ಹಲ್ಲಿನ ಹಳದಿ ಬಣ್ಣದ ಸಮಸ್ಯೆಯೇ?

ಹಲ್ಲಿನ ಹಳದಿ ಬಣ್ಣದ ಸಮಸ್ಯೆಯೇ?

ಮುತ್ತಿನಂತಹ ಹಲ್ಲು, ದಾಳಿಂಬೆ ಹಣ್ಣಿನಂತಹ ದಂತ ಪಂಕ್ತಿಗಳು ಇರಬೇಕೆಂಬುದು ಎಲ್ಲರ ಮನದಾಳದ ಕನಸು. ಆದರೆ ಇಂದಿನ ಯುಗದಲ್ಲಿ ನಾವು ತಿನ್ನುವ ಆಹಾರ ಮತ್ತು ಜೀವನ ಕ್ರಮಗಳ ಕಾರಣದಿಂದ ಬಹುತೇಕರ ಹಲ್ಲುಗಳು ಹಾಳಾಗುತ್ತಿವೆ. ನಮ್ಮ ದೇಹದ ಅತ್ಯಂತ ಗಟ್ಟಿಯಾದ ವಸ್ತು ಎಂದರೆ ಹಲ್ಲಿನ ಎನಾಮಲ್. ನಾವು ಅದನ್ನೇ ಕರಗಿಸಿ ನಾಶ ಮಾಡುತ್ತಿದ್ದೇವೆ. ದಿನ ಬೆಳಗಾದರೆ ನೂರಾರು ಬಗೆಯ ಪೇಸ್ಟ್, ಮೌತ್ ವಾಶ್ ಗಳ ಕಂಪೆನಿಗಳು ಜಾಹೀರಾತು ನೀಡುತ್ತವೆ. ಪೇಸ್ಟ್ ನಲ್ಲಿ ಉಪ್ಪು, ಇದ್ದಿಲು, ಲವಂಗ, ಕಹಿಬೇವು, ಲಿಂಬೆ ಹೀಗೆ ನಮ್ಮ ಪೇಸ್ಟ್ ಒಂದು ಗರಂ ಮಸಾಲೆ ಹುಡಿಯಂತಾಗಿದೆ. ಅದರಲ್ಲಿ ಇಲ್ಲದ ವಸ್ತು ಇಲ್ಲ. ಆದರೆ ನಮ್ಮ ಹಲ್ಲುಗಳು ಹುಳುಕಾಗುವುದನ್ನು ತಡೆಯಲು ಮಾತ್ರ ಆಗುತ್ತಿಲ್ಲ. 

ನಮ್ಮ ಪೂರ್ವಿಕರ ಹಲ್ಲು ಎಷ್ಟು ಗಟ್ಟಿಯಾಗಿರುತ್ತಿತ್ತು. ಪೇರಳೆ ಅಥವಾ ಸೀಬೆ ಗಿಡದ ಚಿಗುರೋ, ಮಾವಿನ ಅಥವಾ ಬೇವಿನ ಕಡ್ಡಿಯೋ ಬಳಸಿ ತಮ್ಮ ಹಲ್ಲನ್ನು ಉಚ್ಚಿ ಸ್ವಚ್ಛ ಮಾಡಿಕೊಳ್ಳುತ್ತಿದ್ದರು. ಅವರ ಆಹಾರ ಕ್ರಮವೂ ಹಲ್ಲಿನ ಮೇಲೆ ದೌರ್ಜನ್ಯ ಮಾಡುವಂತಿರಲಿಲ್ಲ. ಈಗ ಮಕ್ಕಳಾಗಿರುವಾಗಲೇ ಬಿಸ್ಕಿಟ್, ಚಾಕಲೇಟ್, ಐಸ್ ಕ್ರೀಂ ಸೇವನೆ ಮಾಡಿ ಹಲ್ಲುಗಳು ಹುಳ ಹಿಡಿಯುತ್ತಿವೆ. ಇದರ ಜೊತೆಗೆ ಬಿಳುಪಾದ ಹಲ್ಲುಗಳ ಬಣ್ಣ ಹಳದಿಯಾಗುವುದು. ಅದಕ್ಕಾಗಿಯೇ ಹಲವಾರು ಬಗೆಯ ಪೇಸ್ಟ್ ಗಳು ಬಂದಿವೆ. ಅವೆಲ್ಲವನ್ನೂ ಬದಿಗಿರಿಸಿ ನಮ್ಮ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ ಗೊತ್ತೇ?

* ಹಲ್ಲುಗಳ ಹಳದಿ ಬಣ್ಣವನ್ನು ನಿವಾರಿಸಲು ಸ್ಟ್ರಾಬೆರಿ ಹಣ್ಣುಗಳನ್ನು ಬಳಸಬಹುದಾಗಿದೆ. ತಾಜಾ ಸ್ಟಾಬೆರಿಗಳನ್ನು ತೆಗೆದುಕೊಂಡು ಚೆನ್ನಾಗಿ ಮ್ಯಾಶ್ ಮಾಡಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಅದನ್ನು ಹಲ್ಲುಗಳ ಮೇಲೆ ಹಚ್ಚಿ ಎರಡರಿಂದ ಮೂರು ನಿಮಿಷಗಳ ಕಾಲ ಬಿಡಬೇಕು. ಇದರ ನಂತರ ಹಲ್ಲುಗಳನ್ನು ಒಂದು ನಿಮಿಷ ಮಸಾಜ್ ಮಾಡಿ, ಶುದ್ಧ ನೀರಿನಿಂದ ತೊಳೆದುಕೊಳ್ಳಬೇಕು. ಇದು ನಿಮ್ಮ ಹಲ್ಲಿನ ಹಳದಿ ಬಣ್ಣವನ್ನು ಹೋಗಲಾಡಿಸಲು ಸಹಕಾರಿ. ಹಲ್ಲಿನ ಹೊಳಪನ್ನೂ ಹೆಚ್ಚಿಸುತ್ತದೆ.

* ಹಲ್ಲುಗಳು ಮುತ್ತಿನಂತೆ ಹೊಳೆಯಲು ಒಂದು ಸುಲಭ ಉಪಾಯ ಇದೆ. ಒಂದು ಚಮಚ ಅಡುಗೆ ಸೋಡಾವನ್ನು ಸ್ವಲ್ಪ ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ ಪೇಸ್ಟ್ ತರಹ ಮಾಡಿಕೊಳ್ಳಬೇಕು. ನಂತರ ಆ ಪೇಸ್ಟ್ ಅನ್ನು ಟೂತ್ ಬ್ರಷ್ ಸಹಾಯದಿಂದ ನಿಮ್ಮ ಹಲ್ಲಿನ ಮೇಲೆ ಹಚ್ಚಿಕೊಳ್ಳಬೇಕು. ಒಂದು ನಿಮಿಷದ ಬಳಿಕ ಕೂಡಲೇ ಶುದ್ಧವಾದ ನೀರಿನಿಂದ ಹಲ್ಲನ್ನು ಸ್ವಚ್ಛಗೊಳಿಸಬೇಕು. ಒಂದು ನಿಮಿಷಕ್ಕಿಂತ ಹೆಚ್ಚು ಸಮಯ ಇಡಬೇಡಿ, ಹಲ್ಲಿನ ಧೃಢತೆ ಕಡಿಮೆಯಾಗುತ್ತದೆ.

* ಹಲ್ಲುಗಳ ಹಳದಿ ಬಣ್ಣದ ನಿವಾರಣೆಗೆ ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಬಳಸಬಹುದು. ಅರ್ಧ ಚಮಚ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಚಿಟಿಕೆ ಉಪ್ಪು ಬೆರೆಸಿ. ನಂತರ ಆ ಮಿಶ್ರಣದಿಂದ ಹಲ್ಲುಗಳನ್ನು ಎರಡು ಮೂರು ನಿಮಿಷಗಳ ಕಾಲ ಮಸಾಜ್ ಮಾಡಿ. ಇದು ನಿಮ್ಮ ಹಲ್ಲಿನ ಹಳದಿತನವನ್ನು ಹೋಗಲಾಡಿಸಲು ಸಹಕಾರಿ. ಹಲ್ಲುಗಳ ಹೊಳಪೂ ಮರಳಿ ಬರುತ್ತದೆ.

* ನಿಮ್ಮ ಹಲ್ಲುಗಳನ್ನು ಬಾಳೆ ಹಣ್ಣಿನ ಸಿಪ್ಪೆಯಿಂದ ಪಾಲಿಶ್ ಮಾಡಿದರೆ ಹಳದಿ ಬಣ್ಣ ಮಾಯವಾಗುತ್ತದೆ. ಮೊದಲಿಗೆ ಬಾಳೆ ಹಣ್ಣಿನ ಸಿಪ್ಪೆಯನ್ನು ಬಿಡಿಸಿ, ಆ ಸಿಪ್ಪೆಯ ಬಿಳಿ ಭಾಗವನ್ನು ಹಲ್ಲಿನ ಮೇಲೆ ೨-೩ ನಿಮಿಷಗಳ ಕಾಲ ಉಜ್ಜಬೇಕು. ಈ ಕಾರ್ಯವನ್ನು ನಿಧಾನವಾಗಿ, ಸಾವಕಾಶವಾಗಿ ಮಾಡಬೇಕು. ನಂತರ ಮಾಮೂಲಿನಂತೆ ಬ್ರಷ್ ಮಾಡಬೇಕು. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಹಲ್ಲಿನ ಹಳದಿ ಬಣ್ಣ ಮಾಯವಾಗಿ ಹೊಳೆಯಲು ಪ್ರಾರಂಭವಾಗುತ್ತದೆ.

* ಹಲ್ಲುಗಳ ಹೊಳಪು ಮರಳಿ ತರಲು ಇನ್ನೊಂದು ಉಪಾಯವಿದೆ. ಸಾಸಿವೆ ಎಣ್ಣೆ ಮತ್ತು ಅರಸಿನ ಬಳಸಿದರೆ ಸಾಕು. ಅರ್ಧ ಚಮಚ ಅರಸಿನ ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ದಪ್ಪವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಬಹುದು. ನಂತರ ಈ ಮಿಶ್ರಣವನ್ನು ಹಲ್ಲು ಮತ್ತು ಒಸಡುಗಳಿಗೆ ಹಚ್ಚಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಇದು ನಿಮ್ಮ ಹಲ್ಲುಗಳಿಗೆ ಹೊಳಪು ನೀಡುವುದಲ್ಲದೇ ಅವುಗಳನ್ನು ಸ್ವಚ್ಛವಾಗಿ ಮತ್ತು ಬಲವಾಗಿರುವಂತೆ ಮಾಡುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ