ಸ್ಟೇಟಸ್ ಕತೆಗಳು (ಭಾಗ ೮೩೪)- ಪರಿಸ್ಥಿತಿ

ಸ್ಟೇಟಸ್ ಕತೆಗಳು (ಭಾಗ ೮೩೪)- ಪರಿಸ್ಥಿತಿ

ಆ ದಿನ ರಸ್ತೆಯಲ್ಲಿ ಮನೆ ಕಡೆಗೆ ಹೊರಟಿದ್ದ. ಅಪ್ಪನಿಗೆ ಮೈಯಲ್ಲಿ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಿ ಮದ್ದು ತೆಗೆದುಕೊಂಡು ಅಪ್ಪನನ್ನ ತನ್ನ ಗಾಡಿಯ ಮೇಲೆ ಕೂರಿಸಿಕೊಂಡು ಮನೆ ಕಡೆ ಹೊರಟಿದ್ದ. ದೊಡ್ಡ ಹೈವೇ ಹಿಂದೆ ಕುಳಿತಿದ್ದ ಅಪ್ಪ ಹಾಗೆ ಒಂದು ಕಡೆಗೆ ವಾಲುವುದಕ್ಕೆ ಆರಂಭವಾದರು. ಹೆದರಿಕೆಯಿಂದ ಗಾಡಿ ನಿಲ್ಲಿಸಿ ಅಪ್ಪನನ್ನ ಎಷ್ಟೇ ಎಬ್ಬಿಸಿದರು ಅವರ ಕಡೆಯಿಂದ ಏನು ಉತ್ತರವಿಲ್ಲ. ಭಯವಾಯಿತು ಮುಖಕ್ಕೆ ನೀರು ಹಾಕಿ ಇನ್ನೊಂದಷ್ಟು ಚೇತರಿಕೆಯನ್ನ ನೀಡಿದಾಗ ಅಪ್ಪನಿಗೆ ನಿಧಾನವಾಗಿ ಎಚ್ಚರಿಕೆಯಾಯಿತು. ಅಲ್ಲೆ ಸಿಕ್ಕಿದ ಗಾಡಿ ಇನ್ನೊಂದನ್ನು ಗೊತ್ತು ಮಾಡಿಕೊಂಡು ಆಸ್ಪತ್ರೆಯ ಕಡೆಗೆ ಸಾಗಿದ. ಜ್ವರ ಹೆಚ್ಚಾಗಿದೆ ಒಂದಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕು ಅದಕ್ಕೆ ಇಂತಿಷ್ಟು ಖರ್ಚಾಗುತ್ತದೆ ಅನ್ನುವ ಮದ್ದಿನ ಪಟ್ಟಿಯನ್ನೇ ಅವನ ಮುಂದಿಟ್ಟರು. ಎದೆ ಒಂದು ಸಲ ನಿಂತು ಮತ್ತೆ ಬಡಿಯೋದಕ್ಕೆ ಆರಂಭವಾಯಿತು. ಅಷ್ಟು ಹಣವನ್ನ ಹೊಂದಿಸೋದಾದ್ರೂ ಹೇಗೆ? ಅಲ್ಲೇ ಆಸ್ಪತ್ರೆ ಹೊರಗಿದ್ದ ದೇವರ ಮುಂದೆ ನಿಂತು ಕೈ ಮುಗಿದು ಕೇಳಿಕೊಂಡ, ದೇವರೇ ಬಡವರಿಗೆ ಕಷ್ಟಗಳನ್ನ ಕೊಡಬೇಡ ಕೊಡುವುದಿದ್ದರೆ ನೇರವಾಗಿ ಸಾವನ್ನೇ ಕೊಟ್ಟುಬಿಡು. ಹಣವನ್ನು ಹೊಂದಿಸುವುದಕ್ಕೆ ಸಿಕ್ಕ ಎಲ್ಲರ ಬಳಿ ಕೈ ಮುಗಿದು ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುತ್ತೆ. ಮನೆಯವರನ್ನ  ಉಳಿಸಿ ಕೊಳ್ಳಬೇಕಾಗಿರೋದು ನನ್ನ ಜವಾಬ್ದಾರಿ, ಆದರೆ ದುಡ್ಡಿಲ್ಲದ ಪರಿಸ್ಥಿತಿ ಇದೆಯಲ್ಲಾ, ಇಷ್ಟು ದಿನ ದುಡಿದದ್ದು ವ್ಯರ್ಥ ಅನ್ನುವಾಗ ಆಗುವ ಸಂಕಟವಿದೆಯಲ್ಲಾ ಅದು ಯಾವನಿಗೂ ಬರಬಾರದು. ಹಾಗಾಗಿ ಬಡವನಿಗೆ ಸಾವನ್ನ ಕೊಡು. ಕಷ್ಟ ಸಂಕಟವನ್ನು ನೀಡಬೇಡ. ಹಾಗೆಂದು ಕೈಮುಗಿದು ದುಡ್ಡು ಹೊಂದಾಣಿಕೆಗೆ ಯಾರ ಬಳಿ ಕೇಳುವುದೆಂದು ಚಿಂತಿಸಿಕೊಂಡು ಹಾಗೆ ಹೊರಟುಬಿಟ್ಟ. ದೇವರು ಅವನನ್ನ ನೋಡಿ ನಕ್ಕು ಸುಮ್ಮನಾದ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ