸಾಗ್ತಾ ಹೋದವು. ಕಾರ್ಯಕ್ರಮ ಮುಗಿದ ನಂತರ ಅಲ್ಲಿಯ ವ್ಯವಸ್ಥೆಗಳನ್ನೆಲ್ಲ ಮತ್ತೆ ಸರಿಗೊಳಿಸುವುದಕ್ಕೆ ಬಂದಿರುವ ಅತಿಥಿಗಳನ್ನ ಮನೆಗೆ ಕಳುಹಿಸಿ ಕೊಡುವುದರಲ್ಲಿ ತಲ್ಲೀನರಾಗಿ ಬಿಟ್ಟಿದ್ದರು ಆ ಮಗುವಿನ ತಂದೆ ತಾಯಿ. ಅವರಿಗೆ ಜನ ಮಾತನಾಡುತ್ತಾರೆ ಅನ್ನೋದು ಗೊತ್ತಿದೆ. ತಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಅನ್ನುವುದರ ಅರಿವು ಅವರಿಗಿದೆ. ಅದಕ್ಕೆ ಇಷ್ಟು ವರ್ಷ ಅಷ್ಟು ಸಾಧನೆಗಳನ್ನ ಮಾಡ್ತಾ ಬಂದವರು. ಜಗತ್ತು ಎಲ್ಲವನ್ನು ಕೊಡುವುದಿಲ್ಲ ಒಂದಷ್ಟು ನಾವೇ ಕಷ್ಟಪಟ್ಟು ಪಡೆದುಕೊಳ್ಳಬೇಕು...ಅಲ್ವಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ