೫೦% ತೆರಿಗೆ ಹಣ ರಾಜ್ಯಕ್ಕೆ : ಕರ್ನಾಟಕ ತರ್ಕಬದ್ಧ ವಾದ
ಹೊಸತಾಗಿ ರಚನೆಯಾಗಿರುವ ೧೬ನೇ ಹಣಕಾಸು ಆಯೋಗದ ಜೊತೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯಾವುದೇ ರಾಜ್ಯವು ಕೇಂದ್ರಕ್ಕೆ ಪಾವತಿಸುವ ಒಟ್ಟು ತೆರಿಗೆಯಲ್ಲಿ ಅರ್ಧದಷ್ಟು ಪಾಲು ನಿಶ್ಚಿತವಾಗಿ ಆಯಾ ರಾಜ್ಯಕ್ಕೇ ಸಿಗುವಂತಾಗಬೇಕು ಎಂಬ ವಾದ ಮಂಡಿಸಿದ್ದಾರೆ. ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳು ತಮಗೆ ಕೇಂದ್ರದಿಂದ ಮರಳಿ ಬರುವ ತೆರಿಗೆಯ ಪಾಲಿನಲ್ಲಿ ಅನ್ಯಾಯವಾಗುತ್ತಿದೆ ಎಂದು ಕೂಗೆಬ್ಬಿಸುವುದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ವಾದ ಮಹತ್ವದ್ದಾಗಿದೆ. ಏಕೆಂದರೆ, ಬಡ ಅಥವಾ ಹಿಂದುಳಿದ ರಾಜ್ಯಗಳಿಗೆ ಹೆಚ್ಚು ತೆರಿಗೆಯ ಪಾಲು ಸಂದಾಯವಾಗಬೇಕು ಎಂಬ ನೀತಿಯಿಂದಾಗಿ ಇಂದು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡಿನಂತಹ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳು ಯಕಶ್ಚಿತ್ ಎಂಬಂತಹ ಮೊತ್ತವನ್ನು ಮರಳಿ ಪಡೆಯುತ್ತಿವೆ ಮತ್ತು ಈ ರಾಜ್ಯಗಳ ಜನರ ಶ್ರಮದಿಂದ ಸಂದಾಯವಾಗುವ ತೆರಿಗೆ ಹಣವು ಲಾಗಾಯ್ತಿನಿಂದಲೂ ಹಿಂದುಳಿದ ಹಣೆಪಟ್ಟಿಯನ್ನೇ ಅಂಟಿಕೊಂಡಿರುವ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳ ಪಾಲಾಗುತ್ತಿದೆ. ಹೀಗೆ ಪಾವತಿಯಾಗುತ್ತಿರುವ ಹಣದಲ್ಲಿ ಆ ರಾಜ್ಯಗಲ ಜನಸಾಮಾನ್ಯರಿಗೆ ಅನುಕೂಲವಾಗಿ, ರಾಜ್ಯಗಳು ಅಭಿವೃದ್ಧಿಯಾಗಿದ್ದರೆ ಎಲ್ಲರೂ ಸಂತೋಷ ಪಡುತ್ತಿದ್ದರು. ಆದರೆ ದಕ್ಷಿಣ ರಾಜ್ಯಗಳ ಜನರ ಬೆವರಿನ ಹಣ ಉತ್ತರದ ಸೋಕಾಲ್ಡ್ ಹಿಂದುಳಿದ ರಾಜ್ಯಗಳ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ಪಾಲಾಗುವುದೇ ಹೆಚ್ಚು ಎಂಬುದು ಅಲ್ಲಿನ ಆಡಳಿತ ವ್ಯವಸ್ಥೆಯನ್ನು ನೋಡಿದರೆ ತಿಳಿಯುತ್ತದೆ. ಆದ್ದರಿಂದಲೇ ಕಳೆದ ೭೫ ವರ್ಷಗಳಿಂದ ಇದೇ ನೀತಿಯಿದ್ದರೂ ಹಿಂದುಳಿದ ರಾಜ್ಯಗಳು ಹಿಂದುಳಿದೇ ಇವೆ.
ಸಿದ್ಧರಾಮಯ್ಯ ಆ ನೀತಿಗೆ ಆಕ್ಷೇಪ ವ್ಯಕ್ತಪಡಿಸಿ, ಕಷ್ಟಪಟ್ಟು ದುಡಿಯುವ ರಾಜ್ಯಗಳಿಗೆ ಬಹುಮಾನ ನೀಡಬೇಕೇ ಹೊರತು ಶಿಕ್ಷೆ ನೀಡಬಾರದು ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. ಸದ್ಯ ದೇಶದಲ್ಲಿರುವ ಅತ್ಯುತ್ತಮ ಹಾಗೂ ಅನುಭವಿ ರಾಜಕೀಯ - ಅರ್ಥಶಾಸ್ತ್ರಜ್ಞರಲ್ಲಿ ಸಿದ್ಧರಾಮಯ್ಯ ಮುಂಚೂಣಿಯಲ್ಲಿದ್ದಾರೆ. ಅವರ ವಾದವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ದಕ್ಷಿಣದ ರಾಜ್ಯಗಳಿಗೆ ತೆರಿಗೆ ಅನ್ಯಾಯವೆಂಬುದು ಕೇವಲ ರಾಜಕೀಯ ಕೂಗಲ್ಲ, ವಾಸ್ತವ ಕೂಡ. ಉದಾಹರಣೆಗೆ, ಕರ್ನಾಟಕ ತಾನು ಕೇಂದ್ರಕ್ಕೆ ಪಾವತಿಸುವ ಪ್ರತಿ ೧ ರೂ. ತೆರಿಗೆಗೆ ಪ್ರತಿಯಾಗಿ ೧೫ ಪೈಸೆಯನ್ನೂ, ತಮಿಳುನಾಡು ೨೯ ಪೈಸೆಯನ್ನೂ ಪಡೆದರೆ ಉತ್ತರ ಪ್ರದೇಶ ತಾನು ಪಾವತಿಸುವ ೧ ರೂ ಗೆ ಪ್ರತಿಯಾಗಿ ೨.೭೩ ರೂ ಗಳನ್ನೂ, ಬಿಹಾರ ೭ ರೂ ಗಳನ್ನೂ ಪಡೆಯುತ್ತಿದೆ. ಇದು ಅತಾರ್ಕಿಕ ನೀತಿಯೇ ಸರಿ. ಹೀಗಾಗಿ ಕರ್ನಾಟಕದ ಕೂಗಿಗೆ ಬಲ ಸಿಗಬೇಕೆಂದರೆ ದಕ್ಷಿಣದ ರಾಜ್ಯಗಳು ಒಗ್ಗಟ್ಟಾಗಿ ಒತ್ತಡ ಹೇರಬೇಕು. ಅದು ಫಲ ನೀಡಿದರೆ ಕನ್ನಡಿಗರ ತೆರಿಗೆ ಹಣ ಕನ್ನಡ ನಾಡಿನ ಅಭಿವೃದ್ಧಿಗೆ ಹೆಚ್ಚು ಸಿಗುವಂತಾಗುತ್ತದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೩೧-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ