‘ಅಮೋಘವರ್ಷ ನೃಪತುಂಗ’ ಎಂಬ ಡಾ. ರಾಜ್ ನನಸಾಗದ ಕನಸು

‘ಅಮೋಘವರ್ಷ ನೃಪತುಂಗ’ ಎಂಬ ಡಾ. ರಾಜ್ ನನಸಾಗದ ಕನಸು

ಕನ್ನಡ ಚಿತ್ರರಂಗಕ್ಕೆ ೨೦೦ಕ್ಕೂ ಮಿಕ್ಕ ಅದ್ಭುತ ಚಿತ್ರಗಳನ್ನು ನೀಡಿದ ವರನಟ ಡಾ. ರಾಜ್ ಗೆ ಇದ್ದ ಒಂದು ಆಸೆ ಈಡೇರಲಾರದೇ ಅವರೊಂದಿಗೇ ಸಮಾಧಿಯಾಗಿ ಹೋದ ಕಥೆ ನಿಮಗೆ ಗೊತ್ತೇ? ೧೯೯ ಚಿತ್ರಗಳನ್ನು ಮುಗಿಸಿದ ಬಳಿಕ ರಾಜಕುಮಾರ್ ಅವರಿಗೆ ತಮ್ಮ ೨೦೦ನೇ ಚಿತ್ರವಾಗಿ ‘ಅಮೋಘವರ್ಷ ನೃಪತುಂಗ' ವನ್ನು ತೆರೆಗೆ ತರಬೇಕೆಂಬ ಆಸೆ ಇತ್ತು. ಅವರ ಪತ್ನಿ, ನಿರ್ಮಾಪಕಿಯಾದ ಪಾರ್ವತಮ್ಮ ರಾಜಕುಮಾರ್ ಅವರ ಆಸೆಯೂ ಆದೇ ಆಗಿತ್ತು. ಆದರೆ ವಿಧಿ ಬಯಸಿದ್ದೇ ಬೇರೆ. ನೃಪತುಂಗ ಚಿತ್ರ ಸೆಟ್ಟೇರಲೇ ಇಲ್ಲ, ಚಿತ್ರ ಕೇವಲ ಪತ್ರಿಕೆಗಳಿಗೆ ನೀಡಿದ ಜಾಹೀರಾತಿಗೆ ಮಾತ್ರ ಸೀಮಿತವಾಗಿ ಹೋಯಿತು. ೨೦೦ನೇ ಚಿತ್ರವಾಗಿ ‘ದೇವತಾ ಮನುಷ್ಯ' ತೆರೆಯ ಮೇಲೆ ಬಂದು ಬಿಟ್ಟ. ಚಿತ್ರ ಯಶಸ್ವಿಯೂ ಆಗಿ ಹೋಯಿತು.

ಡಾ. ರಾಜಕುಮಾರ್ ಅವರಿಗೆ ಆ ಸಮಯದಲ್ಲಿದ್ದ ಬೇಡಿಕೆ, ಅವರೊಂದಿಗೆ ದುಡಿಯುತ್ತಿದ್ದ 'ಟೀಂ’ ಎಲ್ಲವೂ ಸಮರ್ಥವಾಗಿಯೇ ಇತ್ತು. ಆದರೂ ಕನ್ನಡದ ವರನಟರಿಗೆ ಏಕೆ ಈ ಚಿತ್ರದಲ್ಲಿ ನಟಿಸಲಾಗಲಿಲ್ಲ. ಅದು ವಿಧಿಯ ಆಟವೇ ಇರಬಹುದೇನೋ? ತಮ್ಮ ೨೦೦ನೇ ಚಿತ್ರದ ಬಳಿಕವೂ ಐದಾರು ಚಿತ್ರಗಳಲ್ಲಿ ನಟಿಸಿದರೂ ‘ನೃಪತುಂಗ' ಚಿತ್ರದಲ್ಲಿ ನಟಿಸಲು ಆಗಲೇ ಇಲ್ಲ. ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಕಂಡ ಈ ಕನಸು ನನಸಾಗಲೇ ಇಲ್ಲ.

ಪಾರ್ವತಮ್ಮ ರಾಜಕುಮಾರ್ ನಿಜಕ್ಕೂ ಡಾ ರಾಜ್ ಅವರ ಹಿಂದೆ ಇದ್ದ ಶಕ್ತಿ. ಅವರಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುವ ಚಲನಚಿತ್ರಗಳ ಕಥಾ ವಸ್ತು ಬಲವಾಗಿರಬೇಕು ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು ಎನ್ನುವ ಸ್ಪಷ್ಟ ನಿಲುವು ಇತ್ತು. ಚಿತ್ರದ ಕಥಾ ವಸ್ತು ಉತ್ತಮವಾಗಿದ್ದರೂ ಅದಕ್ಕೆ ಬರೆದ ಚಿತ್ರ ಕಥೆ- ಸಂಭಾಷಣೆ ಬಲಹೀನವಾಗಿದ್ದರೆ ಅವರು ಯಾವುದೇ ಮುಲಾಜಿಲ್ಲದೇ ಅದನ್ನು ರದ್ದು ಮಾಡಿ ಬಿಡುತ್ತಿದ್ದರು. ಬಹುಷಃ ಇದೇ ಕಾರಣದಿಂದ ‘ನೃಪತುಂಗ' ಚಿತ್ರದ ಚಿತ್ರೀಕರಣ ಪ್ರಾರಂಭವಾಗದೇ ಹೋಯಿತು. ಐತಿಹಾಸಿಕ, ಪೌರಾಣಿಕ ಚಿತ್ರಗಳಲ್ಲಿ ರಾಜಕುಮಾರ್ ಅವರು ಮೈಮರೆತು ನಟಿಸುತ್ತಿದ್ದರು. ೮೦-೯೦ರ ದಶಕಗಳಲ್ಲಿ ಇಂತಹ ಚಿತ್ರಗಳಿಗೆ ಬಹುಬೇಡಿಕೆಯೂ ಇತ್ತು. ಈ ಕಾರಣದಿಂದಲೇ ರಾಜಕುಮಾರ್ ಅವರ ೧೯೯ ನೇ ಚಿತ್ರವಾದ ‘ಶ್ರುತಿ ಸೇರಿದಾಗ' ೧೯೮೭ರಲ್ಲಿ ಬಿಡುಗಡೆಯಾದ ಬಳಿಕ ಮುಂದಿನ ವರ್ಷ ಅಂದರೆ ೧೯೮೮ರಲ್ಲಿ ‘ಅಮೋಘವರ್ಷ ನೃಪತುಂಗ’ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆ ಮಾಡಬೇಕು ಎಂಬುದು ಪಾರ್ವತಮ್ಮ ಅವರ ಕನಸಾಗಿತ್ತು. ಈ ಚಿತ್ರಕ್ಕೆ ಬೇಕಾದ ಸಿದ್ಧತೆಗಳೂ ನಡೆದಿದ್ದವು. ಪಾರ್ವತಮ್ಮ, ಡಾ ರಾಜ್ ಅವರ ತಮ್ಮ ವರದಪ್ಪ, ಚಿ ಉದಯಶಂಕರ್ ಮೊದಲಾದವರು ಕುಳಿತು ಚಿತ್ರದ ಕಥೆಯನ್ನೂ ಅಂತಿಮಗೊಳಿಸಿದರು. ‘ದಾಕ್ಷಾಯಿಣಿ ಕಂಬೈನ್ಸ್' ಲಾಂಛನದಲ್ಲಿ ರಾಜಕುಮಾರ್ ಅವರ ೨೦೦ನೇ ಚಿತ್ರ ಎಂಬ ಜಾಹೀರಾತನ್ನು ಪತ್ರಿಕೆಗಳಿಗೆ ನೀಡಿ ಆಗಿತ್ತು. ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶಕರಾಗಿರುವ ಈ ಚಿತ್ರಕ್ಕೆ ಅವರೇ ಕಥೆ, ಸಂಭಾಷಣೆ, ಚಿತ್ರಕಥೆ ಬರೆಯಲಿದ್ದಾರೆ ಮತ್ತು ಎಂ ರಂಗಾರಾವ್ ಸಂಗೀತ ನೀಡಲಿದ್ದಾರೆ ಎಂಬ ಅಂಶವನ್ನೂ ಜಾಹೀರಾತಿನಲ್ಲಿ ಸೇರಿಸಲಾಗಿತ್ತು. ವಿ ಕೆ ಕಣ್ಣನ್ ಅವರು ಛಾಯಾಗ್ರಾಹಕರಾಗಿದ್ದರು. 

ಡಾ ರಾಜ್ ಅವರ ೨೦೦ ನೇ ಚಿತ್ರವೆಂಬ ಅಮಿತೋತ್ಸಾಹದಲ್ಲಿ ಜಾಹೀರಾತು ಏನೋ ನೀಡಿ ಆಗಿತ್ತು. ನಂತರ ನೃಪತುಂಗ ಚಿತ್ರದ ಚಿತ್ರಕಥೆಯ ಮೇಲೆ ಪಾರ್ವತಮ್ಮ ಅವರು ಮತ್ತೊಮ್ಮೆ ಕಣ್ಣಾಡಿಸಿದಾಗ ಅವರಿಗೆ ಏಕೋ ಸಮಾಧಾನ ತರಲಿಲ್ಲ. ಮತ್ತೆ ಒಂದೆರಡು ಬಾರಿ ಓದಿದ ಬಳಿಕವೂ ಸಮಾಧಾನವಾಗದ ಕಾರಣ ಚಿ. ಉದಯಶಂಕರ್ ಜೊತೆ ವಿಮರ್ಶೆ ಮಾಡಿದರು. ಕೊನೆಗೆ ವರದಪ್ಪನವರ ಜೊತೆ ಚರ್ಚಿಸಿ ಈ ಚಿತ್ರದ ನಿರ್ಮಾಣವನ್ನು ಕೈಬಿಡುವುದೆಂದು ನಿರ್ಧಾರ ಮಾಡಿದರು. 

ಈ ನಿರ್ಧಾರಕ್ಕೆ ಸ್ಪಷ್ಟ ಕಾರಣ ತಿಳಿದು ಬರುವುದಿಲ್ಲವಾದರೂ ಪಾರ್ವತಮ್ಮನವರಿಗೆ ಈ ಚಿತ್ರಕ್ಕೆ ಬರೆದ ಸಂಭಾಷಣೆ ಹಾಗೂ ಚಿತ್ರ ಕಥೆಯಲ್ಲಿ ‘ಧಂ’ ಇಲ್ಲ ಎಂದು ಅನಿಸಿತ್ತಂತೆ. ಅವರಿಗೆ ಈ ಚಿತ್ರ ಬಿಡುಗಡೆಯಾದರೂ ಜನರಿಗೆ ಮೆಚ್ಚುಗೆಯಾಗಬಹುದು ಎಂಬ ಬಗ್ಗೆ ಅನುಮಾನ ಕಾಡಲಾರಂಬಿಸಿತಂತೆ. ಸಂಪೂರ್ಣವಾಗಿ ಮನಸ್ಸಿಗೆ ಸಮ್ಮತಿ ಆಗದ ಹೊರತು ಅವರು ಚಿತ್ರೀಕರಣಕ್ಕೆ ಇಳಿಯುತ್ತಲೇ ಇರಲಿಲ್ಲ. ಇದೇ ಕಾರಣದಿಂದ ಅವರು ‘ನೃಪತುಂಗ' ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದರು. ಮುಂದಿನ ದಿನಗಳಲ್ಲಿ ಮತ್ತೆ ಈ ಬಗ್ಗೆ ಯೋಚಿಸಿ ಹೊಸದಾಗಿ ನಿರ್ಮಾಣ ಕಾರ್ಯವನ್ನು ಮುಂದುವರೆಸುವ ಎನ್ನುವುದು ಪಾರ್ವತಮ್ಮ ಅವರ ಯೋಜನೆಯಾಗಿತ್ತೇನೋ? ಆದರೆ ಆ ದಿನಗಳು ಬರಲೇ ಇಲ್ಲ. 

ನೃಪತುಂಬ ಸೆಟ್ಟೇರದ ಕಾರಣ ‘ದೇವತಾ ಮನುಷ್ಯ' ಡಾ ರಾಜ್ ಅವರ ೨೦೦ನೇ ಚಿತ್ರವಾಯಿತು. ಚಿ. ಉದಯಶಂಕರ್ ಅವರು ಹೇಳಿದ ಒನ್ ಲೈನ್ ಕಥೆ ಪಾರ್ವತಮ್ಮ ಅವರಿಗೆ ಮೆಚ್ಚುಗೆಯಾಯಿತು. ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಒಳ್ಳೆಯ ನಡತೆ, ಗುಣಗಳಿಂದಾಗಿ ‘ದೇವತಾ ಮನುಷ್ಯ' ನಾಗಿ ಬದಲಾಗುವುದು ಈ ಚಿತ್ರದ ಕಥೆ. ಪಾರ್ವತಮ್ಮನವರ ಒತ್ತಾಸೆಯಿಂದ ಈ ಚಿತ್ರಕ್ಕೆ ಉದಯಶಂಕರ್ ಅವರೇ ಚಿತ್ರ ಕಥೆ -ಸಂಭಾಷಣೆ ಬರೆದರು. ಇದು ಪಾರ್ವತಮ್ಮನವರಿಗೆ ಮೆಚ್ಚುಗೆಯಾಯಿತು. ಚಿತ್ರ ಸೆಟ್ ಏರಿತು. ಸಿಂಗೀತಂ ಶ್ರೀನಿವಾಸ್ ಅವರು ನೃಪತುಂಗ ಚಿತ್ರಕ್ಕೆ ಬರೆದ ಸಂಭಾಷಣೆ ಇಷ್ಟವಾಗದೇ ಹೋದರೂ, ದೇವತಾ ಮನುಷ್ಯ ಚಿತ್ರದ ನಿರ್ದೇಶನಕ್ಕಾಗಿ ಪಾರ್ವತಮ್ಮನವರು ಅವರನ್ನೇ ಆಯ್ಕೆ ಮಾಡಿದರು. ಛಾಯಾಗ್ರಹಣ ಮಾಡಿದ್ದು ವಿ ಕೆ ಕಣ್ಣನ್. ‘ದೇವತಾ ಮನುಷ್ಯ’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕರು ನೃಪತುಂಗ ಚಿತ್ರಕ್ಕೆ ಆಯ್ಕೆಯಾದವರೇ. ಸಂಗೀತ ನಿರ್ದೇಶನಕ್ಕೆ ಮಾತ್ರ ಎಂ ರಂಗಾರಾವ್ ಬದಲು ಉಪೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಿದರು. 

ರಾಜಕುಮಾರ್ ಅವರು ಯುವಕ ಹಾಗೂ ವೃದ್ಧ ಎರಡೂ ಪಾತ್ರಗಳಲ್ಲಿ ಜೀವ ತುಂಬಿ ನಟಿಸಿದರು. ಬಹಳಷ್ಟು ನಾಜೂಕಿನಿಂದ ಈ ಚಿತ್ರಕಥೆಯನ್ನು ಹೆಣೆಯಲಾಗಿತ್ತು. ಡಾ ರಾಜ್ ಅವರ ಮಗಳಾಗಿ ಸುಧಾರಾಣಿ ನಟಿಸಿದ್ದರು. ಅವರ ಜೊತೆ ಚಿತ್ರಿಕರಣಗೊಂಡ ಹಾಡು ‘ನಿನ್ನಂಥಾ ಅಪ್ಪ ಇಲ್ಲಾ...' ಈಗಲೂ ಜನಪ್ರಿಯ. ಇದರ ಜೊತೆಗೆ ‘ಹಾಲಲ್ಲಾದರೂ ಹಾಕು... ಮತ್ತು ಹೃದಯದಲಿ ಇದೇನಿದು...?’ ಹಾಡುಗಳು ಜನರ ಮನಗೆದ್ದವು. 

ಡಾ ರಾಜ್ ಅವರ ೨೦೦ ನೇ ಚಿತ್ರವಾದ ಕಾರಣ ಇದರ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ಮಾಡಬೇಕೆಂದು ಅಭಿಮಾನಿಗಳ ಆಸೆಯಾಗಿತ್ತು. ಚಿತ್ರ ಮಂದಿರಗಳ ಎದುರು ನಿಂತ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡಿದರು. ೮೦-೯೦ರ ದಶಕದಲ್ಲಿ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವುದು ‘ಟ್ರೆಂಡ್’ ಆಗಿರಲಿಲ್ಲ. ಈಗಂತೂ ಇದು ಮಾಮೂಲೀ ಸಂಗತಿಯಾಗಿ ಹೋಗಿದೆ. ‘ಅಭಿನಯ' ಚಿತ್ರ ಮಂದಿರದ ಎದುರು ಐದು ಸಾವಿರ ರೂಪಾಯಿ ವೆಚ್ಚ ಮಾಡಿ ಹೂವಿನ ಅಲಂಕಾರ ಮಾಡಲಾಗಿತ್ತು. ಆ ಕಾಲಕ್ಕೆ ಐದು ಸಾವಿರ ರೂಪಾಯಿ ಬಹುದೊಡ್ಡ ಮೊತ್ತವಾಗಿತ್ತು. ಬೆಂಗಳೂರಿನ ಗಾಯತ್ರಿನಗರದಲ್ಲಿ ಅನ್ನದಾನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಚಿತ್ರ ಯಶಸ್ಸು ಕಂಡು, ರಾಜಕುಮಾರ್ ಅವರಿಗೆ ೧೯೮೮-೮೯ರ ಸಾಲಿನ ಉತ್ತಮ ನಟ ರಾಜ್ಯ ಪ್ರಶಸ್ತಿಯೂ ಲಭಿಸಿತು.

ಈ ಘಟನಾವಳಿಗಳನ್ನು ಗಮನಿಸುವಾಗ ವಿಧಿ ಮನುಷ್ಯನ ಬಾಳಿನಲ್ಲಿ ಏನೆಲ್ಲಾ ಆಟಗಳನ್ನು ಆಡುತ್ತದೆ ಎಂದು ಅರಿವಾಗುತ್ತದೆ. ಡಾ ರಾಜ್ ಮತ್ತು ಪಾರ್ವತಮ್ಮ ಅವರ ಸಂಸ್ಥೆಗೆ ಹಣ, ಜನ ಯಾವುದರ ಕೊರತೆಯೂ ಇರಲಿಲ್ಲ. ಆದರೂ ಅವರ ಕನಸಾದ ‘ಅಮೋಘವರ್ಷ ನೃಪತುಂಗ' ನಿರ್ಮಾಣ ಮಾಡಲು ಸಾಧ್ಯವೇ ಆಗಲಿಲ್ಲ. ಅದೇ ರೀತಿ ಅವರಿಗೆ ‘ಭಕ್ತ ಅಂಬರೀಶ' ಚಿತ್ರದಲ್ಲೂ ನಟಿಸಬೇಕೆಂಬ ಆಸೆ ಇತ್ತು. ಅದೂ ಈಡೇರಲಿಲ್ಲ. ನಂತರದ ದಿನಗಳಲ್ಲಿ ಡಾ ರಾಜ್ ಅವರ ಆರೋಗ್ಯ ಸ್ಥಿರವಾಗಿದ್ದರೂ ನಿರಂತರವಾಗಿ ಕಾಡುತ್ತಿದ್ದ ಕಾಲು ನೋವು ಅವರಿಗೆ ಚಿತ್ರೀಕರಣದಲ್ಲಿ ಭಾಗವಹಿಸದಂತೆ ಮಾಡಿತು. ಈ ಕಾರಣದಿಂದಲೇ ೨೦೦೦ ಇಸವಿಯಲ್ಲಿ ತೆರೆಕಂಡ ‘ಶಬ್ಧವೇಧಿ' ಚಿತ್ರವೇ ಅವರ ಅಂತಿಮ ಚಿತ್ರವಾಗಿ ಹೋಯಿತು. ಅದಕ್ಕೇ ಹೇಳುವುದು ‘ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ'...

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ