ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೫) - ಸು ರಂ ಎಕ್ಕುಂಡಿ

ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೫) - ಸು ರಂ ಎಕ್ಕುಂಡಿ

ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ ಎಕ್ಕುಂಡಿ. ಇವರು ಹುಟ್ಟಿದ್ದು ಜನವರಿ, ೨೦, ೧೯೨೩ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಅವರ ಕೃತಿಗಳು ಕಾವ್ಯ- ಶ್ರೀ ಆನಂದತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು. ಕಥಾಸಂಕಲನ- ನೆರಳು. ಕಾದಂಬರಿ-ಪ್ರತಿಬಿಂಬಗಳು. ಪರಿಚಯ- ಶ್ರೀ ಪು.ತಿ.ನರಸಿಂಹಾಚಾರ್ಯರು. ಅನುವಾದ- ಎರಡು ರಶಿಯನ್ ಕಾದಂಬರಿಗಳು.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸಂದ ಪ್ರಶಸ್ತಿ ಪುರಸ್ಕಾರಗಳು- ಲೆನಿನ್ನರ ನೆನಪಿಗೆ ಎನ್ನುವ ಕೃತಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ. "ಮತ್ಸ್ಯಗಂಧಿ" ಕವನ ಸಂಕಲನಕ್ಕೆ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ. ಬೆಳ್ಳಕ್ಕಿಗಳು ಹಸ್ತಪ್ರತಿಗೆ ೧೯೮೨ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ. ಬಕುಲದ ಹೂವುಗಳು" ಎಂಬ ಕೃತಿಗೆ ೧೯೯೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಸಾಹಿತ್ಯಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ ಸು.ರಂ. ಎಕ್ಕುಡಿಯವರು ಆಗಸ್ಟ್ ೨೦, ೧೯೯೫ ರಂದು ನಿಧನರಾದರು.

‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ಆಯ್ದು ಪ್ರಕಟಿಸಲಾಗಿದೆ. 

ಅಗ್ನಿಗೀತೆ

ಕಡಲಿನಾಚೆಗೆ ಲಂಕೆ ಫಳಫಳಿಸುತಿತ್ತಸುರ

ವೈಭವದ ಕುರುಡಿನಲ್ಲಿ

ದೇವಲೋಕದ ಲೂಟಿ ಬೊಕ್ಕಸವ ತುಂಬಿತ್ತು

ದಶಶಿರನ ಹುರುಡಿನಲ್ಲಿ.

ಅಗ್ನಿ ವಿಗ್ರಹ ಕದ್ದು ತಂದಿರಿಸಿದನು ದೈತ್ಯ

ಕನಸಿನರಗಿಳಿಯ ತಂದು

ಅಸಮ ಭುಜಬಲಶಾಲಿ ಹನುಮಂತ ಹಾರಿದನು

ಅಸುರ ಯೂಥಪರ ಕೊಂದು,

ಊರಿಗೂರೇ ಉರಿದುಬಿತ್ತು ಹುಡಿಬೂದಿಯಾಗಿ

ಶ್ರೀ ಅಗ್ನಿನಾರಾಯಣನ ಪೂಜೆಗಾಗಿ.

 

ಅರಗಿನರಮನೆ ಕಟ್ಟಿ ಪಾಂಡವರ ಕಳಿಸಿದರು

ಕೊಲ್ಲಿಸುವ ಹೊಂಚಿನಲ್ಲಿ 

ಅಗ್ನಿವಿಗ್ರಹವುಟ್ಟ ಸೀರೆಯನು ಸೆಳೆದ ಕೈ

ಕೆಂಡವನೆ ಕಟ್ಟಿ ತರಲು

 

ಅಸಮ ಭುಜಬಲಶಾಲಿ ಭೀಮಸೇನನು ನಡೆದ

ಮನೆಯು ಧಗಧಗಿಸುತಿರಲು,

ಅರಗಿನರಮನೆಯುರಿದುಬಿತ್ತು ಹುಡಿಬೂದಿಯಾಗಿ

ಶ್ರೀ ಅಗ್ನಿ ನಾರಾಯಣನ ಪೂಜೆಗಾಗಿ.

 

ಕಟ್ಟಿ ಮಾಯವಾದವೆಂಬ ಕಣ್ ಕಣ್ಣು ಮನೆ

ವೇದಗಳನೆಳೆದು ತಂದು

ಇಂದ್ರಜಾಲದ ಸೆರೆಯೊಳಿರಿಸಲು ಹಲುಬಿದಳು

ವೇದಾಭಿಮಾನಿ ನೊಂದು

 

ಪಾಜಕದೊಳವತರಿಸಿ ಬಂದು ಶ್ರೀ ಪವಮಾನ

ಶ್ರೀ ಮಧ್ವಮುನಿಗಳಂದು

ಭರತವರ್ಷವನೆಲ್ಲ ಸಂಚರಿಸಿ ಹಾಡಿರಲು

ಶ್ರೀಹರಿಯೆ ಪರದೈವವೆಂದು

ಬುರುಗಿನರಮನೆಯುರಿದುಬಿತ್ತು ಹುಡಿಬೂದಿಯಾಗಿ

ಶ್ರೀ ಅಗ್ನಿನಾರಾಯಣನ ಪೂಜೆಗಾಗಿ.

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)