ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ _ ರೈತ ಭಾರತ: ಅವಸಾನದ ಅಂಚಿನಲ್ಲಿ

ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ _ ರೈತ ಭಾರತ: ಅವಸಾನದ ಅಂಚಿನಲ್ಲಿ

ಬರಹ

ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ _ ರೈತ ಭಾರತ: ಅವಸಾನದ ಅಂಚಿನಲ್ಲಿ

ಸ್ವತಂತ್ರ ಭಾರತದ 61 ವರ್ಷಗಳ ಇತಿಹಾಸವನ್ನೊಮ್ಮೆ ತಿರುಗಿ ನೋಡಿದಾಗ ಅನೇಕ ಏಳು-ಬೀಳುಗಳು ಕಾಣಸಿಗುತ್ತವೆ. ಸ್ವಾತಂತ್ರ್ಯಕ್ಕಾಗಿ ಆರಂಭವಾದ ಹೋರಾಟ ಸಮಾನತೆಗಾಗಿ ನಡೆದ ಹೋರಾಟವಾಗಿ ರೂಪುಗೊಂಡು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅದು ಬಡತನದ ವಿರುದ್ಧ ಹೋರಾಟವಾಗಿ ನಿರಂತರ ನಡೆಯುತ್ತಲೇ ಬಂದಿದೆ. ಬಡತನದ ವಿರುದ್ಧದ ಈ ಹೋರಾಟ ತನ್ನ ಆಂತರಿಕ ದೌರ್ಬಲ್ಯಗಳಿಂದ ಒಂದು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದ ಕಾರಣದಿಂದಾಗಿ, ಹದಿನೈದು ವರ್ಷಗಳಿಂದೀಚೆಗೆ ತನ್ನ ದಿಕ್ಕು ಬದಲಿಸಿ ಶ್ರೀಮಂತಿಕೆ ಸಾಧನೆಯ ಅಭಿಯಾನವಾಗಿ ಪರಿವರ್ತಿತವಾಗಿದೆ! ಇದರ ಪರಿಣಾಮವಾಗಿ, ಭಾರತದ ಹೃದಯದಂತಿರುವ ಒಂದು ದೊಡ್ಡ ಜನವರ್ಗವೇ ಆತ್ಮಹತ್ಯೆಯೆಡೆಗೆ ಧಾವಿಸುತ್ತಿದೆ. ಸ್ವಾತಂತ್ರ ಭಾರತದ ಇತಿಹಾಸದಲ್ಲೇ ದೊಡ್ಡ ದುರಂತವಿದು.

ಇದು ಅನಿವಾರ್ಯವಾಗಿತ್ತೇ? ಇದರ ಹಿಂದಿನ ರಾಜಕೀಯವೇನು? ಇದರ ಪರಿಣಾಮಗಳೇನು? ಇದಕ್ಕೆ ಪರಿಹಾರ ಉಂಟೇ? ಈ ಇತ್ಯಾದಿ ಪ್ರಶ್ನೆಗಳನ್ನು ವಿಶ್ಲೇಷಿಸುವ ವಿಶೇಷ ಲೇಖನವಿದು.

ಭಾರತ ಆರ್ಥಿಕ `ಸುಧಾರಣೆ'ಗಳೆಂದು ಹೇಳಲಾಗುವ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣಗಳಿಗೆ ದಾರಿ ಮಾಡಿಕೊಟ್ಟಿರುವ ಹೊಸ ಆರ್ಥಿಕ ನೀತಿಗಳು ಜಾರಿಗೆ ಬಂದಾಗಿನಿಂದ ರಾಷ್ಟ್ರ ಅಧಿಕ ಸಮೃದ್ಧಿಯನ್ನು ಕಾಣುತ್ತಿದೆ ಎಂದು ಹೇಳಲಾಗುತ್ತಿದೆ. ಎರಡಂಕಿ ಮುಟ್ಟಿರುವ ರಾಷ್ಟ್ರೀಯ ಪ್ರಗತಿ ದರ, ಝಗಝಗಿಸುವ ಮಾಲ್ಗಳು, ಗಿಜಗುಡುತ್ತಿರುವ ರಿಸಾರ್ಟ್ ಗಳು, ರಸ್ತೆ ತುಂಬಾ ಓಡಾಡುವ ಅತ್ಯಾಧುನಿಕ ಕಾರ್‌ಗಳು, ಹೊಸದಾಗಿ ಆರಂಭವಾಗುತ್ತಿರುವ ವಿಮಾನ ನಿಲ್ದಾಣಗಳು, ತುಂಬಿ ತುಳುಕುತ್ತಿರುವ ವಿದೇಶೀ ವಿನಿಮಯ ಮೀಸಲು, ನಮ್ಮ ತರುಣ ತರುಣಿಯರಿಗೆ ನಗರಗಳಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳು ಮತ್ತು ಅವರ ಐದಂಕಿ ಸಂಬಳಗಳು ಇತ್ಯಾದಿಗಳನ್ನು ಇದಕ್ಕೆ ಸಾಕ್ಷಿಗಳನ್ನಾಗಿ ಪ್ರಸ್ತುತ ಪಡಿಸಲಾಗುತ್ತಿದೆ.

ಆದರೆ, ಇವೆಲ್ಲವುಗಳ ಜೊತೆ ಜೊತೆಯಲ್ಲೇ ಗಂಟೆಗೆ ಸರಾಸರಿ ಇಬ್ಬರಂತೆ ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಹೀಗೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಒಂದೂವರೆ ಲಕ್ಷ ಸಂಖ್ಯೆಯನ್ನು ದಾಟಿದೆ ಎಂಬುದನ್ನು ಮಾತ್ರ ಈ ಸಮೃದ್ಧಿಯ ವಕ್ತಾರರು ಈ 'ಅಭೂತಪೂರ್ವ ಯಶಸ್ಸಿನ ಕಥೆ'ಯ ಜೊತೆ ಎಲ್ಲೂ ಹೇಳುತ್ತಿಲ್ಲ. ಹೇಳಿದರೆ ಅವರ ಇಡೀ ಸಾಧನೆಯ ಬಣ್ಣ ಬಯಲಾಗುತ್ತದೆ ಎಂಬುದು ಅವರ ಆತಂಕ. ಹಾಗಾಗಿಯೇ ಅವರು ಅದನ್ನೊಂದು ಪ್ರತ್ಯೇಕ ವಿದ್ಯಮಾನವೆಂಬಂತೆ, ಅದಕ್ಕೆ ಬೇರೆಯೇ ಮದ್ದು ಇದೆಯೆಂಬಂತೆ ವಾದ ಮಂಡಿಸುತ್ತಾ, ತಮ್ಮ ಆರ್ಥಿಕ `ಸುಧಾರಣೆ'ಗಳ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗುವ ಹಠ ತೊಟ್ಟಿದ್ದಾರೆ. ಮೊನ್ನೆ ತಾನೇ ಈ ಆರ್ಥಿಕ `ಸುಧಾರಣೆ'ಗಳ ಧೀರ ನಾಯಕ ಪ್ರಧಾನಿ ಮನಮೋಹನ ಸಿಂಗರು ಈ ಸಮೃದ್ಧಿಯನ್ನು ಕಾಪಾಡಿಕೊಂಡು ಹೋಗಲೆಂದೇ ಎಂದು ಹೇಳುತ್ತಾ, ಸಂಸತ್ತಿನಲ್ಲಿ ವಿಶ್ವಾಸಮತ ಪಡೆದುಕೊಂಡ ಅಮೆರಿಕಾದೊಡನೆಯ ನಾಗರೀಕ ಪರಮಾಣು ಒಪ್ಪಂದ ಇದಕ್ಕೊಂದು ಇತ್ತೀಚಿನ ಉದಾಹರಣೆಯಷ್ಟೆ. ಆದರೆ ವಿಪರ್ಯಾಸವೆಂದರೆ ಇವರು ಹೇಳುವ ಪ್ರಗತಿಪರ ಸಮೃದ್ಧಿಯ ಸೂಚ್ಯಂಕಗಳು ಏರುತ್ತಿದ್ದಂತೆ, ರೈತರ ಆತ್ಮಹತ್ಯೆ ದರವೂ ಹೆಚ್ಚುತ್ತಿದೆ! ಅಷ್ಟೆ ಅಲ್ಲ, ಇತ್ತೀಚಿನ ಅಂಕಿ ಅಂಶವೊಂದರ ಪ್ರಕಾರ, ಪ್ರತಿ 27 ಜನ ರೈತರಿಗೆ 18 ಜನ ರೈತೇತರೂ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಇಲ್ಲಿ `ಆತ್ಮಹತ್ಯೆಗೆ ಬಲಿ' ಎಂಬ ಪ್ರಯೋಗವನ್ನು ಬೇಕೆಂದೇ ಮಾಡಲಾಗಿದೆ. ಏಕೆಂದರೆ ಈ ಆತ್ಮಹತ್ಯೆಗಳು ಮೂಲತಃ ಒಳಗಿನ ಒತ್ತಡಗಳಿಂದ ಸಂಭವಿಸುತ್ತಿಲ್ಲ. ಹೊರಗಿನ ಒತ್ತಡಗಳು ಈ ಬಲಿ ಬೇಡುತ್ತಿವೆ. ಈ ಹೊರಗಿನ ಒತ್ತಡಗಳು ಮತ್ತೇನೂ ಆಗಿರದೆ, ಈ ಅಭೂತಪೂರ್ವ ಸಮೃದ್ಧಿ ಸೃಷ್ಠಿ ಮಾಡುತ್ತಿರುವ ಸಾಮಾಜಿಕ ಒತ್ತಡಗಳೇ ಆಗಿವೆ.

ರೈತರ ಆತ್ಮಹತ್ಯೆ ದುರಂತವನ್ನು ಸರ್ಕಾರ ಗಮನಿಸಿಯೇ ಇಲ್ಲ ಎಂದು ಇಲ್ಲಿ ಹೇಳುತ್ತಿಲ್ಲ. ಕೇಂದ್ರ ಸರ್ಕಾರ 65 ಸಾವಿರ ಕೋಟಿ ರೂಪಾಯಿಗಳು ರೈತರ ಸಾಲವನ್ನು ಈಗಾಗಲೇ ಮನ್ನಾ ಮಾಡಿದೆ. 25 ಸಾವಿರ ಕೋಟಿ ರೂಪಾಯಿಗಳ ವೆಚ್ಚದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು ಹಮ್ಮಿಕೊಂಡಿದೆ, 5 ಸಾವಿರ ಕೋಟಿ ರೂಪಾಯಿಗಳ ಆಹಾರ ಭದ್ರತಾ ಕಾರ್ಯಕ್ರಮವನ್ನೂ ರೂಪಿಸುತ್ತಿದೆ ಹಾಗೂ 1100 ಕೋಟಿ ರೂಪಾಯಿಗಳ ರಾಷ್ಟ್ರೀಯ ತೋಟಗಾರಿಕಾ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಈ ವರ್ಷ ರೈತರಿಗಾಗಿ 2 ಲಕ್ಷ 80 ಸಾವಿರ ಕೋಟಿ ರೂಪಾಯಿಗಳ ಸಾಲ ನೀಡಿಕೆಗೆ ವ್ಯವಸ್ಥೆ ಮಾಡಿದೆ. ನಮ್ಮ ರಾಜ್ಯ ಸರ್ಕಾರವೂ ಈ ವರ್ಷದ ಆಯವ್ಯಯದಲ್ಲಿ ಬಡ ರೈತರಿಗೆ ಬೀಜ ಗೊಬ್ಬರ ಕೊಳ್ಳಲು 1000 ರೂಪಾಯಿ ನಗದು ಸಹಾಯ, 10 ಎಚ್ಪಿವರೆಗಿನ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಮತ್ತು ಶೇ 3ರ ದರದಲ್ಲಿ ಸಾಲ ಯೋಜನೆಗಳನ್ನು ಪ್ರಕಟಿಸಿದೆ. ಇಂತಹ ನೆರವು-ರಿಯಾಯಿತಿ-ಮನ್ನಾ ಕಾರ್ಯಕ್ರಮ ಮತ್ತು ಯೋಜನೆಗಳು ಕೇಂದ್ರ ಮತ್ತು ರಾಜ್ಯಸರ್ಕಾರಗಳೆರಡರಿಂದಲೂ ಕಳೆದ 10 ವರ್ಷಗಳಿಂದ ಒಂದಾದರ ಮೇಲೊಂದರಂತೆ ಪ್ರಕಟವಾಗುತ್ತಿದ್ದರೂ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸುತ್ತಿಲ್ಲ. ಹಾಗೇ ಈ ನೆರವು-ರಿಯಾಯಿತಿ-ಮನ್ನಾಗಳ ವಿರುದ್ಧ ಹೊಸ ಸಮೃದ್ಧಿಯ ಫಲಾನುಭವಿಗಳಾದ ಹೊಸ ಮಧ್ಯಮ ವರ್ಗದವರ ಹಾಹಾಕಾರವೂ ನಿಲ್ಲುತ್ತಿಲ್ಲ!

ಆರನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ತನ್ನ 6 ಕೋಟಿ ನಾಗರೀಕರಿಗೆ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಹೆಚ್ಚಿನ ವೇತನವಾಗಿ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ಧವಾಗುತ್ತಿರುವಾಗ, ರಾಷ್ಟ್ರದ ಶ್ರೀಮಂತರಿಂದ 96 ಸಾವಿರ ಕೋಟಿ ಪ್ರತ್ಯಕ್ಷ ತೆರಿಗೆ ಮತ್ತು 25 ಸಾವಿರ ಕೋಟಿ ಅಪ್ರತ್ಯಕ್ಷ ತೆರಿಗೆ ಬಾಕಿ ವಸೂಲಿ ಮಾಡಲಾಗದಿರುವಾಗ ಆಗದ ನೋವು; ಏಳೂವರೆ ಲಕ್ಷ ಕೋಟಿ ರೂಪಾಯಿಗಳ ಆಯವ್ಯಯದಲ್ಲಿ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ ಶೇ.1ರಷ್ಟು ಮಾತ್ರ ಆಗುವ 60 ಸಾವಿರ ಕೋಟಿ ರೂಪಾಯಿಗಳನ್ನು, ಆತ್ಮಹತ್ಯೆಯ ಒತ್ತಡಕ್ಕೆ ಸಿಕ್ಕಿರುವ ನಾಲ್ಕು ಕೋಟಿ ರೈತರ ನೆರವಿಗೆ ತೆಗೆದಿಟ್ಟರೆ, ನಮ್ಮ ಆರ್ಥಿಕ ತಜ್ಞರಿಗೆ, ಕೈಗಾರಿಕೋದ್ಯಮಿಗಳಿಗೆ, ಬ್ಯಾಂಕೋದ್ಯಮಿಗಳಿಗೆ ಅದು ಕೆಟ್ಟ ಅರ್ಥಶಾಸ್ತ್ರವಾಗಿ ಕಾಣುತ್ತದೆ! ಆದರೆ, ಇವರ ಸಮೃದ್ಧಿಗೆ ಕಾರಣವಾದ ಆರ್ಥಿಕ `ಸುಧಾರಣೆ'ಗಳ ಜಾರಿಯ ಭಾಗವಾಗಿಯೇ ನಡೆದುವೆಂದು ಹೇಳಬಹುದಾದ ಷೇರುಪೇಟೆ ಹಗರಣ, ಯುಟಿಐ ಹಗರಣ ಮತ್ತು ಬ್ಯಾಂಕ್ ಹಗರಣಗಳು ಎಷ್ಟು ಸಾವಿರ ಕೋಟಿ ರೂಪಾಯಿಗಳನ್ನು ಯಾವ ಯಾವ ತಿಮಿಂಗಲಗಳ ಬಾಯಿಗೆ ಹಾಕಿ, ಎಂತೆಂತಹ ಆರ್ಥಿಕ ಅನಾಹುತಗಳನ್ನು ಉಂಟುಮಾಡಿದವು ಹಾಗೂ ಆಗ ಅರ್ಥ ಮಂತ್ರಿಗಳಾಗಿದ್ದ ಮನಮೋಹನ್ಸಿಂಗ್ ಮತ್ತು ಪಿ. ಚಿದಂಬರಂ ಅವರೇ ಎಷ್ಟು ಕಷ್ಟ ಪಟ್ಟು ಈ ಹಗರಣಗಳ ಮೂಲ ಕಾರಣಗಳು ಬಹಿರಂಗವಾಗಿ ಚರ್ಚೆಯಾಗದಂತೆ ನೋಡಿಕೊಂಡರು ಎಂಬುದನ್ನು ನೆನಪಿಸಿಕೊಂಡರೆ, ಈ ಕೆಟ್ಟ ಅರ್ಥಶಾಸ್ತ್ರದ ಮಾತುಗಳು ಹೇಗೆ ನಿಜವಾಗಿ ಅರ್ಥಶಾಸ್ತ್ರದ ಮಾತುಗಳಾಗಿರದೆ, ವರ್ಗಹಿತಾಸಕ್ತಿಯ ಮಾತುಗಳಾಗಿ ರೂಪುಗೊಂಡಿವೆ ಎಂಬುದು ಗೊತ್ತಾಗುತ್ತದೆ. ಈ ವರ್ಗ ಹಿತಾಸಕ್ತಿ ಪ್ರತಿನಿಧಿಸುವ ಸಾಮಾಜಿಕ ಒಡಕೇ ನಿಜವಾಗಿ ರೈತನ ಹೃದಯವನ್ನು ಒಡೆದು, ಈ ಸರಣಿ ಆತ್ಮಹತ್ಯೆಗೆ ಕಾರಣವಾಗಿರುವುದು ಎಂಬುದು ಇಲ್ಲಿ ಮುಖ್ಯ ಮಾತು.

2-
ಈ ಸಾಮಾಜಿಕ ಒಡಕು ಇಂದು ನಿನ್ನೆಯದಲ್ಲ. ಅದು ಇಂದು ನಿರ್ಣಾಯಕವಾಗಿ ಎದ್ದು ಕಾಣುತ್ತಿದೆಯಷ್ಟೆ. ಹಣಕಾಸು ಮಂತ್ರಿ ಚಿದಂಬರಂ ಅವರು ಕಳೆದ ಆಯವ್ಯಯ ಮಂಡಿಸುವಾಗ ರೈತರ ಸಾಲ ಮನ್ನಾವನ್ನು ರಾಷ್ಟ್ರದ ಅನ್ನದಾತನ ಋಣ ತೀರಿಸುವ ಕಾರ್ಯಕ್ರಮವೆಂದು ಭಾವನಾತ್ಮಕವಾಗಿ ವರ್ಣಿಸಿದರು. ಆದರೆ ಅವರು ಇದನ್ನು, ಕಳೆದ 60 ವರ್ಷಗಳಲ್ಲಿ ನಮ್ಮ ಅನ್ನದಾತನಿಗೆ ಬಗೆಯುತ್ತಾ ಬಂದಿರುವ ನಿಧಾನ ದ್ರೋಹಕ್ಕಾಗಿ ವ್ಯಕ್ತಪಡಿಸುತ್ತಿರುವ ಸಾಂಕೇತಿಕ ಪಶ್ಚಾತಾಪ ಎಂದು ವರ್ಣಿಸಿದ್ದರೆ, ಹೆಚ್ಚು ಪ್ರಾಮಾಣಿಕ ಹಾಗೂ ನಿಜವಾಗಿರುತ್ತಿತ್ತೇನೋ! ಅದೇನೇ ಇರಲಿ, ಆರ್ಥಿಕ `ಸುಧಾರಣೆ'ಗಳ ಇನ್ನೊಬ್ಬ ಧೀರ ನಾಯಕರಾದ ಚಿದಂಬರಂ ಹೀಗೆ ಇದ್ದಕ್ಕಿದ್ದಂತೆ ರೈತರ ಬಗ್ಗೆ ಭಾವನಾತ್ಮಕ ನಿಲುವು ತಳೆಯಲು ಎರಡು ಮುಖ್ಯ ಕಾರಣಗಳಿದ್ದವು. ಒಂದು ರಾಜಕೀಯ ಕಾರಣ: ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿನ ನಿರಂತರ ಸೋಲುಗಳು ಮತ್ತು ಹತ್ತಿರದಲ್ಲೇ ಇರುವ ಲೋಕಸಭಾ ಚುನಾವಣೆಗಳು. ಆಗಲೇ ಆರಂಭವಾಗಿದ್ದ ರೈತರ ಆತ್ಮಹತ್ಯೆಗಳನ್ನು ಲೆಕ್ಕಿಸದೆ, ಆಗಿನ ಅರ್ಥಮಂತ್ರಿ ಮನಮೋಹನ್ಸಿಂಗರು ಜಾರಿಗೆ ತಂದ ಆರ್ಥಿಕ `ಸುಧಾರಣೆ'ಗಳು ರಾಷ್ಟ್ರದ ಪ್ರಗತಿ ದರವನ್ನು ಏರಿಸುತ್ತಾ ಮಾರುಕಟ್ಟೆ ತುಂಬಾ ಹೊಸ ಹೊಸ ಗ್ರಾಹಕ ವಸ್ತುಗಳನ್ನು ತುಂಬುತ್ತಾ ಹೊಸ ಸಮೃದ್ಧಿಯ ಸಂಭ್ರಮವನ್ನು ಆರಂಭಿಸಿದ್ದರೂ, ಕಾಂಗ್ರೆಸ್ 1999ರ ಚುನಾವಣೆಗಳಲ್ಲಿ ಹೀನಾಯವಾಗಿ ಸೋತಿತ್ತು! ಮನಮೋಹನ್ ಸಿಂಗರ ಪಾಲಿನ ಆ ಕಹಿ ನೆನಪು ಚಿದಂಬರಂ ಅವರನ್ನು ಈಗ ಮತ್ತೊಂದು ಚುನಾವಣೆಗಳ ಹೊತ್ತಿಗೆ ಎಚ್ಚರಿಸಿದೆ! ಇನ್ನೊಂದು, ಅರ್ಥಶಾಸ್ತ್ರೀಯ ಕಾರಣ: ಆರಂಭದಲ್ಲಿ ಎರಡಂಕಿ ದಾಟಿದ್ದ ಪ್ರಗತಿ ದರ ಈಗ ಇಳಿಮುಖವಾಗತೊಡಗಿದ್ದು, ಇದಕ್ಕೆ ಮುಖ್ಯ ಕಾರಣ ಕೃಷಿ ವಲಯದ ಪ್ರಗತಿ ದರ ಶೇ. 3ನ್ನು ದಾಟಲು ನಿರಾಕರಿಸುತ್ತಿದ್ದುದು ಎಂಬುದರ ಅರಿವು. ಆರ್ಥಿಕ `ಸುಧಾರಣೆ'ಗಳನ್ನು ಜಾರಿಗೆ ತರಲಾರಂಭಿಸಿದ 15 ವರ್ಷಗಳ ನಂತರ ನಮ್ಮ ಆಡಳಿತಗಾರರಿಗೆ ರಾಷ್ಟ್ರದ ಪ್ರಗತಿ ರಥಕ್ಕೆ ಎರಡು ಕುದುರೆಗಳಿವೆ ಮತ್ತು ಅವುಗಳಲ್ಲೊಂದರ ಕಡೆ ನಮ್ಮ ಗಮನವೇ ಇಲ್ಲದೆ, ಅದು ಬಡಕಲಾಗಿದೆ ಎಂಬ ಅರಿವು ಮೂಡಿದೆ!

ಈ ಹಿಂದೆ ಹೇಳಿದಂತೆ, ಇದು 15 ವರ್ಷಗಳ ಕಥೆ ಮಾತ್ರವಲ್ಲ. ಗೊತ್ತಿದ್ದೋ ಗೊತ್ತಿಲ್ಲದೆಯೋ, ಸ್ವಾತಂತ್ರ್ಯಾನಂತರ ಕೃಷಿ ಮತ್ತು ಆ ಮೂಲಕ ಗ್ರಾಮಾಭಿವೃದ್ಧಿಯ ಹೆಸರಲ್ಲಿ ನಾವು ನಡೆಸುತ್ತಾ ಬಂದಿರುವ ನಗರೀಕರಣವೆಂಬ ಮಹತ್ವಾಕಾಂಕ್ಷಿ ಯೋಜನೆಯ ಆತ್ಯಂತಿಕ ಫಲ, ರೈತರ ಈ ಸರಣಿ ಆತ್ಮಹತ್ಯೆಯ ನಿಲ್ಲದ ದುರಂತ. `ಹಸಿರುಕ್ರಾಂತಿ' ಹೆಸರಿನ ಅರವತ್ತರ ದಶಕದ ಕೃಷಿ ಕ್ರಾಂತಿ, ಇಂದು ಹಳ್ಳಿಗಳನ್ನು ಸ್ಮಶಾನ ಮಾಡಿವೆ. ಆಗಿನ ಪ್ರಧಾನ ಮಂತ್ರಿ ನೆಹರು ಅವರಿಂದ ಇಂತಹ `ಕ್ರಾಂತಿ'ಯೊಂದರ `ಭವ್ಯ ದೇಗುಲ'ವೆಂದು ವರ್ಣಿಸಿಕೊಂಡ ಬೃಹತ್ ಭಾಕ್ರಾ ನಂಗಲ್ ಜಲಾಶಯದ ಸಾವಿರಾರು ಎಕರೆಗಳ ಅಚ್ಚುಕಟ್ಟು ಪ್ರದೇಶದ ಬಹುಪಾಲು ಭೂಮಿ ಇಂದು-ಐದು ದಶಕಗಳ ನಂತರ-ಹೆಚ್ಚು ಇಳುವರಿ ಮತ್ತು ಹೆಚ್ಚು ಲಾಭದ ವಿಷವ್ಯೂಹಕ್ಕೆ ಸಿಕ್ಕಿ ಬಂಜರಾಗಿದೆ. ಜಲಾಶಯ ಮತ್ತು ಅದನ್ನು ಅವಲಂಬಿಸಿ ಬೆಳೆದ ಆಧುನಿಕ ಕೃಷಿ ಪದ್ಧತಿಯ ಲಾಭಗಳನ್ನು, ಅನೇಕ ಕಾರಣಗಳಿಂದಾಗಿ ಜಲಾಶಯದ `ಸಾಮರ್ಥ್ಯ' ನಾಶವಾಗತೊಡಗಿದ ಮೇಲೂ ಸಂರಕ್ಷಿಸಿಕೊಳ್ಳಲು ರೈತರು ನಡೆಸಿದ ಪ್ರಯತ್ನಗಳಿಂದಾಗಿ, ಇಂದು ಅಲ್ಲಿ ಅಂತರ್ಜಲವೂ ಬತ್ತಿ ಹೋಗಿದೆ. ಈ ಮೊದಲು 150 ಅಡಿಗೆ ಸಿಗುತ್ತಿದ್ದ ನೀರು 1500 ಅಡಿ ಆಳದಲ್ಲೂ ಸಿಗದಾಗಿದೆ! ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗತೊಡಗಿದ್ದು ಮೊದಲು ಇಲ್ಲಿಂದಲೇ. ಎಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೃಷಿ ಕ್ರಾಂತಿ ಆರಂಭವಾಯಿತೋ, ಅಲ್ಲಿಂದಲೇ ರೈತರ ಆತ್ಮಹತ್ಯೆಯೂ ಆರಂಭವಾಯಿತೆನ್ನುವುದು ಎಂಥ ದೊಡ್ಡ ವಿಪರ್ಯಾಸ! ಈ ವಿಪರ್ಯಾಸಕ್ಕೆ ಕಾರಣ, ಈ ಕೃಷಿ ಕ್ರಾಂತಿಯ ಒಡಲಿನಲ್ಲೇ ಈ ವಿಪರ್ಯಾಸದ ಬೀಜಗಳಿದ್ದುದು.

ಗೋಧಿಯ ಕಣಜವೆನಿಸಿದ್ದ ಪಂಜಾಬ್‌ನ ಜನರ ಹಸಿವನ್ನು ಈಗ ಗೋಧಿಯನ್ನು ಆಮದು ಮಾಡಿಕೊಂಡು ನೀಗಿಸಬೇಕಾಗಿದೆ. ಎಂದರೆ ಏನು ಹೇಳುವುದು? ದುರಂತವೆಂದರೆ ಈ ಬಗ್ಗೆ ಸರ್ಕಾರದ ಪರವಾಗಿ ಈವರೆಗೆ ಒಂದು ಸಮಗ್ರ ಸಂಶೋಧನಾತ್ಮಕ ಅಧ್ಯಯನವೂ ನಡೆದಿಲ್ಲ- ಈ ಕೃಷಿ ಕ್ರಾಂತಿಯ ಕೇಂದ್ರಬಿಂದುವಾಗಿದ್ದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಿಂದ ಕೂಡ! ಅದು ಈಗಲೂ ಟ್ರ್ಯಾಕ್ಟರ್, ರಸಗೊಬ್ಬರ, ಕೀಟನಾಶಕ, ಕಳೆನಾಶಕ, ಜಲಸಿಂಚನ-ಸಾಧನ, ಹನಿ-ನೀರಾವರಿ ಸಲಕರಣೆಗಳ ಪೂರೈಕೆ ವ್ಯವಹಾರದಲ್ಲೇ ಮುಳುಗಿಹೋಗಿದೆ. ಆದರೆ ಪಂಜಾಬ್‌ನ ಈ ದುರಂತದ ಬಗ್ಗೆ ಕೆಲವು ಸ್ವತಂತ್ರ ಕೃಷಿ ತಜ್ಞರು, ಪರ್ಯಾಯ ಕೃಷಿ ಪದ್ಧತಿಯ ಪ್ರತಿಪಾದಕರು ಮತ್ತು ಇದಕ್ಕೆ ಸಂಬಂಧಪಟ್ಟ ಸ್ವಯಂ ಸೇವಾಸಂಸ್ಥೆಗಳು ನಡೆಸಿರುವ ಅಧ್ಯಯನಗಳ ಪ್ರಕಾರ, ಪಂಜಾಬ್‌ನ ದುರಂತಕ್ಕೆ ಅಲ್ಲಿ ಅಳವಡಿಸಿಕೊಳ್ಳಲಾದ ತೀವ್ರ ರಾಸಾಯನಿಕ ಕೃಷಿ ಪದ್ಧತಿ, ಅದಕ್ಕೆ ಪೂರಕವಾದ ಬೃಹತ್ ಜಲಾಶಯ ಮತ್ತು ಸಂಕೀರ್ಣ ಕಾಲುವೆ ನಿರ್ಮಾಣ ಹಾಗೂ ಅವುಗಳ ನಿರ್ವಹಣಾ ಮತ್ತು ಸಂರಕ್ಷಣಾ ಪದ್ಧತಿ (ಇವುಗಳ ದುರಸ್ಥಿಗೆ, ಈಗ ಇವುಗಳ ನಿರ್ಮಾಣದ ಹತ್ತುಪಟ್ಟು ಹಣ ಬೇಕಾಗಿದೆ ಎಂಬುದು ಒಂದು ಅಂದಾಜು); ಮತ್ತು ಇವೆರಡೂ ಸೇರಿ ಸೃಷ್ಟಿಸಿದ ಕೃಷಿ ಯಂತ್ರ ಸಲಕರಣೆಗಳ ಕೈಗಾರಿಕೆಗಳು ಪ್ರೋತ್ಸಾಹಿಸಿದ ಬೆಳೆ ಪದ್ಧತಿ; ಹಾಗೇ, ಇವೆಲ್ಲವೂ ಒಟ್ಟಿಗೆ ಸೇರಿ ಸೃಷ್ಟಿಸಿದ ಹಣಕಾಸು ಪದ್ಧತಿಗಳು ರೈತನ ಕೊರಳಿಗೆ ಉರುಳಾಗಿರುವುದೇ ಕಾರಣವಾಗಿದೆ. ಹಾಗಾಗಿ ಮೇಲ್ನೋಟಕ್ಕೆ ರೈತರ ಆತ್ಮಹತ್ಯೆಗೆ ಸಾಲದ ಬಾಧೆಯೆ ಕಾರಣವೆಂದು ಕಾಣುವುದಾದರೂ, ನಿಜವಾದ ಕೊಲೆಗಾರ ಕುರುಡು ಕೃಷಿ ಆಧುನಿಕರಣವೇ ಆಗಿದೆ.

ಹಸಿರು ಕ್ರಾಂತಿ ಮಾಡಿದ ಮೊದಲ ಕೆಲಸವೆಂದರೆ ನಮ್ಮ ಭೂಮಿಯಲ್ಲಿದ್ದ ಎರೆಹುಳುಗಳ ನಾಶ. ಇದನ್ನೊಪ್ಪಿಕೊಳ್ಳಲು ಕಾರಣವಾದ ನಮ್ಮ ರೈತನ `ಮರೆವು' ಅವನ ಅವನತಿಯ ಬಾಗಿಲು ತೆರೆಯಿತೆಂದೇ ಹೇಳಬೇಕು. ಕೃಷಿ ಕ್ಷೇತ್ರ ಪರಿಣಿತ ದೇವೇಂದ್ರ ಶರ್ಮರ ಪ್ರಕಾರ, ಬೀಜ ಎರಚಿ ಬಿತ್ತನೆ ಮಾಡುತ್ತಿದ್ದ ಭಾರತದ ರೈತನನ್ನು ಹಸಿರು ಕ್ರಾಂತಿಯ ಹರಿಕಾರರು ಸಾಲು ಬಿತ್ತನೆ ಮಾಡಲು ಹೇಳಿದ್ದು, ಟ್ರ್ಯಾಕ್ಟರ್ ಕೈಗಾರಿಕೆಯನ್ನು ಭಾರತಕ್ಕೆ ಪರಿಚಯಿಸಲು! ಅವರ ಪ್ರಕಾರ ಇಂದು ಭಾರತದಲ್ಲಿ ಅಗತ್ಯಕ್ಕಿಂತ ಶೇಕಡ 70ರಷ್ಟು ಹೆಚ್ಚು ಟ್ರ್ಯಾಕ್ಟರ್ಗಳಿವೆ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರ ಪೈಕಿ ಹೆಚ್ಚಿನವರು ಈ ತುಕ್ಕು ಹಿಡಿಯುತ್ತಿರುವ ಟ್ರ್ಯಾಕ್ಟರ್ಗಳ ಮಾಲೀಕರೇ ಆಗಿದ್ದಾರೆ. ಹೀಗೆ ಟ್ರ್ಯಾಕ್ಟರ್ ಜೊತೆಗೆ ಇತರೆ ಆಧುನಿಕ ಕೃಷಿ ಸಲಕರಣೆಗಳು ಹಾಗೂ ಇತರೆ ಪೂರಕ ಕೃಷಿ ಬಳಕೆಗಳಿಗಾಗಿ ರಾಷ್ಟ್ರದ ಪ್ರತಿ ಬ್ಲಾಕ್ನಿಂದ ಪ್ರತಿವರ್ಷ 70 ಲಕ್ಷ ರೂಪಾಯಿಗಳಷ್ಟು ರೈತನ ಹಣ ನಗರದ ಕೃಷಿ ಕೈಗಾರಿಕೋದ್ಯಮಿಗಳ ಕಡೆಗೆ ಹರಿದು ಹೋಗುತ್ತಿದೆ. ಸಕಾಲದಲ್ಲಿ ಇದನ್ನು ತಪ್ಪಿಸಿದ್ದರೆ ರೈತ ಬದುಕಿಕೊಳ್ಳುತ್ತಿದ್ದ ಎಂಬುದು ದೇವೇಂದ್ರ ಶರ್ಮರ ಅಭಿಪ್ರಾಯ.

3-

ಭಾರತದ ಉಳಿದ ಭಾಗಗಳಲ್ಲಿನ ಕೃಷಿ ಕ್ಷೇತ್ರ ಪಂಜಾಬ್‌ಗಿಂತ ಹೆಚ್ಚು ಭಿನ್ನವೇನಿಲ್ಲ. ಅಂದ ಮಾತ್ರಕ್ಕೆ ಭಾರತದ ರೈತರೆಲ್ಲರೂ ಅಥವಾ ಪಂಜಾಬಿನ ರೈತರೆಲ್ಲರೂ ಆತ್ಮಹತ್ಯೆಯೆಡೆಗೆ ಧಾವಿಸಿದ್ದಾರೆ ಎಂದರ್ಥವಲ್ಲ. ಕೃಷಿ ಮಾಡಿ ನೆಮ್ಮದಿಯಿಂದಿರುವ ರೈತರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗೇ ತೀರ ಬಡತನದಲಿದ್ದೂ, ಆತ್ಮಹತ್ಯೆಯ ಯೋಚನೆ ಮಾಡದ ರೈತರೂ ಇದ್ದಾರೆ. ಉದಾಹರಣೆಗೆ, ಅತಿ ಬಡತನದ ರಾಜ್ಯಗಳೆಂದೇ ಹೆಸರಾದ-ಮಾನವ ಅಭಿವೃದ್ಧಿ ಸೂಚ್ಯಂಕ ಭಾರತದಲ್ಲೇ ಅತಿ ಕಡಿಮೆ ಇರುವ-ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ರೈತರ ಆತ್ಮಹತ್ಯೆ ಅತಿ ಕಡಿಮೆ! ಏಕೆಂದರೆ ಈ ರಾಜ್ಯಗಳು ಇನ್ನೂ ಮೂಲತಃ ಅರೆ ಊಳಿಗಮಾನ್ಯಶಾಹಿ ಸಮಾಜಗಳಾಗಿಯೇ ಉಳಿದಿದ್ದು, ಅಲ್ಲಿ ಸಾಮಾನ್ಯ ರೈತನೊಬ್ಬನ ನಿರೀಕ್ಷೆಗಳು ಎಂದೂ ಅವನ 'ಮಿತಿ' ಮೀರಿ ಏರಿ ಕೆಳಗೆ ಬೀಳುವ ಆತಂಕಗಳನ್ನು ಎದುರಿಸಿಲ್ಲ! ಹಾಗೆ ನೋಡಿದರೆ ಹೆಚ್ಚಿನ ಆತ್ಮಹತ್ಯೆಗಳು ನಡೆದಿರುವುದು `ಪ್ರಗತಿಪರ' ರಾಜ್ಯಗಳೆಂದೇ ಹೆಸರಾದ ಪಂಜಾಬ್-ಹರ್ಯಾಣ, ಮಹಾರಾಷ್ಟ್ರ, ಆಂಧ್ರ, ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲೇ. ಸ್ಥೂಲವಾಗಿ ಹೇಳುವುದಾದರೆ, ಆತ್ಮಹತ್ಯೆ ಮಾಡಿಕೊಂಡ ಹೆಚ್ಚಿನ ರೈತರು ಇತ್ತ ಸಣ್ಣ ಹಿಡುವಳಿದಾರರೂ ಅಲ್ಲದ, ಅತ್ತ ದೊಡ್ಡ ಹಿಡುವಳಿದಾರರೂ ಅಲ್ಲದ; ಒಂದಲ್ಲ ಒಂದು ರೂಪದ ನೀರಾವರಿ ನಂಬಿದ, ಮಧ್ಯಮ ಗಾತ್ರದ ಹಿಡುವಳಿದಾರರಾದ `ಪ್ರಗತಿಪರ' ರೈತರೇ ಆಗಿದ್ದಾರೆ. ಆಧುನಿಕ ಕೃಷಿಯಿಂದ ಸ್ವಲ್ಪ ಲಾಭ ಕಂಡು, ಅದರ ಬೆನ್ನುಬಿದ್ದು ಇನ್ನಷ್ಟು `ಆಧುನಿಕ ಕೃಷಿಕ'ರಾಗಿ ಹೋಗಲು ಪ್ರಯತ್ನಿಸಿ ಹತಾಶರಾದವರು ಇವರು.

ಈ ಹಿನ್ನೆಲೆಯಲ್ಲಿ ಆರೇಳು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ರೈತರ ಆತ್ಮಹತ್ಯೆ ಕುರಿತು ಅಧ್ಯಯನ ಮಾಡಲು ನೇಮಕ ಮಾಡಿದ್ದ ವೀರೇಶ್ ಸಮಿತಿಯ ವರದಿಯನ್ನು ಗಮನಿಸಬೇಕು. ಅದರ ಪ್ರಕಾರ, ರಾಜ್ಯದಲ್ಲಿ ರೈತರ ಆತ್ಮಹತ್ಯೆಗೆ ಮುಖ್ಯಕಾರಣ ಅವರ ಅನಗತ್ಯ ಖರ್ಚುವೆಚ್ಚಗಳು. ಅಂದರೆ ಹಬ್ಬ-ಹರಿದಿನ-ಜಾತ್ರೆ-ಮದುವೆಗಳ ಮೇಲೆ ದುಂದು ವೆಚ್ಚ ಮಾಡುವ ಆರ್ಥಿಕ ಶಿಸ್ತಿಲ್ಲದ ಆಡಂಬರದ ಜೀವನ ಕ್ರಮ. ಇದರ ಬಗ್ಗೆ ಕೆಲವರು ವೀರೇಶ್ ಸಮಿತಿಯನ್ನು ಅಪಹಾಸ್ಯ ಮಾಡಿದ್ದೂ ಉಂಟು. ಆದರೆ ಅದು ಪರೋಕ್ಷವಾಗಿ ಒಂದು ಮುಖ್ಯ ಸತ್ಯವನ್ನೇ ಹೇಳಿತ್ತು ಎಂಬುದನ್ನು ಯಾರೂ ಗಮನಿಸಲಿಲ್ಲ: ರೈತ ದಾರಿ ತಪ್ಪಿದ್ದಾನೆ. ಆದರೆ, ಇದಕ್ಕೆ ರೈತನೊಬ್ಬನನ್ನೇ ಬಾಧ್ಯನನ್ನಾಗಿ ಮಾಡುವುದು ತಪ್ಪಾದೀತು. ಏಕೆಂದರೆ, ಆತನಿಗೆ ಈ ದಾರಿ ಹಾಕಿಕೊಟ್ಟ ವ್ಯವಸ್ಥೆಯದೂ ತಪ್ಪಲ್ಲವೆ? ಹಾಗೆ ನೋಡಿದರೆ, ಅದರದೇ ನಿಜವಾದ ತಪ್ಪಲ್ಲವೇ? ಹಸಿರು ಕ್ರಾಂತಿ ಆರಂಭದಲ್ಲಿ ತಂದುಕೊಟ್ಟ ಲಾಭ ಮತ್ತು ಹುಟ್ಟಿಸಿದ ಆಸೆ ಅವನ ಕೃಷಿಯನ್ನು ಮಾತ್ರವಲ್ಲ, ಅವನ ಬದುಕನ್ನೂ `ಆಧುನಿಕ' ಗೊಳಿಸಿತ್ತು: ಅವನು ಮಾಯಾ ಕುದುರೆಯ ಹಿಂದೆ ಓಡತೊಡಗಿ, ತನ್ನನ್ನು ತಾನೇ ಕಳೆದುಕೊಂಡಿದ್ದ.

ಹೀಗೆ ಓಡಿದ ಕಾವೇರಿ, ಹೇಮಾವತಿ ಮತ್ತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಗಳ ಅನೇಕ ರೈತರು ಈಗ ತಮ್ಮ ಜಮೀನುಗಳನ್ನು ಅನ್ಯರಿಗೆ ಮಾರಿ, ಅಲ್ಲೆ ಕೃಷಿ ಕೂಲಿಗಾರರಾಗಿರುವುದನ್ನು ನಾವು ಗಮನಿಸುತ್ತಿಲ್ಲವೇ? ಹಾಗೆ ಮಾರಲಾಗದೆ ಭಾವನಾತ್ಮಕವಾಗಿ ಭೂಮಿಗೆ ಅಂಟಿಕೊಂಡವರು ಆತ್ಮಹತ್ಯೆಯೆಡೆಗೆ ಸಾಗಿದ್ದಾರಷ್ಟೆ. ಆಧುನಿಕ ಕೃಷಿ ಬೇಕು; ಆದರೆ ಅದು ಪ್ರಚೋದಿಸುವ ಜೀವನ ಕ್ರಮ ಬೇಡವೆಂದರೆ ಹೇಗೆ? ವೀರೇಶ್ ಸಮಿತಿ ಇನ್ನೊಂದಿಷ್ಟು ಆಳವಾಗಿ ತನ್ನ ಅಧ್ಯಯನ ನಡೆಸಿದ್ದರೆ, ಈ ಪ್ರಶ್ನೆಯನ್ನು ಎದುರುಗೊಳ್ಳುತ್ತಿತ್ತು ಮತ್ತು ನಮ್ಮ ಕೃಷಿ ಬದುಕಿನ ಬಿಕ್ಕಟ್ಟಿನ ಮೂಲ ಎಲ್ಲಿ ಎಂದು ಅದಕ್ಕೆ ಗೊತ್ತಾಗುತ್ತಿತ್ತು. ಆದರೆ ನಮ್ಮ ಎಲ್ಲಾ ಅಧ್ಯಯನಗಳೂ `ಆಧುನಿಕತೆ' ಎಂಬುದು ಯಾವುದೇ ಗುಣಾತ್ಮಕ ವಿಮರ್ಶೆಗೆ ಅತೀತವಾದ ಯುಗಧರ್ಮವೆಂಬಂತೆ ನಂಬಿಯೇ ನಡೆಯುವವಲ್ಲ! ವಿಜ್ಞಾನಾಧಾರಿತ ಎಂದರೆ ಮುಗಿದು ಹೋಯಿತು, ಅದು ಪ್ರಶ್ನಾತೀತ! ಅದು ಎರೆಹುಳುವನ್ನು ನಾಶಮಾಡು ಎಂದರೂ, ನಾಶಮಾಡಲು ನಮ್ಮ ರೈತರು ತಯಾರಾಗುವಷ್ಟು ಮಹಾಮಹಿಮೆಯುಳ್ಳದ್ದು. ವಿಜ್ಞಾನ ಈ ಮಹಿಮೆಯನ್ನು ಪಡೆದುಕೊಂಡದ್ದು, ತಾನಾಗಿ ಅಲ್ಲ. ಅದು ಪಶ್ಚಿಮದಲ್ಲಿ ಬಂಡವಾಳದಾರರ ಕೈವಶವಾಗಿ ತಂತ್ರಜ್ಞಾನವಾಗಿ ರೂಪುಗೊಂಡು, ಮನುಷ್ಯನ ಮನಸ್ಸನ್ನು ಮರುಳು ಮಾಡುವ `ಸುಖಫಲ'ಗಳನ್ನು ಕೊಡತೊಡಗಿದಾಗ.

ಹೀಗಾಗಿ ರೈತ ಹಸಿರು ಕ್ರಾಂತಿಯ ಮೂಲಕ ತನ್ನಲ್ಲೇ, ತನ್ನ ತಿಳುವಳಿಕೆಯಲ್ಲೇ ನಂಬಿಕೆ ಕಳೆದುಕೊಂಡು; ಇತರರಲ್ಲಿ ನಂಬಿಕೆ ಸ್ಥಾಪಿಸಿಕೊಂಡು ಬದುಕುವ ಪರಿಸ್ಥಿತಿಯನ್ನು ಆಹ್ವಾನಿಸಿಕೊಂಡ. ಪಂಜಾಬ್ ಕೃಷಿಯ ಅವನತಿಯ ಸಂಬಂಧವಾಗಿ ಹೇಳಿದ ಮಾತನ್ನೇ ಇನ್ನಷ್ಟು ನೇರವಾಗಿ ಮತ್ತು ವಿವರಗಳಲ್ಲಿ ಹೇಳುವುದಾದರೆ, ಕೃಷಿ ಹಳ್ಳಿಯಲ್ಲಿ ನಡೆಯುವುದಾದರೂ; ಅದರ ಹತೋಟಿ ಸಂಪೂರ್ಣ ರೈತನ ಕೈತಪ್ಪಿ, ಪಟ್ಟಣದ ಕೃಷಿ ಸಾಧನ ಸಲಕರಣೆಗಳ ಮತ್ತು ಪೂರಕ ಸಾಮಗ್ರಿಗಳ ವ್ಯಾಪಾರಿಗಳ, ಅವರ ದಲ್ಲಾಳಿಗಳಂತಿದ್ದ ಕೃಷಿ ಪರಿಣಿತರ ಹಾಗೂ ಲೇವಾದೇವಿಗಾರರ ಕೈವಶವಾಗಿತ್ತು. ಇವರೇ ಕೃಷಿ ಚಟುವಟಿಕೆಗಳ ಮುಖ್ಯ ಪಾತ್ರದಾರರಾಗಿ, ರೈತ ಕೇವಲ ಇವರ ಕೈಗೊಂಬೆ-ದುಡಿಮೆಗಾರನ ಮಟ್ಟಕ್ಕೆ ಇಳಿಸಲ್ಪಟ್ಟಿದ್ದ. ಇದು ಅವನಿಗೆ ನಿಚ್ಚಳವಾಗಿ ಗೊತ್ತಾಗುವ ವೇಳೆಗೆ ರಾಷ್ಟ್ರಜೀವನ ಎಷ್ಟು ಬದಲಾವಣೆಯಾಗಿತ್ತೆಂದರೆ, ಗ್ರಾಮಗಳಿಂದಲೇ ತನ್ನ ಶಕ್ತಿಯನ್ನು ಸಂಚಯಿಸಿಕೊಳ್ಳಬೇಕಿದ್ದ ನಮ್ಮ ಪ್ರಜಾಸತ್ತಾತ್ಮಕ ರಾಜಕಾರಣ ತನ್ನ ನೆಲೆಗಳನ್ನು ಸಂಪೂರ್ಣವಾಗಿ ಪಟ್ಟಣಗಳಿಗೆ-ಅದರ ಕೈಗಾರಿಕೆಗಳಿಗೆ, ಅವುಗಳಿಗೆ ಆಧಾರವೆನಿಸಿದ್ದ ಬಂಡವಾಳದಾರರಿಗೆ ಮತ್ತು ಅವುಗಳನ್ನವಲಂಬಿಸಿದ ನವ ಮಧ್ಯಮ ವರ್ಗದ ಅಧಿಕಾರಶಾಹಿ ಮತ್ತು ಮಧ್ಯವರ್ತಿಗಳಿಗೆ-ವರ್ಗಾಯಿಸಿಕೊಂಡಿತ್ತು.

ಆದರೆ ಇದೆಲ್ಲ ಇಷ್ಟು ನೇರವಾಗಿ, ಸರಳವಾಗಿ, ಸರಳರೇಖಾತ್ಮಕವಾಗಿ ಆದದ್ದಲ್ಲ.

4-
ಈ ಹಿಂದೆ ಹೇಳಿದಂತೆ, ಬೇಸಾಯ ಮಾಡಿಕೊಂಡು ಸುಖವಾಗಿ ಇರುವ ಕುಟುಂಬಗಳು ಸಾಕಷ್ಟು ನಮ್ಮ ಮಧ್ಯ ಇವೆ. ಆದರೆ ಇವೆಲ್ಲ ಆಧುನಿಕ ಕೃಷಿಯ ಆರಂಭಿಕ ಹೆಚ್ಚುವರಿ ಆದಾಯವನ್ನು ಬೇರೆ ಕ್ಷೇತ್ರಗಳಿಗೆ ಹೂಡಿ, ಅಲ್ಲಿ ಲಾಭ ಪಡೆದು ಅದನ್ನು ಮತ್ತೆ ಬೇಸಾಯಕ್ಕೆ ಮರುಹೂಡಿ ನಿರಂತರ ಪ್ರಯೋಗಶೀಲತೆಯಲ್ಲಿ ತೊಡಗಿರುವ ಕುಟುಂಬಗಳು. ಅಥವಾ ಬೇರೆ ಅನುಕೂಲಕರ ಉದ್ಯೋಗದಲ್ಲಿದ್ದು, ಅಲ್ಲಿನ ಹೆಚ್ಚುವರಿ ಆದಾಯವನ್ನು ಭೂಮಿಯ ಮೇಲೆ ಹೂಡಿರುವ ಗೈರು-ಭೂಮಾಲಿಕತ್ವದ 'ಫಾರ್ಮ ಹೌಸ್' ರೈತ ಕುಟುಂಬಗಳಿವು. ಬರೀ ಭೂಮಿಯನ್ನೇ ನಂಬಿ ನೆಮ್ಮದಿಯಿಂದ ಬದುಕುತ್ತಿರುವ ಕುಟುಂಬಗಳು ಇಲ್ಲವೇ ಇಲ್ಲವೆಂದಲ್ಲ. ಅವೇನಿದ್ದರೂ ಆರಕ್ಕೆ ಏರದೇ ಮೂರಕ್ಕೆ ಇಳಿಯದೆ, ತಮ್ಮ ಸುಖದ ನಿರೀಕ್ಷೆಯನ್ನು ಒಂದು ಮಿತಿಯಲ್ಲಿಟ್ಟುಕೊಂಡು, ಬೇಸಾಯ ಮತ್ತು ಅದರ ಹಣಕಾಸಿನ ಕುರಿತ ಎಲ್ಲಾ ಹೊಸ ಮಾಹಿತಿಯನ್ನು ತೂಗಿ ನೋಡಿ ಬಳಸಿಕೊಂಡ ಜಾಣ ಕುಟುಂಬಗಳು. ಆದರೆ ಇವುಗಳ ಸಂಖ್ಯೆ ಕಡಿಮೆ ಮತ್ತು ಇವರು ನಮ್ಮ ಕೃಷಿ ಚಿತ್ರದ ಮಾದರಿ ಪ್ರತಿನಿಧಿಗಳು ಆಗಲಾರರು. ಏಕೆಂದರೆ ಇವರಲ್ಲಿ ಬಹುಪಾಲು ರೈತರು ಅಡಿಕೆ, ಬಾಳೆ, ಏಲಕ್ಕಿ, ಕಾಫಿ, ಮೆಣಸು, ಕೋಕೋ, ರಬ್ಬರ್ ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾ, ರೈತರಲ್ಲೇ ಒಂದು ವಿಶಿಷ್ಟ ವರ್ಗವೆನಿಸಿಕೊಂಡವರು. ಆಹಾರ ಧಾನ್ಯಗಳನ್ನು ಬೆಳೆಯುವ ಸಾಮಾನ್ಯ ರೈತನೊಂದಿಗೆ ಅಂತಹ ಭಾವನಾತ್ಮಕ ಸಂಬಂಧ ಹೊಂದಿಲ್ಲದವರು. ಇವರು ವಾಸಿಸುವ `ಹಳ್ಳಿ'ಗಳಿಗೂ ಬೇರೆ ಸಾಮಾನ್ಯ ರೈತರು ವಾಸಿಸುವ ಹಳ್ಳಿಗಳಿಗೂ ಏನೇನೂ ಸಂಬಂಧ ಕಾಣದು!

ನಾನು ಇಲ್ಲಿ ರೈತರು ವಾಸಿಸುವ ಹಳ್ಳಿಗಳ ಪ್ರಸ್ತಾಪ ಮಾಡಲು ಒಂದು ಕಾರಣವಿದೆ. ಅದೆಂದರೆ, ಹಳ್ಳಿಯ ನಾಶವೇ ರೈತನ ನಾಶವೂ ಆಗಿದೆ ಎಂಬುದೀಗ ಎದ್ದು ಕಾಣುತ್ತಿದೆ. ಹಸಿರು ಕ್ರಾಂತಿಯ ಆರಂಭಿಕ ಲಾಭವನ್ನೆಲ್ಲ ರಾಜಕೀಯ ಮತ್ತು ವ್ಯಾಪಾರಿ ಬಂಡವಾಳವನ್ನಾಗಿ ಮಾಡಿಕೊಂಡು ಹಳ್ಳಿಗಳ ಹೊರಕ್ಕೆ ಸಾಗಿಸಿದ ರೈತರೇ ಇಂದು ನಿಜವಾಗಿ ರೈತರ ನಾಶಕ್ಕೆ ಕಾರಣವಾಗಿದ್ದಾರೆ. ಇಂದು ಗ್ರಾಮಾಂತರ ನೆಲೆಯ ರಾಜಕಾರಣಿಗಳೆನಿಸಿಕೊಂಡ ಬಹುಪಾಲು ಜನ-ನಮ್ಮ ದೇವೇಗೌಡರೂ ಸೇರಿದಂತೆ-ಇಂತಹ ಹಿನ್ನೆಲೆಯಿಂದ ಬಂದವರೇ ಆಗಿದ್ದಾರೆ ಎಂಬುದನ್ನು ನಾವು ಗಮನಿಸಬೇಕು. ಕೃಷಿ ಆಧುನೀಕರಣದ ಆರ್ಥಿಕ ಲಾಭ ಪಡೆದ ಇವರು ಅದನ್ನು ಸಾಮಾಜಿಕ ಬಂಡವಾಳದ ರೂಪದಲ್ಲಿ ಆ ಹಳ್ಳಿಗಳಲ್ಲೇ ಹೂಡದೆ, ನಗರಗಳಿಗೆ ವಲಸೆ ಹೋಗಿ ಹಳ್ಳಿ ಮತ್ತು ನಗರಗಳ ನಡುವೆ ರಾಜಕೀಯ ಮಧ್ಯವರ್ತಿಗಳಾಗಿ ಕೆಲಸ ಮಾಡಿ ಬೆಳೆಯತೊಡಗಿದವರು ಇವರು.

ಇವರೆಲ್ಲರೂ ನೆಹರು ಪ್ರಣೀತ ಸಮಾಜವಾದದ ಫಲಾನುಭವಿಗಳೇ ಆಗಿದ್ದರು. ಭಾರತದ ಹಿಂದುಳಿದಿರುವಿಕೆಗೆ ಆಧುನೀಕರಣವೇ ಮದ್ದು ಎಂದು ಪ್ರಬಲವಾಗಿ ನಂಬಿದ ನೆಹರೂ, ಅದನ್ನು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಜಾರಿಗೆ ತರುವುದೇ ಸಮಾಜವಾದ ಎಂದು ತಿಳಿದಿದ್ದರು. ಅಲ್ಲದೆ ಅವರ ಪ್ರಕಾರ ಆಧುನೀಕರಣ ಎಂಬುದು ಒಂದು ಸಿದ್ಧ ಪರಿಕಲ್ಪನೆಯಾಗಿದ್ದು, ಅದು ಆಗ ಪರಮ ಪವಿತ್ರವೆನಿಸಿದ್ದ ವಿಜ್ಞಾನವನ್ನು ಆಧರಿಸಿದ್ದರಿಂದ, ಅದರಲ್ಲಿ ಹಸ್ತಕ್ಷೇಪ ಮಾಡುವುದೇ ಪ್ರಗತಿ ವಿರೋಧಿಯಾದ ಯಥಾಸ್ಥಿತಿವಾದಿ ನಿಲುವು ಎನಿಸಿಕೊಳ್ಳುತ್ತಿತ್ತು. ಹೀಗಾಗಿ ಆಧುನೀಕರಣ, ಪ್ರಜಾಸತ್ತಾತ್ಮಕತೆಯನ್ನೇ ವಿಕೃತಗೊಳಿಸಿ, ಚೇಲಾ ಬಂಡವಾಳವಾದವನ್ನು ಸೃಷ್ಟಿಸಬಹುದು ಎಂಬುದು ಅವರ ಅರಿವಿಗೆ ಬರಲಿಲ್ಲ. ಬಂದಿದ್ದರೆ, ಅವರು ಆಧುನೀಕರಣವನ್ನು ಸಾಮಾಜಿಕ ನ್ಯಾಯ ಪ್ರಕ್ರಿಯೆಯೊಂದಿಗೆ ಬೆಸೆದೇ ಜಾರಿಗೆ ತರಬೇಕೆನ್ನುವ ಭಾರತೀಯ ಸಮಾಜವಾದಿ ಚಳುವಳಿಯ ಒತ್ತಾಯವನ್ನು ಸಹಾನುಭೂತಿಯಿಂದ ಪರಿಶೀಲಿಸುತ್ತಿದ್ದರೇನೋ!

ಆದರೆ ಅವರು ಭೂಸುಧಾರಣೆ, ಜಾತಿ ವಿನಾಶ ಕಾರ್ಯಕ್ರಮಗಳು ಮತ್ತು ವಿಕೇಂದ್ರೀಕೃತ ಆಡಳಿತ ಮತ್ತು ತಂತ್ರಜ್ಞಾನ-ಇಂತಹ ಸಾಮಾಜಿಕ ನ್ಯಾಯ ಕಾರ್ಯಕ್ರಮಗಳ ಮೂಲಕ ಆಧುನೀಕರಣವನ್ನು ಪ್ರಜಾಸತ್ತಾತ್ಮಕಗೊಳಿಸದೆ ಜಾರಿಗೆ ತರತೊಡಗಿದ್ದರಿಂದ, ಆಧುನೀಕರಣ ಮತ್ತು ಪ್ರಜಾಸತ್ತೆ ಬೇರೆ ಬೇರೆಯೇ ವಿದ್ಯಮಾನಗಳೆಂಬಂತೆ ಜಾರಿಗೆ ಬಂದು; ಪ್ರಜಾಸತ್ತೆ ಪ್ರಬಲ ಮತ್ತು ಆಸ್ತಿವಂತ ಜಾತಿಗಳಿಗಷ್ಟೇ ಆಧುನೀಕರಣದ ಲಾಭಗಳನ್ನು ದಯಪಾಲಿಸಿತು. ಹಾಗಾಗಿ ಪ್ರಜಾಸತ್ತೆಯ ಲಾಭಗಳ ರುಚಿ ಹತ್ತಿಸಿಕೊಂಡ ನಾಯಕರು, ಮತ್ತಷ್ಟು ಲಾಭಗಳನ್ನು ಹುಡುಕಿಕೊಂಡು ಪ್ರಜಾಸತ್ತೆಯ ಮುಂದಿನ ಹಂತದ ಅಧಿಕಾರ ಕೇಂದ್ರಗಳತ್ತ ಚಲಿಸಿದರು! ಹೀಗೆ ಆಧುನೀಕರಣ, ಗ್ರಾಮ ನಾಯಕತ್ವವು ಗ್ರಾಮಬಾಹಿರವಾಗುತ್ತಾ ಹೋಗುವ ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸಿತು. ಗ್ರಾಮ ಪುನಾರಚನೆಗೆ ಮೂಲಾಧಾರವಾಗಬಹುದಾಗಿದ್ದ ಸಹಕಾರಿ ಚಳುವಳಿ ಬಹಳ ಕಡೆ ದಿವಾಳಿಯೆದ್ದಿದ್ದೇ ನಮ್ಮ ಪ್ರಜಾಸತ್ತೆ ಆರಂಭದಲ್ಲೇ ಈ ದಾರಿ ಹಿಡಿದಿದ್ದರಿಂದ.

ಇದರ ಪರಿಣಾಮವಾಗಿ ಗ್ರಾಮ ಭಾರತದ ಆಧಾರ ಉದ್ಯೋಗವಾಗಿದ್ದ ಕೃಷಿಗೆ ನಮ್ಮ ಯೋಜನೆಗಳಲ್ಲಿ, ಆಯವ್ಯಗಳಲ್ಲಿ ಅನುದಾನ ಕ್ರಮೇಣ ಕಡಿಮೆಯಾಗುತ್ತಾ ಹೋಯಿತು. ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಶೇಕಡಾ 20ರಷ್ಟಿದ್ದ ಈ ಅನುದಾನ ಈಗ ಹನ್ನೊಂದನೇ ಯೋಜನೆ ಹೊತ್ತಿಗೆ ಶೇಕಡಾ 5ಕ್ಕೆ ಇಳಿದಿದೆ! ಇದರ ಗಣನೀಯ ಭಾಗವನ್ನು ರಸಗೊಬ್ಬರ-ಕೀಟನಾಶಕ-ಕಳೆನಾಶಕ ಮತ್ತು ಟ್ರ್ಯಾಕ್ಟರ್ಗಳ ಮೇಲಿನ ಸಹಾಯಧನಕ್ಕೇ ವಿನಿಯೋಗಿಸಲಾಗುತ್ತಿದೆ. ಎಂಭತ್ತರ ದಶಕದಿಂದೀಚೆಗಂತೂ ಕೃಷಿ ವಲಯದಲ್ಲಿನ ಬಂಡವಾಳ ಹೂಡಿಕೆ ಅರ್ಧಕ್ಕರ್ಧದಷ್ಟು ಕುಸಿದಿದೆ. ಇದರ ಪರಿಣಾಮವಾಗಿ ಈಗ ಕೃಷಿ ಬಂಡವಾಳೀಕರಣ ರಾಷ್ಟ್ರದ ಒಟ್ಟಾರೆ ಉತ್ಪನ್ನದ ಶೇ. 2ಕ್ಕೂ ಕಡಿಮೆಯಾಗಿದೆ! ಇದರರ್ಥ: ಭಾರತದಲ್ಲಿ ಕೃಷಿ ವಲಯ ನಿರಂತರ ನಿರ್ಲಕ್ಷ್ಯಕ್ಕೊಳಗಾಗುತ್ತಿರುವುದಷ್ಟೇ ಅಲ್ಲ, ಅದರ ಮೇಲೆ ಹೂಡಲಾಗುತ್ತಿರುವ ಅಲ್ಪ ಬಂಡವಾಳದ ಮೇಲಿನ ಲಾಭದ ಬಹುಭಾಗ ನಗರದ ಕೈಗಾರಿಕೆಗಳೆಡೆಗೇ ಹರಿದು ಹೋಗುತ್ತಿದೆ!

ಕೃಷಿ ಅಷ್ಟೇ ಅಲ್ಲ, ಗ್ರಾಮ ನೈರ್ಮಲ್ಯ ಮತ್ತು ಆರೋಗ್ಯದ ಮೇಲಿನ ಬಂಡವಾಳ ಹೂಡಿಕೆ ಕೂಡಾ ಯೋಜನೆಯಿಂದ ಯೋಜನೆಗೆ ಕುಸಿಯುತ್ತಾ ಹೋಗುತ್ತಿದೆ. ಜಗತ್ತಿನಲ್ಲಿ ಆರೋಗ್ಯದ ಮೇಲೆ ಅತಿ ಕಡಿಮೆ (ನಿವ್ವಳ ರಾಷ್ಟ್ರೀಯ ಉತ್ಪನ್ನದ ಶೇಕಡಾ 1.3ರಷ್ಟು) ಬಂಡವಾಳ ಹೂಡುತ್ತಿರುವ ರಾಷ್ಟ್ರವಾಗಿ ಭಾರತ, ಹಳ್ಳಿಗಳನ್ನು ಅನೇಕ ರೋಗಗಳು ಬೀಡನ್ನಾಗಿಸಿದೆ. ಇಂದು ಭಾರತದಲ್ಲಿ ಕ್ಷಯದಿಂದ ಬಳಲುತ್ತಿರುವ 45 ಲಕ್ಷ ಜನ ಮತ್ತು ಅತಿಸಾರದಿಂದ ಬಳಲುತ್ತಿರುವ 15 ಲಕ್ಷ ಜನರಲ್ಲಿ ಬಹುಪಾಲು ಗ್ರಾಮವಾಸಿಗಳೇ ಆಗಿದ್ದಾರೆ. ನಗರಗಳಲ್ಲಿ ಖಾಸಗಿ ಬಂಡವಾಳದಾರರು 3-4-5 ತಾರೆಗಳ ಆಸ್ಪತ್ರೆಗಳನ್ನು ನಿರ್ಮಿಸುತ್ತಿದ್ದರೆ, ಗ್ರಾಮಾಂತರ ಪ್ರದೇಶದ ಅರ್ಧಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರಿದ್ದರೆ ನರ್ಸ್ ಗಳಿಲ್ಲದೆ, ಇಬ್ಬರೂ ಇದ್ದರೆ ಔಷಧಿಗಳಿಲ್ಲದೆ ಯಾವುದೇ ಪ್ರಯೋಜನಕ್ಕೆ ಬರದಂತಾಗಿವೆ. ರಾಷ್ಟ್ರದ ಒಟ್ಟು ಆಸ್ಪತ್ರೆ ಹಾಸಿಗೆಗಳಲ್ಲಿ ಶೇಕಡಾ 20 ರಷ್ಟು ಮಾತ್ರ ಹಳ್ಳಿ ಪ್ರದೇಶಗಳಲ್ಲಿವೆ. ಜೊತೆಗೆ ವೈದ್ಯ-ಶುಶ್ರೂಕರ ಅನುಪಾತ 3:1ರ ಪ್ರಮಾಣದಲ್ಲಿ ಸಂಪೂರ್ಣ ತಲೆಕೆಳಗಾಗಿದ್ದು, ರಾಷ್ಟ್ರದ ವೈದ್ಯ ವ್ಯವಸ್ಥೆಯ ಬೆಳವಣಿಗೆಯೇ ತಲೆಕೆಳಗಾಗಿದೆ. ಇನ್ನು ಶಿಕ್ಷಣಕ್ಕಾಗಿ ನಿವ್ವಳ ರಾಷ್ಟ್ರೀಯ ಉತ್ಪನ್ನದ ಶೇಕಡಾ 6ರ ರಾಷ್ಟ್ರೀಯ ಗುರಿ ಇದೆಯಾದರೂ ಇದರ ಪ್ರಮಾಣ ಎಂದೂ ಶೇಕಡಾ 3ನ್ನು ದಾಟದೇ ಹೋಗಿದೆ! ಹೀಗಾಗಿ ಹಳ್ಳಿಗಳು ಕ್ರಮೇಣ ವಾಸಯೋಗ್ಯವಲ್ಲದ ಸ್ಥಳಗಳಾಗಿ ಮಾರ್ಪಟ್ಟು, ಜನ ನಗರಗಳಿಗೆ ವಲಸೆ ಹೋಗಲಾರಂಭಿಸಿ ಬಹಳ ದಿನಗಳೇ ಆಗಿವೆ.

5-
ಇದಕ್ಕೆ ನಮ್ಮ ಆಧುನಿಕ ರಾಜಕಾರಣವೆಷ್ಟೋ ಅಷ್ಟೇ ಕಾರಣ, ನಮ್ಮ ರೈತ ಸಂಘಟನೆಗಳು ಕೂಡಾ. ಯಾವುದೇ ತಾತ್ವಿಕ ಮುನ್ನೋಟವಿಲ್ಲದ ಉತ್ತರದ ಟಿಕಾಯತ್ರ ಅಥವಾ ದಕ್ಷಿಣದ ನಾರಾಯಣ ಸ್ವಾಮಿಯವರ ರೈತ ಚಳುವಳಿ ಇರಲಿ, ಭಾರತೀಯ ಸಮಾಜವಾದಿ ಚಳುವಳಿಯಿಂದ ತನ್ನ ಮೂಲ ಸ್ಫೂರ್ತಿ ಪಡೆದುಕೊಂಡಿದ್ದೆಂದು ಹೇಳಲಾದ ಕರ್ನಾಟಕ ರೈತ ಸಂಘದ ಚಳುವಳಿಯೂ ರೈತನನ್ನು ಒಬ್ಬ ಬೆಳೆಗಾರ ಅಥವಾ ಆಹಾರ ಉತ್ಪಾದಕನ ಪಾತ್ರದಾಚೆ ನೋಡಲು ಸಾಧ್ಯವಾಗಲಿಲ್ಲ. ಅವನೊಂದು ಆವರಣ; ಅವನೊಂದು ಜೀವನ ಕ್ರಮದ, ಸಂಸ್ಕೃತಿಯ ಪ್ರತೀಕ. ಕೃಷಿಯೂ ಸೇರಿದಂತೆ, ತನ್ನ ಸುತ್ತಲಿನ ಆಧುನೀಕರಣದ ಪ್ರಕ್ರಿಯೆಯ ಮಧ್ಯೆ ಆತ ತನ್ನ ಇಚ್ಛೆಯ ಮೇರೆಗೋ, ಪರಿಸ್ಥಿತಿಯ ಒತ್ತಡದ ಕಾರಣದಿಂದಲೋ ಸಿಕ್ಕಿಹಾಕಿಕೊಂಡು ಕಂಗಾಲಾಗಿದ್ದಾನೆ. ಅವನಿಗೆ ಅವನ ಪರಿಸ್ಥಿತಿಯ ಅರಿವು ಮೂಡಿಸಿ, ಅವನನ್ನು ಎಚ್ಚರಗೊಳಿಸುವ ಮೂಲಕ ತನ್ನ ಹಕ್ಕಿನ ಹೋರಾಟಗಳಿಗಾಗಿ ಸಜ್ಜುಗೊಳಿಸಬೇಕೆಂಬ ವ್ಯವಧಾನವಿಲ್ಲದೆ ಈ ಚಳುವಳಿ; ಅವನನ್ನು ಸಾಮಾಜಿಕ ಶೋಷಿತನನ್ನಾಗಿ ಗ್ರಹಿಸಲಾಗದೆ, ಕೇವಲ ಆರ್ಥಿಕ ಶೋಷಿತನಂತೆ ಸರಳವಾಗಿ ಪಸ್ತುತಪಡಿಸಿ, ಸಮಾಜದ ವಿರುದ್ಧ ಕೆರಳಿಸಿ ನಿಲ್ಲಿಸಿತು. ಬುದ್ಧಿವಂತರಾಗಿದ್ದರೂ, ಬಹುಶಃ ಆ ಕಾರಣಕ್ಕಾಗಿಯೇ ಮುಖ್ಯ ಪ್ರವಾಹ ರಾಜಕಾರಣದಿಂದ ಹತಾಶವಾಗಿ, ಸಿನಿಕವೂ ಆಗಿದ್ದ ನಾಯಕತ್ವ ಇದಕ್ಕೆ ದೊರಕಿದ್ದೇ; ಈ ಚಳುವಳಿ ಇಡೀ ಸಮಾಜದ ಸಹಾನುಭೂತಿ ಗಳಿಸಲೆತ್ನಿಸುವ ಬಹು ಆಯಾಮಗಳ ಜನ ಚಳುವಳಿಯಾಗದೆ, ಸರ್ಕಾರವನ್ನು ಹೆದರಿಸುವ, ಮಣಿಸುವ ಹಠ ತೊಟ್ಟ ಒಂದು ವರ್ಗೀಯ-ಕಾರ್ಮಿಕ ಸಂಘದಂತೆ-ಚಳುವಳಿಯಾಗಿ ಅವನತಿಗೊಂಡಿತು.

ಕರ್ನಾಟಕದ ರೈತ ಚಳುವಳಿಯ ನಾಯಕರಿಗಿದ್ದ ತಾತ್ವಿಕ ಹಿನ್ನೆಲೆಯಲ್ಲಿ, ಈ ಚಳುವಳಿಯನ್ನು ಒಂದು ಗ್ರಾಮ ಪುನಾರಚನೆಯ ಸಮಾಜವಾದಿ ಚಳುವಳಿಯಾಗಿ ಕಟ್ಟಬಹುದಿತ್ತು. ಅದನ್ನು ನೆಹರೂ ಮತ್ತು ಇಂದಿರಾಗಾಂಧಿಯವರ ಸಮಾಜವಾದದ ದ್ವಂದ್ವಗಳಿಂದ ಉಂಟಾಗಿದ್ದ ಈ ಮೇಲೆ ವಿವರಿಸಿದಂತಹ ಅಭಿವೃದ್ಧಿಯ ಅನೇಕ ವಕ್ರತೆಗಳನ್ನೂ, ವಿಕ್ಷಿಪ್ತತೆಗಳನ್ನೂ ಸರಿಪಡಿಸುವ ಪ್ರಯತ್ನದ ಆರಂಭದ ಒಂದು-ಪರ್ಯಾಯ ರಾಜಕಾರಣದ-ಮಾದರಿಯಾಗಿ ರಾಷ್ಟ್ರದ ಮುಂದೆ ಪ್ರಸ್ತುತಪಡಿಸಬಹುದಿತ್ತು. ಇದರೊಂದಿಗೆ ಆಗ ರಾಜ್ಯಾದ್ಯಂತ ಕ್ರಿಯಾಶೀಲವೂ, ಪರಿಣಾಮಕಾರಿಯೂ ಆಗಿದ್ದ ದಲಿತ ಚಳುವಳಿಯೂ ಕೈಗೂಡಿಸುವಂತಾಗಿದ್ದಲ್ಲಿ-ಆಗ ಉತ್ತುಂಗ ಸ್ಥಿತಿ ತಲುಪಿದ್ದ ಈ ಎರಡೂ ಚಳುವಳಿಗಳೂ ಪರಸ್ಪರ ಸಂವಾದದಲ್ಲಿ ತಮ್ಮ ಹುಸಿ ಆವೇಶಗಳನ್ನು ಕಳೆದುಕೊಂಡು-ಕರ್ನಾಟಕದಲ್ಲಿ ಒಂದು ನಿಜವಾದ ಸಮಾಜವಾದಿ ಕ್ರಾಂತಿಯೇ ನಡೆದು ಹೋಗುತ್ತಿತ್ತು. ಆದರೆ ರೈತ ಚಳುವಳಿ ಹೆಸರಿಗಷ್ಟೇ ಕೆಲವು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಔಪಚಾರಿಕವೆಂಬಂತೆ ನಡೆಸಿ, ಗಾಂಧಿ ಹೆಸರು ಹೇಳಿಕೊಂಡೇ ತನ್ನ ಹಠ-ಅಹಂಕಾರಗಳಲ್ಲಿ ಬೆಳೆಯುತ್ತಾ ಹೋಯಿತು. ಜೊತೆಗೆ, ಸಲ್ಲದ ಕ್ರುದ್ಧತೆಯನ್ನು ರೈತನಲ್ಲೂ ಬೆಳೆಸುತ್ತಾ, ಕಳೆದುಹೋಗಿದ್ದ ಅವನ ವ್ಯಕ್ತಿತ್ವವನ್ನು ಮರಳಿ ಗಳಿಸಿಕೊಡುವಲ್ಲಿ ವಿಫಲಗೊಂಡಿತು.

ರೈತ ಚಳುವಳಿಯು ರೈತನ ಸಮಸ್ಯೆ ಎಂದರೆ ಈಗಿನ ಸರ್ಕಾರಗಳಂತೆಯೇ ಬರೀ ಬೆಳೆ ಬೆಲೆ ಸಮಸ್ಯೆ ಎಂಬಂತೆ ಗ್ರಹಿಸುತ್ತಾ, ರೈತನೇಕೆ ಐ.ಎ.ಎಸ್. ಅಧಿಕಾರಿಯಂತೆ ಬಾಳಬಾರದು ಎಂದು ಪ್ರಶ್ನಿಸುತ್ತಾ; ಆದರೆ ಐ.ಎ.ಎಸ್. ಅಧಿಕಾರಿಯ ಕಾರ್ಯಶೈಲಿ ಮತ್ತು ಜೀವನಶೈಲಿಗಳನ್ನು ರೂಪಿಸುವ ವ್ಯವಸ್ಥೆಯೇ ರೈತನ ಬೆಳೆಗೆ ಬೆಲೆ ಕೊಡಲು ಅಡ್ಡಿಯಾಗಿರುವುದು ಎಂಬುದನ್ನು ಮರೆಯುತ್ತಾ, ತನ್ನ `ಹೋರಾಟ'ಗಳನ್ನು ರೂಪಿಸಿಕೊಂಡು ಸುಸ್ತಾಗಿ ಹೋಯಿತು. ಎಷ್ಟು ಸುಸ್ತಾಗಿ ಹೋಯಿತೆಂದರೆ, ರಾಷ್ಟ್ರದ ಅರ್ಥವ್ಯವಸ್ಥೆ ಕುಸಿದು ಬಿದ್ದು ವಿಶ್ವ ವ್ಯಾಪಾರ ಸಂಸ್ಥೆಯ (WTO-World Trade Organisation)ನ ಪ್ರತಿಕೂಲ ಒಪ್ಪಂದಗಳಿಗೆ ಸಹಿಹಾಕಬೇಕಾದ ಪರಿಸ್ಥಿತಿ ಉಂಟಾದ ವೇಳೆಗೆ, ಅದನ್ನು ಪ್ರತಿಭಟಿಸಲು ಜೀನಿವಾಕ್ಕೋ ಮತ್ತೆಲ್ಲಿಗೋ ರೈತರ ಹೆಸರಲ್ಲಿ ಯಾರ್ಯಾರನ್ನೋ ವಿಮಾನದಲ್ಲಿ ತುಂಬಿಕೊಂಡು ವಿದೇಶ ಪ್ರವಾಸಕ್ಕೆ ಹೋಗುವ `ಅಂತಾರಾಷ್ಟ್ರೀಯ ವ್ಯವಸ್ಥೆ'ಗೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳುವಷ್ಟು! ಅಲ್ಲಿಂದಾಚೆಗೆ ಕರ್ನಾಟಕದ ರೈತನೇನು, ಭಾರತದ ಎಲ್ಲ ರೈತರೂ ಅನಾಥರೇ-ಜಾಗತಿಕ ಮಟ್ಟದ ಅನಾಥರು!
ಇದೆಲ್ಲದರ ಒಟ್ಟು ಪರಿಣಾಮವಾಗಿ ಕಳೆದ ಐದು ವರ್ಷಗಳಲ್ಲಿ ರಾಷ್ಟ್ರದ ಆಹಾರ ಉತ್ಪಾದನೆಯ ಪ್ರಮಾಣ ಸ್ಥಗಿತಗೊಂಡಿದ್ದು, ಕಳೆದೆರಡು ವರ್ಷಗಳಲ್ಲಿ ಅದು ಇಳಿಕೆಯ ಸೂಚನೆಗಳನ್ನೂ ತೋರುತ್ತಿದೆ. ಇದಕ್ಕೆ ಇನ್ನೊಂದು ಕಾರಣವೆಂದರೆ, ಸರ್ಕಾರ ತನ್ನ ಹೊಸ ಆರ್ಥಿಕ ನೀತಿ ಮತ್ತು ಅದರ ಅಂಗವಾದ ಗ್ಯಾಟ್ (GATT: General Agrement on Trade & Tarif) ಒಪ್ಪಂದಗಳ ಪರಿಣಾಮವಾಗಿ ತನ್ನ ಆಹಾರ ಸ್ವಾವಲಂಬನೆ ಮತ್ತು ಭದ್ರತೆಯ ಕಾರ್ಯಕ್ರಮಗಳನ್ನು ಕೈಬಿಟ್ಟಿರುವುದೇ ಆಗಿದೆ. ಈ ನೀತಿಗನುಗುಣವಾಗಿಯೇ ಪಡಿತರ ಪದ್ಧತಿಯ ವ್ಯಾಪ್ತಿಯನ್ನು ಸೀಮಿತಗೊಳಿಸಿ, ರೈತರಿಂದ ಧಾನ್ಯ ಖರೀದಿಯನ್ನೂ ಕ್ರಮೇಣ ಕೈಬಿಡುತ್ತಾ ಬಂದಿದೆ. ಇನ್ನು ಕೃಷಿ ವಲಯದ ಅನುದಾನ ಕಡಿಮೆಯಾಗುತ್ತಿರುವುದರಿಂದ, ನೀರಾವರಿ ಬೆಳವಣಿಗೆ ದರವೂ ಕಡಿಮೆಯಾಗುತ್ತಿದೆ. ಜೊತೆಗೆ ಜಾಗತಿಕ ಮಾರುಕಟ್ಟೆಗೆ ಅನುಗುಣವಾದ ಬೆಳೆ ಪದ್ಧತಿ ಆರಂಭವಾಗಿರುವುದರಿಂದಾಗಿ ಶೇಕಡಾ 1ಕ್ಕೂ ಕಡಿಮೆ ಇರುವ ವಾಣಿಜ್ಯ ಬೆಳೆಗಾರರು ಶೇಕಡಾ 70ರಷ್ಟು ನೀರಾವರಿಯನ್ನು ಬಳಸುವಂತಾಗಿದ್ದು, ಆಹಾರ ಧಾನ್ಯಗಳನ್ನು ಬೆಳೆಯುವ ರೈತರು ಕಂಗಾಲಾಗಿದ್ದಾರೆ. ಪಾರಂಪರಿಕ ಕೃಷಿ ಕುಟುಂಬಗಳಲ್ಲಿನ ನಿರುದ್ಯೋಗ ದರ 1995-94ರಿಂದ 2004-05ರ ಹೊತ್ತಿಗೆ ಶೇ. 9.5ರಿಂದ ಶೇ. 15.3 ಕ್ಕೆ ಏರಿದೆ!

6-
ಆದರೆ, ಇದು ಅಭಿವೃದ್ಧಿಯ ಏರುಪೇರಾದ ನೀತಿಯ ಫಲ ಎಂಬುದನ್ನರಿಯದ ಸರ್ಕಾರ, ಗ್ರಾಮ ನಿರುದ್ಯೋಗ ನಿವಾರಣೆಗಾಗಿ `ಪ್ರತ್ಯೇಕ' ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. `ಕೂಲಿಗಾಗಿ ಕಾಳು' ಇಂತಹದೊಂದು ಹಳೆಯ ಕಾರ್ಯಕ್ರಮವಾದರೆ, `ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' ಇತ್ತೀಚಿನದು. ಈ ಮಾದರಿಯ ಅನೇಕ `ಸಾಮಾಜಿಕ' ಯೋಜನೆಗಳು ಈಗ ದೇಶಾದ್ಯಂತ ಜಾರಿಯಲ್ಲಿದ್ದು, ಕಳೆದ ಹದಿನೈದು ವರ್ಷಗಳ ಏಕಮುಖ ಆರ್ಥಿಕ ನೀತಿ ಹುಟ್ಟಿಹಾಕಿರುವ ವಕ್ರತೆಗಳನ್ನು ಸರಿಪಡಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಆದರೆ ಇವಾವುವೂ ಗ್ರಾಮಾಂತರ ಪ್ರದೇಶದ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸಿದಂತಿಲ್ಲ. ಅವರು `ಬದುಕಲು' ನಗರಗಳ ಕಡೆಗೆ ಮುಖ ಮಾಡುವುದನ್ನು ನಿಲ್ಲಿಸಿದಂತಿಲ್ಲ. ಕಾರಣ, ಈ ಯೋಜನೆಗಳು ನಗರ ದೃಷ್ಟಿಯ ಅಭಿವೃದ್ಧಿ ಆಡಳಿತಗಾರರು ಹಳ್ಳಿಗಳಿಗೆ `ಕರುಣೆ'ಯಿಂದ ದಯಪಾಲಿಸಲ್ಪಟ್ಟ 'ಪರಿಹಾರ ಕಾರ್ಯಕ್ರಮ'ಗಳು ಮಾತ್ರ ಆಗಿವೆ. ಅವು ಸಹಜವಾಗಿಯೇ, ಅಭಿವೃದ್ಧಿಗಿಂತ ಭಯಂಕರ ಭ್ರಷ್ಟಾಚಾರದ ಕೂಪಗಳಿಗೆ ಕಾರಣವಾಗಿವೆ. ಇಂತಹ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಸ್ವರೂಪ ಮತ್ತು ಪರಿಣಾಮಗಳನ್ನು ವಿವರವಾಗಿ ಅರಿಯಬೇಕಾದರೆ ಪಿ.ಸಾಯಿನಾಥ್ ಕ್ಷೇತ್ರಕಾರ್ಯದ ಸಾಕ್ಷ್ಯಗಳ ಆಧಾರದ ಮೇಲೆ ಬರೆದಿರುವ `Everybody loves a good drought' ಎಂಬ ಪುಸ್ತಕವನ್ನು ಓದಬೇಕು.

ಒಂದು ಉದಾಹರಣೆ: ಒರಿಸ್ಸಾದ ನೌಪಾಡ್ ಎಂಬ ಅನಾವೃಷ್ಟಿ ಪೀಡಿತ ಪ್ರದೇಶವೊಂದರ ಅಭಿವೃದ್ಧಿಗೆ 2 ಕೋಟಿ ರೂಪಾಯಿಗಳನ್ನು ಹೂಡಲಾಗುತ್ತದೆ. ಅದರ ಪ್ರಕಾರ, ಪ್ರತಿಯೊಂದು ಕುಟುಂಬಕ್ಕೂ ಒಂದು ಹಸು ಮತ್ತು ಅದಕ್ಕೆ ಮೇವು ಒದಗಿಸಲು ಮತ್ತು ಕಟ್ಟಿಗೆ ಮೂಲಕ ಕುಟುಂಬಕ್ಕೆ ಒಂದಿಷ್ಟು ಹಣ ಸಿಗಲು ಅನುವಾಗುವಂತೆ ಸಬಾಬುಲ್ ಮರಗಳನ್ನು ಬೆಳೆಯಲೆಂದು ಒಂದು ಎಕರೆ ಜಮೀನು ಕೊಡಲಾಗುತ್ತದೆ. ಆ ಹಸುಗಳಿಗೆ ಜೆರ್ಸಿ ಹೋರಿಗಳ ಮೂಲಕ ಕೃತಕ ಗರ್ಭಧಾರಣೆ ಮಾಡಿಸಿ, ಸಮೃದ್ಧ ಪಶು ಸಂತತಿ ಮತ್ತು ಸಮೃದ್ಧ ಹಾಲು ಉತ್ಪಾದನೆಯ ಗುರಿ ಸಾಧಿಸುವ ಉದ್ದೇಶ ಹೊಂದಿದ್ದ ಈ ಕಾರ್ಯಕ್ರಮ, ಎರಡು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ ಎರಡು ವರ್ಷಗಳ ನಂತರ, ಇಡೀ ಪ್ರದೇಶವನ್ನು ಸ್ಮಶಾನ ಮಾಡಿ ಹೋಗುತ್ತದೆ. ಹಸುಗಳು ಸ್ಥಳೀಯ ಹೋರಿಗಳೊಂದಿಗೆ ಬೆರೆತು ಸಾಮಾನ್ಯ ತಳಿ ಉತ್ಪತ್ತಿ ಮಾಡುವವೆಂಬ ಭೀತಿ ಹುಟ್ಟಿಸಿ ಸ್ಥಳೀಯ ಪಶು ಸಮೂಹವನ್ನು ಆ ಪ್ರದೇಶದಿಂದ ಹೊರದೂಡಲಾಗುತ್ತದೆ! ಆದರೆ ಜೆರ್ಸಿ ಹೋರಿಗಳ ಕೃತಕ ಗರ್ಭದಾನ, ತಳಿ ವ್ಯತ್ಯಯದಿಂದಾಗಿ ಯಶಸ್ವ್ವಿಯಾಗದೆ, ಕರುಗಳು ಕುಬ್ಜವಾಗಿ, ದುರ್ಬಲವಾಗಿ ಹುಟ್ಟಿ ಸಾಯತೊಡಗುತ್ತವೆ. ಒಂದು ವರ್ಷ ಸಬಾಬುಲ್ ಬೆಳೆದ ಭೂಮಿಯಲ್ಲಿ ಮತ್ತೇನೂ ಬೆಳೆಯದಂತಾಗಿ, ರೈತನಿಂದ ಆ ಜಮೀನನ್ನು ವಾಪಸ್ ಪಡೆಯಲಾಗುತ್ತದೆ. ಯೋಜನೆ ಮುನ್ನ ಹೆಚ್ಚುವರಿ ಹಾಲು ಉತ್ಪಾದಿಸುತ್ತಿದ್ದ ಆ ಪ್ರದೇಶದಲ್ಲಿ ಹಾಲಿನ ದಾರಿದ್ರ್ಯ ಉಂಟಾಗಿದೆ. ಅಲ್ಲೀಗ ಪಶು ಸಂತತಿ ನಿರ್ಮಾಣ ಮಾಡಲು ದೇಶೀ ತಳಿಗಳೇ ವಿರಳವಾಗಿ ಹೋಗಿವೆ. ಆದರೆ ಇದರಿಂದ ಹಸು ಸರಬರಾಜು ಮಾಡಿದ, ಕೃತಕ ಗರ್ಭಧಾರಣೆ ವ್ಯವಸ್ಥೆ ಮಾಡಿದ, ಸಬಾಬುಲ್ ಸಸಿ ಪೂರೈಸುವ ಮತ್ತು ಜಮೀನು ಪತ್ರ ಕೊಡಿಸಿದ ಮಧ್ಯವರ್ತಿಗಳು ಮತ್ತು ಅವರಿಂದ ಕಮೀಷನ್ ಪಡೆದ ಅಧಿಕಾರಿಗಳಿಗಂತೂ ಲಾಭವಾಯಿತು!

2007ರ ಜುಲೈನಲ್ಲಿ ರೈತರ ಪರಿಹಾರಕ್ಕಾಗಿ ಪ್ರಕಟಿಸಿದ ಪ್ರಧಾನಿಯವರ `ವಿದರ್ಭ ಪ್ಯಾಕೇಜ್' ಕೂಡಾ ಇಂತಹುದೇ ವಿಪರ್ಯಾಸಕ್ಕೆ ಕಾರಣವಾಯಿತು. ದಿನಕ್ಕೆ ಕನಿಷ್ಠ 60 ರೂಪಾಯಿಗಳ ಖರ್ಚು ಬೀಳುವ ಹಸುಗಳನ್ನು ತಮಗೇ ತಿನ್ನಲು ಆಹಾರವಿಲ್ಲದ 31 ಸಾವಿರ ಬಡ ರೈತ ಕುಟುಂಬಗಳಿಗೆ ನೀಡಲಾಯಿತು! ಗೊಬ್ಬರ ಮತ್ತು ಬೀಜ ಖರೀದಿಗಾಗಿ ಸಹಾಯಧನ ಘೋಷಿಸಲಾಯಿತಲ್ಲದೆ, `ಬೀಜ ಬದಲಾವಣೆ' ಎಂಬ ಯಾರಿಗೂ ಅರ್ಥವಾಗದ ಕಾರ್ಯಕ್ರಮಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಮಂಜೂರು ಮಾಡಲಾಯಿತು. ಇದರಿಂದ ಮತ್ತೆ ಲಾಭ ಮಾಡಿಕೊಂಡವರೆಂದರೆ ಸ್ಥಳೀಯ ಅಧಿಕಾರಶಾಹಿ ಮತ್ತು ಮಧ್ಯವರ್ತಿಗಳೇ. ಇದಕ್ಕೆ ಮುಖ್ಯಕಾರಣ, ಹಳ್ಳಿಗಳ-ಅವುಗಳ ಭೌಗೋಳಿಕ, ಪಾರಿಸರಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಪರ್ಕವೇ ಇಲ್ಲದ ಹಾಗೂ ಮತ್ತೂ ಮುಖ್ಯವಾಗಿ ಹಳ್ಳಿಗಾಡಿನ ದಾರುಣ ಬದುಕಿನ ಬಗ್ಗೆ ಯಾವುದೇ ಭಾವನೆ ಇಲ್ಲದ (ಮೇಲಿಂದ ಬರುವ ಆದೇಶಗಳನ್ನು ಪಾಲಿಸುವ ಆಡಳಿತದ ಭಾಗವಾಗಿಯಷ್ಟೇ ಕೆಲಸ ಮಾಡುವ) ಅಧಿಕಾರಿಗಳು ಎಲ್ಲೋ ಕೂತು, ಮಂಜೂರಾದ ಹಣವನ್ನು ಖರ್ಚು ಮಾಡುವುದನ್ನಷ್ಟೇ ಗುರಿಯಾಗಿರಿಸಿಕೊಂಡು, ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದು. ಇದು ಈ ಹಿಂದೆ ಪ್ರಸ್ತಾಪಿಸಿದ, ನಮ್ಮ ಪ್ರಜಾಪ್ರಭುತ್ವ ಆಧುನೀಕರಣದ ಭರಾಟೆಯಲ್ಲಿ ತನ್ನ ಬೇರುಗಳನ್ನೇ ಕಳೆದುಕೊಂಡು ಬರೀ ಭೌತಿಕವಾಗಿ ವಿಕಾಸವಾದ ದುರಂತದ ಪ್ರತೀಕವೇ ಆಗಿದೆ.

ನಮ್ಮ ಗ್ರಾಮಾಭಿವೃದ್ಧಿ ಯೋಜನೆಗಳ ಬಹುಪಾಲು ಹಣವನ್ನು ತಿನ್ನುವ `ಅನಾವೃಷ್ಟಿ ಪೀಡಿತ ಪ್ರದೇಶ ಕಾರ್ಯಕ್ರಮ'ದ (DPAP-Drought Prone Area Programme) ಹಿಂದಿರುವ ದೊಡ್ಡ ಮೋಸವನ್ನು ಗಮನಿಸಿದರೆ ಸಾಕು, ನಮ್ಮ ಈ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿ ಪರಿಕಲ್ಪನೆಗಳು ಎಷ್ಟು ವಿಕ್ಷಿಪ್ತಗೊಂಡಿವೆ ಎಂದು ಗೊತ್ತಾಗುತ್ತದೆ. ನಮ್ಮ ದೇಶದ ವಾರ್ಷಿಕ ಸರಾಸರಿ ಮಳೆ 750 ಮಿ.ಲೀಟರ್ ಇದ್ದು, ಇದಕ್ಕಿಂತ ಕಡಿಮೆ ಮಳೆ ಬೀಳುವ ಪ್ರದೇಶಗಳನ್ನಷ್ಟೇ ಅನಾವೃಷ್ಟಿ ಪೀಡಿತವೆಂದು ಘೋಷಿಸಬೇಕು. ಆದರೆ ಮಳೆಯ ಈ ಲೆಕ್ಕವನ್ನೇ ಪರಿಗಣಿಸದೆ, ಸ್ಥಳೀಯ ಶಾಸಕರು, ಅಧಿಕಾರಿಗಳು, ಪತ್ರಕರ್ತರು ಮತ್ತು ಕಂತ್ರಾಟುದಾರರು ಒಟ್ಟುಗೂಡಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ತಂತಮ್ಮ ತಾಲೂಕುಗಳನ್ನು ಅನಾವೃಷ್ಟಿಪೀಡಿತವೆಂದು ಘೋಷಿತವಾಗುವಂತೆ ನೋಡಿಕೊಳ್ಳುತ್ತಾರೆ.ನಂತರ ಇವರೆಲ್ಲ ಸೇರಿ, ರಸ್ತೆ ನಿರ್ಮಾಣ, ಕೆರೆ ಹೂಳೆತ್ತುವುದು, ವನ ನಿರ್ಮಾಣ, ಇತ್ಯಾದಿ ಕಾಮಗಾರಿಗಳ ಹೆಸರಲ್ಲಿ ಹಣ ಲೂಟಿ ಮಾಡುತ್ತಿರುವುದರ ಬೃಹತ್ 'ಯೋಜನೆ'ಯೇ ರಾಷ್ಟ್ರಾದ್ಯಂತ ಜಾರಿಯಾಗುತ್ತಿರುವದನ್ನು ಸಾಯಿನಾಥ್ ತಮ್ಮ ಪುಸ್ತಕದಲ್ಲಿ ಅನೇಕ ದೃಷ್ಟಾಂತಗಳ ಮೂಲಕ ನಮ್ಮ ಗಮನಕ್ಕೆ ತರುತ್ತಾರೆ. ಉದಾಹರಣೆಗೆ ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಮಳೆ ಬೀಳುವ ಗಿರಿಧಾಮ ಪ್ರದೇಶವಾದ ಲೋನಾವಳವೂ ಅನಾವೃಷ್ಟಿ ಪೀಡಿತ ಪ್ರದೇಶವಂತೆ! ಹೀಗಾಗಿ, ಮಹಾರಾಷ್ಟ್ರದಲ್ಲಿ ಶೇ.73ರಷ್ಟು ಕಬ್ಬು ಬೆಳೆಯುವುದು ಇಂತಹ ಅನಾವೃಷ್ಟಿ ಪೀಡಿತ ಬ್ಲಾಕುಗಳಲ್ಲೇ!

ಇನ್ನು ವಾರ್ಷಿಕ ಸರಾಸರಿ 900 ಮಿ.ಲೀ. ಮಳೆ ಬೀಳುವ ಒರಿಸ್ಸಾದ ಕಾಳಹಂಡಿ ತಾಲ್ಲೂಕನ್ನು 'ಹಸಿವಿನಿಂದ ಸತ್ತವರ ತಾಲ್ಲೂಕು' ಎಂಬ ಹಳೆಯ ದಾಖಲೆಯ ನೆಪದಲ್ಲಿ ನಿರಂತರ ಅನಾವೃಷ್ಟಿ ಪೀಡಿತ ತಾಲ್ಲೂಕನ್ನಾಗಿ ಪರಿವರ್ತಿಸಲಾಗಿದೆ! ಆದರೆ ವಾಸ್ತವ ಸಂಗತಿ ಎಂದರೆ, ಈ ತಾಲ್ಲೂಕಿನ ಸರಾಸರಿ ತಲಾ ಆಹಾರ ಉತ್ಪಾದನೆ ರಾಜ್ಯ ಸರಾಸರಿಗಿಂತ ಹೆಚ್ಚು. ಸಾಯಿನಾಥರ ಪ್ರಕಾರ, ಕಾಳಹಂಡಿಯ ನಿಜವಾದ ಸಮಸ್ಯೆ ಮಳೆಯದ್ದೂ ಅಲ್ಲ, ಬೆಳೆಯದ್ದೂ ಅಲ್ಲ. ಅಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ದುರುಪಯೋಗಪಡಿಸಿಕೊಂಡು ಅಲ್ಲಿನ ವ್ಯಾಪಾರಿ ಹಾಗೂ ನೌಕರಶಾಹಿ ಜೊತೆಗೂಡಿ, ಅಲ್ಲಿ ಉತ್ಪಾದಿಸಲಾಗುವ ಆಹಾರ ಧಾನ್ಯಗಳನ್ನು ಅತಿ ಲಾಭಕ್ಕಾಗಿ ಹೊರಕ್ಕೆ ಸಾಗಿಸುತ್ತಿರುವುದೇ ಆಗಿದೆ. ಆದರೆ ನಮ್ಮ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು ಇಂತಹುದನ್ನೆಲ್ಲ ಒಪ್ಪಿಕೊಂಡೇ ಯೋಜಿತವಾಗಿರುತ್ತವೆ! ಹಾಗಾಗಿ ನಮ್ಮ ದೇಶದಲ್ಲಿ ಅನಾವೃಷ್ಟಿ ಎಂದರೆ ವ್ಯಾಪಾರಿಗಳಿಗೆ, ದಲ್ಲಾಳಿಗಳಿಗೆ, ಕಂತ್ರಾಟುದಾರರಿಗೆ, ಪುಢಾರಿಗಳಿಗೆ ಮತ್ತು ನೌಕರಶಾಹಿಗೆ ಸುಗ್ಗಿ. ಈ ಹಿನ್ನೆಲೆಯೊಂದಿಗೇ ಸಾಯಿನಾಥ್ಗೆ ಇಂತಹ ಅನಾವೃಷ್ಟಿ ಪೀಡಿತ ತಾಲ್ಲೂಕು ಕೇಂದ್ರವೊಂದರಲ್ಲಿ ಕಂತ್ರಾಟು ಮಾಡಿಸುವ ವಕೀಲನೊಬ್ಬ ಹೇಳಿದ್ದು:``ಈ ವರ್ಷದ ಅನಾವೃಷ್ಟಿಯಿಂದಾಗಿ ನಾನು ಸ್ಕೂಟರ್ ಕೊಂಡುಕೊಂಡೆ. ಮುಂದಿನ ವರ್ಷದ ಅನಾವೃಷ್ಟಿಗೆ ಕಾರ್ ಕೊಳ್ಳುವೆ!''. ಅಷ್ಟೇ ಅಲ್ಲ, ತಮ್ಮ ಭೂಮಿಗಳಲ್ಲಿ ಮೂರು ಬೆಳೆ ಬೆಳೆಯುವ ಇಂತಹ ತಾಲ್ಲೂಕುಗಳ ಜಮೀನ್ದಾರರುಗಳು ಈ `ಅನಾವೃಷ್ಟಿ' ಪರಿಹಾರವನ್ನು, ವರ್ಷದ 'ನಾಲ್ಕನೇ ಬೆಳೆ' ಎಂದು ಕರೆಯುತ್ತಾರಂತೆ!

7-
ಇದನ್ನೆಲ್ಲ ಅರಿಯಲು ದೂರವೇನೂ ಹೋಗುವುದು ಬೇಡ. ಕಳೆದ ಏಳೆಂಟು ವರ್ಷಗಳಿಂದ ನಮ್ಮ ರಾಜ್ಯದಲ್ಲೇ ಜಾರಿಗೆ ಬಂದಿರುವ `ಜಲಾನಯನ ಅಭಿವೃದ್ಧಿ ಕಾರ್ಯಕ್ರಮ'ಗಳ ಅನುಷ್ಠಾನ ವೈಖರಿಯನ್ನೊಮ್ಮೆ ಹತ್ತಿರ ಹೋಗಿ ನೋಡಿದರೆೆ ಸಾಕು, ಇದರಡಿ ಗ್ರಾಮೀಣಾಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬುದು ಗೊತ್ತಾಗುತ್ತದೆ! ಇನ್ನು ಈ ವರ್ಷದಿಂದ ದೇಶದಾದ್ಯಂತ ಜಾರಿಗೆ ಬಂದಿರುವ 16ಸಾವಿರ ಕೋಟಿ ರೂಪಾಯಿಗಳ ಉದ್ಯೋಗ ಖಾತರಿ ಯೋಜನೆಯ ಈವರೆಗಿನ ಲೆಕ್ಕ ಪರಿಶೋಧಕ ವರದಿಗಳನ್ನು ನೋಡಿದರಂತೂ, ದೊಡ್ಡ ಆಘಾತವೇ ಆಗುತ್ತದೆ. ಈ ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತುಕೊಂಡ ಹಲವು ಗ್ರಾಮ ಪಂಚಾಯಿತಿಗಳು ಹಣಕಾಸಿನ ಅವ್ಯವಹಾರ ಮತ್ತು ಜಾತೀಯತೆಯ ಆಗರವಾಗಿವೆ. ಇದರಿಂದಾಗಿ ಲೆಕ್ಕ ಪರಿಶೋಧಕರ ವರದಿಯ ಪ್ರಕಾರವೇ, ವರ್ಷಕ್ಕೆ ಕನಿಷ್ಠ ನೂರು ದಿನಗಳ ಕೂಲಿ ಒದಗಿಸಬೇಕಾದ ಈ ಯೋಜನೆ, ಕೇವಲ ಶೇಕಡಾ 3ರಷ್ಟು ಜಾಗಗಳಲ್ಲಿ ಮಾತ್ರ ತನ್ನ ಗುರಿ ಮುಟ್ಟಿದೆ!

ಹೀಗೆ ಗ್ರಾಮದ ಆತ್ಮವನ್ನು ಮುಟ್ಟದೆ, ತತ್ಕಾಲೀನ ಪರಿಹಾರ ಕಾರ್ಯಕ್ರಮಗಳ ಮೇಲೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿರುವ ಸರ್ಕಾರದ ಪ್ರವೃತ್ತಿಯನ್ನು ಕಂಡ ಕೇಂದ್ರ ಯೋಜನಾ ಆಯೋಗದ ಮಾಜಿ ಕಾರ್ಯದರ್ಶಿ ಎನ್.ಸಿ. ಸ್ಯಾಕ್ಸೇನಾ ಪ್ರಕಾರ ಇಂತಹ ಕಾರ್ಯಕ್ರಮಗಳಿಗಾಗಿ ಕೇಂದ್ರ ರಾಜ್ಯಗಳಿಗೆ ಪ್ರತಿವರ್ಷ ವರ್ಗಾಯಿಸುವ 3 ಲಕ್ಷ 50 ಸಾವಿರ ಕೋಟಿ ರೂಪಾಯಿಗಳ ಅರ್ಧದಷ್ಟನ್ನು ಈ ಕಾರ್ಯಕ್ರಮಗಳ ವ್ಯಾಪ್ತಿಗೆ ಬರುವ 6 ಕೋಟಿ ಗ್ರಾಮಾಂತರ ಕುಟುಂಬಗಳಿಗೆ ಮನಿ ಆರ್ಡರ್ ಮಾಡಿದ್ದರೂ ಪ್ರತಿಕುಟುಂಬಕ್ಕೂ ದಿನವಹಿ 50 ರೂಪಾಯಿ ಸಿಗುತ್ತಿತ್ತಂತೆ! ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಅಧ್ಯಯನಕ್ಕಾಗಿ ನೇಮಿಸಲಾಗಿದ್ದ ಅರ್ಜುನ್ ಸೇನಗುಪ್ತ ವರದಿಯ ಪ್ರಕಾರ ಈಗ ದೇಶದ ಶೇ.70ಕ್ಕೂ ಹೆಚ್ಚು ಜನರ ದಿನವಹಿ ಆದಾಯ 40ರೂ.ಗಳಿಗಿಂತಲೂ ಕಡಿಮೆ ಇದೆ. ಇದರಲ್ಲಿ ಗ್ರಾಮಾಂತರ ಪ್ರದೇಶದ ಶೇ. 19 ಜನ ಮತ್ತು ನಗರ ಪ್ರದೇಶದ ಶೇ.14ರಷ್ಟು ಜನ ದಿನವಹಿ 12 ರೂಪಾಯಿಗಳಿಗಿಂತಲೂ ಕಡಿಮೆ ಆದಾಯದ ಮೇಲೆ ಬದುಕುತ್ತಿದ್ದಾರೆಂದಮೇಲೆ, ಸ್ಯಾಕ್ಸೇನಾ ಅವರು ಸೂಚಿಸಿರುವ ಕಾರ್ಯಕ್ರಮವೇ ಅತ್ಯುತ್ತಮ ಗ್ರಾಮೀಣಾಭಿವೃದ್ಧಿ ಯೋಜನೆ ಅನ್ನಿಸುವುದಿಲ್ಲವೇ? ಆದರೆ ಇದರಲ್ಲಿ ಪುಢಾರಿಗಳಿಗೆ, ದಲ್ಲಾಳಿಗಳಿಗೆ, ಕಂತ್ರಾಟುದಾರರಿಗೆ ಕಮೀಷನ್ ಇರುವುದಿಲ್ಲವಷ್ಟೆ!

ಸಾಯಿನಾಥರ ಪುಸ್ತಕ ತನ್ನ ಶೀರ್ಷಿಕೆಯನ್ನು (ಕನ್ನಡದಲ್ಲಿ: 'ಒಳ್ಳೇ ಅನಾವೃಷ್ಟಿ ಎಂದರೆ ಪ್ರತಿಯೊಬ್ಬರಿಗೂ ಇಷ್ಟ!') ಪಡೆದಿರುವುದೇ ನಮ್ಮ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಹಾಗೂ ಯೋಜನೆಗಳ ಇಂತಹ ಉದ್ದೇಶ-ಅನುಷ್ಠಾನಗಳ ವೈಖರಿಯಿಂದ. ಹಾಗೆ ನೋಡಿದರೆ ಹಳ್ಳಿಗಳ ಕಡೆ ಮುಖ ಹಾಕದವರಷ್ಟೇ ವಾಸ್ತವ ವಿವರಗಳ ಪರಿಚಯಕ್ಕಾಗಿ ಈ ಪುಸ್ತಕ ಓದಬಹುದು. ಆದರೆ ಇಂದಿನ ಹಳ್ಳಿಗಳನ್ನು ಒಮ್ಮೆ ಕಣ್ಣಾರೆ ನೋಡಿದರೆ ಸಾಕು, ಕಳೆದ 60 ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ಹಳ್ಳಿಗಳನ್ನು ಏನು ಮಾಡಲಾಗಿದೆ ಎಂದು ಗೊತ್ತಾಗುತ್ತದೆ. ಕೆಲವು ಸ್ಥಳೀಯ ಮುಖಂಡರು ವಹಿಸಿದ ಸಾಮಾಜಿಕ ಆಸ್ಥೆಯಿಂದಾಗಿ ಇನ್ನೂ ಜೀವಂತವಾಗಿರುವ ಕೆಲವು ಹಳ್ಳಿಗಳನ್ನು ಬಿಟ್ಟರೆ, ನಮ್ಮ ಬಹುಪಾಲು ಹಳ್ಳಿಗಳು ವಸತಿ, ನೀರು, ಆರೋಗ್ಯ, ಶಿಕ್ಷಣ ಮತ್ತು ಸ್ವಯಮಾಡಳಿತದ ಮೂಲಕ ದಕ್ಕುವ ಆತ್ಮಪ್ರತ್ಯಯ- ಈ ಎಲ್ಲವುಗಳಿಂದ ವಂಚಿತವಾಗಿ ಸತ್ತೇ ಹೋಗಿವೆ. ರೈತರ ಆತ್ಮಹತ್ಯೆ ಈ ದಾರುಣ ಸ್ಥಿತಿಯ ಪ್ರತಿಬಿಂಬ ಅಷ್ಟೆ. ಹಳೆಯ ಹಸಿರು ಕ್ರಾಂತಿ ಮತ್ತು ಹೊಸ ಆರ್ಥಿಕ ನೀತಿಗಳ ನಡುವೆ ಸೃಷ್ಟಿಯಾಗುತ್ತಿರುವ ದಿಙ್ಞೂಢತೆಯಲ್ಲಿ ಅವರ ಅಸ್ತಿತ್ವದ ಅಧ್ಯಾತ್ಮಿಕತೆಯೇ ನಾಶವಾಗುತ್ತಿರುವುದರ ಆತ್ಯಂತಿಕ ಪರಿಣಾಮವಿದು. ದೇಶದ ಪಾಲಿಗೆ ಇದು ಬುಡ ಅಲ್ಲಾಡಿಸುವ ದುರಂತ.

8-
ಈಗ ರೈತರಷ್ಟೇ ಅಲ್ಲ, ಪ್ರತಿ 27ಜನ ರೈತರಿಗೆ 18 ಜನ ಇತರರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಈಗಾಗಲೇ ಹೇಳಿಯಾಗಿದೆ. ಅಂದರೆ ನಮ್ಮ ಇಂದಿನ ಒಟ್ಟಾರೆ ಸಾಮಾಜಿಕ ಪರಿಸ್ಥಿತಿಯೇ ತೀವ್ರ ಖಿನ್ನತೆಯ ಕಡೆಗೆ ಸಾಗಿದೆ. ಈ ಪ್ರವೃತ್ತಿ ಆರಂಭವಾದದು ಕಳೆದ ಶತಮಾನದ ಕೊನೆಯ ವರ್ಷಗಳಲ್ಲಿ ಎಂಬುದು ಗಮನಾರ್ಹ. ಚರಿತ್ರೆಯಲ್ಲಿ ಎಂತೆಂತಹ ಕ್ಷಾಮ ಢಾಮರಗಳನ್ನು, ಹಸಿವನ್ನೂ, ಕೊಳ್ಳೆಗಳನ್ನೂ ಎದುರಿಸಿದ್ದ ನಮ್ಮ ಜನ ಹಿಂದೆಂದೂ ಹೀಗೆ ನಿರಂತರವಾಗಿ ಆತ್ಮಹತ್ಯೆಯ ದಾರಿ ಹಿಡಿದಿರಲಿಲ್ಲ. ಆದರೆ ಈಗ ಏಕೆ? ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆ ಒಂದೇ ಸಮನೆ ಮುಂದುವರೆದಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರದ ಗಮನ ಸೆಳೆಯಲು ಸ್ಥಳೀಯ ಸಾವಯವ ಕೃಷಿ ಸಹಕಾರ ಸಂಸ್ಥೆಯೊಂದು, ರಾಜ್ಯದ ಶ್ರೇಷ್ಠ ನ್ಯಾಯಾಲಯದಲ್ಲಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ದಾಖಲಿಸಿತು. ಇದನ್ನು ನ್ಯಾಯಾಲಯ ಪ್ರಜೆಗಳ ಬದುಕುವ ಸ್ವಾತಂತ್ರ್ಯದ ಹಕ್ಕಿನಡಿ ವಿಚಾರಣೆಗೆ ಸ್ವೀಕರಿಸಿ, ಆತ್ಮಹತ್ಯೆಗಳಿಗೆ ಕಾರಣ ಕಂಡು ಹಿಡಿಯಲು ಟಾಟಾ ಸಾಮಾಜಿಕ ಅಧ್ಯಯನ ಸಂಸ್ಥೆಯನ್ನು ಕೋರಿತು. ಈ ಸಂಸ್ಥೆ ಅದರಂತೆ ಅಧ್ಯಯನ ಮಾಡಿ ನೀಡಿದ ವರದಿ, ಆತ್ಮಹತ್ಯೆಗೆ ಮುಖ್ಯವಾಗಿ ಎರಡು ಕಾರಣಗಳನ್ನು ನೀಡಿತ್ತು: ಕೃಷಿ ಕ್ಷೇತ್ರ ಕುರಿತ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಮತ್ತು ಜಾಗತೀಕರಣ. ಈ ವರದಿಯನ್ನಾಧರಿಸಿ ನ್ಯಾಯಾಲಯ, ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲಾ ಮಟ್ಟದ ಸಮಿತಿಗಳನ್ನು ನೇಮಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ತನ್ನ ಕರ್ತವ್ಯವನ್ನು ಪೂರ್ಣಗೊಳಿಸಿಕೊಂಡಿತು. ರಾಜ್ಯ ಸರ್ಕಾರ ಅದರಂತೆ ಸಮಿತಿಗಳನ್ನು ನೇಮಿಸಿ, ಈ ಹಿಂದೆ ತಿಳಿಸಿದಂತಹ ಅನೇಕ `ಪರಿಹಾರ ಕಾರ್ಯಕ್ರಮ'ಗಳನ್ನು ಕೈಗೊಂಡಿತು! ಆದರೆ ಆತ್ಮಹತ್ಯೆಗಳಂತೂ ನಿಲ್ಲಲಿಲ್ಲ.

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು, ಟಾಟಾ ಸಂಸ್ಥೆ ತನ್ನ ಅಧ್ಯಯನದಲ್ಲಿ ಕಂಡುಕೊಂಡಿದ್ದು ಜಾಗತೀಕರಣದ ಕಾರಣವನ್ನು. ಹೊಸ ಜಾಗತಿಕ ವ್ಯಾಪಾರ-ವ್ಯವಹಾರಿಕ ಒಪ್ಪಂದಗಳ ಮೂಲಕ ಕಳೆದ ಶತಮಾನದ ತೊಂಬತ್ತರ ದಶಕದ ಮೊದಲ ವರ್ಷಗಳಲ್ಲಿ ಆರಂಭವಾದ ಈ ಜಾಗತೀಕರಣ ಫಲ ಕೊಡಲಾರಂಭಿಸಿದ ನಂತರದ ಐದು ವರ್ಷಗಳಲ್ಲೇ ರಾಷ್ಟ್ರಾದ್ಯಂತ ರೈತರ ಆತ್ಮಹತ್ಯೆ ಆರಂಭವಾಗಿದ್ದನ್ನು ಈ ಅಧ್ಯಯನ ಗಮನಿಸಿತ್ತು. ಜಾಗತೀಕರಣವೆಂದರೆ ಸ್ಥೂಲವಾಗಿ, ಆಯಾ ರಾಷ್ಟ್ರಗಳ ಅಭಿವೃದ್ಧಿಯನ್ನು ಆಯಾ ರಾಷ್ಟ್ರಗಳ ವಿವೇಕಕ್ಕೆ ಬಿಡದೆ, ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಏಷ್ಯಾ ಅಭಿವೃದ್ಧಿ ಬ್ಯಾಂಕುಗಳಂತಹ ಜಾಗತಿಕ ಹಣಕಾಸು ಸಂಸ್ಥೆಗಳು ನಿರ್ದೇಶಿಸುವ ಅಧಿಕಾರವನ್ನು ಪಡೆದುಕೊಂಡ ರಾಜಕೀಯ ವ್ಯವಸ್ಥೆಯೇ ಆಗಿದೆ. ಬಡ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳು ಆ ಹೊತ್ತಿಗೆ ಸೋವಿಯತ್ ಒಕ್ಕೂಟದ ನೇತೃತ್ವದ ಪರ್ಯಾಯ ವ್ಯವಸ್ಥೆ ಕುಸಿದು ಹೋದ ಕಾರಣದಿಂದಾಗಿ ಈ ಸಂಸ್ಥೆಗಳನ್ನೇ ತಮ್ಮ ಹೆಚ್ಚುವರಿ ಹಣಕಾಸಿಗಾಗಿ ಸಂಪೂರ್ಣ ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದ್ದುದರಿಂದ, ಇವುಗಳ ಮರ್ಜಿ ಅನಿವಾರ್ಯವೆನ್ನುವಂತಾಯಿತು ಎಂಬುದೂ ನಿಜ. ಆದರೆ ಭಾರತವೂ ಸೇರಿದಂತೆ ಈ ದೇಶಗಳ ಅಸಹಾಯಕತೆಯನ್ನು ತಮ್ಮ ರಾಜಕಾರಣಕ್ಕಾಗಿ ಬಳಸಿಕೊಂಡ ಆ ಸಂಸ್ಥೆಗಳು ತಮ್ಮ ಹಣಕಾಸನ್ನು ನಿಯಂತ್ರಿಸುತ್ತಿದ್ದ ಪಶ್ಚಿಮ ದೇಶಗಳ ಆರ್ಥಿಕತೆಯನ್ನು ಈ ದೇಶಗಳ ಮೇಲೆ ಹೇರಲಾರಂಭಿಸಿದವು.

ಈ ದೇಶಗಳು ಈವರೆಗೆ ಅನುಸರಿಸಿಕೊಂಡು ಬಂದ `ಸಮಾಜವಾದಿ ಆರ್ಥಿಕತೆ'ಯೇ ವಿಶ್ವದ ಬಡತನಕ್ಕೆ ಕಾರಣವೆಂದು ಪ್ರತಿಪಾದಿಸಿದ ಈ ಸಂಸ್ಥೆಗಳ ಆರ್ಥಿಕತಜ್ಞರು (ಇವರಲ್ಲಿ ನಮ್ಮ ಮನಮೋಹನಸಿಂಗ್, ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಕೂಡಾ ಸೇರಿದ್ದರು) ಖಾಸಗಿ ಬಂಡವಾಳವನ್ನಾಧರಿಸಿದ ಮುಕ್ತ ಮಾರುಕಟ್ಟೆ ಆರ್ಥಿಕತೆಯೇ ಈ ದೇಶಗಳ ಬಡತನಕ್ಕೆ ಏಕೈಕ ಮದ್ದು ಎಂದು ಸಾರಿ, ತಮ್ಮ ಹಣಕಾಸಿನ ನೆರವಿನ ಜೊತೆಗೆ ತಮ್ಮ ಈ ಅಭಿವೃದ್ಧಿ ರಾಜಕಾರಣವನ್ನೂ ಈ ದೇಶಗಳ ಮೇಲೆ ಹೇರಿದರು. ಇದೇ ಈಗ ಆರ್ಥಿಕ `ಸುಧಾರಣೆ'ಗಳು ಎಂಬ ಜಾಣ ಹೆಸರಿನಲ್ಲಿ ಹೊಸ ಆರ್ಥಿಕ ನೀತಿಯಾಗಿ ನಮ್ಮ ದೇಶದಲ್ಲಿ ಜಾರಿಯಾಗುತ್ತಿರುವುದು. ಇದರ ಪರಿಣಾಮವಾಗಿಯೇ ವಿಶ್ವ ವ್ಯಾಪಾರ ಸಂಸ್ಥೆಯಡಿ ನಮ್ಮ ಆಮದು-ರಫ್ತುಗಳ ಅಗತ್ಯ, ಗಾತ್ರ ಮತ್ತು ದರಗಳನ್ನು ನಿಯಂತ್ರಿಸುವ ಜಾಗತಿಕ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವಂತಾದಾದದ್ದು. ಇನ್ನೂ ಮುಖ್ಯವಾದ ಸಂಗತಿ ಎಂದರೆ, ಈ ಜಾಗತಿಕ ಆರ್ಥಿಕ ರಾಜಕಾರಣದ ಭಾಗವಾಗಿಯೇ ರಾಜಕಾರಣದ ಸಂಬಂಧವೇ ಇಲ್ಲದಂತಿದ್ದ ಮನಮೋಹನಸಿಂಗ್ ಎಂಬ ಈ ಜಾಗತಿಕ ಹಣಕಾಸು ಸಂಸ್ಥೆಗಳ ಆಡಳಿತಗಾರ, ಪಿ.ವಿ. ನರಸಿಂಹರಾವ್ ಎಂಬ ಗುಮ್ಮನೆ ಗುಸಕ ಪ್ರಧಾನಮಂತ್ರಿಯ ಕಾಲದಲ್ಲಿ ಅರ್ಥಮಂತ್ರಿಯಾಗಿ ಭಾರತದ ರಾಜಕಾರಣದ ಒಳಹೊಕ್ಕಿದ್ದು. ನಮ್ಮ ರಾಜಕಾರಣಕ್ಕೆ ಒಂದು ಹೊಸ ನೈತಿಕತೆ ಒದಗಿಸಿದರೆಂಬ ಅವರ ಬೆಂಬಲಿಗರಿಂದ ಶ್ಲಾಘಿಸಲ್ಪಡುವ ಈ ಮನಮೋಹನಸಿಂಗರು ನಮ್ಮ ಸಂಸತ್ತನ್ನು ಪ್ರವೇಶಿಸಿದ್ದೇ, ತಾವು ಅಸ್ಸಾಂನ ಗೌಹಾಟಿ ಪಟ್ಟಣದ ನಿವಾಸಿ ಎಂಬ ಹಸಿ ಸುಳ್ಳು ಮಾಹಿತಿ ನೀಡಿ ರಾಜ್ಯ ಸಭಾ ಸದಸ್ಯರಾಗುವ ಮೂಲಕ! ಅಷ್ಟೇ ಅಲ್ಲ, ಇಂತಹ ಹಸಿ ಸುಳ್ಳುಗಾರರನ್ನು ರಕ್ಷಿಸಲೆಂದೇ ನಂತರದ ವರ್ಷಗಳಲ್ಲಿ ಸಂವಿಧಾನಕ್ಕೇ ತಿದ್ದುಪಡಿ ತರಲಾಯಿತು ಕೂಡ.

9-
ಅದಂತಿರಲಿ, ಈ ಜಾಗತೀಕರಣದ ಫಲವಾಗಿ ಸಹಿ ಹಾಕಲಾದ ಒಪ್ಪಂದಗಳು ಅತ್ಯಂತ ಹೆಚ್ಚು ಧೃತಿಗೆಡಿಸಿದ್ದು ನಮ್ಮ ರೈತರನ್ನೇ. ವಿಶ್ವವನ್ನೇ ಒಂದು ಹೊಸ ಆರ್ಥಿಕ ವ್ಯವಸ್ಥೆಗೆ ಅಳವಡಿಸುವ ಉದ್ದೇಶ ಹೊಂದಿದ್ದ ಈ ಒಪ್ಪಂದಗಳು, ಆವರೆಗೆ ದ್ವಿಪಕ್ಷೀಯ ನೆಲೆಯಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ವ್ಯಾಪಾರವನ್ನು ಒಂದು ವಿಶ್ವ ಸಾಮಾನ್ಯ ನಿಯಮಾವಳಿಯ ಚೌಕಟ್ಟಿಗೆ ಒಳಪಡಿಸುವ ಪ್ರಯತ್ನ ಮಾಡಿತು. ಈ ಸಂಬಂಧ ದೋಹಾದಲ್ಲಿ ನಡೆದ ಗ್ಯಾಟ್ ಮಾತುಕತೆಗಳಲ್ಲಿ ಭಾರತ ತನ್ನ ಹೊಸ ಆರ್ಥಿಕ ನೀತಿಯ ಮುಖ್ಯ ಧ್ಯೇಯವೆನಿಸಿದ ಮುಕ್ತ ಕೈಗಾರಿಕೀಕರಣದ ಕುರುಡು ಉತ್ಸಾಹದಲ್ಲಿ ತನ್ನ ಕೃಷಿ ವಲಯದ ಹಿತವನ್ನು ಬಲಿಕೊಡುವಂತಹ ನೀತಿ ಮತ್ತು ಸುಂಕ ವ್ಯವಸ್ಥೆಗೆ ತನ್ನ ಸಮ್ಮತಿ ನೀಡಿತು. ಇದರ ಪರಿಣಾಮವಾಗಿ ನಮ್ಮ ಆಮದು-ರಫ್ತುಗಳ ಅಗತ್ಯ, ಪ್ರಮಾಣ ಮತ್ತು ದರಗಳನ್ನು ಕುರಿತ ನಿರ್ಧಾರದ ಅಧಿಕಾರ ನಮ್ಮ ಕೈ ಮೀರಿ ಹೋಯಿತು. ಮುಂದುವರಿದ ದೇಶಗಳ ಕೃಷಿ ಆರ್ಥಿಕತೆಗಿಂತ ಸಂಪೂರ್ಣ ಭಿನ್ನವಾಗಿರುವ ಭಾರತದ ಕೃಷಿ ಆರ್ಥಿಕತೆಯನ್ನು ವ್ಯಾಪಾರಕ್ಕಾಗಿ ಸಮಾನ ಆಧಾರಗಳ ಮೇಲೆ ಪರಿಗಣಿಸಿ ರೂಪಿಸಲಾದ ಈ ಒಪ್ಪಂದಗಳು ಮೊದಲೇ ನಿರ್ಲಕ್ಷ್ಯಕ್ಕೊಳಗಾಗಿದ್ದ ಭಾರತದ ರೈತನ ಪರಿಸ್ಥಿತಿಯನ್ನು ಡೋಲಾಯಮಾನಗೊಳಿಸಿತು.

ಉದಾಹರಣೆಗೆ, ಭಾರತದ ರೈತನ ಸರಾಸರಿ ಉತ್ಪಾದನಾ ಸಲಕರಣೆಗಳ ಹತ್ತು ಪಟ್ಟಿಗಿಂತಲೂ ಹೆಚ್ಚು ಮೌಲ್ಯದ ಉತ್ಪಾದನಾ ಸಲಕರಣೆಗಳನ್ನು ಮತ್ತು ನೂರು ಪಟ್ಟು ಹೆಚ್ಚು ಸರಾಸರಿ ಹಿಡುವಳಿಯನ್ನು ಹೊಂದಿರುವ ಅಮೆರಿಕದ ರೈತನ ಉತ್ಪಾದಕತೆ ತನ್ನ ಸರ್ಕಾರದಿಂದ ಪ್ರತಿ ಹಂತದಲ್ಲೂ ಅಪಾರ ಪ್ರಮಾಣದ ಸಹಾಯಧನದಿಂದ ಪೋಷಿಸಲ್ಪಡುತ್ತಿದೆ. ಹೀಗಿರುವಾಗ ಅಮೆರಿಕ ಮತ್ತು ಭಾರತದ ರೈತನನ್ನು ವ್ಯಾಪಾರ ಒಪ್ಪಂದಗಳ ನೆಲೆಯಲ್ಲಿ ಸಮಾನರಂತೆ ನೋಡಿ, ಅವುಗಳ ವಿವರಗಳನ್ನು ಸಿದ್ಧಪಡಿಸುವುದು ಸಮಾನತೆಯ ಹೆಸರಿನಲ್ಲೋ, ಗುರಿಯೊಂದಿಗೋ ನಡೆಸುವ ದೊಡ್ಡ ಮೋಸವೇ ಆಗಿದೆ. ವಿಶ್ವಸಂಸ್ಥೆಯ `2008ರ ವಿಶ್ವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ' ಸೂಚಿಸುವಂತೆ 1994ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆ ರೂಪುಗೊಂಡಾಗಲೇ ಅಭಿವೃದ್ಧಿಶೀಲ ದೇಶಗಳು ಮುಂಗಡವಾಗಿಯೇ ಸಾಕಷ್ಟು ಬೆಲೆ ತೆತ್ತಿವೆ. ಇದರಿಂದಾಗಿ ಕಳೆದ 15 ವರ್ಷಗಳಲ್ಲಿ ಮೂರನೇ ಜಗತ್ತಿನ 150 ಆಹಾರ ಸ್ವಾಲಂಬಿ ದೇಶಗಳ ಪೈಕಿ 105 ದೇಶಗಳು ಈಗ ಆಹಾರ ಆಮದು ದೇಶಗಳಾಗಿ ಪರಿವರ್ತಿತವಾಗಿವೆ. ಇನ್ನು ವಿಶ್ವ ಸಂಸ್ಥೆಯಡಿಯ 'ಆಹಾರ ಮತ್ತು ಕೃಷಿ ಸಂಸ್ಥೆ' (FAO)ಯ ಪ್ರಕಾರವೇ 1267 ಆಮದು ಪ್ರವಾಹ ಪ್ರಕರಣಗಳಿಂದಾಗಿ 102 ದೇಶಗಳು ತಮ್ಮ ಒಟ್ಟು ಆಮದಿಗಿಂತ ಶೇ.30ರಷ್ಟು ಹೆಚ್ಚು ಆಹಾರ ಧಾನ್ಯಗಳನ್ನೇ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ತಮ್ಮದೇ ಉತ್ಪನ್ನಗಳನ್ನು ಬೆಲೆಯಿಲ್ಲದೆ ಬೀದಿಗೆ ಚೆಲ್ಲಬೇಕಾಗಿ ಬಂದಿದೆ.

ಇದಕ್ಕೆ ಕಾರಣ ವ್ಯಾಪಾರ ಸಮಾನತೆಯ ಹೆಸರಿನಲ್ಲಿ ಮುಂದುವರಿದ ದೇಶಗಳು- ವಿಶೇಷವಾಗಿ ಅಮೆರಿಕ-ಜಾಗತಿಕ ಕೃಷಿ ಚಿತ್ರವನ್ನೇ ಅಸ್ತವ್ಯಸ್ತಗೊಳಿಸಿರುವುದು. ಅವು ತಂತಮ್ಮ ದೇಶಗಳಲ್ಲಿ ಕೃಷಿ ಸಹಾಯ ಧನವನ್ನು ಬೇರೆ ಬೇರೆ ಹೆಸರುಗಳಲ್ಲಿ ಹೆಚ್ಚಿಸುತ್ತಾ, ಆದರೆ ಅಭಿವೃದ್ಧಿಶೀಲ ದೇಶಗಳನ್ನು ಸಹಾಯ ಧನ ಕಡಿಮೆ ಮಾಡಲು ಆಗ್ರಹಿಸುತ್ತಾ; ತನ್ನ ಉತ್ಪನ್ನಗಳಿಗೆ ಈ ದೇಶಗಳ ಮಾರುಕಟ್ಟೆಯನ್ನು ತೆರೆದಿಡುವಂತೆ ಒತ್ತಾಯಿಸುತ್ತಿವೆ. `ದೋಹಾ' ಮಾತುಕತೆಗಳನ್ನು ಅಂತಿಮಗೊಳಿಸಲು ಇತ್ತೀಚೆಗೆ ಜಿನೀವಾದಲ್ಲಿ ಸಭೆ ಸೇರಿದ್ದ ವಿಶ್ವ ವ್ಯಾಪಾರ ಸಂಸ್ಥೆಯ ಸಭೆಯಲ್ಲಿ ಅಮೆರಿಕ ಮತ್ತು ಯುರೋಪ್ ದೇಶಗಳು ತಮ್ಮ ಕೃಷಿ ಸಹಾಯಧನದ ಪ್ರಮಾಣವನ್ನು ಕ್ರಮವಾಗಿ ಶೇ. 70 ಮತ್ತು 80ರ ಪ್ರಮಾಣದಲ್ಲಿ ಕಡಿಮೆ ಮಾಡುವ ಮಾತಾಡಿದವಾದರೂ, ಅವು ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದಂತೆ ನಾಲ್ಕರಿಂದ ಹತ್ತು ಪಟ್ಟು ಹೆಚ್ಚು ಸಹಾಯಧನವನ್ನು ಈಗಾಗಲೇ ನೀಡುತ್ತಿವೆ.

ಅಲ್ಲದೆ, ಅಮೆರಿಕ ತನ್ನ ಆಥರ್ಿಕತೆಯ ವಿನ್ಯಾಸದಲ್ಲೇ 75 ಶತಕೋಟಿ ಡಾಲರ್ಗಳನ್ನು ಕೃಷಿ ಸಹಾಯ ಧನವನ್ನಾಗಿ ಮತ್ತು 10 ಶತಕೋಟಿ ಡಾಲರ್ಗಳನ್ನು ವ್ಯಾಪಾರ ಏರುಪೇರು ಸಹಾಯ ಧನವನ್ನಾಗಿ ಅಂತರ್ಗತಗೊಳಿಸಿಕೊಂಡಿದೆೆ. ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲ ಶ್ರೀಮಂತ ದೇಶಗಳ ಕೃಷಿ ಸಹಾಯ ಧನ ನಿಧಿ ಒಟ್ಟಾರೆ 374 ಶತಕೋಟಿ ಡಾಲರ್ಗಳಷ್ಟಿದೆ. ಅಭಿವೃದ್ಧಿಶೀಲ ದೇಶಗಳಾದರೋ ಹೀಗೆ ಸಾರಾಸಗಟಾದ ಸಹಾಯಧನದ ಪದ್ಧತಿಯನ್ನಿಟ್ಟುಕೊಳ್ಳದೆ ವಿವಿಧ ಬಾಬ್ತುಗಳ ಮೇಲಷ್ಟೇ ಚಿಲ್ಲರೆಯಂತೆ ಸಹಾಯಧನ ನೀಡುತ್ತಿವೆ. ಈಗ ಇದನ್ನೂ ಸಮಾನ `ನೆಲೆಯ' ಹೊಸ ವಿಶ್ವ ಆರ್ಥಿಕ ವ್ಯವಸ್ಥೆಯನ್ನು ರೂಪಿಸಲು ಕಡಿತಗೊಳಿಸಬೆಕೆಂದು ಮುಂದುವರಿದ ದೇಶಗಳು ಆಗ್ರಹಿಸುತ್ತಿವೆ. ಆದರೆ ಸದ್ಯ, ಇತ್ತೀಚಿನ ಜಿನೀವಾ ಮಾತುಕತೆಗಳಲ್ಲಿ ಭಾರತವೂ ಸೇರಿದಂತೆ ಅನೇಕ ಅಭಿವೃದ್ಧಿಶೀಲ ದೇಶಗಳು ಈಗಾಗಲೇ ಮುಂಗಡವಾಗಿ ತೆತ್ತಿರುವ ಬೆಲೆಯನ್ನು ಮನವರಿಕೆ ಮಾಡಿಕೊಂಡು, ಮುಂದುವರಿದ ದೇಶಗಳ ಹೊಸ ಬೇಡಿಕೆಗಳನ್ನು ಒಪ್ಪಲು ನಿರಾಕರಿಸಿವೆ

ಅಮೆರಿಕದ ಜನಸಂಖ್ಯೆಯ ಶೇಕಡಾ 2ರಷ್ಟಿರುವ ಅಲ್ಲಿನ ರೈತರ ಸರಾಸರಿ ಹಿಡುವಳಿ 200 ಹೆಕ್ಟೇರ್ಗಳಾದರೆ, ಭಾರತದ ಜನಸಂಖ್ಯೆಯ ಶೇಕಡಾ 65ರಷ್ಟಿರುವ ರೈತರ ಸರಾಸರಿ ಹಿಡುವಳಿ ಒಂದೂವರೆ ಹೆಕ್ಟೇರ್. ಆದರೆ ರಾಷ್ಟ್ರೀಯ ನಿವ್ವಳ ಆದಾಯಕ್ಕೆ ಅಮೆರಿಕದ ರೈತರ ಪಾಲು ಶೇ. 4ರಷ್ಟಿದ್ದರೆ, ಭಾರತೀಯ ರೈತರ ಪಾಲು ಶೇ. 18 (ಕೃಷಿ ಸಂಬಂಧಿತ ಉದ್ಯೋಗ-ಉದ್ಯಮಗಳ ಪಾಲೂ ಸೇರಿದರೆ, ಶೇ. 50). ಈ ಕಾರಣ, ಉತ್ಪಾದಕತೆಯ ವ್ಯತ್ಯಯ. ಉದಾಹರಣೆಗೆ ಅಮೆರಿಕಾದ ರೈತ ಒಂದು ಹೆಕ್ಟೇರ್ಗೆ 70 ಕ್ವಿಂಟಾಲ್ ಭತ್ತ ಬೆಳೆದರೆ, ಭಾರತದ ರೈತ 30 ಕ್ವಿಂಟಾಲ್ ಬೆಳೆಯುತ್ತಾನೆ. ಇದರ ಹಿಂದೆ ಎರಡೂ ದೇಶಗಳ ಕೃಷಿ ನೀತಿಗಳ ವ್ಯತ್ಯಯವಿದೆ. ಹಿಡುವಳಿಯ ಗಾತ್ರ, ಕೃಷಿ ವಿಧಾನ, ಬಂಡವಾಳೀಕರಣ, ವ್ಯಾಪಾರ ಇತ್ಯಾದಿಗಳಲ್ಲದೆ, ಇವುಗಳಲ್ಲಿ ಸರ್ಕಾರದ ಪಾತ್ರ ಸೇರಿದಂತೆ ಹಲವು ವಿಷಯಗಳಲ್ಲಿ ಈ ವ್ಯತ್ಯಯ ಕಂಡುಬರುತ್ತದೆ. ಪರಿಸ್ಥಿತಿ ಹೀಗಿರುವಾಗ ಜಾಗತಿಕ ಮಾರುಕಟ್ಟೆಯಲ್ಲಿ ಇವರಿಬ್ಬರೂ ಸಮಾನವಾಗಿ ಸ್ಪರ್ಧಿಸುವುದಾದರೂ ಹೇಗೆ?

ಇದರ ಒಂದು ಉದಾಹರಣೆಯಾಗಿ ಭಾರತದ ಹತ್ತಿ ರೈತರು ಪಡುತ್ತಿರುವ ಬವಣೆಯನ್ನು ಗಮನಿಸಬಹುದು. ಕೇವಲ 25 ಸಾವಿರ ಹತ್ತಿ ರೈತರನ್ನು ಹೊಂದಿರುವ ಅಮೆರಿಕ, ನಮ್ಮ ಮಹಾರಾಷ್ಟ್ರದ ವಿದರ್ಭವೊಂದರಲ್ಲೇ 30 ಲಕ್ಷ ಹತ್ತಿ ರೈತರನ್ನು ಹೊಂದಿರುವ ಭಾರತವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸುಸ್ತಾಗಿ ಕೂರಿಸಿದೆ. ಭಾರತದ ರೈತರ ಆತ್ಮಹತ್ಯೆಗಳಲ್ಲಿ ಹೆಚ್ಚಿನವು ಸಂಭವಿಸಿರುವುದು ವಿದರ್ಭದಲ್ಲೇ ಮತ್ತು ಹತ್ತಿ ರೈತರ ಕುಟುಂಬಗಳಲ್ಲೇ. ಕಾರಣ ಅಮೆರಿಕದ ರೈತ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಮಾಜಿಕ ಭದ್ರತೆಯ ಅಂಗವಾಗಿ ಆದಾಯ ರಕ್ಷಣೆಯ ಸಹಾಯಧನ ಪಡೆಯುತ್ತಿದ್ದರೆ, ಭಾರತವು ಹತ್ತಿಯ ಖರೀದಿ ಬೆಲೆಯನ್ನು 2250 ರೂಪಾಯಿಗಳಿಂದ 1750 ರೂಪಾಯಿಗಳಿಗೆ ಇಳಿಸಿದೆಯಲ್ಲದೆ, ಆಮದು ಸುಂಕವನ್ನು ಏರಿಸುವ ಮೂಲಕ ಹೊರದೇಶದ ಹತ್ತಿ ನಮ್ಮ ದೇಶವನ್ನು ಪ್ರವೇಶಿಸುವುದನ್ನು ತಡೆಯುವ ಪ್ರಯತ್ನ ಕೂಡಾ ಮಾಡುತ್ತಿಲ್ಲ.

ಒಂದು ಕೆ.ಜಿ. ಹತ್ತಿ ಉತ್ಪಾದಿಸಲು ಅಮೆರಿಕದಲ್ಲಿ ಸುಮಾರು 80 ರೂ. ಖರ್ಚಾಗುತ್ತಿದ್ದು, ಅದನ್ನು ಜಾಗತಿಕ ಮಾರುಕಟ್ಟೆಯಲ್ಲಿ 56 ರೂಪಾಯಿಗಳಿಗೆ ಮಾರಲಾಗುತ್ತಿದೆ. ಇದರಿಂದಾಗಿ ರೈತನಿಗಾಗುವ ನಷ್ಟವನ್ನು ಸರ್ಕಾರ ಕೆ.ಜಿಗೆ 45 ರೂಪಾಯಿಗಳಂತೆ ಸಹಾಯಧನ ನೀಡಿ ತುಂಬಿಕೊಡುತ್ತಿದೆ. ಹೀಗೆ ಅಮೆರಿಕದ ಸರ್ಕಾರ ಒಬ್ಬ ಹತ್ತಿ ರೈತನಿಗೆ ಪ್ರತಿವರ್ಷ ಒಂದು ಕೋಟಿ ರೂಪಾಯಿಗಳನ್ನು ಸಹಾಯ ಧನವಾಗಿ ನೀಡುತ್ತಾ, ಒಟ್ಟು ಸುಮಾರು 25 ಸಾವಿರ ಕೋಟಿ ರೂಪಾಯಿಗಳನ್ನು ಹತ್ತಿ ರೈತರಿಗೇ ಸಹಾಯ ಧನವನ್ನಾಗಿ ಹಂಚುತ್ತಿದೆ. ಆದರೆ ಭಾರತದಲ್ಲಿ ಒಂದು ಕೆಜಿ ಹತ್ತಿ ಉತ್ಪಾದನೆಗೆ ಸರಾಸರಿ ಮುವ್ವತ್ತು ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ರೈತ ಅದಕ್ಕಾಗಿ ಸರ್ಕಾರದಿಂದ ಪಡೆಯುತ್ತಿರುವ ಬೆಲೆ ಹದಿನೇಳೂವರೆ ರೂಪಾಯಿಗಳು ಮಾತ್ರ. ಬಿಟಿ ಹತ್ತಿ ಬೆಳೆದ ರೈತರಂತೂ ಮುಳುಗೇ ಹೋಗಿದ್ದಾರೆ. ಹೆಚ್ಚುವರಿ ಇಳುವರಿ-ಕಡಿಮೆ ಖರ್ಚಿನ ಆಕರ್ಷಣೆಯೊಂದಿಗೆ ಆರಂಭವಾದ ಈ ಆಧುನಿಕ ಬೀಜ ತಂತ್ರಜ್ಞಾನದ ತಳಿ, ಇಳುವರಿಯನ್ನು ಶೇ. 75 ರಷ್ಟು ಹೆಚ್ಚಿಸಿತಾದರೂ, ಖರ್ಚನ್ನು ದುಪ್ಪಟ್ಟುಗೊಳಿಸಿತ್ತು! ಇದಕ್ಕೆ ಕಾರಣ ಈ ಕುಲಾಂತರಿ ಬೀಜವನ್ನು ಪ್ರೋತ್ಸಾಹಿಸಿದ ಸರ್ಕಾರ, ಅದರ ಬೆಳೆ ಪದ್ಧತಿಗೆ ಸಮರ್ಪಕ ಮಾರ್ಗದರ್ಶನವನ್ನು ವ್ಯವಸ್ಥೆ ಮಾಡುವಲ್ಲಿ ಸೋತಿದ್ದು. ಹಾಗೆ ನೋಡಿದರೆ ಅಮೆರಿಕದಲ್ಲೇ ಕುಲಾಂತರಿ ತಳಿಗಳು ಹೆಚ್ಚುವರಿ ಇಳುವರಿ ನೀಡುವಲ್ಲಿ ಕ್ರಮೇಣ ಸೋಲುತ್ತಿವೆ ಎಂದು ಕೃಷಿ ಆರ್ಥಿಕತಜ್ಞ ದೇವೇಂದ್ರ ಶರ್ಮ ಹೇಳುತ್ತಾರೆ.

ಹೀಗಿರುವಾಗ ಭಾರತದ ರೈತರಾದರೂ ಏನು ಮಾಡಿಯಾರು? ಅವರ ಸರ್ಕಾರವೇ ಅಗ್ಗದ ಹತ್ತಿಯೆಂದು ಅಮೆರಿಕದಿಂದ ಟನ್ಗಟ್ಟಲೆ ಕೊಂಡು ಗಿರಣಿಗಳಿಗೆ ಪೂರೈಸಲಾರಂಭಿಸಿದರೆ ಅವರ ಗತಿ ಏನು? ಹಾಗಾಗಿಯೇ ವಿದರ್ಭದ ರೈತನ ಈ ಆರ್ತನಾದ: ``ಹೊಲದಲ್ಲಿ ಬೆಳೆ ಒಣಗಿ ನಿಂತಿದೆ. ಬಾವಿಯಲ್ಲಿ ನೀರು ಬತ್ತಿದೆ. ಮನೆಯಲ್ಲಿ ಹೆಣ್ಣುಮಕ್ಕಳು ಬೆಳೆದು ನಿಂತಿದ್ದಾರೆ. ಹಗಲಿರುಳೆನ್ನದೆ ಬ್ಯಾಂಕಿನವರು ಮತ್ತು ಸಾಹುಕಾರರು ಸಾಲ ವಸೂಲಿಗಾಗಿ ಬಂದು ಬಾಗಿಲು ಬಡಿಯುತ್ತಿದ್ದಾರೆ. ನಾವೇನು ಮಾಡಬಹುದು ಹೇಳಿ...'' ಇದರಲ್ಲಿ ಬರೀ ಸಾಲದ ಹೊರೆಯ ಸಂಕಟ ಮಾತ್ರ ಇದೆಯೆಂದು ನಾನು ಭಾವಿಸಲಾರೆ. ಇದನ್ನೇ ನಾನು ಈ ಹಿಂದೆ ಭಾರತದ ರೈತನ ಅಸ್ತಿತ್ವದ ಆಧ್ಯಾತ್ಮಿಕತೆಯ ನಾಶ ಎಂದದ್ದು...

10-
ಈ ನಾಶದ ಮೂಲ ವಿಶ್ವ ಆರ್ಥಿಕ ಸ್ವರೂಪವನ್ನು ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ವ್ಯಾಪಾರ ಸಂಸ್ಥೆ ಎಂಬ ತ್ರಿಮೂರ್ತಿ ಸಂಸ್ಥೆಗಳು ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕ್ನಂತಹ ಅವುಗಳ ಸಹ ಸಂಸ್ಥೆಗಳು ನಿಯಂತ್ರಿಸುವಂತಹ ಜಾಗತಿಕ ರಾಜಕೀಯ ಪರಿಸ್ಥಿತಿ ಉಂಟಾಗಿರುವುದರಲ್ಲಿದೆ. ಈ ಎಲ್ಲ ಸಂಸ್ಥೆಗಳೂ ಖಾಸಗಿ ಬಂಡವಾಳದ ಹಿತ ಕಾಯುವುದಕ್ಕೇ ರಚಿತವಾದ ಅಪ್ರಜಾಸತ್ತಾತ್ಮಕ ಸಂಸ್ಥೆಗಳೇ ಆಗಿವೆ. ಖಾಸಗಿ ನಿಗಮಗಳಂತಿರುವ ಇವುಗಳ ರಚನೆಯೇ ಆಗಲಿ, ಆಡಳಿತವೇ ಆಗಲಿ ಬಹಿರಂಗ ಪರಿಶೀಲನೆಗೆ ಸಿಗುವಂತಹದಲ್ಲ. ಅವುಗಳ ಯೋಜನೆಗಳು ಅನುಷ್ಠಾನಗೊಳ್ಳುವಾಗಷ್ಟೇ ಅವುಗಳ ವಿವರ ಹೊರಜಗತ್ತಿಗೆ ಸಿಗುವುದು. ಹಾಗಾಗಿಯೇ ವಿಶ್ವಬ್ಯಾಂಕಿನ ಅಧ್ಯಕ್ಷರುಗಳು ಕೂಡಾ, ತಮ್ಮ ನಿವೃತ್ತಿಯ ನಂತರವಷ್ಟೇ ತಮ್ಮ ಅವಧಿಯ ಯೋಜನೆಗಳ ಹಿಂದಿನ ದುರುದ್ದೇಶಗಳ ಬಗ್ಗೆ ಮಾತಾಡಲು ಸಾಧ್ಯವಾಗುವುದು-ಈ ಹಿಂದಿನ ಅಧ್ಯಕ್ಷರೊಬ್ಬರು ಮುಂಬೈನಲ್ಲಿ ನಡೆದ ಕಳೆದ 'ವಿಶ್ವಸಾಮಾಜಿಕ ಸಮ್ಮೇಳನ'ದಲ್ಲಿ ತಮ್ಮ ಅವಧಿಯ ಯೋಜನೆಗಳ ದುರುದ್ದೇಶಗಳ ಬಗ್ಗೆ ಮಾತನಾಡಿದಂತೆ! ಇಂತಹ ಅ-ಪಾರದರ್ಶಕ ಆಡಳಿತವುಳ್ಳ ಸಂಸ್ಥೆಗಳಿಂದ ಆರ್ಥಿಕ ನಿರ್ದೇಶನ ಹಾಗೂ ಸಹಾಯ ಪಡೆಯುವಂತಹ ರಾಜಕೀಯ ಪರಿಸ್ಥಿತಿಗೆ ಈಡಾಗಿರುವ, ಭಾರತವೂ ಸೇರಿದಂತೆ ಬಹುತೇಕ ಅಭಿವೃದ್ಧಿಶೀಲ ದೇಶಗಳು, ಸಹಜವಾಗಿಯೇ ಅವು ನಿರ್ದೇಶಿಸುವಂತಹ ಅಭಿವೃದ್ಧಿ ಮಾದರಿಯನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಹಾಗಾಗಿ ನಮ್ಮ ಆರ್ಥಿಕ ಸುಧಾರಣೆಗಳು ಈ ಅಭಿವೃದ್ಧಿ ಮಾದರಿಯನ್ನು ಅನಾವರಣಗೊಳಿಸುವ ಉದ್ದೇಶವನ್ನೇ ಹೊಂದಿವೆ.

15-16ನೇ ಶತಮಾನದ ಐರೋಪ್ಯ ಪುನರುತ್ಥಾನ (Renaisance) ರೂಪಿಸಿದ ಕೈಗಾರಿಕಾ ಬಂಡವಾಳಶಾಹಿಯನ್ನೇ, ಪ್ರಗತಿಯ ಅರ್ಥ ಮತ್ತು ಸಾಧನಗಳೆರಡನ್ನೂ ನಿರ್ಧರಿಸುವ ಏಕೈಕ ಆಧಾರವೆಂದು ದೃಢವಾಗಿ ನಂಬಿರುವ ಈ ಸಂಸ್ಥೆಗಳು, ಇಡೀ ಜಗತ್ತನ್ನು ಕೈಗಾರಿಕಾ ಬಂಡವಾಳಶಾಹಿ ಆಥರ್ಿಕತೆಗೆ ಒಗ್ಗಿಸಲು ಮತ್ತು ಬಗ್ಗಿಸಲು ಕಟಿ ಬದ್ಧವಾಗಿರುವುದು ಸಹಜವೇ ಆಗಿದೆ. ಈ ಕೈಗಾರಿಕಾ ಬಂಡವಾಳಶಾಹಿ ಅಲ್ಲಿನ ಹಳ್ಳಿಗಳನ್ನು ನಾಶ ಮಾಡಿ, ಕೈಗಾರಿಕೀಕೃತ ಪಟ್ಟಣಗಳನ್ನು ನಿರ್ಮಿಸಿ `ಪ್ರಗತಿ'ಗೆ ಕಾರಣವಾದಂತೆ, ಏಷ್ಯಾ (ಮತ್ತು ಆಫ್ರಿಕಾ) ದೇಶಗಳನ್ನು ಕೈಗಾರಿಕೀಕೃತಗೊಳಿಸಿ `ಸಮೃದ್ಧಿ' ತರುವ ಆಸೆಯನ್ನು ಅವು ನಮ್ಮಲ್ಲಿ ನಮ್ಮ-ಆಡಳಿತಾಗಾರರಲ್ಲಿ-ಬಿತ್ತಿವೆ. ಹಾಗಾಗಿಯೇ ವಿಶ್ವಬ್ಯಾಂಕ್ 2040ರ ಹೊತ್ತಿಗಾದರೂ ಭಾರತದ ರೈತ ಸಂಖ್ಯೆಯನ್ನು ಶೇಕಡಾ 20ಕ್ಕೆ ಇಳಿಸುವ ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದೆ. ಈ ಯೋಜನೆಯ ವಿವಿಧ ರೂಪಗಳೇ ನಮ್ಮ ಮನಮೋಹನಸಿಂಗರ ಆರ್ಥಿಕ `ಸುಧಾರಣೆ'ಗಳೆನಿಸಿಕೊಂಡಿರುವುದು!

ಈ ಸುಧಾರಣೆಗಳ ಅಂಗವಾಗಿಯೇ 15 ವರ್ಷಗಳ ಹಿಂದೆ ಕೃಷಿ ಸಾಲ ಮತ್ತು ಕೃಷಿ ಸಹಾಯ ಧನವನ್ನು ನಿರುತ್ತೇಜಿಸಲಾರಂಭಿಸಿದ್ದು, ಗ್ರಾಮೀಣ ಬ್ಯಾಂಕುಗಳ ಸಂಖ್ಯೆಯನ್ನು ಕಡಿಮೆಗೊಳಿಸತೊಡಗಿದ್ದು. ಪಡಿತರ ವ್ಯವಸ್ಥೆಯ ವ್ಯಾಪ್ತಿಯನ್ನು ಕಡಿತಗೊಳಿಸಿ, ರೈತರಿಂದ ಆಹಾರ ಧಾನ್ಯ ಖರೀದಿಯನ್ನೂ ಸೀಮಿತಗೊಳಿಸಿದ್ದು. ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಲ್ಲಿದ್ದ ಅನೇಕ ಸಾಮಾಜಿಕ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದು. ಹಾಗೇ ವಿದೇಶಿ ಬಂಡವಾಳವನ್ನು ಆಹ್ವಾನಿಸಿ ಗ್ರಾಹಕ ಮಾರುಕಟ್ಟೆಯನ್ನು ವಿಸ್ತರಿಸಲು ರಿಯಾಯಿತಿ ದರದಲ್ಲಿ ಭೂಮಿ, ವಿದ್ಯುತ್, ನೀರು ಮತ್ತು ಇತರೆ ನಾಗರಿಕ ಸೌಲಭ್ಯಗಳನ್ನು ಒದಗಿಸಲಾರಂಭಿಸಿ, ಹೊಸ ಗ್ರಾಹಕ ಸಮಾಜವೊಂದನ್ನು ಸೃಷ್ಟಿಸತೊಡಗಿದ್ದು. ಇದರಿಂದ ಉದ್ಭವವಾದ ಹೊಸ ಮಧ್ಯಮ ವರ್ಗದ ಹೊಸ ಸಂಪತ್ತನ್ನೇ ರಾಷ್ಟ್ರೀಯ ಸಂಪತ್ತೆಂದು ಜಾಹೀರಾತುಗೊಳಿಸುತ್ತಾ ಮೈಮರೆತು, ಜನರಿಂದ ಚುನಾವಣೆಗಳಲ್ಲಿ ತಿರಸ್ಕರಿಸಲ್ಪಟ್ಟಿದ್ದು ಕೂಡಾ.

ನಂತರ ಬಂದ (ಎನ್ಡಿಎ) ಸಕರ್ಾರವೂ ಇದೇ ನೀತಿಯನ್ನನುಸರಿಸಿ `ಪ್ರಕಾಶಮಾನ ಭಾರತ'ವನ್ನು ಪ್ರಸ್ತುತಗೊಳಿಸಿ ತಿರಸ್ಕರಿಸಲ್ಪಟ್ಟಾಗ, `ಆವೃತ ಅಭಿವೃದ್ಧಿ' ಮತ್ತು `ಆಂ ಆದ್ಮಿ(ಶ್ರೀಸಾಮಾನ್ಯ)ಯ ಕಲ್ಯಾಣ'ದ ಘೋಷಣೆಗಳೊಂದಿಗೆ ಬಂದ ಈ ಸರ್ಕಾರ, 'ಉದ್ಯೋಗ ಖಾತರಿ ಯೋಜನೆ'. 'ಭಾರತ್ ನಿರ್ಮಾಣ್' ಕಾರ್ಯಕ್ರಮಗಳಂತಹ ಕೆಲವು ಮೇಲ್ಮೈ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರ ಮೂಗಿಗೆ ತುಪ್ಪ ಹಚ್ಚಿ, ಈಗ ತನ್ನ ಆ ಹಳೆಯ ಆರ್ಥಿಕ ಸುಧಾರಣೆಗಳ ಹಾದಿಯಲ್ಲೇ ನಡೆದಿದೆ. ವಿಶ್ವಬ್ಯಾಂಕ್ ಕಾರ್ಯಕ್ರಮಕ್ಕೆ ಬದ್ಧವಾದ ಮನಮೋಹನಸಿಂಗ್ ಮತ್ತು ಅವರ ಆರ್ಥಿಕ ಪರಿವಾರಕ್ಕೆ ಇದು ಅನಿವಾರ್ಯವೂ ಆಗಿದೆ. ಈ ಕಾರ್ಯಕ್ರಮದ ಭಾಗವೇ ಆದ ಅಮೆರಿಕದೊಡನೆಯ ಪರಮಾಣು ಒಪ್ಪಂದವನ್ನು ಜಾರಿಗೊಳಿಸುವ ಹಠದಲ್ಲಿ ಎಡಪಕ್ಷಗಳ ದಾಕ್ಷಿಣ್ಯದಿಂದ ಮುಕ್ತವಾಗಿರುವ ಈ ಸರ್ಕಾರ, ಈಗ ಮುಕ್ತಮಾರುಕಟ್ಟೆ ನೀತಿಗನುಗುಣವಾಗಿ ವಿಮೆ, ಉನ್ನತ ಶಿಕ್ಷಣ, ಬ್ಯಾಂಕೋದ್ಯಮ ವಲಯಗಳಲ್ಲಿ ವಿದೇಶೀ ಬಂಡವಾಳದ ಪಾತ್ರವನ್ನು ಹೆಚ್ಚಿಸುವ, ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವ ಮತ್ತು ನೌಕರರ ನಿವೃತ್ತಿ ವೇತನ ಪದ್ಧತಿಯನ್ನು ಪರಿಷ್ಕರಿಸುವ ಸಿದ್ಧತೆಗಳಲ್ಲಿ ತೊಡಗಿದೆ. ಹಾಗೇ `ಇಂಡೋ-ಅಮೆರಿಕನ್ ಜ್ಞಾನ ಆಯೋಗ'ದ ಹೆಸರಿನಲ್ಲಿ ಭಾರತದ ಕೃಷಿ ಸಂಶೋಧನೆಯ ಸುಪರ್ದಿಯನ್ನು ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಒಪ್ಪಿಸ ಹೊರಟಿದೆ. ಅಂದರೆ ಎಲ್ಲದರ ಜೊತೆಗೇ, ಸಹಜವಾಗಿಯೇ ಕೃಷಿಯೂ ಅಮೆರಿಕನ್ನಿಕರಣಕ್ಕೆ ಒಳಪಡಬೇಕು!

ಇದರ ಅಂಗವಾಗಿಯೇ ಗುತ್ತಿಗೆ ಕೃಷಿ ಪದ್ಧತಿ ಮತ್ತು ಅದಕ್ಕೆ ತಕ್ಕನಾದ (ರಫ್ತೋದ್ದೇಶದ) ಬೆಳೆ ಪದ್ಧತಿ ಹಾಗೂ ಅದು ಅಗತ್ಯಗೊಳಿಸುವ (ಪೊಟ್ಟಣಗಳ ಗುಜರಿ) ಆಹಾರ ಪದ್ಧತಿಗಳನ್ನೂ ರೂಢಿಸಲು ಒಳ ಹಾಗೂ ಹೊರ ಕಾರ್ಯಕ್ರಮಗಳೆರಡೂ ನಡೆದಿವೆ. ಒಳ ಕಾರ್ಯಕ್ರಮ ಹೊಸ ಕೃಷಿ ತಂತ್ರಜ್ಞಾನ ಮತ್ತು ಆಹಾರ ಸಂಸ್ಕರಣ ಅಭಿವೃದ್ಧಿಗೆ ಸಂಬಂಧಪಟ್ಟಿದ್ದು, ಅವುಗಳ ವಿವರಗಳನ್ನು ಗುಟ್ಟಾಗಿ ಇಡಲಾಗಿದೆ. ಇನ್ನು ಹೊರ ಕಾರ್ಯಕ್ರಮ, `ವಿಶೇಷ ಆರ್ಥಿಕ ವಲಯ' ಯೋಜನೆಯ ರೂಪದಲ್ಲಿ ಈಗಾಗಲೇ ಜಾರಿಗೆ ಬರತೊಡಗಿದ್ದು ದೊಡ್ಡ ವಿವಾದವನ್ನೇ ಎಬ್ಬಿಸಿದೆ. ಹೊಸ ಆರ್ಥಿಕ ನೀತಿಯ ಕಿರೀಟ ಪ್ರಾಯ ಕಾರ್ಯಕ್ರಮದಂತಿರುವ ಈ ಯೋಜನೆಯನ್ನು ಚರ್ಚಿಸುವುದಕ್ಕಿಂತ ಮುನ್ನ, ಈ ಯೋಜನೆಗೆ ಸಿದ್ಧತೆಗಳಂತಿದ್ದ ಈವರೆಗಿನ ಹೊಸ ಕೈಗಾರೀಕರಣದ ಯುಗದ (ಹೊಸ ಏಕೆಂದರೆ, ಹಿಂದೆಯೂ ಕೈಗಾರೀಕರಣ ತನ್ನದೇ ರೀತಿಯಲ್ಲಿ ನಡೆದಿತ್ತಲ್ಲ!) 15 ವರ್ಷಗಳ ಈ ಆಲೋಚನಾರ್ಹ ಅಂಕಿ-ಅಂಶಗಳನ್ನು ಗಮನಿಸುವುದು ಒಳ್ಳೆಯದು:

1986-87ರಿಂದ 2003-04ರವರೆಗಿನ ಅವಧಿಯಲ್ಲಿ ಉದ್ಯಮಗಳ ಲಾಭ ಶೇಕಡಾ 11.6ರಿಂದ 45.5ಕ್ಕೆ ಹೆಚ್ಚಿದೆ. ಆದರೆ ಕಾರ್ಮಿಕರ / ನೌಕರರ ಸಂಬಳದ ಪಾಲು ಮಾತ್ರ ಶೇ. 56.4ರಿಂದ ಶೇ. 35.7ಕ್ಕೆ ಇಳಿದಿದೆ! 1996-07ರಿಂದ 2003-04ರ ಅವಧಿಯಲ್ಲಿ ಉತ್ಪಾದನೆ ಶೇ. 75ರಷ್ಟು ಹೆಚ್ಚಿದೆ. (ಇದರಲ್ಲಿ `ತಯಾರಿಕೆ' ಬಾಬ್ತು ಕಡಿಮೆಯಾಗಿದ್ದು `ಸೇವೆ'ಗಳ ಬಾಬ್ತು ಹೆಚ್ಚಾಗಿದೆ!) ಆದರೆ ಉದ್ಯೋಗವಕಾಶ ಶೇ. 20ರಷ್ಟು ಕಡಿಮೆಯಾಗಿದೆ! ಆಶ್ಚರ್ಯವೆಂದರೆ, ಅಧಿಕೃತ ಅಂಕಿ ಅಂಶಗಳ ಪ್ರಕಾರವೇ 93-94 ರಿಂದ ರಾಷ್ಟ್ರೀಯ ಪ್ರಗತಿ ದರದ ಹೆಚ್ಚಳದೊಂದಿಗೇ ನಿರುದ್ಯೋಗ ಮತ್ತು ಬಡತನವೂ ಹೆಚ್ಚಿದೆ! ಇಂದು ಭಾರತದ ಜನಸಂಖ್ಯೆಯ ಶೇ. 77ರಷ್ಟು ಜನ ದಿನವಹಿ 40 ರೂಪಾಯಿಗಳಿಗೂ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ. ಬಡವರ ಮತ್ತು ಬಡತನದ ಅಂಚಿನಲ್ಲಿರುವವರ ಸಂಖ್ಯೆ ಈ ಅವಧಿಯಲ್ಲಿ 73 ಕೋಟಿಯಿಂದ 83 ಕೋಟಿಗೆ ಏರಿದೆ. 'ವಿಶ್ವ ಆಹಾರ ಕಾರ್ಯಕ್ರಮ'ದ ಪ್ರಕಾರವೇ ಭಾರತದ 35 ಕೋಟಿ ಜನ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಹೀಗೆ ಹಸಿವಿನ ಆತಂಕದಲ್ಲಿರುವ ಜಗತ್ತಿನ ಜನಸಂಖೈಯಲ್ಲಿ ಅರ್ಧದಷ್ಟು ಜನ ಭಾರತದಲ್ಲೇ ಇದ್ದಾರೆ. ಐದು ವರ್ಷಗಳಿಗೂ ಕಡಿಮೆ ವಯಸ್ಸಿನ ಅರ್ಧದಷ್ಟು ಮಕ್ಕಳು ಅಪೌಷ್ಠಿಕತೆ ಅಥವಾ ಅಸಮರ್ಪಕ ಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ ಪೌಷ್ಠಿಕತೆಯ ಮೂಲಗಳಾದ ಕಾಳು-ಬೇಳೆಗಳ ಬಳಕೆ ಕಡಿಮೆಯಾಗುತ್ತಾ ಹೋಗಿದೆ. ಆದರೆ ಇದೇ ಅವಧಿಯಲ್ಲಿ ಕೇವಲ ಮುವ್ವತ್ತಾರು ಜನ ಉದ್ಯಮಿಗಳು 191 ಶತಕೋಟಿ ರೂಪಾಯಿಗಳ ಸಂಪತ್ತಿನ-ಅಂದರೆ ದೇಶದ ಒಟ್ಟಾರೆ ಸಂಪತ್ತಿನ ದೊಡ್ಡ ಭಾಗದ-ಒಡೆಯರಾಗಿದ್ದಾರೆ! 'ಸಮೃದ್ಧಿ' ಎಂಬುದಕ್ಕೆ ಇದಕ್ಕಿಂತ ವಿಕೃತ ಅರ್ಥವಿರಬಲ್ಲುದೆೆ?

11-
ಆದರೂ ದೇಶ ಅದ್ಭುತ 'ಪ್ರಗತಿ'ಯ ಹಾದಿಯಲ್ಲಿ ದಾಪುಗಾಲಿಡುತ್ತಿದೆ ಎಂಬ ಅಭಿಪ್ರಾಯವೇ ಸಾರ್ವಜನಿಕವಾಗಿ ಮೂಡಿದೆಯಲ್ಲ? ಅದಕ್ಕೆ ಕಾರಣ, ಸಾರ್ವಜನಿಕ ಅಭಿಪ್ರಾಯ ರೂಪಿಸುವ ಮಧ್ಯಮ ವರ್ಗ-ಈಗ ರಾಜಕಾರಣಿಗಳು ಮತ್ತು ಕೈಗಾರಿಕೋದ್ಯಮಿಗಳ ಬಾಲಬಡುಕರಾಗಿರುವ ನೌಕರಶಾಹಿ ಹಾಗೂ ಮಾಧ್ಯಮ ಪ್ರತಿನಿಧಿಗಳನ್ನೊಳಗೊಂಡ ಹೊಸ ಮಧ್ಯಮ ವರ್ಗವೊಂದು ಸೃಷ್ಟಿಯಾಗಿದೆ-ಹೊಸ ಆರ್ಥಿಕ ನೀತಿಯ ಲಾಭ ಪಡೆದು ಇನ್ನಷ್ಟು ಲಾಭಕ್ಕಾಗಿ ಹಪಹಪಿಸುತ್ತಿರುವುದು. ಜಾಗತೀಕರಣದ ಮುನ್ನ ನೆರೆಹೊರೆಯಂತಿದ್ದ ಮಧ್ಯಮ ವರ್ಗ ಮತ್ತು ಬಡ ಜನತೆಯ ನಡುವೆ ಈಗ ಅಪಾರ ಆರ್ಥಿಕ ಹಾಗೂ ಭಾವನಾತ್ಮಕ ಕಂದಕ ಉಂಟಾಗಿದೆ. ಅಷ್ಟೇ ಅಲ್ಲ, ಬಡ ವರ್ಗದ ಗಣನೀಯ ಭಾಗ ತನ್ನ ನೆರೆಹೊರೆಯಾಗಿದ್ದ ಮಧ್ಯಮ ವರ್ಗದಂತೆಯೇ ತಾನೂ ಒಂದು ದಿನ ಶ್ರೀಮಂತಿಕೆಗೆ ದಾಟಿಕೊಳ್ಳಬಹುದು ಎಂಬ ಆಸೆ ನಿರೀಕ್ಷೆಗಳಲ್ಲೇ ಮುಳುಗಿದೆ!

ಆದರೆ ಈ ತೆರೆನ ಶ್ರೀಮಂತಿಕೆಯನ್ನು ಸೃಷ್ಟಿಸುವ ಅಭಿವೃದ್ಧಿ ಜಗತ್ತಿನಲ್ಲಿ ಎಂದೋ ತನ್ನ ಮಿತಿಯನ್ನು ಮುಟ್ಟಿದೆ. ಹೊರಗೆ, ಸಂಪತ್ತು ನಿರ್ಮಾಣದ ಮೂಲಗಳು ಮತ್ತು ಆಧಾರಗಳು ಬರಿದಾಗುತ್ತಾ, ಕೆಲವೇ ವರ್ಷಗಳಲ್ಲಿ ಜಗತ್ತು ಭೌತಿಕವಾಗಿ ಉಸಿರಾಡುವುದನ್ನೇ ಕಷ್ಟಕ್ಕೀಡು ಮಾಡುವ ಖಚಿತ ಸೂಚನೆಗಳು ಬರಲಾರಂಭಿಸಿದ್ದರೆ;ಒಳಗೆ, ಪ್ರತಿ ಸಮಾಜವೂ ತನ್ನೆಲ್ಲ ಸಮತೋಲಗಳನ್ನು ಕಳೆದುಕೊಂಡು ಹೆಚ್ಚೆಚ್ಚು ಅಶಾಂತವೂ, ಅಶ್ಲೀಲವೂ ಆಗುತ್ತಿದೆ. ಹಾಗಾಗಿ, ಮುಂದೆ ಬರಲಿರುವ ಸಾರ್ವತ್ರಿಕ ಸುಖ-ಸಮೃದ್ಧಿಗಳ ಮಾತುಗಳನ್ನಾಡುತ್ತಿರುವವರು ನಿಜವಾಗಿಯೂ ಮಾನಸಿಕ ವಿಕ್ಷಿಪ್ತರೇ ಆಗಿದ್ದಾರೆ ಎಂದೆನಿಸದಿರದು. ಅಂದರೆ, ಮುಂದಿನ ಸುಖ ಸಮೃದ್ಧಿಗಳೇನಿದ್ದರೂ ಇನ್ನಷ್ಟು ಅಶಾಂತಿ ಮತ್ತು ಅಶ್ಲೀಲತೆಗಳೊಂದಿಗೇ ಬರಬಲ್ಲವು ಎಂಬುದು ನಮಗೆ ತಿಳಿದಿರಲಿ. ಆದರೂ ಜನ ಇಂತಹ 'ಪ್ರಗತಿ'ಗೆ ಮುಗಿ ಬಿದ್ದಿದ್ದರೆ ಅದಕ್ಕೆ ಕಾರಣ, ಈ ಹಿಂದಿನ 'ದೇವರಿದ್ದಾನೆ ಬಿಡಿ!' ಎಂಬ ವಿಧಿವಾದ, ಆಧುನಿಕ ಸಮಾಜದಲ್ಲಿ 'ವಿಜ್ಞಾನವಿದೆ ಬಿಡಿ!' ಎಂದು ಪರಿವರ್ತಿತವಾಗಿರುವುದೇ ಆಗಿದೆ. ಆದರೆ ವಿಜ್ಞಾನ ಎಂದೋ 'ತಂತ್ರಜ್ಞಾನ'ವಾಗಿ ಆತ್ಮಹತ್ಯೆ ಮಾಡಿಕೊಂಡಿದೆ ಎಂಬುದು ಇವರಿಗೇ ತಿಳಿದೇ ಇಲ್ಲ!

ಈ ಹೊಸ ವಿಧಿವಾದ ಅಥವಾ ಮೌಢ್ಯ ಕೈಗಾರಿಕಾ ಸಾಮ್ರಾಜ್ಯಶಾಹಿಯ ಸಂಚಾಲನಾ ಶಕ್ತಿಯೇ ಆಗಿದೆ. ಅದು ಜಗತ್ತಿನಾದ್ಯಂತ ವಿಸ್ತರಿಸಲು ಇಡೀ ಜಗತ್ತನ್ನು ಒಂದು ಕೈಗಾರಿಕಾ ಸಮಾಜವನ್ನಾಗಿ ಮಾಡಲು ಹೊರಟಿದೆ. ಇದೇ ಇಂದು ಜಾಗತೀಕರಣ ರೂಪದಲ್ಲಿ ಸುಖ-ಸಮೃದ್ಧಿಗಳ ಕನಸಿನ ಗ್ರಾಹಕ ಸಮಾಜವೊಂದನ್ನು ಸೃಷ್ಟಿಸಿ ನಮ್ಮನ್ನು ಆಕರ್ಷಿಸುತ್ತಿರುವುದು. ಇದರ ಮೂಲ ಕಾರ್ಯಕ್ರಮವೆಂದರೆ, ಏಷ್ಯಾದ ಕೃಷಿ ಸಮಾಜವನ್ನು ಕೈಗಾರಿಕಾ ಸಮಾಜವನ್ನಾಗಿ ಪರಿವರ್ತಿಸುವುದು. ಮೆಕಾಲೆಯ ನಂತರದ ಎರಡನೇ ಬೃಹತ್ ಸಾಂಸ್ಕೃತಿಕ ವಸಾಹತುಶಾಹಿ ಕಾರ್ಯಕ್ರಮವಿದು. ಮೆಕಾಲೆ ಈ ದೇಶವನ್ನು ಸಂಪೂರ್ಣ ನಮ್ಮ ಕೈವಶ ಮಾಡಿಕೊಳ್ಳುವ ಏಕೈಕ ಮಾರ್ಗವೆಂದರೆ, ಈ ಜನರ ಭಾಷೆಗಳನ್ನು ನಾಶ ಮಾಡುವುದು ಎಂದಿದ್ದನಂತೆ. ಆ ಕಾರ್ಯಕ್ರಮ ಒಂದು ಶತಮಾನದ ಕಾಲ ಜಾರಿಯಲ್ಲಿದ್ದು, ಈ ಎರಡನೇ ಸ್ಥಿತ್ಯಂತರಕ್ಕೆ ಇಲ್ಲಿನ ಭೂಮಿಯನ್ನು ಹದ ಮಾಡಿಟ್ಟಿದೆ! ಈ ಸ್ಥಿತ್ಯಂತರದ ಸಾಧನವೇ ವಿಶೇಷ ಆರ್ಥಿಕ ವಲಯ ಯೋಜನೆ. ಹಾಗಾಗಿಯೇ ಈಗ ದೇಶವನ್ನು ಒಂದು ವಿಶೇಷ ಆರ್ಥಿಕ ವಲಯಗಳ ಜಾಲವನ್ನಾಗಿ ಪರಿವರ್ತಿಸುವ ಬೃಹತ್ ಯೋಜನೆಗೆ ನಮ್ಮ ಆಡಳಿತಗಾರರು ಕಟಿಬದ್ಧರಾಗಿದ್ದಾರೆ.

ಕೃಷಿ ಮತ್ತು ಕೈಗಾರಿಕೆಗಳೆರಡನ್ನೂ ರಫ್ತು ಆಧಾರಿತ (ಈ ವಲಯಗಳನ್ನು ವ್ಯಾವಹಾರಿಕವಾಗಿ ವಿದೇಶಿ ಪ್ರದೇಶದಂತೆಯೇ ಪರಿಗಣಿಸಲಾಗುವುದರಿಂದ, ನಮ್ಮ ದೇಶಕ್ಕೂ ಇಲ್ಲಿಂದ ಸಾಗಣೆಯಾಗುವುದೆಲ್ಲವೂ ತಾಂತ್ರಿಕವಾಗಿ ರಫ್ತೇ ಆಗಿರುತ್ತದೆ!) ವ್ಯವಹಾರಗಳನ್ನಾಗಿ ಮಾಡುವ ಉದ್ದೇಶವುಳ್ಳ ಈ ಯೋಜನೆಯ ಅಂಗವಾಗಿ ಸರ್ಕಾರ ಮೊದಲ ಹಂತದಲ್ಲಿ ದೇಶಾದ್ಯಂತ ಒಂದು ಲಕ್ಷ ಐವ್ವತ್ತು ಸಾವಿರ ಹೆಕ್ಟೇರ್ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡು ಖಾಸಗಿ ಉದ್ಯಮಪತಿಗಳಿಗೆ ನೀಡಿ, ಇಂತಹ 500 ವ್ಯಾಪಾರಿ ಸಂಕೀರ್ಣಗಳನ್ನು ಸೃಷ್ಟಿಸಹೊರಟಿದೆ. ಒಂದು ವರ್ಗದ ಜನ ಮಾತ್ರ ವಿಶೇಷ ಸೌಲಭ್ಯಗಳೊಡನೆ ವಾಸಿಸುವ ಮತ್ತು ಉತ್ಪಾದನೆ ಹಾಗೂ ವ್ಯವಹಾರಗಳಲ್ಲಿ ತೊಡಗಿರುವ ಈ ವಲಯಗಳು ಸಿದ್ಧವಾದೊಡನೆ, ಸಾಮಾನ್ಯ ಭಾರತೀಯನಿಗೆ ವಿಶೇಷ ಗುರುತಿನ ಚೀಟಿ (ಒಂದು ರೀತಿಯ 'ಪಾಸ್ ಪೋರ್ಟ್' ಎಂದೇ ಹೇಳಬೇಕು!) ಮೂಲಕ ಮಾತ್ರ ಪ್ರವೇಶ ಸಾಧ್ಯವಾಗುವ ವ್ಯವಸ್ಥೆಯಿದು. ಯಾರು ಹೇಳಿದರು, ನಮ್ಮಲ್ಲಿ ರಾಜ ಸಂಸ್ಥಾನಗಳು ರದ್ದಾಗಿವೆ ಎಂದು? ಅವನ್ನು ರದ್ದು ಮಾಡಲು ಹೋರಾಡಿದ ಪಕ್ಷವೇ ಇಂದು ಮತ್ತೆ ಅವನ್ನು ಹೊಸ ರೂಪದಲ್ಲಿ ಚಾಲ್ತಿಗೆ ತರಲು ಹೊರಟಿದೆ. 60 ವರ್ಷಗಳಲ್ಲಿ ಸ್ವಾತಂತ್ರ್ಯದ ಅರ್ಥ ಬದಲಾಗಿರುವ ಬಗೆಯಿದು!

ಒಂದು ಅವಧಿಯವರೆಗೆ ಆದಾಯ ತೆರಿಗೆಯೂ ಸೇರಿದಂತೆ ಎಲ್ಲ ತೆರಿಗೆಗಳ ಸಂಪೂರ್ಣ ವಿನಾಯ್ತಿ, ಸಂಪೂರ್ಣ ವಿದೇಶಿ ಬಂಡವಾಳ ಮತ್ತು ಹೊರ ಗುತ್ತಿಗೆಗೆ ಅನುಮತಿ, ಆಮದು ಸುಂಕ ಮತ್ತು ಕೈಗಾರಿಕಾ ಪರವಾನಗಿ ಅಗತ್ಯದ ರದ್ದತಿ, ಕಾರ್ಮಿಕ ಕಾನೂನುಗಳ ಸಡಲಿಕೆ, ತನ್ನ ಪಾಲಿನ ಮೂರನೇ ಒಂದು ಭಾಗದಷ್ಟ್ಟು ಭೂಮಿಯ ಅಭಿವೃದ್ಧಿ ಮತ್ತು ಪರಭಾರೆಗೆ ಅವಕಾಶ ಇತ್ಯಾದಿ ಸೌಲಭ್ಯಗಳನ್ನೊಳಗೊಂಡ ಈ ಯೋಜನೆ, 1995ರಲ್ಲೇ ಚೀನಕ್ಕೆ ಭೇಟಿ ನೀಡಿ ಅಲ್ಲಿನ ವಿಶೇಷ ಆರ್ಥಿಕ ವಲಯಗಳನ್ನು ಕಂಡು ಬಂದಿದ್ದ ವಾಣಿಜ್ಯ ಮಂತ್ರಿ ಕಮಲನಾಥ್‌ರ ಮೂಲಕ ಸರ್ಕಾರದ ಗಂಭೀರ ಪರಿಶೀಲನೆಗೆ ಒಳಗಾಯಿತು. ಆದರೆ ಚೀನಾದಲ್ಲಿ ಇಂತಹ ಆರು ವಲಯಗಳು ಮಾತ್ರ ಚಾಲ್ತಿಯಲ್ಲಿದ್ದರೆ, ಇಲ್ಲಿ ಅಂತಹ 500 ವಲಯಗಳನ್ನು ಆಯೋಜಿಸಲಾಗುತ್ತಿದೆ! ಈ ಸಂಬಂಧ 2000ನೇ ಇಸವಿಯಲ್ಲಿ ಕರಡು ಮಸೂದೆ ಸಿದ್ಧವಾಗಿ 2005ರ ಹೊತ್ತಿಗೆ ಸಂಸತ್ತಿನಿಂದ ಯಾವುದೇ ಗಂಭೀರ ಚರ್ಚೆಗೆ ಒಳಗಾಗದೆ, ಅನುಮೋದನೆ ಪಡೆಯಿತು. ಆದರೆ, ಗಾಂಧಿ, ಗುಂಡಿಗೆ ಬಲಿಯಾದ 60 ವರ್ಷಗಳ ನಂತರವೂ ಈ ಮಣ್ಣಿನಲ್ಲಿ ಇನ್ನೂ ಸ್ವಲ್ಪ ಗಾಂಧಿ ಸತ್ವ ಉಳಿದಿರುವುದರಿಂದಾಗಿ ಈ ಯೋಜನೆ, ಹಲವು ಕಡೆ ಜನತೆಯಿಂದ ಪ್ರತಿರೋಧ ಎದುರಿಸುತ್ತಾ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲು ಸಾದ್ಯವಾಗದೇ ಹೋಗಿದೆ. ಗುಜರಾತ್, ಒರಿಸ್ಸ, ತಮಿಳ್ನಾಡು ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಕೆಲವು ಇಂತಹ ವಲಯಗಳ ಅಭಿವೃದ್ಧಿ ಕೆಲಸ ಆರಂಭವಾಗಿದೆಯಾದರೂ, ಕರ್ನಾಟಕ, ಗೋವಾ, ಪ.ಬಂಗಾಳ ಮುಂತಾದ ರಾಜ್ಯಗಳಲ್ಲಿ, ರೈತರ ಭೂಮಿಯನ್ನು ಖಾಸಗಿಯವರ ಪರವಾಗಿ ವಶಪಡಿಸಿಕೊಳ್ಳಲೆತ್ನಿಸುತ್ತಿರುವ ಸರ್ಕಾರಗಳ ದುಂಡಾವರ್ತಿ ಕ್ರಮಗಳ ವಿರುದ್ಧ ಜನಸಂಘಟನೆಗಳು ತೀವ್ರ ಚಳುವಳಿ ನಡೆಸಿವೆ. ಅಷ್ಟೇ ಅಲ್ಲ, ಈ ಯೋಜನಾ ವಲಯದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸ್ಥಾವರಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿತವಾಗುತ್ತಿದ್ದು, ಈ ಕೈಗಾರಿಕೆಗಳಿಗೆ ನೀಡಲಾಗಿದ್ದ ತೆರಿಗೆ ಮತ್ತು ಇತರೆ ರಿಯಾಯ್ತಿಗಳು 2009-10ರ ಹೊತ್ತಿಗೆ ಕೊನೆಗೊಳ್ಳುತ್ತಿರುವುದರಿಂದ, ಈ ರಿಯಾಯ್ತಿಗಳ ಮುಂದುವರಿಕೆಗಾಗಿ ವಿಶೇಷ ಆರ್ಥಿಕ ವಲಯಗಳ ಹೂಟ ಆರಂಭವಾಗಿದೆ ಎಂದೂ ಹೇಳಲಾಗುತ್ತಿದೆ!

ಜನತೆಯ ತೀವ್ರ ವಿರೋಧದ ಪರಿಣಾಮವಾಗಿ, ಈ ಕಾಯಿದೆಗೆ ಸರ್ಕಾರ 2007ರಲ್ಲಿ, ಪ್ರತಿ ವಲಯದ ಭೂಮಿಯ ಗರಿಷ್ಠ ಮಿತಿ ಹಾಗೂ ಭೂ ಪರಭಾರೆಯ ಅವಕಾಶ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ಕೆಲವು ತಿದ್ದುಪಡಿಗಳನ್ನು ಮಾಡಿತಾದರೂ, ಈ ಯೋಜನೆಯ ಮೂಲ ಕಲ್ಪನೆಯೇ-ವಿಪರೀತವೆನಿಸುವ ಹಣಕಾಸು ರಿಯಾಯಿತಿಗಳು ಮತ್ತು ಕಾರ್ಮಿಕರಿಗೆ ರಕ್ಷಣೆಯೇ ಇಲ್ಲದ ಕಾನೂನುಗಳು (ನಮಗೆ ಆದರ್ಶವಾದ ಚೀನಾದ ವಿಶೇಷ ಆರ್ಥಿಕ ವಲಯಗಳಲ್ಲಿ ಕಾರ್ಮಿಕರನ್ನು ದಿನಕ್ಕೆ ಹದಿನಾಲ್ಕು ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿದ್ದು, ಅವರಿಗೆ ಅನ್ಯಾಯಗಳ ವಿರುದ್ಧ ಪ್ರತಿಭಟಿಸುವ ಹಕ್ಕುಗಳನ್ನೂ ನಿರಾಕರಿಸಲಾಗಿದೆ. ಹಾಗಾಗಿಯೇ ಚೀನಾದ ಗ್ರಾಹಕ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಅಗ್ಗವೆನಿಸಿರುವುದು!) ಮತ್ತು ಸಮಾಜದಲ್ಲಿ ವಾಸ್ತವಿಕವಾದ ಗೋಡೆಗಳನ್ನೇ ನಿರ್ಮಿಸಿ ಉಂಟುಮಾಡಲಾಗುತ್ತಿರುವ ವರ್ಗವ್ಯವಸ್ಥೆ-ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಹುನ್ನಾರವೆಂದು ಅನೇಕ ಲೇಖಕ, ಕಲಾವಿದರು ಮತ್ತು ಮಾನವ ಹಕ್ಕುಗಳ ಚಳುವಳಿಯ ನಾಯಕರನ್ನೊಳಗೊಂಡ ಬುದ್ಧಿಜೀವಿ ವರ್ಗದ ಬೆಂಬಲದೊಂದಿಗೆ ಈ ಯೋಜನೆಯ ವಿರುದ್ಧ ಚಳುವಳಿ ಮತ್ತು ಜನಾಭಿಪ್ರಾಯ ಸಂಘಟನೆ ಮುಂದುವರೆದಿದೆ. ಹಣಕಾಸು ಖಾತೆ ಈ ಯೋಜನೆ ಒಳಗೊಂಡಿರುವ ವಿನಾಯ್ತಿಗಳಿಂದ 2010ರ ವೇಳೆಗೆ 1 ಲಕ್ಷ 60 ಸಾವಿರ ಕೋಟಿ ರೂಪಾಯಿಗಳಷ್ಟು ದೇಶದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ ಎಂದು ಹೇಳುತ್ತಿದ್ದರೆ, ಇದನ್ನು ಪ್ರಾಯೋಜಿಸುತ್ತಿರುವ ವಾಣಿಜ್ಯ ಖಾತೆ ಇದು 10 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯನ್ನಲ್ಲದೆ, 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ವಾದಿಸುತ್ತಿದೆ. ಆದರೆ ಈ ಯೋಜನೆ ಸಂಪೂರ್ಣವಾಗಿ ಜಾರಿಯಾದರೆ, 1 ಲಕ್ಷ 14 ಸಾವಿರ ರೈತ ಕುಟುಂಬಗಳು ಜಮೀನು ಕಳೆದುಕೊಂಡು ಮತ್ತು ಸುಮಾರು 1 ಲಕ್ಷ ಜನ ಕೃಷಿ ಕೂಲಿಕಾರರು ಕೆಲಸ ಕಳೆದುಕೊಂಡು ಹತ್ತಿರದ ನಗರಗಳೆಡೆಗೆ ಕೃಷಿ ನಿರಾಶ್ರಿತರಾಗಿ ಧಾವಿಸಲಿದ್ದಾರೆ ಎಂಬುದಂತೂ ನಿಜ.

ಅದೇನೇ ಇರಲಿ, ಈ ಇಡೀ ಯೋಜನೆ ಈ ದೇಶದ ಕೃಷಿ ಮೂಲ ಜೀವನ ಕ್ರಮ, ಲಯ ಮತ್ತು ದರ್ಶನಗಳನ್ನೇ ಸ್ಥಿತ್ಯಂತರಗೊಳಿಸುವ ಮೂಲಕ ನಮ್ಮ ಸಾಂಸ್ಕೃತಿಕ ಅಸ್ತಿವಾರವನ್ನೇ ತಲೆಕೆಳಗು ಮಾಡುವ ಪಶ್ಚಿಮದ ಹುನ್ನಾರದಂತೆ ಕಂಡರೆ ಆಶ್ಚರ್ಯವಿಲ್ಲ. ಇದು ದೇಶದ ಕಾಯಿಲೆ ವಾಸಿ ಮಾಡುವ ನೆಪದಲ್ಲಿ ದೇಶದ ಇಡೀ ದೇಹದಿಂದ ಮೂಲ ರಕ್ತವನ್ನೇ ತೆಗೆದು, ಬೇರೆಯವರ ರಕ್ತ ತುಂಬುವ ಹುಚ್ಚು ಕಾರ್ಯಕ್ರಮವಲ್ಲದೆ ಮತ್ತೇನಲ್ಲ. ಅಂದರೆ, ಇದು ನಮ್ಮ ದೇಶಕ್ಕೆ, ನಮ್ಮ ಸಂಸ್ಕೃತಿ-ನಾಗರೀಕತೆಗಳಿಗೆ ತನ್ನದೇ ಆದ ಉಜ್ಜೀವನ ಶಕ್ತಿ ಇಲ್ಲ ಎಂದು ತೀರ್ಮಾನಿಸಿ, ಇಡಿಯಾಗಿ ಇನ್ನೊಬ್ಬರಾಗಲು ನಡೆಸಿರುವ ಸಂಭ್ರಮದ ಸಿದ್ಧತೆ! ಇದು ಬುದ್ಧ-ಬಸವ-ಗಾಂಧಿಗಳನ್ನು ಚರಿತ್ರೆಯ ಔಪಚಾರಿಕ ನೆನಪುಗಳನ್ನಾಗಿ ಮಾತ್ರ ಪರಿವರ್ತಿಸುವ ಮೂಲಕ ನಮ್ಮ ಚರಿತ್ರೆಯನ್ನೇ ಕಳೆದುಕೊಳ್ಳುವ ಅವಿವೇಕವಲ್ಲದೆ ಮತ್ತೇನು? ಈ ಅವಿವೇಕದಿಂದ ರಾಷ್ಟ್ರ ವಿಭಜನೆಯ ಸಂದರ್ಭದಲ್ಲಿ ಉಂಟಾದ ಮತ್ತು ಈಗಲೂ ರಾಷ್ಟ್ರವನ್ನು ಒಂದಲ್ಲ ಒಂದು ರೂಪದಲ್ಲಿ ಕಾಡುತ್ತಿರುವ ಸಮಸ್ಯೆಗಿಂತಲೂ ಭೀಕರವಾದ, ಆಳವಾದ ಮತ್ತು ವ್ಯಾಪಕವಾದ ನಿರಾಶ್ರಿತರ ಸಮಸ್ಯೆ ಸೃಷ್ಟಿಯಾಗಲಿದೆ. ವಿಶ್ವ ಬ್ಯಾಂಕಿನ ಅಂದಾಜಿನ-ಅಲ್ಲಲ್ಲ-ಯೋಜನೆ ಪ್ರಕಾರ 2015ರ ಹೊತ್ತಿಗೆ 40 ಕೋಟಿ ಭಾರತೀಯರು 'ಕೃಷಿ ನಿರಾಶ್ರಿತ'ರಾಗಿ ಹಳ್ಳಿಗಳನ್ನು ಬಿಟ್ಟು ನಗರಗಳೆಡೆಗೆ ಧಾವಿಸಿಸಲಿದ್ದಾರೆ. ಇವರಿಗೆಲ್ಲ ನಮ್ಮ ನಗರಗಳಲ್ಲಿ ವಸತಿ, ನೀರು, ವಿದ್ಯುತ್, ವಿದ್ಯೆ, ಉದ್ಯೋಗ, ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸಾಧ್ಯವೇ? ನಗರ ಬಡತನ ಹಳ್ಳಿಯ ಬಡತನಕ್ಕಿಂತ ಬಹು ಭಯಂಕರ ಅಲ್ಲವೆ?

ಈವರೆಗಿನ ಸಣ್ಣಪುಟ್ಟ ವಲಸೆಗಳೇ ನಮ್ಮ ನಗರಗಳನ್ನು ಏನು ಮಾಡಿವೆ ಎಂಬುದನ್ನು ನಾವು ನೋಡಿದ್ದೇವೆ. ಇದರ ಹತ್ತರಲ್ಲಿ ಒಂದು ಪಾಲೂ ಅಲ್ಲದ ಅಣೆಕಟ್ಟು ಮತ್ತಿತರೆ 'ಅಭಿವೃಧ್ದಿ' ಕಾರ್ಯಗಳ ನಿರಾಶ್ರಿತರ ಪುನರ್ವಸತಿ ಹೇಗೆ ನಡೆದಿದೆ ಎಂಬುದನ್ನೂ ಗಮನಿಸುತ್ತಿದ್ದೇವೆ. ಹೀಗಿರುವಾಗ ಆತ್ಮಹತ್ಯೆಯ ಅಂಚು ತಲುಪಿರುವ ನಮ್ಮ ರೈತ ಸಮುದಾಯ ಇದರಿಂದ ಇನ್ನಾವ ಪ್ರಳಯಕ್ಕೆ ಒಳಗಾಗಬೇಕಾಗುವುದೋ ಎಂದು ಯೋಚಿಸಲೂ ಭಯವಾಗುವುದಿಲ್ಲವೇ? ಆದರೆ ಈ 'ಕೃಷಿ ನಿರಾಶ್ರಿತ'ರಿಗೆಲ್ಲ ಕೈಗಾರಿಕಾ ತಾಂತ್ರಿಕತೆಯ ತರಬೇತಿ ನೀಡಲು ವಿಶ್ವಬ್ಯಾಂಕೇ ನಮ್ಮ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆಯಂತೆ! ಅದರ ಒಂದು ಭಾಗವಾಗಿಯೇ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಆಂದೋಲನವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಲ್ಲಿನ ತನ್ನ ಏಜೆಂಟರ ಮೂಲಕ ಅದು ಪ್ರಾಯೋಜಿಸುತ್ತಿರುವುದು. ಇದು ಮೆಕಾಲೆಯ ವಸಾಹತುಶಾಹಿ ಕಾರ್ಯಕ್ರಮದ ಮುಂದುವರೆದ-ಬಹುಶಃ ಕೊನೆಯ-ಭಾಗವಲ್ಲದೆ ಮತ್ತೇನು?

12-
ಹಾಗಾದರೆ ಇದಕ್ಕೆ ಪರಿಹಾರ? ಸಮಸ್ಯೆಯ ಈ ಮಂಡನೆಯ ಹಾದಿಯಲ್ಲೇ ಪರಿಹಾರದ ಹಾದಿಯೂ ಪರೋಕ್ಷವಾಗಿ ಸೂಚಿತವಾಗಿದೆ ಎಂದು ನಾನು ನಂಬಿದ್ದೇನೆ. ಬಂಡವಾಳ ಸ್ಥಳೀಯತೆಯನ್ನು ಕಳೆದುಕೊಂಡು ಪ್ರಜಾಸತ್ತೆಯ ಮೂಲಭಾವನೆಗೆ ವಿರುದ್ಧವಾಗಿ ನಗರಗಳೆಡೆಗೆ ಹರಿಯತೊಡಗಿದಂತೆ ಮಾಡಿದ ರಾಜಕೀಯವೇ, ನಮ್ಮ ಪ್ರಗತಿಯ ಹಾದಿ ಬಂಡವಾಳಶಾಹಿ ಅಭಿವೃದ್ಧಿ ಮಾದರಿಗೆ ಅವಕಾಶ ಮಾಡಿಕೊಟ್ಟು ; ಆಧುನೀಕರಣ ಪ್ರಕ್ರಿಯೆಗೆ ಅಮಲು ಏರುವಂತೆ ಮಾಡಿದ್ದು. ಇದರಿಂದಾಗಿ ಇಡೀ ಆಧುನೀಕರಣ ಪ್ರಕ್ರಿಯೆ ದಾರಿ ತಪ್ಪಿ ಅದು ಕ್ರಮೇಣ ಸಂಪೂರ್ಣ ನಗರೀಕರಣ ಯೋಜನೆಯಾಗಿ ಪರಿವರ್ತಿತವಾಗಲು ಕಾರಣವಾಯಿತು. ಇದೇ, 50 ವರ್ಷಗಳ ನಂತರ ರೈತರ ಸರಣಿ ಆತ್ಮಹತ್ಯೆ ಆರಂಭವಾಗುವಂತಹ 'ಪ್ರಗತಿ'ಯ ಬಿಕ್ಕಟ್ಟಿಗೆ ಕಾರಣವಾಗಿರುವುದು. ಹಾಗಾಗಿ ನಾವು ಮೊದಲಾಗಿ ಬಂಡವಾಳವನ್ನು ಕುರಿತ ನಮ್ಮ ನಿಲುವುಗಳನ್ನು ಪರಿಷ್ಕರಿಸಕೊಳ್ಳಬೇಕಿದೆ. ಪ್ರಗತಿಯನ್ನು ಸಾರಾ ಸಗಟಾಗಿ ನೋಡುವ ಪಶ್ಚಿಮದ ದೃಷ್ಟಿಯನ್ನು ತೊರೆದು, ಯಾರ ಮತ್ತು ಎಂತಹ ಪ್ರಗತಿ ಎಂಬ ಪ್ರಶ್ನೆಗಳನ್ನು ಕೇಳಿಕೊಂಡಾಗ ಬರುವ ಉತ್ತರಗಳನ್ನನುಸರಿಸಿ, ಅದರಂತೆ ಬಂಡವಾಳವನ್ನು ಬೆಳೆಸಬೇಕಿದೆ. ಶ್ರೀಮಂತಿಕೆಯನ್ನು ಹೆಚ್ಚಿಸುವ ಮೂಲಕ ಬಡತನವನ್ನು ನಿರ್ಮೂಲ ಮಾಡಬಹುದೆಂಬ ಮನಮೋಹನ ಸಿಂಗರ 'ಲಂಡನ್ ಅರ್ಥಶಾಸ್ತ್ರ ಶಾಲೆ'ಯ ಸರಕು ಅರ್ಥಶಾಸ್ತ್ರದ ನಂಬಿಕೆ, ಭಾರತದಂತಹ ಅರೆ ಉಳಿಗಮಾನ್ಯಶಾಹಿ ದೇಶದಲ್ಲಿ ಅಸಭ್ಯ ಶ್ರೀಮಂತಿಕೆಯ ದ್ವೀಪಗಳನ್ನಷ್ಟೇ ಸೃಷ್ಟಿಸಬಲ್ಲುದು ಎಂಬುದು ನಮಗೆ ಆದಷ್ಟು ಬೇಗ ಮನವರಿಕೆಯಾಗಬೇಕಿದೆ. ಏಕೆಂದರೆ ಬಂಡವಾಳಕ್ಕೆ ಹೃದಯವಿರುವುದಿಲ್ಲ. ಅದಕ್ಕೆ ಹೃದಯ ಪ್ರದಾನ ಮಾಡುವುದೆಂದರೆ, ಬಡತನ ನಿರ್ಮೂಲನೆಯನ್ನೇ ನಮ್ಮ ಅರ್ಥಶಾಸ್ತ್ರದ ಮೂಲ ಕಾಳಜಿಯನ್ನಾಗಿ ಮಾಡುವುದೇ ಆಗಿದೆ.

ಈ ದೃಷ್ಟಿಯಿಂದ ಗಾಂಧೀಜಿ ಪ್ರತಿಪಾದಿಸಿದ 'ಟ್ರಸ್ಟೀಷಿಪ್' ಪರಿಕಲ್ಪನೆ ಮತ್ತು ಲೋಹಿಯಾ ಪ್ರತಿಪಾದಿಸಿದ 'ಸಾಮಾಜಿಕ ಒಡೆತನ' ಪರಿಕಲ್ಪನೆಗಳ ಅನುಸಂಧಾನದ ರೂಪದಲ್ಲಿ ಬಂಗ್ಲಾದೇಶದ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಮಹಮ್ಮದ್ ಯೂನುಸ್ ಮಂಡಿಸಿರುವ 'ಸಾಮಾಜಿಕ ಬಂಡವಾಳ'ದ ಸಿದ್ಧಾಂತ ಮತ್ತು ಪ್ರಯೋಗಗಳನ್ನು ಅಧ್ಯಯನ ಮಾಡುವುದು ಉಚಿತವೆನ್ನಿಸುತ್ತದೆ. ಯೂನಸ್ ಅವರೀಗ ತಮ್ಮ 'ಗ್ರಾಮೀಣ ಬ್ಯಾಂಕಿಂಗ್' ಚಳುವಳಿಯ ಯಶಸ್ಸಿನ ನಂತರ 'ಸಾಮಾಜಿಕ ವ್ಯಾಪಾರ'(Social business) ಚಳುವಳಿಯೊಂದನ್ನು ಆರಂಭಿಸಿದ್ದಾರೆ. ಅವರ ಪ್ರಕಾರ ಬಂಡವಾಳವಾದ ಅರ್ಧ ಅಭಿವೃದ್ದಿಗೊಂಡ ಆರ್ಥಿಕ ರಚನೆಯಾಗಿರುವುದರಿಂದ, ಅದು ಅಭಿವೃದ್ಧಿಶೀಲ ದೇಶಗಳಲ್ಲಿ ಬಂಡವಾಳಶಾಹಿಯಾಗಿ ಅನಿಷ್ಟಗಳನ್ನೇ ಸೃಷ್ಟಿಸುತ್ತಿದೆ. ಆದರೆ ಅದನ್ನು ಜನಶಕ್ತಿಯೊಂದಿಗೆ ಬೆಸೆದು ಪೂರ್ಣಗೊಳಿಸಿ, ಬಡತನ ನಿರ್ಮೂಲನೆಯ ಸಾಧನವನ್ನಾಗಿಯೂ ಮಾಡಿಕೊಳ್ಳಬಹುದಾಗಿದೆ. ಆಗ ಬಡ ಜನತೆ ಎಂಬುದು ಬಂಡವಾಳವಾದಕ್ಕೆ ಒಂದು ಅನಿಷ್ಟ ಹೊರೆ ಎನಿಸದೆ, ಒಂದು ಸಾಮಾಜಿಕ ಆಸ್ತಿ ಎನಿಸಿ; ಏಕ ಆಯಾಮದ-ಬರೀ ಲಾಭೋದ್ದೇಶದ-ಬಂಡವಾಳವು ಸ್ಥಳೀಯ ಧರ್ಮ, ಸಂಸ್ಕೃತಿ ಮತ್ತು ರಾಜಕೀಯಗಳ ಸಂಸ್ಪರ್ಶದಲ್ಲಿ ಭಾವನಾತ್ಮಕ ಆಯಾಮವನ್ನೂ ಪಡೆದುಕೊಂಡು, ಸೇವೆಯ ಸಾಧನವೂ ಆಗಬಲ್ಲುದಾಗಿದೆ. ಇದು ಯೂನುಸ್ ಅವರ ಸಾಮಾಜಿಕ ವ್ಯಾಪಾರ ಸಿದ್ಧಾಂತ.

ಯೂನುಸ್ ಅವರೀಗ ತಮ್ಮ ಸಿದ್ಧಾಂತದ ಪ್ರಯೋಗ ರೂಪವಾಗಿ ಇಡೀ ದೇಶದ ಮಕ್ಕಳ ಅಪೌಷ್ಠಿಕತೆಯನ್ನು ನಿವಾರಿಸಲು ತಮ್ಮ 'ಗ್ರಾಮೀಣ ಫೌಂಡೇಷನ್'ನ ಮೂಲಕ ಫ್ರೆಂಚ್ ಆಹಾರ ಸಂಸ್ಥೆಯೊಂದರ ತಾಂತ್ರಿಕ ಸಹಯೋಗದೊಂದಿಗೆ ಪೌಷ್ಠಿಕ ಮೊಸರೊಂದನ್ನು ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸಿ, ಸುಲಭ ಬೆಲೆಯಲ್ಲಿ ಅದನ್ನು ದೇಶಾದ್ಯಂತ ತಮ್ಮದೇ ಕಾರ್ಯಕರ್ತರ ಜಾಲದ ಮೂಲಕ ವಿತರಿಸುತ್ತಿದ್ದಾರೆ. ಇಂತಹ ಹಲವು ಯೋಜನೆಗಳು ಅವರ 'ಸಾಮಾಜಿಕ ವ್ಯಾಪಾರ' ಕಾರ್ಯಕ್ರಮದಲ್ಲಿ ಇವೆ. ವ್ಯಾಪಾರ ನಡೆಯಲು ಎಷ್ಟು ಬೇಕೋ ಅಷ್ಟು ಲಾಭ ಮಾತ್ರದ ಗುರಿಯೊಂದಿಗೆ ವ್ಯಾಪಾರ ಮಾಡುವುದು ಈ 'ಸಾಮಾಜಿಕ ವ್ಯಾಪಾರ'ದ ಕಾರ್ಯಶೀಲ ತಂತ್ರವಾಗಿದೆ. ಇದು ಅತಿ ಆಳದ ಶ್ರದ್ಧೆೆಯನ್ನೂ, ಬದ್ಧತೆಯನ್ನೂ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನತೆ ಕುರಿತ ಪ್ರೀತಿಯನ್ನೂ ಬೇಡುತ್ತದೆ. ಒಟ್ಟಾಗಿ ಇದನ್ನು ರಾಷ್ಟ್ರೀಯ ಶೀಲ ಎನ್ನಬಹುದು. ನಮ್ಮ ಆಧುನೀಕರಣ ಈ ಶೀಲವನ್ನೇ ನಾಶಮಾಡಿದ್ದೇ, ಅದು ಜಾಗತಿಕರಣವಾಗಿ ಇಂದು ನಮ್ಮ ಮುಂದೆ 'ಪ್ರಗತಿ'ಯನ್ನು ಕುರಿತ ಒಂದು ದೊಡ್ಡ ದ್ವಂದ್ವವನ್ನು ಸೃಷ್ಟಿಸಿರುವುದು. ಯೂನುಸ್ ಪ್ರಕಾರ ಜಾಗತೀಕರಣವೆಂಬುದು ಸಾವಿರಾರು ವೇಗದ ರಸ್ತೆಗಳ ವ್ಯಾಪಾರ ಜಾಲವಾಗಿದ್ದು ಅದನ್ನು ನಮಗೆ ಬೇಕಾದ ಕಡೆ ಸಂಚಾರ ಸಂಕೇತಗಳನ್ನೂ, ವೇಗ ನಿಯಂತ್ರಕಗಳನ್ನೂ, ಪಾದಚಾರಿ ರಸ್ತೆ-ದಾಟುಗಳನ್ನು ಸ್ಥಾಪಿಸಿಕೊಂಡು ಪಳಗಿಸಿಕೊಳ್ಳಬೇಕು. ಇದಕ್ಕೆ ಅಗತ್ಯವಾಗಿರುವುದು ಪ್ರಜಾಸತ್ತಾತ್ಮಕವಾಗಿರುವ ಸ್ಥಳೀಯ ಸಂಘಟನೆಗಳ ಜನಶಕ್ತಿ.

ನಮ್ಮ ದೇಶದಲ್ಲೂ ಇಳಾ ಭಟ್ ಎಂಬ ಇತ್ತೀಚೆಗೆ ನಿಧನರಾದ ಗಾಂಧಿವಾದಿ ಮಹಿಳೆ ಗುಜರಾತ್ನಲ್ಲಿ ಮಹಿಳೆಯರಿಗಾಗಿ ಇಂತಹುದೊಂದು(SEWA) ಸಂಘಟನೆಗಳ ಜಾಲವನ್ನೇ ಯಶಸ್ವಿಯಾಗಿ ನಿರ್ಮಿಸಿದ್ದಾರೆ. ನಮ್ಮಲ್ಲಿ ಸ್ತ್ರೀ ಸ್ವಸಹಾಯ ಸಂಘಟನೆಗಳೂ ಈ ಕೆಲಸವನ್ನು ಸೀಮಿತ ಚೌಕಟ್ಟಿನಲ್ಲಿ ಮಾಡುತ್ತಿವೆ. ಆದರೆ ಅವಕ್ಕೊಂದು ಆಳವಾದ ತಾತ್ವಿಕತೆಯಾಗಲೀ, ದೂರದ ಗುರಿಯಾಗಲೀ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅದನ್ನೊಂದು ಜನಪರ ಆಂದೋಲನವನ್ನಾಗಿ ವಿಸ್ತರಿಸಬಲ್ಲ ಮುಖಂಡತ್ವವಾಗಲೀ ಇಲ್ಲ. ಆದರೆ ಸಣ್ಣ ಮತ್ತು ಸ್ಥಳೀಯ ಬಂಡವಾಳವನ್ನು ಆಧರಿಸಿದ ರೈತ ಸ್ವಸಹಾಯ ಸಂಘಗಳು ಈ ಕೊರತೆಯನ್ನು ನೀಗಿಸಿ ಗ್ರಾಮ ಮಟ್ಟದಲ್ಲಿ ಒಂದು 'ರೈತ ಪಂಚಾಯ್ತಿ'ಯಂತೆ ಕೆಲಸ ಮಾಡುತ್ತಾ, ಸ್ಥಳೀಯ ಬೆಳೆ ವಿನ್ಯಾಸ, ಸಂಗ್ರಹಣೆ, ಮಾರಾಟ ಇತ್ಯಾದಿಗಳಿಗೆ ಸಂಬಂಧಪಟ್ಟ ಪರ್ಯಾಯ ಆರ್ಥಿಕ ವ್ಯವಸ್ಥೆಯೊಂದರ ಅಸ್ತಿವಾರಗಳನ್ನು ಹಾಕಬಹುದಾಗಿದೆ. ಜೊತೆಗೆ ಗ್ರಾಮದ ಎಲ್ಲ ರೀತಿಯ ಐಕ್ಯತೆಗಾಗಿ ವರ್ಷಾದ್ಯಂತ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ. ಈ ಕೆಲಸವನ್ನು ಸಹಕಾರಿ ಚಳುವಳಿಯನ್ನು ನಾಶ ಮಾಡಿದ ದೋಷಗಳಿಂದ ಮುಕ್ತಿಗೊಳಿಸಿಕೊಂಡೇ ಮತ್ತು ಸದ್ಯದ ಪಕ್ಷ ರಾಜಕಾರಣದ ಸಂಸರ್ಗವಿಲ್ಲದೇ ಆದಷ್ಟೂ ಒಮ್ಮತದ ಆಧಾರದ ಮೇಲೇ ಆರಂಭಿಸಬೇಕಾಗಿದೆ. ಅಂದರೆ ಪ್ರತಿಯೊಂದು ಗ್ರಾಮ ರೈತ ಸ್ವಸಹಾಯ ಸಂಘವೂ ತನ್ನ ಸ್ವಾಯತತ್ತೆಯನ್ನು ಕಾಪಾಡಿಕೊಂಡೇ, ಈ ಚಳುವಳಿಯನ್ನು ತನ್ನ ನೆರೆಹೊರೆಗೆ ಹಬ್ಬಿಸಬೇಕು. ರೈತ ಕಟ್ಟಿದ ಭಾರತವನ್ನು ಇನ್ನೊಬ್ಬರಿಗೆ ಒಪ್ಪಿಸಲಾಗುತ್ತಿರುವ ಈ ನಿರ್ಣಾಯಕ ಸಂದರ್ಭದಲ್ಲಿ, ರೈತರು ಈ ದಿಸೆಯಲ್ಲಿ ಸ್ಫೂರ್ತಿಗೊಳ್ಳುವ ಕಾಲವೀಗ ಬಂದಿದೆ.

ಈ ಸ್ಫೂರ್ತಿಯಲ್ಲೇ ಅವರು ಸಂಘಟಿತರಾಗಿ, ಭಾರತದ ಕೃಷಿಯನ್ನು ಜಾಗತಿಕ ಆರ್ಥಿಕತೆಯಿಂದ ಮುಕ್ತಗೊಳಿಸುವಂತೆ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ದರಗಳನ್ನು ದೋಹಾ ಮಾತುಕೆಗಳ ಮುನ್ನ ಇದ್ದ ದರಗಳಿಗೆ ಇಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ಇದು ಕಷ್ಟಸಾಧ್ಯ ಎಂದು ಈ ಸಂಬಂಧ ಇತ್ತೀಚಿಗೆ ನಡೆದ ಜಿನೀವಾ ಮಾತುಕತೆಗಳು ಸಾಬೀತುಪಡಿಸಿವೆ. ಹಾಗೇ ರೈತರ ಕನಿಷ್ಠ ಮಾಸಿಕ ಆದಾಯ ಸ್ಥಿರತೆಗಾಗಿ ರೈತ ವರಮಾನ ಆಯೋಗ ರಚಿಸುವಂತೆ ಮತ್ತು ಬೆಳೆ ವಿಮೆ ವ್ಯವಸ್ಥೆಯನ್ನು ಬಲಪಡಿಸುವಂತೆ ಒತ್ತಾಯಿಸಬೇಕಿದೆ. ಹಾಗೇ ಸರ್ಕಾರೀ ಸಾಲದ ಮನ್ನಾದ ನಂತರವೂ ಬಾಕಿ ಉಳಿದಿರುವ ಸುಮಾರು 50 ಸಾವಿರ ಕೋಟಿ ರೂಪಾಯಿಗಳ ಖಾಸಗಿ-ಸರ್ಕಾರೇತರ ಹಣಕಾಸು ಸಂಸ್ಥೆಗಳ, ಊರ ಸಾಹುಕಾರರ ಅಥವಾ ವೃತ್ತಿಪರ ಲೇವಾದೇವಿಗಾರರ ಬಳಿಯ-ಸಾಲದ ಭಾರ ಕಡಿಮೆ ಮಾಡುವ ಕ್ರಮಗಳ ಬಗ್ಗೆ ಸ್ಥಳೀಯ ಸಂಸ್ಥೆಗಳ ಮಧ್ಯಸ್ಥಿಕೆಯಲ್ಲಿ ಸರ್ಕಾರದೊಡನೆ ಚರ್ಚಿಸಲು ಮಂದಾಗಬೇಕಿದೆ. ಕರ್ನಾಟಕವಂತೂ, ರಾಜಸ್ಥಾನ ಬಿಟ್ಟರೆ ಅತಿ ಹೆಚ್ಚು ಬೀಳು ಭೂಮಿ ಹೊಂದಿರುವ ರಾಜ್ಯವಾಗಿದ್ದು, ಸ್ಥಳೀಯ ನೀರಾವರಿ ವ್ಯವಸ್ಥೆಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಒತ್ತಡ ಹೆಚ್ಚಿಸಬೇಕಾಗಿದೆ. ರೈತರ ಸರ್ಕಾರ ಎಂದು ಹೇಳಿಕೊಳ್ಳುವ ಪ್ರಸಕ್ತ ರಾಜ್ಯ ಸರ್ಕಾರ ರಾಜ್ಯ ಆಯವ್ಯಯ ಇತಿಹಾಸದಲ್ಲೇ ನೀರಾವರಿಗಾಗಿ ಅತಿ ಕಡಿಮೆ ಹಣ ನಿಗದಿ ಪಡಿಸಿದೆ! ಇಂತಹ ಢೋಂಗಿ ರೈತ ರಾಜಕಾರಣಕ್ಕೆ ಮುಕ್ತಾಯ ಹಾಡಿ ನಿಜವಾದ-ಸ್ವಸಹಾಯ ಸಂಘಗಳನ್ನಾಧರಿಸಿದ-ರಚನಾತ್ಮಕ ರೈತ ರಾಜಕಾರಣಕ್ಕೆ ನಾಂದಿ ಹಾಡಬೇಕಿದೆ.

ಇದರ ಅಂಗವಾಗಿಯೇ ಆಗ ಬೇಕಾದ ಇನ್ನೊಂದು ಮುಖ್ಯ ಕೆಲಸವೆಂದರೆ, ಪಾಳೇಕರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯ ಪ್ರಚಾರ. ಇದು ನಮ್ಮ ರೈತರನ್ನು ಪಾರಂಪರಿಕ ಕೃಷಿ ಪದ್ಧತಿಯ ಸುಧಾರಿತ ರೂಪಗಳೆಡೆಗೆ ಒಯ್ದು, ಬಂಡವಾಳಶಾಹಿ ಕೃಷಿ ಕೈಗಾರಿಕೆಗಳ ಮೇಲಿನ ಅವಲಂಬನೆಯನ್ನು ತಪ್ಪಿಸುವ ಮೂಲಕ ರೈತನನ್ನು ಸಾಲದ ಸುಳಿಯಿಂದ ಬಿಡಿಸಬಲ್ಲದು ಮತ್ತು ಅವನಲ್ಲಿ ಒಂದಿಷ್ಟು ಬಂಡವಾಳ ಕ್ರೋಢೀಕೃತವಾಗಲು ಸಹಾಯವಾಗಬಲ್ಲುದು. ಪ್ರತಿ ಹಳ್ಳಿಯಲ್ಲೂ ಈ ಬಂಡವಾಳವನ್ನು 'ಸಾಮಾಜಿಕ ಬಂಡವಾಳ'ವನ್ನಾಗಿ ಸಂಘಟಿಸಿ ನಿರ್ವಹಿಸುವ ಒಬ್ಬ ರೈತ ಧೀಮಂತ ಸೃಷ್ಟಿಯಾದರೂ ಸಾಕು, ಹಳ್ಳಿಗಳು ಸ್ವಾಭಿಮಾನದಿಂದ ಚೇತರಿಸಿಕೊಳ್ಳತೊಡಗುತ್ತವೆ. ಆಗ ಸರ್ಕಾರವನ್ನು ನಗರಗಳ ಮೇಲೆ ಹೂಡಲಾಗುತ್ತಿರುವ ಬಂಡವಾಳವನ್ನು (ಅದು ವಿದೇಶಿಯಾದರೂ ಸರಿ) ಹಳ್ಳಿಗಳ ಕಡೆ-ರಸ್ತೆ, ಚರಂಡಿ, ಕುಡಿಯುವ ನೀರು, ಆರೋಗ್ಯ ರಕ್ಷಣೆ, ಶಾಲೆ, ಕೆರೆಕಟ್ಟೆಗಳ ಸಂರಕ್ಷಣೆ, ನೀರಾವರಿ ನಿರ್ಮಾಣ, ಆಧುನಿಕ ಸಂಪರ್ಕ ಜಾಲ ಸ್ಥಾಪನೆ ಕೆಲಸಗಳಿಗಾಗಿ-ತಿರುಗಿಸುವಂತೆ ಆಗ್ರಹಿಸುವ ಶಕ್ತಿ ಹಳ್ಳಿಗಳಲ್ಲಿ ಸಂಘಟಿತವಾಗುತ್ತದೆ. ಇದರಿಂದ ರಾಷ್ಟ್ರೀಯ ಪ್ರಗತಿ ದರ ಕುಸಿಯುತ್ತದೆಯಾದರೆ, ಕುಸಿಯಲಿ ಎಂದು ಸರ್ಕಾರಕ್ಕೆ ಹೇಳಿ ದಕ್ಕಿಸಿಕೊಳ್ಳುವ ಆತ್ಮ ವಿಶ್ವಾಸ ಹಳ್ಳಿಗಳಲ್ಲಿ ಮೂಡುತ್ತದೆ. ಇದು ಸಾಧ್ಯವಾದಲ್ಲಿ ಒಂದು ರಾಜಕೀಯ ಪುನರಾಲೋಚನೆಯ ವಾತಾವರಣವೇ ಉಂಟಾದೀತು. ಇಂತಹ ವಾತಾವರಣದಲ್ಲಿ ನಮ್ಮದೇ ಆದ ಆಧುನೀಕರಣದ ಪರಿಕಲ್ಪನೆಗಳು, ಸಾಧನಗಳು ಮತ್ತು ಮೌಲ್ಯಗಳು ರೂಪುಗೊಳ್ಳತೊಡಗಿ, ಮನಮೋಹನ ಸಿಂಗ್ರಂತಹವರನ್ನೂ ಯೋಚನೆಗೆ ಹಚ್ಚಿದರೆ ಆಶ್ಚರ್ಯವಿಲ್ಲ! ಆಗ ಸದ್ಯದ-ಯು.ಆರ್. ಅನಂತಮೂರತಿಯವರು ಕ್ಯಾನ್ಸರ್ನಂತಹ ಬೆಳವಣಿಗೆ ಎಂದು ಕರೆಯುವ-ಸಾಮಾಜಿಕ ನ್ಯಾಯವನ್ನೇ ಧಿಕ್ಕರಿಸಿರುವ ಸದ್ಯದ 'ಗರಿಷ್ಠ ಪ್ರಗತಿ'ಯ ದಿಕ್ಕು, ತಾನೇ ತಾನಾಗಿ ಕ್ರಮೇಣವಾಗಿಯಾದರೂ 'ಸಮಗ್ರ ಪ್ರಗತಿ'ಯ ದಿಕ್ಕಿಗೆ ತಿರುಗುತ್ತದೆ.

ನನಗೆ ಗೊತ್ತು, ಇದು ಇಷ್ಟು ಸರಳವಾಗಿ, ಹೇಳಿದಷ್ಟು ಸುಲಭವಾಗಿ ಆಗಿಬಿಡಬಹುದಾದ ಸಣ್ಣ ಕೆಲಸವಲ್ಲ. ಆದರೆ ಹೀಗೆ ಸರಳವಾಗಿ ಸಣ್ಣದಾಗಿ ಪರಿಹಾರ ಕಲ್ಪಿಸಿಕೊಂಡೇ-ಪ್ರತಿ ಹಳ್ಳಿಯ ಸಣ್ಣ ಝರಿಯೇ ಮುಂದೆ ದೊಡ್ಡ ನದಿಯಾಗಿ ಹರಿದೀತು ಎಂಬ ನಂಬಿಕೆಯೊಂದಿಗೇ ಸದ್ಯದ ದೊಡ್ಡ ಬಿಕ್ಕಟ್ಟನ್ನು ಎದುರಿಸುವುದರ ಹೊರತಾಗಿ, ಮತ್ತಾವ ಮಾರ್ಗವೂ ಸದ್ಯಕ್ಕಿದ್ದಂತಿಲ್ಲ. ಈ ಮಾರ್ಗದಲ್ಲಿ ಬುದ್ಧನ ಮಾನವೀಯ ವೈಚಾರಿಕತೆ, ಬಸವನ ಆದ್ರ್ರ ಸಾಮಾಜಿಕತೆ ಮತ್ತು ಇವರೆಡರ ಪರಿಪಾಕದಂತಿರುವ ಗಾಂಧೀಜಿಯ ಸಮಗ್ರ ಕ್ರಿಯಾಶೀಲತೆ ನಮಗೆ ದಾರಿ ತೋರುವಂತಾಗಬೇಕು.

ಈ ಬಗ್ಗೆ ಕರ್ನಾಟಕದ ಚಿಂತಕರು, ಸಾಮಾಜಿಕ ಕಾರ್ಯಕರ್ತರು ಆಳವಾಗಿ ಯೋಚಿಸುವರು ಎಂದು ಆಶಿಸುತ್ತೇನೆ.