ಹೈಕು
ಬರೆಯಬೇಕೆಂದೆ ಅವಳ ಮೇಲೊಂದು ಹೈಕು
ಮರೆತೇ ಬಿಟ್ಟಿದ್ದೆ, ಓ!
ಆಗಲೇ ನನ್ನ ಮನ ಅವಳಿಂದ ಹೈಜಾಕು!
............................................................
ಸಂಧ್ಯೆಯಲಿ ಇಳಿಯುತ್ತಿದ್ದ ಸೂರ್ಯ
ಇವಳಲ್ಲಿ ಏರುತ್ತಿದ್ದ ಕೆನ್ನೆಗೆಂಪು
ನನ್ನದು ಬೆರಗುಗಣ್ಣು!
............................................................
ಸುತ್ತಲೂ ಹೊನಲು, ಚಂದ್ರನೂ ಬೆತ್ತಲು
ನನ್ನೊಳು-ನಿನ್ನೊಳು
ಯಾತರ ಅಂತರ-ಆಳ?
.............................................................
ಹೊರಗಿನ ತಂಗಾಳಿಗೆ ಎಡೆಗೊಡದೆ
ನಿನ್ನುಸಿರು ನನಗೆ
ಬೆಚ್ಚನೆಯ ಕಾವು ನೀಡಿತು
.............................................................
ಕದ ಹಾಕಿಬಿಟ್ಟಿದ್ದೇನೆ
ಮನೆಯೊಳಗೆ ತಂಗಾಳಿ ಬಾರದಂತೆ
ಮನದೊಳಗೆ ನಿನ್ನ ನೆನಪು ಇಣುಕದಂತೆ.
..............................................................
ಆ ಪುಸ್ತಕ ತೆರೆದದ್ದೇ ತಪ್ಪಾಯಿತು..
ನೀನೇ ಇಟ್ಟಿದ್ದ ನವಿಲುಗರಿ
ನನ್ನ ಕಣ್ಣ ಮಂಜಾಗಿಸಿತು.
............................................................
ನೆನಪ ಬೆಂಕಿ
ಕೆಲವರು ಮೈ ಕಾಯಿಸಿಕೊಳ್ಳುತ್ತಾರೆ
ಹಲವರು ಮೈ ಸುಟ್ಟುಕೊಳ್ಳುತ್ತಾರೆ
...........................................................
ಆ ಮರವನ್ನೇಕೆ ಕಡಿದರು?
ಅದರ ತುಂಬ ಸುಂದರ ಹೂ-ಹಣ್ಣಿದ್ದವು
ಒಂದು ಜೀವವೇ ಅದರಲ್ಲಿತ್ತು!
...........................................................
ಸೂರ್ಯೋದಯಕೆ ಕೈ ಮುಗಿಯುತ್ತಾರೆ
ಅಸ್ತವ ಕೈ ಕಟ್ಟಿ ನಿಂತು ನೋಡುತ್ತಾರೆ
ಇದು ಮನುಜ ವರ್ತನೆ.
...........................................................
ನಾನು ಮುಗಿಯುವುದಿಲ್ಲ
ಮುಗಿಲೂ ಕರಗುವುದಲ್ಲ
ಕಾಲ-ಹರಣವೇ ಎಲ್ಲ!
............................................................................................................................................
![](https://saaranga-aws.s3.ap-south-1.amazonaws.com/s3fs-public/format-of-haiku-poem.jpg)
Comments
ಇಷ್ಟವಾಯಿತು
ಇಷ್ಟವಾಯಿತು