ಸ್ಟೇಟಸ್ ಕತೆಗಳು (ಭಾಗ ೬೯೦) - ಚರ್ಚೆ

ಅವರು ಮಾರಾಟ ಮಾಡುತ್ತಿದ್ದಾರೆ. ಆ ಬಟ್ಟೆಗಳೇನು ದುಬಾರಿ ಹಣದಲ್ಲ. ಮಾನ ಮುಚ್ಚೋದಕ್ಕೆ ಸಂಭ್ರಮದಿಂದ ಧರಿಸುವುದಕ್ಕೆ ತುಂಬಾ ಹಣವಿಲ್ಲ ಅಂದುಕೊಂಡೋರು ಧರಿಸಿ ಖುಷಿಯಿಂದ ಓಡಾಡುವುದಕ್ಕೆ ಕಾರಣವಾಗುವ ಬಟ್ಟೆಯನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲಿಗೆ ಬಂದವರು ಬದುಕನ್ನೇ ಮಾರಿಕೊಂಡವರು, ಕನಸುಗಳನ್ನು ಮಣ್ಣೊಳಗೆ ಹೂತುಹಾಕಿ ಅದರ ಮೇಲೆಯೇ ನಡೆದವರು. ಮಗನಿಗೆ ಒಂದು ಚಂದದ ಬಟ್ಟೆಯನ್ನು ಖರೀದಿಸಿಕೊಡಬೇಕು ಅನ್ನೋ ಆಸೆ ಅವರದು. ಆದರೆ ಕಿಸೆಯೊಳಗಿನ ದುಡ್ಡು ಎಲ್ಲವನ್ನು ಖರೀದಿಸುವ ಹಾಗೆ ಒಪ್ಪಿಗೆಯನ್ನು ಸೂಚಿಸುವುದಿಲ್ಲ. ಅಲ್ಲಿ ಚರ್ಚೆ ಶುರುವಾಗಿದೆ. ಒಂದಷ್ಟು ಕಡಿಮೆ ಮಾಡಿ ಅನ್ನೋ ಮಾತು ಇವರದ್ದಾದರೆ ಈಗಾಗಲೇ ಕಡಿಮೆ ಮಾಡಿದ್ದೇನೆ, ಮನೆಯಲ್ಲಿ ಮಕ್ಕಳು ಊಟ ಮಾಡಬೇಕಲ್ವಾ ಅನ್ನೋದು ಅವರ ವಾದ. ಇಬ್ಬರೂ ತಮ್ಮ ಅಗತ್ಯಕ್ಕಾಗಿ ಚರ್ಚಿಸುತ್ತಿದ್ದಾರೆ ಇಬ್ಬರಲ್ಲೂ ಸ್ವಾರ್ಥದ ಭಾವವಿಲ್ಲ. ತಮ್ಮವರಿಗಾಗಿ ಸ್ವೀಕರಿಸಬೇಕು. ಇಬ್ಬರ ಆಲೋಚನೆಗಳು ಸತ್ಯ. ಇಬ್ಬರೂ ತಮ್ಮ ಬದುಕಿನ ದಾರಿಗಾಗಿ ಹೋರಾಡುತ್ತಿದ್ದಾರೆ. ಕೊನೆಗೆ ಇಬ್ಬರಿಗೂ ಒಪ್ಪಿಗೆಯಾಗುವ ಒಂದು ದರದಲ್ಲಿ ಬಟ್ಟೆ ಖರೀದಿಯಾಗಿ ಇಬ್ಬರಿಗೂ ಖುಷಿ. ಎರಡೂ ಮನೆಯ ಮಕ್ಕಳು ಒಬ್ಬರು ಧರಿಸಿ ಇನ್ನೊಬ್ಬರು ಸೇವಿಸಿ ಆನಂದದಿಂದ ಆ ದಿನವನ್ನು ದೂಡಿದರು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ