ಹಿಮನಾದ

ಹಿಮನಾದ

 ಮಧ್ಯರಾತ್ರಿಯ ವೇಳೆ. ಸುಮಾರು ಹನ್ನೆರಡು ಮೂವತ್ತರ ಸಮಯ. ವರ್ಷಗಳ ಹಿಂದೆ ಅಜ್ಜಿ ಹೇಳುತಿದ್ದ ಭೂತಪ್ರೇತಗಳ ಕಥೆಗಳನ್ನು ನೆನೆಸಿಕೊಂಡರೆ ಈಗಲೂ ಅಚ್ಚರಿ. ಹನ್ನೆರಡರ ಅವೇಳೆಯಲ್ಲಿ ಮೊಹಿನಿಯೂ ಪಿಶಾಚಿಯೂ ಸಂಚರಿಸಿ ಕಂಡಕಂಡವರ ಮೇಲೆರಗಿ ಪೀಡಿಸುತ್ತವೆಂದೆಲ್ಲಾ ಹೇಳಿದ್ದಳು. ರೆಪ್ಪೆಯಲುಗಾಡಿಸದೆ ಕೊಡಗಿನ ಚಳಿಯಲ್ಲಿ ಕಂಬಳಿಯೊದೆದು ಜಗ್ಗುಲಿಯಮೇಲೆ ಅಜ್ಜಿ ಹೇಳಿದ ಕಥೆಗಳನ್ನು ಕೇಳಿದ್ದ ಬಾಲ್ಯ. ತದನಂತರ ವರ್ಷಗಳೇ ಕಳೆದರೂ ನಡುರಾತ್ರಿಯೆಂದರೆ ಮನೆಸೇರಿ ನಿದ್ರಿಸಬೇಕೆಂಬುದು ಮನಸಲ್ಲಿ ಅಚ್ಚೊತ್ತಿಕೊಂಡು ನಿಂತಿದೆ.

ಚಳಿ ಮೈಕೊರೆಯುತ್ತಿತ್ತು. ಕಣ್ಣಾಯ್ಸಿ ನೋಡಿದರೆ ಹಿಮಗಟ್ಟಿದ ರಸ್ತೆ. ಇದೇನಿದು!! ಕೊಡಗಿನಲ್ಲಿ ಅದಾವ ಹಿಮವೆಂದು ಯೋಚಿಸತೊಡಗಿದೆ. ಬಳಿಯಲ್ಲಿಯೇ ಕಾರೊಂದು ಬಂದು ನಿಂತುಕೊಂಡಿತು. ಸಿಗ್ನಲ್ ಜಾರಿ ನನ್ನ ಕಾಲುಗಳು ರಸ್ತೆ ದಾಟತೊಡಗಿದ್ದವು. ನನ್ನ ಮನಸ್ಸು ಮಾತ್ರ ಚದುರಿ ಕೊಡಗಿನ ಬಾಲ್ಯದ ನೆನಪುಗಳ ಹೆಕ್ಕುತ್ತಿದ್ದರೂ, ದೇಹಮಾತ್ರ ಕೆನಡಾ ದೇಶದ ಚಳಿಗೊಗ್ಗಿಕೊಳ್ಳಲು ಹಿಂಸೆಪಡುತ್ತಿದ್ದವು. ಭಾರತದಲ್ಲಿ ಇಂಥ ಅವೇಳೆಯಲ್ಲಿ ಸಂಚರಿಸುವುದನ್ನು ಕಲ್ಪಿಸಿಕೊಂಡೆ. ಕಾಲಸಪ್ಪಳ ಕೇಳಿಯೇ ಬೊಗಳಿ ಬೆನ್ನಟ್ಟುವ ಬೀದಿನಾಯಿಗಳು, ಕಿಟಕಿಪರದೆಯೆಳೆದು ಅನುಮಾನದಿಂದಲೇ ನೋಡುವ ನಮ್ಮ ಜನ, ಸಾಲದಕ್ಕೆ ವಂಶಾವಳಿ ಹೆಕ್ಕುವ ಪೊಲೀಸ್ ಪೇದೆ. ಕೆನಡಾ ದೇಶದ ಬೀದಿನಾಯಿಗಳೆಲ್ಲಾ ಗುಂಡೇಟಿಗೆ ಬಲಿಯಾಗಿ ನೂರುಕಾಲವಾಯಿತು. ಪರರ ಬದುಕಿನ ಬಗೆಗೆ, ಜೀವನಶೈಲಿಯ ಬಗೆಗೆ ಎಳ್ಳಷ್ಟೂ ಕುತೂಹಲವಿಟ್ಟುಕೊಳ್ಳದ ಜನ. ನಗರದುದ್ದಕ್ಕೂ ಕ್ಯಾಮೆರಾಗಳನಿಟ್ಟು ಬೆಚ್ಚಗೆ ಆಫೀಸಿನಲ್ಲಿ ಕಾಫಿ ಹೀರುವ ಪೋಲೀಸ್. ಈ ಹ್ಯಾಮಿಲ್ಟನ್ ನಗರದ ಮುಖ್ಯರಸ್ತೆಯಲ್ಲಿ ನಿಂತು ಎತ್ತಕಂಡರೂ ಒಬ್ಬ ನರಮಾನವನ ಸುಳಿವೂ ಬೇಡವೆ? ನಿರ್ಜನ ನೀರವತೆ. ರಸ್ತೆಯ ಇಕ್ಕೆಲಗಳಲ್ಲಿಯೂ ಲೆಕ್ಕವಿಲ್ಲದಷ್ಟು ಜನಸಂಗುಳಿಯನ್ನು ಕಂಡುಪಳಗಿರುವ ನನ್ನ ಕಂಗಳಿಗೆ ಇದು ಅಚ್ಚರಿಯೇ!

ಹಿಮಗಟ್ಟಿದ ರಸ್ತೆಯ ಮೇಲೆಯೇ ಎಚ್ಚರಿಕೆಯಿಂದ ಕಾಲುಗಳನ್ನೂರಿ ನಡೆಯುತ್ತಲೇ ಇದ್ದೆ. ನೆತ್ತರು ಹೆಪ್ಪುಗಟ್ಟಿಸುವಷ್ಟು ಚಳಿ. ಅರವತ್ತು ಕೆಜಿ ತೂಕದ ದೇಹಕ್ಕೆ ಹತ್ತರ ಜ್ಯಾಕೆಟ್ ಏರಿಸಿಕೊಂಡಿದ್ದೆ. ಹಾಳು ಚಳಿಗಾಲವನ್ನು ಶಪಿಸುತ್ತಲೇ ನನ್ನ ಡಿಪಾರ್ಟ್ಮೆಂಟ್ ಕಟ್ಟಡ ಹೊಕ್ಕಿಕೊಂಡೆ. ನಿರ್ಜನವಾಗಿದ್ದರೂ ಬೆಚ್ಚಗಿದ್ದು ಝಗಝಗಿಸುತ್ತಿತ್ತು. ಬೇಗನೆ ಮಹಡಿಯೇರಿ ಲ್ಯಾಬಿನೊಳಗೆ ಸೇರಿಕೊಂಡೆ. ಅಷ್ಟೂ ಹೊತ್ತು ಬೆನ್ನತ್ತಿ ಕುಳಿತಿದ್ದ ಹೊದಿಕೆಗಳನ್ನೆಲ್ಲಾ ಕಳಚಿ ಕಾಫಿ ಹೀರಬೇಕೆಂದುಕೊಂಡೆ. ಉರಿವ ಒಲೆಯ ಮೇಲೆ ಹಾಲಿಟ್ಟು ಕುದ್ದಿಸಿ ಪುಡಿ ಬೆರೆಸಿ ಶೋಧಿಸಿ ಹೀರುವ ಮಡಿಕೇರಿಯ ರುಚಿಗೆ ಸಾಟಿಯೇ ಇಲ್ಲ. ಅಷ್ಟರಲ್ಲಿಯೇ ನಿಮಿಷಮಾತ್ರದಲ್ಲಿ ಕಾಫಿಮೇಕರ್ ಕಾಫಿಯನ್ನೋ ಕಷಾಯವನ್ನೋ ಮಾಡಿ ಬಡೆದಿತ್ತು.

ಲೋಟ ಹಿಡಿದು ಕಾಫಿ ಹೀರಿಕೊಂಡೇ ಕಟ್ಟಡದ ಬೇಸ್ಮೆಂಟಿಗೆ ನಡೆದೆ. ಮತ್ತದೇ ನೀರವತೆ. ನನ್ನ ನಡಿಗೆಯ ಸಪ್ಪಳವೇ ಪ್ರತಿಧ್ವನಿಸುತಿತ್ತು. ಕಾರಿಡಾರಿನಲ್ಲಿದ್ದ ದೀಪಗಳನ್ನೆಲ್ಲಾ ಆರಿಸಿ ಮುನ್ನಡೆದೆ. ದೂರದಲ್ಲೆಲ್ಲೋ ಬೀದಿದೀಪವೊಂದರ ಬೆಳಕಷ್ಟೆ. ಆ ಕತ್ತಲಲ್ಲೂ ಮೂಲೆಯಲ್ಲಿದ್ದ ಪಿಯಾನೋದ ಬಿಳಿಯ ಕೀಗಳು ಮಾತ್ರ ಶೋಭಿಸುತ್ತಲೇ ಇದ್ದವು. ಭಾರತೀಯ ಸಂಪ್ರದಾಯದಲ್ಲಿ ವಾದ್ಯಗಳಿಗೂ ಪೂಜ್ಯಸ್ತಾನವಿತ್ತು ಗೌರವಿಸುವಂತೆ ಕೆನಡಾದಲ್ಲಿಲ್ಲವೆಂದು ನನ್ನ ಅಂಬುಗೆ. ಅವೆಷ್ಟೋ ಬಾರಿ ಪಿಯಾನೋದ ಮೇಲೇರಿಸಿದ್ದ ಕಾಫಿಕಪ್ಪುಗಳನ್ನೂ, ಸಿಗರೇಟುತುಂಡುಗಳನ್ನು ನಾನೇ ಎತ್ತಿ ಬಿಸಾಡಿದ್ದೇನೆ.

ಕಗ್ಗತ್ತಲಲ್ಲಿ ಪಿಯಾನೋದ ಆ ಕಪ್ಪು-ಬಿಳಿ ಕೀಗಳಮೇಲೆ ಕೈಯ್ಯಾಡಿಸಿ ನಾದವನ್ನುಧಿಸುವುದು ಅದೇನೋ ಸಂಭ್ರಮ. ಬೆರಳುಗಳು ತಪ್ಪದೇ ಸ್ವರಹಿಡಿದು ತಾಕಿಸಿ ಸುಶ್ರಾವ್ಯವಾದೊಂದು ಸಾಲು ಸಿಕ್ಕರೆ ಸಾರ್ಥಕತೆ ಪಡೆದ ಅನುಭವ. ಕಗ್ಗತ್ತಲಲ್ಲಿ ನನ್ನ ಮನಸ್ಸು ತವಕವಿಲ್ಲದೆ ಅಭಿವ್ಯಕ್ತಿಸಿಕೊಳ್ಳುತ್ತದೆ. ಸುತ್ತಲೂ ಯಾರು ನೋಡುತಿಲ್ಲವೆಂಬ ಧೈರ್ಯದಿಂದಲೇ ಅದುಮಿಟ್ಟುಕೊಂಡ ಅವೇಷ್ಟೋ ವಿಷಯಗಳನ್ನು ಹೊರಹಾಕುತ್ತದೆ. ಸಂಗೀತವೇ ಪ್ರಧಾನ ಸಾಧನ. ಇಪ್ಪತ್ತೆರಡರ ಹರೆಯಕ್ಕೆ ಜೀವನಾನುಭವ ತುಸು ಕಮ್ಮಿಯೇ ಆದರೂ ವ್ಯಕ್ತವಾಗುವ ಭಾವಗಳು ತಡೆಯಿಲ್ಲದೆ ಹರಿದುಬಿಡಬಲ್ಲದು. ಮನದಾಳದಲ್ಲಿ ಮಿಡಿವ ಭಾವತರಂಗಗಳು ಶ್ರುತಿಹಿಡಿದು ಮನಸ್ಸನ್ನು ನಾಟುತ್ತವೆ. ಮನಸ್ಸು ಆ ಆಧಾರಶ್ರುತಿಯಲ್ಲಿ ಲೀನವಾಗಿ ಭಾವಾನುಸಾರ ಸ್ವರಗಳನ್ನು ಪೋಣಿಸಿಕೊಂಡು ರೂಪುಗೊಳ್ಳುತ್ತದೆ. ಅದೇ ರಾಗ. ಆ ಭಾವತರಂಗಗಳು ಉಧಿಸಿ ಕಂಪಿಸಿ ರಾಗವಾಗಿ ಹರಿದು ಸಂಗೀತವಾಗಿ ವ್ಯಕ್ತಗೊಳ್ಳುತ್ತದೆ. ಚಾರುಕೇಶಿಯ ಷಡ್ಜ-ಗಾಂಧಾರಗಳನ್ನು ಮೀಟಿದೊಡನೆಯೇ ಮನಸ್ಸಿನ ಅವೇಷ್ಟೋ ಭಾರವಿಳಿದ ಭಾಸ. ಮಧ್ಯಮ ಪಂಚಮಗಳನ್ನು ಹಾದು ಶುದ್ಧಧೈವತದಲ್ಲಿ ನಿಂತಾಗಲೇ ರಾಗದ ಛಾಯೆ ಮೂಡಿ ಭಾವವು ಪೂರ್ಣಪ್ರಮಾಣದಲ್ಲಿ ಹೊರಹೊಮ್ಮುತ್ತದೆ. ತಾರಸ್ತಾಯಿಯನ್ನೇರಿ ಷಡ್ಜಕ್ಕೆ ಮರಳಿ ನಿಂತು ಲೀನವಾದಾಗ ಸಿಕ್ಕುವ ಅನಂತಾನುಭವ. ಆರೋಹಣದಲ್ಲಿ ಕಂಡರಿಯದ ಯಾರಿಗೋ ಬಾಳ ಅಗುಹೋಗುಗಳನೆಲ್ಲಾ ಒಪ್ಪಿಸಿಕೊಳ್ಳುವ ಭಾಸ. ಅವರೋಹಣದಲ್ಲಿ ಇಳಿಯುವಾಗ ಕರಚಾಚಿ ಬೇಡುವ ಭಾವ. ತಾಳವು ಎರಡನೆಯ ಕಾಲಪ್ರಮಾಣವನ್ನೂ ದಾಟಿ ಮೂರಕ್ಕೆ ಹೋದಾಗ ಸಮಯ ಚಲನೆಗಳೇ ನಿಂತುಹೋಗಿ ಮತ್ತಾವುದರ ಚಿಂತೆಗಳೂ ಬಾರದ ಚಿತ್ತಶುದ್ಧಿ. ದೇಶ ಕಾಲಗಳನ್ನೇ ಮರೆತ ಭ್ರಾಂತಿ.

ಇದ್ದಕ್ಕಿದ್ದಂತೆ ಕತ್ತಲು ಮರೆಯಾಗಿ ಬೆಳಕುತುಂಬಿಕೊಂಡಿತ್ತು. ಆ ಕಗ್ಗತ್ತಲನ್ನು ಕಡಿದು ಮಿಂಚಿದ ದೀಪದ ಬೆಳಕಿಗೆ ಮುನಿಸಿಕೊಂಡು ಮೂಡಿದ್ದ ಭಾವತರಂಗಗಳೆಲ್ಲಾ ಮರಳಿ ಅಡುಗಿ ಒಳಸರಿದವು. ಸುಳಿಮಿಂಚಿನಂತೆ ಎರಗಿದ್ದ ಬೆಳಕನ್ನು ಕಂಡು ದಿಗ್ಭ್ರಮೆಗೊಂಡಿದ್ದೆ. ಕೊಪವಂತೂ ಉಕ್ಕಿ ಹರಿಯುವುದರಲ್ಲಿತ್ತು. ಸಂದ ತಪಸ್ಸನ್ನೋ ವ್ರತವನ್ನೋ ಭಂಗಪಡಿಸಿದಂತೆ ತೋರತೊಡಗಿತು. ಬೆಳಕಿಗೆ ನಿಧಾವವಾಗಿ ಒಗ್ಗಿಕೊಳ್ಳುತ್ತಲೇ ಸುತ್ತಲೊಮ್ಮೆ ದಿಟ್ಟಿಸಿದೆ. ಇಂತಿಷ್ಟು ದೂರದಲ್ಲಿಯೇ ಯಾರೋ ಗೋಡೆಯೊರಗಿಕೊಂಡು ನಿಂತಂತಿತ್ತು.

‘Hey!! It’s really amazing man..’ – ಹತ್ತಿರಬಂದು ಮೀನನಗೆಯಿತ್ತು ಮಾತನಾಡತೊಡಗಿದ್ದಳು. ಮನಸ್ಸಿನ್ನೂ ಆಗಷ್ಟೆ ನುಡಿಸಿದ್ದ ಚಾರುಕೇಶಿಯ ತರಂಗಗಳಿಗೆ ಬೆಸೆದುಕೊಂಡಿತ್ತಾದರೂ ‘Thanks..’ ಎಂದು ಉತ್ತರಿಸುವ ಸೌಜನ್ಯ ತೋರಿದೆ. ಕೈಗಡಿಯಾರ ಒಂದೂ ನಲವತ್ತೆಂದು ಹೇಳುತ್ತಿತ್ತು. ಎದ್ದು ಕೈಚಾಚಿದೆ.

‘Hi..I’m Jenny’ ಎಂದಳು.

‘Hello! I’m Saagar..’ ಎಂದೆ.

‘Hey ಸೇಗರ್.. It was superb. You mind playing some more? I wanna listen..’ ಎಂದು ನಗೆಬೀರಿದ್ದಳು. ಮೂರಕ್ಷರದ ಹೆಸರೊಂದನ್ನೂ ಹೇಳಲಾಗದೆ ಹಾಳುಮಾಡಿಬಿಟ್ಟಳಲ್ಲ! ಎಂದು ಶಪಿಸಿಕೊಂಡೇ ಸ್ವರಗಳನ್ನುಡುಕುತಾ ಮತ್ತೆ ಕುಳಿತೆ. ಕೋಪವೊಂದು ಬಿಟ್ಟು ಮತ್ತಾವ ಭಾವವೂ ಹೊಮ್ಮಲೇಯಿಲ್ಲ.

‘Do you mind if I smoke?’ ಎಂದಳು. ನನ್ನ ಉತ್ತರವನ್ನು ಅಪೇಕ್ಷಿಸದೆಯೇ ಸಿಗರೇಟು ಹಚ್ಚಿದನ್ನು ಕಂಡು ‘Not at all..’ ಎಂದು ನಾನು ಹೇಳಿದ್ದು, ಸಿಗರೇಟು ಧೂಮದೊಂದಿಗೇ ತೇಲಿ ಮರೆಯಾಯ್ತು. ನುಡಿಸಿ ಮುಗಿಸಿದಾಗ ನಿಮಷಗಳೂ ತಾಸು ಕಳೆದಂತೆ ತೋರಿತ್ತು. ಆಕೆಯೂ ಸಿಗರೇಟು ತುಂಡನ್ನು ನೆಲಕ್ಕೆಸೆದು ಒಸಕಿ ಕೈಕುಲುಕಿ ಮರೆಯಾದಳು. ನಡುರಾತ್ರಿಯಲ್ಲರಳಿದ ಆ ಹಿಮನಾದ ಎಲ್ಲೋ ಅಡುಗಿಹೋಯಿತು, ಆದರೂ ನೆನಪು ಮಾತ್ರ ಕಾಡಿ ಮೆಲುಕು ಮೂಡಿಸುತ್ತದೆ.