ಹೃದಯ ಮಿಡಿದಾಗ...
ರಶ್ಮಿ ಟೀಚರ್ ಅಂದರೆ ಅಶ್ವಿನಿಗೆ ಇಷ್ಟ. ಸ್ಟಾಫ್ ರೂಂ ನಲ್ಲಿ ರಶ್ಮಿ ಒಬ್ಬರೇ ಮಕ್ಕಳ ನೋಟ್ಸ್ ನೋಡ್ತಾ ಕುಳಿತಿದ್ದರು. ಅಶ್ವಿನಿ ಬಂದವಳೇ "ಮೇ ಐ ಕಮ್ ಇನ್" ಅಂದಳು. ಟೀಚರ್ "ಓಕೆ ಕಮ್" ಅಂದರು. ಅಶ್ವಿನಿ ಒಂದು ಪ್ಲಾಸ್ಟಿಕ್ ಚೀಲ ಟೀಚರ್ ಕೈಗಿತ್ತಳು. ರಶ್ಮಿಗೆ ಆಶ್ಚರ್ಯ. ನೋಡಿದರೆ ಒಂದಷ್ಟು ನೋಟುಗಳು. ಒಂದಷ್ಟು ನಾಣ್ಯಗಳು. "ಇದೇನು?" ಎಂದು ಕುತೂಹಲದಿಂದ ಕೇಳಿದರು. "ಟೀಚರ್ ನನ್ನ ಅಮ್ಮನಿಗೆ ಒಂದು ಸೀರೆ ಬೇಕಿತ್ತು. ನೀವು ಸಂಜೆ ನನಗೆ ಸೆಲೆಕ್ಟ್ ಮಾಡಿ ಕೊಡ್ತೀರಾ?" ಎಂದು ಮುಗ್ಧವಾಗಿ ಕೇಳಿದಳು. ರಶ್ಮಿಗೆ ಪರಿಸ್ಥಿತಿಯ ಹಿಂದೆ ಮುಂದೆ ಗೊತ್ತಿರಲಿಲ್ಲ. ಆದರೂ ಎಣಿಕೆ ಮಾಡಿದಾಗ ಎಂಟು ನೂರ ಎಪ್ಪತ್ತು ರೂಪಾಯಿಗಳಿತ್ತು. "ನಿನಗೆ ಹಣ ಎಲ್ಲಿಂದ ಬಂತು?" ಎಂದು ರಶ್ಮಿ ಕೇಳಿದಾಗ, ಮುಗ್ಧ ಅಶ್ವಿನಿ ಕಣ್ಣಲ್ಲಿ ನೀರು. ಸುಮ್ಮನೆ ಅಳತೊಡಗಿದಳು. ರಶ್ಮಿ ಹಣವನ್ನು ಬ್ಯಾಗ್ ನಲ್ಲಿ ಇಟ್ಟು, ಅಶ್ವಿನಿಯನ್ನು ಹೊರಗಡೆ ಕರೆದುಕೊಂಡು ಹೋಗಿ, ಮುಖ ತೊಳೆಸಿದಳು. ಅಲ್ಲೇ ಪಕ್ಕದಲ್ಲಿ ಕಟ್ಟೆಯ ಮೇಲೆ ಕೂರಿಸಿ, "ಹೇಳು ಪುಟ್ಟಾ ಹಣ ಎಲ್ಲಿಂದ ಸಿಕ್ಕಿತು?" ಎಂದು ತಲೆ ನೇವರಿಸುತ್ತಾ ಕೇಳಿದರು.
ಅಶ್ವಿನಿ ಅಳುತ್ತಾ ವಿಷಯ ಹೇಳತೊಡಗಿದಳು. ಅಶ್ವಿನಿ ಬಡ ಕುಟುಂಬದ ಹುಡುಗಿ. ನೋಡಲು ಸುಂದರಿ. ಕಲಿಕೆಯಲ್ಲೂ ಬುದ್ಧಿವಂತೆ. ಆದ್ದರಿಂದಲೇ ಅವಳೆಂದರೆ ಎಲ್ಲಾ ಟೀಚರ್ಸ್ ಗೂ ಇಷ್ಟ. ಆಕೆಗೆ ತಂದೆ ಇರಲಿಲ್ಲ. ತಾಯಿಯೇ ಕೂಲಿ ಮಾಡಿ ಸಾಕುತ್ತಿದ್ದಳು. ಗುಡಿಸಲಿನಲ್ಲಿ ವಾಸ. ಅಮ್ಮನ ಆರೋಗ್ಯ ಸಮಸ್ಯೆಯಿಂದ ದುಡಿಮೆಯ ಹಣ ಖರ್ಚಿಗೇ ಸಾಕಾಗುತ್ತಿರಲಿಲ್ಲ. ಆಕೆಗೆ ಸಹಾಯ ಮಾಡುವ ಕೈಗಳೇ ಇರಲಿಲ್ಲ. ಆದರೂ ಮಗಳು ಚೆನ್ನಾಗಿ ಕಲಿತು ಒಳ್ಳೆ ಕೆಲಸ ಪಡೆಯಬೇಕೆಂಬ ಆಸೆ ಆಕೆಗೆ. ಅಶ್ವಿನಿಗೆ ಶಾಲೆಯಲ್ಲಿ ಪ್ರವಾಸ. ಒಬ್ಬೊಬ್ಬರಿಗೆ ಸಾವಿರದಂತೆ ಹಣ ತರಲು ತಿಳಿಸಲಾಗಿತ್ತು. ಅಶ್ವಿನಿಯ ಗೆಳತಿಯರೆಲ್ಲಾ ಪ್ರವಾಸಕ್ಕೆ ಹಣ ಕೊಟ್ಟಿದ್ದರು. ಅಶ್ವಿನಿಯನ್ನು ಪ್ರವಾಸಕ್ಕೆ ಬರುವಂತೆ ಎಲ್ಲರೂ ಒತ್ತಾಯಿಸುತ್ತಿದ್ದರು. ಆದರೆ ಆಕೆಗೆ ಅಮ್ಮನ ಪರಿಸ್ಥಿತಿಯ ಅರಿವಿತ್ತು. ಅಷ್ಟೊಂದು ಹಣ ಅಮ್ಮನಲ್ಲಿ ಹೊಂದಿಸಲು ಸಾಧ್ಯವಿಲ್ಲವೆಂದು ಅವಳಿಗೆ ಗೊತ್ತಿತ್ತು. ಹಾಗಾಗಿ ಆಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೂ ಅವಳಿಗೆ ತನ್ನ ಸ್ಥಿತಿ ನೆನೆದು ಬಹಳನೇ ದುಃಖ ಆಗುತ್ತಿತ್ತು. ಅಮ್ಮನಿಗೂ ಮಗಳು ಎಂದಿನಂತೆ ಇಲ್ಲದ್ದು ಗಮನಕ್ಕೆ ಬಂದಿತ್ತು. ಯಾವಾಗಲೂ ಬಹಳನೇ ಮಾತಾಡುತ್ತಿದ್ದ ಅಶ್ವಿನಿ ಇತ್ತೀಚೆಗೆ ತೀರಾ ಮೌನಿಯಾಗಿದ್ದಳು. ಅಮ್ಮನಿಗೂ ಮಗಳ ಮೇಲೆ ಬಹಳನೇ ಪ್ರೀತಿ. ಎಷ್ಟೇ ಕಷ್ಟ ಸಹಿಸಿದರೂ ಆಕೆ ಕೇಳಿದ್ದನ್ನು ಕೊಡುತ್ತಿದ್ದಳು. ಅಂದು ಬೆಳಿಗ್ಗೆ ಶಾಲೆಗೆ ಹೊರಟಿದ್ದ ಅಶ್ವಿನಿಯನ್ನು ಕರೆದು ಅಮ್ಮ ತೀರಾ ಒತ್ತಾಯ ಮಾಡಿದಾಗ ಪ್ರವಾಸದ ಬಗ್ಗೆ ತಿಳಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅಮ್ಮನಿಗೆ ಸಹಿಸಲಾಗಲಿಲ್ಲ. ಆಕೆ ಒಳಗೆ ಹೋಗಿ ಒಂದು ಮಣ್ಣಿನ ಹುಂಡಿ( ಮಡಕೆ) ತಂದಳು. ಅಶ್ವಿನಿಯ ಅಮ್ಮನಲ್ಲಿ ಉಟ್ಟುಕೊಂಡು ಹೋಗಲು ಒಳ್ಳೆಯ ಸೀರೆ ಇರಲಿಲ್ಲ. ಇದ್ದ ಸೀರೆ ನಾಲ್ಕೈದು ತೂತು ಬಿದ್ದು ಹಳತಾಗಿತ್ತು. ಒಂದು ಹೊಸ ಸೀರೆ ತೆಗೆದುಕೊಳ್ಳಬೇಕೆಂದು ತುಂಬಾ ದಿನಗಳ ಆಸೆ ಆಕೆಗೆ. ಆದರೆ ದುಡಿದ ಹಣದಲ್ಲಿ ಸೀರೆ ಕೊಳ್ಳಲು ಸಾಧ್ಯವಿರಲಿಲ್ಲ. ಆಕೆ ತನ್ನ ದುಡಿಮೆಯಲ್ಲಿ ಐದೋ ಹತ್ತೋ ರೂಪಾಯಿ ಉಳಿಸಿ, ಆ ಹುಂಡಿಗೆ ಹಾಕುತ್ತಿದ್ದಳು. ಅದು ತುಂಬಿದಾಗ ಅದರಲ್ಲಿರುವ ಹಣದಿಂದ ತನಗೊಂದು ಸೀರೆ ಮಗಳಿಗೊಂದು ಜೊತೆ ಚಪ್ಪಲಿ ತೆಗೆಯಬೇಕೆಂದು ಬಯಸಿದ್ದಳು. ಮಗಳ ದುಃಖ ನೋಡಲಾಗದೆ ಆ ಹುಂಡಿಯಲ್ಲಿದ್ದ ಹಣ ತೆಗೆದು ಲೆಕ್ಕಹಾಕಿ ಮಗಳ ಕೈಗೆ ಕೊಟ್ಟಿದ್ದಳು. ಆದರೆ ಅದರಲ್ಲಿ ಸಾವಿರಕ್ಕೆ ನೂರ ಮೂವತ್ತು ಕಡಿಮೆನೇ ಇತ್ತು. ಒಂದೆರಡು ದಿನದಲ್ಲಿ ಉಳಿದ ಹಣ ಕೊಡುವುದಾಗಿ ತಿಳಿಸಿ ಅಶ್ವಿನಿಯನ್ನು ಶಾಲೆಗೆ ಕಳುಹಿಸಿ, ಕೆಲಸಕ್ಕೆ ತೆರಳಿದ್ದಳು. ಆದರೆ ಅಶ್ವಿನಿಯ ಮಗ್ಧ ಮನಸ್ಸಿಗೆ ಅಮ್ಮ ಹಣ ಕೂಡಿಟ್ಟ ಉದ್ದೇಶ ಗೊತ್ತಿತ್ತು. ಅವಳಿಗೆ ಪ್ರವಾಸಕ್ಕಿಂತ ಅಮ್ಮನ ಸೀರೆ ಮುಖ್ಯವಾಗಿ ತೋರಿತು. ಅದಕ್ಕಾಗಿ ಹೇಗಾದರೂ ಅದೇ ಹಣದಿಂದ ಅಮ್ಮನಿಗೆ ಸೀರೆ ತಂದು ಕೊಡಲು ನಿರ್ಧರಿಸಿದ್ದಳು. ಅವಳು ಸೀರೆ ಆಯ್ಕೆ ಮಾಡುವಷ್ಟು ಪ್ರಬುದ್ಧಳಲ್ಲ. ಅದಕ್ಕಾಗಿ ಟೀಚರ್ ಸಹಾಯ ಯಾಚಿಸಿದ್ದಳು.
ರಶ್ಮಿ ಅಶ್ವಿನಿಯನ್ನು ಕ್ಲಾಸಿಗೆ ಕಳುಹಿಸಿ, "ಸಂಜೆ ಹೋಗಿ ಸೀರೆ ತೆಗೆಯೋಣ" ಅಂದಳು. ಸಂಜೆ ಶಾಲೆ ಬಿಟ್ಟೊಡನೆ ರಶ್ಮಿ ಟೀಚರ್ ಅಶ್ವಿನಿಯನ್ನು ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ಒಂದು ಒಳ್ಳೆಯ ಸೀರೆ ಖರೀದಿಸಿ ಕೊಟ್ಟರು. ಹಾಗೆನೇ ಒಂದು ಜೊತೆ ಚಪ್ಪಲಿಯನ್ನು ಖರೀದಿಸಿ ಕೊಡುತ್ತಾ, "ನಿನ್ನ ಪ್ರವಾಸದ ಹಣ ನಾನು ಕೊಡುತ್ತೇನೆ. ನೀನೂ ನನ್ನೊಟ್ಟಿಗೆ ಪ್ರವಾಸಕ್ಕೆ ಬರಬೇಕು" ಎಂದು ಹೇಳಿ ಆಕೆಯನ್ನು ಕಳುಹಿಸಿದಳು. ಅಶ್ವಿನಿಗೆ ರಶ್ಮಿ ಟೀಚರ್ ದೇವತೆಯಂತೆ ಕಂಡಳು. ಟೀಚರ್ ಗೆ ಬೈ ಹೇಳಿ ವೇಗವಾಗಿ ಮನೆಯ ಕಡೆ ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದಂತೆ, ಆಕೆಯನ್ನೇ ದಿಟ್ಟಿಸುತ್ತಿದ್ದ ರಶ್ಮಿ ಕಣ್ಣಂಚಿನಲ್ಲಿ ಇಳಿಯುತ್ತಿದ್ದ ಕಣ್ಣೀರನ್ನು ಪುಟ್ಟ ಟವೆಲ್ ನಲ್ಲಿ ಒರೆಸುತ್ತಿದ್ದಳು.
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ