‘ನರರ’ ನಾಡಿಗೆ ‘ವಾನರರ’ ಲಗ್ಗೆ

‘ನರರ’ ನಾಡಿಗೆ ‘ವಾನರರ’ ಲಗ್ಗೆ

ಬರಹ

ಮಾನವನಾದ ಕಪಿಯಿಂದ;ಡಾರ್ವಿನ್ನಿನ ವಾದ.
ಏನು ಹೇಳಿದನವನು? ನಿಜವಾಗಿ ನಿಜವೇ?
ಮಾನವನ ಮುಖ ನೋಡು; ಹೌದು
ನಿಜವೆನಿಸುವುದು! ಕಪಿಯ ಹೃದಯ ನೋಡು
ಅಲ್ಲೆನಿಸುವುದೋ ತಿಮ್ಮ!?

ಎರಡು ದಶಕಗಳ ಕೆಳಗೆ ಖ್ಯಾತ ಹಾಸ್ಯ ಸಾಹಿತಿ ಬೀchi ತಮ್ಮ ‘ಅಂದನಾ ತಿಂಮ’ ಕೃತಿಯಲ್ಲಿ ಬಹು ಮಾರ್ಮಿಕವಾಗಿ ನಮ್ಮ ಪೂರ್ವಜರ (ಮಂಗಗಳ) ಕುರಿತು ಉಲ್ಲೇಖಿಸಿದ್ದರು. ಬಹುಶ: ಅಂದಿನ ಅವರ ಅನುಭವಪೂರ್ಣ ಹಾಗು ವಿಚಾರಪ್ರಚೋದಕ ಮಾತುಗಳು ನಾವು ಇಂದಿನವರಿಗೆ ಅನುಭವಕ್ಕೆ ಬರತೊಡಗಿವೆ ಎಂದರೆ ಅತಿಶಯೋಕ್ತಿ ಏನಲ್ಲ.

ಅತಿಲೋಲುಪ ಮಾನವ ಪ್ರಾಣಿ ವನ್ಯಜೀವಿಗಳ ಆಶ್ರಯತಾಣಗಳನ್ನು ತನಗೆ ಅನುಕೂಲವಾಗುವಂತೆ ಮನಸೋಇಚ್ಛೆ ಬಳಸಿದ. ಕಾಡು ಕಡಿದು
ಅವುಗಳ ವಾಸಸ್ಥಾನ ಹಾಳುಗೆಡವಿದ. ಈಗ ಮಂಗಗಳು ಧಾರವಾಡದಲ್ಲಿ ದಾರಿಗಾಣದೇ ‘ಉಪಾಯದಿಂದ’ ಆಹಾರ, ವಿಹಾರ, ವಾಸಸ್ಥಳ ಹಾಗು ಸಂತಾನೋತ್ಪತ್ತಿಗಾಗಿ ಮಾನವರ ವಾಸಸ್ಥಳಗಳನ್ನು ಆಕ್ರಮಿಸಿ, ತಮ್ಮ ಹಕ್ಕುಗಳಿಗಾಗಿ ಆಗ್ರಹಿಸುತ್ತಿವೆ.

ವಸ್ತುಸ್ಥಿತಿ: ಕಳೆದ ಒಂದು ತಿಂಗಳಿನಿಂದ ಧಾರವಾಡದಲ್ಲಿ ಮಂಗಗಳು ಹಲವಾರು ಟೋಳಿಗಳಲ್ಲಿ ಲಗ್ಗೆ ಇಟ್ಟಿವೆ. ಕಪ್ಪು ಹಾಗು ಕೆಂಪು ಮೂತಿಯ ವಾನರರ ಸೈನ್ಯ ಕಂಡು ನರರು ದಿಕ್ಕಾಪಾಲಾಗಿ ಓಡುವ ಸ್ಥಿತಿ ನಿರ್ಮಾಣಗೊಂಡಿದೆ. ಈ ಕಪ್ಪು ಹಾಗು ಕೆಂಪು ಮೂತಿಯ ವಾನರರ ಸೈನ್ಯ ಸಿಕ್ಕ ಸಿಕ್ಕ ಮನೆಗಳಿಗೆಲ್ಲ ನುಗ್ಗಿ ದಾಂಧಲೆ ಎಬ್ಬಿಸಿವೆ. ಮನೆಯ ಆವರಣದಲ್ಲಿರುವ ಚಿಕ್ಕು, ಪೇರಲ, ಹಲಸು ಹಾಗು ಹೂವಿನ ಗಿಡಗಳು, ಮಹಡಿಯ ಮೇಲೆ ಒಣಗಿಸಲು ಹಾಕಿರುವ ಒಣ ಖೊಬ್ಬರಿ, ಸಂಡಿಗೆ.. ನರರ ಇತ್ಯಾದಿ ವಸ್ತುಗಳು ಈ ವಾನರರ ಕೈಗೆ ಸುಲಭದಲ್ಲಿ ಸಿಕ್ಕರೆ, ಮನೆಯ ಒಳಗಡೆಯ ಹಣ್ಣು, ಗಜ್ಜರಿ, ಸೌತೆಕಾಯಿ, ಬ್ರೆಡ್ ಮುಂತಾದ ವಸ್ತುಗಳಿಗೆ ಹೊಂಚು ಹಾಕಿ ಕಾಯುತ್ತ ಕಿಟಕಿಗಳ ಇಲ್ಲವೇ ಬಾಗಿಲುಗಳ ಮೂಲಕ ಮನೆಯ ಒಳಗೆ ನುಗ್ಗಿ ಜನರನ್ನು ಹೆದರಿಸಿ ಅಧಿಕಾರದಿಂದ ಹೊತ್ತೊಯ್ದು ಹಂಚಿಕೊಂಡು ತಿನ್ನುತ್ತಿವೆ!

ಪ್ರತಿಫಲ: ಇವುಗಳ ಉಪಟಳ ತಾಳಲಾರದೇ ಕೆಲವರು ಮದ್ದು ಹಾಗು ಪಟಾಕಿಗಳನ್ನು ಸಿಡಿಸಿ ಓಡಿಸಲು ವ್ಯರ್ಥ ಪ್ರಯತ್ನ ಕೈಗೊಂಡಿದ್ದಾರೆ. ಸಪ್ಪಳಕ್ಕೆ ಬೆದರಿದ ಮಂಗಗಳು ದಿಕ್ಕಾಪಾಲಾಗಿ ಓಡುವ ಸಂದರ್ಭದಲ್ಲಿ ಹಲವಾರು ಮನೆಗಳ ಹೆಂಚುಗಳು ಜಖಂಗೊಂಡಿದ್ದು, ಇಲ್ಲಿನ ಪ್ರತಿಷ್ಟಿತ ಸುದ್ದಿ ಸಂಸ್ಥೆಗಳಲ್ಲಿ ಒಂದಾಗಿದ್ದ ಡಿಸಿಸಿ ಕಛೇರಿಯ ಅಲ್ಯುಮಿನಿಯಂ ಕೇಬಲ್ ಛತ್ರಿಗಳು, ಹಲವಾರು ಮನೆಗಳ ಟಿ.ವಿ ಆಂಟೇನಾಗಳು, ಮನೆಯ ಮುಂದೆ ನಿಲುಗಡೆ ಮಾಡಲಾಗಿದ್ದ ಕಾರಿನ ಟಾಪ್ ದಾಳಿಗೆ ಸಿಲುಕಿ ಅಪ್ಪಚ್ಚಿಯಾಗಿವೆ.

ವಾನರರ ಅಧ್ವಾನ: ಕೇವಲ ‘ಹಿಸ್’ ಎಂದು ಹಲ್ಲು ಕಿರಿದು ದೊಡ್ಡದಾದ ಕೋರೆ ಹಲ್ಲುಗಳನ್ನು ತೋರಿಸಿ ಮಕ್ಕಳನ್ನು ಹೆದರಿಸುತ್ತ ರಂಪಾಟ ಸೃಷ್ಠಿಸಿರುವ ಮಂಗಗಳಲ್ಲಿ ಕೆಂಪು ಮೂತಿಯ ಮಂಗಗಳು ಆಘಾತಕಾರಿಯಾಗಿ ಪರಿಣಮಿಸಿವೆ. ಈಗಾಗಲೇ ನಗರದ ಸಪ್ತಾಪುರ, ಮಿಚಿಗನ್ ಕಂಪೌಂಡ್ ಹಾಗು ಗಣೇಶನಗರಗಳಲ್ಲಿ ಈ ಮಂಗಗಳು ಜನರನ್ನು ಕಚ್ಚಿದ ಪ್ರಸಂಗಗಳು ಸಹ ವರದಿಯಾಗಿವೆ. ಮನೆಯ ಕಂಪೌಂಡ್ ಗೋಡೆ ಇಲ್ಲವೇ ಮೇಲ್ಛಾವಣಿಯ ಮೇಲೆ ಕುಳಿತುಕೊಂಡು ದಾಳಿ ನಡೆಸುವ ಈ ವಾನರರು ಈ ಮಾನವ ನಿರ್ಮಿತ ಮನೆಗಳು ನಮ್ಮ ಮನೆ ಎಂದು ಹಕ್ಕು ಸಾಧಿಸುತ್ತಿರುವಂತೆ ಮೇಲ್ನೋಟಕ್ಕೆ ತೋರುತ್ತದೆ.

ಕಾರಣ: ಈ ಎರಡೂ ಟೋಳಿಗಳಲ್ಲಿ ಸಾಕಷ್ಟು ಮಂಗಗಳಿದ್ದು, ಅವುಗಳಲ್ಲಿ ಹೆಣ್ಣು ಮಂಗಗಳಿಗೆ ಮುದ್ದಾದ ಅತಿ ಚಿಕ್ಕ ಮರಿಗಳಿವೆ. ಈ ಮರಿಗಳ ಸಂರಕ್ಷಣೆಗಾಗಿ ಕೆಲವೊಮ್ಮೆ ಗಂಡು ಮಂಗಗಳು ಜನರ ಮೇಲೆ ಎರಗುತ್ತಿವೆ. ನಾಯಿಗಳಿಂದಲೂ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಅವು, ವಾಹನಗಳ ಸಂಚಾರ, ಅವುಗಳ ಶಬ್ದ, ಕೆಲವೊಮ್ಮೆ ಅವುಗಳಿಂದ ವಾನರರಿಗೆ ಆದ ಅಪಘಾತ ಇತ್ಯಾದಿಗಳಿಂದ ಸದಾ ಬೆದರಿದಂತೆ ಕಂಡು ಬರುತ್ತಿದ್ದು, ಅನಿವಾರ್ಯವಾಗಿ ತಮ್ಮ ಆತ್ಮರಕ್ಷಣೆಗೋಸ್ಕರ ಜನರ ಮೇಲೆ ಎರಗುತ್ತಿವೆ. ಆದರೂ ಪ್ರಾಣಿ ಪ್ರಿಯರು ಹಾಗು ಕೆಲ ಸಹೃದಯರು
ಅವುಗಳಿಗೆ ಸ್ವಯಂ ಪ್ರೇರಣೆಯಿಂದ ಹಣ್ಣು ಮತ್ತು ಕಾಯಿ ನೀಡಿ ಅವುಗಳ ಸ್ನೇಹ ಸಂಪಾದಿಸಿದ್ದಾರೆ.

ದಾಂಡೇಲಿ ಕಾಡಿನಿಂದ: ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಈ ಕಾನನದ ಮಂಗಗಳು ಈ ಭಾಗದ ಸತತ ೪ ವರ್ಷದ ಬರಗಾಲದಿಂದ ತತ್ತರಿಸಿದ್ದು, ಕಾಡುಗಳಲ್ಲಿ ಕುಡಿಯಲು ನೀರು ಹಾಗು ಗಿಡಗಂಟಿಯಲ್ಲಿ ಯಾವುದೇ ಹಣ್ಣು ಸಿಗದ ಕಾರಣ ಹತಾಶಗೊಂಡು ಸಮೀಪದ ದಾಂಡೇಲಿ ಕಾಡಿನಿಂದ ಊರುಗಳಿಗೆ ತಮ್ಮ ಕುಟುಂಬ ಸಮೇತ ವಲಸೆ ಬಂದಿವೆ ಎನ್ನಲಾಗಿದೆ.

‘ಅಂತೂ ಕೇವಲ ಒಂದು ತಿಂಗಳಲ್ಲಿ ಅವುಗಳ ಉಪಟಳತಾಳಲಾರದೇ ಸಮೀಪದ ಪೊಲೀಸ್ ಠಾಣೆಗೆ, ಅರಣ್ಯ ಇಲಾಖೆಗೆ ಸಾಲದ್ದಕ್ಕೆ ಅಗ್ನಿಶಾಮಕ ದಳದ ಕಚೇರಿಗೆ ಫೋನಾಯಿಸಿದವರ ಸಂಖ್ಯೆ ಅಪಾರ. ಪಾಪ ಮಾನವರಿಗಾದರೆ ಈ ಎಲ್ಲ ಸೌಲಭ್ಯಗಳಿವೆ. ಆದರೆ ಕಳೆದ ೬೦ ವರ್ಷಗಳಿಂದ ಸತತವಾಗಿ ತನ್ನ ಆಸೆ, ದುರಾಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಏಕೈಕ ಉದ್ದೇಶದಿಂದ ಸುತ್ತಮುತ್ತಲಿನ ಪರಿಸರದ ಮೇಲೆ ನಿರಂತರ ಪ್ರಹಾರಗೈಯ್ದ ವಿಚಾರವಂತ ಮಾನವ ಪ್ರಾಣಿಯನ್ನು ಈ ಪೂರ್ವಜರು ಅದೆಷ್ಟು ಸಹಿಸಿಕೊಂಡಿರಬೇಡ. ಈ ಪ್ರತಿಭಟನೆಯಿಂದ ಇನ್ನಾದರೂ ನಾವು ಪಾಠ ಕಲಿಯಬೇಕಿದೆ’ ಎನ್ನುತ್ತಾರೆ ಪರಿಸರವಾದಿ ಮುಕುಂದ ಮೈಗೂರ್.

ಅಂತೂ ಸುಸಂಸ್ಕೃತರ ನಾಡಾದ ಧಾರವಾಡದಲ್ಲಿ ಮುನಿದ ಪೂರ್ವಜರ ಅಧ್ವಾನ ನಮ್ಮೆಲ್ಲರಿಗೆ ಎಚ್ಚರಿಕೆಯ ಕರೆ ಘಂಟೆಯಾಗಿರಬಹುದು! ಅಲ್ಲವೇ?