ಸ್ಟೇಟಸ್ ಕತೆಗಳು (ಭಾಗ ೭೭೨) - ಪುಸ್ತಕ

ಸ್ಟೇಟಸ್ ಕತೆಗಳು (ಭಾಗ ೭೭೨) - ಪುಸ್ತಕ

ಆ ಕೊಠಡಿಯ ಒಳಗಡೆ ಆಗಾಗ ಇಂತಹ ಸಭೆಗಳು ನಡಿತಾ ಇರುತ್ತವೆ. ಅಲ್ಲಿ ದೊಡ್ಡದೊಂದು ಪುಸ್ತಕವಿದೆ. ಆ ಪುಸ್ತಕದ ಪ್ರತಿಯೊಂದು ಪುಟದಲ್ಲೂ ಏನೇನು ಕಾರ್ಯಗಳನ್ನು ಕೈಗೊಳ್ಳಬೇಕು ಅನ್ನೋದನ್ನ ತುಂಬಾ ದೀರ್ಘವಾಗಿ ವಿಸ್ತಾರವಾಗಿ ಬರೆದಿದ್ದಾರೆ. ಅಲ್ಲಿ ಆಡುವ ಮಾತುಗಳನ್ನು ಕೇಳಿಕೊಂಡು ಆ ಕೆಲಸದ ಕಡೆಗೆ ಮುನ್ನಡೆಯುತ್ತಾರೆ. ಅಲ್ಲಿ ಒಂದಷ್ಟು ಕಡೆ ದೊಂಬಿ ಗಲಭೆಗಳನ್ನು ಏರ್ಪಡಿಸುವುದಕ್ಕೆ ಬೇಕಾದ ರಣತಂತ್ರಗಳನ್ನು ರೂಪಿಸಿರುತ್ತಾರೆ, ಯಾವ ಜಾತಿಯವರನ್ನು ಯಾವ ಜಾತಿಯವರ ಮೇಲೆ ಎತ್ತಿ ಕಟ್ಟಿ ದಾಳಗಳನ್ನ ಆಡಿಸಬೇಕು ಅನ್ನೋದನ್ನ ವಿಸ್ತಾರವಾಗಿ ಚರ್ಚಿಸಿದ್ದಾರೆ, ಮೋಸ ವಂಚನೆ ಅತ್ಯಾಚಾರದಲ್ಲಿ ಪ್ರತಿಭಟನೆಗಳನ್ನ ಹೇಗೆ ಮಾಡಬೇಕು ಅನ್ನೋದನ್ನು ಕೂಡ ಅದರಲ್ಲಿ ತಿಳಿಸಿದ್ದಾರೆ. ಪ್ರತಿಯೊಬ್ಬರು ಆ ಕೊಠಡಿ ಒಳಗೆ ಬಂದು ನಂತರ ಅವುಗಳಿಗೆ ಪ್ರೇರಿತರಾಗಿ ಅದೇ ಯೋಚನೆಯನ್ನು ಇಟ್ಟುಕೊಂಡು ಸಮಾಜದೊಳಕ್ಕೆ ನುಗ್ಗುತ್ತಾರೆ. ಅದೇ ಕೊಠಡಿಯ ಹೊರಗಡೆ ನೋವಿನಿಂದ ಮಲಗಿರುವ ಒಂದಷ್ಟು ಮನೆಯ ಕಡೆಗೆ ಕಣ್ಣೆತ್ತಿ ನೋಡುವ ಸ್ಥಿತಿಯೂ ಅವರಲ್ಲಿಲ್ಲ, ಮಳೆಗಾಲ ಬಿಟ್ಟು ಬೇಸಿಗೆಕಾಲವಾದಾಗ ನೀರು ಖಾಲಿಯಾಗುವ ಕೆರೆಗಳಾಗಲಿ, ಸರಿ ಇಲ್ಲದ ರಸ್ತೆಗಳಾಗಲಿ, ಅನ್ನವೇ ಸಿಗದಂತಹ ಹೊಟ್ಟೆ ಹಸಿದಿರುವ ಮಕ್ಕಳ ಮುಖಗಳಾಗಲಿ, ಶಿಕ್ಷಣವೇ ಇಲ್ಲದೆ ಎಲ್ಲೋ ಒಂದು ಕಡೆ ದುಡಿಯುತ್ತಿರುವ ಮನಸ್ಸುಗಳಾಗಲಿ, ಕೆಲಸವಿಲ್ಲದೆ ನರಳುತ್ತಿರುವ ಜೀವಗಳಾಗಲಿ, ಇದ್ಯಾವುದೂ ಅವರ ಪುಸ್ತಕದ ಪಟ್ಟಿಯಲ್ಲಿಲ್ಲ. ಅದರ ಮೇಲೆ ಯಾವುದೇ ಹೋರಾಟಗಳಿಲ್ಲ, ಪ್ರತಿಭಟನೆಗಳಿಲ್ಲ, ಕೆಲಸಗಳೇ ಇಲ್ಲ. ಬದಲಾಗಬೇಕಾಗಿದೆ. ಅದರಿಂದ ಒಂದಷ್ಟು ಮನಸ್ಸುಗಳು ಬದಲಾದರೆ ಹೊರಗಡೆ ಸಮಾಜದಲ್ಲಿ ಒಂದಷ್ಟು ಬದಲಾವಣೆಗಳು ಬರಬಹುದು. ತಂದುಕೊಡಿ ನಿಮ್ಮಲ್ಲಿ ಏನಾದರೂ ಪುಸ್ತಕ ಇದ್ದರೆ ದಯವಿಟ್ಟು ತಂದು ಕೊಡಿ. ನಾನಂತೂ ಪುಸ್ತಕ ಬದಲಿಸಬೇಕು ಅನ್ನುವ ಯೋಚನೆಯಲ್ಲಿ ಇದ್ದೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ