ಹೀಗೊಂದು ಕಥೆ

ಹೀಗೊಂದು ಕಥೆ

ಬರಹ

ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಕಂದುಕೆರೆ ಎಂಬ ಪುಟ್ಟ ಗ್ರಾಮ, ಹಿಂದೆಲ್ಲೆ ಹತ್ತಾರು ಬ್ರಾಹ್ಮಣರ ಮನೆಗಳಿಂದ ತುಂಬಿರುತಿದ್ದ ಗ್ರಾಮದಲ್ಲಿ ಈಗ ಕೇವಲ ಬೆರಳೆಣಿಕೆಯಷ್ಟೇ ಮನೆಗಳು.

ಅಗ್ರಹಾರದ ಮುಖ್ಯ ರಸ್ತೆಯಲ್ಲಿರುವ ಮೊದಲನೆಯ ಮನೆಯೇ ಶಂಕರ ಶಾಸ್ತ್ರಿಗಳದ್ದು,ಇನ್ನು ಬೀದಿಯಲ್ಲಿ ಉಳಿದಿರುವ ಇತರ ಮನೆಗಳಿಗೆ ಬೀಗ ಬಿದ್ದಿದೆ, ಬೆಳೆ ಮಳೆ ಇಲ್ಲದೆ ಕಂಗಾಲಾಗಿ " ಉದರ ನಿಮಿತ್ತಂ ಬಹುಕ್ರುತ ವೇಶಂ " ಎನ್ನುವ ಉಕ್ತಿಯಂತೆ ಬೇರೆ ಬೇರೆ ವೇಶಗಳನ್ನು ಹಾಕಿ ಪರಸ್ಥಳದಲ್ಲಿ ಹೊಟ್ಟೆ ಹೊರೆಯುತ್ತಿರುವವರು ಹಲವರು, ಇವರೆಲ್ಲರು ವರುಶಕ್ಕೆ ಐದಾರು ಬಾರಿ ಬಂದುಹೋಗುವರು, ಗೋಪಾಲಕ್ರಿಷ್ನನ ರಥೋತ್ಸವಕ್ಕ,ಹಟ್ಟಿ ಲಕ್ಕಮ್ಮನ ಬಾನ ಹಾಗು ಜಾತ್ರಾ ಮಹೋತ್ಸವಕ್ಕೆ, ಮುಖ್ಯ ಹಬ್ಬ ಹರಿದಿನಗಳಿಗೆ ಅಂತ.ಅವರೆಲ್ಲರು ಬಂದಾಗ ಇಡೀ ಅಗ್ರಹಾರವೇ ಕಳೆಗಟ್ಟುವುದು,ಅವರೆಲ್ಲ ೪-೫ ದಿನ ಇದ್ದು ಹೋದ ನಂತರ ಬೀದಿಯೆಲ್ಲ ಬಣ ಬಣ.

ಇತ್ತೀಚಿನ ದಿನಗಳಲ್ಲಿ ಗ್ರಾಮಗಳಲ್ಲಿ ಸೌಕರ್ಯಗಳಿಗೇನು ಕಡಿಮೆ ಇಲ್ಲ, ಬೀದಿಯ ದೀಪವೇ ಇಲ್ಲದೆ ಜೀವನ ಮಾಡುತ್ತಿದ್ದ ಕಾಲವೊಂದಿತ್ತು,ಈಗ ಪರಿಸ್ಥಿತಿ ಬಹಳ ಸುಧಾರಿಸಿದೆ, ಬಹುಶ್ಯಹ ಎಲ್ಲ ಮನೆಗಳಲ್ಲೂ ವಿದ್ಯುತ್ ದೀಪದಿಂದ ಹಿಡಿದು ಸೋಲಾರ್ ದೀಪದವರಗೂ ಎಲ್ಲ ಸೌಕರ್ಯಗಳಿವೆ.ಕೆಲವರು ನೀರಿಗಾಗಿ ತಮ್ಮ ಮನೆಯ ಮುಂದೆ ಬೋರ್ ತೋಡಿಸಿಕೊಂಡಿದ್ದಾರೆ.

ಹಿಂದೆ ಕೆರೆಗೆ ಹೋಗಿ ಪಾತ್ರೆ ತೊಳೆದು ಬಟ್ಟೆ ಒಗೆದುಕೊಂಡು ಬರುವ ಸಂಪ್ರದಾಯವಿತ್ತು,ಸಿಹಿನೀರ ಬಾವಿಗಳು ಸಾಮಾನ್ಯವಾಗಿ ಊರಾಚೆ ಇರುತ್ತಿದ್ದವು, ಮನೆಯ ಹೆಂಗಸರು ಸಂಜೆಯ ವೇಳೆ ಕುಡಿಯಲು ನೀರನ್ನು ಅಲ್ಲಿಂದ ತರುತ್ತಿದ್ದರು,ಅವರಿಗದು ವಾಯು ವಿಹಾರದಂತೆ ಇರುತ್ತಿತ್ತು.

ಆದರೆ ಈಗ ಹಾಗಲ್ಲ ಸನ್ನಿವೇಶ ಪೂರಾ ಬದಲಾವಣೆಯಗಿದೆ. ಯಾವುದಕ್ಕೂ ಹೆಚ್ಚು ಶ್ರಮವಿಲ್ಲ,ಕೆಲವು ನಾಜೂಕಾದ ಕೆಲಸಗಳನ್ನು ಮಾಡಿಕೊಂಡರಾಯಿತು ಅಷ್ಟೆ. ಮನೆಕೆಲಸದವರು ಬಂದು ಪಾತ್ರೆಗಳನ್ನು ತೊಳೆದು ಕೊಡುತ್ತಾರೆ ಅದಕ್ಕೆ ಹುಣಸೆ ಹಣ್ಣಿನ ನೀರು ಚುಮುಕಿಸಿ ತೆಗೆದಿಟ್ಟರಾಯಿತು (ಇದನ್ನು ಹುಳಿ ಹಚ್ಚುವುದು ಎಂದು ಕರೆಯುತ್ತಾರೆ ), ಬಟ್ಟೆಯನ್ನು ಸಹ ಒಗೆದು ಕೊಡುತ್ತಾರೆ ಅದಕ್ಕೆ ನೀರು ಹುಯ್ದುಕೊಂಡು ಜಾಲಾಡಿ ಹರವಿದರಾಯಿತು. ಇನ್ನು ತೋಟ ತುಡಿಕೆಯ ಕೆಲಸಗಳಿಗೊ ಆಳು ಕಾಳು ಬರುತ್ತಾರೆ.

ಹಳ್ಳಿಗಳಲ್ಲೂ ಈಗ ಕೇಬಲ್ ಟಿವಿ ಯ ಹಾವಳಿ ,ಅಲ್ಲಿಯ ಜನರೂ ಸಹ ಈಗ ಟಿವಿಯ ಹುಳುಗಳಾಗಿಬಿಟ್ಟಿದ್ದಾರೆ, ಹಿಂದೆ ಸಂಜೆಯ ವೇಳೆ ಜನಸಂದಣಿಯಿಂದ ತುಂಬಿರುತ್ತಿದ್ದ ಅರಳಿಕಟ್ಟೆಗಳು ಶಾಲೆಯ ಜಗುಲಿಗಳು ಈಗ ಬಣಗುಟ್ಟುತ್ತಿರುತ್ತವೆ.

ಶಂಕರ ಶಾಸ್ತ್ರಿಗಳಿಗೆ ನಾಲ್ವರು ಮಕ್ಕಳು, ಮೂರು ಗಂಡು ಹಾಗು ಒಂದು ಹೆಣ್ಣು, ಮಗಳನ್ನು ಹೀರಿಸಾವೆಯ ಹತ್ತಿರ ಗ್ರಾಮವೊಂದರ ಶಾನುಬೋಗರ ಮಗನಿಗೆ ಧಾರೆ ಎರೆದು ಕನ್ಯಾದಾನ ಮಾಡಿದ್ದಾರೆ. ಮೊದಲನೆಯ ಮಗ ಶ್ರೀಕಂಠ, ಓದಿದ್ದು ಹತ್ತನೆ ತರಗತಿಯವರಗೆ ಇರುವ ಜಮೀನನ್ನು ಸಹ ನೋಡಿಕೊಳ್ಳದೆ ತಿಂದು ಉಂಡು ತಿರುಗಿಕೂಂಡು ಆರಾಮಾಗಿದ್ದಾನೆ.ಅವನಿಗೆ ಸೋದರ ಸಂಬಧಿಯನ್ನೇ ಅಂದರೆ ಶಾಸ್ತ್ರಿಗಳ ತಂಗಿಯ ಮಗಳನ್ನೆ ತಂದುಕೊಂಡಿದ್ದಾರೆ.

ಹೆಗಲು ತೊಳೆದ ಬಸವನ ಹಾಗೆ ಎನೊಂದು ಮಾಡದೆ ತಿಂದುಂಡು ತಿರುಗೊ ಶ್ರೀಕಂಠ , ಕೆಲಸ ಬೋಶಗಳನ್ನು ಒಂದು ಮಾಡದೆ ಬಿನ್ನಾಣಿ ಹಾಗೆ ಆಡೊ ಅವನ ಹೆಂಡತಿ ಕುಸುಮ, ಈ ಇಳಿ ವಯಸ್ಸಿನಲ್ಲೂ ಸಹ ಶಾಸ್ತ್ರಿಗಳ ಪತ್ನಿ ಜಾನಕಮ್ಮನವರಿಗೆ ಮನೆಯ ಕೆಲಸಗಳು ತಪ್ಪಿದಲ್ಲ,ಮುಂಜಾನೆ ಬೇಗ ಎದ್ದು ಬಾಗಿಲು ಸಾರಿಸಿ ರಂಗೋಲಿ ಬಿಡುವುದರಿಂದ ಹಿಡಿದು ರಾತ್ರಿ ಊಟದ ಗೋಮೆ ಹಚ್ಚುವವರಗೂ ಎಲ್ಲ ಕೆಲಸ ಅವರೇ ಮಾಡಬೇಕು.

ಇನ್ನು ಶಂಕರ ಶಾಸ್ತ್ರಿಗಳು ಅವರಾಯಿತು, ಅವರ ಪೂಜೆ ಪುನಸ್ಕಾರವಾಯಿತು, ಭಾಗವತ ಪುರಾಣ ಓದುತ್ತಾ ಕುಳಿತುಬಿಟ್ಟರೆ ಮುಗಿದೇ ಹೋಯಿತು, ಕಾಲ ಹೋಗಿದ್ದೆ ಅವರಿಗೆ ತಿಳಿಯುವುದಿಲ್ಲ.ಸಂಸಾರದಲ್ಲಿ ಇಷ್ಟು ವರುಶ ನೀಸಿ ಬೇಸತ್ತಿದ್ದಾರೆ, ಇತ್ತೀಚೆಗೆ ಅದರ ಬಗೆಗೆ ಯೊಚಿಸುವುದನ್ನೆ ಬಿತ್ತು ಬಿತ್ತಿದ್ದಾರೆ, ಪಾಪ ಅವರು ತಾನೆ ಎನು ಮಾಡಿಯಾರು? ಇಷ್ಟಾದರು ಅವರಿಗೆ ಜಾನಕಮ್ಮನವರು "ಮಾಡೋರು ಒಬ್ಬರು ಇದ್ದರೆ ನೋಡು ನನ್ನ ಸಿರಿಯಾ ಅಂತ ನಾನೊಬ್ಬಳು ಮಾಡುತ್ತಾ ಇದ್ದಿನಲ್ಲ ನೀವು ಭಾಗವತ, ಪುರಾಣ ಎನು ಓದಿದರೊ ನಡಿಯುತ್ತೆ" ಅಂತ ಶಾಸ್ತ್ರಿಗಳನ್ನ ಹಂಗಿಸುತ್ತಾರೆ, ಅವರೂ ಜಾನಕಮ್ಮನವರಿಗೆ ಹೇಳುತ್ತಾರೆ ಇವಕೆಲ್ಲ ತಲೆಕೆಡಿಸಿಕೊಳ್ಳಬೇಡ ರಾಮ ಕ್ರಿಶ್ನ ಅಂತ ಹಾಯಾಗಿರು ಅಂತ, ಆದರೆ ಅವರಿಗೆ ಹಾಗೆ ಇರೊಕ್ಕೆಅಗಲ್ವೆ.

ಇನ್ನುಳಿದ ಇಬ್ಬರು ಗಂಡು ಮಕ್ಕಳಲ್ಲಿ ಎರಡನೆಯವ ರಾಮಚಂದ್ರ ಎಸ್.ಎಸ್.ಎಲ್.ಸಿ ಪಾಸು ಮಾಡಿ, ಕಾಲೇಜಿಗೆ ಹೊಳೆನರಸೀಪುರಕ್ಕೆ ಸೇರಿ ಸೆಕೆಂಡ್ ಪಿ.ಯು.ಸಿ ನಲ್ಲಿ ಇಂಗ್ಲಿಷ್ನಲ್ಲಿ ಗೋತ ಹೊಡೆದವನು ಮತ್ತೆ ಪರಿಕ್ಷೆ ಕಟ್ಟುವ ಪ್ರಯತ್ನ ಮಾಡಲೇ ಇಲ್ಲ ಪುಣ್ಯಾತ್ಮ. ಊರಿನಲ್ಲೇ ಹಾಲಿನ ಉತ್ಪಾದಕರ ಸಂಘದ ಛೇರಮೆನ್ ಆಗಿ, ಎನೋ ಕಡಿದು ಕಟ್ಟೇ ಹಾಕುತ್ತೆನೆ ಅನ್ನೊ ಭ್ರಮೆಯಲ್ಲಿ ಪಂಚಯತಿ ಆಪೀಸಿಗೂ,ಹಾಲಿನ ಸಂಘಕ್ಕೂ ಅಲೆಯುತ್ತಾನೆ.

ಇನ್ನು ಕೊನೆಯವನು ವಾಸುದೇವ, ಅಂತೂ ಇಂತೂ ಬಿ.ಎ. ನ ಮೂರು ಬಾರಿ ಕಟ್ಟ ಕೊನೆಯ ದಂಡಯಾತ್ರೆಯಲ್ಲಿ ವಿಜಯವನ್ನು ಪಡೆದಿದ್ದಾನೆ.ಹೊಳೆನರಸೀಪುರದಲ್ಲಿ ದಿನಸಿ ಅಂಗಡಿ ಇಡ್ತೀನಿ ಅಂತ ದಿನಾ ಊರಿಗೂ ಹೊಳೆನರಸೀಪುರಕ್ಕೂ ಅಡವರಿಯತ್ತಿದ್ದಾನೆ.

ಇತ್ತ ೨೦ ಎಕರೆ ತೆಂಗಿನ ತೋಟ, ೧೫ ಎಕರೆ ಗದ್ದೆ, ತೋಟ ಹಾಳ ಬಿದ್ದಿದೆ. ತೆಂಗಿಗೆ ನುಸಿ, ಗದ್ದೆಗೆ ಬಿತ್ತನೆ ಮಾಡಿಸುವವರಿಲ್ಲ,ಶಂಕರ ಶಾಸ್ತ್ರಿಗಳು ಸಹ ಈ ಬಗ್ಗೆ ಮಕ್ಕಳಿಗೆ ಹೇಳಿ ಹೇಳಿ ಸೋತು ಸುಣ್ಣವಾಗಿ ಈಗ ಸುಮ್ಮನಾಗಿಬಿಟ್ಟಿದ್ದಾರೆ. ಮೈ ಬಗ್ಗಿಸಿ ಕೆಲಸ ಮಾಡುವ ಮನಸ್ಸು ಒಬ್ಬರಲ್ಲು ಇಲ್ಲ ಇರೊದನ್ನು ಬಿಟ್ಟು ಬೇರೆ ಕಾರುಬಾರು ಮಾಡುವ ತವಕ ಮಕ್ಕಳಿಗೆ.

ಇವೆಲ್ಲದರ ನಡುವೆ ೩೩ ವರಷ ತುಂಬಿದ ರಾಮಚಂದ್ರನಿಗೆ ಕನ್ಯೆಯನ್ನು ಅರಸುವ ಪ್ರಯತ್ನ ನದೆದಿದೆ, ೪ ವರುಷಗಳಿಂದ ಹುಡುಕತ್ತಾನೆ ಇದ್ದಾರೆ,ಆದರೆ ಯಾವುದು ಆಗುವ ಹಾಗಿಲ್ಲ,ಜಾತಕಗಳು ಬರುವುದೇ ಆಗೊಂದು ಈಗೊಂದು, ಅದರಲ್ಲು ಕೆಲವು ಒಂದೇ ಗೋತ್ರದವು,ಇನ್ನು ಕೆಲವು ಮೂಲಾ,ಆಶ್ಲೇಷಾ ಇತ್ಯಾದಿ ನಕ್ಶತ್ರಗಳವು,ಇನ್ನು ಅಪರೊಪಕ್ಕೆ ಜಾತಕ ಕೂಡಿಬಂದರೆ ಹೆಣ್ಣುಗಳೇ ಹಳ್ಳಿ ಮನೆ ಎಂದು ಒಪ್ಪುವುದಿಲ್ಲ.ಈ ನಡುವೆ ಬ್ರಾಹ್ಮಣರ ಪೈಕಿ ಹೆಣ್ಣಿನ ಸಂಖ್ಯೆನೇ ಕಡಿಮೆ ಆಗಿದೆ. ಹೆಚ್ಚು ಕಡಿಮೆ ಹೆಣ್ಣು ಮಕ್ಕಳೆಲ್ಲ ವಿದ್ಯಾವಂತರೆ, ಕನಿಷ್ಠ ಪಕ್ಶ ಒಂದು ಪದವಿನಾದ್ರು ಮುಗಿಸಿರುತ್ತಾರೆ.ಅಂತಹುದರಲ್ಲಿ ರಾಮಚಂದ್ರನಿಗೆ ಯಾವ ಹುಡುಗಿ ಕಾದು ಕುಳಿತಿರುವಳೊ ನೋಡಬೇಕು.

ಜಾನಕಮ್ಮನವರಿಗೊ ಸಹ ಬೇಸರ ಬಂದುಬಿಟ್ಟಿದೆ ಜೀವನದಲ್ಲಿ,ಎಕತಾನತೆ,ಓಂದೇ ರೀತಿಯ ಬದುಕು, ಮನಸ್ಸಿಗೆ ಮುದ ನೀಡೋ ಯಾವ ಅಂಶಗಳೂ ಇಲ್ಲ,ಮನೆಕೆಲಸಗಳನ್ನು ಮಾಡಿ ಮಾಡಿ ದೇಹ ಕ್ರುಷವಾಗಿದೆ.
ಈ ನಡುವೆ ಮಗಳು ಅಂಬುಜನದ್ದು ಇನ್ನೊಂದು ಹೊಸ ಸಮಸ್ಯೆ,ಅವಳ ಮಗ ಶಾಲೆಗೆ ಹೋಗುವಷ್ಟು ಬೆಳೆದು ದೊಡ್ಡವನಾಗಿದ್ದಾನೆ,ಚನ್ನರಾಯಪಟ್ಟಣದಲ್ಲಿ ಮನೆ ಮಾಡಿ ಅವನನ್ನು ಅಲ್ಲಿ ಶಾಲೆಗೆ ಸೇರಿಸಿ ಓದಿಸಬೇಕೆಂದು ಗಂಡನ ಬಳಿ ದುಂಬಾಲು ಬಿದ್ದಿದ್ದಾಳೆ.ಅವರ ಅತ್ತೆ ಮಾವ ಊರು ಬಿಟ್ಟು ಬರುವುದಿಲ್ಲ ಅನ್ನುತ್ತಾರೆ,ಇವಳ ಗಂಡ ಅವರ ಎಕೈಕ ಪುತ್ರ,ಅವನು ಸಹ ಜಮೀನು ನೋಡಿಕೊಂಡು ಊರಿನಲ್ಲೆ ಇದ್ದಾನೆ.ತಂದೆ ತಾಯಿಯನ್ನು ಬಿಟ್ಟು ಬರಲಾರ.ಈ ವಿಚಾರವಾಗಿ ಅವಳು ಅವನೊಡನೆ ಜಗಳವಾಡಿ ಬಂದು ಮುನಿಸಿಕೊಂಡು ತವರುಮನೆಯಲ್ಲಿ ಕುಳಿತಿದ್ದಾಳೆ.

ಶಂಕರ ಶಾಸ್ತ್ರಿಗಳಿಗೆ ಈಗ ಕಾಶಿ ಯಾತ್ರೆ ಮಾಡಬೇಕೆಂಬ ಆಗಾಧವಾದ ಹಂಬಲ.ಜಾನಕಮ್ಮನವರಿಗೆ ಬರೇ ಈ ಸಾಂಸಾರಿಕ ಸಮಸ್ಯೆಗಳ ಕೊರಗು ಮನದಲ್ಲಿ, ಇವೆಲ್ಲದರ ನಡುವೆ ಕಾಶಿ ಯಾತ್ರೆ ಬೇಕೆ ಅವರಿಗೆ?

ಆದರೂ ಶಂಕರ ಶಾಸ್ತ್ರಿಗಳ ಬಲವಂತಕ್ಕೆ ಈ ಶ್ರಾವಣ ಮಾಸದಲ್ಲಿ ಕಾಶಿಯಾತ್ರೆಗೆ ಹೊರಟಿದ್ದಾರೆ.

ಶಾಸ್ತ್ರಿ ದಂಪತಿಗಳು ಸುಸೂತ್ರೆವಾಗಿ ನೆಮ್ಮದಿಯಿಂದ ಕಾಶಿಯಾತ್ರೆಯನ್ನು ಸುಲಲಿತವಾಗಿ ಮುಗಿಸಿ ಬಂದು ಅವರು ಗಂಗಾ ಸಂತರ್ಪಣೆ ಮಾಡುವ ವೇಳೆಗೆ ಅವರ ಈ ಎಲ್ಲ ಸಮಸ್ಯೆಗಳನ್ನ ಆ ಕಾಶಿ ವಿಶ್ವನಾಥನು ಪರಿಹರಿಸಲಿ ಎಂದು ಆಶಿಸೋಣ.