ಸ್ಟೇಟಸ್ ಕತೆಗಳು (ಭಾಗ ೭೭೧) - ಶಾಲೆ

ಸ್ಟೇಟಸ್ ಕತೆಗಳು (ಭಾಗ ೭೭೧) - ಶಾಲೆ

ಆತ ಶಾಲೆ ಹುಡುಕುತ್ತಿದ್ದಾನೆ. ಹಲವು ಸಮಯದಿಂದ ತನ್ನ ಕನಸಿನ ಶಾಲೆಯೊಂದನ್ನು ಪ್ರತಿಯೊಂದು ಊರಿನಲ್ಲೂ ಹುಡುಕುತ್ತಿದ್ದಾನೆ. ಆ ಶಾಲೆಯಲ್ಲಿ ಜೀವನ ಕಲಿಸಬೇಕು, ಪ್ರತಿದಿನದ ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳನ್ನ ಗಟ್ಟಿತನದಿಂದ ಎದುರಿಸಿ ಬದುಕುವ ಕಲೆ ಕಲಿಸಬೇಕು. ಅಲ್ಲಿ ಭೇದ ಭಾವವಿರಬಾರದು, ದೊಡ್ಡವರು ಸಣ್ಣವರು ಅನ್ನೋದು ಮಕ್ಕಳ ಮನಸ್ಸಲ್ಲಿ ಯಾರು ಬಿತ್ತಬಾರದು. ಪ್ರತಿಯೊಬ್ಬರೂ ಕೂಡ ಒಂದೇ ಯೋಚನೆ ಒಂದೇ ದೃಷ್ಟಿಯಲ್ಲಿ ಬದುಕುವಂತಿರಬೇಕು. ಜಾತಿಗಳು ಕರಗಿ ಹೋಗಿರಬೇಕು, ಪ್ರತಿಯೊಬ್ಬರ ಕನಸುಗಳಿಗೆ ನೀರೆರೆದು ಪೋಷಿಸಿ ಅದು ಸಾಧನೆಯಾಗುವವರೆಗೆ ಬೇಕಾದ ಎಲ್ಲ ದಾರಿಗಳನ್ನ ಕಟ್ಟಿಕೊಡಬೇಕು. ತಂದೆ ತಾಯಿಗಳ ಜೊತೆ ಬದುಕುವ ವಿಧಾನ ಹೇಗೆ? ಬೆಳೆಯುವ ಅನ್ನವನ್ನು ಬಳಸುವ ವಿಧ ಹೇಗೆ ?ಮಾತನಾಡುವ ದಾಟಿಯೇನು? ಪ್ರೀತಿ, ಗೌರವ, ಅನುಕಂಪ, ದಯೆ, ಸಹನೆ ಎಲ್ಲವನ್ನು ಒಟ್ಟಾಗಿ ಸೇರಿಸಿ  ಕಲಿಸಿಕೊಡಬೇಕು. ಅಂತಹದೊಂದು ಶಾಲೆ ನನ್ನ ಊರಿನಲ್ಲಿರಬೇಕು. ಪಾಠ ಪುಸ್ತಕವನ್ನ ತೆರೆದು ಅಂಕಗಳಿಗೆ ಮತ್ತೆ ಮತ್ತೆ ಓದಿಸಿ ಕಡಿಮೆ ಅಂಕ ಬಂದಾಗ ಬೈದು ಉತ್ತಮ ಅಂಕವೇ ಸಾಧನೆ ಎಂದುಬ ಬೆನ್ನು ತಟ್ಟಿ ಬೆಳೆಸುವಂತಹ ಸ್ಥಿತಿ ಅಲ್ಲಿರಬಾರದು. ವ್ಯಕ್ತಿಯ ವ್ಯಕ್ತಿತ್ವವನ್ನ ಅರಿತು ಆತನ ಬದುಕಿಗೆ ಅಗತ್ಯವಾದ ಪಾಠವನ್ನು ಹೇಳಿಕೊಡುವ ಶಿಕ್ಷಕರು ಇರುವಂತಹ ಶಾಲೆಯೊಂದು ಆತನಿಗೆ ಬೇಕಾಗಿದೆ. ಅದಕ್ಕಾಗಿ ಊರೂರು ಅಲೆಯುತ್ತಿದ್ದಾನೆ . ನಿಮ್ಮೂರಿನಲ್ಲಿದ್ದರೆ ದಯವಿಟ್ಟು ಹುಡುಕಿಕೊಡಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ