‘ನಮ್ಮ ಒಕ್ಕಲಿಗ ಒಕ್ಕಿ ಜಗದ ಒಡಲು ತುಂಬಿಸಿದ..ಆದರೆ ಸ್ವತ: ಬಿಕ್ಕಿದ’

‘ನಮ್ಮ ಒಕ್ಕಲಿಗ ಒಕ್ಕಿ ಜಗದ ಒಡಲು ತುಂಬಿಸಿದ..ಆದರೆ ಸ್ವತ: ಬಿಕ್ಕಿದ’

ಬರಹ

ವಿಶ್ವ ಬ್ಯಾಂಕಿನ ಅಂದಾಜಿನ ಪ್ರಕಾರ ಕ್ರಿಸ್ತ ಶಕ ೨೦೧೫ರ ವೇಳೆಗೆ ನಮ್ಮ ದೇಶದಲ್ಲಿ ಸುಮಾರು ೪೦ ಕೋಟಿ ಪ್ರಜೆಗಳು ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಬರಲಿದ್ದಾರೆ. ಇದು ಯುನೈಟೆಡ್ ಕಿಂಗಡಂ, ಜರ್ಮನಿ ಹಾಗು ಫ್ರಾನ್ಸ್ ಒಟ್ಟು ಜನಸಂಖ್ಯೆಯ ಎರಡು ಪಟ್ಟು!

ಇದು ನಂಬಬಹುದಾದ ಸಂಖ್ಯೆ. ಏಕೆಂದರೆ ನ್ಯಾಶನಲ್ ಸ್ಯಾಂಪಲ್ ಸರ್ವೇಯವರು ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡ ೪೦ರಷ್ಟು ರೈತರು ಈಗಾಗಲೇ ರೋಸಿ ಹೋಗಿದ್ದಾರೆ. ಕೃಷಿಯನ್ನು ಬಿಟ್ಟು ಬೇರೆ ಯಾವುದಾದರೂ ಉದ್ಯೋಗ ಕಂಡುಕೊಳ್ಳುವ ಅನಿವಾರ್ಯ ತರಾತುರಿಯಲ್ಲಿ ಇದ್ದಾರೆ. ನಮ್ಮವರೇ ನಡೆಸಿದ ಅಧ್ಯಯನಗಳ ಪ್ರಕಾರ ತಮಿಳುನಾಡಿನ ಶೇ.೭೦ ರಷ್ಟು ರೈತರು, ಪಂಜಾಬಿನ ೬೫% ರೈತಾಪಿ ಜನ, ಉತ್ತರ ಪ್ರದೇಶದ ಸುಮಾರು ೫೫% ರೈತರು ಬೇಸಾಯದ ಬವಣೆ ತಾಳಲಾರದೇ ನಗರಗಳಿಗೆ ಬರಲಿದ್ದಾರೆ.

ಆಗ ‘ಕೃಷಿ ನಿರಾಶ್ರಿತರು’ ಎಂಬ ಹಣೆಪಟ್ಟಿಯೊಂದಿಗೆ ನಮ್ಮ ದೇಶದಲ್ಲಿ ಹೊಸ ಆತಂಕವೊಂದು ಸೃಷ್ಠಿಯಾಗಲಿದೆ. ಆಣೆಕಟ್ಟು ಪ್ರದೇಶದ ನಿರಾಶ್ರಿತರು, ಪರಿಸರ ನಿರಾಶ್ರಿತರು ಎಲ್ಲರನ್ನೂ ಮೀರಿಸಿ ಈ ಕೃಷಿ ನಿರಾಶ್ರಿತರು ನಗರಗಳಿಗೆ ಬರಲಿದ್ದಾರೆ.

ಅಗ್ರಿ ಬಿಸಿನೆಸ್ ಕಂಪೆನಿಗಳ ಕೃಪೆ ಇದು. ಜಗತ್ತಿನಲ್ಲಿ ಎಲ್ಲೂ ಈ ಕಂಪೆನಿಗಳು ರೈತರ ಜೊತೆ ಕೈಜೋಡಿಸಿ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಇಂತಹ ಕಂಪೆನಿಗಳು ಎಲ್ಲೆಲ್ಲಿ ಕಾಲಿಟ್ಟಿವೆಯೋ ಅಲ್ಲೆಲ್ಲ ರೈತರು ಗುಳೆ ಎದ್ದಿದ್ದಾರೆ. ಅದು ಅಮೇರಿಕ ಇರಲಿ, ಯುರೋಪ್ ಆಗಿರಲಿ. ಸರಕಾರಗಳು ಅಷ್ಟು ದೊಡ್ಡ ಮೊತ್ತವನ್ನು ಸಬ್ಸಿಡಿಯಾಗಿ ನೀಡಿದರೂ ರೈತರಿಗೆ ಬದುಕಲು ಸಾಧ್ಯವಾಗದಂಥಹ ಪರಿಸ್ಥಿತಿಯನ್ನು ಈ ಕಂಪನಿಗಳು ತಂದೊಡ್ಡುತ್ತವೆ. ನಮ್ಮಲ್ಲೂ ಅಂತಹ ಕಂಪೆನಿಗಳಿಗೆ ದೊಡ್ಡ ಮಣೆ ಹಾಕುವ ಸಿದ್ಧತೆಗಳು ನಡೆದಿವೆ.

ಎಸ್.ಇ.ಝೆಡ್. ‘ಸ್ಪೆಶಲ್ ಎಕಾನಾಮಿಕ್ ಝೋನ್’- ವಿಶೇಷ ಆರ್ಥಿಕ ವಲಯ ಹೆಸರಿನಲ್ಲಿ ‘ಗುತ್ತಿಗೆ ಕೃಷಿ’ ದೊಡ್ಡ ಪ್ರಮಾಣದಲ್ಲಿ ಬರಲಿದೆ. ಅವರಿಗಾಗಿ ನಮ್ಮೆಲ್ಲ ಸಂಪನ್ಮೂಲಗಳನ್ನು ಅಂದರೆ- ನೀರು, ಜೀವಿ ವೈವಿಧ್ಯ, ಅರಣ್ಯ, ಬೀಜನಿಧಿ, ಕೃಷಿ ಮಾರುಕಟ್ಟೆ ಮತ್ತು ಖನಿಜ ಸಂಪತ್ತನ್ನು ಧಾರೆ ಎರೆಯುವ ಯೋಜನೆಗಳು ಈಗಾಗಲೇ ರೂಪುಗೊಂಡಿವೆ. ಇಂತಹ ಗುತ್ತಿಗೆದಾರರು ಅತಿ ನೀರು, ಅತಿ ಗೊಬ್ಬರ, ಅತಿ ಪ್ರಮಾಣದ ಪೀಡೆ ನಾಶಕಗಳನ್ನು ಬಳಸಿ, ಸಾಮಾನ್ಯ ರೈತರು ಬಳಸುವುದಕ್ಕಿಂತ ೧೫ ರಿಂದ ೨೦ ಪಟ್ಟು ಒಳಸುರಿಗಳನ್ನು ಸುರಿದು ಸ್ವಲ್ಪೇ ಅವಧಿಯಲ್ಲಿ ದೊಡ್ಡ ಲಾಭ ಮಾಡಿಕೊಂಡು, ನಮ್ಮ ನೆಲವನ್ನು ಬಂಜರು ಮಾಡಿ ಬೇರೆ ಕಡೆ ಹೊರಡುತ್ತಾರೆ. ಹಿಂದಿನ ಶತಮಾನದಲ್ಲಿ ವನವಾಸಿಗಳು ಅನುಸರಿಸುತ್ತಿದ್ದ ‘ವಲಸೆ ಕೃಷಿ’ ಝೂಮ್ ಪದ್ಧತಿಯ ವಿಕಾರ ರೂಪವಿದು.

ರೈತನನ್ನು ನಗರಗಳಿಗೆ ಅಟ್ಟಿ, ಕೃಷಿ ಭೂಮಿಯನ್ನು ಬಂಜರು ಮಾಡಿ ಯಾರನ್ನು ಉದ್ಧಾರ ಮಾಡುವ ಯೋಜನೆಗಳು ಇವು? ದೇಶದ ಸುಮಾರು ಆರು ಕೋಟಿ ಸರಕಾರಿ ನೌಕರರ ಏಳ್ಗೆಗೆಂದೇ ಆರನೇ ವೇತನ ಆಯೋಗ ಒಂದು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದೆ. ಅದರ ಅರ್ಧದಷ್ಟು, ಅಂದರೆ ೫೦ ಸಾವಿರ ಕೋಟಿ ರೂಪಾಯಿಗಳು ಅರವತ್ತು ಕೋಟಿ ರೈತರ ಕಲ್ಯಾಣಕ್ಕೆ ಸಾಕೇ ಸಾಕು. ಅಷ್ಟನ್ನು ಸರಕಾರ ಕೃಷಿರಂಗದ ಮೇಲೆ ವೆಚ್ಚ ಮಾಡಲಾರದೇ?

ಭಾರತ ಹಳ್ಳಿಗಳ ದೇಶ. ೬.೩೮ ಲಕ್ಷ ಹಳ್ಳಿಗಳು. ಪ್ರತಿಶತ ೭೧ ರಷ್ಟು ಜನ ಹಳ್ಳಿಗಾಡಿನ ನಿವಾಸಿಗಳು. ಶೇಕಡ ೬೯ ರಷ್ಟು ಜನ ಕೃಷಿ ಮತ್ತು ಕೃಷಿ ಆಧಾರಿತ ಉದ್ದಿಮೆಗಳು ಹಾಗು ಗ್ರಾಮೋದ್ಯೋಗಗಳ ಮೇಲೆ ನೌಕರಿಗಾಗಿ ಅವಲಂಬಿತರು. ದೇಶದ ೩೫ ಪ್ರತಿಶತದಷ್ಟು ರಾಷ್ತ್ರೀಯ ಆದಾಯ ಕೃಷಿ ಮೂಲ ಉತ್ಪನ್ನಗಳಿಂದ. ಇನ್ನು ನಮ್ಮ ಮಾಧ್ಯಮಗಳು ನಗರ, ಪಟ್ಟಣ ಹಾಗು ಉಪನಗರ ಕೇಂದ್ರಿತ. ಸಾರ್ವಜನಿಕ ಅಭಿಪ್ರಾಯ ಅವುಗಳ ದೃಷ್ಟಿಯಲ್ಲಿ ೨೯% ನಗರವಾಸಿಗಳ ಅಭಿಪ್ರಾಯ! ಅದೇ ಸಾರ್ವತ್ರಿಕ ಅಭಿಪ್ರಾಯವಾಗಿ ೧೧೦ ಕೋಟಿ ಜನರ ಮೇಲೆ ಹೇರಿಕೆ.

ರೈತರು ಕೆರೆ ಕಳ್ಳರೇ?: ಧಾರವಾಡದ ಘಟನೆ:

ಧಾರವಾಡದಿಂದ ಕಲಘಟಗಿಗೆ ಹೋಗುವ ರಸ್ತೆಯ ಮಧ್ಯೆ ಶಾಲ್ಮಲಾ ತಟದ ಶ್ರೀ ಕ್ಷೇತ್ರ ಸೋಮೇಶ್ವರದ ಬಳಿ ಪ್ರಸಿದ್ಧ ನುಗ್ಗಿಕೇರಿ ಹನುಮಂತದೇವರ ದೇವಸ್ಥಾನವಿದೆ. ಶ್ರೀ ವ್ಯಾಸರಾಯ ಪುನರ್ ಪ್ರತಿಷ್ಠಾಪಿತ ನುಗ್ಗಿಕೇರಿ ದೇಸಾಯರ ಖಾಸಗಿ ಜಮೀನು ಹಾಗು ಸುಪರ್ದಿಯಲ್ಲಿರುವ ಜಾಗೃತ ಸ್ಥಳ ಎಂಬ ಪ್ರತೀತಿಯ ಯಾತ್ರಾಸ್ಥಳ ಈ ದೇವಸ್ಥಾನ.

ಇದಕ್ಕೆ ಕಿರೀಟಪ್ರಾಯವಾಗಿ ಸುಮಾರು ೪೧ ಎಕರೆಯಷ್ಟು ವಿಸ್ತಾರ ಹೊಂದಿರುವ ನುಗ್ಗಿಕೇರಿ ಗಮನ ಸೆಳೆಯುತ್ತದೆ. ಸುತ್ತಮುತ್ತಲಿನ ಹತ್ತಾರು ಕಿಲೋ ಮೀಟರ್ ವ್ಯಾಪ್ತಿಯ ಒಳ ಹರಿವಿನ ಪ್ರದೇಶ ಹೊಂದಿರುವ ಕೆರೆ ಈಗ ಕ್ರಮೇಣ ಬಡಾವಣೆಗಳ ನಿರ್ಮಾಣದಿಂದ ತನ್ನ ಕ್ಯಾಚ್ ಮೆಂಟ್ ವ್ಯಾಪ್ತಿ ಘಟಾಯಿಸಿಕೊಂಡಿದೆ. ಆದರೂ ಈ ಬಾರಿಯ ಮಳೆಯಲ್ಲಿ ಅದು ಮೈದುಂಬಿಕೊಂಡು ನಿಂತಿದ್ದು ವಿಶೇಷವೇ! ಕೆರೆಯ ಕೋಡಿ ಹರಿದರೆ ಹೆಚ್ಚಿನ ಪ್ರಮಾಣದ ನೀರು ಹೊರ ಹರಿಯಲು ಈಗಾಗಲೇ ಪೈಪ್ ವ್ಯವಸ್ಥೆ ಇದೆ. ಹಾಗೆ ನೀರು ಈಗ ಹರಿಯುತ್ತಿದೆ. ಆದರೂ ಮೊನ್ನೆ ಸುಮಾರು ೧೨ ಸಿಮೆಂಟ್ ಪೈಪ್ ಗಳನ್ನು ಇಲ್ಲಿಗೆ ತರಲಾಗಿದೆ. ಧಾರವಾಡದ ಪರಿಸರ ಪ್ರೇಮಿಗಳು ಸ್ಥಳಕ್ಕೆ ತೆರಳಿ ಈ ಪ್ರಕ್ರಿಯೆಗೆ ಅಡ್ಡಿ ಪಡಿಸಿದರು. ಕೆರೆಯ ನೀರನ್ನು ಖಾಲಿ ಮಾಡುವ ಹುನ್ನಾರವಿದು ಎಂದು ಆರೋಪಿಸಿದರು. ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ಇತ್ತ ರೈತರು ಈ ಪೈಪ್ ಲೈನ್ ಹಾಕಿಸಲು ಮುಂದಾದರೋ? ಖಾಸಗಿ ಸ್ವತ್ತಿನ ಅಧಿಕಾರ ಹೊಂದಿರುವ ದೇಸಾಯರೋ? ಅಥವಾ ಸುತ್ತಲೂ ಈಗಾಗಲೇ ಬಡವಣೆಗಳ ಕಾಂಕ್ರೀಟ್ ಕಾಡು ನಿರ್ಮಿಸುವ ಹುನ್ನಾರದಲ್ಲಿರುವ ರಿಯಲ್ ಎಸ್ಟೇಟ್ ಕುಳಗಳೋ? ಮಾಧ್ಯಮದವರಿಗೆ ಇದ್ಯಾವ ಚಿಂತೆ ಇಲ್ಲ. ಪರಿಸರ ವಾದಿಗಳ ಪ್ರತಿಭಟನೆ ಉಲ್ಲೇಖಿಸಿ ವರದಿ (ಅವರ ಪರವಾಗಿಯೇ!) ‘ಅರಾಮ ಖುರ್ಚಿ ಪತ್ರಿಕೋದ್ಯಮ’ ಮಾಡಿದರು. ಈಗ ಆ ಭಾಗದಲ್ಲಿ ಹೊರ ಹರಿವಿನ ನೀರಿಗೆ ಭಾಧ್ಯಸ್ಥರಾಗಿದ್ದ ರೈತರಿಗೂ ಈ ಬಿಸಿ ತಟ್ಟಿತು. ಕೆರೆ, ಕಟ್ಟೆಗಳ ಬಗ್ಗೆ ಅತೀವ ಕಾಳಜಿ ತೋರಿಸುವ ಪರಿಸರವಾದಿಗಳು ಕೆರೆಯನ್ನು ಉಳಿಸಲು ಸುತ್ತಲೂ ತಂತಿ ಬೇಲಿ ಹಾಕಿಸಬೇಕು ಎಂದು ಆಗ್ರಹಿಸಿದ್ದಾರೆ!

ಸ್ವಾಮಿ.. ನ್ಯಾಯವಾದಿಗಳ ಕಾನೂನು ಸಲಹೆ ಪಡೆದು, ಅವರಿಗೂ ತಮ್ಮ ಪಾಲು ನೀಡಿ, ಕೆರೆಯ ಕ್ಯಾಚ್ ಮೆಂಟ್ ಏರಿಯಾ ಬಳಸಿ ವ್ಯವಸ್ಥಿತವಾಗಿ ಬಡಾವಣೆ ನಿರ್ಮಿಸುವ ದಂಧೆ ಮಾಡುತ್ತಿರುವ ರಿಯಲ್ ಎಸ್ಟೇಟ್ ಕುಳಗಳಿಗೆ ಲಗಾಮು ಹಾಕದೇ..ಬಿಸಿ ತಟ್ಟಿಸದೇ..ರೈತನಿಗೆ ಬಾರಕೋಲಿನಿಂದ ಹೊಡೆಯುವ ಈ ತಂತಿ ಬೇಲಿ ಹಾಕುವ ಪ್ರಯತ್ನ ಏಕೆ?

ಹುಬ್ಬಳ್ಳಿಯ ಉಣಕಲ್ ಕೆರೆ ಕಥೆ ಕೇಳಿ: ಇತ್ತೀಚೆಗೆ ಮಹಾನಗರ ಪಾಲಿಕೆ ಕೆರೆ ಮಟ್ಟದಿಂದ ಕೆಳಗಡೆ ನಾಲಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶದ ಮನೆಗಳಿಗೆ ನೀರು ನುಗ್ಗುವುದನ್ನು ತಡೆಗಟ್ಟಲು ಎರಡು ಮೋಟಾರು ಹಚ್ಚಿ ಹೊರಗಡೆ ಬಿಡುವ ವ್ಯವಸ್ಥೆ ಮಾಡಿದರು. ಸತತ ಮಳೆ, ಗಣನೀಯ ಪ್ರಮಾಣದಲ್ಲಿ ಏರಿದ ನೀರಿನ ಒಳ ಹರಿವು, ಅಪಾಯದ ಮಟ್ಟ ಏರಿದ ಕೆರೆಯ ನೀರಿನ ಮಟ್ಟ ಅನುಲಕ್ಷಿಸಿ ಈ ಕ್ರಮಕ್ಕೆ ಮುಂದಾಗಿತ್ತು. ಕಳೆದ ಒಂದು ವರ್ಷದ ಹಿಂದೆ ಕೆರೆ ಉಕ್ಕಿದಾಗ ಅಗ್ನಿಶಾಮಕ ದಳ ಹಾಗು ಜಿಲ್ಲಾಡಳಿತ ಸಜ್ಜಾಗಿ ನಿಂತು ಸಮರೋಪಾದಿಯಲ್ಲಿ ನಾಡ ದೋಣಿಗಳ ಸಹಾಯದಿಂದ ಜನರನ್ನು, ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ವ್ಯವಸ್ಥೆ ಮಾಡಿದ್ದರು. ನಾಲ್ಕಾರು ದಿನ ಜನ ಮನೆ-ಮಠ ಕಳೆದು ಕೊಂಡು ಉಣಕಲ್ ಸಿದ್ದಪ್ಪಜ್ಜನ ಮಠದಲ್ಲಿ ಆಶ್ರಯ ಪಡೆದಿದ್ದರು.

ಈ ಬಾರಿ ಮುಂಜಾಗೃತಾ ಕ್ರಮವಾಗಿ ಪಾಲಿಕೆ ಈ ಕ್ರಮ ಕೈಗೊಂಡರೆ..ಇದರಿಂದ ಕೆರೆಯ ನೀರಿನ ಮಟ್ಟ ಕಡಿಮೆಯಾಗುತ್ತದೆ, ಭೂಮಿಯ ಅಂತರ್ಜಲ ಮಟ್ಟ ಕುಸಿಯುತ್ತದೆ..ಮೊದಲೇ ಕೆರೆಯ ಹೂಳೆತ್ತಿ ಆಳ ಹೆಚ್ಚಿಸಬೇಕಿತ್ತು.. ಎಂದು ಉಣಕಲ್ ಕೆರೆ ರಕ್ಷಣಾ ಸಮಿತಿ ಆಕ್ಷೇಪಿಸಿ, ಪತ್ರಿಕೆಗಳಿಗೆ ‘ಪ್ರೆಸ್ ನೋಟ್’ ಹಂಚಿತು. ಪತ್ರಕರ್ತರು ಹಿಂದೆ-ಮುಂದೆ ನೋಡದೇ ಸುದ್ದಿ ಗುದ್ದಿದರು. ಕೆಲ ರಾಜ್ಯಮಟ್ಟದ ಪತ್ರಿಕೆಗಳು ಹಿರಿಯ ವರದಿಗಾರರ ‘ಬೈಲೈನ್’ ಸಮೇತ ಈ ವರದಿ ಪ್ರಕಟಿಸಿದವು!

ಪಾಲಿಕೆಯ ಅಧಿಕಾರಿಗಳನ್ನು ಮಾತನಾಡಿಸಿ ನಿಜ ಸ್ಥಿತಿ ಅರಿಯಲಿಲ್ಲ. ತಾವೇ ಒಂದು ವರ್ಷದ ಕೆಳಗೆ ಬರೆದ ಜನ-ಜಾನುವಾರು-ಬೆಳೆಗಳ ಕುರಿತಾದ ಮಾನವೀಯ ವರದಿಗಳನ್ನು ಪರಿಗಣಿಸಲಿಲ್ಲ. ಆ ಭಾಗದ ನೆಲ-ಹೊಲ ಹೊಂದಿರುವ ರೈತಾಪಿ ಮಹಿಳೆ, ಪುರುಷರನ್ನು ಮಾತನಾಡಿಸಲಿಲ್ಲ. ಬಡಾವಣೆಗಳಲ್ಲಿ ವಾಸವಾಗಿರುವ ಜನರನ್ನು, ನೌಕರಸ್ಥರನ್ನು ಸಂದರ್ಶಿಸಲಿಲ್ಲ. ನನ್ನ ಹತ್ತು ಜನ ಪತ್ರಿಕೋದ್ಯಮದ ವಿದ್ಯಾರ್ಥಿನಿಯರ ಮನೆಗಳು ಈ ಭಾಗದಲ್ಲಿ ಇರುವುದರಿಂದ, ಅವರು ವರದಿಗಳನ್ನು ನೋಡಿ ನನ್ನ ಮುಂದೆ ಅಳಲು ತೋಡಿಕೊಂಡಿದ್ದರಿಂದ ‘ನಮ್ಮವರ’ ಈ ಪರಿಯ ವೃತ್ತಿ ನಿಷ್ಠೆ, ವಸ್ತು ನಿಷ್ಠ ವರದಿಗಳ ಬಗ್ಗೆ ಸಂದೇಹ ಮೂಡಲು ಕಾರಣವಾಯಿತು.

ದುರ್ದೈವ ಎಂದರೆ ವರದಿಗೆ ಪಾಲಿಕೆ ಸಹ ಸ್ಪಷ್ಠೀಕರಣ ನೀಡಲಿಲ್ಲ! ಪತ್ರಿಕೆಗಳನ್ನು ಜನ ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ನಾನು ಭಾವಿಸುತ್ತೇನೆ.