ಹಂಸ ಹಾಡುವ ಹೊತ್ತು - ೩
ಸ್ವರ ಸಮ್ಮಿಲನ
ಮಿಲಿಂದನನ್ನು ಕಳಿಸಿದ ಬಳಿಕ ಮೂರ್ತಿಯವರು ವೈದೇಹಿಯವರೊಡನೆ ಕೆಲವು ನಿಮಿಷ ಮಾತನಾಡಿ, ತಮ್ಮ ಮಲಗುವ ಕೋಣೆಗೆ ಹೊರಟರು. ಪ್ರತಿದಿನ ಮಲಗುವ ಮುನ್ನ ಸುಮಾರು ಒಂದು ಗಂಟೆ ಕಾಲ ಸಂಗೀತವನ್ನಾಲಿಸುವುದು ಅವರ ದಿನಚರಿಯಾಗಿತ್ತು. ಇಂದೂ ಕೂಡ ಕದ್ರಿ ಗೋಪಾಲ ನಾಥರ ಸಂಗೀತದ ಧ್ವನಿಮುದ್ರಿಕೆಯೊಂದನ್ನು ಐಪಾಡ್ ನಲ್ಲಿ ಹಾಕಿಕೊಂಡು, ಆರಾಮ ಕುರ್ಚಿಯಲ್ಲಿ ಒರಗಿ, ಸಂಗೀತವನ್ನಾಲಿಸಲಾರಂಭಿಸಿದರು.
ಖರಹರಪ್ರಿಯದ "ರಾಮಾ ನೀ ಸಮಾನಮೆವರು..." ಎಂಬ ಕೃತಿಯನ್ನು ಕನ್ಯಾಕುಮಾರಿಯವರ ಪಿಟೀಲು ಸಹವಾದನದಲ್ಲಿ ಸ್ಯಾಕ್ಸೋಫೋನ್ ನಲ್ಲಿ ನುಡಿಸಿರುವ ಗೋಪಾಲನಾಥರ ಈ ವಾದನ ಅವರಿಗೆ ತುಂಬಾ ಮೆಚ್ಚುಗೆಯಾಗಿತ್ತು. ಖರಹರ ಪ್ರಿಯದ ಅದ್ಭುತ ರಸಾನುಭವವನ್ನತಮ್ಮ ಸಮಾನ ವಿದ್ವತ್ತಿನಿಂದ ಉಣಬಡಿಸಿರುವ ಈ ಇಬ್ಬರ ವಾದನ ಮರೆಯಲಾರದ ಅನುಭವವನ್ನು ನೀಡುತ್ತಿತ್ತು. ಕಿವಿಗಳೆರಡೂ ಸಂಗೀತದಲ್ಲಿ ಕೀಲಿಸಿದ್ದರೂ, ಮನ ಮಾತ್ರ ಸಂಗೀತದಲ್ಲಿ ಪೂರ್ತಿಯಾಗಿ ತೊಡಗಿರಲಿಲ್ಲ. ಇಂದು ಮಾತ್ರವಲ್ಲದೇ ಕಳೆದ ಹಲವಾರು ದಿನಗಳಿಂದ ಸಂಗೀತದ ಆಲಿಕೆಯಲ್ಲಿ ಏಕಾಗ್ರತೆಯನ್ನು ಕಳೆದುಕೊಂಡಿದ್ದರು. ಅದಕ್ಕೆ ಕಾರಣವೂ ಮೂರ್ತಿಯವರಿಗೆ ಸಂಪೂರ್ಣ ಅರಿವಿತ್ತು. ಇಂದು ಸಭೆಯಲ್ಲಿ ಸಭಿಕರು ಕೇಳಿದ ಪ್ರಶ್ನೆಗಳು ಮತ್ತು ಮಿಲಿಂದ ಕೇಳಿದ ಪ್ರಶ್ನೆಗಳೇ ಅವರ ಮನವನ್ನಾಕ್ರಮಿಸಿದ್ದವು.
"ಪ್ರೂಫ್ ಆಫ್ ಪುಡ್ಡಿಂಗ್........" ಎಂದೊಬ್ಬರು ಕೇಳಿದ್ದರು. ಅವರಾಗಲೇ ತಿಳಿಸಿದಂತೆ, ಸಂಶೋಧನೆಯ ಮೊದಲ ಹಂತವನ್ನು ಅವರು ಸಂಶೋಧಕರ ಸಹಕಾರದಲ್ಲಿ ನಡೆಸಿದ್ದರು. ಆದರೆ ಮೂರ್ತಿಯವರಿಗೆ ಮಾತ್ರ ತಿಳಿದಿದ್ದ ಕಾರಣವೊಂದಕ್ಕಾಗಿ, ಎರಡನೇ ಹಂತದ ಸಂಶೋಧನೆಯನ್ನು ಮಾತ್ರ ಅವರೇ ಖುದ್ದಾಗಿ ಮಾಡಬೇಕಾಗಿತ್ತು.
ಸದ್ಯದಲ್ಲಿ ಆರೋಗ್ಯದಿಂದಿರುವ ವ್ಯಕ್ತಿಗಳ ಅಂತಿಮ ದಿನವನ್ನು ಅವರ ರಕ್ತ ಪರೀಕ್ಷೆಯಿಂದ ನಿರ್ಧರಿಸಿ, ಅವರ ಅಂತಿಮ ದಿನದವರೆಗೂ ಅವರನ್ನು ಗಮನಿಸಿ, ತಾಳೆ ನೋಡುವುದು ಬಹು ಸೂಕ್ತವಾಗಿತ್ತು. ಆದರೆ, ಈ ರೀತಿ ಮಾಡಲು, ಬಹಳಷ್ಟು ವರ್ಷಗಳ ಕಾಲ ಕಾಯಬೇಕಾಗುತ್ತಿತ್ತು. ಆದ್ದರಿಂದ, ಮೂರ್ತಿಯವರು ಇದಕ್ಕಾಗಿ ಇನ್ನೊಂದು ಪರ್ಯಾಯ ವಿಧಾನವನ್ನು ಅನುಸರಿಸಲು ನಿರ್ಧರಿಸಿದರು. ಈ ವಿಧಾನಕ್ಕೆ, ಅನಾರೋಗ್ಯದ ತೀಕ್ಷ್ಣಾವಸ್ಥೆಯಲ್ಲಿರುವ ರೋಗಿಗಳ ರಕ್ತ ಪರೀಕ್ಷೆ ಅಗತ್ಯವಾಗಿತ್ತು. ಅವರ ಮಿತ್ರ ಡಾ|| ಕೇಶವ ಪೈ, ಅತ್ಯಾಧುನಿಕ ಸುಸಜ್ಜಿತ ಆಸ್ಪತ್ರೆಯೊಂದನ್ನು ನಡೆಸುತ್ತಿದ್ದರು. ಡಾ|| ಕೇಶವ ಪೈ ನಗರದಲ್ಲಿಯೇ ಬಹಳ ಪ್ರಸಿದ್ಧ ಶಸ್ತ್ರವೈದ್ಯರಾಗಿದ್ದರು. ಅವರ ಆಸ್ಪತ್ರೆಯಲ್ಲಿ ತಮ್ಮ ರೋಗಿಗಳನ್ನಲ್ಲದೇ , ತಮ್ಮ ಕೆಲವು ಆತ್ಮೀಯ ವೈದ್ಯ ಗೆಳೆಯರೂ ಉಪಚರಿಸಲು ಅನುವು ಮಾಡಿಕೊಟ್ಟಿದ್ದರು. ಅವರ ಆಸ್ಪತ್ರೆಯಲ್ಲಿ ಹತ್ತು ಬೆಡ್ ಉಳ್ಳ ಐ.ಸಿ.ಯು (I.C.U) ಕೂಡ ಇತ್ತು . ತಮ್ಮ ಮುಂದಿನ ಹಂತದ ಸಂಶೋಧನೆಗೆ ಕೇಶವ ಪೈಗಳ ಆಸ್ಪತ್ರೆಯೇ ಸೂಕ್ತವಾದದ್ದು ಎಂದು ಮೂರ್ತಿ ನಿರ್ಧರಿಸಿದರು.
ತಮ್ಮ ಗೆಳೆಯ ಕೇಶವ ಪೈಗೆ ಫೋನ್ ಮಾಡಿದಾಗ,
"ಏನು, ಮೂರ್ತಿರಾಯರೇ, ಹೇಗಿದ್ದೀರಿ ? ಬಹಳ ಸಮಯದ ಮೇಲೆ ನಮ್ಮ ಜ್ಞಾಪಕ ಬಂದಿದೆ......." ಎಂದು ಆತ್ಮೀಯವಾಗಿ ಕೇಳಿದರು ಕೇಶವ ಪೈ.
"ನಿಮ್ಮನ್ನು ಜ್ಞಾಪಿಸಿಕೊಳ್ಳುವ ಸಮಯ ಬಂದಿದ್ದಕ್ಕೇ, ನಿಮಗೆ ಫೋನ್ ಮಾಡಿದ್ದು......" ಎಂದರು ಮೂರ್ತಿ.
"ಅಂದರೆ, ಯಾವುದಕ್ಕೋ ಚಂದಾ ಪಂದಾ ಕೇಳೋದಕ್ಕಲ್ಲಾ ತಾನೇ ?" ಕೇಶವ ಪೈ ಹಾಗೆ ಕೇಳಿದರೂ, ಮೂರ್ತಿಯವರೇನೂ ಬೇಜಾರು ಮಾಡಿಕೊಳ್ಳಲಿಲ್ಲ. ಕೇಶವ ಪೈ
ಒಬ್ಬ ದೊಡ್ಡ ಕೊಡುಗೈ ದೊರೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ.
"ಇಲ್ಲ ಮಹಾರಾಯಾ, ಯಾವ ಚಂದಾನೂ ನಿನ್ನ ಹತ್ರ ಕೇಳುತ್ತಿಲ್ಲಾ. ಯಾವುದೋ ಒಂದು ಚಿಲ್ಲರೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅದಕ್ಕೆ ನಿನ್ನ ಸಹಕಾರ ಬೇಕಿತ್ತು..."
"ಏನು, ಚಿಲ್ಲರೆ ಸಂಶೋಧನೇನಾ? ಹಾಗಾದರೆ, ನನ್ನ ಸಹಕಾರವಿಲ್ಲ. ಏನಾದರೂ ದೊಡ್ಡ ವ್ಯವಹಾರವಿದ್ದರೆ ಮಾತ್ರ ಹೇಳು. ನಿನ್ನ ಸಂಶೋಧನೆ ಮುಗಿದಾಗ, ಹಾರದ ಜೊತೆಗೆ ನಾರೂ ಹರಿಪಾದ ಸೇರಿದಂತೆ, ನಿನ್ನ ಹೆಸರಿನ ಜೊತೆ ನಮ್ಮ ಆಸ್ಪತ್ರೆಯ ಹೆಸರೂ ಮಿಂಚಬಹುದು.." ಎಂದರು ನಗುತ್ತಾ.
"ಆಯ್ತಪ್ಪಾ, ದೊಡ್ಡ ಸಂಶೋಧನೇ ಅಂತಾಲೇ ಇಟ್ಕೋ....ಕ್ರೆಡಿಟ್ ಗಳನ್ನು ಕೊಡುವಾಗ ಖಂಡಿತಾ ನಿನ್ನ ಆಸ್ಪತ್ರೆಯ ಹೆಸರು ಮರೆಯೋದಿಲ್ಲಾ..."
"ಹಾಗೆ ದಾರಿಗೆ ಬಾ....ಹೇಳು, ಏನಾಗಬೇಕಿತ್ತು ಅಂತ.."
"ನಿನ್ನ ಐ.ಸಿ.ಯು ನಲ್ಲಿ ದಾಖಲಾದ ರೋಗಿಗಳ ರಕ್ತದ ನಮೂನೆಯನ್ನು ಪ್ರತಿದಿನ ಯಾವುದಾದರೂ ಪರೀಕ್ಷೆಗೆ ಕಳಿಸುತ್ತಲೇ ಇರುತ್ತೀರಿ ತಾನೇ ? ಹಾಗೆ ಸಂಗ್ರಹಿಸಿದ ರಕ್ತದ
ಸ್ಯಾಂಪಲ್ ಗಳಲ್ಲಿ ನನಗೆ ಒಂದು ಹನಿ ನೀಡಿದರೆ ಅಷ್ಟೇ ಸಾಕು..ತೀಕ್ಷ್ಣಾವಸ್ಥೆಯಲ್ಲಿರುವ ರೋಗಿಗಳ ರಕ್ತದಲ್ಲಿರುವ ಒಂದು ಎನ್ ಜ್ಯೆಮ್ ನ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ.."
"ಅಷ್ಟೇನಾ, ಅದಕ್ಕೆ ಯಾಕೆ ಇಷ್ಟೆಲ್ಲಾ ಪೀಠಿಕೆ.... ಸರಿ,....ಇವತ್ತು ಸಂಜೆ ಆರಕ್ಕೆ ಬಂದು ಬಿಡು. ನಾನು ಬಿಡುವಾಗಿರ್ತೀನಿ. ಐ.ಸಿ.ಯು ಇನ್ ಚಾರ್ಜ್ ಸ್ಟಾಫ್ ನರ್ಸನ್ನು ಕರೆಸಿ ನಿನಗೆ ಪರಿಚಯಿಸುತ್ತೇನೆ. ನಿನ್ನ ಅಗತ್ಯಗಳನ್ನು ಅವರಿಗೆ ತಿಳಿಸಿದರೆ ಅವರು ಎಲ್ಲಾ ಏರ್ಪಾಡೂ ಮಾಡುತ್ತಾರೆ..." ಎಂದು ಒಪ್ಪಿಕೊಂಡರು.
ಅಂದು ಸಂಜೆ ಕೇಶವ ಪೈಗಳನ್ನು ಕಾಣಲು ಅವರ ನರ್ಸಿಂಗ್ ಹೋಮ್ ತಲುಪಿದಾಗ ಆರು ಗಂಟೆಯಾಗಲು ಇನ್ನೂ ಹತ್ತು ನಿಮಿಷಗಳಿದ್ದುವು. ಕೇಶವ ಪೈಗಳು ತಮ್ಮ ಆಫೀಸ್ ನಲ್ಲಿ ಯಾರೊಡನೆಯೋ ಮಾತನಾಡುತ್ತಿರುವುದು ಅವರ ಜವಾನನಿಂದ ತಿಳಿಯಿತು. ಮೂರ್ತಿಯವರು ಬಂದಿರುವುದನ್ನು ಕೇಶವ ಪೈಗಳಿಗೆ ತಿಳಿಸಲು ಹೊರಟ ಜವಾನನನ್ನು ಅವರೇ ತಡೆದರು. ಆಫೀಸ್ ಮುಂಭಾಗದಲ್ಲಿದ್ದ ಲಾಂಜ್ ನಲ್ಲಿ ಪತ್ರಿಕೆಯೊಂದನ್ನು ಓದುತ್ತಾ ಕುಳಿತರು. ಆರು ಗಂಟೆಗೆ ಇನ್ನೂ ಎರಡು ನಿಮಿಷಗಳಿರುವಾಗ, ಕೇಶವ ಪೈಗಳು ಜವಾನನನ್ನು ಕರೆದು ಮೂರ್ತಿಯವರನ್ನು ಒಳಗೆ ಕಳಿಸಲು ಹೇಳಿದರು. ಆಫೀಸ್ ಒಳಗೆ ಹೋಗುತ್ತಾ ಕೇಶವ ಪೈಗಳ ಕೈಕುಲುಕಿ,
"ನಾನು ಕಾಯುತ್ತಿರುವುದನ್ನು ತಿಳಿಸಬೇಡ ಎಂದು ಹೇಳಿದ್ದೆ.............." ಎನ್ನುತ್ತಿದ್ದಂತೆ,
"ಅವನೇನೂ ನನಗೆ ತಿಳಿಸಲಿಲ್ಲ. ನಿನ್ನ ಪಂಕ್ಚುಯಾಲಿಟಿ ಗೀಳು ನನಗೆ ಗೊತ್ತಿಲ್ಲವೇ. ಇಷ್ಟು ಹೊತ್ತಿಗೆ ನೀನು ಖಂಡಿತಾ ಬಂದಿರುತ್ತೀ ಎಂದು ತಿಳಿದೇ, ನಿನ್ನನ್ನು ಒಳಕ್ಕೆ ಕಳಿಸಲು ಹೇಳಿದೆ. ನಿನಗಿನ್ನೂ ಅದರ ಹುಚ್ಚು ಬಿಟ್ಟಿಲ್ವೇ ? ಪಾಪ, ಐ ಪಿಟಿ ಯುವರ್ ವೈಫ್ . ಅತ್ತಿಗೆಗೆ ರೋಸಿ ಹೋಗಿರಬೇಕು ನಿನ್ನನ್ನು ಕಟ್ಟಿಕೊಂಡು....." ಎಂದು ತಮಾಷೆ ಮಾಡಿದರು.
ಶುಭ್ರವಾದ ಬಿಳಿಯ ಪೈಜಾಮ ಕುರ್ತಾ ಧರಿಸಿ ಕೇಶವ ಪೈಗಳ ಎದುರು ಕುಳಿತಿದ್ದ ತಿಲಕಧಾರಿ ಯುವಕನನ್ನು ಅವರಿಗೆ ಪರಿಚಯಿಸಿದರು.
" ನ್ಯೂ ಲೈಫ್ ಸೊಸೈಟಿ ಅನ್ನೋ ಎನ್.ಜಿ.ಒ ಸಂಸ್ಥೆ ಬಗ್ಗೆ ಕೇಳಿರಬೇಕಲ್ಲ ... ಅದರ ಕಾರ್ಯದರ್ಶಿ ಇವರು...ಶಿವ ಕುಮಾರ್. ಇವರು ನನ್ನ ಗೆಳೆಯ ಡಾ|| ಮೂರ್ತಿ.."
" ಸರ್ , ನಮ್ಮ ನ್ಯೂ ಲೈಫ್ ಸೊಸೈಟಿಗೆ ಇವರದ್ದೇ ಬಹಳ ದೊಡ್ಡ ಸಹಾಯ. ಇವರು ತುಂಬಾ ಉದಾರಿ" ಎಂದು ಶಿವ ಕುಮಾರ್ ಕೇಶವ ಪೈಗಳ ಬಗ್ಗೆ ಹೇಳಿದ.
"ಪೈ ಬಗ್ಗೆ ನೀವು ನನಗೆ ಹೇಳಬೇಕೇ....?" ಎಂದರು ಮೂರ್ತಿ.
"ನಾನು ಹಣ ಕೊಡೋದೂ ನಿಜ. ಅದರಿಂದ ಪ್ರಚಾರ ಪಡೆಯೋದೂ ನಿಜ. ನೂರು ರೂಪಾಯಿ ಕೊಟ್ಟು ಸಾವಿರ ರೂಪಾಯಿ ಪ್ರಚಾರ ಪಡೆಯುತ್ತೇನೆ...." ಎಂದು ನಗೆಯಾಡಿ,
"ಆದರೆ, ನನ್ನಂತೆ ಎಲ್ಲರೂ ಇರೋದಿಲ್ಲ. ಇಂಥಾ ದಡ್ಡ ಪ್ರಾಣಿಗಳೂ ಇರುತ್ತಾರೆ" ಎಂದರು, ಮೂರ್ತಿಯವರನ್ನು ತೋರಿಸುತ್ತಾ. ಹಾಗೆಯೇ ಮುಂದುವರಿದು,
" ನಾವು ಹೌಸ್ ಸರ್ಜನ್ ಗಳಾಗಿದ್ದಾಗ, ಒಮ್ಮೆ ಏನಾಯಿತು ಗೊತ್ತಾ ? ಒಂದು ರಾತ್ರಿ ಇವನು ಎಮರ್ಜೆನ್ಸಿ ವಾರ್ಡ್ ನಲ್ಲಿ ಡ್ಯೂಟಿ ಮೇಲಿದ್ದ. ಆಗ, ಕರುಳಿನಿಂದ ರಕ್ತ ಸ್ರಾವವಾಗಿ, ಗಂಭೀರ ಸ್ಥಿತಿಯಲ್ಲಿದ್ದ ಹೋಟೆಲ್ ಮಾಣಿಯೊಬ್ಬನನ್ನ ಅಡ್ಮಿಟ್ ಮಾಡಿ, ಅಡ್ಮಿಟ್ ಮಾಡಿದವರು ಅಲ್ಲಿಂದ ಮಾಯವಾದರು. ಈ ಮಹಾಶಯ, ಆ ಮಾಣಿಗೆ ತಾನೇ ತನ್ನ ರಕ್ತ ದಾನ ಮಾಡಿದ........ಅದರ ಬಗ್ಗೆ ಯಾರ ಹತ್ರಾನೂ ಬಾಯಿ ಬಿಟ್ಟಿರಲಿಲ್ಲ. ನೈಟ್ ಡ್ಯೂಟಿ ನರ್ಸ್ ಮೂಲಕ ನಮ್ಮ ಬಾಸ್ ಗೆ ಇದು ತಿಳಿಯಿತು. ಅವರೇ ಪತ್ರಿಕೆಯೊಂದಕ್ಕೆ ತಿಳಿಸಿದರು..ಆ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಮೂಲಕ ನಮಗೆಲ್ಲಾ ತಿಳಿಯಿತು....ಅಂಥಾ ಪೆದ್ದ ಇವನು" ಎಂದರು ಸಲಿಗೆಯಿಂದ.
ಶಿವಕುಮಾರ್ ನನ್ನು ಕಳಿಸಿದ ಮೇಲೆ, ಐ.ಸಿ.ಯು ನರ್ಸ್ ಶಾಂತಾ ಸುಕುಮಾರ್ ನ್ನು ಕರೆಸಿ, ಮೂರ್ತಿಯವರಿಗೆ ಭೇಟಿ ಮಾಡಿಸಿ,
"ಇನ್ನು ನೀವಿಬ್ಬರೂ ಮಾತಾಡಿಕೊಳ್ಳಿ...." ಎಂದು ಕಳಿಸಿಕೊಟ್ಟರು.
ಈ ವ್ಯವಸ್ಥೆ ಮಾಡಿಕೊಂಡ ಬಳಿಕ, ಮೂರ್ತಿಯವರು ಪ್ರತಿಯೊಂದು ರಕ್ತದ ಸ್ಯಾಂಪಲ್ ನಿಂದ ಒಂದು ಚಿಕ್ಕ ಹನಿ ರಕ್ತದ ನಮೂನೆಯನ್ನು ಸಂಗ್ರಹಿಸುವುದರ ಜೊತೆಗೆ, ಸಂಬಂಧಪಟ್ಟ ರೋಗಿಯ, ಕೆಲವು ಅಗತ್ಯ ವಿವರಗಳನ್ನು ಸಂಗ್ರಹಿಸಲಾರಂಭಿಸಿದರು. ಹಾಗೆ ಸಂಗ್ರಹಿಸಿದ ರಕ್ತದ ನಮೂನೆಯಿಂದ ಆ ರೋಗಿಯ ಅಂತಿಮ ದಿನವನ್ನು ನಿರ್ಧರಿಸಿ, ಆ ರೋಗಿಯ ಪ್ರಗತಿ ಇಲ್ಲವೇ ಕುಸಿತವನ್ನು ಗಮನಿಸತೊಡಗಿದರು.
ಮೊದಲ ನಾಲ್ಕು ರೋಗಿಗಳ ಫಲಿತಾಂಶ ಅವರು ನಿರ್ಧರಿಸಿದಂತಿರದಿದ್ದರೂ, ಮೂರ್ತಿಯವರಿಗೆ ಅಚ್ಚರಿಯೇನೂ ಆಗಲಿಲ್ಲ. ಆ ನಾಲ್ಕೂ ರೋಗಿಗಳ ಅಂತಿಮ ದಿನ, ಮೂರ್ತಿಯವರ ಲೆಕ್ಕಾಚಾರದಂತೆ, ಹಲವಾರು ವರ್ಷಗಳ ನಂತರವೇ ಇದ್ದಿತು. ಆದರೂ, ಆ ನಾಲ್ಕೂ ರೋಗಿಗಳು ಇವರು ರಕ್ತದ ನಮೂನೆಗಳನ್ನು ಸಂಗ್ರಹಿಸಿದ ಎರಡು ಮೂರು ದಿನಗಳಲ್ಲಿಯೇ ಮೃತಪಟ್ಟಿದ್ದರು. ಅದರಲ್ಲಿ ಇಬ್ಬರಿಗೆ ಅಪಘಾತದಲ್ಲಿ ಮಿದುಳಿಗೆ ತೀವ್ರವಾದ ಪೆಟ್ಟಾಗಿತ್ತು. ಇನ್ನಿಬ್ಬರು ತೀವ್ರವಾದ ಸೋಂಕು ರೋಗಗಳಿಂದ ನರಳುತ್ತಿದ್ದರು.
ಐದನೇ ರೋಗಿ ಎಂಭತ್ತೆರಡು ವರ್ಷ ಪ್ರಾಯದ, ಪಾರ್ಶ್ವವಾಯುವಿಗೆ ತುತ್ತಾದ ಮಹಿಳೆ. ಆ ಮಹಿಳೆಯ ನಿರ್ಧಾರಿತ ಅಂತಿಮದಿನವನ್ನು ಲೆಕ್ಕ ಹಾಕಿದಾಗ ಅದು ಆ ರಕ್ತದ ನಮೂನೆಯನ್ನು ಸಂಗ್ರಹಿಸಿದ ದಿನವೇ ಆಗಿದ್ದರಿಂದ, ಮೂರ್ತಿಯವರ ನೀರೀಕ್ಷೆಯ ಪ್ರಕಾರ, ಇನ್ನು ಹತ್ತು ದಿನಗಳಲ್ಲಿ ಅಕೆಯ ಸಾವು ಸಂಭವಿಸಬಹುದಾಗಿತ್ತು. ಆರನೇ ದಿನ
ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಾಗ , ಮೂರ್ತಿಯವರ ಲೆಕ್ಕಾಚಾರ ಸರಿಯೆಂದು ಧೃಡವಾದರೂ ಅದರಲ್ಲಿ ಹೆಚ್ಚು ಮಹತ್ವವೇನೂ ಕಾಣಲಿಲ್ಲ.
ಮುಂದಿನ ಹನ್ನೆರಡು ರೋಗಿಗಳ ಫಲಿತಾಂಶವೂ ಸರಿಸುಮಾರು ಹೀಗೆಯೇ ಆಗಿತ್ತು.
ಮೂವತ್ತೆರಡು ವರ್ಷ ಪ್ರಾಯದ ಹರಿಕುಮಾರ್ ಮೂರ್ತಿಯವರ ಪಟ್ಟಿಯಲ್ಲಿ ಹದಿನೆಂಟನೇ ರೋಗಿಯಾಗಿದ್ದರು. ಶ್ರೀಮಂತ ಮನೆತನದ ಹರಿಕುಮಾರ್ ಗಾಲ್ಫ್ ಆಡುತ್ತಿದ್ದಾಗ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಕೇಶವ ಪೈಗಳ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆ ತಲುಪಿದಾಗ, ನೋವಿನ ತೀವ್ರತೆ ತನ್ನಷ್ಟಕ್ಕೆ ತಾನೇ ಕಡಿಮೆಯಾಗಿತ್ತು. ಆದರೂ, ಮುನ್ನೆಚ್ಚರಿಕೆಯಾಗಿ ಇ.ಸಿ.ಜಿ ಪರೀಕ್ಷೆ ಮಾಡಿದಾಗ, ಬಹಳ ಗಂಭೀರ ವ್ಯತ್ಯಾಸಗಳೇನೂ ಇರಲಿಲ್ಲ. ಕೆಲವೊಮ್ಮೆ, ಇ.ಸಿ.ಜಿ, ಹೃದಯಾಘಾತವಾದ ಕೆಲವು ಗಂಟೆಗಳ ವರೆಗೂ ಸಾಮಾನ್ಯವಾಗಿಯೇ ಇರಬಹುದಾದ್ದರಿಂದ, ಆಸ್ಪತ್ರೆಗೆ ದಾಖಲಾಗಲು ಹರಿಕುಮಾರ್ ಸಮ್ಮತಿಸದೇ ಇದ್ದರೂ ಅವರನ್ನು ಒತ್ತಾಯಿಸಿ ದಾಖಲು ಮಾಡಲಾಗಿತ್ತು.
ಅದೇ ದಿನ ಹರಿಕುಮಾರ್ ನ ರಕ್ತದ ನಮೂನೆಯನ್ನು ಪರೀಕ್ಷಿಸಿದ ಮೂರ್ತಿಯವರಿಗೆ ವಿಸ್ಮಯವುಂಟಾಗಿತ್ತು. ಅವರ ಲೆಕ್ಕಾಚಾರದ ಪ್ರಕಾರ ಹರಿಕುಮಾರ್ ನ ಅಂತ್ಯ ಇನ್ನೊಂದು ತಿಂಗಳಿನ ಒಳಗೆ ಆಗಬಹುದಿತ್ತು. ಕೇವಲ ಕುತೂಹಲಕ್ಕಾಗಿ, ಅಂದು ಸಂಜೆ ಮೂರ್ತಿಯವರು ಆಸ್ಪತ್ರೆಗೆ ಹೋಗಿ, ಕೇಶವ್ ಅವರ ಅನುಮತಿ ಪಡೆದು ಹರಿಕುಮಾರ್ ನನ್ನು ಕಾಣಲು ಐ.ಸಿ.ಯು ಗೆ ಹೋದರು. ಬಲವಂತವಾಗಿ ತನ್ನನ್ನು ದಾಖಲು ಮಾಡಿದ್ದಕ್ಕಾಗಿ, ಹರಿಕುಮಾರ್ ಎಲ್ಲರ ಮೇಲೂ ಸಿಡುಕುತ್ತಿದ್ದ.
ಮೂರ್ತಿಯವರು ಮಾಸ್ಕ್ ಮತ್ತು ಕ್ಯಾಪ್ ಧರಿಸಿ, ಐ.ಸಿ.ಯು ಒಳಗೆ ಕಾಲಿಟ್ಟಾಗ ಹರಿಕುಮಾರ್ ಐ.ಸಿ.ಯು ನರ್ಸ್ ಗಳ ಮೇಲೆ ಹರಿಹಾಯುತ್ತಿದ್ದ.
"ಡಾ|| ಶೈಲೇಶ್ ಅವರ ಜೊತೆ ನಾನು ಮಾತನಾಡಬೇಕು. ಅವರಿಗೆ ಫೋನ್ ಕನೆಕ್ಟ್ ಮಾಡಿಕೊಡಿ........" ಎಂದು ಜೋರಾಗಿ ಕೂಗಾಡುತ್ತಿದ್ದ. ಅವನ ಗಲಾಟೆ ತಡೆಯಲಾಗದೇ,
ಐ.ಸಿ.ಯು ನರ್ಸ್, ಹರಿಕುಮಾರ್ ನನ್ನು ದಾಖಲು ಮಾಡಿದ್ದ ಡಾ|| ಶೈಲೇಶ್ ರಿಗೆ ಫೋನ್ ಮಾಡಿ,
"ಸರ್, ನಿಮ್ಮ ಪೇಷಂಟ್ ಹರಿಕುಮಾರ್ ತುಂಬಾ ಸಿಟ್ಟು ಮಾಡಿಕೊಂಡಿದ್ದಾರೆ. ನನಗೇನೂ ಆಗಿಲ್ಲ, ನಾನು ತಕ್ಷಣವೇ ಮನೆಗೆ ಹೋಗಬೇಕು ಎನ್ನುತ್ತಿದ್ದಾರೆ...." ಎಂದು ಹೇಳುತ್ತಿದ್ದಳು. ಆ ಬದಿಯಲ್ಲಿ ಡಾ|| ಶೈಲೇಶ್ ಹೇಳಿದ್ದನ್ನು ಸಾವಧಾನದಿಂದ ಕೇಳಿಕೊಂಡು, ಹರಿಕುಮಾರ್ ಬಳಿಬಂದು,
"ಸರ್, ಡಾ|| ಶೈಲೇಶ್ ಇನ್ನು ಅರ್ಧ ಗಂಟೆಯಲ್ಲಿ ಬರುತ್ತಾರಂತೆ......." ಎಂದು ಹೇಳಿದ ಮೇಲೆ ಹರಿಕುಮಾರ್ ಸ್ವಲ್ಪ ಶಾಂತನಾದ. ಇದೆಲ್ಲವನ್ನೂ ಗಮನಿಸಿದ ಮೂರ್ತಿ, ಐ.ಸಿ.ಯು ನಲ್ಲಿದ್ದ ಇಂಟೆನ್ಸಿವಿಸ್ಟ್ (intensivist) ಡಾ|| ಗೋವಿಂದಪ್ಪ ಬಳಿ ಹೋಗಿ, ಹರಿಕುಮಾರ್ ಬಗ್ಗೆ ವಿಚಾರಿಸಿದರು.
ಡಾ|| ಗೋವಿಂದಪ್ಪ ಮೂರ್ತಿಯವರನ್ನು ಐ.ಸಿ.ಯುನ ಒಂದು ಮೂಲೆಗೆ ಕರೆದೊಯ್ದು, ಪಿಸುಮಾತಿನಲ್ಲಿ ಹೇಳಿದರು,
"ಸರ್, ಈ ಹರಿಕುಮಾರ್ ಬೆಳಿಗ್ಗೆಯಿಂದ ನಮ್ಮ ಪ್ರಾಣ ತಿಂತಿದ್ದಾನೆ. ಈ ವಿ.ಐ.ಪಿ ಪೇಷಂಟ್ಸ್ ನ ಮ್ಯಾನೇಜ್ ಮಾಡೋದು ತುಂಬಾ ಕಷ್ಟ ಸರ್. ಸದ್ಯ ಡಾ|| ಶೈಲೇಶ್ ಬೇಗ ಬಂದು ಇವನನ್ನು ಐ.ಸಿ.ಯು ನಿಂದ ಡಿಸ್ಚಾರ್ಜ್ ಮಾಡೋದನ್ನೇ ಕಾಯುತ್ತಿದ್ದೇನೆ" ಎಂದರು. ಮೂರ್ತಿಯವರು ಸಹಾನುಭೂತಿಯಿಂದ ಗೋವಿಂದಪ್ಪನವರ ಭುಜದ ಮೇಲೆ ಕೈ ಇಟ್ಟು,
"ಇದೆಲ್ಲಾ ನಮ್ಮ ಪ್ರೊಫೆಷನ್ ನಲ್ಲಿ ಅನುಭವಿಸಬೇಕಾದ್ದೇ ಗೋವಿಂದಪ್ಪಾ........" ಎಂದರು.
ಹರಿಕುಮಾರ್ ನ ಬಗ್ಗೆ ಕೆಲವು ವಿವರಗಳನ್ನು ಪಡೆದುಕೊಂಡು ಮೂರ್ತಿ ಮನೆಗೆ ವಾಪಸ್ಸಾದರು. ಮರುದಿನ ಇನ್ನೊಬ್ಬ ರೋಗಿಯ ವಿವರಗಳನ್ನು ಪಡೆಯಲು ಹೋದಾಗ, ಹರಿಕುಮಾರ್ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದು ತಿಳಿಯಿತು. ತಮ್ಮ ನೋಟ್ ಬುಕ್ಕಿನಲ್ಲಿ, ಹರಿಕುಮಾರ್ ಬಗ್ಗೆ ಬರೆದುಕೊಂಡ ವಿವರಗಳ ಕೆಳಗೆ, "lost for follow up"
ಎಂದು ಟಿಪ್ಪಣಿ ಬರೆದುಕೊಂಡರು. ಇದರಿಂದ ಅವರಿಗೆ ನಿರಾಸೆಯಾದರೂ, ಡಾ|| ಶೈಲೇಶ್ ರ ಮೂಲಕ ಹರಿಕುಮಾರ್ ನ ಬಗ್ಗೆ ಮುಂದೆಯೂ ತಿಳಿದುಕೊಳ್ಳಬಹುದು ಎಂದು ಹೊಳೆದಾಗ ಸ್ವಲ್ಪ ಸಮಾಧಾನವಾಯಿತು. ಮೂರ್ತಿಯವರಿಗೆ ಡಾ|| ಶೈಲೇಶ್ ರ ಪರಿಚಯ ಚೆನ್ನಾಗಿಯೇ ಇತ್ತು.
ಮರುದಿನ ಡಾ|| ಶೈಲೇಶ್ ರವರಿಗೆ ಫೋನ್ ಮಾಡಿ, ತಮ್ಮ ಸಂಶೋಧನೆಯ ಪೂರ್ತಿ ವಿವರಗಳನ್ನು ತಿಳಿಸದೇ, ಕೇಶವ ಪೈಗಳಿಗೆ ಹೇಳಿದ್ದನ್ನೇ ಅವರಿಗೂ ಹೇಳಿ,
"ಶೈಲೇಶ್, ನಿಮ್ಮ ಪೇಷಂಟ್ ಹರಿಕುಮಾರ್ ರವರನ್ನು ಫಾಲೋ ಅಪ್ ಮಾಡಬೇಕಿತ್ತು. ಅವರ ಬಗ್ಗೆ ಮುಂದೆ ಏನಾದರೂ ತಿಳಿದು ಬಂದಲ್ಲಿ ನನಗೂ ಅದನ್ನು ತಿಳಿಸಿದಲ್ಲಿ
ತುಂಬಾ ಉಪಕಾರವಾಗುತ್ತದೆ...." ಎಂದು ಕೇಳಿಕೊಂಡರು.
"ಡಾ|| ಮೂರ್ತಿ, ಖಂಡಿತವಾಗಿಯೂ ತಿಳಿಸುತ್ತೇನೆ. ನನ್ನ ಆಕ್ಷೇಪಣೆಯೇನೂ ಇಲ್ಲ. ಆದರೆ, ಹರಿಕುಮಾರ್ ಮತ್ತೆ ನನ್ನ ಬಳಿ ಬರುವುದು ಮಾತ್ರ ಅನುಮಾನ......"
ಎಂದರು ಅನುಮಾನಿಸುತ್ತಾ.
"ಅಂದರೆ ....?"
"ನಿನ್ನೆ ಅವರನ್ನು ಡಿಸ್ಚಾರ್ಜ್ ಮಾಡುವಾಗ ಅವರು ತುಂಬಾ ಅಪ್ ಸೆಟ್ ಆಗಿದ್ದರು. ಅನಗತ್ಯವಾಗಿ ಅವರನ್ನು ಐ.ಸಿ.ಯು ನಲ್ಲಿ ದಾಖಲು ಮಾಡಿದೆ ಎಂದು ನನ್ನ ಮೇಲೆ ಅಸಮಾಧಾನವಾಗಿದೆ. ಅವರನ್ನು ಡಿಸ್ಚಾರ್ಜ್ ಮಾಡುವ ಮುನ್ನ ಅವರು ಮುಂದೆ ತೆಗೆದುಕೊಳ್ಳ ಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅವರಿಗೆ ಹೇಳುತ್ತಿದ್ದಾಗ, ತುಂಬಾ ಒರಟಾಗಿಯೇ ನನ್ನ ಸಲಹೆಗಳನ್ನು ತಳ್ಳಿಹಾಕಿದರು. ಆಂಜಿಯೋಗ್ರಾಮ್ ಮಾಡಿಸಿಕೊಳ್ಳಿ ಎಂಬ ನನ್ನ ಸಲಹೆಯನ್ನೂ ಅವರು ಫಾಲೋ ಮಾಡಲಿಕ್ಕಿಲ್ಲ. ಆದ್ದರಿಂದ ಇನ್ನು ಮುಂದೆ ಅವರು ನನ್ನ ಬಳಿ ಬಾರದೇ ಬೇರೇ ಕಾರ್ಡಿಯಾಲಜಿಸ್ಟ್ ಬಳಿ ಹೋಗಬಹುದು.." ಎಂದರು.
"ಆಯಿತು. ನಿಮಗೆ ತಿಳಿದು ಬಂದದ್ದನ್ನು ನನಗೆ ತಿಳಿಸಿ..." ಎಂದು ಹೇಳಿ ಫೋನ್ ಕೆಳಗಿಟ್ಟರು.
ಮುಂದೊಮ್ಮೆ ಬಹು ಅನೀರೀಕ್ಷಿತವಾಗಿ ಹರಿಕುಮಾರ್ ಅವರ ಬಗ್ಗೆ ಮೂರ್ತಿಯವರಿಗೆ ತಿಳಿಯಿತು. ಆದರೆ, ಶೈಲೇಶ್ ರ ಮೂಲಕ ಅಲ್ಲ.
ಸುಮಾರು ನಾಲ್ಕು ವಾರಗಳ ಬಳಿಕ, ಒಂದು ಬೆಳಿಗ್ಗೆ ಮೂರ್ತಿ ದಿನಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದಂತೆ, ಮುಖಪುಟದ ಕೆಳಭಾಗದಲ್ಲಿದ್ದ ದಪ್ಪಕ್ಷರಗಳಲ್ಲಿ ಪ್ರಕಟವಾಗಿದ್ದ ಸುದ್ದಿಯೊಂದು ಅವರ ಗಮನ ಸೆಳೆಯಿತು.
"ನಗರದ ಪ್ರಸಿದ್ಧ ಉದ್ಯಮಿ ಹರಿಕುಮಾರ್ ರವರ ಅಕಾಲ ಮರಣ" ಈ ಶೀರ್ಷಿಕೆಯಡಿ, ಹರಿಕುಮಾರ್ ರವರ ಭಾವಚಿತ್ರ ಪ್ರಕಟವಾಗಿತ್ತು. ಸುದ್ದಿಯ ವಿವರಗಳನ್ನು ಓದಿದಾಗ, ಹರಿ ಕುಮಾರ್ ಮುಂಬೈನ ಪಂಚತಾರಾ ಹೋಟೆಲ್ ಒಂದರಲ್ಲಿ ತಂಗಿದ್ದುದು, ಮತ್ತು ರಾತ್ರಿ ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದು ತಿಳಿದು ಬಂತು. ಮೂರ್ತಿಯವರು ಲೆಕ್ಕ ಹಾಕಿದ್ದ ಹರಿಕುಮಾರ್ ರವರ ಗರಿಷ್ಠ ಅಂತಿಮ ದಿನಕ್ಕೆ ಕೇವಲ ಎರಡು ದಿನ ಮುಂಚಿತವಾಗಿ ಸಾವನ್ನಪ್ಪಿದ್ದರು ! ಇದು ಸಂಭ್ರಮಿಸುವ ವಿಷಯವಲ್ಲದಿದ್ದರೂ, ಇದರಲ್ಲಿ ಮೂರ್ತಿಯವರಿಗೆ ತಮ್ಮ ಸಂಶೋಧನೆಯ ಯಶಸ್ಸಿನ ಹೊಳಹು ಕಂಡಿತು.
ಮುಂದಿನ ದಿನಗಳಲ್ಲಿ ಅವರು ಸಾಕಷ್ಟು ಅಂಕೆ ಸಂಖ್ಯೆಗಳನ್ನು ಸಂಗ್ರಹಿಸಿದಾಗ, ಅವರ ಸಂಶೋಧನೆಗೆ ಪೂರ್ತಿ ಸಮರ್ಥನೆ ದೊರೆತಿತ್ತು. ಒಬ್ಬ ವ್ಯಕ್ತಿಯ ಗರಿಷ್ಠ ಅಂತಿಮದಿನವನ್ನು ಖಚಿತವಾಗಿ ತಿಳಿಯಬಹುದೆಂದು ಅವರಿಗೆ ಮನದಟ್ಟಾಗಿತ್ತು. ಪ್ರೂಫ್ ಆಫ್ ಪುಡ್ಡಿಂಗ್ ದೊರೆತಿತ್ತು.
++++++
ಮಿಲಿಂದ್ ಮುರಳೀಧರ ರಾವ್ ಅವರ ಮನೆ ತಲುಪಿದಾಗ, ರಾವ್ ಇನ್ನೂ ಎಚ್ಚರವಾಗಿದ್ದರು. ಯಾವುದೋ ವಾರಪತ್ರಿಕೆಯನ್ನು ಓದುತ್ತಾ ಕುಳಿತಿದ್ದರು.
ಮಿಲಿಂದನನ್ನು ನೋಡಿ,
"ಮೂರ್ತಿಯ ಜೊತೆ ನೀನು ಕೇಳಬೇಕೆಂದುಕೊಂಡಿದ್ದೆಲ್ಲಾ ಕೇಳಿಯಾಯಿತಾ ? " ಎಂದು ವಿಚಾರಿಸಿದರು.
"ಓ, ಅವರ ಜೊತೆ ಬಹಳ ಮಾತುಕತೆಯಾಡಿದೆ.ಅವರ ಸಂಶೋಧನೆ ಬಗ್ಗೆ ಬಹಳ ಚೆನ್ನಾಗಿ ತಿಳಿಸಿಕೊಟ್ಟರು" ಎನ್ನುತ್ತಾ ಅವರ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡ.
ತಮ್ಮ ಅಡುಗೆ ಮನೆಯ ಕೆಲಸವೆಲ್ಲವನ್ನೂ ಮುಗಿಸಿಕೊಂಡು ಅವರ ಜೊತೆಗೂಡಿದ ಮುರಳೀಧರ ರಾವ್ ಅವರ ಪತ್ನಿ ಮೀರಾ, ಮಿಲಿಂದನನ್ನು ನೋಡಿ,
"ಏನೋ ಮಿಲಿಂದ್, ಊಟಕ್ಕೆ ಚಕ್ಕರ್ ಕೊಟ್ಟುಬಿಟ್ಟೆಯಲ್ಲಾ ? ನಿನಗೆ ಇಷ್ಟ ಅಂತಾ ನುಗ್ಗೇಕಾಯಿಯ ಸಾಂಬಾರ್ ಮಾಡಿದ್ದೆ" ಎಂದರು.
"ಸಾರಿ ಅತ್ತೆ. ಮೂರ್ತಿಯವರು ಕರೆಯುತ್ತಿದ್ದಾಗ ಆಗೋದಿಲ್ಲಾ ಅಂತಾ ಹೇಗೆ ಹೇಳೋದು ....? ಆದರೆ, ನನ್ನ ಪಾಲಿನ ಸಾಂಬಾರ್ ಮಿಕ್ಕಿದ್ದರೆ, ತೆಗೆದಿಡಿ. ನಾನು ಬೆಳಿಗ್ಗೆ ಅದನ್ನು
ಖಾಲಿಮಾಡಿಯೇ ಇಲ್ಲಿಂದ ಹೊರಡುವುದು" ಎಂದ ನಗುತ್ತಾ. ಮೀರಾ ಅವನ ಪಕ್ಕದಲ್ಲಿಯೇ ಕುರ್ಚಿಯೊಂದನ್ನು ಎಳೆದುಕೊಂಡು ಕುಳಿತರು.
" ಸುರೇಶನಿಗೂ ಅಷ್ಟೇ, ನುಗ್ಗೇ ಕಾಯಿ ಸಾಂಬಾರ್ ಎಂದರೆ ಪ್ರಾಣ..."
" ಅಂದ ಹಾಗೆ ಸುರೇಶ ಸದ್ಯಕ್ಕೆ ಇಲ್ಲಿಗೆ ಬರುವುದಿದೆಯೇ ಅತ್ತೆ ?" ರಾವ್ ಅವರ ಏಕೈಕ ಪುತ್ರ ಸುರೇಶ ದೆಹಲಿಯ ಅಂತರ್ದೇಶೀಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.
"ಸದ್ಯಕ್ಕಂತೂ ಬರುವ ಹಾಗೆ ಕಾಣೋದಿಲ್ಲಾ.....ಕೈತುಂಬಾ ಸಂಬಳ ಏನೋ ಕೊಡ್ತಾರೆ ನಿಜ. ಆದರೆ ಗಾಣದೆತ್ತಿನಂತೆ ದುಡಿಸಿಕೊಳ್ಳುತ್ತಾರೆ..." ಎಂದರು ಆಕ್ಷೇಪಿಸುವ ದನಿಯಲ್ಲಿ.
"ಅಯ್ಯೋ ಪಾಪ, ನಿನ್ನ ಮಗನಿಗೆ ಕೈತುಂಬಾ ಸಂಬಳ ಕೊಟ್ಟು, ತಿಂಗಳಿಗೆರಡು ಬಾರಿ ನಿನ್ನ ಅಮ್ಮನನ್ನು ನೋಡಿಕೊಂಡು ಬಾ ಎಂದು ಕಂಪೆನಿ ಹೇಳಬೇಕಿತ್ತಲ್ಲವೇ...:" ಎಂದರು ರಾವ್. ಹುಸಿಕೋಪದಿಂದ ರಾವ್ ಅವರನ್ನು ದುರುಗುಟ್ಟಿ ನೋಡಿ,
"ಮಗ ಅನ್ನೋ ಪ್ರೀತಿ ನಿಮಗಿದ್ರೆ ತಾನೇ......" ಎಂದು, ಮಿಲಿಂದನತ್ತ ತಿರುಗಿ,
"ವೈದೇಹಿ ಇದ್ರಾ ?" ಎಂದು ಕೇಳಿದರು ಮೀರಾ.
"ಅಂದ್ರೆ, ಮೂರ್ತಿಯವರ ಹೆಂಡತಿ ಅಲ್ವಾ ? ಅವರೂ ಕೂಡ ಇದ್ರು. ನನಗೆ ತುಂಬಾ ಉಪಚಾರ ಮಾಡಿದರು............ಆದರೆ, ....." ಎಂದು ತನ್ನ ಮಾತನ್ನು ಅರ್ಧದಲ್ಲಿಯೇ ತುಂಡರಿಸಿದ ಮಿಲಿಂದ್.
"ಏನು, ಆದರೆ ?"
"ನಾನು ಇದು ಕೇಳಬಾರದೋ ಅಲ್ವೋ....ಅದು ಯಾಕೋ...ಮೂರ್ತಿಯವರು ಮತ್ತು ಅವರ ಹೆಂಡತಿಯವರ ಮಧ್ಯೆ ಅದೇನೋ ಸರಿ ಇಲ್ಲ ಎನಿಸುತ್ತದೆ ಅತ್ತೆ, ನೀವು ಮತ್ತು ಮಾಮಾ ಇದ್ದ ಹಾಗೆ ಅವರಿಲ್ಲ"
"ಸರಿಯಾಗೇ ಗಮನಿಸಿದ್ದೀಯಾ.....ಅವರಿಬ್ಬರನ್ನು ನೋಡುವಾಗ ವಿಚಿತ್ರವೆನಿಸುತ್ತದೆ. ಮೂರ್ತಿಯವರಂತೆ ಆಕೆಯೂ ಬುದ್ಧಿವಂತೆ, ಎಂ.ಎಸ್.ಸಿ ಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಒಳ್ಳೆಯ ಅಭಿರುಚಿಗಳಿವೆ. ಅವರಿಬ್ಬರನ್ನೂ ನೋಡುವಾಗ ಮೇಡ್ ಫಾರ್ ಈಚ್ ಅದರ್ ಅನ್ನುತ್ತಾರಲ್ಲ, ಹಾಗೆ ಕಾಣಿಸ್ತಾರೆ. ಆದರೆ, ಅದೇನು ಸಮಸ್ಯೆಯೋ ಗೊತ್ತಿಲ್ಲ. ಮದುವೆಯಾದ
ಒಂದೆರಡು ವರ್ಷಗಳಿಂದಲೇ ಅವರ ಮಧ್ಯೆ ವಿರಸ ಕಂಡಿದೆ. ನಮ್ಮ ಹೊರನೋಟಕ್ಕೆ ಕಾಣುವುದೇ ಒಂದು, ವಸ್ತುಸ್ಥಿತಿ ಇರುವುದೇ ಇನ್ನೊಂದು. ಬಹಳಷ್ಟು ದಾಂಪತ್ಯಕ್ಕೆ ಇದು ಅನ್ವಯಿಸುತ್ತದೆ ಎನಿಸುತ್ತದೆ......."
"ನಮ್ಮ ದಾಂಪತ್ಯಕ್ಕೂ ಅನ್ವಯಿಸುವಂತೆ ಅಲ್ಲವೇ .........?" ಎಂದರು ರಾವ್ ಅವರ ಹೆಂಡತಿಯನ್ನು ಕೆಣಕುವಂತೆ.
"ನಮಗೇನಾಗಿದೆ ಧಾಡಿ...ಬಹಳಷ್ಟು ದಾಂಪತ್ಯಕ್ಕೆ ಇದು ಅನ್ವಯಿಸುತ್ತದೆ ಎಂದೆ ಅಷ್ಟೆ. ಎಲ್ಲಾ ದಾಂಪತ್ಯಕ್ಕೂ ಅನ್ವಯಿಸುತ್ತದೆ ಎಂದೇನೂ ಹೇಳಲಿಲ್ಲ..." ಎಂದರು ಮೀರಾ.
"ಹೋಗ್ಲಿಬಿಡೇ, ಪಾಪ, ಈ ಬ್ರಹ್ಮಚಾರಿಯನ್ನ ಯಾಕೆ ಇದೆಲ್ಲಾ ಹೇಳಿ ಹೆದರಿಸ್ತೀಯಾ ?" ಎಂದರು ರಾವ್ ನಗುತ್ತಾ.
"ಮಾಮಾ, ನಿಮ್ಮ ಮೂರ್ತಿಯವರ ಸ್ನೇಹ ಹೇಗೆ ಸಾಧ್ಯವಾಯ್ತು ?" ಎಂದು ಮಿಲಿಂದ್ ಕೇಳಿದ.
"ಒಬ್ಬ ಡಾಕ್ಟ್ರಿಗೂ ಲಾಯರ್ ಗೂ ಸ್ನೇಹ ಹೇಗಾಯ್ತು ಅಂತಾನೋ ನಿನ್ನ ಪ್ರಶ್ನೆ ? ನಮ್ಮ ಸ್ನೇಹ ಈಗಿನದಲ್ಲವೇ ಅಲ್ಲ. ನಾವಿಬ್ಬರೂ ಚಡ್ಡಿ ಗೆಳೆಯರು. ಎಸ್.ಎಸ್.ಎಲ್.ಸಿ ತನಕ ಇಬ್ಬರೂ ಒಂದೇ ಶಾಲೆಯಲ್ಲಿ ಕಲಿತವರು. ತದನಂತರ ನಮ್ಮ ಡಿಗ್ರಿಗಳನ್ನು ಪೂರೈಸುವವರೆಗೂ ನಾವಿಬ್ಬರೂ ಬೇರೆಯಾದರೂ ನಮ್ಮಿಬ್ಬರ ಸ್ನೇಹಕ್ಕೇನೂ ಭಂಗ ಬಾರಲಿಲ್ಲ. ಡಿಗ್ರಿ ಪಡೆದನಂತರ ಮತ್ತೆ ನಾವಿಬ್ಬರೂ ಇದೇ ಊರಿನಲ್ಲಿಯೇ ಸೇರಿದ್ದು ಮತ್ತು ಅತಿ ಹತ್ತಿರದಲ್ಲಿಯೇ ವಾಸವಾಗಿರುವುದು ಮಾತ್ರ ದೈವ ಕೃಪೆ. ಆ ಹಳೆಯ ಸ್ನೇಹ ಮತ್ತೆ ಅಬಾಧಿತವಾಗಿ ಮುಂದುವರೆದಿದೆ" ಎಂದರು ರಾವ್ ಸಂತೃಪ್ತಿಯಿಂದ.
"ಇವರಿಬ್ಬರೂ ಸೇರಿದರೆ ಸಾಕು. ಬೇರೆಯವರೆಲ್ಲರನ್ನೂ ಮರೆತೇಬಿಡುತ್ತಾರೆ" ಎಂದರು ಮೀರಾ ದೂರುವ ದನಿಯಲ್ಲಿ.
"ಅಂದರೆ....?"
" ಅದು ಹೇಗೆ ಇವರಿಬ್ಬರೂ ಇದುವರೆಗೂ ಸ್ನೇಹಿತರಾಗಿದ್ದಾರೋ, ಅದೇ ದೊಡ್ಡ ಆಶ್ಚರ್ಯ! ಇವರಿಬ್ಬರ ವಿಚಾರಗಳು ಮತ್ತು ನಂಬಿಕೆಗಳು ಉತ್ತರ ಧೃವ , ದಕ್ಷಿಣ ಧೃವ. ಹಾಗಾಗಿ ಇವರಿಬ್ಬರ ಮಧ್ಯೆ ಏನಾದರೂ ಚರ್ಚೆ ಶುರುವಾದರೆ ದೊಡ್ಡ ವಾಗ್ಯುದ್ಧವೇ ಆಗುತ್ತದೆ. ಆ ಹೊತ್ತಿನಲ್ಲಿ ನಾನು ಮತ್ತು ವೈದೇಹಿ ಅಲ್ಲಿದ್ದರೂ ಅಷ್ಟೇ, ಇಲ್ಲದಿದ್ದರೂ ಅಷ್ಟೇ.ಉಪಾಚಾರಕ್ಕೆ ಆಗೊಮ್ಮೆ, ಈಗೊಮ್ಮೆ ತಮ್ಮ ಬೆಂಬಲಕ್ಕೆ ನಮ್ಮ ಅಭಿಪ್ರಾಯ ಕೇಳುತ್ತಿರುತ್ತಾರೆ"
"ಹೌದೇ ? " ಎಂದ ಮಿಲಿಂದ್ ಕುತೂಹಲದಿಂದ.
"ನೀನೊಮ್ಮೆ ಕೇಳಬೇಕು ಅವರ ಚರ್ಚೆಗಳನ್ನು, ಎರಡು ವಿಷಯಗಳಲ್ಲಿ ಮಾತ್ರ ಅವರಿಬ್ಬರದೂ ಒಂದೇ ಅಭಿರುಚಿ. ಕ್ರಿಕೆಟ್ ಹುಚ್ಚು ಮತ್ತು ಸಂಗೀತದ ಹುಚ್ಚು"
"ಸರಿ, ಸರಿ, ನಮ್ಮಿಬ್ಬರನ್ನೂ ಟೀಕಿಸದಿದ್ದರೆ ನಿನಗೆ ಸಮಾಧಾನವೇ ಇಲ್ಲ ಅಂತಾ ಕಾಣ್ತದೆ" ಎಂದರು ರಾವ್ ತಮ್ಮ ಪತ್ನಿಯನ್ನುದ್ದೇಶಿಸಿ.
"ನಾನೇನೂ ಕಲ್ಪಿಸಿಕೊಂಡು ಹೇಳ್ತಾ ಇಲ್ವಲ್ಲ. ನಾನು ಹೇಳೋದರೆಲ್ಲೇನಾದರೂ ಸುಳ್ಳಿದೆಯಾ ?" ಎಂದು ಮೀರಾ ಮರುಪ್ರಶ್ನಿಸಿದರು
" ಅತ್ತೆ, ಸಾಮಾನ್ಯವಾಗಿ ಯಾವುದರ ಬಗ್ಗೆ ಇವರ ಚರ್ಚೆ ಆಗುತ್ತದೆ ?"
"ಅವರು ಚರ್ಚೆಮಾಡೋ ವಿಷಯಗಳು ಎಷ್ಟೋ ಇವೆ. ಆದರೆ ಬಹಳ ಸಾಮಾನ್ಯವಾಗಿ ಇವರ ಜಗಳ ಆಗೋದು, ದೇವರ ಅಸ್ತಿತ್ವದ ಬಗ್ಗೆ.........ಯಾವುದೇ ಸಂದರ್ಭದಲ್ಲಿ
ದೇವರ ಅಥವಾ ದೈವಿಕ ವಿಷಯ ಬಂತೂ ಅಂದ್ರೆ ಸಾಕು....ಆರಂಭವಾಗುತ್ತೆ ಇವರ ಯುದ್ಧ"
"ಅಂದರೆ, ಮೂರ್ತಿಯವರಿಗೆ ದೇವರಲ್ಲಿ ನಂಬಿಕೆ ಇಲ್ವೇ ?"
"ಅವರು ಹೇಳೋದು, ಈ ಇಡೀ ವಿಶ್ವದ ಸೃಷ್ಟಿಗೆ ಕಾರಣವಾದ ಅಪಾರ ಶಕ್ತಿಯೊಂದಿರಬಹುದು. ಆದರೆ ಅದು ನಮ್ಮ ಜೀವನದ ಮೇಲೆ ಯಾವ ಪರಿಣಾಮವನ್ನುಂಟುಮಾಡುವಂಥಹುದಲ್ಲ. ಅದಕ್ಕೆ ನಮ್ಮ ಜೀವನದ ಮೇಲೆ ಯಾವ ಆಸಕ್ತಿಯೂ ಇಲ್ಲ. ನಮ್ಮ ಪೂಜೆ ಪುನಸ್ಕಾರಗಳಿಗೆ ಒಲಿಯುವಂಥಹುದಲ್ಲ. ಈ ಇಡೀ ವಿಶ್ವದ ವ್ಯಾಪಾರ ನಡೆಯುತ್ತಿರುವುದು ಕೇವಲ ಭೌತಿಕ ನಿಯಮಗಳ ಪ್ರಕಾರ ಮಾತ್ರ. ಅದನ್ನೇ ದೇವರು ಎಂದು ಕರೆಯುವುದಾದರೆ ನನ್ನ ಆಕ್ಷೇಪವಿಲ್ಲ ಅಂತ ಅವರ ನಿಲುವು"
"ಆಯ್ತು. ಇಲ್ಲಿಗೇ ನಿಲ್ಸೋಣ ನಮ್ಮ ಹರಟೇನಾ. ರಾತ್ರಿ ತುಂಬಾ ಹೊತ್ತಾಗಿದೆ. ಇನ್ನು ಮಲಗೋಣ ನಡೀರಿ" ಎಂದು ಪತ್ರಿಕೆಯನ್ನು ಮಡಚಿಟ್ಟು ರಾವ್ ಎದ್ದರು.
......................ಮುಂದುವರಿಯುವುದು
Comments
ಉ: ಹಂಸ ಹಾಡುವ ಹೊತ್ತು - ೩
ಉ: ಹಂಸ ಹಾಡುವ ಹೊತ್ತು - ೩
ಉ: ಹಂಸ ಹಾಡುವ ಹೊತ್ತು - ೩