ಸ್ಟೇಟಸ್ ಕತೆಗಳು (ಭಾಗ ೭೭೦) - ಕ್ಷಣ

ಸ್ಟೇಟಸ್ ಕತೆಗಳು (ಭಾಗ ೭೭೦) - ಕ್ಷಣ

ಅದೊಂದು ಪುಟ್ಟ ಅಂಗಡಿ. ಅಲ್ಲಿ ಅಪ್ಪ ಸೋತಿದ್ದಾನೆ. ಅಲ್ಲೊಂದು ದೊಡ್ಡ ಯುದ್ಧ ನಡೆದಿದೆ ಅಂತಲ್ಲ, ಮಗಳು ತುಂಬಾ ಪ್ರೀತಿಯಿಂದ ಸಣ್ಣದೊಂದು ಚಾಕಲೇಟ್ ಕೇಳಿದ್ದಳು. ಅಪ್ಪ ಎಷ್ಟೇ ತಡವರಿಸಿ ಹುಡುಕಾಡಿದ್ರೂ ಕಿಸೆಯಲ್ಲಿ ಸಣ್ಣ ಕಾಸು ಇಲ್ಲ. ಅಂಗಡಿಯವನು ಸಾಲಗಳ ಪಟ್ಟಿಯನ್ನ ಮಾಡಿ ಕಣ್ಣ ಮುಂದೆ ಹಿಡಿದಿಟ್ಟುಬಿಟ್ಟಿದ್ದಾನೆ. ಅಪ್ಪನ ಕಣ್ಣಲ್ಲಿ ಪುಟ್ಟ ಕಣ್ಣೀರು ಇಳಿತಾ ಇದೆ. ಆಕಾಶದಲ್ಲಿ ಭಗವಂತನ ನೋಡಿ ನೀನು ಸೋಲಿಸುವುದಾದರೆ ದೊಡ್ಡದಾದ ಯುದ್ಧ ರಂಗದಲ್ಲಿ ಸೋಲಿಸಿ ಬಿಡು. ನನ್ನ ಮಗುವಿನ ಮುಂದಲ್ಲ. ನಾನು ಎಷ್ಟೇ ಕಷ್ಟ ಪಟ್ಟರೂ ಇನ್ನೊಂದಷ್ಟು ಹೆಚ್ಚು ಕಷ್ಟ ಕೊಡು. ರಾತ್ರಿ ಹಗಲೆನ್ನದೇ ಜೀವ ತೆಗೆ. ಆದರೆ ನನ್ನ ಮಗುವಿನ ಮುಂದೆ ಅಸಹಾಯಕನಾಗಿ ನಿಲ್ಲುವ ಸ್ಥಿತಿಗೆ ತಲುಪಿಸಬೇಡ. ಸೋಲು ಹೊಸತಲ್ಲ. ಮಗಳ ಆಸೆಯ ಬಿಂಬಗಳನ್ನ ತೆಗೆದಿಡುವುದಕ್ಕೆ ಸಾಧ್ಯ ಆಗ್ಲಿಲ್ಲ ಅನ್ನೋದೇ ನನ್ನ ದುರವಸ್ಥೆ. ಅವಳಿಗೂ ಅಪ್ಪನ ಸ್ಥಿತಿ ಗೊತ್ತಿದೆ. ದೊಡ್ಡ ಆಸೆಗಳನ್ನು ಅವಳೆಂದೂ ನನ್ನಲ್ಲಿ ಹೇಳಿಕೊಂಡಿಲ್ಲ. ಆದರೂ ಪುಟ್ಟ ಆಸೆಗಳನ್ನು ಈಡೇರಿಸುವುದು ನನ್ನ ಜವಾಬ್ದಾರಿ ತಾನೇ. ಇಬ್ಬರ ಕಣ್ಣಲ್ಲೂ ಕಣ್ಣೀರು. ಆಸೆ ಪಟ್ಟದ್ದು ಸಿಗದಿದ್ದಕ್ಕೆ ಮಗಳಿಗೆ, ಮಗಳ ಆಸೆಯನ್ನು ಈಡೇರಿಸಲಾಗದೇ ಇರೋ ಅಪ್ಪನಿಗೆ. ಆ ಕ್ಷಣ ಭಗವಂತನೂ ಕಣ್ಣೀರಾದ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ