ಹಂದಿ ಜ್ವರ ತೋರಿಸಿದ ಒಂದು ರಾತ್ರಿ ಭಾಗ ೨

ಹಂದಿ ಜ್ವರ ತೋರಿಸಿದ ಒಂದು ರಾತ್ರಿ ಭಾಗ ೨

ಬರಹ

                          ಮಾರ್ಗ ಮಧ್ಯದಲ್ಲಿ ಕ್ಯಾಶ್ ಫಾರ್ಮಸಿಗೆ ಫೋನ್ ಮಾಡಿದೆ. ಅವರು ನಮ್ಮಲ್ಲಿ ಟ್ಯಾಮಿ ಫ್ಲೂ ಮಾತ್ರೆ ಇಲ್ಲ. ನೀವು ರಾಜೀವ್ ಗಾಂಧಿ ಇನ್ಸ್‘ಟಿಟ್ಯೂಟ್ ಗೇ ಹೋಗಬೇಕು ಎಂದರು. ಮಳೆ ಜೋರಾಗಿತ್ತು. ರಾಜೀವ್ ಗಾಂಧಿ ಇನ್ಸ್‘ಟಿಟ್ಯೂಟ್ ತಲುಪಿದೆವು. ರವಿ ಹೊರಗೆ ಕಾದ, ನಾನು ಒಳಗೆ ಹೋದೆ. ದೊಡ್ಡ ಹಾಲ್ ಅಲ್ಲೊಬ್ಬರು ಇಲ್ಲೊಬ್ಬರು ಜನ, ಅಲ್ಲೇ ಒಂದು ರೂಮ್ ಅದರ ಮೇಲೆ ಒಂದು ಹಾಳೆಯಲ್ಲಿ ಸ್ಕೆಚ್ ಪೆನ್ ನಲ್ಲಿ ಸೊಟ್ಟ ಸೊಟ್ಟಗೆ ’H1 N1' ಅಂತ ಬರೆದಿತ್ತು ಅಲ್ಲಿ ಹೋದೆ, ಅದೊಂದು ಹೆಚ್ಚು ಕಮ್ಮಿ ಖಾಲಿ ರೂಮ್ ಒಂದು ಟೇಬಲ್, ಒಂದು ಖುರ್ಚಿ, ಒಂದು ಬೀರು ಮತ್ತು ಆ ಖುರ್ಚಿಯ ಮೇಲೆ ಆಸೀನನಾದ ಅವತ್ತಿನ ಪೇಪರ್ ಓದುತ್ತಾ ಕುಳಿತ ಮಹಾನುಭಾವ..ನಾನು ಅವನನ್ನು ಮಾತಾಡಿಸಿದೆ, ನಿಧಾನವಾಗಿ ಕತ್ತೆತ್ತಿ ನನ್ನ ಮೇಲೆ ದಯೆ ತೋರಿಸಿದ..ಏನು ಎಂಬಂತೆ ಹುಬ್ಬೇರಿಸಿ ಕರುಣೆ ವ್ಯಕ್ತ ಪಡಿಸಿದ. ನಾನು ಡಾಕ್ಟ್ರ ಪ್ರಿಸ್ಕ್ರಿಪ್ಷನ್ ತೋರಿಸಿದೆ..ಪುರುಸೊತ್ತಾಗಿ ನೋಡಿದ..ನಂತರ ಮೆಲ್ಲಗೆ ಕತ್ತೆತ್ತಿ ಹೇಳಿದ "ಈಗ ಸಿಗಲ್ಲ ಮೇಡಂ ೮.೦೦ಕ್ಕೆ ಫಾರ್ಮಸಿ ಕ್ಲೋಸ್ ಆಗಿಬಿಡತ್ತೆ. ಬೀಗ ಬಿದ್ದಾಯ್ತು. ನೀವು ಸ್ವಲ್ಪ ಮುಂಚೆ ಬರಬೇಕಿತ್ತು. ಬೀಗದ ಕೈ ನನ್ನ ಹತ್ರ ಇಲ್ವಲ್ಲಾ??" ಅಷ್ಟರಲ್ಲಿ ಅಲ್ಲಿಗೆ ಬಂದ ನರ್ಸ್ ಒಬ್ಬಳು "ಇಲ್ಲೇ ಸ್ವಲ್ಪ ಮುಂದೆ ಹೋಗಿ ಮೇಡಂ ರಾಮ್ ದೇವ್ ಮೆಡಿಕಲ್ಸ್ ಅಂತ ಸಿಗತ್ತೆ ಅಲ್ಲಿ ನಿಮಗೆ ಖಂಡಿತಾ ಸಿಗತ್ತೆ" ಅಂದಳು ನಾನು ಹೊರಗೋಡಿದೆ. ಸೀಟಿಗೆ ತಲೆಯಾನಿಸಿ ಸುಸ್ತಾಗಿ ಒರಗಿದ್ದ ರವಿ ಚಕ್ಕನೆ ಅಲರ್ಟಾಗಿ ಎದ್ದು "ಏನಾಯ್ತು ಸಿಕ್ತ?" ಅಂದ "ಇಲ್ಲ ಇಲ್ಲೇ ಸಿಗತ್ತಂತೆ ರಾಮ್ ದೇವ್ ನಲ್ಲಿ" ಅಂದೆ. ಸರಿ ತಿರುಗಿಸಿಕೊಂಡು ಅಲ್ಲಿ ಹೊರಟೆವು, ಆ ರಸ್ತೆಯುದ್ದಕ್ಕೂ ಮೆಡಿಕಲ್ ಶಾಪ್ ಗಳು ನಿಷ್ಪಕ್ಷಪಾತವಾಗಿ ಎಲ್ಲ ಶಾಪ್ ಗಳಲ್ಲೂ ವಿಚಾರಿಸಿದೆವು..ಊಹೂಂ ಎಲ್ಲೂ ಇಲ್ಲ..ಅಷ್ಟು ಹೊತ್ತಿಗೆ ರಾತ್ರಿ ೯.೩೦. ಒಂದು ಶಾಪ್ ನವರು ಕ್ಯಾಶ್ ಫಾರ್ಮಸಿ ಎದುರಿಗೆ ನಿರ್ಮಲ ಫಾರ್ಮಸಿಯಲ್ಲಿರಬಹುದು ವಿಚಾರಿಸಿ ಎಂದು ಅದರ ನಂಬರ್ ಕೊಟ್ಟರು. ಸರಿ ಫೋನ್ ಮಾಡಿದೆ. ಇನ್ನೊಬ್ಬ ಮಹಾನುಭಾವ ಎತ್ತಿಕೊಂಡ, ಯಾರಿಗೆ ಜ್ವರ ಏನು ಕಥೆ ಎಲ್ಲ ಕೇಳಿಕೊಂಡ ನಂತರ ಹೇಳಿದ " ನನ್ನಲ್ಲಿದೆ ಮೇಡಂ ಆದ್ರೆ ಅಂಗಡಿ ಮುಚ್ಚಿಬಿಟ್ಟಿದ್ದೇನೆ. ನೀವು ಲಾಲ್ ಬಾಗ್ ವೆಸ್ಟ್ ಗೇಟ್ ಹತ್ರ ಬನ್ನಿ ಕೊಡ್ತೇನೆ". ಆ ಕ್ಷಣ ನೆಮ್ಮದಿಯಾಯ್ತು. ಸರಿ ಎಂದೆ. ರವಿ ಒಂದು ಧೀರ್ಘವಾದ ಉಸಿರೆಳೆದುಕೊಂಡು ತಯಾರಾದ ಸ್ವಲ್ಪವೇ ಮುಂದೆವರೆದಿದ್ದೆವು ಅಷ್ಟರಲ್ಲಿ ಅವನದೇ ಮತ್ತೆ ಫೋನ್ " ಹೇಳಕ್ಕೆ ಮರೆತುಬಿಟ್ಟಿದ್ದೆ ಮೇಡಂ, ಇದು ವಿದೇಶದಿಂದ ಇಂಪೋರ್ಟ್ ಮಾಡಿಸಿಕೊಂಡ ಔಷಧಿ ಹಾಗಾಗಿ ಇದಕ್ಕೆ ೪೦೦೦/- ಆಗತ್ತೆ, ದುಡ್ಡು ತಂದುಬಿಡಿ" ಔಷಧಿ ಬೇಕಾದ್ದು ಮಗುವಿಗೆ, ನಾವು ಅದರ ತಂದೆ ತಾಯಿಗಳು ನಮ್ಮ ಧ್ವನಿಯಲ್ಲಿದ್ದ ಆತಂಕ, ಮೀರುತ್ತಿರುವ ಹೊತ್ತು..ಒಂದೇ ಕ್ಷಣದಲ್ಲಿ ನಮ್ಮೆಲ್ಲಾ ಅಸಹಾಯಕತೆಯನ್ನು ದುಡ್ಡಾಗಿ ಬದಲಿಸಿಕೊಳ್ಳುವ ಹವಣಿಕೆ ಅವನದ್ದು. ನಾವಿಬ್ಬರೂ ಮುಖ ಮುಖ ನೋಡಿಕೊಂಡೆವು. ಎದೆಯಲ್ಲಿ ಕಲ್ಲು ಬಿದ್ದ ಅನುಭವ. ಏನೋ ಸಂಕಟ, ಗಂಟಲಲ್ಲಿ ಯಾರೋ ಬಿಗಿಯಾಗಿ ಹಿಂಡಿದ ಹಾಗೆ. ಇಬ್ಬಗೆ..ಅವನು ನಮ್ಮ ಪರಿಸ್ಥಿತಿಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ ಗೊತ್ತಾಗುತ್ತಿದೆ. ಅವನು ಹಾಗೆ ಮಾಡಲು ಬಿಡುವ ಮನಸ್ಸಿಲ್ಲ ಆದರೆ ನನ್ನ ಕೂಸು..ನಮ್ಮ ಕಣ್ಮಣಿ..ರವಿ ಕಾರು ನಿಲ್ಲಿಸಿಬಿಟ್ಟ ಐದು ನಿಮಿಷ ಮೌನವಾಗಿ ಕೂತಿದ್ದೆವು. ಕೊನೆಗೆ ಪ್ರಪಾತದಿಂದ ಎಂಬಂತೆ ರವಿಯ ಮಾತು ಹೊರ ಬಂತು "ಬೇರೆ ಎಲ್ಲಾದರೂ ಪ್ರಯತ್ನಿಸೋಣ". ನಾನು ಧನ್ಯವಾದ ಹೇಳುವಂತೆ ಅವನ ಕೈ ಹಿಡಿದುಕೊಂಡೆ. ಸರಿ ಮತ್ತೆ ನಮ್ಮ ಪ್ರಯಾಣ ಶುರುವಾಯಿತು. ಜಯದೇವ ಆಸ್ಪತ್ರೆಯ ಬಳಿ ಬಂದಾಗ ರವಿ ಇದ್ದ ಆಸ್ಪತ್ರೆ ಕೊಲಂಬಿಯಾ ಏಷಿಯ ಆಸ್ಪತ್ರೆಗೆ ಫೋನ್ ಮಾಡುವ ಯೋಚನೆ ಬಂತು. ಇನ್ನೇಕೆ ತಡ. ಅವರು ಹೇಳಿದರು ನಮ್ಮಲ್ಲಿದೆ ಮಾತ್ರೆ ಆದರೆ ನಮ್ಮ ಡಾಕ್ಟರ್ ಹೇಳಬೇಕು ಆಗ ಮಾತ್ರ ಕೊಡಲು ಸಾಧ್ಯ ಎಂದು. ಆ ಡಾಕ್ಟರ್ ರವಿಯನ್ನು ಟ್ರೀಟ್ ಮಾಡಿದ ಡಾಕ್ಟರ್‍. ಅವರಿಗೆ ಸಲಕ್ಕೆ ೧೬ ಸಲ ಕೇಳುತ್ತಿದ್ದೆವು ಆಸ್ಪತ್ರೆಯಲ್ಲಿದ್ದಾಗ ಮಗಳಿಗೆ ಇದು ಬರದಂತೆ ಹೇಗೆ ಮಾಡುವುದು ಎಂದು. ಹಾಗಾಗಿ ಅವರಿಗೆ ಗೊತ್ತಿತ್ತು ನಮ್ಮ ಸ್ಥಿತಿ. ಅವರಿಗೆ ಫೋನ್ ಮಾಡಿದೆವು. ಅವರು ತುಂಬಾ ಖಡಕ್ಕಾಗಿ ಹೇಳಿದರು "ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬನ್ನಿ. ನಾನು ನೋಡಿ ನಂತರ ಹೇಳುತ್ತೇನೆ." ನಾನೆಂದೆ " ದಯವಿಟ್ಟು ಅರ್ಥ ಮಾಡಿಕೊಳ್ಳಿ, ನಾವು ಬನ್ನೇರುಘಟ್ಟ ರಸ್ತೆಯಲ್ಲಿದ್ದೇವೆ. ಮಗು ಎಚ್ ಎ ಎಲ್ ಹತ್ತಿರ ಇದೆ ಮತ್ತು ನಿಮ್ಮ ಆಸ್ಪತ್ರೆ ಯಶವಂತಪುರ..ಈಗ ರಾತ್ರಿ ೧೦.೧೫. ದಣಿದ ಮಗುವನ್ನು ಕರೆತರುವುದು ಸಾಧ್ಯವಿಲ್ಲ ದಯವಿಟ್ಟು ನಿಮ್ಮ ಫಾರ್ಮಸಿಗೆ ಹೇಳಿ" .."ಸಾರಿ ದೀಪಾ ನನ್ನ ಸ್ಥಿತಿಯನ್ನ ನೀವು ಅರ್ಥ ಮಾಡಿಕೊಬೇಕು. ಫಾರ್ ಮಿ ರೂಲ್ಸ್ ಇಸ್ ರೂಲ್ಸ್"


               ಅಲ್ಲಿಂದ ಮುಂದೆ ನಾವಿಬ್ಬರೂ ಏನೂ ಮಾತಾಡಲಿಲ್ಲ. ಕೊಲಂಬಿಯಾ ಏಷಿಯ ರವಿಯ ಕ್ಲೈಂಟ್ಸ್. ಅದರ ಆಡಳಿತ ಮಂಡಳಿಯ ಎಲ್ಲ ಮೇಲಿನ ಜನರ ಜೊತೆ ರವಿಯ ಒಡನಾಟವಿದೆ. ತನ್ನ ಪರಿಚಯಗಳನ್ನು ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವುದು ನಾವಿಬ್ಬರೂ ಹೇಯಪಡುವ ಕೆಲಸಗಳಲ್ಲೊಂದು. ಆದಾಗ್ಯೂ ರವಿ ’ಅವರಿಗೆ ಫೋನ್ ಮಾಡಲಾ’ ಎಂದು ಕೇಳಿದ ಏನೆನ್ನಲಿ..ಸುಮ್ಮನೆ ಅವನನ್ನೇ ನೋಡಿದೆ. ಆ ಯೋಚನೆ ಬಂದದ್ದಕ್ಕೇ ತಪ್ಪಿತಸ್ಥ ಮನೋಭಾವದಲ್ಲಿದ್ದ ರವಿ. ಗಟ್ಟಿ ಮನಸ್ಸು ಮಾಡಿ ಮಾಡು ಎಂದೆ. ನಮಗೆ ನಮ್ಮ ಅಸಹಾಯಕತೆಯ ಬಗ್ಗೆ ಅಸಹ್ಯವಾಗತೊಡಗಿತು. ನಮ್ಮಲ್ಲಿ ಸದಾ ಎಚ್ಚರವಾಗಿರುವ ಒಳ್ಳೆಯದನ್ನೇ ನೋಡುವ ಹಾಗೂ ಒಳ್ಳೆಯದೇ ಆಗುತ್ತದೆ ಎಂದು ನಂಬುವ ಮನಸ್ಸು ನಮಗೆ ಮೋಸ ಮಾಡುತ್ತಿತ್ತು. ಮಳೆ ಮಾತ್ರ ತನಗೂ ಈ ಎಲ್ಲದಕ್ಕೂ ಯಾವ ಸಂಬಂಧವೂ ಇಲ್ಲವೆಂಬಂತೆ ಸುರಿಯುತ್ತಿತ್ತು..ಅದಕ್ಕು ಸಹ ರೂಲ್ಸ್ ಇಸ್ ರೂಲ್ಸ್.


             ನನ್ನ ರಾಜಕುಮಾರಿ ಹುಟ್ಟಿದ ಆಸ್ಪತ್ರೆ ಸೈಂಟ್ ಫಿಲೋಮಿನಾಸ್. ಇಲ್ಲೊಂದು ಬಾರಿ ನೋಡಿಬಿಡೋಣ ಎಂದೆ. ಸರಿ ನೀನು ಹೋಗಿ ಕೇಳು, ಅಷ್ಟರಲ್ಲಿ ನಾನು ಅವರಿಗೆ ಫೋನ್ ಮಾಡುತ್ತೇನೆ ಎಂದ ರವಿ. ನಾನು ಒಳ ನಡೆದೆ..


            ಒಳಗೆ ಒಂದು ಸಣ್ಣ ರೆಸೆಪ್ಷನ್ ಕೌಂಟರ್. ಮಧ್ಯೆ ಸುಮಾರು ೩೫ ರಿಂದ ೩೮ರ ಡಾಕ್ಟರ್ ಕೂತಿದ್ದಾರೆ ಅವರ ಸುತ್ತಾ ೩ - ೪ ಜನ ನರ್ಸ್ ಗಳು ಏನೇನೋ ಕೆಲಸಗಳಲ್ಲಿ ತುಂಬ ಬ್ಯುಸಿಯಾಗಿದ್ದಾರೆ. ದಾಕ್ಟರ್ ಸಹಾ ಏನೋ ಕೆಲಸದಲ್ಲಿ ನಿರತರು. ಅಲ್ಲೇ ಪಕ್ಕದಲ್ಲೇ ಮೆಟರ್ನಿಟಿ ಜನರಲ್ ವಾರ್ಡ್. ಅಲ್ಲಿನ ಗದ್ದಲ ಮಕ್ಕಳ ಅಳು..ಒಟ್ಟಾರೆ ದೊಡ್ಡ ಸಂತೆ. ಸಾರ್ ಎಂದೆ ( ನನ್ನ ಧ್ವನಿಯಲ್ಲಿದ್ದ ದೈನ್ಯ ನನ್ನನ್ನು ಬೆಚ್ಚಿ ಬೀಳಿಸಿತು!!) ಅವರು ಕತ್ತೆತ್ತಿ ನೋಡಿದರು. ಪ್ರಿಸ್ಕ್ರಿಪ್ಷನ್ ಕೊಟ್ಟೆ. ನೋಡಿದರು..ನರ್ಸ್ ಒಬ್ಬರನ್ನು ಕರೆದರು "ಇವರಿಗೆ ಟ್ಯಾಮಿ ಫ್ಲೂ ಮಾತ್ರೆ ಕೊಡಿ" ಎಂದರು ನನಗೊಂದು ಫಾರ್ಮ್ ಕೊಟ್ಟರು ತುಂಬಿಸಲು. ನನಗೆ ಥ್ರಿಲ್ಲರ್ ಕಾದಂಬರಿಯೊಂದು ಥಟ್ಟನೆ ಮುಗಿದುಹೋದ ಅನುಭವ. ನಂಬಿಕೆಯೇ ಬರುತ್ತಿಲ್ಲ..ಫಾರ್ಮ್ ಕಡೆಗೇ ನೋಡುತ್ತಿದ್ದೇನೆ ಪೆನ್ ಹಿಡಿದು ಆದರೆ ಅಲ್ಲೇನು ಬರೆದಿದೆ ಎಂದೇ ಕಾಣಿಸುತ್ತಿಲ್ಲ. ಇಲ್ಲಿಯವರಗೆ ಬಾರದ ಕಣ್ಣೀರು ತಡೆಯಲಾಗದಂತೆ ಉಕ್ಕುತ್ತಿದೆ.. ಮಾತ್ರೆ ಹಿಡಿದು ಬಂದ ನರ್ಸ್ ನನ್ನ ಭುಜವನ್ನು ಮೃದುವಾಗಿ ಅಮುಕಿ ಕುಳಿತುಕೊಳ್ಳಿ ಎಂದಳು. ಮಾತ್ರೆ ಕೈಯಲ್ಲಿ ಹಿಡಿದು ರವಿಗೆ ಫೋನ್ ಮಾಡಿದೆ, ಸಿಕ್ಕಿತು ಎಂದೆ. ಅಷ್ಟೇ ಹೇಳಲಾಗಿದ್ದು. ಅದೇನು ತುಂಬಿಸಿದೆನೋ ಆ ಫಾರ್ಮ್ ನಲ್ಲಿ ಇನ್ನೂ ಗೊತ್ತಿಲ್ಲ. ಡಾಕ್ಟರ್ ಅದನ್ನು ನನ್ನಿಂದ ಪಡೆದುಕೊಂಡು. ಹೋಗಿಬನ್ನಿ ಒಳ್ಳೆಯದಾಗುತ್ತದೆ ಎಂದರು. ಇವೆಲ್ಲಾ ಸೇರಿ ಒಟ್ಟು ೧೦ ನಿಮಿಷಗಳಾಗಿರಬಹುದು ಅಷ್ಟೇ. ಹೊರಬಂದೆ.


             ಏತನ್ಮಧ್ಯೆ ರವಿ ಆಸ್ಪತ್ರೆಯ ಆಡಳಿತ ಮಂಡಳಿಯವರೊಬ್ಬರಿಗೆ ಫೋನ್ ಮಾಡಿದ್ದ. ಆಗ ರಾತ್ರಿ ೧೧.೦೦ ಗಂಟೆ. ಅವರು " ಯೋಚಿಸಬೇಡಿ ನಾನೆಲ್ಲಾ ವ್ಯವಸ್ಥೆ ಮಾಡಿ ನಿಮಗೆ ತಿಳಿಸುತ್ತೇನೆ" ಎಂದಿದ್ದರು. ಅವರು ಮತ್ತೆ ನಮಗೆ ಕರೆ ಮಾಡುವಷ್ಟರಲ್ಲಿ ನಾನು ಮಾತ್ರೆ ಹಿಡಿದು ಹೊರ ಬಂದಿದ್ದೆ. ರವಿ ವಿಷಯ ತಿಳಿಸಿ ಅವರು ತೆಗೆದುಕೊಂಡ ತೊಂದರೆಗೆ ಕ್ಷಮೆ ಕೇಳಿದ. ಅಲ್ಲಿಂದ ಹೊರಟ ಐದೇ ನಿಮಿಷಕ್ಕೆ ಆಸ್ಪತ್ರೆಯ ರವಿಗೆ ಚಿಕಿತ್ಸೆ ಮಾಡಿದ ರೂಲ್ಸ್ ಡಾಕ್ಟರು ಕರೆ ಮಾಡಿದರು. ತುಂಬಾ ನಯವಾಗಿ (ಆಗಿನ್ನೂ ಪೋನ್ ಬಂದಿತ್ತಲ್ಲ ಅವರಿಗೆ ಮೇಲಿನಿಂದ!!) ಮಗುವನ್ನು ಕರೆತರುತ್ತಿದ್ದೀರಾ ಎಂದು. ನಾನು ಇಲ್ಲ ನಮಗೆ ಔಷಧಿ ಸಿಕ್ಕಿತು ಎಂದೆ. ಮಾಮೂಲಿಯಾಗಿ ಹೇಳಬೇಕೆಂದು ಬುದ್ಧಿ ತಿಳಿಸುತ್ತಿತ್ತು ಆದರೆ ಬುದ್ಧಿಗೆ ಮೋಸ ಮಾಡಿ ಮನಸ್ಸು ನನ್ನ ಧ್ವನಿಯಲ್ಲಿ ಗಡಸುತನವನ್ನು ಸೇರಿಸಿಯೇಬಿಟ್ಟಿತ್ತು.


            ಪುರುಸೊತ್ತಾಗಿ ಪೇಪರ್ ಓದುತ್ತಿದ್ದ ಇನ್ಸ್ಟಿಟ್ಯೂಟಿನವನು, ನನಗಾಗಿ ನಿರ್ಮಲ ಫಾರ್ಮಸಿಯ ನಂಬರ್ ಹುಡುಕಿ ಕೊಟ್ಟ ಔಷದಿಯವನು, ೪೦೦೦ ಕೇಳಿದ ನಿರ್ಮಲ ಫಾರ್ಮಸಿಯವನು, ಅರ್ಧ ಕ್ಷಣದಲ್ಲಿ ಮಾತ್ರೆ ವ್ಯವಸ್ಥೆ ಮಾಡಿದ ಸೈಂಟ್ ಫಿಲೋಮಿನಾಸ್ ಡಾಕ್ಟರು, ರೂಲ್ಸ್ ಇಸ್ ರೂಲ್ಸ್ ಎಂದ ವೈದ್ಯರು, ಅಹೋ ರಾತ್ರಿಯಲ್ಲಿ ನಮ್ಮ ಕರೆ ಸ್ವೀಕರಿಸಿ ಎಲ್ಲ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿಯವರು, ಮಳೆ,ನನ್ನ ರವಿಯ ಸೋತ ಕಣ್ಣುಗಳು, ಕೈಯಲ್ಲಿದ್ದ ಅಮೂಲ್ಯ ಮಾತ್ರೆ ಎಲ್ಲಾ ಕಲಸಿಹೋದಂತಾಗಿ ಒಂಥರಾ ಅಯೋಮಯ ಸ್ಥಿತಿಯಲ್ಲಿದ್ದೆ.


            ಮಾತ್ರೆಯನ್ನು ಬಿಡಿಸಿ ಅದರ ಪುಡಿಯನ್ನು ಹಾಲಿಗೆ ಬೆರೆಸಿದೆ. ನಮ್ಮತ್ತೆ ತನ್ನದೇ ದೇಹದ ಭಾಗವನ್ನೆತ್ತುತ್ತಿದ್ದೇನೆಂಬಂತೆ ಮಗುವನ್ನು ಮೆಲ್ಲಗೆ ಎತ್ತಿ ತೊಡೆ ಮೇಲೆ ಮಲಗಿಸಿಕೊಂಡು ಒಳಲೆಯಿಂದ ಕುಡಿಸಿದರು..ಸಿಹಿ ಹಾಲಿನೊಡನೆ ಬೆರೆತ ಕಹಿ ಪುಡಿ ಹನಿ ಹನಿಯಾಗಿ ಅದರ ಎಳೇ ಗಂಟಲಲ್ಲಿ ಇಳಿಯುವುದನ್ನು ನಾನು ರವಿ ನೀರು ತುಂಬಿಕೊಂಡ ಕಣ್ಣುಗಳಿಂದ ನೋಡಿದೆವು.


 


ವಿ. ಸೂ : ಇದೆಲ್ಲಾ ಕಥೆಯಾಗಿ ಇಂದಿಗೆ ೪ ತಿಂಗಳು ಹಂದಿ ಜ್ವರ ನಾವು ತಿಳಿದಷ್ಟು ದೊಡ್ಡ ಬ್ರಹ್ಮ ರಾಕ್ಷಸನೇನಲ್ಲ. ಮೊನ್ನೆ ಮೊನ್ನೆ ನನ್ನ ಮಗಳಿಗೆ ಎರೆಡು ತುಂಬಿತು. ಅವಳ ಹುಟ್ಟಿದ ದಿನದಂದೇ ಅಕ್ಷರಾಭ್ಯಾಸ ಮಾಡಿಸೋಣ ಎಂದರು ನಮ್ಮತ್ತೆ. ಹಿಂದಿನ ದಿನ ಸಂಜೆ ರವಿ ಅವಳನ್ನು ಕೇಳಿದ ನಾಳೆ ನೀನು ಅಕ್ಕಿ ಮೇಲೆ ಎ ಬಿ ಸಿ ಡಿ ಬರಿತೀಯೋ ಅ ಆ ಇ ಈ ಬರೀತೀಯೋ ಅಂತ ಇವಳು ಇಷ್ಟುದ್ದ ಮೂತಿ ಮಾಡಿ ಒ ಓ ಅಂತ ಬಈತೀನಿ ಅಪ್ಪ ಅಂದಳು...