ಹಣ ತೆತ್ತು ಸಾವು ಕೊಂಡವರು ! (ಭಾಗ ೨)

ಹಣ ತೆತ್ತು ಸಾವು ಕೊಂಡವರು ! (ಭಾಗ ೨)

ಈ ಟೈಟನ್ ಸಬ್ ಮರ್ಸಿಬಲ್ ನಲ್ಲಿ ಪ್ರವಾಸ ಹೋಗಲು ಎಲ್ಲರಿಗೂ ಸಾಧ್ಯವಿಲ್ಲ ಎಂಬ ಸಂಗತಿ ನಿಮಗೆ ಗೊತ್ತಾಯಿತಲ್ಲಾ. ಹೀಗೆ ಪ್ರವಾಸ ಹೊರಟ ಈ ಐದು ಮಂದಿಗಳಿಗೆ ಕೋಟ್ಯಾಧಿಪತಿಗಳಿಗೆ ಇದು ೮ ದಿನಗಳ ಪ್ರವಾಸ. ಮೊದಲಿಗೆ ಸಮುದ್ರದ ದಡದಿಂದ ಪೋಲಾರ್ ಪ್ರಿನ್ಸ್ ಎಂಬ ಹಡಗಿನಲ್ಲಿ ಹೊರಟು, ಅದು ಸಾಗರದ ನಡು ಭಾಗಕ್ಕೆ ಅಂದರೆ ಟೈಟಾನಿಕ್ ಅವಶೇಷಗಳನ್ನು ಹೊಂದಿರುವ ಸ್ಥಳಕ್ಕೆ ತಲುಪಿ ಅಲ್ಲಿ ಟೈಟನ್ ಸಬ್ ಮರ್ಸಿಬಲ್ ಒಳ ಹೊಕ್ಕು ಸಮುದ್ರದಾಳಕ್ಕೆ ತೆರಳುವ ಪ್ರಯಾಣ ಪ್ರಾರಂಭವಾಗುತ್ತದೆ. ನಿಮಗೆ ಗೊತ್ತೇ? ಟೈಟಾನಿಕ್ ನೋಡಲು ಹೋಗುವ ಅವಧಿ ಈ ೮ ದಿನಗಳ ಪ್ರವಾಸದಲ್ಲಿ ಕೇವಲ ೧೦ ಗಂಟೆ ಮಾತ್ರ. ಅದರಲ್ಲೂ ಆಳ ಸಮುದ್ರಕ್ಕೆ ಹೋಗಿ ಟೈಟಾನಿಕ್ ಅವಶೇಷಗಳನ್ನು ನೋಡಲು ದೊರಕುವ ಅವಧಿ ಕೇವಲ ೨೦ ನಿಮಿಷ ಮಾತ್ರ. ಈ ಸಮಯ ಕಳೆದ ಕೂಡಲೇ ಮತ್ತೆ ಹಡಗಿಗೆ ಮರಳಬೇಕು. ಇಲ್ಲವಾದರೆ ಟೈಟನ್ ನಲ್ಲಿರುವ ಆಮ್ಲಜನಕ ಮತ್ತು ಸಂವಹನದ ತೊಂದರೆಯುಂಟಾಗಿ ಅಲ್ಲಿರುವ ಪ್ರವಾಸಿಗರು ಅಪಾಯಕ್ಕೆ ಸಿಲುಕುತ್ತಾರೆ.

ಸಮುದ್ರದಾಳಕ್ಕೆ ಇಳಿದ ಟೈಟನ್ ಸುಮಾರು ೪೦೦೦ ಅಡಿ ದಾಟಿದ ಬಳಿಕ ತನ್ನ ಸಂಪರ್ಕ ನೌಕೆ ‘ಪೋಲಾರ್ ಪ್ರಿನ್ಸ್' ನಿಂದ ಸಂಪರ್ಕ ಕಳೆದುಕೊಂಡಿದೆ. ಈ ಕಾರಣದಿಂದ ಅದರಲ್ಲಿರುವ ಆಮ್ಲಜನಕ ಕಡಿಮೆಯಾಗತೊಡಗಿದೆ. ತಜ್ಞರ ಪ್ರಕಾರ ಸಂಪರ್ಕ ಕಳೆದುಕೊಂಡ ಸಮಯದಲ್ಲಿ ೯೬ ಗಂಟೆಗಳಷ್ಟು ಮಾತ್ರ ಬಳಸಬಹುದಾದ ಆಮ್ಲಜನಕ ಆ ಸಬ್ ಮರ್ಸಿಬಲ್ ನಲ್ಲಿತ್ತಂತೆ. ಆದರೆ ನಾಲ್ಕು ಸಾವಿರ ಅಡಿ ಆಳದಲ್ಲಿ ಪ್ರತೀ ಚದರ ಇಂಚಿಗೆ ೫,೬೦೦ ಪೌಂಡ್ ನಷ್ಟು ಒತ್ತಡವಿರುತ್ತದೆ. ಈ ಒತ್ತಡವನ್ನು ಟೈಟನ್ ನಂತಹ ಸಣ್ಣ ಸಬ್ ಮರ್ಸಿಬಲ್ ತಡೆದುಕೊಳ್ಳುವುದು ಬಹಳ ಕಷ್ಟ. ಈ ಕಾರಣದಿಂದ ಆ ಸಬ್ ಮರ್ಸಿಬಲ್ ಒಳಸ್ಪೋಟವಾಗಿದೆ. ಅಂದರೆ ಒಂದು ಫುಟ್ ಬಾಲ್ ನ ಗಾಳಿಯನ್ನು ಒಮ್ಮೆಲೆ ತೆಗೆದರೆ ಅದು ಹೇಗೆ ಮುರುಟಿಕೊಳ್ಳುವುದೋ ಆ ಸ್ಥಿತಿ ಟೈಟನ್ ಗೆ ಆಗಿದೆ. ಈ ಒಳ ಸ್ಫೋಟದಿಂದಾಗಿ ಒಳಗಿದ್ದ ಪ್ರವಾಸಿಗರಿಗೆ ಜಾಗದ ಕೊರತೆ, ಕ್ರಮೇಣ ಆಮ್ಲಜನಕದ ಕೊರತೆಯಾಗಿ ಅತ್ಯಂತ ದಾರುಣವಾಗಿ ಸಾವನ್ನು ಕಂಡಿರಬಹುದು ಎನ್ನುವುದು ಅಮೇರಿಕದ ನೌಕಾಪಡೆಯ ತಜ್ಞರ ಅಭಿಪ್ರಾಯ.

ಈ ಪ್ರವಾಸಿಗರಿಗೆ ಹಾಗೂ ಟೈಟಾನ್ ನೌಕೆಗೆ ಏನು ಸಮಸ್ಯೆಯಾಗಿರಬಹುದು ಎಂಬುವುದನ್ನು ತಿಳಿದುಕೊಳ್ಳುವುದು ಬಹಳ ಕಷ್ಟ. ಏಕೆಂದರೆ ವಿಮಾನದಲ್ಲಿರುವಂತೆ ಈ ರೀತಿಯ ಪುಟ್ಟ ಜಲಾಂತರ್ಗಾಮಿಯಲ್ಲಿ ‘ಬ್ಲ್ಯಾಕ್ ಬಾಕ್ಸ್' ಇರುವುದಿಲ್ಲ. ಈ ಕಾರಣದಿಂದ ನೌಕೆಯ ಒಳಗಿನ ಸಂದೇಶಗಳು ಸಿಗುವುದಿಲ್ಲ. ಆದರೆ ಟೈಟನ್ ತನ್ನ ಸಂಪರ್ಕ ನೌಕೆಯಾದ ಪೋಲಾರ್ ಪ್ರಿನ್ಸ್ ನಿಂದ ಸಂಪರ್ಕ ಕಡಿದುಕೊಂಡದ್ದು ಹೇಗೆ ಎನ್ನುವ ವಿಷಯದಲ್ಲಿ ತನಿಖೆಗಳು ನಡೆಸಬಹುದಾಗಿದೆ. ಆದರೆ ಈ ವಿಚಾರದಲ್ಲೂ ಹಲವಾರು ಗೊಂದಲಗಳು ಇವೆ. ಸಾವನ್ನಪ್ಪಿದವರು ಬೇರೆ ಬೇರೆ ದೇಶದವರು ಆದ ಕಾರಣ ತನಿಖೆಯನ್ನು ಹೇಗೆ ನಡೆಸುವುದು ಎಂಬ ಸಮಸ್ಯೆ ಇದೆ. ಏನೇ ಆದರೂ ದುರಂತ ಸಾವನ್ನಪ್ಪಿದವರು ಮತ್ತೆ ಮರಳಿ ಬರುವುದಿಲ್ಲ. 

ಪ್ರವಾಸಿಗರ ಸುರಕ್ಷತೆಯ ಬಗ್ಗೆ ಸರಿಯಾದ ಪ್ರಯೋಗಗಳನ್ನು ಮಾಡದ ಓಶಿಯನ್ ಗೇಟ್ ಸಂಸ್ಥೆ ಬಗ್ಗೆ ಅಮೇರಿಕ ತಕ್ಷಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸರ್ವರ ಅಭಿಮತ. ಏಕೆಂದರೆ ಆ ಸಂಸ್ಥೆಯು ಇಷ್ಟೊಂದು ದುಬಾರಿ ಹಣವನ್ನು ಸಂಗ್ರಹಿಸಿ, ಪ್ರವಾಸಿಗರನ್ನು ಸಾವಿನ ದವಡೆಗೆ ದೂಡುವುದರಲ್ಲಿ ಅರ್ಥ ಏನಿದೆ? ಕೋಟ್ಯಾಧಿಪತಿಗಳೂ ತಮ್ಮ ಪ್ರಚಾರದ ಅಥವಾ ಸಾಹಸದ ತೆವಲಿಗಾಗಿ ಇಂತಹ ಯಾನಕ್ಕೆ ಹೋಗಬಾರದು. ‘ಹಣ ಇದೆ ಎಂದು ಸಾವನ್ನು ಕೊಂಡರಂತೆ’ ಎಂದು ಆದ ಕಥೆಯಿದು.

ಕೊನೇ ಸುದ್ದಿ: ಒಳಸ್ಫೋಟ ಗೊಂಡ ಟೈಟನ್ ಸಬ್ ಮರ್ಸಿಬಲ್ ನ ಅವಶೇಷಗಳು ಜೂನ್ ೨೮-೨೯ರ ಸಮಯದಲ್ಲಿ ಅಮೇರಿಕದ ಸೈಂಟ್ ಜಾನ್ಸ್ ಪೋರ್ಟ್ ನ ನ್ಯೂಫೌಂಡ್ ಲ್ಯಾಂಡ್ ಬಳಿಯ ಕಡಲಿನ ಮೇಲೈಗೆ ತೇಲುತ್ತಾ ಬಂದಿವೆ. ಅವುಗಳನ್ನು ಅಮೇರಿಕಾ ನೌಕಾ ಪಡೆಯು ಕಡಲಿನಿಂದ ಹೊರತೆಗೆದಿದೆ. ಜೂನ್ ೧೮ರಂದು ಕಾಣೆಯಾಗಿದ್ದ ನೌಕೆಯ ಅವಶೇಷಗಳು ಸುಮಾರು ಹತ್ತು ದಿನಗಳ ಬಳಿಕ ಸಿಕ್ಕಿವೆ. ಈ ಸಬ್ ಮರ್ಸಿಬಲ್ ನಲ್ಲಿ ಐದು ಮಂದಿ ಪ್ರವಾಸಿಗರ ಮೃತ ದೇಹಗಳೂ ಇವೆ ಎಂಬ ಸುದ್ದಿ ಇದೆ. ಆದರೆ ಇನ್ನೂ ಖಾತರಿಯಾಗಿಲ್ಲ. ಈ ಅವಶೇಷಗಳು ದೊರೆತಿರುವುದರಿಂದ ಈಗ ನಡೆಯುತ್ತಿರುವ ತನಿಖೆಗೆ ಒಂದಿಷ್ಟು ಸಹಕಾರಿಯಾಗಬಹುದು ಎಂಬುದು ತಜ್ಞರ ಅಭಿಮತ.   

(ಮುಗಿಯಿತು)

ಚಿತ್ರ ಕೃಪೆ: ಅಂತರ್ಜಾಲ ತಾಣ