ಹೇಳು ಚಿಟ್ಟೆಯೇ

ಹೇಳು ಚಿಟ್ಟೆಯೇ

ಕವನ

ಹಾರಿ ಹಾರಿ ಹೂವನರಸಿ

ದಣಿದೆಯೇನು ಚಿಟ್ಟೆಯೇ ||

ಒಮ್ಮೆ ಬಂದು ಇಲ್ಲಿ ನಿಂದು 

ಬಳಿಕ ಹೋಗಲಾರೆಯೇ ||೧||

ಕೀಟ ರೂಪು ತೊರೆದು ಪಡೆದೆ 

ಇಂಥ ಬೆಡಗು ಯಾತಕೆ?

ಎನಿತು ಹಗುರ ದೇಹ ರೆಕ್ಕೆ

ನಿನಗೆ ಯಾರು ಹೋಲಿಕೆ?||೨||

ಹೂಗಳಿಂದ ನಿನ್ನ ಮೈಗೆ 

ರಂಗು ಮೆತ್ತಿಕೊಂಡಿತೆ ?

ಇಲ್ಲ ನಿನ್ನ ನೋಡಿ ಕರುಬಿ 

ಗಿಡವು ಹೂವು ಬಿಟ್ಟಿತೆ?||೩||

ಬರುವ ದಿನದ ಚಿಂತೆಯುಂಟೆ

ಗಳಿಕೆಗಿಲ್ಲ ಕಾತರ 

ಲಗುಬಗೆಯಲಿ ಕುಣಿಯುತಿರುವೆ

ಇಲ್ಲವೇನು ಬೇಸರ?||೪||

ಬಿಂದು ಮಧುವ ಹೀರಿ ಸುಖಿಸಿ 

ನಾಲ್ಕು ದಿನದ ಬಾಳುವೆ 

ಏಕೆ ಕಳೆವೆ ,ನೂರು ವರುಷ 

ಬಾಳುವಾಸೆಯಿಲ್ಲವೇ?||೫||

ನಿನ್ನ ದಾರಿ ಸರಿಯು ನಿನಗೆ 

ನಮ್ಮ ದಾರಿ ನಮ್ಮದು 

ಆದರೇಕೆ ನಮಗು ಮನಸು 

ಹಗುರವಾಗಿ ನಿಲ್ಲದು?||೬||