ಸ್ನೇಹ ಸೇತು ಕಡಿಯುವ ಮುನ್ನ

ಸ್ನೇಹ ಸೇತು ಕಡಿಯುವ ಮುನ್ನ

ಬರಹ

ತನ್ನನ್ನು ತಾನು ಗೇಲಿ ಮಾಡಿಕೊಂಡು ನಗುವುದೇ ಅತ್ಯಂತ ಶ್ರೇಷ್ಠವಾದ ಹಾಸ್ಯ. ಇನ್ನೊಬ್ಬನ ಕಾಲೆಳೆಯುವುದೂ, ಅಸಹಾಯಕತೆಯನ್ನು ಲೇವಡಿ ಮಾಡುವುದೂ ಹಾಸ್ಯದ ಪರಿಧಿಯಲ್ಲಿ ಓಡಾಡಿಕೊಂಡಿರಲು ಪರವಾನಿಗೆ ಪಡೆದಿದೆಯಾದರೂ ಅದು ಆ ಇನ್ನೊಬ್ಬನಿಗೆ ನೋವುಂಟು ಮಾಡುವ ಯಾವ ಹಕ್ಕನ್ನು ಹೊಂದಿಲ್ಲ. ಇನ್ನೊಬ್ಬನನ್ನು ನೋಯಿಸುವ ಹಾಸ್ಯ ಕುಹಕವಾಗುತ್ತದೆ.

ಹಾಸ್ಯವನ್ನು ಸವಿಯುವುದಕ್ಕೆ, ವ್ಯಂಗ್ಯವನ್ನು ಆಸ್ವಾದಿಸುವುದಕ್ಕೆ ಹಾಸ್ಯಪ್ರಜ್ಞೆಯೆಂಬುದು ಆವಶ್ಯಕವಾಗಿ ಇರಲೇಬೇಕು. ಹಾಸ್ಯಪ್ರಜ್ಞೆ ಇಲ್ಲದ ಗಂಭೀರ ಘಮಂಡಿಗಳಿಗೆ ನವಿರಾದ, ಆರೋಗ್ಯಕರವಾದ, ಹಾರ್ಮ್‌ಲೆಸ್ ಆದ ಹಾಸ್ಯ, ವಿಡಂಬನೆಯೂ ಸಹ ವೈಯಕ್ತಿಕ ದೂಷಣೆಯಾಗಿ, ಅಫೆನ್ಸಿವ್ ಆಗಿ ಕಾಣುತ್ತೆ. ಅಂಥವರ ಬಗ್ಗೆ ಪ್ರಾಮಾಣಿಕವಾದ ಅನುಕಂಪದ ನಗೆ ಬೀರಿ ಮುಂದೆ ಸಾಗಬೇಕಷ್ಟೇ.

ಆದರೆ ನಗಿಸುವವರ, ನಗುವವರ ದಡದಲ್ಲಿ ನಿಂತವರು ಆಚೆ ದಡವರ ಬಗ್ಗೆ ಅನುಕಂಪವನ್ನೂ, ಸಹಾನುಭೂತಿಯನ್ನೂ ಹೊಂದಿರಬೇಕಾಗುತ್ತದೆ. ಆಚೆ ದಡದಲ್ಲಿ ನಿಂತು ನಗೆಪಾಟಲಿಗೆ ಈಡಾಗುವವರ ಬಗ್ಗೆ, ಅವರ ಭಾವನೆಗಳ ಬಗ್ಗೆ ಕಾಳಜಿಯಿರಬೇಕಾಗುತ್ತದೆ. ಈ ಎರಡೂ ದಡಗಳ ನಡುವಿನ ಕಂದರ ಅತಿಯಾಗದ ಹಾಗೆ ಎಚ್ಚರವಹಿಸುತ್ತಾ, ಸಹೃದಯತೆಯಿಂದ ಎರಡೂ ದಡವನ್ನು ಬೆಸೆಯುವ ಸೇತುವೆ ನಿರ್ಮಿಸುತ್ತಾ ಹಾಸ್ಯದ ನದಿಯ ನೀರನ್ನು ಸವಿಯಬೇಕು. ಇಲ್ಲವಾದಲ್ಲಿ ಎರಡೂ ಬದಿಯವರ ಮುಖದ ಮೇಲಿನ ನಗು ಮರೆಯಾಗಿ ಭಾವೋದ್ರೇಕದ ರಕ್ತದೋಕುಳಿ ಹರಿದು ನಗೆ ಬುಗ್ಗೆಯ ಹರಿವು ಕಲುಷಿತಗೊಳ್ಳುತ್ತದೆ.

ಇಷ್ಟೆಲ್ಲ ಹೇಳಲು ಕಾರಣ ಸರಳವಾದದ್ದು. ಜೋಕುಗಳಲ್ಲಿ, ವಿಡಂಬನೆಯಲ್ಲಿ ಸಾಕಷ್ಟು ಸಹಜವಾಗಿರುವ ‘ಜನಾಂಗೀಯ ನಿಂದನೆ’ಯ ಬಗ್ಗೆ ನಿಮ್ಮ ಗಮನ ಸೆಳೆಯಬೇಕಿತ್ತು. ನಮ್ಮ ಹಾಸ್ಯಕ್ಕಾಗಿ, ನಮ್ಮ ಮನರಂಜನೆಗಾಗಿ ಒಂದಿಡೀ ಜನಾಂಗದ, ಅದರ ಸದಸ್ಯರ ಭಾವನೆಗಳ ಪರಿವೆಯೇ ಇಲ್ಲದೆ ವರ್ತಿಸುವುದು ಅನಾಗರೀಕವಾಗುತ್ತದೆಯಲ್ಲವೇ? ದೇಶ ಭಕ್ತ ಪಂಜಾಬಿಗಳನ್ನು, ದೈಹಿಕ ಶಕ್ತಿಯಲ್ಲಿ ಅಪ್ರತಿಮರಾದ, ಬುದ್ಧಿಶಕ್ತಿಯಲ್ಲೂ ಯಾರಿಗೇನು ಕಡಿಮೆಯಿಲ್ಲ ಎಂದು ಸಾಬೀತು ಪಡಿಸಿದ, ಧೈರ್ಯ- ಸಾಹಸಗಳಲ್ಲಿ ಮೊದಲಿಗರಾದ ಸರ್ದಾರ್ಜಿಗಳನ್ನು ಬುದ್ಧಿಹೀನರಾಗಿ, ಪೆದ್ದರಾಗಿ ಮೂದಲಿಸುವುದು ನಿಜಕ್ಕೂ ಅಸಹ್ಯ ಹುಟ್ಟಿಸುವ ವರ್ತನೆ. ಆ ಜನಾಂಗದ, ಜನರ ಸ್ಥಾನದಲ್ಲಿ ನಮ್ಮನ್ನೇ ಕಲ್ಪಿಸಿಕೊಂಡು ಒಮ್ಮೆ ಜೋಕುಗಳನ್ನು ಓದಿಕೊಂಡರೆ ನಾವು ಅದೆಷ್ಟೇ ಹಾಸ್ಯಪ್ರಜ್ಞೆಯುಳ್ಳವರೆಂದುಕೊಂಡರೂ ಮನಸ್ಸು ಕಹಿಯಾಗುತ್ತದೆ.

ವೈದ್ಯ, ವಕೀಲ, ಪೊಲೀಸು, ರಾಜಕಾರಣಿ, ಪತ್ರಕರ್ತ, ಕಾಲೇಜು ಪ್ರೊಫೆಸರು, ಮಠದ ಸ್ವಾಮೀಜಿ, ಮಿಶಿನರಿ ಪಾದ್ರಿ ಇವರುಗಳ ಕುರಿತ ಜೋಕುಗಳು ನೇರವಾಗಿ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿರುವುದಿಲ್ಲ. ಆಯಾ ಕ್ಷೇತ್ರದ, ಆಯಾ ವೃತ್ತಿಯ ವೈಪರೀತ್ಯಗಳನ್ನು ವ್ಯಂಗ್ಯಕ್ಕೆ, ಲೇವಡಿಗೆ, ಹಾಸ್ಯಕ್ಕೆ ಒಳಪಡಿಸುವ ಪ್ರಯತ್ನವಷ್ಟೇ ಆಗಿರುತ್ತದೆ.

ತಿಳಿದೋ ತಿಳಿಯದೆಯೋ ಈ ರೀತಿ ನಗೆಯೆಂಬ ಮಹಾ ನದಿಯ ಒಂದು ಬದಿಯಲ್ಲಿ ನಿಂತ ನಾವುಗಳು ಇನ್ನೊಂದು ಬದಿಯೊಂದಿಗಿನ ಸ್ನೇಹ ಸೇತುವನ್ನು ಕಡಿದುಕೊಳ್ಳುವ ಹಂತ ತಲುಪಿರುತ್ತೇವೆ. ಆಗ ಕೊಂಚ ಎಚ್ಚರವಹಿಸಬೇಕಷ್ಟೇ!