ಹುಚ್ಚುತನದ ಪ್ರಪಂಚ!

ನಮ್ಮ ಕಿಟ್ಟಣ್ಣ ಬೇರೆ ಬೇರೆ ಕಚೇರಿಗಳಿಗೆ ಸಲಕರಣೆಗಳನ್ನು ಪೂರೈಸುವ ಕೆಲಸ ಮಾಡುತ್ತಾನೆ. ಒಂದು ಲಾರಿ, ಎರಡು ಟೆಂಪೊ ಇಟ್ಟುಕೊಂಡು ವ್ಯವಹಾರ ನಡೆಸುತ್ತಾನೆ. ಒಂದು ದಿನ ನಗರದಲ್ಲಿದ್ದ ಮಾನಸಿಕ ಚಿಕಿತ್ಸಾಲಯದಿಂದ ತುರ್ತು ಕರೆ ಬಂದಿತು. ಅವರಿಗೆ ಕೆಲವು ಸಾಮಗ್ರಿಗಳು ತಕ್ಷಣವೇ ಬೇಕಾಗಿವೆ, ಅವನ್ನು ತಂದು ಕೊಡಬೇಕು ಎಂಬ ಒತ್ತಾಯದ ಆಜ್ಞೆ. ಕಿಟ್ಟಣ್ಣ ತಕ್ಷಣ ತನ್ನ ಲಾರಿಯ ಡ್ರೈವರ್ ನಿಗೆ ಸಾಮಾನುಗಳನ್ನು ಸಾಗಿಸಲು ಹೇಳಬೇಕೆಂದು ಕರೆದ. ಆದರೆ, ಅಂದು ಆ ಚಾಲಕ ಆಫೀಸಿಗೇ ಬಂದಿಲ್ಲ! ಬೇರೆ ಯಾರೂ ಈ ಕೆಲಸ ಮಾಡುವಂತಿಲ್ಲ.
ಏನು ಮಾಡುವುದು ಎಂದು ಚಿಂತಿಸಿ, ತಾನೇ ಲಾರಿ ತೆಗೆದುಕೊಂಡು ಹೋಗುವುದು ಎಂದು ತೀರ್ಮಾನಿಸಿದ. ಆಳುಗಳಿಗೆ ಹೇಳಿ ಸಾಮಾನುಗಳನ್ನು ಲಾರಿಯಲ್ಲಿ ತುಂಬಿಸಿ ತಾನೇ ವಾಹನವನ್ನು ಚಲಾಯಿಸಿಕೊಂಡು ಆಸ್ಪತ್ರೆಗೆ ತೆರಳಿದ. ಮರಳಿ ಬರುವಾಗ ಲಾರಿ ಚಾಲನೆ ಮಾಡಲು ನೋಡಿದಾಗ ಅವನಿಗೆ ಹಿಂದಿನ ಬಲಭಾಗದ ಟೈರು ಪಂಕ್ಚರ್ ಆಗಿದ್ದು ಗಮನಕ್ಕೆ ಬಂತು. ಛೇ ಇದೇನು ಕೆಲಸವಾಯಿತಪ್ಪ ಎಂದುಕೊಂಡು ತಾನೇ ಅದನ್ನು ಬದಲಾಯಿಸಲು ಹೊರಟ. ಜ್ಯಾಕ್ ಹಚ್ಚಿ, ಗಾಲಿಯನ್ನು ಮೇಲೇರಿಸಿ ನಾಲ್ಕು ಬೋಲ್ಟ್‌ಗಳನ್ನು ಒಂದೊಂದಾಗಿ ಬಿಚ್ಚಿ ಒಂದು ಕಾಗದದ ಮೇಲಿಟ್ಟ. ಹಳೆಯ ಟೈರನ್ನು ತೆಗೆದು ಚೆನ್ನಾಗಿದ್ದ ಟೈರನ್ನು ಸೇರಿಸಿದ. ಇನ್ನು ಬೋಲ್ಟ್‌ಗಳನ್ನು ಹಾಕಿ ಬಿಗಿ ಮಾಡಬೇಕು ಎನ್ನುವಾಗ ಜೋರಾಗಿ ಗಾಳಿ ಬೀಸಿತು. ಆಗ ಬೋಲ್ಟ್‌ಗಳನ್ನಿಟ್ಟ ಕಾಗದ ಚಡಪಡಿಸಿ ಹಾರಿತು.
ಅದರ ಮೇಲಿದ್ದ ನಾಲ್ಕೂ ಬೋಲ್ಟ್‌ಗಳು ಸರಿದು ಪಕ್ಕದಲ್ಲಿದ್ದ ಆಳವಾದ ಮೋರಿಯಲ್ಲಿ ಬಿದ್ದು ಹೋದವು. ಅಲ್ಲಿಂದ ಅವುಗಳನ್ನು ತೆಗೆಯುವುದು ಅಸಾಧ್ಯ. ಈಗ ಲಾರಿಯನ್ನು ಚಲಿಸುವುದೂ ಅಸಾಧ್ಯ. ತಲೆ ಕೆಟ್ಟುಹೋಯಿತು ಕಿಟ್ಟಣ್ಣನಿಗೆ. ಬೆವರು ಕಿತ್ತಿಕೊಂಡು ಬಂದಿತು. ಆಸ್ಪತ್ರೆಯ ಮೆಟ್ಟಲಿನ ಮೇಲೆ ಹುಚ್ಚನಂತೆ ಕಾಣುವ ವ್ಯಕ್ತಿ ಇವನನ್ನೇ ನೋಡುತ್ತ ಕುಳಿತಿದ್ದ. ಇವನ ಪರಿಸ್ಥಿತಿಯನ್ನು ನೋಡಿ ಕುಳಿತಲ್ಲಿಂದ ಎದ್ದು ಬಂದ. ಹುಬ್ಬೇರಿಸಿ ಏನಾಯ್ತು? ಎಂದು ಕೇಳಿದ. ಹುಚ್ಚರ ಆಸ್ಪತ್ರೆಯಿಂದ ತಪ್ಪಿಸಿ ಬಂದ ಈ ಮಾನಸಿಕ ರೋಗಿಗೆ ಏನು ಹೇಳುವುದು ಎಂದು ಕ್ಷಣಕಾಲ ಸುಮ್ಮನಿದ್ದ ಕಿಟ್ಟಣ್ಣ. ಆದರೆ ಆತ ತೋರುತ್ತಿದ್ದ ಅಸಕ್ತಿಯನ್ನು ಗಮನಿಸಿ ಆದದ್ದನ್ನೆಲ್ಲ ಸವಿಸ್ತಾರವಾಗಿ ವಿವರಿಸಿದ. ಅತ ಲಕ್ಷಣವಾಗಿ ಕೇಳಿಸಿಕೊಂಡು ಗಹಗಹಿಸಿ ನಕ್ಕ, ‘ಅದಕ್ಕೇ ನೀನು ಹೀಗೆ ಡ್ರೈವರ್ ಆಗಿದ್ದೀಯಾ, ಅದೂ ದಡ್ಡ ಡ್ರೈವರ್. ಅಷ್ಟೂ ಬುದ್ಧಿ ಇಲ್ಲವೇ?’ ಎಂದ. ಕಿಟ್ಟಣ್ಣ ‘ಹೌದಯ್ಯ, ನಾನು ದಡ್ಡ ನಿಜ. ಯಾಕೆಂದರೆ ನಿನಗೆ ವಿಷಯ ಹೇಳುತ್ತಿದ್ದೀನಲ್ಲ.
ನನ್ನ ಜಾಗದಲ್ಲಿ ನೀನಿದ್ದರೆ ಏನು ಮಾಡುತ್ತಿದ್ದೆ?’ ಎಂದು ಸವಾಲೆಸೆದ. ಆತ ಮತ್ತೆ ಗಹಗಹಿಸಿ ನಕ್ಕು ಹೇಳಿದ, ‘ದಡ್ಡಾ, ಉಳಿದ ಮೂರು ಟೈರುಗಳಲ್ಲಿರುವ ಒಂದೊಂದು ಬೋಲ್ಟ್ ಬಿಚ್ಚಿಕೋ. ಅವು ಮೂರನ್ನು ಈ ನಾಲ್ಕನೆಯ ಟೈರಿಗೆ ಹಾಕು. ಗಾಡಿ ನಡೆಸಿಕೊಂಡು ಗ್ಯಾರೇಜಿಗೆ ಹೋಗಿ ಎಲ್ಲ ಟೈರುಗಳಿಗೂ ಒಂದೊಂದು ಬೋಲ್ಟ್ ಹಾಕಿಸಿಕೋ. ಸುಲಭವಲ್ಲವೇ?’ ಕಿಟ್ಟಣ್ಣ ಬೆರಗಾದ. ಇಷ್ಟು ಸುಲಭದ ಪರಿಹಾರ ತನಗೇಕೆ ಹೊಳೆಯಲಿಲ್ಲ ಎಂದುಕೊಂಡ. ನಂತರ, ‘ಹೌದಯ್ಯ, ಇಷ್ಟು ಬುದ್ಧಿವಂತನಾದ ನೀನು ಇಲ್ಲೇಕೆ ಈ ಆಸ್ಪತ್ರೆಯಲ್ಲಿ ಇದ್ದೀ?’ ಎಂದು ಕೇಳಿದ. ಆತ ಮತ್ತಷ್ಟು ಜೋರಾಗಿ ಗಹಗಹಿಸಿ ನಕ್ಕು ಹೇಳಿದ, ‘ನಾನು ಹುಚ್ಚನಿರಬಹುದು ಆದರೆ ಮೂರ್ಖನಲ್ಲ ನಿನ್ನಂತೆ’. ಅಲ್ಲಿಂದ ನಗುತ್ತ ಹೊರಟುಹೋದ.
ನಾವೆಲ್ಲರೂ ಒಂದು ರೀತಿಯಲ್ಲಿ ಹುಚ್ಚರೇ. ನಮಗೆ ಒಂದು ವಿಷಯದಲ್ಲಿ ಇರುವ ಭಾವಾವೇಶ ಮತ್ತೊಬ್ಬರಿಗೆ ಹುಚ್ಚುತನದಂತೆ ಕಂಡೀತು. ಕೆಲವರಿಗೆ ಅಧಿಕಾರದ ಹುಚ್ಚು, ಕೆಲವರಿಗೆ ಅಧಿಕಾರ ಉಳಿಸಿಕೊಳ್ಳುವ ಹುಚ್ಚು, ಹಣದ ಹುಚ್ಚು, ಜನಪ್ರಿಯತೆಯ ಹುಚ್ಚು, ಸಮಾಜ ಸೇವೆಯ ಹುಚ್ಚು, ಸಾಹಿತ್ಯದ ಹುಚ್ಚು, ತಂತ್ರಜ್ಞಾನದ ಹುಚ್ಚು, ಅಧ್ಯಾತ್ಮಿಕತೆಯ ಹುಚ್ಚು ಕೊನೆಗೆ ಮೋಕ್ಷದ ಹುಚ್ಚು. ಹೀಗೆ ಹುಚ್ಚುತನದ ಪರಂಪರೆ ಬೆಳೆಯುತ್ತಲೇ ಹೋಗುತ್ತದೆ. ಒಂದೇ ವಿಷಯದಲ್ಲಿ ಅತಿಯಾದ ಭಾವಾವೇಶವೇ ಬಹುಶಃ ನಮ್ಮನ್ನು ಉಳಿದ ವಿಷಯಗಳಲ್ಲಿ ಮೂರ್ಖರನ್ನಾಗಿ ಮಾಡುವುದು ಸಾಧ್ಯ.
(ವಾಟ್ಸಾಪ್ ಸಂಗ್ರಹ)- ಬಸಯ್ಯ ಜಿ ಮಳಿಮಠ, ಹುಬ್ಬಳ್ಳಿ
ಸಾಂಕೇತಿಕ ಚಿತ್ರದ ಕೃಪೆ: ಇಂಟರ್ನೆಟ್ ತಾಣ