ಹೀಗೇ ಎಂದು ಬರಿ

ಹೀಗೇ ಎಂದು ಬರಿ

ಬರಹ

ತುಂಬ ದಿನಗಳ ನಂತರ ಬರೆಯಲು ಪ್ರಯತ್ನಿಸಿದರೆ ಬರೆಯಬೇಕು ಎಂದು ಅನ್ನಿಸುವ ವಿಷಯಗಳು ಮತ್ತು ಬರೆಯಬಾರದು ಎಂದು ಅನ್ನಿಸುವ ವಿಷಯಗಳ ನಡುವೆ ತಾಕಲಾಟ ಶುರುವಾಗುತ್ತದೆ. ಈ ತಾಕಲಾಟದಲ್ಲಿ ನಾವು ಎಷ್ಟು ಆತ್ಮವಂಚನೆ ಮಾಡಿಕೊಳ್ಳುತ್ತೇವೆ... ಇಂಥದ್ದನ್ನು ಬರೆಯಬಾರದು ಎಂದು ನಮ್ಮನ್ನು ನಾವು ನಿರ್ಬಂಧಿಸಿಕೊಳ್ಳುತ್ತೇವೆ... ಇಂಥದ್ದನ್ನು ಬರೆಯಲು ಹೋಗಿ ಅಂಥದ್ದನ್ನು ಬರೆದು ಮತ್ತೆ ಅದನ್ನು ಅಳಿಸಿಹಾಕಿ ಇಂಥದ್ದನ್ನೋ ಅಂಥದ್ದನ್ನೋ ಬರೆಯುತ್ತೇವೆ. ಈ ಪ್ರಕ್ರಿಯೆಯನ್ನು ತುಂಬ ಜನ `ಸೆಲ್ಫ್‌ ಎಡಿಟಿಂಗ್‌' ಎಂದೋ ಅಥವಾ ಇನ್ನೂ ಏನೇನೋ ಕರೆಯಬಹುದು.
ಆದರೆ `ಇಂಥದ್ದು' ಎಂಬುದನ್ನು ಹಾಗೇ ಒಪ್ಪಿಕೊಳ್ಳುವುದರಲ್ಲಿ ಇರುವ ಸಾರ್ಥಕತೆ `ಹೀಗಲ್ಲದಿದ್ದರೆ ಹೀಗೆ' ಎಂದು ಹೇಳುವುದರಲ್ಲಿ ಇಲ್ಲ. ಏಕೆಂದರೆ ಹೀಗಲ್ಲದಿದ್ದರೆ ಹೀಗೆ ಅಥವಾ ಹೀಗಾದರೆ ಹೀಗೆ ಎಂಬಂಥವುಗಳೆಲ್ಲ ಬೇಯಿಸಿದ ಆಲೂಗಡ್ಡೆಯಂಥವು. ಹೆಚ್ಚು ಹೆಚ್ಚು ಬೆಂದಂತೆ ರುಚಿ ಹೆಚ್ಚು ಎಂಬ ಭ್ರಮೆ ನಮ್ಮ ಆತ್ಮವನ್ನು ವ್ಯಾಪಿಸಿದೆ. ನಮ್ಮ ಜೀರ್ಣಾಂಗ ಬೇಯಿಸಿದ ಹೊಲಸಿಗೆ ಅಡಾಪ್ಟ್‌ ಆಗಿರುವಂತೆ ಮನಸ್ಸು ಅರೆಬೆಂದ, ಸರಿಯಾಗಿ ಬೆಂದ ಮತ್ತು ತೀರಾ ಹೆಚ್ಚು ಬೆಂದ ಚಿಂತನೆಗಳಿಗೆ ಮನಸ್ಸು ಹೊಂದಿಕೊಂಡಿದೆ.
ಬೇಯಿಸಿದ್ದನ್ನು ಪಕ್ವ ಎಂದುಕೊಳ್ಳುವವರೆಗೂ ಈ ಬೇಯಿಸುವ ಕ್ರಿಯೆ ಮುಂದುವರಿಯುತ್ತದೆ. ಇದು ಹೇಗಾಗುತ್ತದೆ ಎಂದರೆ ಗದ್ದೆ ಉಳುವುದೇ ಕೃಷಿ ಎಂಬಂತೆ-ಎಡಿಟಿಂಗ್‌ ಮಾಡುವುದೇ ಜರ್ನಲಿಸಂ ಎಂದ ಹಾಗೆ.
ನನಗೆ ಎಡಿಟ್‌ ಆಗದ ಕಂಟೆಂಟ್‌ ಬೇಕಾಗಿದೆ. ಅದು ಯಾವ ವಿಷಯಕ್ಕೂ ಇರಬಹುದು. ಬೇಕಾದರೆ ನಾನು ರಸ್ತೆ ಅಂಚಿಗೆ ಯಾರೂ ಇಲ್ಲದ ಸಮಯ ನೋಡಿ ಉಚ್ಚೆ ಹೊಯ್ದೆ ಎಂಬ ಸರಳ ವಿಷಯವೇ ಇರಬಹುದು. ಬಹುಶಃ ನಾನೇ ಬರೆದದ್ದಾದರೂ ಇರಬಹುದು. ಈ ವಿಷಯದಲ್ಲಿ ನನಗೆ ಬೇರೆಯವರ ಮೇಲೆ ವಿಶ್ವಾಸ ಕಡಿಮೆ.
ಯೋಚಿಸದೇ ತಕ್ಷಣ ಬರುವ ವಿಷಯಗಳನ್ನು ಒಂದು ಚಿಂತನೆಯ ರೂಪಕ್ಕೆ ತರಲು ಪ್ರಯತ್ನಿಸಬೇಡಿ. ಅದು ಮೂಲ ಸ್ವರೂಪದಲ್ಲಿ ಇರುವಂತೆ ಅದನ್ನು ಮನಸ್ಸಿನ ಮೇಲಕ್ಕೆ ತನ್ನಿ ಮತ್ತು ಅದನ್ನು ಹಾಗೇ ನೋಡಿ. ಆಕಾರ, ಗಾತ್ರ, ಡಿಗ್ರಿ ಆಫ್‌ ಸರ್ಟನಿಟಿ, ಅದರ ಹಿಂದಿನ ಮತ್ತು ಮುಂದಿನ ತರ್ಕ ಎಲ್ಲವೂ ಹಾಗೇ ಇರುವಂತೆ ನೋಡಿಕೊಳ್ಳಿ... ಮತ್ತು ಅದನ್ನು ನಿಮ್ಮೊಳಗೇ ಇಟ್ಟುಕೊಳ್ಳಿ. ಅದು ನಿಮ್ಮನ್ನು ನಿಮ್ಮಲ್ಲಿ ಪ್ರತಿಫಲಿಸಿ ನಿಮ್ಮಲ್ಲೇ ಹೂತುಹೋಗುವ ಮೊದಲು ಅದನ್ನು ಬರೆದುಬಿಡಿ.
ತುಂಬ ಹೊತ್ತಿನಿಂದ ಮೂತ್ರ ಕಟ್ಟಿಕೊಂಡು ಒಮ್ಮೆಲೇ ಮೂತ್ರ ಮಾಡಿದಾಗ ಆಗುವ ತೃಪ್ತಿ ನಿಮಗೆ ಬಂದರೆ ಅದನ್ನು ಬ್ರಹ್ಮಜ್ಞಾನಿಗಳು ಬ್ರಹ್ಮವೆಂತಲೂ ನ್ಯೂಸ್‌ ಪೇಪರ್‌ನಲ್ಲಿರುವವರು ಸ್ಕೂಪ್‌ ಎಂತಲೂ ಶಿಕ್ಷಕರು ರ್ಯಾಂಕ್‌ ಎಂತಲೂ ಟಿವಿ ನೈನ್‌ನವರು ಹಾಫ್‌ ಎನ್‌ ಆವರ್‌ ಪ್ರೋಗ್ರಾಂ ಎಂತಲೂ ಕರೆಯುತ್ತಾರೆ.
ಇರಲಿ,
ಇದು ಎಂದು ಅನ್ನಿಸಿದ್ದನ್ನು
ಇದು ಎಂದು ಗುರುತಿಸಿ

ಅದು ಎಂದು ಅನ್ನಿಸದೇ ಇರುವುದನ್ನು
ಅದು ಎಂದು ಬಿಂಬಿಸಬೇಡಿ
ಅದು ಅದಾಗಿದ್ದರೂ ಕೂಡ!

ಇದು ಮತ್ತು ಅದು
ಇದೇ ಆಗಲಿ ಅದೇ ಆಗಲಿ
ಆಗಿರುವುದಿಲ್ಲ
ಆದರೆ ನಿಮ್ಮೊಳಗಿನ
ನಿಜವಾದ ಸಂಘರ್ಷವಾಗಿರುತ್ತದೆ

ಹೀಗಾಗಿ-
ಇದನ್ನು ಇದಾಗಲು
ಅದನ್ನು ಅದು ಆಗದೇ ಇರಲು
ಬಿಡುವ ಮೂಲಕ-

ನೀವು ಏನನ್ನಾದರೂ ಸಾಧಿಸುತ್ತೀರಿ ಎಂದುಕೊಂಡರೆ ತಪ್ಪು.
ಏಕೆಂದರೆ- ಉಗುರು ಕಚ್ಚುವುದು ಎಂದಾದರೂ ಧ್ಯಾನವಾಗಿದ್ದರೆ, ನಾನು ಎಂದೋ ಝೆನ್‌ ಮುನಿಯಾಗಿಬಿಡುತ್ತಿದ್ದೆ!