ಸ್ಟೇಟಸ್ ಕತೆಗಳು (ಭಾಗ ೫೯೩) - ಅಂಕ

ಸ್ಟೇಟಸ್ ಕತೆಗಳು (ಭಾಗ ೫೯೩) - ಅಂಕ

ಆ ದಿನ ಅಂಕಗಳೆಲ್ಲವೂ ಒಂದು ಕಡೆ ಸಭೆ ಸೇರಿದ್ದವು. ಕಾರಣವಿಷ್ಟೇ ಊರಲ್ಲೆಲ್ಲಾ ಅವರದ್ದೇ ಮಾತುಕತೆ. ಕೆಲವರಿಗೆ ಹೆಚ್ಚಾಯಿತಂತೆ.  ಕೆಲವರಿಗೆ ಕಮ್ಮಿಯಾಯಿತಂತೆ. ಅದರಿಂದಾಗಿ ಜೀವನಾನೇ ಮುಗೀತು ಅನ್ನುವಂತ ಮಾತುಗಳು ಕೂಡ . ಕೆಲವರು ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ,  ಒಳಿತು ಕೆಡುಕುಗಳೆಲ್ಲವೂ ಅಂಕಗಳ ಮೇಲೆ ನಿಂತುಬಿಟ್ಟಿದೆ. ಹಾಗಾಗಿ ಅಂಕಗಳು ಸಭೆ ಸೇರಿ ಪತ್ರಿಕಾಗೋಷ್ಠಿ ನಡೆಸಿ  "ನೋಡಿ ಸ್ವಾಮಿ ಈ ಅಂಕ ಅನ್ನೋದಿದೆಯಲ್ಲ ಅದು ಆತ ಇಡೀ ವರ್ಷದ ಓದಿನ ನಂತರ ಮೂರು ಗಂಟೆಯ ಪರೀಕ್ಷೆ ಬರೆದು ಸಿಕ್ಕಿದ್ದು, ಇದಕ್ಕೂ ಆತನ ವ್ಯಕ್ತಿತ್ವಕ್ಕೂ ಯಾವುದೇ ಸಂಬಂಧಗಳಿಲ್ಲ. ಅದಲ್ಲದೆ ಈಗ ಸಿಕ್ಕಿದ ಅಂಕಗಳು ಆತನ ಜೀವನವನ್ನೇನು ಅದ್ಭುತವಾಗಿ ರೂಪಿಸುವುದಿಲ್ಲ, ಇದು ಒಂದು ಹಂತದಿಂದ ಮುಂದಿನ ಹಂತಕ್ಕೆ ಹೋಗುವುದಕ್ಕೆ ಒಂದಷ್ಟು ದಾರಿಗಳನ್ನ ಮಾಡಿಕೊಡುತ್ತೇವೆ ವಿನಃ ಇದೇ ಬದುಕಲ್ಲ. ಆ ಕಾರಣಕ್ಕೆ ಅಂಕಗಳಿಂದ ವ್ಯಕ್ತಿತ್ವವನ್ನು ಅಳಿಬೇಡಿ. ಹೆಚ್ಚು ಸಿಕ್ಕಿದವನು ಜೀವನದಲ್ಲಿ ಅದ್ಭುತವನ್ನು ಸಾಧಿಸಿದ್ದಾನೆ ,ಏನೂ ಸಿಗದೇ ಇದ್ದವನು ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಬಿಟ್ಟಿದ್ದಾನೆ ಅಂತಾನೂ ಇಲ್ಲ. ಅವರವರ ವ್ಯಕ್ತಿತ್ವ ಬೇರೆ, ಸಾಧನೆಗಳು ಬೇರೆ, ದಾರಿಗಳು ಬೇರೆ ಸಾಧಿಸಬೇಕಾದು ಬೇರೆ. ಭೂಮಿಯಲ್ಲಿ ಹುಟ್ಟಿದ್ದೇವೆ ಅಂದಮೇಲೆ ಅದ್ಭುತವನ್ನು ಸಾಧಿಸ್ಲಿಕ್ಕೆ ದೇವರು ಒಂದು ಅವಕಾಶವನ್ನು ಕೊಟ್ಟಿದ್ದಾರೆ. ಆ ಅದ್ಭುತ ಅನ್ನೋದು ಪರೀಕ್ಷೆಯಲ್ಲಿ ಸಿಗುವ ಅಂಕಗಳಿಂದಲ್ಲ. ಇನ್ನೂ ಸಾಗುವ ದಾರಿ ತುಂಬಾ ದೂರ ಇದೆಯಲ್ಲ, ಅದಕ್ಕೋಸ್ಕರ ನಾವು ಬೇಡಿಕೊಳ್ಳುವುದಿಷ್ಟೇ. ಈ ಅಂಕಗಳು ನಿಮ್ಮ ಬದುಕಲ್ಲ. ಇದರಿಂದ ಭವಿಷ್ಯವೇನು ಪ್ರಬುದ್ಧ ಹಂತದಲ್ಲೋಗಿ ನಿಲ್ಲುವುದಿಲ್ಲ. ನಿನ್ನ ಜೀವನವನ್ನು ನೀನು ಸದಾ ರೂಪಿಸಿಕೊಳ್ಳಬಹುದು. ಪ್ರತಿದಿನ ಬದುಕುತ್ತಾ ಇರಬೇಕು ಅಷ್ಟೇ. ಹಾಗಾಗಿ ಅನಗತ್ಯವಾಗಿ ಅಂಕಗಳ ಮೇಲೆ ಎಲ್ಲವನ್ನು ನಿಲ್ಲಿಸ ಬೇಡಿ. ನೀವು ಜೀವನದಲ್ಲಿ ಪಟ್ಟ ಎಲ್ಲಾ ಕಷ್ಟಗಳಿಗೂ ಒಂದು ದಿನ ಪ್ರತಿಫಲ ಸಿಗುತ್ತೆ ಅಂದಿನವರೆಗೆ ಕಾಯಬೇಕಾದ್ದು ನಿಮ್ಮ ಕರ್ತವ್ಯ. ಧನ್ಯವಾದಗಳು" ಪತ್ರಿಕಾಗೋಷ್ಠಿ ವಿಭಜನೆ ಆಯಿತು. ಸುದ್ದಿ ಊರು ತುಂಬಾ ಹರಿಯುವುದಕ್ಕೆ ಆರಂಭವಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ