ಸ್ವಂತ ಅಸ್ತಿತ್ವ

ಸ್ವಂತ ಅಸ್ತಿತ್ವ

     "ಹಾಂ? ಏನೆಂದಿರಿ? ಆಕಾಶಕ್ಕಿಂತಲೂ ಮಿಗಿಲಾದುದು ಇದೆಯೇ? ಆಕಾಶ ಸರ್ವವ್ಯಾಪಿ. ಅದು ಎಷ್ಟು ವಿಶಾಲವಾದುದು, ಹಿರಿದಾದುದು ಎಂಬುದೇ ತಿಳಿಯದಿರುವಾಗ, ಅದನ್ನು ವಿವರಿಸಲು ಸಾಧ್ಯವೇ ಇಲ್ಲ ಎಂಬಂತಿರುವಾಗ ಅದಕ್ಕಿಂತಲೂ ಮಿಗಿಲಾದುದು ಇದೆಯೇ? ನಿಮಗೆಲ್ಲೋ ತಲೆ ಕೆಟ್ಟಿರಬೇಕು" ಎಂಬ ಪ್ರತಿಕ್ರಿಯೆ ಆಕಾಶಕ್ಕಿಂತಲೂ ಹೆಚ್ಚಿನದು ಇದೆ ಎಂದು ಹೇಳಿದಾಗ ಬರಬಹುದಾದ ಸಾಮಾನ್ಯ ಪ್ರತಿಕ್ರಿಯೆ. ಅದು 'ಸ್ವಂತ ಅಸ್ತಿತ್ವ' ಎಂದು ಹೇಳಿದಾಗ 'ನಿಜಕ್ಕೂ ಇವನಿಗೆ ತಲೆ ಕೆಟ್ಟಿದೆ ಅಥವ ನಮ್ಮ ತಲೆ ಕೆಡಿಸುತ್ತಿದ್ದಾನೆ' ಎಂತಲೂ ಭಾವಿಸಬಹುದು. ಈ ನಮ್ಮ ಅಸ್ತಿತ್ವ ಹೇಗೆ ದೊಡ್ಡದು ಎಂಬ ಬಗ್ಗೆ ವಿಚಾರ ಮಾಡೋಣ.

ತನ್ನ ತಾನರಿಯೆ ಗುರುಕೃಪೆಯು ಬೇಕು

ಅರಿತುದನು ವಿಚಾರ ಮಾಡುತಿರಬೇಕು|

ವಿಚಾರ ಮಥನದ ಫಲವೆ ನಿತ್ಯ ಸತ್ಯ

ವೇದವಿದಿತ ಸತ್ಯ ತತ್ವವಿದು ಮೂಢ||

     ಈ ಆಕಾಶ ದೊಡ್ಡದು ಎಂಬ ಅರಿವು ನಮಗೆ ಬರಬೇಕಾದರೆ ನಮಗೆ ನಮ್ಮ ಅಸ್ತಿತ್ವದ ಬಗ್ಗೆ ಅರಿವು ಇರಬೇಕು. ಅಸ್ತಿತ್ವದ ಅರಿವು ಮೊದಲು ಬರುತ್ತದೆ, ನಂತರ ಹೊರಗಿನ ಆಕಾಶದ ಅರಿವು! ನಾವು ಮೊದಲು ಇದ್ದರೆ ತಾನೇ ಆಕಾಶ ಅನ್ನುವುದು ಇರುವುದು! ಆದ್ದರಿಂದ, ವಿಶಾಲ ಆಕಾಶದ ಕುರಿತು ತಿಳಿಯಬೇಕಾದರೆ ನಮ್ಮ ಅಸ್ತ್ತಿತ್ವದ ಅರಿವು ನಿರ್ಧಾರಕ ಅಂಶವಾಗುತ್ತದೆ. 'ಸ್ಮರ' ಎಂತಲೂ ಹೇಳಲಾಗುವ ಈ ನಮ್ಮ ಅಸ್ತಿತ್ವ ನಮ್ಮ ಅರಿವಿಗೆ, ತಿಳುವಳಿಕೆಗೆ ಸಮನಾಗಿರುತ್ತದೆ. ನೋಡಿ, ನಾವೇ ಇಲ್ಲದಿದ್ದರೆ, ಆಕಾಶ ಇದೆಯೋ ಇಲ್ಲವೋ ಅನ್ನುವ ಪ್ರಶ್ನೆಯೇ ಬರುವುದಿಲ್ಲ. ಯಾರಾದರೂ ತಮ್ಮ ಅಸ್ತಿತ್ವದ ಅರಿವನ್ನು ಕಳೆದುಕೊಂಡರೆ, ಅರ್ಥಾತ್ ತಾವು ಯಾರು ಎಂಬುದರ ಅರಿವೇ ಇಲ್ಲದಿದ್ದರೆ, ಅಂತಹವರಿಗೆ ಆಕಾಶದ ಕುರಿತು ಜಿಜ್ಞಾಸೆಯಾಗಲೀ, ಹೇಳುವುದಾಗಲೀ, ಕೇಳುವುದಾಗಲೀ, ಯೋಚಿಸುವುದಾಗಲೀ ಸಾಧ್ಯವಿರುವುದಿಲ್ಲ ಮತ್ತು ಅರ್ಥ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸ್ವಪ್ರಜ್ಞೆ ಇಲ್ಲದಿದ್ದರೆ ಯಾವುದೇ ಉಪಯುಕ್ತವಾದ ಕ್ರಿಯೆಗಳಾಗಲೀ, ಕೆಲಸಗಳಾಗಲೀ ಅಸಾಧ್ಯವಾಗುತ್ತದೆ. ನಮ್ಮ ಅಸ್ತಿತ್ವದ ಬಗ್ಗೆ ನಮಗೇ ಅರಿವಿಲ್ಲದಿದ್ದರೆ, ಆಕಾಶದ ಬಗ್ಗೆಯಾಗಲೀ ಅಥವ ಇನ್ನು ಯಾವುದರ ಬಗ್ಗೆಯಾಗಲೀ ತಿಳಿಯಬಯಸುವುದರಲ್ಲಿ ಏನು ಪ್ರಯೋಜನವಿದೆ? ಎಲ್ಲೆಲ್ಲಿ ಸ್ವಪ್ರಜ್ಞೆ ಜಾಗೃತವಾಗಿರುತ್ತದೋ, 'ನಮ್ಮತನ' ಅನ್ನುವುದು ಹಾಜರಿರುತ್ತದೆಯೋ ಅಲ್ಲಿ ಎಲ್ಲಾ ವಿಧವಾದ ಜ್ಞಾನ ಲಭಿಸುತ್ತಾ ಹೋಗುತ್ತದೆ. ಅಲ್ಲಿ ಯೋಚಿಸುವ ಪ್ರಕ್ರಿಯೆ ಇರುತ್ತದೆ, ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ, ಕೇಳುವ, ತಿಳಿಯುವ ಕೆಲಸ ಆಗುತ್ತದೆ ಮತ್ತು ಹಲವು ರೀತಿಗಳಲ್ಲಿ ಜ್ಞಾನಾರ್ಜನೆ ಮಾಡುವ ಆಸಕ್ತಿ ಮೂಡುತ್ತದೆ. ಜೀವನದಲ್ಲಿನ ನಮ್ಮ ಎಲ್ಲಾ ಚಟುವಟಿಕೆಗಳು, ಕ್ರಿಯೆಗಳು ನಮ್ಮ ಸ್ವಂತ ಅಸ್ತಿತ್ವದ ಅರಿವಿನ ಫಲಗಳಾಗಿವೆ. ಇದು ಇಲ್ಲದಿದ್ದರೆ ಇಡೀ ಜಗತ್ತೇ ಶೂನ್ಯ!

     ನಾವು ಧ್ಯಾನಿಸುವಾಗ ಯಾವುದು ಅತ್ಯಂತ ದೊಡ್ಡದೋ ಆ ಕುರಿತು ಧ್ಯಾನಿಸುವುದು ಸೂಕ್ತವೆಂದು ಹಿಂದೆಯೇ ತಿಳಿದುಕೊಂಡಿದ್ದೇವೆ. ನಮ್ಮ ತಿಳುವಳಿಕೆಗೆ ಮೀರಿದ ಕಾಲ್ಪನಿಕ ಸಂಗತಿಗಳನ್ನು ಗುರಿಯಾಗಿರಿಸಿ ಮಾಡುವ ಧ್ಯಾನದಿಂದ ಚಂಚಲ ಮನಸ್ಸಿನ ಹತೋಟಿ ಕಷ್ಟವೆಂಬುದೂ ನಮಗೆ ತಿಳಿದಿದೆ. ಆಕಾಶ ಎಲ್ಲಕ್ಕಿಂತ ದೊಡ್ಡದೆಂದುಕೊಂಡರೆ, ಆಕಾಶದ ಅಗಾಧತೆ ಕುರಿತು ಧ್ಯಾನಿಸುವುದು ಮನೋನಿಯಂತ್ರಣಕ್ಕೆ ಸಹಕಾರಿ. ಅದಕ್ಕಿಂತಲೂ ಸ್ವಂತ ಅಸ್ತಿತ್ವದ ಅರಿವು ಹಿರಿದು ಎಂದು ಮನನ ಮಾಡಿಕೊಂಡರೆ ನಮ್ಮ ಮನಸ್ಸನ್ನು ಆ ಕಡೆಗೆ ಹೊರಳಿಸಬೇಕು. ನಾವು ನಿಧಾನವಾಗಿ, ಹಂತ ಹಂತವಾಗಿ ಅರಿವಿನ ಹಂತವನ್ನು ಏರಿಸಿಕೊಳ್ಳುತ್ತಾ ಹೋಗುತ್ತಿದ್ದೇವೆ ಎಂಬುದು ನಮಗೇ ಅರಿವಾಗುತ್ತಾ ಹೋಗುತ್ತದೆ. ನಾವು ಈ ರೀತಿಯಾಗಿ ಏರುತ್ತಾ ಹೋದಂತೆ ಇನ್ನೂ ಎತ್ತರದ ಸಂಗತಿಗಳ ಅರಿವು ನಮಗೆ ಆಗುತ್ತಾ ಹೋಗುತ್ತದೆ. ಸ್ವಂತ ಅಸ್ತಿತ್ವದ ಪ್ರಜ್ಞೆ ಹೊಂದಿರುವ ವ್ಯಕ್ತಿಗೆ ಪ್ರತಿಯೊಂದು ವಸ್ತು ಅಥವ ಸಂಗತಿಯ ಅಥವ ಆಕಾಶದ ಕುರಿತೇ ಆಗಲಿ ಅ ಅರಿವಿನ ಫಲ ಸ್ವಪ್ರಜ್ಞೆಯ ಬಲದಿಂದಲೇ ಲಭಿಸಿದುದು ಎಂದು ತಿಳಿಯುತ್ತದೆ ಮತ್ತು ಅವನು ಅಷ್ಟರ ಮಟ್ಟಿಗೆ ಅವನು ಸ್ವಂತ ಅಸ್ತಿತ್ವದ ಮಹತ್ವ ತಿಳಿದವನಾಗುತ್ತಾನೆ.

ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು

ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |

ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ

ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||

     ಧ್ಯಾನದ ಕ್ರಿಯೆಯಲ್ಲಿ ಸ್ವಂತ ಅಸ್ತಿತ್ವದ ಮಹಿಮೆ ತಿಳಿದುಕೊಳ್ಳುವುದು ಒಂದು ಅದ್ಭುತ ತಿರುವು ಮೂಡಿಸುತ್ತದೆ. ಸಾಮಾನ್ಯವಾಗಿ, ನಾವು ಧ್ಯಾನಿಸುವಾಗ ಹೊರಗಿನ ವಸ್ತುಗಳು, ಸಂಗತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಧ್ಯಾನಿಸುತ್ತೇವೆ, ದಿಗಂತದೆಡೆಗೆ ದೃಷ್ಟಿ ಹಾಯಿಸುತ್ತೇವೆ. ಆದರೆ, ಧ್ಯಾನಿಸುವ ಆ ವಸ್ತುಗಳು, ಸಂಗತಿಗಳು, ಗುರಿಗಳು ನಮ್ಮ ಸ್ವಂತ ಅಸ್ತಿತ್ವದೊಂದಿಗೆ ಥಳಕು ಹಾಕಿಕೊಂಡಿದೆಯೆಂಬುದನ್ನು ಅರಿಯಲು ಮರೆತುಬಿಡುತ್ತೇವೆ. ವಸ್ತು/ಸಂಗತಿಯ ಪ್ರಜ್ಞೆ ಮತ್ತು ಪ್ರಜ್ಞೆಯ ವಸ್ತುವಿನ ಸಂಬಂಧಗಳು ಅರಿವಿನಿಂದ ಮರೆಯಾಗಿ ಅಂತಹ ವಸ್ತುಗಳು, ಸಂಗತಿಗಳು, ಗುರಿಗಳು ಹೊರಗೆ ಇರುತ್ತವೆ, ಸ್ವತಂತ್ರವಾಗಿರುತ್ತವೆ, ನಮ್ಮ ಅಸ್ತಿತ್ವಕ್ಕೂ ಅದು ಹೊರತಾಗಿದೆ ಎಂದುಕೊಂಡುಬಿಡುತ್ತೇವೆ. ಇದು ಸತ್ಯವಾಗಿರಲಾರದು. ನಮ್ಮ ಅಸ್ತಿತ್ವಕ್ಕೂ ಅಂತಹ ಸಂಗತಿಗಳಿಗೂ ಪರಸ್ಪರ ಸಂಬಂಧವಿದ್ದೇ ಇರುತ್ತದೆ. ಸಾಮಾನ್ಯರು ಅಸಾಮಾನ್ಯ ಸಂಗತಿಗಳಿಗೂ ತಮಗೂ ಪ್ರತ್ಯೇಕತೆಯಿದೆಯೆಂದು ಭಾವಿಸುತ್ತಾರೆ. ಅವುಗಳನ್ನು ಅವಲಂಬಿಸುತ್ತಾರೆ ಮತ್ತು ಅವುಗಳ ಸಹಾಯ, ಆಧಾರ ತಮಗೆ ಅಗತ್ಯವೆಂದು ಅದಕ್ಕೆ ಜೋತುಬೀಳುತ್ತಾರೆ. ಅಂತಹ ಅಸಾಮಾನ್ಯ ಸಂಗತಿಗಳಿಗೆ ತಾವೇ ಆಧಾರವಾಗಿರುವುದನ್ನು ಮರೆಯುತ್ತಾರೆ. ನಾವು ಇದ್ದರೆ ದೇವರು ಇರುತ್ತಾನೆ ಅಲ್ಲವೇ? ನಾವೇ ಇಲ್ಲದಿದ್ದರೆ ಏನೂ ಇರುವುದಿಲ್ಲವೆಂಬ ಅರಿವು ಮೂಡಿದರೆ ನಾವು ನಮ್ಮ ಧ್ಯಾನದ ಗುರಿಯನ್ನು ಹೊರಗಿನ ಸಂಗತಿಗಳಿಂದ ಒಳಗಿನ ಕಡೆಗೆ ತಿರುಗಿಸುತ್ತೇವೆ. ಹೀಗೆ ಮಾಡಲು ಸಾಧ್ಯವಾದರೆ ನಿಜಕ್ಕೂ ಇದು ಅದ್ಭುತ ಸಾಧನೆಯೆನಿಸುತ್ತದೆ.

ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ

ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |

ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ

ಮಾಯಾ ಶಕ್ತಿಗೆದುರುಂಟೆ ಮೂಢ ||

     ಒಂದು ಸಿನೆಮಾ ಹೇಗಿರುತ್ತದೆಯೆಂಬುದನ್ನು  ಅದರ ಟ್ರೈಲರ್ ನೋಡಿ ತಿಳಿಯಬಹುದು. ಹಾಗೆಯೇ ಸ್ವಂತ ಅಸ್ತಿತ್ವದ ಮಹತ್ವವನ್ನು ತಿಳಿಯಲು ಗಾಢನಿದ್ದೆಯಲ್ಲಿ ನಮ್ಮ ಸ್ಥಿತಿ ಹೇಗಿರುತ್ತದೆಯೆಂಬುದನ್ನು ಕಲ್ಪಿಸಿಕೊಂಡರೆ ಸಾಕು. ಗಾಢ ನಿದ್ದೆಯಲ್ಲಿದ್ದಾಗ ನಮಗೆ ನಮ್ಮ ಅರಿವೇ ಇರುವುದಿಲ್ಲ. ಇನ್ನು ದೇವರು, ಜಗತ್ತು, ಆಕಾಶ ಮುಂತಾದವುಗಳು ಸಹ ಇವೆಯೋ, ಇಲ್ಲವೋ ಎಂಬುದರ ಯೋಚನೆ ಸಹ ಬರುವುದಿಲ್ಲ. ಆ ಸಮಯದಲ್ಲಿ ಸುಖ-ದುಃಖ, ಲಾಭ-ನಷ್ಟ, ನೋವು-ನಲಿವುಗಳ ಸುಳಿವೂ ಇರುವುದಿಲ್ಲ. ಯಾವ ಜಂಜಾಟವೂ ಇರುವುದೇ ಇಲ್ಲ. ನಿದ್ದೆಯಿಂದ ಎಚ್ಚರವಾದ ತಕ್ಷಣದಲ್ಲಿ 'ನಾನು' ಎದ್ದುಬಿಡುತ್ತದೆ! ಸುತ್ತಮುತ್ತಲ ಪ್ರಪಂಚವೂ ಎದ್ದುಬಿಡುತ್ತದೆ! 'ನಾನು' ಏಳದಿದ್ದರೆ ಯಾವುದರ ಅಸ್ತಿತ್ವವೂ ಇರುವುದೇ ಇಲ್ಲ. ಇದು ಅಸ್ತಿತ್ವದ ವಿಸ್ಮಯಕಾರಿ ಗುಣ. ನಮ್ಮ ತಡಕಾಟ, ಹುಡುಕಾಟಗಳು ಬಹುತೇಕ ಹೊರಗೆ ಇರುತ್ತವೆ. ಏನು ಹುಡುಕುತ್ತಿದ್ದೇವೆಯೋ ಅದು ಹೊರಗಿಲ್ಲ, ನಮ್ಮೊಳಗೇ ಇದೆ ಎಂಬ ಅರಿವು ಮೂಡತೊಡಗಿದಾಗ ಸ್ವಲ್ಪ ಸ್ವಲ್ಪವಾಗಿ ಬೆಳಕು ಮೂಡತೊಡಗುತ್ತದೆ.

ಬಿಟ್ಟುಬಿಡುವನು ಸಾಧಕನು ತೊರೆಯುವನು

ಹೊರಮನದ ಕೋರಿಕೆಯನಲ್ಲಗಳೆಯುವನು |

ಅಂತರಂಗದ ಕರೆಯನನುಸರಿಸಿ ಬಾಳುವನು

ಸಮಚಿತ್ತದಲಿ ಸಾಗುವನು ಮೂಢ ||

     ಅಂತರಂಗದ ಕರೆಗೆ ಓಗೊಟ್ಟರೆ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ: "ನಾವು ಇದ್ದರೆ ಎಲ್ಲವೂ ಇರುತ್ತದೆ; ನಾವು ಇಲ್ಲದಿದ್ದರೆ ಏನೂ ಇರುವುದಿಲ್ಲ. ಇದು ನಮ್ಮ ಅಸ್ತಿತ್ವದ ಮಹತ್ವ!"

-ಕ.ವೆಂ.ನಾಗರಾಜ್.

Comments

Submitted by nageshamysore Sat, 04/04/2015 - 18:37

ಕವಿಗಳೆ ನಮಸ್ಕಾರ. ನನ್ನ ಅಸ್ತಿತ್ವವೆನ್ನುವುದು ಒಂದು ರೀತಿ 'ಅಹಂ ಬ್ರಹ್ಮಾಸ್ಮಿ' ಅಂದ ಹಾಗೆ ಎಂದು ಕಾಣುತ್ತದೆ. ನಾನು ಎನ್ನುವುದರಿವಾದರೆ ಮಿಕ್ಕೆಲ್ಲದರ ಬಾಗಿಲು ತೆಗೆಸುವ ಮೊದಲ ಹೆಜ್ಜೆಯೂ ಅದೆ. ಎಲ್ಲಾ ಬಾಗಿಲುಗಳ ಮೂಲಕ ಕರೆದೊಯ್ಯುವ ಮಾರ್ಗದರ್ಶಿಯೂ ಅದೆ ಅಥವಾ ನಡುದಾರಿಯಲ್ಲಿ ಮುಳುಗಿಸಬಲ್ಲ ಮಾಯಾವಿಯೂ ಅದೆ. ಆ ಸ್ವ-ಅಸ್ತಿತ್ವದ ಶಕ್ತಿಯರಿತವನಿಗೆ ಸಕಲ ಜಗದ ಸತ್ಯಗಳು ಅರಿವಾಗಲಿಕ್ಕೆ ಸಾಧ್ಯ. ಮಿಕ್ಕೆಲ್ಲವು ಅದರೊಳಗಿನ ಅಡಕಗಳೆ, ನಾನಿಲ್ಲದೆ ಮಿಕ್ಕವಾವುದು ಇಲ್ಲ ಎಂದು ವಿವರಿಸಿದ ರೀತಿ ಚೆನ್ನಾಗಿದೆ. ನಿದ್ದೆಯಲ್ಲಿ ಸ್ತಬ್ದವಾಗಿ ಎಚ್ಚರದಲ್ಲಿ ಸಶಬ್ದವಾಗುವ 'ನನ್ನ ಅಸ್ತಿತ್ವದ' ಪ್ರಕ್ರಿಯೆಯ ವಿವರಣೆಯೂ ಕುತೂಹಲ ಹುಟ್ಟಿಸುತ್ತದೆ. ಶೋಧಕ್ಕೆ ಹೊರಟರೆ ಆರಂಭವು ಅಲ್ಲಿಂದಲೆ ಅಂತ್ಯವೂ ಅಲ್ಲೆ - ನನ್ನ ಅಸ್ತಿತ್ವದಲ್ಲೆ !

Submitted by H A Patil Sun, 04/05/2015 - 20:55

ಕವಿ ನಾಗರಾಜ ರವರಿಗೆ ವಂದನೆಗಳು
ಸ್ವಂತ ಅಸ್ತಿತ್ವ ಕುರಿತು ಅರ್ಥಪೂರ್ಣವಾಗಿ ಬರೆದಿದ್ದೀರಿ, ಕೊನೆಯ ಸಾಲು ಅರ್ಥಪೂರ್ಣ 'ನಾವಿದ್ದರೆ ಎಲ್ಲ ಇಲ್ಲದಿದ್ದರ ಏನೂ ಇಲ್ಲ ' ಇದು ಮಾತ್ರ ಬಹಳ ನಿಜ, ವಿಚಾರಪೂರ್ಣ ಬರಹ ಧನ್ಯವಾದಗಳು.