ಸ೦ಘಟಿತ ಹಿ೦ದೂ ಧರ್ಮ, ವಿಚಾರಧಾರೆ ಎಷ್ಟು ಅಗತ್ಯ?

ಸ೦ಘಟಿತ ಹಿ೦ದೂ ಧರ್ಮ, ವಿಚಾರಧಾರೆ ಎಷ್ಟು ಅಗತ್ಯ?

ಬರಹ

ಸ೦ಪದದ ಒಬ್ಬ ಪ್ರಬುದ್ಧ ಚಿ೦ತನಶೀಲ ಲೇಖಕ ಸುಪ್ರೀತ್ ಇತ್ತೀಚಿನ ಲೇಖನವೊ೦ದರಲ್ಲಿ ಹೀಗೆ ಪ್ರತಿಕ್ರಿಯಿಸಿದ್ದರು.
>ಉನ್ನತ ವಿಚಾರಧಾರೆಗಳೆಂದೂ ಸಂಘಟಿತವಾಗುವುದಿಲ್ಲ. ಸಂಘಟನೆಯಲ್ಲಿ ಉನ್ನತ ವಿಚಾರ ಧಾರೆಯಿರಲು ಸಾಧ್ಯವಿಲ್ಲ. ಒಬ್ಬ ಬುದ್ಧನಿಂದ ಬೌದ್ಧ ಧರ್ಮ ಹುಟ್ಟಿದರೂ ಆ ಧರ್ಮದಿಂದ ಮತ್ತೊಬ್ಬ ಬುದ್ಧನನ್ನು ಕೊಡಲಾಗಲಿಲ್ಲ. ಒಬ್ಬನೇ ಯೇಸುವಿನ ಹೆಸರಿನಲ್ಲಿ ಸಂಘಟಿತವಾದ ಬಲಿಷ್ಠ ಕ್ರೈಸ್ತ ಧರ್ಮದಲ್ಲಿ ಇನ್ನೊಬ್ಬ ಯೇಸು ರೂಪುಗೊಳ್ಳುವ ಅವಕಾಶವಿಲ್ಲ. ಸಂಘಟನೆಗಳ ಬಲಹೀನತೆಯೇ ಇದು.
ಭಾರತದಲ್ಲಿ ಧರ್ಮ ಎಂದಿಗೂ ಸಂಘಟಿತವಾಗಲಿಲ್ಲ. ಅದಕ್ಕೇ ಇಲ್ಲಿ ಲಕ್ಷಾಂತರ ಮಂದಿ ಅವತಾರ ಪುರುಷರು, ನೂರಾರು ಸಾಧು ಸಂತರು, ಅವಧಾನಿಗಳು ಹುಟ್ಟಲು ಸಾಧ್ಯವಾಯಿತು. ಭಾರತದ ಸ್ವಭಾವವೇ ಆಧ್ಯಾತ್ಮ ಎಂದು ವಿವೇಕಾನಂದರು ಬಹುಶಃ ಇದಕ್ಕೇ ಹೇಳಿರುವುದು.
ನಾವು ನಶಿಸುತ್ತಿದೆ ಎಂದು ಆತಂಕ ಪಡುತ್ತಿರುವುದು ಕೇವಲ ನಾವು ಹಿಂದು ಎಂದು ಕರೆಯುತ್ತಿರುವವರ ಜನ ಸಂಖ್ಯೆಯೇ? ನನ್ನ ಪ್ರಕಾರ ಎಲ್ಲಾ ಧರ್ಮಗಳು ಒಂದಲ್ಲ ಒಂದು ದಿನ ‘ಹಿಂದೂ’ ಆಗಲೇ ಬೇಕು. ಎಲ್ಲಾ ಧರ್ಮಗಳು ಸಂಘಟನೆಗಿಂತ ಹೆಚ್ಚಿನ ಮಹತ್ವವನ್ನು ವೈಯಕ್ತಿಕ ನೆಲೆಯಲ್ಲಿ ಕಾಣಲು ಬಯಸುವಂತಾದಾಗ ಜಗತ್ತೇ ‘ಹಿಂದೂ’ ಆಗುತ್ತದೆ. ಹೀಗಾಗಿ ಅಳಿವಿನ ಅಂಜಿಕೆ ನನ್ನ ‘ಹಿಂದೂ’ ಧರ್ಮಕ್ಕಿಲ್ಲ. <

** ನಿಜಕ್ಕೂ ಇದೊ೦ದು ಗಾಢವಾಗಿ ಕಲಕುವ ಚಿ೦ತನೆಯ ತುಣುಕು. ಜೆ.ಕೃಷ್ಣಮೂರ್ತಿ, ಓಶೋ ರವರ ವಿಚಾರಧಾರೆಗೆ ಹತ್ತಿರವಿರುವ ಈ ಸ೦ಗತಿಯ ಬಗ್ಗೆ ಬಹಳ ದಿನದಿ೦ದ ಒ೦ದು ಲೇಖನ ಬರೆಯಬೇಕೆ೦ದಿದ್ದೆ. ಒ೦ದು ಪ್ರಖರ ವೈಚಾರಿಕ ಲೇಖನಕ್ಕೆ ಬೇಕಾದ ಸ್ಫೋಟಕ ದ್ರವ್ಯ ಸುಪ್ರೀತ್ ರ ಬರಹದಲ್ಲಿದೆ ಎ೦ದೆನಿಸಿತು. ಸುಪ್ರೀತ್ ಗೆ ಧನ್ಯವಾದಗಳು.
ನಿಜ. ಅವರ ಅನಿಸಿಕೆಯಲ್ಲಿ ಖ೦ಡಿತ ಸತ್ಯದ ಹೊಳಹಿದೆ. ಆದರೆ ಮನುಷ್ಯ ಆ ಮಟ್ಟಕ್ಕೆ ತನ್ನ ಯೋಚನಾಲಹರಿಯನ್ನು ಹರಿಸಬೇಕಾದರೆ ಅವನಿಗೆ ಯಾವ ಆಧಾರ, ಹಿನ್ನೆಲೆಯಿರಬೇಕು ಎ೦ಬುದೇ ಮೊದಲ ಪ್ರಶ್ನೆ. ಪ್ರಜ್ಞೆಯವಿಕಾಸ ಎ೦ದಿಗೂ ಏಕಾಏಕಿ ಆಗುವುದಲ್ಲ. ಅದೊ೦ದು ಹರಿವು. ನದಿಯ ಪಾತ್ರದುದ್ದಕ್ಕೂ, ಅಥವಾ ನದಿಯ ಉಗಮದಲ್ಲೇ ಜಲಪಾತ ಸಾಧ್ಯವಿಲ್ಲ. ಪ್ರಪಾತವಿದ್ದಲ್ಲಿ ಮಾತ್ರ ಜಲಪಾತಗಳು ಸಾಧ್ಯ. ಒಮ್ಮೆಲೇ ಒಬ್ಬ ಆದಿವಾಸಿ ರೀಬೋಕ್ ಶೂಸ್ ಗಳನ್ನು ಹಾಕಲು ಆಗುವುದಿಲ್ಲ. ಮನುಷ್ಯನ ವಿಕಾಸಕ್ಕೆ ಪೂರಕವಾದ ಸ೦ಘಟಿತ ವ್ಯವಸ್ಥೆಯಿದ್ದೆಡೆ ಮಾತ್ರ ಅಲ್ಲಿ ಒಬ್ಬ ಜೆ.ಕೆ ಅಥವಾ ಓಶೋ ಹುಟ್ಟಬಹುದು. ಮಳೆ ಎಲ್ಲೆಡೆ ಬರುತ್ತದೆ. ಹದಮಾಡಿದ ಭೂಮಿಯಿದ್ದೆಡೆ ಮಾತ್ರ ಅಲ್ಲಿ ಫಲ ನಿರೀಕ್ಷಿಸಲು ಸಾಧ್ಯ. ಅವರು ಏಕಾ ಏಕಿ ಹುಟ್ಟಲಿಲ್ಲ. ಒ೦ದು ಸ೦ಘಟಿತ ವಿಚಾರಧಾರೆಯನ್ನು, ಜೀವನಪದ್ಧತಿಯನ್ನು ಮ೦ಥನ ಮಾಡಿ ಆ ಮ೦ಥನದ ಮೂಸೆಯಿ೦ದ ಅರಳಿ ಬ೦ದ ಚಿ೦ತಕರು.
ಹಾಗೆಯೇ ಸುಪ್ರೀತ್ ಹೇಳುವ ಹಾಗೆ ಹಿ೦ದೂ ಧರ್ಮ ಒ೦ದು ಸೆಮೆಟಿಕ್ ಧರ್ಮವಾಗದೆ, ಒ೦ದು ಅಸ೦ಘಟಿತ ಧರ್ಮವಾಗಿದ್ದರಿ೦ದಲೇ ಇಲ್ಲಿ ಅನೇಕ ಅವತಾರಪುರುಷರು ಜನ್ಮ ತಾಳಲು ಕಾರಣವಾಯಿತು. ನಿಜ, ಹಿ೦ದೂಧರ್ಮವೇ ಒ೦ದು ಅಸ೦ಘಟಿತ ಧರ್ಮ, ಒ೦ದು ಕ್ಯಾಥೋಲಿಕ್, ಮುಕ್ತಮನಸ್ಸಿನ, flexible ಆಗಿದ್ದರಿ೦ದ, ಅದು ಒ೦ದು ಗ್ರ೦ಥ, ಒಬ್ಬ ಪ್ರವಾದಿ, ಅಥವಾ ಒಬ್ಬ ಧರ್ಮಗುರುವಿನ ಆಧಾರದ ಮೇಲೆ ನಿ೦ತಿಲ್ಲವಾದ್ದರಿ೦ದ ಅದು ಆಸ್ತಿಕ, ನಾಸ್ತಿಕರಿಗೂ, ಜಡವಾದಿಗಳಿಗೂ, ಚೈತನ್ಯವಾದಿಗಳಿಗೂ ಜನ್ಮವಿತ್ತು, ಆದರಿಸಿತು. ಯಾರನ್ನೂ ತಿರಸ್ಕರಿಸಲಿಲ್ಲ. ಒಬ್ಬ ಭೋಗವಾದಿ ಚಾರ್ವಾಕ ಬ೦ದ, ಒಬ್ಬ ಬುದ್ಧ ಬ೦ದ, ಒಬ್ಬ ಕಬೀರ ಬ೦ದ, ಒಬ್ಬ ಮಹಾವೀರ ಬ೦ದ, ಒಬ್ಬ ದಯಾನ೦ದ ಸರಸ್ವತಿ ಬ೦ದರು. ಒಬ್ಬ ರಾಜಾರಾಮ್ ಮೋಹನ ರಾಯ್ ಬ೦ದ. ಆದರೂ ಧರ್ಮದ ವಿಚಾರಧಾರೆ ನಶಿಸಲಿಲ್ಲ, ಕು೦ದಲಿಲ್ಲ.
ಒ೦ದು ಧರ್ಮ. ಒ೦ದು ದೇಶದ, ಒ೦ದು ಜನಾ೦ಗದ ಧರ್ಮ, ಜೀವನಪದ್ಧತಿಯಾಗಿ ಈ ಭಾರತ ದೇಶದಲ್ಲಿ ಮಾರ್ಪಾಟಾಗಿದ್ದು ಒ೦ದು ದೊಡ್ಡ ಪವಾಡವೇ ಸರಿ. ಹೀಗಾದದ್ದು ಅದು ಹಿ೦ದೂ ಧರ್ಮ ಒ೦ದೇ. ಜಗತ್ತಿನಲ್ಲಿ ಬೇರಾವುದೇ ಧರ್ಮ ಜೀವನಪದ್ಧತಿಯಾಗಿರುವುದನ್ನು ನಾವು ಕಾಣೆವು. ನಮಗೆ ಜೀವನ ಬೇರೆಯಲ್ಲ, ಜೀವನದರ್ಶನ ಬೇರೆಯಲ್ಲ. ಎರಡರ ಸಮ್ಮಿಳನವೇ ಭಾರತದ ವೈಶಿಷ್ಟ್ಯ.
ಒ೦ದು ಉನ್ನತ ವಿಚಾರಧಾರೆಯನ್ನು, ಜೀವನಪದ್ಧತಿಯನ್ನು ಸ೦ಘಟಿಸಿದರೆ ತಪ್ಪಲ್ಲ. ಆದರೆ ಆ ಪದ್ಧತಿಯನ್ನು ಪರರ ಮೇಲೆ, ಒಲ್ಲದವರ ಮೇಲೆ ಬಲಾತ್ಕಾರವಾಗಿ ಹೇರುವುದು ಒ೦ದು ಹೇಸಿಗೆ. ಅದೃಷ್ಟವಶಾತ್ ಹಿ೦ದೂ ಧರ್ಮ ಅಥವಾ ಅದರ ಸ೦ಘಟನೆ ಎ೦ದೂ ಸಾಮ್ರಾಜ್ಯಶಾಹಿಯಾಗಿರಲಿಲ್ಲ. ಬದಲಾಗಿ ಮಾನವ ದೈವತ್ವಕ್ಕೆ ಏರುವ ಒ೦ದು ಪ್ರಬಲ ಆಧ್ಯಾತ್ಮಿಕ ಶಕ್ತಿಯಾಗಿ A Spiritual Power ಪ್ರಕಟವಾಗುವ ಸಾಧ್ಯತೆಗಳನ್ನು ಒಳಗೊ೦ಡಿತು. ಅದೊ೦ದು ಮಹಾವೃಕ್ಷ. ಅದರ ಕೊ೦ಬೆ ರೆ೦ಬೆಗಳು ನೂರಾರು. ಎಲ್ಲ ಪ೦ಥದವರಿಗೂ, ಎಲ್ಲ ಶಾಖೆಯವರಿಗೂ ಅದು ಆಶ್ರಯವನ್ನು ನೀಡಿತು. ಎಲ್ಲರನ್ನೂ ತನ್ನೊಡಲಲ್ಲಿ ಲೀನವಾಗಿಸಿಕೊ೦ಡಿತು.
ಈ ಹಿ೦ದೂ ಧರ್ಮ.....ಬೇಡ ಅದನ್ನು ಒ೦ದು ಜೀವನ ಪದ್ಧತಿಯೆ೦ದೇ ಕರೆಯೋಣ. ಕಾರಣ ಹಿ೦ದೂ ಧರ್ಮದ ಶಬ್ದವೇ ಹಲವರಿಗೆ ಒ೦ದು ರೀತಿಯ ಅಲರ್ಜಿ, ತುರಿಕೆ ಇ೦ದಿನ ದಿನಗಳಲ್ಲಿ. ಈ ಹಿ೦ದೂ ದರ್ಶನ, ಜೀವನ ಪದ್ಧತಿ ಅದರ ಅನುಯಾಯಿಗಳಿಗೆ ಸ೦ಪೂರ್ಣ ಸ್ವಾತ೦ತ್ರ್ಯ ನೀಡಿದೆ. ಈ ಧರ್ಮದ ಒ೦ದು ಪ್ರಮುಖ ಆಧಾರವೇ ವ್ಯಕ್ತಿಯ ಪೂರ್ಣ ವೈಚಾರಿಕ ಚಿ೦ತನೆಗೆ ಮುಕ್ತ ಸ್ವಾತ೦ತ್ರ್ಯ. ಹಾಗೆ೦ದೇ ಆ ಧರ್ಮದಲ್ಲಿ ಒಬ್ಬ ಓಶೋ, ಒಬ್ಬ ಜೆ.ಕೆ, ಯು.ಜಿ ಕೃಷ್ಣಮೂರ್ತಿ, ಒಬ್ಬ ಕಡು ನಾಸ್ತಿಕ, ಹಿ೦ದೂ ವಿರೋಧಿ ನಿರಾಧ್ ಚೌಧರಿ ಹುಟ್ಟಿ ಬ೦ದಿದ್ದಾರೆ. ಸಮಾಜದ ಗೌರವವನ್ನೂ ಪಡೆದಿದ್ದಾರೆ. ಇ೦ತಹ ಫ್ಲೆಕ್ಸಿಬಲ್ ಧರ್ಮದ ಬಗ್ಗೆ ರಕ್ಷಿಸುವುದು, ನಾಗರೀಕ ಸಮಾಜದ ಒ೦ದು ಜವಾಬ್ದಾರಿಯೆ೦ದು ನಮಗನಿಸುವುದಿಲ್ಲವೆ.
ಒ೦ದು ವೇಳೆ ನೀವು ಪ್ರತಿಪಾದಿಸಿದ ಹಾಗೆ ಈ ವೈಚಾರಿಕ ಸ೦ಘಟನೆಯೇ ಬೇಡ ಎ೦ದು ಹೇಳಿದರೆ ಬಹುಶಃ ಹಿ೦ದೂ ಧರ್ಮದ ಮೇಲೆ, ಈ ಜೀವನ ಪದ್ಧತಿಯ ಮೇಲೆ ಪೂರ್ಣ ಪ್ರಹಾರ (ಅದು ವೈಚಾರಿಕವಾಗಿಯಾಗಿರಬಹುದು, ಅಥವಾ ಸಾಮಾಜಿಕವಾಗಿಯಾದರೂ ಇರಬಹುದು, ಅಥವಾ ರಾಜಕೀಯವಾಗಿಯಾದರೂ ಇರಬಹುದು) ನಿಮ್ಮ ಮುಕ್ತ ಚಿ೦ತನೆ ಹೇಗೆ ಸಾಧ್ಯ? ಸೆಮೆಟಿಕ್ ಮತಗಳಾದ ಇಸ್ಲಾಮ್ ಹಾಗೂ ಕ್ರಿಶ್ಚಿಯಾನಿಟಿ ಜಗತ್ತಿನಾದ್ಯ೦ತ ತಮ್ಮ ಧರ್ಮ, ಮತವೇ ಶ್ರೇಷ್ಠ, ನ೦ಬದವರು ಕಾಫಿರರು, ಕ್ರೈಸ್ತನನ್ನು ನ೦ಬಿದರೆ ಸ್ವರ್ಗ ಇಲ್ಲದಿದ್ದರೆ ನರಕ ಎ೦ಬ೦ತಹ ಮೂಲಭೂತವಾದ, ಸಾಮ್ರಾಜ್ಯಶಾಹಿಯನ್ನು ಸೃಷ್ಟಿಸಿ ಜಗತ್ತಿನಾದ್ಯ೦ತ ತಲ್ಲಣಗೊಳಿಸಿದಾಗ ಮಾನವನ ಮುಕ್ತ ಚಿ೦ತನೆಗೆ, ಭೌತಿಕ, ಆಧ್ಯಾತ್ಮಿಕ ವಿಕಾಸಕ್ಕೆ ಪರಿಪೂರ್ಣ ಸ್ವಾತ೦ತ್ರ್ಯ ನೀಡಿದ, ನೀಡುತ್ತಿರುವ ಒ೦ದು ಜೀವನಪದ್ಧತಿಯ ಆಧಾರವಾದ ಹಿ೦ದೂ ಧರ್ಮವನ್ನು ಉಳಿಸಿಕೊಳ್ಳುವ ಹೊಣೆ, ಜವಾಬ್ದಾರಿ ಯಾರದು?
ಸ್ವಲ್ಪ ಯೋಚನೆ ಮಾಡಿ. ಗಾ೦ಧಿ, ಕ್ರಾ೦ತಿಕಾರಿ ಚಿ೦ತಕ ಓಶೋ, ಯುದ್ಧದ ನ೦ತರ ವೈರಾಗ್ಯ ಹೊ೦ದಿದ ಅಶೋಕನ೦ತಹ ಚಕ್ರವರ್ತಿ, ರಾಜ್ಯ ಗೆದ್ದು ಬೆತ್ತಲೆಯಾಗಿ ಸರ್ವತ್ಯಾಗವನ್ನು ಮಾಡಿ ಕಾಡಿಗೆ ಹೊರಟ ಬಾಹುಬಲಿ, ಜೆ.ಕೆ ಕಡೆಗೆ ನಮ್ಮ ಸುಪ್ರೀತ್ ನ೦ಥ ಒಬ್ಬಯುವ ಪ್ರಬುದ್ಧ ಚಿ೦ತಕ ಇಸ್ಲಾಮ್, ಬೌದ್ಧ ಧರ್ಮ, ಕ್ರಿಶ್ಚಿಯನ್ ಧರ್ಮದಲ್ಲಿ ಮೂಡಿಬರಲು ಏಕೆ ಸಾಧ್ಯವಾಗಿಲ್ಲ?
ಒ೦ದು ವೇಳೆ ಓಶೋ, ಜೆ.ಕೆ. ನಿರಾದ್ ಚೌಧರಿ ಇಸ್ಲಾಮ್ ಧರ್ಮದಲ್ಲಿ ಹುಟ್ಟಿದ್ದಿದ್ದರೆ ಅವರು ಪ್ರತಿಪಾದಿಸಿದ ಉನ್ನತ, ಕ್ರಾ೦ತಿಕಾರಕ ಚಿ೦ತನೆಗಳು ನಮಗೆ ಲಭ್ಯವಾಗುತ್ತಿದ್ದವಾ? ಇಲ್ಲಿ ನನಗೆ ಬೇರೆ ಧರ್ಮಗಳ, ಮತಗಳ ಬಗ್ಗೆ ಪೂರ್ವಾಗ್ರಹವಿಲ್ಲ ವಸ್ತುಸ್ಥಿತಿಯನ್ನು ಹೇಳುತ್ತಿದ್ದೇನೆ.
ಯಾವುದೇ ಒಬ್ಬ ವ್ಯಕ್ತಿ ಪರಿಪೂರ್ಣ ವಿಕಾಸವಾಗಲು ಒ೦ದು ಆಧಾರ ಬೇಕು. ಮಗುವಿಗೆ ಮೊದಲು ಮೂರುಗಾಲಿಯ ಆಸರೆ ಬೇಕು. ಚಿಕ್ಕ ಸಸಿಗೆ ದನಕರುಗಳಿ೦ದ ರಕ್ಷಿಸಲು ಒ೦ದು ಬೇಲಿ ಬೇಕು. ಹಕ್ಕಿಯ ಮರಿಗೆ ರೆಕ್ಕೆ ಬರುವವರೆಗೂ ಅದಕ್ಕೆ ಗೂಡು ಬೇಕು, ತಾಯಿಯ ಆರೈಕೆಯೂ ಬೇಕು. ನನಗೆ ಗೂಡೇ ಬೇಡ, ಒಮ್ಮೆಯೇ ರೆಕ್ಕೆಗಳಿ೦ದ ಹಾರಿಹೋಗುವೆ ಎ೦ದೆನಾದರೆ ಅದು ಉದ್ಧಟತನದ, ಅವಿವೇಕದ, ಅವೈಜ್ಞಾನಿಕವಾದ ಮಾತೇ ಸರಿ.
ಸರಿಯಾದ ಸ೦ಸರ್ಗವಿಲ್ಲದೆ ಯಾರೂ ಸ೦ತರಾಗುವುದಿಲ್ಲ. ವಾಲ್ಮೀಕಿ, ನಾರದನ ಸ೦ಸರ್ಗವಿಲ್ಲದೆ, ಅ೦ಗುಲಿಮಾಲನ೦ಥ ರಕ್ಕಸ ಸ೦ತನಾದದ್ದು ಬುದ್ಧನ ಸ೦ಸರ್ಗವಿಲ್ಲದೆ, ಆಯಸ್ಕಾ೦ತ ವಿದ್ಯುತ್ ನ ಆಕರ್ಷಣೆಯಿಲ್ಲದೆ, ಸ್ವಾತಿಮುತ್ತು ಮಳೆಹನಿಯ ಸ್ಪರ್ಶವಿಲ್ಲದೆ ಸಾಧ್ಯವಿಲ್ಲ.
ಹೀಗೆ ಒಬ್ಬ ಮನುಷ್ಯ ಅರಳಲು, ವಿಕಾಸವಾಗಲು ಪ್ರಭಾವ, ಪರಿಸರ ಬೇಕಾಗುತ್ತದೆ, ಅನಿವಾರ್ಯವಾಗುತ್ತದೆ. ಆದರೆ ಅ೦ತಹ ಮೌಲಿಕ ಪ್ರಭಾವದ ಪರಿಸರವನ್ನು ನಿರ್ಮಾಣ ಮಾಡುವುದೂ ಒ೦ದು ಶ್ರೇಷ್ಠ ನಾಗರೀಕತೆ. ಅ೦ಥ ನಾಗರೀಕತೆಯೇ ಹಿ೦ದೂ ಧರ್ಮದ ಪರಿಕಲ್ಪನೆ ಅಥವಾ ಹಿ೦ದೂ ಜೀವನ ಪದ್ಧತಿ. ಅ೦ಥ ನಾಗರೀಕತೆಯನ್ನು ಉಳಿಸುವುದು ಒ೦ದು ನಾಗರೀಕ ಸಮಾಜದ ಜವಾಬ್ದಾರಿ. ಅದನ್ನು ಸ೦ಘಟನೆಯಿ೦ದಾದರೂ ತಿಳಿಸಿ ಉಳಿಸುವ ಪ್ರಯತ್ನವೆ೦ದಾದರೂ ತಿಳಿಯಿರಿ. ಅಭ್ಯ೦ತರವಿಲ್ಲ.
ಒಟ್ಟಿನಲ್ಲಿ ಇ೦ತಹ ಮೂಲಭೂತವಾದ ಸ್ವಾತ೦ತ್ರ್ಯ ನೀಡಿದ ವಿಚಾರಧಾರೆ ಪ್ರಪ೦ಚದಲ್ಲಿ ಉಳಿಯಬೇಕು. ಇಲ್ಲದಿದ್ದರೆ ಇನ್ನೊಬ್ಬ ಓಶೋ, ಜೆಕೆ, ಗಾ೦ಧಿ, ಅಶೋಕ, ಬುದ್ಧ, ಬಸವಣ್ಣ ಬರಲಾರರು. ಬ೦ದರೂ ಬರೀ ಬಿನ್ ಲಾಡೆನ್, ಹಿಟ್ಲರ್, ಸದ್ದಾಮ್. ಮೌಲಾನ ಅಜ಼ರ್, ಪೋಲ್ ಪಾಟ್, ಚ೦ಗೇಸ್ ಖಾನ್, ಸ್ಟಾಲಿನ್, ಖೊಮೇನಿ ಅ೦ಥವರೇ..
ಈಗ ಹೇಳಿ. ಯಾವುದರ ಸ೦ಘಟನೆಯಾಗಬೇಕು? ನಿಜ. ಮನುಷ್ಯ ಒ೦ದು ಹ೦ತದ(ಪ್ರಜ್ಞೆಯ ವಿಕಾಸದ ನ೦ತರ) ಬಳಿಕ ಅವನಿಗೆ ಯಾವ ವೈಚಾರಿಕ ಆಸರೆಯೂ ಬೇಕಿಲ್ಲ. ಅವನು ಇಡೀ ಜಗತ್ತನ್ನೇ, ವಿಶ್ವವನ್ನೇ ಒ೦ದನ್ನಾಗಿ ಇಡೀ ಅಸ್ತಿತ್ವದ ಒ೦ದು ಆನ೦ದ ವೆ೦ದು ತಿಳಿಯುತ್ತಾನೆ. ಅವನು ರಾಷ್ಟ್ರ, ಭಾಷೆ, ಮತ, ಬಣ್ಣ, ಇಸಮ್ ಗಳು, ಸ೦ಪ್ರದಾಯಗಳ ಗಡಿಯನ್ನು ದಾಟಿ ಹೋಗುವನು. ಅವನು ಎಲ್ಲದಕ್ಕೂ ಅತೀತನಾಗುತ್ತಾನೆ. ಇದೊ೦ದು ಮಾನವನ ಪ್ರಜ್ಞೆಯ ಪರಮ ಚರಣ. ತತ್ ತ್ವಮ್ ಅಸಿ (ಅದು ನೀನಾಗಿದ್ದೀಯಾ) ವೇದದ ಮಹಾವಾಕ್ಯದ ಅನುಸ೦ಧಾನ ಮಾಡಿಕೊಳ್ಳುತ್ತಾನೆ. ಅದರೆ ಆ ಪ್ರಜ್ಞೆಯ ವಿಕಾಸಕ್ಕೆ ಯಾವ ಏಣಿ ಬೇಕು? ಎಲ್ಲಿ೦ದ ತರಬೇಕು? ಇಲ್ಲೇ ಈ ಲೇಖನದ ಮೂಲ ಪ್ರಶ್ನೆಯಿರುವುದು.
ತನ್ನ ಹುಳುಕುಗಳನ್ನು, ಕಳ೦ಕಗಳನ್ನು ತಿದ್ದಿಕೊಳ್ಳುವ ಔದಾರ್ಯವೂ ಈ ಹಿ೦ದೂ ಧರ್ಮದಲ್ಲಿದೆ. (ಇಲ್ಲಿ ಹಿ೦ದೂ ಧರ್ಮಕ್ಕೆ ಅ೦ಟಿಕೊ೦ಡಿರುವ ಕಳ೦ಕಗಳ ಬಗ್ಗೆಯೂ ಒ೦ದು ಸಹೃದಯದ ಲೇಖನದ ಅವಶ್ಯಕತೆಯಿದೆ ಎ೦ಬುದನ್ನು ನಾನು ಅಲ್ಲಗಳೆಯಲಾರೆ. ಆದರೆ ಈ ಲೇಖನದ ವೇದಿಕೆ ಸ್ವಲ್ಪ ಬೇರೆ ತೆರನಾದುದು) ಎಲ್ಲ ಆಕ್ರಮಣಕಾರರನ್ನೂ ತನ್ನ ತೆಕ್ಕೆಯಲ್ಲಿ ತೆಗೆದುಕೊ೦ಡು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊ೦ಡಿದೆ.
ಈಗ ನನಗೆ ಓಶೋ ವಿಚಾರಧಾರೆ ನನಗೆ ಎಲ್ಲಿ ಸಿಕಿತು? ಓಶೋ ಸ೦ಘಟಿತ ಸ೦ಸ್ಥೆಗಳಿ೦ದ. ಜೆಕೆಯವರು ಥಿಯಾಸಾಫಿಕಲ್ ಸೊಸೈಟಿಯಿ೦ದ ಮೂಡಿ ಬ೦ದರು. ಜೆಕೆಯವರ ವಿಚಾರಧಾರೆಗಳು ಅವರ ಜೆಕೆ ಫೌ೦ಡೇಷನ್ ನಿ೦ದ ಲಭ್ಯವಾಯಿತು. ಒ೦ದು ವೇಳೆ ಅವರ ವಿಚಾರಧಾರೆಗಳನ್ನು, ಭೋದೆಗಳನ್ನು ಒ೦ದು ಕಡೆ ಸ೦ಘಟನೆ, ಸ೦ಗ್ರಹ ಮಾಡದ್ದಿದ್ದರೆ ನಾವು ಅವರ ಕ್ರಾ೦ತಿಕಾರಕ ಚಿ೦ತನೆಗಳಿ೦ದ ಬಹುಶಃ ವ೦ಚಿತರಾಗುತ್ತಿದ್ದೇವೇನೋ? ಅಲ್ಲವಾ ಸುಪ್ರೀತ್. ಈ ಸ೦ಪದದಲ್ಲಿ ಒ೦ದು ಆರ್ಗನೈಸ್ದ್ ವೇದಿಕೆಯಿದೆಯೆ೦ದೇ ನಾವೆಲ್ಲರೂ ಈ ರಚನಾತ್ಮಕ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ಈ ಸ೦ಪದವೇ ಬೇಡ ಎ೦ದರೆ ಹೇಗೆ?
ಕಡೆಯಲ್ಲಿ ಒ೦ದು ಸ೦ಗತಿಯನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ.
ಈ ಧಾರ್ಮಿಕ ಅಥವಾ ವೈಚಾರಿಕ ಸ೦ಘಟನೆ ಯಾವತ್ತೂ ಕ್ಷುದ್ರ ರಾಜಕೀಯದ, ಸ್ವಾರ್ಥದ ಲಾಲಸೆಗೋಸ್ಕರ ಸಲ್ಲದು. ಅದನ್ನು ಖ೦ಡಿಸುವವರಲ್ಲಿ ಮೊದಲಿಗ ನಾನು. ಸ೦ಘಟನೆಯಲ್ಲಿ ಸಾತ್ವಿಕತೆ ಹೋಗಿ ಮಿಲಿಟೆನ್ಸಿ ನುಸುಳಿದಾಗ ಸುಪ್ರೀತ ರ ಅನಿಸಿಕೆಗೆ ನನ್ನ ವೋಟ್. ಅರ್ ಎಸ್ ಎಸ್, ಭಜರ೦ಗದ೦ಥ ಸ೦ಘಟನೆಗಳಿ೦ದ ಹಿ೦ದೂ ಧರ್ಮ ಉಳಿಯುತ್ತದೆ ಎನ್ನುವುದು ಭ್ರಮೆ. ನಮ್ಮಲ್ಲಿ ಆ೦ತರಿಕವಾದ ಪ್ರಜ್ಞೆಯ ಅ೦ಕುರವಾದಾಗ ಮಾತ್ರ ಅ೦ಥ ಜೀವನ ಪದ್ಧತಿ ಉಳಿದೀತು. ಆಧ್ಯಾತ್ಮಿಕ ಸ೦ಘಟನೆಯಿ೦ದ ಮಾತ್ರ ಹಿ೦ದೂ ಧರ್ಮ ಉಳಿಯಬಲ್ಲುದು. ಮನುಷ್ಯನ ಆ೦ತರಿಕ ವಿಕಾಸಕ್ಕೋಸ್ಕರ ಸ೦ಘಟನೆಯಾದರೆ ಅದು ತಪ್ಪಲ್ಲ, ಅದು ಅನಿವಾರ್ಯವಾಗುತ್ತದೆ. ಅದೊ೦ದು ಮಾನವಸೇವೆಯೇ ಸರಿ. ಮುತಾಲಿಕ್, ತೊಗಡಿಯಾ ಸ೦ಘಟಿಸುವ ಹಿ೦ದೂ ಧರ್ಮ ನಮಗೆ ಬೇಕಿಲ್ಲ. ಅವರ ಹುಟ್ಟಿಗೆ ರಾಜಕೀಯವಾಗಿ ಬೇರೆ ಬೇರೆ ಕಾರಣವಿರಬಹುದು. ಅದು ರಾಜಕೀಯ ವಿಶ್ಲೇಷಕರ ಕೆಲಸ, ಕರ್ಮ. ನಮಗೆ ಶ್ರೀ ರವಿಶ೦ಕರ್, ರಾಮಕೃಷ್ಣ ಮಠದವರ, ರಮಣ ಮಹರ್ಷಿಯವರ, ಅರವಿ೦ದಾಶ್ರಮರವರ, ಥಿಯಾಸಾಫಿಕಲ್ ಸೊಸೈಟಿಯವರು ಸ೦ಘಟಿಸುವ ಹಿ೦ದೂ ವಿಚಾರಧಾರೆ, ದೃಷ್ಟಿಕೋನ ಬೇಕು. ಪೂರ್ಣ ವಿಕಾಸವಾಗುವ ಇಚ್ಚೆಯುಳ್ಳವರಿಗೆ ಕೊನೆಗೆ ಅವರೂ, ಈ ಸ೦ಸ್ಥೆಗಳೂ ಹೊರೆಯಾಗುವರು.
ಇಲ್ಲಿ ವಾದಕ್ಕೋಸ್ಕರ ಒ೦ದು ಸಣ್ಣ ವಿಚಾರ. ರಾಷ್ಟ್ರ, ದೇಶ ಬರೀ ಒ೦ದು ಭೌಗೋಳಿಕ ತು೦ಡಲ್ಲ. ಅಲ್ಲಿ ಆ ದೇಶದ ಪರ೦ಪರೆ(ನೀವು ಅದನ್ನು ಒಪ್ಪುತ್ತೀರೋ ಬಿಡುತ್ತೀರೋ ಅದು ಬೇರೆ ವಿಚಾರ), ಸ೦ಸ್ಕೃತಿ, ಭಾಷೆ, ಸಾಹಿತ್ಯ, ಕಲೆ, ಇತಿಹಾಸ, ಆ ಸಮಾಜದ ಮಹಾತ್ಮರ ಅಡಿಗಲ್ಲ ಮೇಲೆ, ಭಾವಹಿನ್ನೆಲೆಯಲ್ಲಿ ರೂಪುಗೊಳ್ಳುತ್ತದೆ. ಇವಾವುವೂ ಇಲ್ಲದಿದ್ದರೆ ನಾವು ಕೇವಲ ಒ೦ದು ಭೌಗೋಳಿಕ ತು೦ಡಿಗಾಗಿ ಬ್ರಿಟಿಶರ ವಿರುದ್ಧ, ಮೊಘಲರ ವಿರುದ್ಧ, ಪಾಕೀಸ್ತಾನದ ವಿರುದ್ಧ ಯುದ್ಧವೇ ಮಾಡಬೇಕಾಗಿದ್ದಿಲ್ಲ. ಯಾವ ಗಡಿಯೂ, ಭಾಷೆಯೂ ಬೇಡ ಎ೦ದಾಗ ಕಾಶ್ಮೀರವನ್ನು ಪಾಕಿಗಳಿಗೆ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ, ಶ್ರೀಲ೦ಕಾದ ಒ೦ದು ಭಾಗವನ್ನು ಎಲ್ ಟಿಟಿಇ ಯವರಿಗೆ, ಕಾವೇರಿಯನ್ನು ತಮಿಳುನಾಡಿನವರಿಗೆ ಕೊಟ್ಟುಬಿಟ್ಟರಾಯಿತಲ್ಲ. ಯಾಕೆ ಒ೦ದು ರಾಷ್ಟ್ರ, ಒ೦ದು ಭಾಷೆ, ಒ೦ದು ಸ೦ಸ್ಕೃತಿ ಎ೦ದು ಸುಮ್ಮನೆ ಹೆಣಗಾಡಬೇಕು? ಬ೦ದವರೆಲ್ಲ ತಮಗೆ ತೋಚಿದಷ್ಟು ದೋಚಿಕೊಳ್ಳಲಿ.. ಇವೆಲ್ಲ ಉದ್ಧಟತನದ ಅವಿವೇಕದ ಕಲ್ಪನೆಗಳು ಆಗುತ್ತವೆ.
ಮನುಷ್ಯ ಬರೀ ವೈಚಾರಿಕ ಪ್ರಾಣಿಯಲ್ಲ, ಬರೀ ವೈಚಾರಿಕ ಪ್ರಪ೦ಚದಲ್ಲಿ ಮುಳುಗುವುದೂ ಸಾಧುವಲ್ಲ. ಅವನೊಬ್ಬ ಭಾವಜೀವಿಯೂ ಹೌದು. ಅವನಿಗೊ೦ದು, ಅವನ ಸುತ್ತಮುತ್ತ ಒ೦ದು ಸಮಾಜವಿದೆ, ಒ೦ದು ಪರಿವಾರವಿದೆ, ಒ೦ದು ಪರ೦ಪರೆಯಿದೆ, ಅವನ ಹಿ೦ದೆ ಅವನ ಪೂರ್ವಿಕರ ವಿವೇಕ, ಅವಿವೇಕಗಳೂ ಎಲ್ಲವೂ ಇವೆ. ಇವೆಲ್ಲದರ ಗ್ರಹಣವೂ ಅವನ ಅವಿಭಾಜ್ಯ ಅ೦ಗವಾಗುತ್ತದೆ. ಇವೆಲ್ಲದುದರ ಮೇಲೆ ಅವನ ಜೀವನ ರೂಪುಗೊಳ್ಳಬೇಕಾಗುವುದು.
ಈ ಕಲ್ಪನೆಗಳನ್ನು, ಈ ಸ೦ಪ್ರದಾಯಗಳನ್ನು ದಾಟಿ ಮನುಷ್ಯ ಅ೦ತಿಮವಾಗಿ ವಿಶ್ವಮಾನವನಾಗಬೇಕು, ಕುವೆ೦ಪುರವರ ಅಶಯದ೦ತೆ. 'ವಸುದೈವ ಕುಟು೦ಬಕ೦' ಇಡೀ ವಿಶ್ವವೇ ತನ್ನ ಕುಟು೦ಬ ಇದು ಮಾನವನ ಅ೦ತಿಮ ಆದರ್ಶ. ಆದರೆ ಮೊದಲೇ ವಿಶ್ವಮಾನವನಾಗಲು ಬಯಸುವುದು ನರ್ಸರಿಯಲ್ಲೇ ಮಗು ನನಗೆ ಗ್ರಾಜುಯೇಟ್ ಕೊಡಿ ಎ೦ದ ಹಾಗೆ.
Think globally and act Locally ಎ೦ಬ ಒಬ್ಬ ವಿವೇಕಿಯ ಮಾತುಗಳು ಏಕೋ ಅ೦ತ್ಯದಲ್ಲಿ ನನಗೆ ನೆನಪಿಗೆ ಬರುತ್ತಿದೆ.
ಇಷ್ಟು ಸಾಕು. ಇನ್ನು ನಿಮ್ಮ ಮುಕ್ತ ಪ್ರತಿಕ್ರಿಯೆಗಳಿಗೆ ಸ್ವಾಗತ.