ಸ್ಟೇಟಸ್ ಕತೆಗಳು (ಭಾಗ ೬೮೬) - ಕಾಮನಬಿಲ್ಲು

ಆ ದಿನ ಜೋರು ಮಳೆಯಾಗಿ ಸ್ವಲ್ಪ ಸಮಯವಾಗಿದ್ದಷ್ಟೇ. ಒಂದು ಅಂಗಳದ ಬದಿಯಲ್ಲಿ ಕೂತಿದ್ದೆ. ಮನಸ್ಸು ಶಾಂತವಾಗಿತ್ತು ದೇವರು ಕಣ್ಣಮುಂದೆ ಪ್ರತ್ಯಕ್ಷವಾಗೇ ಬಿಟ್ರು. ನಾನು ದೇವರನ್ನು ಬೇಡಿಯೂ ಇರಲಿಲ್ಲ. ಕೇಳಿಕೊಂಡು ಇರಲಿಲ್ಲ. ಯಾಕೆ ಬಂದೆ ಅಂತ ಕೇಳಿದ್ರೆ? ಶಾಂತವಾಗಿ ತಲ್ಲಣಗಳಿಲ್ಲದ ಮನಸ್ಸುಗಳಿರುವ ಬಳಿಗೆ ಒಮ್ಮೆ ಬಂದು ನಿಂತು ಕುಶಲೋಪರಿ ವಿಚಾರಿಸಿ ಹೋಗುವುದು ನನ್ನ ಅಭ್ಯಾಸ. ಜೊತೆಗೆ ನಿನಗೆ ಏನಾಗಬೇಕು ಕೇಳು ಕೊಟ್ಟು ಬಿಡುತ್ತೇನೆ ಎಂದರು. ಆದರೆ ನಾನು ಕೇಳುವ ಯಾವುದೇ ವಿಚಾರಗಳು ನನ್ನ ಉಪಯೋಗಕ್ಕೆ ಆಗಿರಬಾರದು ಜನರ ಉಪಯೋಗಕ್ಕೆ ಪೂರಕವಾಗಿರಬೇಕು ಇದು ದೇವರ ಷರತ್ತು. ಹಾಗಾಗಿ ಮಳೆ ಬಂದಿದ್ದ ಕಾರಣ ಆ ವಾತಾವರಣಕ್ಕೆ ಒಗ್ಗಿಕೊಳ್ಳುವ ಹಾಗೆ ನನ್ನ ಮನಸ್ಸಿಗೆ ತೋಚಿದ್ದು ನಾನು ಕಾಮನಬಿಲ್ಲಾಗಬೇಕು ಉಳಿದವರ ಬಾಳಲ್ಲಿ. ದೇವರು ತಥಾಸ್ತು ಅಂದು ಮಾಯವಾಗಿ ಬಿಟ್ಟರು. ಆಮೇಲೆ ಕುಳಿತು ನಾನು ಯೋಚನೆ ಮಾಡತೊಡಗಿದೆ ಕಾಮನಬಿಲ್ಲುಗಳನ್ನ ಯಾವುದೆಲ್ಲ ರೀತಿಗೆ ಹೋಲಿಸಿಕೊಳ್ಳಬಹುದು ಅಂತ ಒಂದು ಕ್ಷಣ ಮೂಡಿ ಸಂಭ್ರಮವನ್ನು ಕೊಟ್ಟು ಹೊರಟು ಹೋಗುತ್ತೆ ಹಾಗೆ ನಾನು ಎಲ್ಲರಿಗೂ ಆಗಾಗ ಒಳಿತು ಸಂಭ್ರಮವನ್ನು ಕೊಟ್ಟು ಮಾಯವಾಗಿ ಬಿಡಬೇಕು. ಕಾಮನಬಿಲ್ಲು ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಕಾಣಿಸುವುದಿಲ್ಲ ಎಲ್ಲರಿಗೂ ಒಂದೇ ತರನಾಗಿ ಯಾವುದೇ ಭೇದ ಭಾವವಿಲ್ಲದೆ ಮಿಂಚಿ ಮರೆಯಾಗುತ್ತದೆ ಬಣ್ಣಗಳನ್ನು ಹೊತ್ತು ಎಲ್ಲರ ಬದುಕಿನಲ್ಲಿ ಚಿತ್ತಾರವನ್ನು ತುಂಬಿ ಹಾಗೆ ಹೊರಟು ಹೋಗಬೇಕು ಭಗವಂತ ನೀಡಿದ ವರವನ್ನು ಹಾಗೆ ಹೊತ್ತು ಸಾಗುತ್ತಿದ್ದೇನೆ. ಇನ್ನೆಷ್ಟು ಕಡೆ ಕಾಮನಬಿಲ್ಲಾಗಬೇಕು ಗೊತ್ತಿಲ್ಲ ಸಾಧ್ಯವಿರುವಷ್ಟು ದಿನ ಕಾಮನಬಿಲ್ಲಾಗುತ್ತೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ