ಸ್ಟೇಟಸ್ ಕತೆಗಳು (ಭಾಗ ೬೨೪) - ಧಾವಂತ

ಧಾವಂತ ಅಂದ್ರೆ ಏನು ಅಂತ ಅರ್ಥಮಾಡಿಕೊಳ್ಳೋಕೆ ಹಲವಾರು ಸಲ ಪ್ರಯತ್ನಪಟ್ಟಿದ್ದೆ ಆದರೆ ಯಾವುದು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಆ ದಿನ ಮದುವೆ ಮನೆಯ ಹಿಂದಿನ ದಿನದಿಂದ ಆರಂಭವಾಗಿ ಮದುವೆ ಮುಗಿಯುವವರೆಗಿನ ಸನ್ನಿವೇಶಗಳಿದೆಯಲ್ಲಾ ಇವೆಲ್ಲವೂ ಧಾವಂತದಿಂದಲೇ ಕೂಡಿದ್ದವು. ಎಲ್ಲವನ್ನು ವಾರಗಟ್ಟಲೆ ಹಿಡಿದುಕೊಂಡು ತಯಾರಿ ಮಾಡಿಟ್ಟುಕೊಂಡಿದ್ದರು ಸಹ ಪ್ರತಿಯೊಂದು ಸಮಯವನ್ನು ತಪ್ಪಿಸಿ ಮುಂದುವರೆಯುತ್ತದೆ. ಯಾರೋ ಬಂದಿರುವುದಿಲ್ಲ, ಇನ್ಯಾರದ್ದೋ ಸ್ನಾನವಾಗಿರುವುದಿಲ್ಲ, ತಿಂಡಿ ಕಡಿಮೆಯಾಗಿರುತ್ತದೆ ಹೀಗೆ ಪಟ್ಟಿಗಳು ಬೆಳೆಯುತ್ತಾ ಹೋಗುತ್ತವೆ. ಈ ಧಾವಂತದ ನಡುವೆ ಆ ಕೆಲಸವನ್ನು ಪೂರ್ಣಗೊಳಿಸಿದಾಗ ಸಿಗುವ ನೆಮ್ಮದಿ ಇದೆಯಲ್ಲ ಅದು ಅದ್ಭುತವಾಗಿರೋದು. ಅದಲ್ಲದೆ ಒಂದಿಷ್ಟು ಜವಾಬ್ದಾರಿಗಳನ್ನ ಹೆಗಲ ಮೇಲೆ ಹೊತ್ತುಕೊಂಡು ಮುಂದುವರೆಯುವಾಗ ಒಂದಷ್ಟು ಜನರ ಅಸಹನೆ, ಕೋಪ, ಜಗಳ, ಅಸೂಯೆ ಅನುಕಂಪ ಎಲ್ಲ ಭಾವಗಳನ್ನ ಪಡೆದುಕೊಳ್ಳುತ್ತ ಸಾಗುತ್ತೇವೆ. ಸಿಗುವಾಗ ಪಡೆದುಕೊಳ್ಳುವುದು ನಮ್ಮ ಕೆಲಸ ಒಂದನಿತೂ ಖರ್ಚಿಲ್ಲದೆ ಆ ಮದುವೆ ಮನೆಯಲ್ಲಿ ದುಡಿಯೋಕೆ ಬಂದ ಕಾರಣ ಒಂದಷ್ಟು ಭಾವಗಳು ಸುಲಭವಾಗಿ ಅರ್ಥವಾದವು. ನೀವು ಒಂದಷ್ಟು ದುಡಿದು ನೋಡಿ ಧಾವಂತದ ಜೊತೆಗೆ ಇನ್ನೊಂದಷ್ಟು ಹೊಸ ಭಾವಗಳು ನಮ್ಮ ಬದುಕಿನ ಒಳಗೆ ಪಯಣವನ್ನ ಸಾಗಿಸುತ್ತವೆ. ಸದ್ಯಕ್ಕೆ ಅನ್ನ ಬಡಿಸೋಕೆ ಹೊರಡಬೇಕು. ನಾಳೆ ಸಿಗ್ತೇನೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ