ಹೋಮ್ ಸ್ಟೇ ಪೇಚಿನ ಪ್ರಸಂಗ
ಸುಮಾರು ಏಳೆಂಟು ವರ್ಷದ ಹಿಂದಿನ ಘಟನೆ ಇದು. ನಾವು ಗೆಳೆಯರು ನಮ್ಮ ಕುಟುಂಬ ಸಮೇತ ಸುಮಾರು ೨೦ ಮಂದಿಯ ತಂಡ ಮಡಿಕೇರಿಯ ಇರ್ಪು (ಇರುಪ್ಪು) ಜಲಪಾತಕ್ಕೆ ಪ್ರವಾಸ ಹೊರಟಿದ್ದೆವು. ಮಡಿಕೇರಿಯಿಂದ ಸುಮಾರು ಐವತ್ತು ಕಿಲೋ ಮೀಟರ್ ಇರುವ ಈ ಜಲಪಾತದ ಸುತ್ತಮುತ್ತಲು ಹಲವಾರು ಹೋಮ್ ಸ್ಟೇಗಳು ಇದ್ದುವು. ಈ ಮೊದಲೇ ಆ ಜಲಪಾತ ನೋಡಿದ್ದ ಗೆಳೆಯನೊಬ್ಬ ಆತನು ಉಳಿದುಕೊಂಡಿದ್ದ ಹೋಮ್ ಸ್ಟೇ ಬಗ್ಗೆ ಬಹಳ ಮೆಚ್ಚುಗೆಯ ಮಾತನ್ನಾಡಿದ್ದ. ನಾವೂ ಸರಿ ಅಲ್ಲೇ ಉಳಿದುಕೊಂಡರಾಯಿತು ಎಂದು ಅದನ್ನೇ ಬುಕ್ ಮಾಡಿದ್ದೆವು.
ಮಂಗಳೂರಿನಿಂದ ದಿನವಿಡೀ ಪ್ರಯಾಣ ಮಾಡಿ ಸಂಜೆಯ ಹೊತ್ತಿಗೆ ಹೋಂ ಸ್ಟೇ ತಲುಪುವಾಗ ಧಾರಾಕಾರವಾದ ಮಳೆ ಸುರಿಯುತ್ತಿತ್ತು. ಕರೆಂಟ್ ಹೋಗಿ ಬಹಳ ಸಮಯವೇ ಆಗಿ ಹೋಗಿತ್ತು ಅನಿಸಿತು. ಹೇಗೂ ಹೋಮ್ ಸ್ಟೇ ತಲುಪಿದಾಗ ನಮಗೆ ಅಚ್ಚರಿ ಕಾದಿತ್ತು. ಅದರ ಯಜಮಾನ ತನ್ನ ಮನೆಯಲ್ಲೇ ನಮಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ಆತನಿಗೆ ನಾವು ಪ್ರತ್ಯೇಕವಾಗಿರುವ ಮನೆಯನ್ನು ನೀಡಬೇಕೆಂದು ಹೇಳಿದ್ದೆವು. ಈ ಹಿಂದೆ ಬಂದಿದ್ದ ನಮ್ಮ ಗೆಳೆಯನು ಈ ಬಗ್ಗೆ ಕೇಳಿದಾಗ “ನೀವು ಕೇಳಿದ್ದು ಹೋಮ್ ಸ್ಟೇ. ಇದೂ ಸಹ 'ಹೋಮ್' (ಮನೆ) ಅಲ್ಲವೇ? ಇಲ್ಲೇ ಉಳಿದುಕೊಳ್ಳಿ.” ಎಂದ. ಮೊದಲೇ ಪ್ರಯಾಣದಿಂದ ಬಳಲಿದ್ದ ನಾವು ಅಲ್ಲೇ ಆತನ ಮನೆಯಲ್ಲೇ ಉಳಿದುಕೊಳ್ಳುವ ಎಂದು ನಿರ್ಧಾರ ಮಾಡಿಕೊಂಡೆವು. (ಚಿತ್ರ ೧). ಆ ಮನೆಯಲ್ಲಿ ಇದ್ದ ನಾಲ್ಕು ಕೋಣೆಗಳ ಪೈಕಿ ಒಂದರಲ್ಲಿ ಆತ ಮತ್ತು ಆತನ ಪತ್ನಿ. ಉಳಿದ ಮೂರು ಕೋಣೆಗಳಲ್ಲಿ, ಹಾಲ್ ನಲ್ಲಿ ಎಲ್ಲೆಲ್ಲಿ ಜಾಗ ಸಿಕ್ಕಿತೋ ಅಲ್ಲಿ ನಾವು ಮಲಗಿಕೊಂಡೆವು.
ನಂತರ ತಿಳಿದು ಬಂದದ್ದು ಏನೆಂದರೆ ಆತ ನಮಗೆ ಕೊಡಬೇಕಾಗಿದ್ದ ಪ್ರತ್ಯೇಕ ಮನೆಯನ್ನು ಬೆಂಗಳೂರಿನಿಂದ ಅಲ್ಲಿಗೆ ಬಂದಿದ್ದ ಪೋಲೀಸ್ ಅಧಿಕಾರಿಯೊಬ್ಬರ ಕುಟುಂಬಕ್ಕೆ ಕೊಟ್ಟಿದ್ದ. ಒಂದೆಡೆ ಕರೆಂಟ್ ಇಲ್ಲ, ಜೋರಾಗಿ ಸುರಿಯುತ್ತಿರುವ ಮಳೆ ಬೇರೆ. ಕಡೆಗೆ ನಮ್ಮ ಬಳಗದಲ್ಲೇ ಇದ್ದ ಇಲೆಕ್ಟ್ರೀಷಿಯನ್ ಓರ್ವರು ಅವರ ಮನೆಯ ಜನರೇಟರ್ ಅನ್ನು ರಿಪೇರಿ ಮಾಡಿ ಕರೆಂಟ್ ಬರುವಂತೆ ಮಾಡಿದರು.
ನಂತರ ಊಟದ್ದು ಮತ್ತೊಂದು ಫಜೀತಿ. ಈ ಗಡಿಬಿಡಿಯಲ್ಲಿ ನಮಗೆ ಹೋಮ್ ಸ್ಟೇ ನೀಡಿದ್ದ ಯಜಮಾನರು ರಾತ್ರಿಯ ಊಟಕ್ಕೆ ವ್ಯವಸ್ಥೆ ಮಾಡಿಯೇ ಇರಲಿಲ್ಲ. ಆ ಮಳೆಯ ನಡುವೆ ನಾವು ಹೊರಗಡೆ ಹೋಟೇಲ್ ಹುಡುಕಾಡಿ ಹೋದರೆ, ಆ ಕಾಡಿನ ನಡುವೆ ಆ ಅಪರಾತ್ರಿ ಎಲ್ಲಿದೆ ಹೋಟೇಲ್? ಕಡೆಗೆ ಒಂದು ಪುಟ್ಟ ಹೋಟೇಲ್ ಸಿಕ್ಕಿದಾಗ ಅಲ್ಲಿ ಉಳಿದಿದ್ದ ಊಟವೂ ಕಡಿಮೆ. ಊಟ ಸಿಗದವರು ಹಣ್ಣು ತಿಂದೇ ಹೊಟ್ಟೆ ತುಂಬಿಸಿಕೊಂಡರು. ಹಾಗೂ ಹೀಗೂ ಆ ರಾತ್ರಿಯನ್ನು ಕಳೆದೆವು. ಬೆಳಗಿನ ಉಪಹಾರಕ್ಕೆ ಮಾತ್ರ ಆ ಪುಣ್ಯಾತ್ಮ ಪೂರಿ-ಭಾಜಿ ವ್ಯವಸ್ಥೆ ಮಾಡಿದ್ದ. ಹಿಂದೆ ಎಂದೂ ಪೂರಿಯನ್ನು ನೋಡಿಯೇ ಇಲ್ಲದವರಂತೆ ನಾವು ಹಸಿದ ಹುಲಿಗಳಂತೆ ತಿಂದೆವು. ಹಾಗೂ ಹೀಗೂ ಈ ಹೋಂ ಸ್ಟೇ ಕಿರಿಕಿರಿ ಮುಗಿಸಿ ಅಲ್ಲಿಂದ ಎರಡು ಕಿ ಮೀ ದೂರವಿದ್ದ ಇರ್ಪು ಜಲಪಾತಕ್ಕೆ ತೆರಳಿ ಅಲ್ಲಿನ ಜಲಧಾರೆಯನ್ನು ನೋಡಿದಾಗ ಹಿಂದಿನ ದಿನ ನಾವು ಅನುಭವಿಸಿದ ಕಷ್ಟಗಳೆಲ್ಲಾ ಆ ನೀರಿನಲ್ಲಿ ಕರಗಿಹೋದಂತೆ ಭಾಸವಾಯಿತು. (ಚಿತ್ರ ೨)
ಇಲ್ಲಿ ಇನ್ನೊಂದು ಸ್ವಾರಸ್ಯಕರವಾದ ವಿಷಯ ಇದೆ. ಈ ಇರ್ಪು ಜಲಪಾತ ಇರುವ ಸ್ಥಳದ ಹೆಸರು ‘ಕುರ್ಚಿ’. (ಚಿತ್ರ ೩) ಇದೇ ಹೆಸರಿನ ಅಂಚೆ ಕಚೇರಿಯೂ ಇದೆ ( Kurchi-571217)