ಸ್ಟೇಟಸ್ ಕತೆಗಳು (ಭಾಗ ೬೩೩) - ಅನಾಮಿಕ

ಸ್ಟೇಟಸ್ ಕತೆಗಳು (ಭಾಗ ೬೩೩) - ಅನಾಮಿಕ

ಅಲ್ಲೊಂದು ಕಡೆ ಸುದ್ದಿ ಆಗಲೇ ಇಲ್ಲ. ಆ ಊರಿನಲ್ಲೊಬ್ಬ ಅನಾಮಿಕ ಮರಣ ಹೊಂದಿದ್ದ ಆತನ ಎತ್ತರ ಬಣ್ಣ ಗೋತ್ರ ಊರು ಇದು ಯಾವುದು ಯಾರಿಗೂ ಗೊತ್ತಿಲ್ಲ, ಅದಲ್ಲದೆ ಅವನು ಸತ್ತಿರುವಂತಹ ವೇಳೆ ಸ್ಥಳ ಇದ್ಯಾವುದು ಮುಖ್ಯವಾಗಿ ಯಾರಿಗೂ ಬೇಡವಾಗಿರುವಂಥದ್ದು. ಆ ಸಾವಿನಿಂದ ಯಾರಿಗೂ ಉಪಯೋಗವೂ ಒಂದಿನಿತು ಇಲ್ಲ. ಅಲ್ಲದೆ ಅವನ ವಾರಿಸುದಾರರನ್ನ ಹುಡುಕಿ ತಂದುಕೊಟ್ಟರೆ ಅವರಿಂದ ಬಹುಮಾನವೇನು ಸಿಗುವುದಿಲ್ಲ. ಘಟನೆ ಕೇಳುಗರ ಕಿವಿಗೆ ,ನೋಡುಗರ ಕಣ್ಣಿಗೆ, ಹೇಳುವ ಬಾಯಿಗೆ ರಸವತ್ತಾದ ವರ್ಣನೆಗಳೇನ್ನ ಸೃಷ್ಟಿಸುತ್ತಿಲ್ಲ. ಕಂಬನಿ ಹರಿಯುವುದಕ್ಕೆ ಆತನ ಬಗ್ಗೆ ತಿಳಿದಿರುವವರು ಗೊತ್ತಿರುವವರು ಯಾರು ಇಲ್ಲ. ಆತ ಇಲ್ಲಿಯವರೆಗೂ ಯಾರಿಗೂ ಏನನ್ನು ಹಂಚಿದವನಲ್ಲ ಅವನಿಂದ ಯಾರು ಪಡೆದುಕೊಂಡವರು ಇಲ್ಲ. ಹೀಗಿದ್ದ ಅನಾಮಿಕನೊಬ್ಬ ಆ ಊರ ರಸ್ತೆ ಬದಿಯಲ್ಲಿ ಹೆಣವಾಗಿದ್ದ. ಮಳೆ ಜೋರಾಗುತ್ತಾ ಸಾಗಿತು? ದೇವರೇ ಶಾಸ್ತ್ರವನ್ನು ಮುಗಿಸಿದ ಅಂತ ಕಾಣುತ್ತೆ. ಸಮಾಜಮುಖಿ ಕೆಲಸ ಮಾಡುವ ಯಾರೋ ಒಬ್ಬರು ಅದಕ್ಕೊಂದು ಅಂತ್ಯ ಕೊಡಬೇಕು ಅನ್ನೋ ಕಾರಣಕ್ಕೆ ಆ ಹೆಣವನ್ನು ಒಯ್ದು ಸ್ಮಶಾನದಲ್ಲಿ ಮಣ್ಣು ಮಾಡಿದರು. ಇಂದಿನವರೆಗೂ ಕೂಡ ಆತನನ್ನು ಕಳೆದುಕೊಂಡವರು ಯಾರಾದರೂ ಇದ್ದಿರಬಹುದು ಅವರು ಎಲ್ಲಾದರೂ ಅವನ ಬಗ್ಗೆ ಕೇಳಿರಬಹುದು ಆತನಿಗೆ ಇನ್ನೂ ಕಾಯುತ್ತಿರಬಹುದು ಗೊತ್ತಿಲ್ಲ ಒಂದಷ್ಟು ಪ್ರಶ್ನೆಗಳು ಅನಾಮಿಕನ ಸಾವಿನೊಂದಿಗೆ ಹಾಗೆ ಹೊರಟುಹೋಗಿದೆ ಆತನ ಸಾವು ಸಹಜವೋ ಅಸಹಜವೋ ದ್ವೇಶ ಸಿಟ್ಟು ಅಸೂಯೆಗೂ ಅಥವಾ ನೋವಿಗೂ ಗೊತ್ತಿಲ್ಲ ಒಟ್ಟಿನಲ್ಲಿ ಅನಾಮಿಕನೊಬ್ಬ ಅನಾಮಿಕ ನಾಗಿ ಸ್ಮಶಾನದಲ್ಲಿ ಕರಗಿ ಹೋಗಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ