ಹಂಸ ಹಾಡುವ ಹೊತ್ತು - ೬
ಕೇಳಿ ಬಂತು ಕೋಗಿಲೆ ಗಾನ
ಬೆಂಗಳೂರಿನಿಂದ ಶಿವಮೊಗ್ಗೆಗೆ ವಾಪಸ್ಸು ಬರುವಷ್ಟರಲ್ಲಿ, ಮೈಸೂರಿನ ಬಯೋಟೆಕ್ನಾಲಜಿ ಸಂಸ್ಥೆಯಿಂದ ಮಿಲಿಂದನಿಗೆ ನೇಮಕಾತಿ ಪತ್ರ ಬಂದಿತ್ತು. ಕೆಲಸಕ್ಕೆ ಸೇರಲು ಕೇವಲ ನಾಲ್ಕು ದಿನಗಳ ಅವಧಿ ಕೊಟ್ಟಿದ್ದರು. ಹೀಗಾಗಿ, ಕೆಲಸಕ್ಕೆ ಹಾಜರಾಗಲು ಸಿದ್ಧತೆ ಮಾಡಿಕೊಳ್ಳುವ ಸಡಗರದಲ್ಲಿ, ಮೂರ್ತಿಯವರ ಸಿ.ಡಿ ಗಳಲ್ಲಿನ ದಾಖಲೆಗಳನ್ನು ಅಧ್ಯಯನ ಮಾಡಲಾಗಿರಲಿಲ್ಲ. ಕೇವಲ ಕುತೂಹಲಕ್ಕಾಗಿ, ಯಾವ ತತ್ವದ ಆಧಾರದ ಮೇಲೆ ಅವರು ತಮ್ಮ ಸಂಶೋಧನೆಯನ್ನು ನಡೆಸಿರಬಹುದು ಎಂದು ತಿಳಿದುಕೊಳ್ಳಲು ಒಮ್ಮೆ ಅವುಗಳ ಮೇಲೆ ಕಣ್ಣಾಡಿಸಿದ್ದ. ಮೂರ್ತಿಯವರ ನಿಧನದನಂತರ "ಚರಮದಿನ" ಕುರಿತಾಗಿ ಪ್ರಕಟವಾದ ಅಭಿಪ್ರಾಯಗಳ ಮೇಲೆ ಸದಾ ಒಂದು ಕಣ್ಣಿಟ್ಟಿದ್ದ. ಇದುವರೆಗೂ ಅದಕ್ಕೆ ಹೆಚ್ಚಾಗಿ ವಿರೋಧವೇ ವ್ಯಕ್ತವಾಗಿತ್ತು. ಮೈಸೂರಿನಲ್ಲಿ ಕೆಲಸಕ್ಕೆ ಸೇರಿದ ಮೇಲೆ, ತನಗೊಪ್ಪಿಸಿದ ಪ್ರಾಜೆಕ್ಟ್ ನಲ್ಲಿ ವ್ಯಸ್ತನಾಗಿ ಆ ಸಿ.ಡಿ ಗಳ ವಿಷಯವನ್ನು ಮರೆತೇ ಬಿಟ್ಟಿದ್ದ.
ಅವನಿಗೆ ಆ ಸಿ.ಡಿ ಗಳ ನೆನಪು ಬಂದದ್ದು ಒಂದು ವರ್ಷದ ನಂತರವೇ. ಅದೊಂದು ದಿನ, ಅವನ ಟೀಮ್ ನಲ್ಲಿದ್ದ ಆಭಾ ಗೋಖಲೆ ಎಂಬ ಸಹಾಯಕಿ ಅವನ ಬಳಿ ಒಂದು ಸಮಸ್ಯೆಯನ್ನು ತಂದಿದ್ದಳು. ಅವರ ಟೀಮ್ ಗೆ ಕೊಟ್ಟಿದ್ದ ಪ್ರಾಜಿಕ್ಟ್ ನ ಫಲಿತಾಂಶಗಳ ಮರುಪರಿಶೀಲನೆ ಮತ್ತು ವಿಶ್ಲೇಷಣೆಯ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಆಭಾ ಗೋಖಲೆ ಬಹಳ ಚೂಟಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಅವಳಿಗೆ ಸಮಸ್ಯೆ ತಲೆದೋರಿದೆ ಎಂದರೆ ಅದು ಬಹು ಕ್ಲಿಷ್ಟವಾದ ಸಮಸ್ಯೆಯೇ ಇರಬೇಕು ಎಂದು ಮಿಲಿಂದ್ ಆಗಲೇ ತೀರ್ಮಾನಿಸಿದ್ದ.
"ಮಿಲಿಂದ್, ನಮ್ಮ ಸಂಶೋಧನಾ ವಿಭಾಗದ ವಿವಿಧ ಶಾಖೆಗಳಿಂದ ಬಂದ ಫಲಿತಾಂಶಗಳನ್ನೆಲ್ಲಾ ಟ್ಯಾಬುಲೇಟ್ ಮಾಡುತ್ತಿದ್ದೆ. ಇವುಗಳನ್ನು ಅನಾಲೈಸ್ ಮಾಡಲು ಸೂಕ್ತ ಮಲ್ಟಿಪಲ್ ರಿಗ್ರೆಷನ್ ಫಾರ್ಮುಲಾ ದೊರೆಯುತ್ತಿಲ್ಲ " ಎಂದು ಹೇಳಿದಳು. ಅವಳು ನೀಡಿದ ಫಲಿತಾಂಶಗಳನ್ನು ಗಮನಿಸಿದ ಮಿಲಿಂದನಿಗೆ ತಕ್ಷಣವೇ ಏನೂ ಹೇಳಲಾಗಲಿಲ್ಲ.
" ಆಯಿತು, ಇವು ನನ್ನ ಬಳಿಯಲ್ಲಿಯೇ ಇರಲಿ. ನಿಧಾನವಾಗಿ ಪರಿಶೀಲಿಸುತ್ತೇನೆ" ಎಂದು ಅವಳನ್ನು ಕಳಿಸಿದ ಬಳಿಕ ಆ ಸಮಸ್ಯೆಯೇ ಅವನನ್ನು ಕೊರೆಯಲಾರಂಭಿಸಿತು.
ಮನೆಗೆ ಬಂದ ನಂತರವೂ ಅದು ಅವನನ್ನು ಕಾಡುತ್ತಿತ್ತು. ಆ ರಾತ್ರಿ ಮಲಗಲು ಹವಣಿಸಿಸುತ್ತಿದ್ದಾಗ, ಇಂತಹುದೇ ಸಮಸ್ಯೆಯನ್ನು ಹಿಂದೆಲ್ಲಿಯೋ ನೋಡಿದ ನೆನಪು ಬಂತು.ಎಲ್ಲಿ ನೋಡಿರಬಹುದೆಂದು ತೀವ್ರವಾಗಿ ಯೋಚಿಸುತ್ತಿದ್ದಾಗ, ಮೂರ್ತಿಯವರು ಕೊಟ್ಟ ದಾಖಲೆಗಳಲ್ಲಿ ಅಂತಹುದೇ ಸಮಸ್ಯೆ ಬಂದಿದ್ದನ್ನು ಮತ್ತು ಅದನ್ನು ಪರಿಹರಿಸಿದ್ದನ್ನೂ ಗಮನಿಸಿದ್ದ. ತಟ್ಟನೇ ಹಾಸಿಗೆಯಿಂದೆದ್ದು, ಜೋಪಾನವಾಗಿ ತೆಗೆದಿಟ್ಟಿದ್ದ ಆ ಸಿ.ಡಿ ಗಳನ್ನು ಲ್ಯಾಪ್ ಟಾಪ್ ನಲ್ಲಿ ಹಾಕಿ ತನಗೆ ಬೇಕಾದ ಸಮಸ್ಯೆಯ ಪರಿಹಾರವನ್ನು ಕಂಡುಕೊಂಡ.
ಈ ಸಂದರ್ಭದಲ್ಲಿ ಅವನು ಆರನೇ ಸಿ.ಡಿ ಯನ್ನು ತೆರೆದಾಗ ಮೂರ್ತಿಯವರು ತನಗೆ ಬರೆದ ಎರಡನೇ ಪತ್ರ ಕಾಣಿಸಿತು. ಅದನ್ನು ಓದುವ ಕುತೂಹಲದಿಂದ ಅದರ ಮೇಲೆ ಕ್ಲಿಕ್ ಮಾಡಿದಾಗ, ಆ ಪತ್ರ ತೆರೆದುಕೊಳ್ಳುವ ಬದಲು ಒಂದು ಸಂದೇಶ ಕಾಣಿಸಿತು.
"ನಿಜಕ್ಕೂ ಈ ಪತ್ರ ಓದುವ ಸಂದರ್ಭ ಬಂದಿದೆಯೇ ?"
ಮೂರ್ತಿಯವರ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಆ ಪತ್ರವನ್ನು ತೆರೆಯಲು ಪ್ರಯತ್ನಿಸಿದ ಮಿಲಿಂದನಿಗೆ ಸ್ವಲ್ಪ ನಾಚಿಕೆಯೆನಿಸಿತು. ಆ ಪತ್ರವನ್ನು ತೆರೆಯುವ ಗೋಜಿಗೆ ಹೋಗದೆ ತನಗೆ ಬೇಕಾದ ಇತರ ಮಾಹಿತಿಗಳತ್ತ ಅವನು ತನ್ನ ಗಮನವನ್ನು ಹರಿಸಿದ. ಮೂರ್ತಿಯವರಿಗೆ ಬಂದ ಸಮಸ್ಯೆಯೇ ಅವನಿಗೂ ಬಂದಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಇಬ್ಬರ ಸಂಶೋಧನೆಗಳೂ, ನಮ್ಮ ದೇಹದ ಜೀವಕೋಶಗಳಲ್ಲಿ ಕಾರ್ಯನಿರ್ವಹಿಸುವ ಎನ್ ಜೈಮ್ ಗಳ ಕುರಿತಾಗಿಯೇ ಇದ್ದುದರಿಂದ ಇಬ್ಬರಿಗೂ ಒಂದೇ ತರಹದ ಸಮಸ್ಯೆ ಎದುರಾಗಿತ್ತು.
ಮರುದಿನ ಆಭಾಳನ್ನು ಕರೆದು ಸಮಸ್ಯೆಗೆ ಪರಿಹಾರವನ್ನು ಸೂಚಿಸಿದಾಗ, ಅವಳ ಕಣ್ಣುಗಳಲ್ಲಿ ಕಂಡ ಮೆಚ್ಚುಗೆಯನ್ನು ಗಮನಿಸಿ ಸಂತಸವಾದರೂ, ಅದರಲ್ಲಿ ತನ್ನ ಸ್ವಂತಿಕೆ ಇರದಿದ್ದುದರಿಂದ ಸ್ವಲ್ಪ ಮುಜುಗರ ಪಟ್ಟುಕೊಂಡ. ಸದ್ಯದ ಸಮಸ್ಯೆ ಪರಿಹಾರವಾದ ಮೇಲೆ, ಸಿ.ಡಿ. ಯಲ್ಲಿ ತಾನು ಕಂಡ ಮೂರ್ತಿಯವರ ಸಂಶೋಧನೆಯ ಫಲಿತಾಂಶಗಳನ್ನು ಪರಿಶೀಲಿಸುತ್ತಿದ್ದಾಗ ಅದೇನೋ ಒಂದು ವಿಶೇಷತೆಯನ್ನು ಗಮನಿಸಿದ್ದ. ಹಿಂದಿನ ದಿನ ಒಂದು ಸಮಸ್ಯೆ ಅವನನ್ನು ಕಾಡಿದಂತೆ, ಇಂದು ಇನ್ನೊಂದು ಬಗೆಯ ಸಮಸ್ಯೆ ಅವನನ್ನು ಕಾಡಲಾರಂಭಿಸಿತು. ಮೂರ್ತಿಯವರ ಸಂಶೋಧನೆಯಲ್ಲಿ ತಾನು ಕಂಡ ಅಂಕಿಅಂಶಗಳು, ಚರಮದಿನವನ್ನು ನಿರ್ಧರಿಸುವುದಷ್ಟೇ ಅಲ್ಲದೇ ಇನ್ನಾವುದನ್ನೋ ಸೂಚಿಸುತ್ತಿರುವಂತೆ ಕಾಣುತ್ತಿತ್ತು.
ಮರುದಿನ ಬೆಳಿಗ್ಗೆ ಐದು ಗಂಟೆಗೇ ಎಚ್ಚರವಾಗಿತ್ತು. ಅವನನ್ನು ಹೊಡೆದೆಬ್ಬಿಸಿದಂತೆ ಎಚ್ಚರಮಾಡಿದ್ದು, ಅವನನ್ನು ಕಾಡುತ್ತಿದ್ದ ಸಮಸ್ಯೆಗೆ ಕಂಡ ಪರಿಹಾರ ! ಆ ಪರಿಹಾರ ಕನಸಿನಲ್ಲಿ ಕಂಡಿತ್ತೋ, ಅಥವಾ ಅದೇ ತಾನೇ ಜಾಗೃತವಾಗುತ್ತಿದ್ದ ಅವನ ಮಿದುಳೇ ಕಂಡುಹಿಡಿದದ್ದೋ ಅವನಿಗೆ ಗೊತ್ತಾಗಲಿಲ್ಲ. ಈ ಹಿಂದೆ ಚರಿತ್ರೆಯಲ್ಲಿ, ಕೆಲವು ವಿಜ್ಞಾನಿಗಳಿಗೆ ಕನಸಿನಲ್ಲಿಯೇ ಅವರ ಸಮಸ್ಯೆಗೆ ಉತ್ತರ ಹೊಳೆದ ಪ್ರಸಂಗಗಳಿವೆ.
ಮರುದಿನ ಆಫೀಸಿಗೆ ಬಂದಕೂಡಲೇ, ಆಭಾಗೆ ಹೇಳಿಕಳಿಸಿದ.
"ನೋಡಿ ಮಿಸ್ ಗೋಖಲೆ, ನಿಮಗೊಂದು ಕೆಲಸ ಒಪ್ಪಿಸುತ್ತಿದ್ದೇನೆ. ಈ ಕೆಲಸ ನಮ್ಮ ಸಂಸ್ಥೆಗೆ ಸಂಬಂಧಿಸಿದ್ದಲ್ಲ. ಇದು ನನ್ನ ಪರ್ಸನಲ್ ಪ್ರಾಜೆಕ್ಟ್ ಎಂದರೂ ತಪ್ಪಿಲ್ಲ. ಮಾಡಲಾಗುತ್ತದೆಯೇ ಪ್ಲೀಸ್" ಎಂದು ಅನುನಯದಿಂದ ಕೇಳಿದ ಮಿಲಿಂದನ ಕೋರಿಕೆಗೆ ಇಲ್ಲವೆನ್ನಲು ಮನ ಬಾರದ ಆಭಾ,
"ವಿವರಗಳನ್ನು ಕೇಳಿದ ಮೇಲೆ ಹೇಳಿದರಾಗದೇ ?" ಎಂದಳು.
"ಖಂಡಿತವಾಗಿ. ನೀವು ಮಾಡಬೇಕಾದದ್ದಿಷ್ಟೇ. ನಮ್ಮ ಸಂಸ್ಥೆಯಲ್ಲಿ ಸಿಬ್ಬಂದಿಯ ಸಂಖ್ಯೆ ಸುಮಾರು ನೂರಿಪ್ಪತ್ತು ಇರಬೇಕು. ಅವರೆಲ್ಲರ ರಕ್ತದ ಸ್ಯಾಂಪಲ್ ಸಂಗ್ರಹಿಸಬೇಕು ಮತ್ತು
ಆ ಸ್ಯಾಂಪಲ್ ಗಳನ್ನು ನಾನು ಹೇಳುವ ನಾಲ್ಕು ಬಗೆಯ ಪರೀಕ್ಷೆಗೊಳಪಡಿಸಬೇಕು. ಮುಂದಿನದ್ದನ್ನು ನಾನು ನಂತರ ಹೇಳುತ್ತೇನೆ. ಆಗದೇ ?"
"ಆದರೆ, ಹಾಗೆ ಸುಮ್ಮಸುಮ್ಮನೆ ರಕ್ತಪರೀಕ್ಷೆ ಮಾಡಿಸಿಕೊಳ್ಳಲು ಸಿಬ್ಬಂದಿ ಒಪ್ಪಿಕೊಳ್ಳುತ್ತಾರೆಯೇ ?" ಎಂದು ಅನುಮಾನಿಸಿದಳು.
"ಅದರ ಬಗ್ಗೆ ನಾನು ಯೋಚಿಸಿದ್ದೇನೆ. ನಮ್ಮ ಸಿ.ಇ.ಒ ಅವರೊಡನೆ ಮತ್ತು ಎಚ್. ಆರ್. ಡಿ ಮುಖ್ಯಸ್ಥರನ್ನು ಒಪ್ಪಿಸಿ ಒಂದು ಸುತ್ತೋಲೆ ಕಳಿಸೋಣ" ಎಂದ ಮಿಲಿಂದ್.
"ಹಾಗಾದರೆ ಆಗಬಹುದು. ನೀವು ಸುತ್ತೋಲೆ ಕಳಿಸಿದ ತಕ್ಷಣವೇ ನಾನು ನನ್ನ ಕೆಲಸ ಆರಂಭಿಸುತ್ತೇನೆ" ಎಂದು ಒಪ್ಪಿಕೊಂಡಳು.
ಅದೇ ದಿನ ಮಧ್ಯಾಹ್ನ ಸಿ.ಇ.ಒ ಸಿಂಘಾನಿ ಅವರೊಡನೆ ಅಪಾಯಿಂಟ್ ಮೆಂಟ್ ತಗೆದುಕೊಂಡ ಮಿಲಿಂದ್.
ಮಧ್ಯಾಹ್ನವಾಗುವುದನ್ನೇ ಚಡಪಡಿಕೆಯಿಂದ ಕಾಯಲಾರಂಭಿಸಿದ.
ಮಧ್ಯಾಹ್ನ ಅವರನ್ನು ಕಾಣಲು ಹೋದಾಗ, " ಓ, ಮಿಲಿಂದ್ ಬನ್ನಿ. ಏನು ಬೇಕಾಗಿತ್ತು ?" ಎಂದು ಅವನನ್ನು ಆದರದಿಂದಲೇ ಬರಮಾಡಿಕೊಂಡರು ಸಿಂಘಾನಿ.
"ಸರ್, ನಾನೊಂದು ಮಹತ್ವದ ಸಂಶೋಧನೆ ಮಾಡಲಿದ್ದೇನೆ ಎನಿಸುತ್ತಿದೆ. ಅದಕ್ಕೆ ನಿಮ್ಮ ಸಹಕಾರ ಬೇಕಾಗಿದೆ....."
"ಸಂಶೋಧನೆಗೆಂದೇ ನಮ್ಮ ಸಂಸ್ಥೆ ಇರುವುದಲ್ಲವೇ ? ಅದಕ್ಕೇಕೆ ನನ್ನ ಸಹಕಾರ ಒಪ್ಪಿಗೆ ಬೇಕು ?"
"ಆದರೆ, ಈ ಸಂಶೋಧನೆ ನಮ್ಮ ಸಂಸ್ಥೆಗೆ ಸಂಬಂಧಿಸದ ವಿಷಯ ಸರ್"
"ಅರೆ, ಹಾಗಾದ್ರೆ, ನಾವು ಹೇಗೆ ಸಪೋರ್ಟ್ ಮಾಡ್ಲಿಕ್ಕೆ ಸಾಧ್ಯ ?"
" ಸರ್, ಇದು ಎಷ್ಟು ಮಹತ್ವದ ಸಂಶೋಧನೆ ಎಂದರೆ, ಈ ಸಂಶೋಧನೆ ಸಫಲವಾದರೆ, ನಮ್ಮ ಕಂಪೆನಿಗೆ ಅದ್ಭುತ ಪ್ರಚಾರ ಸಿಕ್ಕುತ್ತದೆ. ಇದಕ್ಕಾಗಿ ಬೇಕಾಗಿರುವುದು
ಕೇವಲ ನಮ್ಮ ಸಿಬ್ಬಂದಿಯ ಸಹಕಾರ ಮತ್ತು ನಮ್ಮ ಲ್ಯಾಬೋರೆಟರಿಯನ್ನು ಉಪಯೋಗಿಸುವ ಅವಕಾಶ ಮಾತ್ರ"
"ಸಿಬ್ಬಂದಿಯ ಸಹಕಾರ ಎಂದರೆ ?"
"ಪ್ರತಿಯೊಬ್ಬ ಸಿಬ್ಬಂದಿಯಿಂದ ಒಂದು ಹನಿ ರಕ್ತವನ್ನು ಸಂಗ್ರಹಿಸುವ ಅವಕಾಶ ಅಷ್ಟೇ ಸರ್. ನಮ್ಮ ಸಿಬ್ಬಂದಿಯರಿಗೆ ಎಂದಾದರೂ ರಕ್ತದಾನ ಬೇಕಾಗಿ ಬಂದರೆ, ನಮ್ಮ ಸಿಬ್ಬಂದಿಯಿಂದಲೇ ಅದನ್ನು ಪಡೆಯಬಹುದಾದ ವ್ಯವಸ್ಥೆಗೆ ಪೂರ್ವಸಿದ್ಧತೆಯಾಗಿ ಹೀಗೆ ಮಾಡುತ್ತಿದ್ದೇವೆ ಎಂದು ಹೇಳಿ ನಾವು ಅವರ ರಕ್ತದ ನಮೂನೆಗಳನ್ನು ಪಡೆಯಬಹುದಲ್ಲವೇ ?”
"ನಿಮ್ಮ ಸಲಹೆ ಒಪ್ಪಿಕೋಬಹುದು ಎನಿಸುತ್ತದೆ. ನೋಡೋಣ. ಎಚ್.ಆರ್.ಡಿ ಯವರೊಡನೆ ಮಾತನಾಡಿ ನಿಮಗೆ ತಿಳಿಸುತ್ತೇನೆ" ಎಂದು ಆಶ್ವಾಸನೆ ನೀಡಿದರು. ಮತ್ತೆ ಏನೋ ಜ್ಞಾಪಿಸಿಕೊಂಡವರಂತೆ, "ಮಿಲಿಂದ್, ಇದೊಂದು ಬಹಳ ಮಹತ್ವದ ಸಂಶೋಧನೆ ಎಂದು ಹೇಳಿದಿರಿ. ಕೇವಲ ನಮ್ಮ ಸಿಬ್ಬಂದಿಗಳ ರಕ್ತ ಪರೀಕ್ಷೆಯೊಂದಾದರೆ ಸಾಕಾಗುತ್ತದೆಯೇ ?"
ಎಂದು ಕೇಳಿದರು.
"ಸರ್, ಪರಿಸ್ಥಿತಿ ಹೀಗಿದೆ. ಅದಾಗಲೇ ಸಿದ್ಧವಾಗಿರುವ ಅಡುಗೆಯಲ್ಲಿ ಬೆಟ್ಟನ್ನದ್ದಿ ರುಚಿ ನೋಡಿದಂತೆ "
"ಅಂದರೆ, ಈ ಸಂಶೋಧನೆಯ ಬಹುತೇಕ ಭಾಗವನ್ನು ಈಗಾಗಲೇ ಮಾಡಿ ಮುಗಿಸಿರುವಿರಾ ? "
"ಒಂದು ರೀತಿ ಹಾಗೆಯೇ ಹೇಳಬಹುದು ಸರ್. ಆದರೆ ಅದಕ್ಕಾಗಿ ಕಂಪೆನಿಯ ವೇಳೆಯನ್ನಾಗಲೀ, ಸಾಮಾಗ್ರಿಗಳನ್ನಾಗಲೀ ಸ್ವಲ್ಪವೂ ಬಳಸಿಲ್ಲ ಎಂದು ಮಾತ್ರ ಹೇಳಬಲ್ಲೆ "
"ನಿಮ್ಮ ಈಗಿನ ಪ್ರಸ್ತಾಪಕ್ಕೆ ಎಷ್ಟು ಖರ್ಚು ಬರಬಹುದು ?"
"ಸರ್, ನನ್ನ ಅಂದಾಜಿನ ಪ್ರಕಾರ ಸುಮಾರು ಐವತ್ತು ಸಾವಿರ ರೂಪಾಯಿಗಳ ಖರ್ಚು ಬರಬಹುದು"
"ಹಾಗಾದರೆ ಈ ವೆಚ್ಚವನ್ನು ಯಾವ ಲೆಕ್ಕಕ್ಕೆ ಸೇರಿಸಬಹುದು....." ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡಾಗ, ಮಿಲಿಂದ್ ಮುಂದುವರೆದು,
"ಸರ್, ಒಂದುವೇಳೆ, ಈ ಸಂಶೋಧನೆಯಿಂದ ನಮ್ಮ ಸಂಸ್ಥೆಗೆ ಯಾವ ಉಪಯೋಗವೂ ಕಂಡು ಬಾರದಿದ್ದರೆ, ಈ ಖರ್ಚನ್ನು ನನ್ನ ವೇತನದಲ್ಲಿ, ಕೆಲವು ಕಂತುಗಳಲ್ಲಿ ಮುರಿದುಕೊಳ್ಳಬಹುದು....." ಎಂದು ಸೂಚಿಸಿದ.
ಸಿಂಘಾನಿಯವರು ನಗುತ್ತಾ "ಆಗಲಿ, ಆ ಸಂದರ್ಭ ಬಾರದೇ ಇರಲಿ ಎಂದು ಹಾರೈಸೋಣ. ಓಕೆ. ವಿಷ್ ಯು ಆಲ್ ದ ಬೆಸ್ಟ್" ಎಂದು ಮಿಲಿಂದನ ಕೈಕುಲುಕಿದರು.
ಸಿಬ್ಬಂದಿಯವರ ರಕ್ತದ ನಮೂನೆಗಳನ್ನು ಸಂಗ್ರಹಿಸಿದ ಮೇಲೆ ಅವುಗಳನ್ನು ಯಾವ ಯಾವ ಪರೀಕ್ಷೆಗಳಿಗೊಳಪಡಿಸಬೇಕು, ಮತ್ತು ತನಗೆ ಬೇಕಾದ ಸಿಬ್ಬಂದಿಗಳ ವೈಯುಕ್ತಿಕ ವಿವರಗಳನ್ನು ಒಂದು ಚೀಟಿಯಲ್ಲಿ ಬರೆದು, ಆಭಾಗೆ ಕಳುಹಿಸಿದ. ಸ್ವಲ್ಪ ಹೊತ್ತಿನಲ್ಲಿ, ಆಭಾ ಅವನ ಬಳಿಗೆ ಬಂದು, "ನಿಮ್ಮ ಈ ಪಟ್ಟಿಯಲ್ಲಿ ಒಂದು ಮುಖ್ಯವಾದ ಪರೀಕ್ಷೆಯನ್ನೇ ಕೈಬಿಟ್ಟೀದ್ದೀರಲ್ಲಾ, ಮಿಲಿಂದ್" ಎಂದಳು ಆತಂಕವನ್ನು ನಟಿಸುತ್ತಾ.
"ಮುಖ್ಯವಾದ ಪರೀಕ್ಷೆಯೇ, ಎಲ್ಲಿ ನೋಡೋಣ ತಾ" ಎಂದು ಅವಳಿಂದ ಆ ಪಟ್ಟಿಯನ್ನು ಪಡೆದು ಅದರಲ್ಲಿ ಯಾವ ಪರೀಕ್ಷೆ ಬಿಟ್ಟುಹೋಗಿದೆಯೆಂದು ಯೋಚಿಸಲಾರಂಭಿಸಿದ.
"ಯಾವುದೂ ಬಿಟ್ಟು ಹೋದಂತೆ ಕಾಣುವುದಿಲ್ಲವಲ್ಲಾ" ಎಂದು ರಾಗವೆಳೆಯುತ್ತಿದ್ದಂತೆ,
"ನಾನು ಅದನ್ನು ತೋರಿಸಿಕೊಟ್ಟರೆ, ಪಾರ್ಟಿ ಕೊಡುವಿರಿ ತಾನೇ" ಎಂದಳು ತುಂಟ ನಗೆ ಸೂಸುತ್ತಾ.
"ಡೆಫಿನೆಟ್ ಲೀ" ಎಂದ ಮಿಲಿಂದ್ ಗೊಂದಲದಿಂದ.
"ಸರಿ, ಹಾಗಾದರೆ ಹೇಳುತ್ತೀನಿ. ಸಿ.ಇ.ಒ ಅವರ ಬಳಿ ನೀವು ಇದಕ್ಕೆ ಒಪ್ಪಿಗೆ ಪಡೆದುಕೊಳ್ಳುವಾಗ, ಯಾವ ನೆಪದಲ್ಲಿ ರಕ್ತದ ನಮೂನೆಗಳನ್ನು ಸಂಗ್ರಹಿಸಬಹುದು ಎಂದು ಹೇಳಿದ್ದಿರಿ ನೆನಪಿಸಿಕೊಳ್ಳಿ" ಎಂದಳು.
" ಓ, ಆ ಪರೀಕ್ಷೆಯಾ, ಆಯಿತು. ನನ್ನ ಸಂಶೋಧನೆಯ ಭರದಲ್ಲಿ ಅದನ್ನು ಮರೆತೇ ಬಿಟ್ಟಿದ್ದೆ. ಆಯಿತು ಬ್ಲಡ್ ಗ್ರೂಪ್ ನ ಪರೀಕ್ಷೆಯನ್ನೂ ನಿಮ್ಮ ಪಟ್ಟಿಗೆ ಸೇರಿಸಿಕೊಳ್ಳಿ" ಎಂದ ಗಟ್ಟಿಯಾಗಿ ನಗುತ್ತಾ.
"ಅದಕ್ಕೇ ಹೇಳುವುದು, ಗ್ರೇಟ್ ಸ್ಕಾಲರ್ಸ್ ಆರ್ ಪೂರ್ ಲಯರ್ಸ್ ( great scholars are poor liars ) ಅಂತ" ಎಂದು ಅವನ ನಗುವಿನಲ್ಲಿ ಅವಳೂ ಭಾಗಿಯಾದಳು.
ಕೇವಲ ಮೂರು ದಿನಗಳ ಅವಧಿಯಲ್ಲಿ, ನೂರಾ ಎರಡು ಸಿಬ್ಬಂದಿಗಳ ರಕ್ತ ಪರೀಕ್ಷೆಯ ವರದಿಗಳನ್ನು ಸಂಗ್ರಹಿಸಿ ಅವನ ಮುಂದಿಟ್ಟದ್ದಳು ಆಭಾ.
"ಹದಿನೆಂಟು ಸಿಬ್ಬಂದಿಯವರನ್ನು ಪರೀಕ್ಷಿಸಲಾಗಲಿಲ್ಲ. ಅವರೆಲ್ಲರೂ ರಜೆಯ ಮೇಲಿದ್ದಾರೆ"
"ದಟ್ ಈಸ್ ವಾಟ್ ಐ ಕಾಲ್ ಎಫಿಷಿಯನ್ಸಿ" ಎಂದು ಮಿಲಿಂದ ತನ್ನ ಮೆಚ್ಚುಗೆ ತೋರಿದಾಗ, ಅವಳ ಮುಖ ಇಷ್ಟಗಲ ಅರಳಿತು.
"ಈಗ ನಿಮ್ಮ ಮುಖ ದುಂಡಗಾಯಿತು" ಎಂದ ಮಿಲಿಂದ್ ವಿನೋದದಿಂದ.
"ಅಂದರೆ ?" ಎಂದು ಮುಖದಲ್ಲ್ಲಿ ಪ್ರಶ್ನೆ ಮೂಡಿಸಿದಳು ಆಭಾ ಅರ್ಥವಾಗದೆ.
"ನಿಮ್ಮ ಉದ್ದ ಮುಖ ಅಗಲಕ್ಕೂ ಅರಳಿದ್ದರಿಂದ, ದುಂಡಗಾಯಿತು, ಅರ್ಥಾತ್ ಕವಿಗಳು ಹೇಳುವಂತೆ ಚಂದಿರವದನೆಯಾದಿರಿ" ಎಂದ ಮಿಲಿಂದ್ ನಗುತ್ತಾ. ಸ್ವಲ್ಪ ಉದ್ದ ಮುಖದ
ನಸುಗಪ್ಪು ಬಣ್ಣದ ಆಕರ್ಷಕ ಮೈಕಟ್ಟಿನ ಆಭಾಳ ಮುಖದಲ್ಲಿ ಅಚ್ಚರಿ ಮೂಡಿತು.
"ಓಹ್, ಪರವಾಗಿಲ್ಲ, ಅಪ್ಸರೆಯರನ್ನೂ ಗಮನಿಸದ ಸನ್ಯಾಸಿ ನೀವು ಎಂದು ಭಾವಿಸಿದ್ದೆ" ಎಂದಳು ಅವನ ವಿನೋದಕ್ಕೆ ಸ್ಪಂದಿಸುತ್ತಾ.
"ಅದೇನೋ ನಿಜ, ಆದರೆ ಅಪ್ಸರೆಯರನ್ನೂ ಮೀರಿಸಿದವರು ಎದುರಾದರೆ ಏನು ಮಾಡುವುದು ?" ಎಂದ ಗೊಂದಲಕ್ಕೊಳದವನಂತೆ ನಟಿಸುತ್ತಾ..
" ಓ ಪರವಾಗಿಲ್ಲ ಹುಡುಗಿಯರನ್ನ ಬುಟ್ಟಿಗೆ ಹಾಕಿಕೊಳ್ಳೋಕೂ ಬರುತ್ತೆ !" ಎಂದಳು ಹುಸಿವಿಸ್ಮಯದಿಂದ.
"ಹಾಗಾದರೆ ನನ್ನ ಬುಟ್ಟಿಗೆ ಬಿದ್ದಿರಿ ಅಂತ ಆಯ್ತು" ಎಂದ ಛೇಡಿಸುತ್ತಾ.
"ಓಹೋ, ನಾನೇನೂ ಅಷ್ಟು ಸುಲಭವಾಗಿ ಬುಟ್ಟಿಗೆ ಬೀಳುವ ಮೀನಲ್ಲ " ಎಂದು ಹುಬ್ಬು ಹಾರಿಸಿದಳು.
"ಓಕೆ. ಬ್ಯಾಕ್ ಟು ಬ್ಯುಸಿನೆಸ್. ನಿಮಗೊಪ್ಪಿಸಿದ ಕೆಲಸ ಸಮರ್ಪಕವಾಗಿ ಮುಗಿಸಿದಿರಿ. ನಿಮಗೆ ಒಂದು ಪಾರ್ಟಿ ಕೊಡಲೇ ಬೇಕು"
"ಒಂದಲ್ಲ ಎರಡು ಪಾರ್ಟಿ. ಮೊನ್ನೆ ಒಂದು ಪಾರ್ಟಿ ನಿಮ್ಮಿಂದ ಗಿಟ್ಟಿಸಿದ್ದೆ. ಜ್ಞಾಪಕವಿದೆ ತಾನೇ ?"
"ಆಯಿತು" ಎಂದ ಮಿಲಿಂದ್ ಹುಸಿ ನಿಟ್ಟುಸಿರು ಬಿಡುತ್ತಾ.
ಆಫೀಸಿನಿಂದ ಮನೆಗೆ ಬಂದವನೇ, ಆಭಾ ಕೊಟ್ಟ ರಕ್ತ ಪರೀಕ್ಷೆಯ ಫಲಿತಾಂಶಗಳನ್ನಾಧರಿಸಿ, ಸಿಬ್ಬಂದಿಗಳ ವಯಸ್ಸನ್ನು ದಿನಗಳ ಲೆಕ್ಕದಲ್ಲಿ ನಿರ್ಧರಿಸಿದ. ಯಾವಯಾವ ಸಿಬ್ಬಂದಿಗೆ ತಮ್ಮ ಜನ್ಮ ದಿನ ಖಚಿತವಾಗಿ ಗೊತ್ತಿತ್ತೋ ಅವರದೇ ಒಂದು ಪ್ರತ್ಯೇಕ ಪಟ್ಟಿ ಮಾಡಿಕೊಡುವಂತೆ ಆಭಾಗೆ ತಿಳಿಸಿದ್ದ. ನೂರಾ ಎರಡು ಸಿಬ್ಬಂದಿಗಳಲ್ಲಿ ಎಂಭತ್ತೈದು ಸಿಬ್ಬಂದಿಗಳು ತಮ್ಮ ಜನ್ಮದಿನವನ್ನು ಖಚಿತಗೊಳಿಸಿದ್ದರು. ಇವರೆಲ್ಲರ ವಯಸ್ಸನ್ನು , ಅವರ ಜನ್ಮದಿನದ ಆಧಾರದ ಮೇಲೆ ದಿನಗಳ ಲೆಕ್ಕದಲ್ಲಿ ನಿರ್ಧರಿಸಿದ. ಮೂವತ್ತು ವರ್ಷ, ನಾಲ್ಕು ತಿಂಗಳು, ಇಪ್ಪತ್ತು ದಿನಗಳ ವಯಸ್ಸಿನ ಒಬ್ಬ ವ್ಯಕ್ತಿಯ ವಯಸ್ಸು, ದಿನಗಳ ಲೆಕ್ಕದಲ್ಲಿ ೩೬೫ x ೩೦+೩೦ x ೪+೨೦=೧೦೯೫೦+೧೨೦+೨೦=೧೧೦೯೭ ದಿನಗಳು+೭ (ಈ ಅವಧಿಯಲ್ಲಿ ಬರಬಹುದಾದ ೨೯ ದಿನಗಳ ಫೆಬ್ರುವರಿ ತಿಂಗಳುಗಳನ್ನು ಸೇರಿಸಿ) = ೧೧೦೯೭. ಹೀಗೆ ದೊರೆತ ಸಂಖ್ಯೆಯನ್ನು ಅದೇ ವ್ಯಕ್ತಿಯ ರಕ್ತ ಪರೀಕ್ಷೆಯ ಆಧಾರದ ಮೇಲೆ ನಿರ್ಧರಿಸಿದ ದಿನಗಳ ಸಂಖ್ಯೆಯ ಜೊತೆ ತಾಳೆ ಹಾಕಿ ನೋಡತೊಡಗಿದ.
ಸುಮಾರು ಮೂವತ್ತು ಸಿಬ್ಬಂದಿಗಳ ವಯಸ್ಸನ್ನು ಈ ರೀತಿ ತಾಳೆ ನೋಡುವ ಹೊತ್ತಿಗೆ, ಅವನ ಮುಖದ ಮೇಲೆ ತೃಪ್ತಿಯ ನಗೆ ಮೂಡಿತು. ಅರವತ್ತು ಸಿಬ್ಬಂದಿಗಳ ವಯಸ್ಸನ್ನು ತಾಳೆ ಮಾಡಿ ನೋಡುತ್ತಿರುವಾಗ, ಉದ್ವೇಗದಿಂದ ಅವನ ಎದೆ ನಗಾರಿಯಂತೆ ಹೊಡೆದುಕೊಳ್ಳಲಾರಂಭಿಸಿತು. ಇನ್ನೂ ಇಪ್ಪತ್ತು ಸಿಬ್ಬಂದಿಗಳ ವಯಸ್ಸನ್ನು ತಾಳೆ ಮಾಡಿ ನೋಡುವಷ್ಟರಲ್ಲಿ, ಅವನ ಊಹೆಗೆ ಬಲವಾದ ಪುಷ್ಠಿ ದೊರೆತು, "ಯೂರೇಕಾ" ಎಂದು ಕೂಗಿ ಸಂಭ್ರಮಿಸಬೇಕೆನಿಸಿತು. ರಾತ್ರಿ ಎರಡು ಗಂಟೆಯಾಗಿದ್ದರೂ, ಉತ್ತೇಜಿತನಾಗಿದ್ದ ಅವನಿಂದ ನಿದ್ರೆ ದೂರವೇ ಉಳಿಯಿತು.
ಮರುದಿನ ಆಫೀಸಿಗೆ ಬಂದ ತಕ್ಷಣ ರಿಸೆಪ್ಷನಿಸ್ಟ್ ಮಾಧವಿ ಬಳಿ ಹೋಗಿ, ಆಭಾ ಬಂದಕೂಡಲೇ ತನಗೆ ತಿಳಿಸಬೇಕೆಂದು ಸೂಚನೆ ಕೊಟ್ಟು ತನ್ನ ಕುರ್ಚಿಯ ಮೇಲೆ ಕುಳಿತು ಕಾಯಲಾರಂಭಿಸಿದ. ಕೆಲವೇ ನಿಮಿಷಗಳಲ್ಲಿ, ಆಭಾ ಬಂದಿರುವುದನ್ನು ಮಾಧವಿ ತಿಳಿಸಿದಾಗ ತಟ್ಟನೆದ್ದು ಆಭಾಳ ಕ್ಯೂಬಿಕಲ್ ಕಡೆ ಹೊರಟ. ಅಭಾ ತನ್ನ ಕುರ್ಚಿಯಲ್ಲಿ ಕುಳಿತು ಯಾರೊಡನೆಯೋ ಇಂಟರ್ ಕಾಮ್ ನಲ್ಲಿ ಮಾತನಾಡುತ್ತಿದ್ದುದನ್ನು ಗಮನಿಸಿ, ಅವಳು ಮಾತು ಮುಗಿಸುವವರೆಗೂ ಅಸಹನೆಯಿಂದ ಕಾಯುತ್ತಿದ್ದ. ಅವನ ಮುಖದಲ್ಲಿಯ ಅಸಹನೆಯನ್ನು ಗಮನಿಸಿದ ಆಭಾ, ಸಂಭಾಷಣೆಯನ್ನು ಮೊಟಕುಗೊಳಿಸಿ,
" ಓ, ವಾಟ್ ಎ ಸರ್ ಪ್ರೈಸ್. ಇದೇನು ಮಿಲಿಂದ್ , ನೀವೇ ಇಲ್ಲಿಗೆ ಬಂದಿದ್ದೀರಿ ?" ಎಂದು ಕೇಳಿದಳು ನಿಜಕ್ಕೂ ಅಚ್ಚರಿಗೊಂಡು.
"ನಿಮಗೆ ನಾನೆಷ್ಟು ಪಾರ್ಟಿ ಕೊಡಬೇಕು ಹೇಳಿ ?" ಎಂದು ಕೇಳಿದ ಮಿಲಿಂದ್.
"ಓ ಆ ವಿಷಯಕ್ಕಾ ನೀವು ಬಂದಿರುವುದು. ಇನ್ನೂ ಎರಡು ಪಾರ್ಟಿಗಳು ಬಾಕಿ ಇವೆ ನಿಮ್ಮಿಂದ.." ಎಂದಳು ದೂರುವ ದನಿಯಲ್ಲಿ.
"ಅವೆರಡಕ್ಕೆ ಇನ್ನೊಂದು ಭರ್ಜರಿ ಪಾರ್ಟಿ ಸೇರಿಸಿಕೊಳ್ಳಿ. ಮೊದಲಿನೆರಡು ನಮ್ಮ ಕ್ಯಾಂಟೀನ್ ನಲ್ಲಿ. ಈ ಮೂರನೆಯ ಪಾರ್ಟಿ ನೀವು ಎಲ್ಲಿ ಕೇಳುತ್ತೀರೋ ಅಲ್ಲಿ ಕೊಡುತ್ತೀನಿ" ಎಂದ ನಸುನಗುತ್ತಾ.
"ಮೂರನೇ ಪಾರ್ಟಿ ? ಅದೂ ನಾನು ಕೇಳದೇನೇ ? ಎನಿ ಪ್ರಮೋಷನ್ ?" ಎಂದಳು ಆಶ್ಚರ್ಯದಿಂದ.
"ಪ್ರಮೋಷನ್ ಏನೂ ಇಲ್ಲ. ಮಧ್ಯಾಹ್ನ ಲಂಚ್ ಬ್ರೇಕ್ ನಲ್ಲಿ ಕ್ಯಾಂಟೀನ್ ಗೆ ಹೋಗೋಣ. ಅಲ್ಲಿ ನನ್ನ ಮೊದಲ ಪಾರ್ಟಿ ಮತ್ತು ಮೂರನೆ ಪಾರ್ಟಿಯ ರಹಸ್ಯ" ಎಂದು ಹೇಳಿ ಅವಳ ಪ್ರತಿಕ್ರಿಯೆಗೂ ಕಾಯದೇ ಹೊರಟುಹೋದ. ಅಲ್ಲಿಂದ ನೇರವಾಗಿ ಸಿ.ಇ.ಒ ಅವರ ಕಚೇರಿಗೆ ಹೋಗಿ, ಅವರ ಪಿ.ಎ. ಬಳಿ "ತುಂಬಾ ಮುಖ್ಯವಾದ ವಿಷಯವಿದೆ. ತಕ್ಷಣವೇ ಸಿ.ಇ.ಒ ಅವರನ್ನು ಕಾಣಬೇಕು" ಎಂದು ಹೇಳಿದಾಗ, ಪಿ.ಎ ಅವನ ಕೋರಿಕೆಯನ್ನು ಸಿಂಘಾನಿಯವರಿಗೆ ತಿಳಿಸಿದಳು. ಅವರ ಒಪ್ಪಿಗೆ ದೊರೆತು, ಅವರನ್ನು ಕಂಡು,
"ಸರ್, ಕೆಲವು ದಿನಗಳ ಹಿಂದೆ ನಾನು ನಿಮಗೆ ನನ್ನ ಸಂಶೋಧನೆಯ ಬಗ್ಗೆ ತಿಳಿಸಿದ್ದೆ. ಅದು ಯಶಸ್ವಿಯಾಗಿದೆ ಸರ್" ಎಂದು ಸಂಭ್ರಮದಿಂದ ಹೇಳಿದ.
"ವಂಡರ್ ಫುಲ್. ಕಂಗ್ರಾಚುಲೇಶನ್ಸ್" ಎಂದು ಅವನನ್ನು ಅಭಿನಂದಿಸಿ ಅವನಿಂದ ವಿವರಗಳನ್ನು ಕೇಳಿ ತಿಳಿದುಕೊಂಡರು.
ಲಂಚ್ ಬ್ರೇಕ್ ನಲ್ಲಿ ಕ್ಯಾಂಟೀನ್ ನ ಒಂದು ಮೂಲೆಯಲ್ಲಿದ್ದ ಎರಡು ಆಸನಗಳಿರುವ ಮೇಜನ್ನೊಂದು ಆರಿಸಿಕೊಂಡು, ಆಭಾಳಿಗಾಗಿ ಕಾತುರದಿಂದ ಕಾಯುತ್ತಾ ಕುಳಿತಿದ್ದ ಮಿಲಿಂದ್. ಐದಾರು ನಿಮಿಷಗಳ ನಂತರ ಆಭಾ ಕ್ಯಾಂಟೀನ್ ಒಳಕ್ಕೆ ಬರುತ್ತಿದ್ದುದನ್ನು ಗಮನಿಸಿ, ಅವಳ ಗಮನ ಕೈಸೆಳೆಯಲು ಕೈಬೀಸಿ ಕರೆದ.
ಆಭಾ ಮೇಜಿನ ಬಳಿ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೊದಲೇ, ಕೆನ್ನೆಯುಬ್ಬಿಸಿ,
"ನನ್ನ ಒಪ್ಪಿಗೆಗೂ ಕಾಯದೇ ಅದು ಹೇಗೆ ಹೊರಟುಹೋದಿರಿ ? ಹೌ ಕುಡ್ ಯು ಟೇಕ್ ಮಿ ಫಾರ್ ಗ್ರಾಂಟೆಡ್ ?" ಎಂದಳು ಹುಸಿಮುನಿಸಿನಿಂದ.
ಅವಳು ಹೇಳಿದುದು ಕೇಳಿಸಿಯೇ ಇಲ್ಲವೇನೋ ಎಂಬಂತೆ, "ಇವತ್ತು ನನಗೆಷ್ಟು ಖುಶಿಯಾಗಿದೆ ಗೊತ್ತಾ ? ಒಂದು ಸಂತೋಷದ ಸಮಾಚಾರವಿದೆ. ಸಮಾಚಾರವನ್ನೀಗಾಗಲೇ ಇಬ್ಬರಿಗೆ ತಿಳಿಸಿರುವೆನಾದರೂ, ಆತ್ಮೀಯತೆಯ ದೃಷ್ಟಿಯಿಂದ ನಿಮಗೇ ನಾನು ಮೊದಲು ತಿಳಿಸುತ್ತಿರುವುದು. ನನ್ನ ಹಿರಿಯ ಪೋಷಕರಾದ ಸೋದರಮಾವ ಮುರಳೀಧರ ರಾವ್ ಮತ್ತು ಅಫಿಷಿಯಲ್ ಸುಪೀರಿಯರ್ ಸಿ.ಇ.ಒ ರವರಿಗೆ ಈಗಾಗಲೇ ವಿಷಯ ತಿಳಿಸಿದ್ದೇನೆ"
"ಓ ಅದೆಲ್ಲಾ ಆ ಮೇಲೆ. ಅಂತಹ ಸಂತೋಷದ ಸಮಾಚಾರ ಅದೇನು ಮೊದಲು ಹೇಳಿ" ಎಂದಳು ಆಭಾ ಅವನ ಪೀಠಿಕೆಗೆ ತಡೆ ಹಾಕುತ್ತಾ.
"ಕೆಲವು ದಿನಗಳ ಕೆಳಗೆ ನಿಮಗೊಂದು ನನ್ನ ಸ್ವಂತದ ಕೆಲಸ ಒಪ್ಪಿಸಿದ್ದೆ. ಜ್ಞಾಪಕವಿದೆ ತಾನೇ ? "
"ಅದೇ, ಆ ರಕ್ತ ಪರೀಕ್ಷೆಯ ವಿಷಯ ತಾನೇ ?"
"ಹೌದು. ಅದು ನನ್ನ ಒಂದು ಸಂಶೋಧನೆಗೆ ಸಂಬಂಧಿಸಿದ್ದು. ನನ್ನ ಸಂಶೋಧನೆ ಸಂಪೂರ್ಣ ಯಶಸ್ವಿಯಾಗಿದೆ" ಎಂದ ಸಂತಸದಿಂದ.
"ಗ್ರೇಟ್, ಯಾವುದರ ಬಗ್ಗೆ ನಿಮ್ಮ ಸಂಶೋಧನೆಯಾದದ್ದು ?"
"ಒಂದು ರೀತಿಯಲ್ಲಿ ಇದು ಸಂಪೂರ್ಣ ನನ್ನ ಸಂಶೋಧನೆಯಲ್ಲ. ನಿಮಗೆ ಮಾನವ ದೇಹದ ಬಗ್ಗೆ ಹೆಚ್ಚು ಪರಿಚಯವಿಲ್ಲ ಎಂದು ಭಾವಿಸುತ್ತೇನೆ. ಎಲ್ಲಾ ಜೀವಿಗಳಂತೆ ಮಾನವ ದೇಹವೂ ಕೂಡ ಸುಮಾರು ಹತ್ತು ಟ್ರಿಲಿಯನ್ ಜೀವಕೋಶಗಳಿಂದ ರಚಿಸಲ್ಪಟ್ಟಿದೆ. ನಾವು ಸಾವಿನ ಬಗ್ಗೆ ಮಾತನಾಡುವಾಗ, ನಮ್ಮ ದೇಹದ ಯಾವುದೋ ಮೂಲೆಯಲ್ಲಿ ಪ್ರಾಣವೆಂಬ ಅಂಶವಿದೆ, ಮತ್ತು ಇದು ದೇಹದಿಂದ ಬಿಡುಗಡೆ ಹೊಂದಿದಾಗ ಸಾವು ಸಂಭವಿಸುತ್ತದೆ ಎಂಬುದು ಸಾಮಾನ್ಯವಾದ ನಂಬುಗೆ. ಅದರೆ ವಸ್ತು ಸ್ಥಿತಿ ಹಾಗಿಲ್ಲ. ಒಬ್ಬ ವ್ಯಕ್ತಿಗೆ ಸಾವು ಒಂದು ಬಾರಿ ಮಾತ್ರ ಬರವುದಾದರೂ, ಮಾನವನ ದೇಹದಲ್ಲಿನ ಎಲ್ಲಾ ಜೀವಕೋಶಗಳೂ ಆ ವ್ಯಕ್ತಿಯ ಜೀವಮಾನವನ್ನೇ ಪಡೆದಿರುವುದಿಲ್ಲ. ಉದಾಹರಣೆಗೆ, ರಕ್ತದಲ್ಲಿರುವ ಬಿಳಿ ರಕ್ತಕಣಗಳ ಆಯಸ್ಸು ಕೇವಲ ಕೆಲವು ದಿನಗಳಷ್ಟಾದರೆ, ಕೆಂಪು ರಕ್ತಕಣಗಳ ಆಯಸ್ಸು ಸುಮಾರು ನಾಲ್ಕು ತಿಂಗಳು. ಕರುಳಿನ ಒಳಪದರದಲ್ಲಿರುವ ಜೀವಕೋಶಗಳು ಕೇವಲ ಎರಡು ಅಥವಾ ಮೂರು ದಿನಗಳ ಜೀವನಾವವಧಿಯನ್ನು ಪಡೆದಿದ್ದರೆ, ಮಾನವನ ಮಿದುಳಿನಲ್ಲಿರುವ ನರಕೋಶಗಳ ವಯಸ್ಸು ಹಲವಾರು ದಶಕಗಳಷ್ಟು, ಸರಿಸುಮಾರು ಆ ವ್ಯಕ್ತಿಯ ಆಯಸ್ಸಿನಷ್ಟೇ. ಹೇಡಿ ಪ್ರತಿಕ್ಷಣವೂ ಸಾಯುತ್ತಿರುತ್ತಾನೆ ಆದರೆ ಧೀರನಿಗೆ ಸಾವು ಒಂದು ಬಾರಿ ಮಾತ್ರ ಬರುತ್ತದೆ ಎಂಬ ನುಡಿಯಿದೆ. ಈ ನುಡಿಯ ಸೃಷ್ಟಿಕರ್ತನಿಗೆ ಮಾನವ ದೇಹದ ಪರಿಚಯ ಖಂಡಿತವಾಗಿಯೂ ಇಲ್ಲವೆಂದು ಹೇಳಬಹುದು. ಪ್ರತಿಯೊಬ್ಬ ಮಾನವನೂ ಕ್ಷಣಕ್ಷಣಕ್ಕೂ ಸ್ವಲ್ಪ ಸ್ವಲ್ಪವಾಗಿ ಸತ್ತು ಸ್ವಲ್ಪಸ್ವಲ್ಪವಾಗಿ ಪುನರುಜ್ಜೀವಿಸುತ್ತಾನೆ. ವ್ಯಾವಹಾರಿಕವಾಗಿ ಒಬ್ಬ ವ್ಯಕ್ತಿಯ ಸಾವು ಇಷ್ಟು ಹೊತ್ತಿಗೇ ಸಂಭವಿಸಿತು ಎಂದು ಹೇಳುತ್ತೇವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯ ಮರಣದ ಪ್ರಮಾಣಪತ್ರದಲ್ಲಿ , ಅವನ ಸಾವು ಇಂತಹ ದಿವಸ,ಬೆಳಗಿನ ಹತ್ತು ಗಂಟೆ ಇಪ್ಪತ್ತು ನಿಮಿಷ ಎಂದು ನಮೂದಾಗಿದೆ ಎಂದು ಭಾವಿಸೋಣ. ಹಾಗೆ ಹೇಳುವುದರ ಅರ್ಥ ಆ ಹೊತ್ತಿಗೆ ಆ ವ್ಯಕ್ತಿಯ ಹೃದಯಕ್ರಿಯೆ, ಉಸಿರಾಟ ಮತ್ತು ಮಿದುಳಿನ ಕ್ರಿಯೆಗಳು ಶಾಶ್ವತವಾಗಿ ನಿಂತುಹೋದುವು ಎಂದು. ಆದರೆ ಅವನ ದೇಹದ ಜೀವಕೋಶಗಳ ಮಟ್ಟಿಗೆ ಹೇಳುವುದಾದರೆ, ಆ ಸಮಯಕ್ಕೆ ಅವನ ದೇಹದಲ್ಲಿರುವ ಅನೇಕ ಟ್ರಿಲಿಯನ್ ಕೋಶಗಳಲ್ಲಿ, ಸುಮಾರು ಶೇ ೯೦ ರಷ್ಟು ಜೀವಕೋಶಗಳು ಇನ್ನೂ ಜೀವಂತವಾಗಿಯೇ ಇರುತ್ತವೆ. ಆ ವ್ಯಕ್ತಿಯ ದೇಹದಲ್ಲಿರುವ ಎಲ್ಲಾ ಜೀವಕೋಶಗಳೂ ನಿರ್ಜೀವವಾಗಲು ಹಲವಾರು ಗಂಟೆಗಳೇ ಬೇಕಾಗುತ್ತದೆ. ಹೀಗಾಗಿಯೇ ಒಬ್ಬ ವ್ಯಕ್ತಿ ಗತಿಸಿದ ನಂತರವೂ ಅವನ ದೇಹದ ಕೆಲವು ಅಂಗಾಂಗಗಳನ್ನು ಬೇರೆಯವರ ದೇಹದಲ್ಲಿ ಕಸಿ ಮಾಡಲು ಸಾಧ್ಯವಾಗುತ್ತದೆ. ನಮ್ಮ ದೇಹದಲ್ಲಿನ ವಿವಿಧ ಜೀವಕೋಶಗಳಿಗೆ ವಿವಿಧ ಜೀವಮಾನಗಳಿವೆಯೆಂಬ ಸಂಗತಿ ಚೆನ್ನಾಗಿ ತಿಳಿದಿರುವ ವಿಚಾರವೇ ಆದರೂ ವೈಯುಕ್ತಿಕವಾಗಿ ಒಬ್ಬ ವ್ಯಕ್ತಿಯ ದೇಹದಲ್ಲಿರುವ ವಿವಿಧ ಜೀವಕೋಶಗಳ ಜೀವಮಾನವನ್ನು ಕರಾರುವಾಕ್ಕಾಗಿ ಹೇಳುವುದು ಇದುವರೆಗೂ ಸಾಧ್ಯವಾಗಿಲ್ಲ. ನಾನೀಗ ಮಾಡಿರುವ ಸಂಶೋಧನೆಯಿಂದ ಅದು ಸಾಧ್ಯವಾಗುತ್ತದೆ " ಎಂದು ವಿವರಿಸಿದ.
"ಆದರೆ, ಅಂತಹ ಮಾಹಿತಿಯಿಂದ ಏನು ಪ್ರಯೋಜನವಿದೆ ?"
"ಈ ಮಾಹಿತಿ ಮಾನವ ದೇಹವನ್ನು ಅರಿತುಕೊಳ್ಳುವ ಸೈದ್ಧಾಂತಿಕ ಸಂಶೋಧನೆಗೆ ಸಹಾಯ ಮಾಡುವುದಲ್ಲದೆ, ಪ್ರಾಯೋಗಿಕವಾಗಿ, ಕ್ಯಾನ್ಸರ್ ನಂತಹ ವ್ಯಾಧಿಯ ಚಿಕಿತ್ಸೆಯಲ್ಲಿ
ಬಹಳ ಉಪಯುಕ್ತವಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ ನೀಡುವ ಕೀಮೋ ಥೆರಪಿಯೆಂಬ ಒಂದು ಚಿಕಿತ್ಸಾ ಪದ್ಧತಿಗೆ ಈ ಮಾಹಿತಿ ಬಹಳ ಸಹಾಯವಾಗಬಲ್ಲದು. ಪ್ರಚಲಿತವಿರುವ
ಕೀಮೋಥೆರಪಿಯನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಬಹುದು"
"ನಿಮ್ಮ ಸಂಶೋಧನೆಯನ್ನು ಪ್ರಕಟಿಸಿದ್ದೀರಾ?"ಎಂದು ಕೇಳಿದಳು.
"ಉಹುಂ. ಇನ್ನೂ ಇಲ್ಲ. ಇದನ್ನು ಪ್ರಕಟಿಸಲು ಇನ್ನೂ ಬಹಳಷ್ಟು ಸಿದ್ಧತೆಯಾಗಬೇಕು ಮತ್ತು ಈ ಸಂಶೋಧನೆಯನ್ನು ಇತರ ವಿಜ್ಞಾನಿಗಳು ತಾಳೆನೋಡಿ ಒಪ್ಪಿಕೊಳ್ಳಬೇಕು. ಅದಕ್ಕೆ
ಬಹಳ ಸಮಯ ಹಿಡಿಯುತ್ತದೆ" ಎಂದ ಮಿಲಿಂದ್.
ಅಷ್ಟು ಹೊತ್ತಿಗೆ ಅವರು ಆರ್ಡರ್ ಮಾಡಿದ್ದ ತಿಂಡಿಗಳು ಬಂದಿದ್ದರಿಂದ ಅವುಗಳ ಕಡೆ ಗಮನ ಹರಿಸಿದರು
…………………………………………………………………..ಮುಂದುವರೆಯುವುದು
Comments
ಉ: ಹಂಸ ಹಾಡುವ ಹೊತ್ತು - ೬