ಹಳೆಯ ಪುಸ್ತಕಗಳ ಧೂಳಿನ ಕೆಳಗೆ

ಹಳೆಯ ಪುಸ್ತಕಗಳ ಧೂಳಿನ ಕೆಳಗೆ

ಬರಹ

ನಮ್ಮ ಮನೆಯಲೊಂದು ಪುಟ್ಟ ಗ್ರಂಥಾಲಯವನ್ನು ಮಾಡಿಕೊಂಡಿರುವೆ. ಮೊನ್ನೆ ಪುಸ್ತಕಗಳನ್ನೆಲ್ಲ ಧೂಳು ಕೊಡವಿ ಸ್ವಚ್ಛಗೊಳಿಸುವಾಗ ಹಳೆಯ ಪುಸ್ತಕಗಳು ದೊರೆತವು. ಕುತೂಹಲಕ್ಕೆಂದು ಅವುಗಳನ್ನು ಒಂದೊಂದಾಗಿ ಪರೀಕ್ಷಿಸಿದೆ. ನನಗೇ ಆಶ್ಚರ್ಯವಾಗುವಂತೆ ಅವು ಸುಮಾರು ೧೦೦ ವರ್ಷಗಳಷ್ತು ಹಳೆಯದಾದ ಪುಸ್ತಕಗಳಾಗಿದ್ದವು. ಒಂದೊಂದೇ ಪುಸ್ತಕಗಳ ಪುಟ ತಿರುವಿದಾಗ, ಕುತೂಹಲಕರ ಅಂಶಗಳು ಕಂಡುಬಂದವು. ಅವುಗಳಲ್ಲಿ ಕೆಲವನ್ನು ಸಂಪದಗಿರೊಂದಿಗೆ ಹಂಚಿಕೊಳ್ಳಬೇಕೆನಿಸಿತು. * ಕರ್ಣಾಟಕ ಕಾವ್ಯ ಮಂಜರಿ ತಲೆ ಬರಹದಡಿಯಲ್ಲಿ ಸಿಂಗರಾರ್ಯ ವಿರಚಿತ ಮಿತ್ರಾವಿಂದಾ ಗೋವಿಂದಂ ಎನ್ನುವ ಪುಸ್ತಕ. ಕೆಳಗಡೆ ಕರ್ಣಾಟಕ ಕಾವ್ಯಮಂಜರಿ ಪ್ರೊಪ್ರೈಟರ್ ಗಳಿಗಾಗಿ ಮೈಸೂರು ಸದ್ವಿದ್ಯಾಮಂದಿರ ಮುದ್ರಾಶಾಲೆಯಲ್ಲಿ ಮುದ್ರಿಸಲ್ಪಟ್ಟಿತು ಇಸ್ವಿ ೧೮೯೩ ಎಂದಿದೆ. ಕ್ರಯ ೧೨ ಆಣೆ ಇದೆ. * ಮತ್ತೊಂದು ಹಳೆಯ ಪುಸ್ತಕ ಸೋಮೇಶ್ವರ ಶತಕ. ೧೯೩೧ರಲ್ಲಿ ಮುದ್ರಿತವಾಗಿದೆ. ಬಳ್ಳಾರಿ ವಿನೋದಿನಿ ಬುಕ್ ಡಿಪೋ ಪ್ರೊಪ್ರೈಟರ್ ಯಸ್.ಕುಪ್ಪುಸ್ವಾಮಿಶೆಟ್ಟಿಯವರಿಗಾಗಿ ಬಳ್ಳಾರಿ ಲಕ್ಶ್ಮೀವಿಲಾಸ ಮುದ್ರಾಕ್ಷರ ಶಾಲೆಯಲ್ಲಿ ಮುದ್ರಿಸಲ್ಪಟ್ಟಿತು. ಕ್ರಯ ೦-೨-೦ ಎಂದಿದೆ. ಅದರಲ್ಲಿರುವ ಚಿತ್ರ ಅತ್ಯಂತ ಹಳೆಯದಾಗಿದ್ದು, ಶಿವ ಜಟಾಧಾರಿ ಜೊತೆಯಲ್ಲಿ ಗಡ್ಡಧಾರಿಯಾಗಿದ್ದಾನೆ. ಪಾರ್ವತಿ, ಗಣಪ ತೊಡೆಯ ಮೇಲೆ ಕುಳಿತಿದ್ದಾರೆ. ಪಕ್ಕದಲ್ಲಿ ನಾರದನೂ ಇದ್ದಾನೆ. ಬ್ರಹ್ಮನೂ ಇದ್ದಾನೆ. * ಮತ್ತೊಂದು ಚನ್ನಬಸವೇಶ್ವರರು ನಿರೂಪಿಸಿದ ಕರಣಹಶಿಗೆ. ಪಕ್ಕದ ಹಾಳೆಯಲ್ಲಿರುವ ಕುತೂಹಲಕರ ಅಂಶಗಳೆಂದರೆ, ಇದು ಅಲ್ಲದೆ ಇನ್ನು ಅನೇಕ ವಿಧವಾದ ಸಂಸ್ಕೃತ, ಆಂಧ್ರ, ದ್ರಾವಿಡ, ಕರ್ಣಾಟಕ ಪುಸ್ತಕಗಳು ಬೇಕಾದವರು ಸುಲಭವಾಗಿ ತರಿಸಿಕೊಳ್ಳಬಹುದು. ನಟ್ ಪೈಡು ಕಾಗದ ವಾಪಸು ಮಾಡಲಾದೀತು. ನಮ್ಮ ಜವಾಬು ಆಪೇಕ್ಷಿಸತಕ್ಕವರು ಅರ್ಧ ಆಣೀಲೆಬಿಲ್ ಯಿಟ್ಟು ಬರಿಯಬೇಕು. ನಮ್ಮ ಮೇಲು ವಿಲಾಸ ಬಿ.ಸೋಮಸುಂದರಶೆಟ್ಟಿ ಪುಸ್ತಕ ವ್ಯಾಪಾರಿ ಕೌಲ್ ಬಜಾರ್ ಬಳ್ಳಾರಿ ಎಂದಿದೆ. ಬಿ.ಸೋಮಸುಂದರಸೆಟ್ಟಿಗೆ ಕೊಡಲ್ಪಟ್ಟಿದ್ದು ಸ್ವಕೀಯ ಶಾರದಾ ಮುದ್ರಾಲಯದಲ್ಲಿ ಪ್ರಕಟಿಸಲ್ಪಟ್ಟಿತು. ಮದ್ರಾಸ್ ೧೮೯೩ ಎಂದಿದೆ. *ರಾಜಶೇಖರ ವಿಲಾಸಂ ಕಾವ್ಯ ಪುಸ್ತಕ. ಬಳ್ಳಾರಿ ಮಾಣಿಕ್ಯಂಶೆಟ್ಟರವರಿಗಾಗಿ ಬೆಂಗಳೂರು : ಕಳಾನಿಧಿ ಮುದ್ರಾಕ್ಷರಶಾಲೆಯಲ್ಲಿ ಟೈಟಲ್ ಪೇಜ್ ಮಾತ್ರ ಮುದ್ರಿಸಲ್ಪಟ್ಟಿತು. ಮೊದಲನೇ ಛಾಪಾ ೧,೦೦೦ ಪ್ರತಿಗಳು. ಇಸ್ವಿ ೧೯೧೧ ಕ್ರಯ ೧೨ ಆಣೆ ಎಂದಿದೆ. *ನೀತಿ ಮಂಜರಿ. (ಪ್ರಥಮ ಭಾಗಂ) ಕೆಳಗಡೆ ಪ್ರಾಕ್ತನ ವಿಮರ್ಶ ವಿಚಕ್ಷಣ ರಾವ್ ಬಹದ್ದೂರ್ ರಾ.ನರಸಿಂಹಾಚಾರ್ ಎಂ.ಎ ಎಂ.ಆರ್.ಎ.ಎಸ್ ಇವರಿಂದ ವಿರಚಿತವಾದುದು. ಮೈಸೂರು : ಶ್ರೀನಿವಾಸ ಪ್ರೆಸ್ ನಲ್ಲಿ ಮುದ್ರಿಸಲ್ಪಟ್ಟಿತು ಇಸ್ವಿ ೧೯೨೧ ಎಂದಿದೆ. * ೧೯೩೪ರಲ್ಲಿ ಮುದ್ರಿತವಾದ ಕನ್ನಡ ಭರ್ತ್ರುಹರಿ ಸುಭಾಷಿತವು. ಶ್ರೀ ಮನ್ಮಹಾರಾಜರವರ ಆಸ್ಥಾನ ಕವಿಗಳಾಗಿದ್ದ ಬಸವಪ್ಪಶಾಸ್ತ್ರಿಗಳಿಂದ ರಚಿಸಲ್ಪಟ್ಟಿದ್ದು. ಮೈಸೂರ್ ಶ್ರೀ ಪಂಚಾಕ್ಷರಿ ಎಲೆಕ್ಟ್ರಿಕ್ ಪ್ರೆಸ್ ಎಂದಿದೆ. ಬೆಲೆ ೬ ಆಣೆ. * ಶಿವಕೋಟಾಚಾರ್ಯ ವಿರಚಿತ ವಡ್ಡಾರಾಧನೆ. ೧೯೬೫ರಲ್ಲಿ ಮೂರನೇ ಮುದ್ರಣ. ಬೆಲೆ ೫ ರೂ. ಡಿ.ಎಲ್.ನರಸಿಂಹಾಚಾರ್ ಅವರು ತಮ್ಮ ಗುರುಳಾದ ರಾಜಸೇವಾಸಕ್ತ ಬಿ.ಎಂ.ಶ್ರೀಕಂಠಯ್ಯನವರಿಗೆ ಭಕ್ತಿಯಿಂದ ಅರ್ಪಿಸಿದ್ದಾರೆ. *ರತ್ನಾಕರ ಕವಿಕೃತ ಭರತೇಶ ವೈಭವ. ಉಗ್ರಾಣ ಮಂಗೇಶರಾವ್ ಅಧ್ಯಾಪಕ ಬೋರ್ಡ್ ಹೈಸ್ಕೂಲ್ ಪುತ್ತೂರು ಇವರಿಂದ ಪರಿಶೋಧಿಸಲ್ಪಟ್ಟು ಜೈನ ಯುವಕ ಸಂಘದವರಿಂದ ಪ್ರಕಟಿಸಲ್ಪಟ್ಟಿತು. ೧೯೨೩ ಎಂದಿದೆ. ಈ ಗ್ರಂಥವು ಮೈಸೂರು ಸಂಸ್ಥಾನದ ಮಹಾಪ್ರಭುಗಳಾದ ಶ್ರೀ ಕೃಷ್ಣರಾಜ್ ಒಡೆಯರ್ ಬಹಾದುರ್ ಜೆಸಿಎಸ್ಐ, ಜಿಬಿಇ ಮಹಾಸ್ವಾಮಿಯವರಿಗೆ ಅಪ್ಪಣೆಯನ್ನು ಪಡೆದು ಅರ್ಪಿಸಲ್ಪಟ್ಟಿದೆ ಎಂದು ಮುದ್ರಿತವಾಗಿದೆ. ಪಕ್ಕದ ಹಾಳೆಯಲ್ಲಿ ಮಂಗಳೂರು ಕೆನರಾ ಛಾಪ ಖಾನೆಯಲ್ಲಿ ಮುದ್ರಿತವಾಯಿತು ಎಂದು ಮುದ್ರಣವಾಗಿದೆ. ಹಳೆಯ ಪುಸ್ತಕಗಳನ್ನು ನೋಡಿದಾಗ, ಹಳೆಯ ನೆನಪುಗಳನ್ನೆಲ್ಲ ಕೆದಕಿದಂತೆ. ಅದರಲ್ಲಿರುವ ಮುದ್ರಣ ಶೈಲಿ, ಭಾಷೆ, ಎಲ್ಲವೂ ಕುತೂಹಲಕಾರಿ ಎನಿಸಿದವು. ನೀವೇನಂತೀರಿ? ಪುಸ್ತಕಗಳ ಚಿತ್ರಗಳಿಗಾಗಿ ಚಿತ್ರಸಂಪುಟ ನೋಡಿ. -ಸಿದ್ಧರಾಮ ಹಿರೇಮಠ.