‘ಇಂದಿರಾ ಏಕಾದಶಿಯ’ ಮಹತ್ವ

‘ಇಂದಿರಾ ಏಕಾದಶಿಯ’ ಮಹತ್ವ

‘ಇಂದಿರಾ ಏಕಾದಶಿ’ ‌ವ್ರತವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ‌ಏಕಾದಶಿ‌ ತಿಥಿಯಂದು ಅಂದರೆ ಈ ವರ್ಷ ಸೆಪ್ಟಂಬರ್ ‌೨೮-೦೯-೨೪ ಶನಿವಾರದಂದು ಆಚರಿಸಲಾಗಿದೆ. ಹಿಂದೂ‌‌ ಧರ್ಮದಲ್ಲಿ ‘ಇಂದಿರಾ ಏಕಾದಶಿ’ಗೆ ‌ಅಪಾರವಾದ‌‌ ಧಾರ್ಮಿಕ ಮಹತ್ವವಿದೆ. ಈ‌ ಏಕಾದಶಿಯು‌ ಅತ್ಯಂತ ಪೂಜ್ಯ ಏಕಾದಶಿಯಾಗಿದೆ ಎಂದು ನಂಬಲಾಗಿದೆ. ಪಿತೃಪಕ್ಷದಲ್ಲಿ ಹದಿನಾರು ದಿನಗಳ ಕಾಲ ಪಿತೃಲೋಕದಿಂದ‌‌‌‌ ಭೂಮಿಗೆ ನಮ್ಮನಗಲಿದ ಪಿತೃಗಳು(ಹಿರಿಯರು)ಬರುತ್ತಾರೆ ಎನ್ನುವರು. ಜನರು ಏಕಾದಶಿಯನ್ನು ಪೂರ್ಣ ಹೃದಯದಿಂದ, ಶ್ರದ್ಧಾಭಕ್ತಿಯಿಂದ ಅಚರಿಸಿದಾಗ‌, ತಮ್ಮ ಹಿಂದಿನ ಪಾಪಗಳನ್ನು ಕಳಕೊಳ್ಳುವರು ಎಂದು ನಂಬಲಾಗಿದೆ. ಈ‌ ದಿನದ ಉಪವಾಸವು‌ ಭಕ್ತರನ್ನು ಜನನ ಮತ್ತು ಮರಣ‌ ಚಕ್ರದಿಂದ ಮುಕ್ತಗೊಳಿಸುತ್ತದೆ ಮತ್ತು ಜನರು ಮೋಕ್ಷವನ್ನು ಪಡೆಯುತ್ತಾರೆ. ಭಗವಾನ್ ವಿಷ್ಣುವು ಅವರಿಗೆ ವೈಕುಂಠ ಧಾಮವಾದ‌‌ ತನ್ನ ನಿವಾಸದಲ್ಲಿ ಸ್ಥಾನವನ್ನು ನೀಡುತ್ತಾನೆ. ‌ಈ‌ ಪವಿತ್ರ ದಿನದಂದು ಉಪವಾಸವನ್ನು ಅಚರಿಸಿ ಮತ್ತು ಅವರ‌ ಪೂರ್ವಜರಿಗೆ ಉಪವಾಸವನ್ನು ಅರ್ಪಿಸಿದವನು, ವಿಷ್ಣುವು ಅವರ ಪೂರ್ವಜರಿಗೆ ಎಲ್ಲಾ ಪಾಪಗಳನ್ನು ಕಳೆಯುವನಂತೆ. ಆಶೀರ್ವಾದವನ್ನು ನೀಡಿ ಕೃಪೆದೋರುವನಂತೆ. ಮೋಕ್ಷವನ್ನು ನೀಡುತ್ತಾನೆ ಎಂದು ನಂಬಲಾಗಿದೆ.

ದಂತಕಥೆಯ ಪ್ರಕಾರ, ಮಾಹಿಷ್ಮತಿ ನಗರದ ರಾಜ ಇಂದ್ರಸೇನ‌‌ ಸತ್ಯಯುಗದಲ್ಲಿ ಭಗವಾನ್ ವಿಷ್ಣುವಿನ ಪರಮ ಭಕ್ತನಾಗಿದ್ದನು, ಅವನ ಮಾಹಿಷ್ಮತಿ‌ ರಾಜ್ಯದಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕುತ್ತಿದ್ದರು‌. ಅಲ್ಲಿನ ಜನರಿಗೆ ಯಾವುದೇ ರೀತಿಯ ತೊಂದರೆಯಿರಲಿಲ್ಲ. ಹೀಗಿರುವಾಗ ಒಂದು ದಿನ ರಾಜನು ಆಸ್ಥಾನದಲ್ಲಿ ಕುಳಿತು ತನ್ನ ಮಂತ್ರಿಗಳೊಂದಿಗೆ‌ ಚರ್ಚಿಸುತ್ತಿದ್ದಾಗ‌ ದೇವರ್ಷಿ ನಾರದ ಮುನಿಯ ಆಗಮನವಾಯಿತು.  

ದೇವ ಋಷಿ ನಾರದರು ರಾಜನಿಗೆ' ನಿಮ್ಮ ರಾಜ್ಯದಲ್ಲಿ ಎಲ್ಲಾ ಜನರು ಶಾಂತಿಯುತ ಜೀವನವನ್ನು ನಡೆಸುತ್ತಿದ್ದಾರೆ. ‌ನಿನ್ನ ತಂದೆ ತನ್ನ ಕೆಟ್ಟ ಕರ್ಮ ಫಲಗಳಿಂದ ಯಮಲೋಕದಲ್ಲಿ ವಾಸಿಸುತ್ತಿದ್ದಾನೆ. ಅವನಿಗೆ ಮುಕ್ತಿ ಕೊಡುವ ಹಾಗೆ ಮಾಡುವುದು ನಿನ್ನ ಕರ್ತವ್ಯ'ಎಂದನು. ಇದನ್ನು ಕೇಳಿ ಆತಂಕಗೊಂಡ ರಾಜ ಇಂದ್ರಸೇನನು ದೇವರ್ಷಿಯಾದ ನಾರದರಲ್ಲಿ ತನ್ನ ತಂದೆಯ ಯೋಗಕ್ಷೇಮವನ್ನು ಕೇಳಿದನು. ಋಷಿಯು ತನ್ನ ತಂದೆಯ ಪಾಪಗಳನ್ನು ತೊಡೆದುಹಾಕಲು ಭಾದ್ರಪದ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಉಪವಾಸವನ್ನು ಆಚರಿಸಬೇಕು, ವಿಷ್ಣುವನ್ನು ಆರಾಧಿಸಬೇಕು ಎಂದರು. 

ಇಂದ್ರಸೇನನು ನಾರದ ಮಹರ್ಷಿಯನ್ನು ಏಕಾದಶಿ ವ್ರತವನ್ನು ಹೇಗೆ ಆಚರಿಸಬೇಕೆಂದು ಕೇಳಿದನು, ‘ಇಂದಿರಾ ಏಕಾದಶಿ’ಯ ‌ಒಂದು ದಿನ ಮೊದಲು, ಹತ್ತನೆಯ ದಿನ ನದಿಯಲ್ಲಿ ಸ್ನಾನ ಮಾಡಿ ಮತ್ತು ನಿಮ್ಮ ಪೂರ್ವಜರಿಗೆ ಶ್ರಾದ್ದವನ್ನು ಮಾಡಿ ಎಂದು ನಾರದ ಮಹರ್ಷಿಗಳು ಉತ್ತರಿಸಿದರು. ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸಿದ ನಂತರ ಸಂಜೆಯ ಸಮಯದಲ್ಲಿ ಹಣ್ಣುಗಳನ್ನು ಮಾತ್ರ ಸೇವಿಸಬೇಕು, ಈ ವ್ರತವನ್ನು ಆಚರಿಸುವುದರಿಂದ ನಿಮ್ಮ ತಂದೆಗೆ ಪೂರ್ವ ಪುಣ್ಯಫಲ ದೊರೆಯುತ್ತದೆ ಎಂದರು. ಪುರಾಣಗಳಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ

ರಾಜ ಇಂದ್ರಸೇನನು ‌ತನ್ನ‌ ಸಹೋದರರೊಂದಿಗೆ ‘ಇಂದಿರಾ ಏಕಾದಶಿ’ಯ ಧಾರ್ಮಿಕ ಉಪವಾಸವನ್ನು ಆಚರಿಸಿದರು. ಪರಿಣಾಮವಾಗಿ, ಅವರ ತಂದೆ ಮೋಕ್ಷವನ್ನು ಪಡೆದನಂತೆ ಮತ್ತು ರಾಜ ಇಂದ್ರಸೇನನ ಮರಣದ ನಂತರ, ಅವರ ಆತ್ಮವು ಸ್ವರ್ಗಕ್ಕೆ ತೆರಳಿತು ಎಂದು ಉಲ್ಲೇಖವಿದೆ.

ಶುದ್ಧ ಭಾವ,ಶ್ರದ್ಧೆಯಿಂದ,ಸ್ನಾನಾದಿಗಳ ಅನಂತರ, ಉಪವಾಸ ವ್ರತ ಕೈಗೊಂಡು, ಪೂಜೆಯನ್ನು ಮಾಡಬೇಕು. ವಿವಿಧ ಪುಷ್ಪಗಳು, ಹಣ್ಣುಗಳು, ತುಳಸಿ ಎಲೆ, ಸಿಹಿ ಖಾದ್ಯಗಳು ಅರ್ಪಣೆ ಭಗವಂತನಿಗೆ. ಪ್ರಾಣಿ ಪಕ್ಷಿಗಳಿಗೂ ನೀಡಿದರೆ ಒಳ್ಳೆಯದು.

ಓಂ ನಮೋ ಭಗವತೇ ವಾಸುದೇವಾಯ ನಮಃ

ಓಂ‌ ನಾರಾಯಣಾಯ ವಿದ್ಮಹೇ! ವಾಸುದೇವಾಯ ಧೀಮಹೀ! ತನ್ನೋ ವಿಷ್ಣು ಪ್ರಚೋದಯಾತ್

ಸಂಗ್ರಹ: ರತ್ನಾ ಕೆ ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ