ಹಾರುವ ಹಕ್ಕಿಗಳೇ
ಕವನ
ಹಾರಿ ಹಾಡುವ ಹಕ್ಕಿಗಳೇ,
ಆಡುವ ದುಂಬಿಗಳೇ,
ಭಯವಿಲ್ಲವೇ ನಿಮಗೆ, ಹಾಳಗುವ
ಈ ಆನಂದವನ ಕಂಡು ?
ಗಾಳಿಗೆ ತಲೆತೂಗಿ , ಮೋಡಸಳೆದು,
ಮಳೆರಾಯನ ಕರೆತರುವ.
ಹಸಿರುಮರಗಿಡಗಳೇ, ಅಳಕು
ಇಲ್ಲವೇ ನಿಮಗೆ , ನಾಶದಂಚಿನಲ್ಲಿದ್ದು
ಹಸಿರು ಹಾಸಿನ ಸೌಂದರ್ಯರಮಣಿ
ಧರೆ ನಿನ್ನಂಗಳ ಬರಿದಾಗಿ,
ಬಿಸಿಲತಾಪಕ್ಕೆ ಬಿರಿದಾಗ ನೊಂದ ನಿನ್ನ
ಮನವು ಶಾಪವಿಯದೇ ಈ ಮನುಜನಿಗೆ ?
ಕಣ್ಣಿಗೆ ಕಾಣದೆ , ಬಿಸಿಲಿಗೆ ಬೇಯದೆ
ಉಸಿರಲ್ಲಿ ಜೀವಚೇತನ ತುಂಬುವ
ಗಾಳಿ ನಿನಗೆ ಗಾಬರಿಯಾಗದೆ
ಈ ಮಲೀನ ಹೊಗೆಯ ಉಂಡು ?
ಜುಳು ಜುಳು ಹರಿದು,ಭಾವಕ್ಕೆ ಜೀವತುಂಬಿ
ತಿಳಿಯಂತರಾಳದಲ್ಲಿ ಅದ್ಭುತಗಳ ತುಂಬಿ
ಆಗಸ ಪಾತಾಳದ ಪವಿತ್ರ ನಿಧಿ ನೀರೆ
ಬೇರೆ ಮಾಡಲಾರೆಯ ಕೊಚ್ಚೆ ನಿನ್ನೊಡಲಿಂದ ?
ಮನುಜನೀನು ಈ ವಿಶ್ವ
ನಿನಗಾಗಿ ಈ ಅದ್ಭುತಗಳು ಇಲ್ಲಿ
ಸೂರ್ಯ ಚಂದ್ರ, ಈ ಗಾಳಿ ನೀರು ಧರೆ
ಕಲುಶಿತಗೊಳಿಸಿ ನಾಶದಂಚಿಗೆ ಏಕೆ ಓಡುವೆ ನೀನು ?