ಸ್ಟೇಟಸ್ ಕತೆಗಳು (ಭಾಗ ೭೪೯) - ಸುದ್ದಿ
ದಾರಿಯಲ್ಲಿ ಹಾಗೆ ನಡೆದುಕೊಂಡು ಹೋಗ್ತಾ ಇದ್ದೆ. ಸುದ್ದಿಯೊಂದು ಸುಮ್ಮನೆ ಬಿದ್ದಿತ್ತು. ನನಗೆ ಯಾಕಾದರೂ ಅದರ ಸಹವಾಸ ಅಂದುಕೊಂಡು ಅದನ್ನು ಪಕ್ಕಕ್ಕೆ ಸರಿಸಿ ನಾನು ಮುಂದುವರಿದು ಬಿಟ್ಟೆ. ಆದರೆ ಒಂದು 10 ಹೆಜ್ಜೆಯನ್ನು ಇಡುವಷ್ಟರಲ್ಲಿ ಆ ಸುದ್ದಿ ಮತ್ತೆ ನನ್ನ ಕಣ್ಣ ಮುಂದೆ ಬಂದು ಬಿಟ್ಟಿದೆ. ನಾನು ಮತ್ತೆ ಅದು ನನಗೆ ಸಂಬಂಧಪಟ್ಟದ್ದಲ್ಲ ಅನ್ನುವ ಕಾರಣಕ್ಕೆ ಮತ್ತೆ ಅದನ್ನು ನೋಡದೆ ಹಾಗೆ ಮಾಡಿ ಇನ್ನೊಂದಿಷ್ಟು ದೂರ ಸಾಗಿಬಿಟ್ಟೆ. ಆದರೆ ಅದೇ ಸುದ್ದಿ ಬೇರೆ ಬೇರೆ ರೂಪದಲ್ಲಿ ನನ್ನ ಬಳಿಗೆ ತಲುಪುವುದಕ್ಕೆ ಪ್ರಯತ್ನ ಮಾಡ್ತಾ ಇದೆ. ಬೆಳಗ್ಗೆಯಿಂದ ಸಂಜೆಯವರೆಗೆ ಒಂದೊಂದು ಮಾಧ್ಯಮದಿಂದ ನನ್ನ ಬಳಿಗೆ ಬಂದು ಜೋಳಿಗೆ ತುಂಬುತ್ತಿದೆ. ಆದರೂ ಮನಸ್ಸಿನೊಳಗೆ ಸಣ್ಣದಾಗಿ ಸುದ್ದಿ ಏನಿರಬಹುದು ಅಂತ ಕುತೂಹಲ ಆರಂಭವಾಯಿತು. ಮನಸು ತಡೆಯೋಕ್ಕಾಗದೆ ಸುದ್ದಿಯನ್ನು ತೆರೆದು ಓದಿಬಿಟ್ಟೆ. ಅಲ್ಲಿ ಒಂದೇ ಸುದ್ದಿಯೊಳಗೆ ಹಲವರ ಹೆಸರಿದೆ. ನನ್ನದೂ ಕೂಡಾ. ಸುದ್ದಿ ಸಿಕ್ಕಿದವರೆಲ್ಲಾ ಒಬ್ಬೊಬ್ಬರ ಹೆಸರು ಸೇರಿಸಿ ಆ ಸುದ್ದಿಯನ್ನ ದಾಟಿಸಿದ್ದಾರೆ. ಸುದ್ದಿ ನನ್ನದಲ್ಲ ಅಂತ ಮತ್ತೆ ದಾರಿಯಲ್ಲಿ ಹಿಂತಿರುಗುತ್ತಾ ಎಲ್ಲರ ಬಳಿ ಹೇಳುವ ಕೆಲಸವಾಯಿತು. ಯಾರೋ ಒಂದಿಬ್ಬರು ಹೇಳಿದರು ನೀವ್ಯಾಕ್ ಅದಕ್ಕೆ ತಲೆಕೆಡಿಸಿಕೊಳ್ತೀರಾ ಬಿಟ್ಟು ಬಿಡಿ ಅಂತ .ಬಿಟ್ಟುಬಿಡೋಕೆ ಅದು ನನ್ನ ಸುದ್ದಿ. ಒಳಿತಿಗಿಂತ ಕೆಡುಕು ಬೇಗ ಹರಡಿ ಬಿಡುತ್ತೆ ಅಲ್ವಾ? ಸುದ್ದಿ ಎಲ್ಲಾದರೂ ಬಂದ್ರೆ ನಿಮ್ಮದಲ್ಲದಿದ್ದರೆ ಸುಮ್ಮನಿದ್ದು ಬಿಡಿ. ಸುದ್ದಿಗೆ ಇನ್ನೊಂದಷ್ಟು ಅಲ್ಪವಿರಾಮಗಳನ್ನು ಸೇರಿಸಿ ಮುಂದುವರಿಸಬೇಡಿ. ಪೂರ್ಣ ವಿರಾಮದಲ್ಲಿ ಅದು ಮೂಲೆಯಲ್ಲಿ ಬಿದ್ದುಕೊಂಡು ಬಿಡಲಿ. ಸುದ್ದಿ ಸದ್ದಾಗಬಾರದು ಕೆಲವೊಂದು ಸುದ್ದಿಗಳು ಮಾತ್ರ ಸದ್ದಾಗ ಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ