‘ಉಣ್ಣುವ ಮನೆ’ಯ ‘ಗಳ ಹಿರಿದ’ ಕನ್ನಡದ ದಲಾಲರಿಗೆ ಸಾಹಿತ್ಯ ಸಮ್ಮೇಳನ ವೇದಿಕೆ!
ವೀರನಾರಾಯಣನ ಬೀಡು, ಮುದ್ರಣ ನಗರಿ ಗದುಗಿನ ವಿದ್ಯಾದಾನ ಸಮಿತಿ ಪ್ರೌಢ ಶಾಲೆಯ ಆವರಣದಲ್ಲಿ ಅಖಿಲ ಭಾರತ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳನ ೧೯, ೨೦ ಹಾಗೂ ೨೧ ರಂದು ಮೂರು ದಿನಗಳ ವರೆಗೆ ಜರುಗಿತು. ನೊಂದವರ, ಹಿಂದುಳಿದವರ, ತುಳಿತಕ್ಕೊಳಗಾದವರ, ನಿತ್ಯ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳ ಬದುಕು-ಬವಣೆಯನ್ನು ನಿರಂತರವಾಗಿ ತಮ್ಮ ಲೇಖನಿಯ ಮೂಲಕ ಬೆಳಕಿಗೆ ಒಡ್ಡುತ್ತ ಬಂದ, ಸ್ವತ: ಬಡತನದ ಅನುಭವ ಉಂಡು ಖಣಿಯಾದ ಡಾ. ಗೀತಾ ನಾಗಭೂಷಣ್ ಗದುಗಿನಲ್ಲಿ ಕನ್ನಡದ ತೇರನೆಳೆದುದು ನನಗೆ ಅಭಿಮಾದ ಸಂಗತಿ. ಯೋಗ್ಯತೆಗೆ ಸಂದ ಪುರಸ್ಕಾರ.
ಅನಕ್ಷರಸ್ಥ, ಬಡವ, ಆದರೆ ಮಗಳು ಕಲಿತು ಮುಂದೆ ಬರಬೇಕು ಎಂಬ ಆಸೆಯಿಂದ , ಇದ್ದುಳ್ಳವರ ಮನೆಗಳಿಂದ ಪುಸ್ತಕ ಬೇಡಿ ತಂದು ಓದಲು ನೀಡಿದ ಹೆಮ್ಮೆಯ ಅಪ್ಪ; ಶಾಲೆಗೂ ಕಾಲಿಡದ ಕಷ್ಟಪಟ್ಟು ದುಡಿದು ಮನೆಯನ್ನು ಒಪ್ಪವಾಗಿಸಿದ ಸಹೃದಯೀ ಅವ್ವ; ಬುಡ್ಡಿ ದೀಪದ ಚಿಮಣಿಯ ಮಿಣುಕು ದೀಪದಲ್ಲಿ ಓದುವುದನ್ನು ರೂಢಿಸಿಕೊಂಡ; ಅದು ಕಷ್ಟವಾದಾಗ, ಎದುರು ಮನೆಯ ಬ್ರಾಹ್ಮಣರ ಮನೆಯ ವಿದ್ಯುತ್ ದೀಪದಲ್ಲಿ ಓದಿಕೊಳ್ಳಲು ಪರವಾನಿಗೆ ಪಡೆದು, ಬೇಡಿಕೊಂಡು ಓದಿದ; ಆದರೆ, ಆ ಮನೆಯ ಮಡಿ-ಮೈಲಿಗೆಯ ಯಜಮಾನಿ ಎಬ್ಬಿಸಿ ಕಳಿಸಿ ಮನೆಯ ಮುಂದಿನ ಜಗುಲಿಯ ಮೇಲೆ ಕುಳ್ಳಿರಿಸಿದಾಗ ತುಟಿ ಕಚ್ಚಿ, ಒತ್ತರಿಸಿ ಬಂದ ಕಣ್ಣೀರು ತುಂಬಿಕೊಂಡು ಓದಿದ, ಅದೇ ಓಣಿಯ ಲಿಂಗಾಯತ ವೃದ್ಧ ಮಲ್ಲಯ್ಯ ಸ್ವತ: ೩ ವರ್ಷ ಶಾಲೆಯ ಫೀ ಕಟ್ಟಿ, ಪುಸ್ತಕ ತಂದು ಕೊಟ್ಟು ‘ಓದವ್ವ ಮಗಳೇ’ ಎಂದು ಹರಸಿದಾಗ, ಛಲವೆಂಬಂತೆ ಸ್ವೀಕರಿಸಿದ ಓದಿದ ಗೀತಕ್ಕ, ಇಂದು ಕನ್ನಡದ ತೇರನೆಳೆದಿದ್ದು, ಅರೆ ಶತಮಾನದಕಾಲ ಹೈದ್ರಾಬಾದ್ ಕರ್ನಾಟಕ ಭಾಗದ ಸಾಕ್ಷಿಪ್ರಜ್ಞೆಯಾಗಿದ್ದು ನನಗೆ ಅಭಿಮಾನದ ಸಂಗತಿ.
ಮಂಡಿ ನೋವಿನಿಂದಾಗಿ ತೆರೆದ ಜೀಪಿನಲ್ಲಿ ಸಾಹಿತ್ಯ ಸಮ್ಮೇಳನದ ಪ್ರಧಾನ ಸಭಾ ಮಂಟಪಕ್ಕೆ ಬಂದ ಡಾ. ಗೀತಾ ನಾಗಭೂಷಣ್ ಅವರನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನ, ಬಿಸಿಲು-ಧಗೆ ಯಾವುದನ್ನೂ ಲೆಕ್ಕಿಸದೇ ಕೈಬೀಸಿ ನಮಸ್ಕರಿಸಿದಾಗ ಅವರಿಗಾದ ಆನಂದವೆಷ್ಟೋ? ಬಹುಶ: ಅನಿವಾರ್ಯ ಕಾರಣಗಳಿಂದ ಸಮ್ಮೇಳನದಲ್ಲಿ ಪಾಲ್ಗೊಳ್ಳದ ಮಗ-ಮಗಳ ಕೊರತೆಯನ್ನು ಆ ಲಕ್ಷಾಂತರ ಜನ ಕನ್ನಡಿಗರು ‘ನಾನು ಅಮ್ಮನ ಕಣ; ಮಣಭಾರ ಋಣ’ ಎಂದು ಬರೆದ ಮಾತೃಹೃದಯಿಗೆ ತುಂಬಿ ಕೊಟ್ಟರು ಎಂದರೂ ಅತಿಶಯೋಕ್ತಿಯೇನಲ್ಲ.
ಆದರೆ ಕನ್ನಡದ ಹೆಸರಿನಲ್ಲಿ ಕನ್ನಡ ಭಾಷೆಯಾಗಲಿ, ಕನ್ನಡಿಗರಾಗಲಿ, ಕನ್ನಡದ ಸಾಹಿತ್ಯವಾಗಲಿ, ನಾಡು-ನುಡಿಯಾಗಲಿ ಅಲ್ಲಿ ಮೆರೆಯಲಿಲ್ಲ! ಸಮ್ಮೇಳನದ ಚುಕ್ಕಾಣಿ ಹಿಡಿದವರ, ರಾಜಕೀಯ ಇಚ್ಛಾಶಕ್ತಿಯ ಮುಂದಾಳುಗಳ, ಸರಕಾರಿ ಕೃಪಾ ಪೋಷಿತ ನಾಟ್ಯ ಸಂಘದ ಅಧಿಕಾರಿಗಳ ದರ್ಪ ಮೆರೆಯಿತು. ಅರ್ಥಾತ್ ಡಾ. ಗೀತಾ ನಾಗಭೂಷಣ್ ಅವರು ಮತ್ತೆ ೫ ದಶಕಗಳ ಹಿಂದಿನ ಶೋಷಿತರ ಪರ ಹೋರಾಟಕ್ಕೆ ಮತ್ತೆ ಲೇಖನಿ ಹಿಡಿದು ಅಣಿಯಾಗಬೇಕು ಎಂಬ ಸಂದೇಶ ಸಮ್ಮೇಳನ ಪರೋಕ್ಷವಾಗಿ ಸಾರಿದಂತಾಯಿತು!
ಅಖಿಲ ಭಾರತ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ತನ್ನ ಕಾರ್ಯಕ್ರಮ ನೀಡಬೇಕು ಎಂದು ಶತಾಯುಗತಾಯ ಪ್ರಯತ್ನ ನಡೆಸಿದ, ಅದೇ ಜಿಲ್ಲೆಯ ಅಂತಾರಾಷ್ಟ್ರೀಯ ಪ್ರತಿಭೆಯೊಂದರ ಸಾತ್ವಿಕ ಹೋರಾಟದ ಕಥೆ ಇದು. ಶಿವಾನಂದ ಕೇಲೂರ ಎಂಬ ಪ್ರತಿಭೆಯ ಹಾಡು-ಪಾಡು ಈ ಲೇಖನ. ರಷ್ಯಾ, ಫ್ರಾನ್ಸ್ ಮತ್ತು ಇಟಲಿ, ಶ್ರೀಲಂಕಾ ಸೇರಿದಂತೆ ನಮ್ಮ ದೇಶದ ಮೂಲೆ-ಮೂಲೆಗಳಿಗೆ ಸಂಚರಿಸಿ ಯೋಗ ಪ್ರದರ್ಶಿಸಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಬಂಗಾರದ ಪದಕಗಳನ್ನು ಗಳಿಸಿದ ಶಿವಾನಂದ, ಕನ್ನಡದ-ಕರ್ನಾಟಕದ ಕುಲಪುರೋಹಿತ ಆಲೂರು ವೆಂಕಟರಾಯರು ಜನ್ಮ ವೆತ್ತಿದ ಪುಣ್ಯ ಭೂಮಿ ರೋಣ ತಾಲ್ಲೂಕು ಹೊಳೆ ಆಲೂರಿನವರು.
ಈ ದೇಶದಲ್ಲಿ ಪ್ರತಿಭೆಯೊಂದೆ ಇದ್ದರೆ ಸಾಕೇ? ಸಾಲದು ಎಂಬುದಕ್ಕೆ ಶಿವಾನಂದ ಪಟ್ಟ ಪಾಡು ಉತ್ತಮ ಉದಾಹರಣೆ. ಅಧಿಕಾರಸ್ಥ ಮಹನಿಯರ ಪರಿಚಯ, ಶಿಫಾರಸು ಪತ್ರ ನೀಡಬಲ್ಲ ಜನ ಪ್ರತಿನಿಧಿಗಳ ಆಶೀರ್ವಾದ, ಕಾರ್ಯಕ್ರಮದ ಚುಕ್ಕಾಣಿ ಹಿಡಿದವರ ಶ್ರೀರಕ್ಷೆ, ಕನ್ನಡದ ಗುತ್ತಿಗೆ ಪಡೆದಿರುವ ಮುಂದಾಳುಗಳಿಗೆ ಯೋಗ್ಯ ಕಪ್ಪ-ಕಾಣಿಕೆ, ಸಂಘಟಕರ ಅಥವಾ ಸಂಯೋಜಕರಿಗೆ -ನಮಗೆ ನೀಡಲಾದ ‘ಗೌರವ ಧನ’ದ ಸಿಂಹಪಾಲು ನಿಮ್ಮ ಪಾದಕ್ಕೆ ಎಂಬ ಒಳ ಒಪ್ಪಂದ ಮಾಡಿಕೊಂಡರೆ ನಿಮಗೆ ಸಾಹಿತ್ಯ ಸಮ್ಮೇಳನದಲ್ಲಿ ೮ ರಿಂದ ೧೦ ನಿಮಿಷಗಳ ಕಾಲ ಪ್ರದರ್ಶನ ನೀಡುವ ‘ಸದಾವಕಾಶ’ ದೊರಕುತ್ತದೆ. ಈ ಕನ್ನಡದ ಕಟ್ಟಾಳುಗಳು ಹೀಗೆ ‘ತಮ್ಮ’ ತನು-ಮನ-ಧನದಿಂದ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ!?
ಹೇಸಿಗೆ ಹುಟ್ಟಿಸುವ ಈ ಪರಿಯ ಬೆಳವಣಿಗೆಗಳು ಅಖಿಲ ಭಾರತ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಂಗದ ಹಿಂದೆ ನಡೆದಿವೆ. ಮೂರು ತಿಂಗಳು ಮೊದಲೆ, ಸಂಬಂಧ ಪಟ್ಟವರೆಲ್ಲರಿಗೂ ಭೇಟಿ ಮಾಡಿ ‘ಉತ್ತರ ಕರ್ನಾಟಕ ಯೋಗ ಮತ್ತು ಸಾಂಸ್ಕೃತಿಕ ಸಂಸ್ಥೆ ಹೊಳೆಆಲೂರು’ ಹೆಸರಿನಲ್ಲಿ ಅರ್ಜಿ ನೀಡಿದ್ದಾಯಿತು. ತಿಂಗಳು ಕಳೆದರೂ ಉತ್ತರವಿಲ್ಲ. ಇತ್ತ ಬಿಜಾಪುರದಲ್ಲಿ ಪತ್ರಕರ್ತನಾಗಿ ದುಡಿಯುವ, ತಾನು ಪತ್ರಕರ್ತ ಎಂದೂ ಸಹ ಹೇಳಿಕೊಳ್ಳದ ಯೋಗಪಟು ಶಿವಾನಂದ, ಬಿಜಾಪುರ, ಧಾರವಾಡ, ಹುಬ್ಬಳ್ಳಿ, ಗದಗ ಮಧ್ಯೆ ಎಡತಾಕಿ ಮೆಟ್ಟು ಸವೆಸಿದ್ದು ಕೇಳಿದರೆ..ನನ್ನ ಕಣ್ಣಾಲೆಗಳು ತೇವಗೊಂಡವು.
’ಸರ್..ಇದು ನಾಟ್ಯ ಯೋಗ ಅಂತ; ಯೋಗ ಪ್ರದರ್ಶನದಲ್ಲಿಯೇ ಹೊಸ ಪ್ರಯೋಗ. ಕಳೆದ ೩ ವರ್ಷಗಳ ಹಿಂದೆ ಡಾ. ದ.ರಾ.ಬೇಂದ್ರೆ ಅವರ ರಚನೆಗಳಾದ ‘ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ ’ ಹಾಗೂ ‘ಯಾವ ಯೋಗ ನಿದ್ರೆಯಲಿ ಜನಿಸಿದೆನೋ’ ಗೇಯ ಹಾಗೂ ಭಾವ ಗೀತೆಗಳಿಗೆ ನಾಟ್ಯಯೋಗ ಸಂಯೋಜಿಸಿ ಪ್ರದರ್ಶಿಸಿದ್ದೇನೆ; ಇವು ನಾನು ಪಾಲ್ಗೊಂಡ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳ ಪ್ರಮಾಣಪತ್ರಗಳು’ ಎಂದು ಎಲ್ಲರಿಗೂ ಅರಿಕೆ ಮಾಡಿದ್ದಾಯಿತು. ಪ್ರಯೋಜನವಾಗಲಿಲ್ಲ.
ಗದುಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ದಾಖಲೆ ನೋಡಿ ಹೇಳಿದರಂತೆ..‘ಹಿಂಗ ಭಾಳ ಮಂದಿ ನಮಗ ಅಪ್ಲಿಕೇಶನ್ ಕೊಡ್ತಾರ; ಈಗೂ ನಮ್ಮ ಮುಂದ ಭಾಳ ಮಂದಿ ಅಪ್ಲಿಕೇಶನ್ ಬಿದ್ದಾವು. ಎಲ್ಲೋ ಪ್ರದರ್ಶನ ನೀಡಿ ಫೊಟೋ -ಶಾಪ್ ನೊಳಗ ಫೊಟೋ ತಿದ್ದಿಸಿಕೊಂಡು ತಂದು ಅರ್ಜಿಕೊಟ್ರ ನಮಗ ಗೊತ್ತಾಗುದುಲ್ಲ ಅಂತ ತಿಳಿಬ್ಯಾಡ್ರಿ..’ ಇವರಿಗೆ ಕನ್ನಡ -ಸಂಸ್ಕೃತಿ ಎರಡೂ ಕಲಿಸಬೇಕಾದ, ಇಲ್ಲವೇ ಅವರ ಬೇಕು-ಬೇಡ ಪುರಸ್ಕರಿಸುವ ಹಾದಿ ಬಿಟ್ಟು ಶಿವಾನಂದ ಅವರ ಮುಂದೆ ಇದ್ದ ಹಾದಿ ಯಾವುದು? ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿದ್ದಾಯಿತು. ಆದರೆ ಶಿವಾನಂದ ಛಲಬಿಡದ ತ್ರಿವಿಕ್ರಮ.
ಸಮ್ಮೇಳನದ ಸಂಘಟನೆಯ ಜವಾಬ್ದಾರಿ ಹೊತ್ತಿದ್ದ ಓರ್ವರೊಂದಿಗೆ ಒಳಒಪ್ಪಂದ ಮಾಡಿಕೊಂಡು, ನಾಟ್ಯಯೋಗಕ್ಕೆ ಬೇಕಿರುವ ಮಕ್ಕಳನ್ನು ಜೋಡಿಸಿಕೊಳ್ಳಲು ಬಳ್ಳಾರಿಯ ವಿಶ್ವೇಶ್ವರಯ್ಯ ‘ಬೆಸ್ಟ್’ ಹೈಸ್ಕೊಲ್ ಗೆ ಹುಬ್ಬಳ್ಳಿಯಿಂದ ಓಡಿದ್ದಾಯಿತು. ಆದರೆ ಅಲ್ಲಿ ನಿರಾಸೆ ಕಾಯ್ದಿತ್ತು. ‘ನೀವು ಮೊದ್ಲ ಹೇಳಬೇಕಿತ್ತು. ಸಾಹಿತ್ಯ ಸಮ್ಮೇಳನಕ್ಕ ಇನ್ನೆರಡು ದಿನಾ ಉಳದಾವು. ಈಗ ಬಂದು ಹೆಣ್ಣು ಹುಡುಗರನ್ನ ಕಳಸ್ರೀ ಅಂದ್ರ ಹೆಂಗ ಮಾಡಬೇಕು? ನಾವೂ ಮ್ಯಾಲ್ನಿವರ ಪರ್ಮಿಶನ್ ತೊಗೋಬೇಕು, ಆಗೋದಿಲ್ರೀ’ ಅಂದು ಬಿಟ್ರು ಪ್ರಾಚಾರ್ಯರು.
ಕೊನೆಗೆ ಶಿವಾನಂದ ವಿಶ್ವ ಪ್ರಯತ್ನ ಮಾಡಿ, ಅಲ್ಲಿನ ಯೋಗ ಶಿಕ್ಷಕಿ ಸುಮಂಗಲಾ ಮೇಡಂ ಅವರಿಗೆ ವಿಷಯ ತಿಳಿಸಿ , ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಿನ್ಸಿಪಾಲರಾದ ವಿಜಯಲಕ್ಷ್ಮೀ ಮೇಡಂ ಅವರ ಬಳಿ ನಿಯೋಗ ಕೊಂಡೊಯ್ದಿದ್ದಾಯಿತು. ಪರವಾನಿಗೆ ನೀಡಿದರೆ ಆಯಿತು; ಇಲ್ಲದಿದ್ದರೆ ತಾನೇ ಯೋಗ ಕಲಿಸಿದ ವಿಕಲಚೇತನರನ್ನು (ಕುರುಡರು-ಕಿವುಡರು-ಮೂಗರು-ಕುಂಟರು) ಸೇರಿಸಿಕೊಂಡು ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ‘ನಾಟ್ಯ ಯೋಗ’ ಪ್ರದರ್ಶನ ಮಾಡಲು ಶಿವಾನಂದ ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಹಾಗಾಗಲಿಲ್ಲ. ಮೀನ-ಮೇಷ ಎಣಿಸಿ ಅವರು ಕೊನೆಗೆ ೮ ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳನ್ನು ತಮ್ಮ ವಸತಿ ಶಾಲೆಯಿಂದ ಕರೆದೊಯ್ಯಲು ಅನುಮತಿ ನೀಡಿದರು. ಶಿವಾನಂದ ಗೆದ್ದರು. ಅಂದೇ ಆ ೧೦ ಮಕ್ಕಳನ್ನೂ ಕೆರೆದುಕೊಂಡು ಬಳ್ಳಾರಿಯಿಂದ ಹುಬ್ಬಳ್ಳಿಗೆ ಬಂದು ಇಳಿದಿದ್ದಾಯಿತು.
ಡಾ. ಕೆ.ಎಸ್. ಶರ್ಮಾ ಅವರ ಬೇಂದ್ರೆ ಕುಟೀರದ ಬೇಂದ್ರೆ ಭವನದಲ್ಲಿ ೧೮ ತಾಸುಗಳ ತಾಲೀಮು ಶುರುವಾಯಿತು. ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ’ ಹಾಗೂ ‘ವಿಶ್ವ ವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ’ ಗೀತೆಗಳಿಗೆ ನಾಟ್ಯ ಯೋಗ ಸಂಯೋಜಿಸಿದ್ದಾಯಿತು. ಪ್ರವಾಸ ಹಾಗೂ ಪ್ರಯೋಗದಿಂದ ವಿಪರೀತ ಬಳಲಿದ್ದ ಮಕ್ಕಳಲ್ಲಿ ಇಬ್ಬರಿಗೆ ವಿಪರೀತ ಜ್ವರ. ಶಿವಾನಂದ ಅಧೀರನಾಗಲಿಲ್ಲ. ಎಲ್ಲ ಮಕ್ಕಳನ್ನು ಕರೆದುಕೊಂಡು ಗದುಗಿಗೆ ಹೊರಟು ನಿಂತರು. ಬಳ್ಳಾರಿಯ ಬೆಸ್ಟ್ ಹೈಸ್ಕೂಲ್ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿರುವ ರಾಮಲಕ್ಷ್ಮಿ, ಆಶಾರೆಡ್ಡಿ, ೮ ಹಾಗೂ ೯ನೇ ತರಗತಿ ಓದುತ್ತಿರುವ ಪ್ರೀತಿ, ಮಹಿತಾ, ಪ್ರಿಯಾ, ಲಕ್ಷ್ಮಿ ಹಾಗೂ ನಾಗರಾಜ, ಅಭಿಷೇಕ ಮತ್ತು ೭ನೇ ತರಗತಿ ಓದುತ್ತಿರುವ ಪುಟಾಣಿ ಪರಮೇಶ್ವರಿ, ಐಟಿಐ ವ್ಯಾಸಂಗ ಮುಗಿಸಿ ಹುಬ್ಬಳ್ಳಿಯ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿರುವ ರೊಟ್ಟಿಗವಾಡದ ಬಿ.ಬಿ. ಕಬ್ಬೇರಳ್ಳಿ ನಾಟ್ಯ ಯೋಗ ಪ್ರದರ್ಶಿಸಲು ಸಿದ್ಧರಾದರು. ಅತ್ಯಂತ ಕ್ಲಿಷ್ಟಕರ ಯೋಗಾಸನಗಳಾದ ತ್ರಿವಿಕ್ರಮಾಸನ, ಶಕುನ್ಯಾಸನ, ಟಿಟ್ಟಿಭಾಸನ, ಅಂತರ್ ಮುಖ ಟಿಟ್ಟಿಭಾಸನ, ವೃಶ್ಚಿಕಾಸನ, ಹನುಮವಾಲಕಿಲಿ ಆಸನ ಮೊದಲಾದ ಆಸನಗಳನ್ನು ಒಳಗೊಂಡು, ಕೆಲ ಸಹಜ-ಸುಂದರ ಪ್ರದರ್ಶನ ಆಸನಗಳನ್ನು ಜೋಡಿಸಿಕೊಂಡು ನಾಟ್ಯ ಯೋಗ ಸಂಯೋಜಿಸಿದ್ದಾಯಿತು. ಈ ನಾಟ್ಯದ ದಿಗ್ದರ್ಶನ ಅಥವಾ ಅದಕ್ಕೊಂದು ಚೌಕಟ್ಟು ತೊಡಿಸಿದವರು ಹುಟ್ಟು ಅಂಧ, ಸದ್ಯ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿರುವ ಮಲ್ಲಪ್ಪ! ಹೇಗೆ ಮಾಡಿರಬಹುದು ಎಂಬುದು ನಿಮ್ಮ ಊಹೆಗೆ ಬಹುಶ: ನಿಲುಕದ್ದು.
ಸಾಹಿತ್ಯ ಸಮ್ಮೇಳನದ ಉದ್ಘಾಟನಾ ದಿನದ ಬೆಳಗು ಮುಂಜಾನೆ, ೧೯ರ ಬೆಳಿಗ್ಗೆ ೧.೩೦ಕ್ಕೆ, ಅತ್ತಿಮಬ್ಬೆ ಪ್ರಧಾನ ವೇದಿಕೆಯಲ್ಲಿ ಸಹಸ್ರಾರು ಕನ್ನಡಿಗರ ಮುಂದೆ ಶಿವಾನಂದ ತಮ್ಮ ಪುಟಾಣಿ ಶಿಷ್ಯರೊಂದಿಗೆ ನಾಟ್ಯ ಯೋಗ ಪ್ರದರ್ಶಿಸಲು ಅನುವಾದರು. ಜ್ವರದಿಂದ ಬಳಲುತ್ತಿದ್ದ ಮಕ್ಕಳು ಗೆಲುವಾದರು. ಆದರೆ ಸೌಂಡ್ ಸಿಸ್ಟಿಮ್ ಮಹಾಶಯ ‘ಪೆನ್ ಡ್ರೈವ್ ಬಳಸುವುದಿಲ್ಲ; ಸಿ.ಡಿ.ತನ್ನಿ’ ಎಂದ! ಶಿವಾನಂದ ಆ ಮಧ್ಯರಾತ್ರಿಯ ಹೊತ್ತಿನಲ್ಲಿ ಸಿ.ಡಿ. ತರುವುದು ಎಲ್ಲಿಂದ? ಏನೇ ಕೋರಿಕೊಂಡರೂ ಆತ ‘ಜಿಲ್ಲಾಧಿಕಾರಿಗಳ ಅಪ್ಪಣೆ ’ ಇರುವುದಾಗಿ ಹೇಳಿಬಿಟ್ಟ.
ಶಿವಾನಂದ ಕೊನೆಗೆ ತನ್ನ ಲ್ಯಾಪ್ ಟಾಪ್ ನಲ್ಲಿ ಆ ಹಾಡುಗಳನ್ನು ಪ್ಲೇ ಮಾಡಿ ‘ಲ್ಯಾಪ್ ಟಾಪ್ ಮೈಕ್ ’ಗೆ ಸೌಂಡ್ ಸಿಸ್ಟಿಮ್ ಮೈಕ್ ಹಿಡಿಯುವಂತೆ ತನ್ನ ಕೆಲ ಸಹಾಯಕರಿಗೆ ಹೇಳಿ ತರಾತುರಿಯಲ್ಲಿ ವೇದಿಕೆ ಏರಿದರು. ‘ಜೋಗದ ಸಿರಿ ಬೆಳಕಿನಲ್ಲಿ’ ಮೊಳಗಿದಾಗ ನಿದ್ರೆಯ ಮಂಪರಿನಲ್ಲಿದ್ದ ಕನ್ನಡಿಗರು ಎಚ್ಚೆತ್ತು, ಎದ್ದು ನಿಂತು ಕೇಕೆ ಹಾಕಿ ಯೋಗ ನಾಟ್ಯಕ್ಕೆ ಜೈಕಾರ ಹಾಕಿದರು. ಸೌಂಡ್ ಸಿಸ್ಟಿಮ್ ನವನ ಮನಸ್ಸು ಕರಗಿತು; ಓಡೋಡಿ ಬಂದವನೇ ‘ವಿಶ್ವ ವಿನೂತನ ವಿದ್ಯಾಚೇತನ’ ಹಾಡಿಗೆ ಪೆನ್ ಡ್ರೈವ್ ಸಿಕ್ಕಿಸಿ ಇಡೀ ಸಭಾಭವನ ಅನುರಣಿಸುವಂತೆ ಮಾಡಿದ. ಕನ್ನಡದ ಧ್ವಜವನ್ನು ಎತ್ತಿ ಹಿಡಿದು ತಿರುಗಿಸಿದ ಪುಟಾಣಿ ಪರಮೇಶ್ವರಿಯ ಕಣ್ಣಂಚಿನಲ್ಲಿ ಮಿಂಚು ಹೊಳೆದಿತ್ತು. ಮೂರುವರೆ ಸಾವಿರ ಕನ್ನಡಿಗರು ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಅಷ್ಟು ವೈಭವಯುತವಾಗಿ ನಾಟ್ಯ ಯೋಗವನ್ನು ಶಿವಾನಂದ ಸಂಯೋಜಿಸಿದ್ದರು. ಇದು ಕೇವಲ ೯ ನಿಮಿಷದಲ್ಲಿ ಮುಗಿದ ಕಾರ್ಯಕ್ರಮ!
ಶಿವಾನಂದ ಹೊಳೆಯುವ ಕಂಗಳಿಂದ ನನಗೆ ಹೇಳಿದರು..’ ಸರ್..ಗಂಗಾವತಿಯ ಬೀಚಿ- ಬಿ.ಪ್ರಾಣೇಶ್ ಅವರ ಹಾಸ್ಯ ಕಾರ್ಯಕ್ರಮದ ನಂತರ ನಮ್ಮ ಪ್ರದರ್ಶನವಿತ್ತು. ಜನ ಅವರ ಮಾತುಗಳಿಗೆ ಹಾಕಿದ ಚಪ್ಪಾಳೆ, ಅನುಭವಿಸಿದ ಆನಂದಕ್ಕಿಂತ ಹೆಚ್ಚು ಆನಂದ, ಶಿಳ್ಳೆ, ಕೇಕೆ ಹಾಕಿ, ಚಪ್ಪಾಳೆ ತಟ್ಟಿ ನಮ್ಮನ್ನು ಪ್ರೋತ್ಸಾಹಿಸಿದರು. ನಮ್ಮನ್ನು ಸತಾಯಿಸಿ, ಕೊನೆಗೆ ಅವಕಾಶ ದೊರಕಿಸಿಕೊಟ್ಟವರೆಲ್ಲ ಖುಷಿ ಪಟ್ಟು ವೇದಿಕೆಗೆ ಬಂದು ಕೈ-ಕುಲುಕಿ ಅಭಿನಂದಿಸಿದರು. ನಾನು ಪಟ್ಟ ಶ್ರಮ ಸಾರ್ಥಕವೆನಿಸಿತು’.
ಈ ವೇದಿಕೆಯ ಸಂಯೋಜಕರಾಗಿದ್ದ ‘ಮಕ್ಕಳ ಮನೆ’ಯ ಕಡಿನಿ ಶಾಸ್ತ್ರಿ ಎಂಬುವವರು ಶಿವಾನಂದ ಕೈಯಿಂದ ೧೮, ೦೦೦/- ರೂಪಾಯಿಗಳ ರಸೀದಿಯ ಮೇಲೆ ಸಹಿ ಹಾಕಿಸಿಕೊಂಡು ೩,೦೦೦/- ರೂಪಾಯಿ ನೀಡಿ ಕೈತೊಳೆದುಕೊಂಡರು. ಅವಕಾಶ ಸಿಕ್ಕಿದ್ದೇ ದೊಡ್ಡದಾಯಿತು ಎಂದು ಶಿವಾನಂದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ತಮ್ಮ ತಂಡದೊಂದಿಗೆ ವೇದಿಕೆಯಿಂದ ನಿರ್ಗಮಿಸಿದರು.
ಶಿವಾನಂದ ಹೇಳುತ್ತಾರೆ..‘ಸರ್, ನನ್ನ ಪಾಲಿನ ಹಣ ನನ್ನ ತಂಡಕ್ಕೆ ದೊರಕಿದ್ದರೂ ಸಾಕಿತ್ತು. ಮಕ್ಕಳನ್ನು ಸ್ವಿಮ್ಮಿಂಗ್ ಸೂಟ್ ನಲ್ಲಿ ಯೋಗ ಪ್ರದರ್ಶನ ಮಾಡಿಸುತ್ತಿರಲಿಲ್ಲ. ಇಳಕಲ್ ಸೀರೆಯಿಂದ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿಸಿಬಿಡುತ್ತಿದ್ದೆ. ಯಾರಾದರೂ ಹಣ ಸಹಾಯ ಮಾಡುವವರಿದ್ದರೆ ಹೇಳಿ ನಾವು ಈ ಪ್ರದರ್ಶನಕ್ಕೆ ಇನ್ನೂ ಮೌಲ್ಯವರ್ಧನೆ ಮಾಡಿ ಪ್ರದರ್ಶಿಸಲು ಮನಸ್ಸು ಮಾಡಿದ್ದೇವೆ..’
ಶಿವಾನಂದ ಕೇಲೂರ ಅವರ ದೂರವಾಣಿ- ೯೮೪೫೩ ೭೨೮೮೭.
ಹೀಗೆ ಕೊಪ್ಪಳದವರು, ಧಾರವಾಡದವರು ಸುತ್ತಲಿನ ಹತ್ತಾರು ಊರುಗಳ ಕಲಾವಿದರ ತಂಡಗಳು ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಹೆಸರು ಹಾಕಿಸಿಕೊಂಡು-ಪ್ರದರ್ಶನ ನೀಡಲು ೫,೬,೮, ಹಾಗೂ ೧೦ ಸಾವಿರ ರೂಪಾಯಿಗಳನ್ನು ಸಾಹಿತ್ಯ ಸಮ್ಮೇಳನದ ‘ದಲಾಲರಿಗೆ’ ನೀಡಿ, ಪ್ರದರ್ಶನ ಭಾಗ್ಯ ಪಡೆದು ಧನ್ಯತೆ ಮೆರೆದಿದ್ದಾರೆ! ಇದು ಕನ್ನಡ ನಾಡು-ನುಡಿಯ ವಿಷಯ ಎಂದು ತೆಪ್ಪಗಿರಬೇಕೆ? ಅಥವಾ ಈ ದಲಾಲರಿಗೆ ಯೋಗ್ಯ ಗೌರವ ಕೊಡಿಸುವ ವ್ಯವಸ್ಥೆ ಮಾಡಬೇಕೆ? ಕನ್ನಡಿಗರಿಗೆ ಬಿಟ್ಟಿದ್ದು.
‘ಉಣ್ಣುವ ಮನೆ’ಯ ‘ಗಳ ಹಿರಿದ’ ಕನ್ನಡದ ದಲಾಲರಿಗೆ ಸಾಹಿತ್ಯ ಸಮ್ಮೇಳನ ವೇದಿಕೆ ಒದಗಿಸಿದತಾಗಿದೆ. ಅಕ್ಕ ಡಾ. ಗೀತಾ ನಾಗಭೂಷಣ್ ಮತ್ತು ಡಾ. ನಲ್ಲೂರ್ ಪ್ರಸಾದ್, ಶಿವಾನಂದ ಕೇಲೂರ ಅವರ ಈ ಅನುಭವದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆಯೇ?
ಏಕೆಂದರೆ, ಇದು ಮಾಧ್ಯಮದವರಿಗೆ ಅಪತ್ರಿಕಾ ವಾರ್ತೆ! ಮಾಧ್ಯಮ ಪ್ರತಿನಿಧಿಗಳಿಗೂ ಸಾಹಿತ್ಯ ಸಮ್ಮೇಳನದ ಕೆಲವೊಂದು ಮುಖ್ಯ ಹಾಗೂ ಸಮಾನಾಂತರ ಗೋಷ್ಠಿಗಳಲ್ಲಿ ಪ್ರಬಂಧ ಮತ್ತು ಅವರ ಕನ್ನಡ ಪರ ವಿಚಾರ ಮಂಡಿಸುವ ಅವಕಾಶ ‘ಸಿಕ್ಕಿತ್ತು’!
ಅಂದಹಾಗೆ ಶಿವಾನಂದ ಕೇಲೂರ ಅವರಿಗೆ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಇನ್ನೂ ಕೈಸೇರಿಲ್ಲ!.. ಮುಂದಿನ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ...‘ಕನ್ನಡವೇ ಈ ದಲಾಲರಿಗೆ ಸತ್ಯ; ಕನ್ನಡವೇ ಈ ದಲಾಲರಿಗೆ ನಿತ್ಯ, ಅನ್ಯವೆನಲದೆ ಈ ದಲಾಲರಿಗೆ ಮಿಥ್ಯ...!’
‘ಆಳ್ ಕನ್ನಡ ತಾಯೇ..ಬಾಳ್ ಕನ್ನಡ ತಾಯೇ!’