ಸ್ಟೇಟಸ್ ಕತೆಗಳು (ಭಾಗ ೬೬೭) - ಅಗತ್ಯ
ಮನೆಯಲ್ಲಿ ಇಲಿಗಳ ಕಾಟ ಸ್ವಲ್ಪ ಜೋರಾಗಿತ್ತು. ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಾ ಹೋದವು ಎಲ್ಲಾ ಪ್ರಯತ್ನಗಳಿಂದ ಒಂದಷ್ಟು ಇಲಿಗಳ ಸಂಖ್ಯೆ ಕಡಿಮೆ ಆಯಿತೆ ಹೊರತು ಪೂರ್ತಿಯಾಗಿ ಖಾಲಿಯಾಗಲಿಲ್ಲ. ಪ್ರತಿಸಲ ಇಲಿಯನ್ನು ಹುಡುಕೋದಕ್ಕಿಂತ ಒಂದು ಬೆಕ್ಕನ್ನು ತಂದು ಸಾಕಿದರೆ ಅದೇ ಇಲಿಗಳನ್ನು ಕೊಂದು ತಿನ್ನುತ್ತೆ. ಮನೆಯಲ್ಲಿ ಇಲಿಗಳ ಸಮಸ್ಯೆ ಕಡಿಮೆಯಾಗುತ್ತೆ ಎಂಬ ನಿರ್ಧಾರಕ್ಕೆ ಬಂದು ಬೆಕ್ಕನ್ನ ತಂದು ಸಾಕಿದ್ದು ಆಯ್ತು. ಬೆಕ್ಕು ನೋಡೋದಕ್ಕೆ ಅಷ್ಟೇನು ದೃಷ್ಟಪುಷ್ಟವಾಗಿರಲಿಲ್ಲ. ಇಲಿಗಳನ್ನು ಹೆದರಿಸುವುದಕ್ಕೆ ದಷ್ಟಪುಷ್ಟವಾದ ಬೆಕ್ಕು ಬೇಕಲ್ವಾ ಅದಕ್ಕೆ ಬೇಕಾಗುವ ಎಲ್ಲಾ ರೀತಿಯ ಆಹಾರಗಳನ್ನು ನೀಡಲಾಯಿತು ಹಾಲು, ಮೊಟ್ಟೆ, ಮೀನು, ಮಾಂಸ, ಮೊಸರು ಹೀಗೆ ಎಲ್ಲವನ್ನು ತಿಂದು ಬೆಕ್ಕು ದಷ್ಟಪುಷ್ಟವಾಯಿತು. ಇನ್ನಾದ್ರೂ ಬೆಕ್ಕು ಇಲಿಯನ್ನ ಹಿಡಿಯುತ್ತೆ ಅಂತ ಅಂದುಕೊಂಡರೆ ಈ ಬೆಕ್ಕಿಗೆ ಅದೇನು ಸೋಮಾರಿತನವೋ ಗೊತ್ತಿಲ್ಲ, ಒಂದು ಇಲಿಯನ್ನೂ ಹಿಡಿತಾ ಇಲ್ಲ. ತನ್ನ ತಟ್ಟೆಗೆ ಬಿದ್ದದ್ದನ್ನು ತಿಂದು ಆರಾಮವಾಗಿ ಕಾಲ ಕಳೆಯೋದಕ್ಕೆ ಪ್ರಾರಂಭ ಮಾಡುತ್ತೆ .ಕೆಲವು ದಿನಗಳ ನಂತರ ಈ ಬೆಕ್ಕಿಗೆ ಹೊಸ ರೀತಿಯಲ್ಲಿ ಪಾಠ ಕಲಿಸಬೇಕು ಅಂದುಕೊಂಡು ಅದಕ್ಕೆ ನೀಡ್ತಾ ಇದ್ದ ಊಟವನ್ನು ನಿಲ್ಲಿಸಲಾಯಿತು. ಬೆಕ್ಕಿಗೆ ಹಸಿವನ್ನು ನೀಗಿಸುವುದಕ್ಕೆ ಏನಾದರೂ ಕೆಲಸವನ್ನು ಮಾಡಲೇಬೇಕು ಅಂದಿನಿಂದ ಇಲಿಗಳ ಬೇಟೆ ಆರಂಭವಾಯಿತು. ಮನೆಯಲ್ಲಿ ಸಮಸ್ಯೆ ಕಡಿಮೆ ಆಯ್ತು ಅಗತ್ಯಗಳನ್ನು ಸೃಷ್ಟಿಸದೆ ಹೋದ್ರೆ ಕೆಲಸಗಳು ನಡೆಯುವುದಿಲ್ಲ ಇದು ನಾನಂದು ಕಲಿತ ಪಾಠ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ