ಸ್ಟೇಟಸ್ ಕತೆಗಳು (ಭಾಗ ೬೫೪) - ವಿಳಾಸ

ಸ್ಟೇಟಸ್ ಕತೆಗಳು (ಭಾಗ ೬೫೪) - ವಿಳಾಸ

ಮಳೆರಾಯ ವಿಳಾಸಗಳನ್ನು ಸರಿಯಾಗಿ ಬರೆದಿಟ್ಟುಕೊಂಡಿದ್ದ. ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಯಾವ ಕಡೆಗೆ ಚಲಿಸಬೇಕು ಅನ್ನೋದನ್ನ ದಾಖಲಿಸಿ ಇಟ್ಟುಕೊಂಡಿದ್ದ.ತನ್ನ ಕೆಲಸವನ್ನ ಸರಿಯಾಗಿ ನಿರ್ವಹಿಸುವ ಮೋಡಗಳ ತಂಡಗಳಿಗೆ ವಿಳಾಸ ಮತ್ತು ದಿನಾಂಕಗಳ ಪಟ್ಟಿಯನ್ನು ಹಂಚುತ್ತಾ ಹೋದ. ಎಲ್ಲ ಮೋಡಗಳಿಗೆ ದಿನಾಂಕಗಳು ಸಿಕ್ಕಿದ್ದವು ವಿಳಾಸಗಳು ಸಿಕ್ಕಿದ್ದವು. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವಾಗ ಮೊದಲೇ ಸಾಗಿದ ಕೆಲವೊಂದು ಮೋಡಗಳು ಮಳೆಯನ್ನ ಸುರಿಸುತ್ತಾನೆ ಇದ್ದವು ಹಾಗಾಗಿ ಪಕ್ಕದ ಊರಿಗೆ ದಾಟಿ ಹೋಗುವಾಗ ವಿಳಾಸ ಮತ್ತು ದಿನಾಂಕವಿದ್ದ ಚೀಟಿಗಳು ಒದ್ದೆಯಾಗಿ ಹೋದವು. ಹಾಗಾಗಿ ಎಲ್ಲಿಗೆ ತಲುಪಬೇಕು ಎಷ್ಟು ಪ್ರಮಾಣದ ಮಳೆಯನ್ನ ನೀಡಬೇಕು ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಅಲ್ಲಿ ಸ್ಥಿರವಾಗಿ ನಿಲ್ಲಬೇಕು ಅನ್ನೋದು ಗೊತ್ತಿಲ್ಲದೇ ಖಾಲಿ ಕಂಡಲ್ಲಿ ಮಳೆಯನ್ನ ಎರ್ರಾಬಿರ್ರಿ ಸುರಿಸುವುದಕ್ಕೆ ಆರಂಭ ಮಾಡಿದವು. ಊರಿನಿಂದ ಮಳೆರಾಯನಿಗೆ ಮಳೆ ಬರ್ತಾ ಇಲ್ಲ ಅನ್ನುವಂತ ಪತ್ರಗಳು ರವಾನೆ ಆಗ್ತಾಯಿದ್ದಾವೆ. ತಾನು ಕಳುಹಿಸಿದ ಮೋಡಗಳು ಏನು ಕೆಲಸ ಮಾಡ್ತಾ ಇದ್ದಾವೆ ಅನ್ನೋದು ಮಳೆರಾಯನಿಗೆ ಗೊತ್ತಾಗ್ಲೇ ಇಲ್ಲ.ವಿಳಾಸ ಕಳೆದುಕೊಂಡ ಹಲವಾರು ಮೋಡಗಳು ಇನ್ನೂ ಕೂಡ ಅತ್ತಿಂದಿದ್ದ ಓಡಾಡ್ತಾನೆ ಇದ್ದಾವೆ. ಎಲ್ಲಿ ಮಳೆಯನ್ನು ಸುರಿಸಬೇಕು ಅನ್ನೋ ದಿಕ್ಕು ದೆಸೆ ಗೊತ್ತಿಲ್ಲದೆ. ಗಾಳಿ ಸಿಕ್ಕಿದೆ ಅವಕಾಶ ಅಂದುಕೊಂಡು ಮೋಡಗಳನ್ನ ಅಟ್ಟಾಡಿಸಿ ಓಡಿಸುತ್ತಿದೆ .ಕೊನೆಗೆ ಸುಸ್ತಾಗಿ ಆ ಭಾರವಾದ ನೀರನ್ನ ಹೊತ್ತ ಮೋಡಗಳು ಕೊನೆಗೆ ಸುಸ್ತಾಗಿ ಎಲ್ಲೋ ಒಂದು ಕಡೆ ಸುರಿಸಿ ಹೊರಟು ಹೋಗಿಬಿಡುತ್ತವೆ.ಮತ್ತೆ ಅದು ನೀರನ್ನ ತುಂಬಿಸಿಕೊಳ್ಳೋದು ಮುಂದಿನ ಮಳೆಗಾಲದ ಸಮಯದಲ್ಲಿ. ಹಾಗಾಗಿ ನೀವು ಹೋಗುವ ದಾರಿಯಲ್ಲಿ ವಿಳಾಸಗಳೇನಾದರೂ ಸಿಕ್ಕಿದರೆ ದಯವಿಟ್ಟು ಆ ಪಟ್ಟಿಯನ್ನು ಮೋಡಗಳಿಗೆ ಕಳುಹಿಸಿಕೊಡಿ. ಚಲಿಸುವ ಮೋಡಗಳಾದರೂ ನಿಂತು ಬಿಟ್ಟು ಮಳೆ ಸುರಿಸಿ ನೆಮ್ಮದಿಯಿಂದ ಹೊರಟು ಹೋಗಬಹುದು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ