‘ವಿನಾ ದೈನ್ಯೇನ ಜೀವನಂ..ಅನಾಯಾಸೇನ ಮರಣಂ!’

‘ವಿನಾ ದೈನ್ಯೇನ ಜೀವನಂ..ಅನಾಯಾಸೇನ ಮರಣಂ!’

ಬರಹ

ಶರೀರವೆಂತೆಂಬುವ ಹೊಲವ ಹಸನು ಮಾಡಿ
ಪರತತ್ವ ಬೆಳೆಯನೆ ಬೆಳೆದುಣ್ಣಿರೋ//

ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ
ವಿಮಲಮಾನಸವ ನೇಗಿಲವನೇ ಮಾಡಿ
ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು
ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ//

ಗುರುವರನುಪದೇಶವೆಂಬ ಬೀಜವ ಬಿತ್ತಿ
ಮೆರೆವ ಸಂಸ್ಕಾರ ವೃಷ್ಠಿಯ ಬಲದಿ
ಅರಿವೆಂಬ ಪೈರನೆ ಬೆಳೆಸುತೆ ಮುಸುಗಿರ್ದ
ದುರಿತದುರ್ಗುಣವೆಂಬ ಕಳೆಯನು ಕಿತ್ತು//

ಚಿರಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು
ಪರಮಾನಂದದೊಳು ದಣ್ಣನೆ ದಣಿದು
ಗುರುಸಿದ್ಧನಡಿಗಳಿಗೆರಗುತ್ತ ಭವವೆಂಬ
ಬರವನು ತಮ್ಮ ಸೀಮೆಗೆ ಕಳುಹಿ//

ಸರ್ಪಭೂಷಣ ಶಿವಯೋಗಿಗಳ ಮಾತಿದು. ನಮ್ಮ ಪಾರಂಪರಿಕ ವೈದ್ಯರುಗಳಿಗೆ ಅಕ್ಷರಶ: ಹೋಲುವ ನುಡಿಗಳಿವು. ನಿಜವಾಗಿಯೂ ನಮ್ಮ ಸಮುದಾಯದ ಇಂತಹ ಚಿಕ್ಕ ಚಿಕ್ಕ ಕಿರುದೀಪಗಳೇ ಲೋಕಸಂಸಾರದ ನಿಜ ಕುಲದೀಪಗಳು ಎಂಬುವುದರಲ್ಲಿ ಎರಡು ಮಾತಿಲ್ಲ. ‘ವಿನಾ ದೈನ್ಯೇನ ಜೀವನಂ..ಅನಾಯಾಸೇನ ಮರಣಂ’ ಬದುಕಿನ ಲಕ್ಷ್ಯವಾಗಿಸಿಕೊಂಡಿರುವ ಈ ಹನುಮನ ನಿಷ್ಠೆಯ ನಾಟಿ ವೈದ್ಯರಿಗೆ ಶರಣು ಹೇಳಲೇ ಬೇಕು. ಗ್ರಾಮೀಣ ಭಾರತದ ಆರೋಗ್ಯ ಕಾಪಾಡುವ ಕರ್ತವ್ಯ ನಿಷ್ಠ ಈ ಅಳಲೆಕಾಯಿ ಪಂಡಿತರ ಸ್ವಾರ್ಥವಿಲ್ಲದ ಸಮಾಜಮುಖಿ ಬದುಕು ನನ್ನಂತಹ ಅಕ್ಷರಲೋಕದ ಸ್ವಾರ್ಥಿಗಳಿಗೆ ಪಾಠ.

ಭಾನುವಾರ (೧೭.೦೮.೨೦೦೮) ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕರ್ನಾಟಕದ ಪಾರಂಪರಿಕ ವೈದ್ಯ ಪರಿಷತ್, ಬೆಂಗಳೂರು (ರಿ.೨೨೨/೨೦೦೧-೦೨) ಸಂಚಾಲಿತ ಹಳಿಯಾಳ ತಾಲೂಕು ಪಾರಂಪರಿಕ ವೈದ್ಯ ಪರಿಷತ್ ಘಟಕದ ವತಿಯಿಂದ ಒಂದು ದಿನದ ಪಾರಂಪರಿಕ ವೈದ್ಯರ ಸಮಾವೇಶ ಹಾಗು ಉಚಿತ ಚಿಕಿತ್ಸಾ ಶಿಬಿರ ಜರುಗಿತು.

ಕಳೆದ ನಾಲ್ಕು ವರ್ಷಗಳಲ್ಲಿ ಧಾರವಾಡದ ಕ್ರಿಯಾಶೀಲ ಗೆಳೆಯರು ಬಳಗ ಹಾಕಿದ ಶ್ರಮದ ಫಲವಿದು. ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುತ್ಥಾನ ಪ್ರತಿಷ್ಠಾನ (ಎಫ್.ಆರ್.ಎಲ್.ಎಚ್.ಟಿ.) ನೇಮಕಮಾಡಿದ ಪ್ರಾಚಾರ್ಯ ಅನ್ವೇಷಕ ಪರಿಸರವಾದಿ ಮುಕುಂದ ಮೈಗೂರ ಹಾಗು ಅವರ ಕಾರ್ಯ ಸಂಯೋಜಕ ರಮೇಶ್ ನಾಟಿ ವೈದ್ಯರ ಸಂಘಟನೆಯಲ್ಲಿ ತೋರಿದ ಕಾಳಜಿ, ಶೃದ್ಧೆ ನಿಜಕ್ಕೂ ಶ್ಲಾಘನೀಯ. ಆ ಪ್ರಯತ್ನದ ಫಲವಾಗಿ ಆ ಬೀಜ, ಸಸಿಯಾಗಿ, ಕ್ರಮೇಣ ಮರವಾಗಿ ಬೆಳೆದು, ಸದ್ಯ ಹಣ್ಣು ಕೊಡುವ ಹಂತದಲ್ಲಿದೆ.

ಬಹುತೇಕ ನಾಟಿ ವೈದ್ಯರು ಬಡವರು. ಅಕ್ಷರಶ: ಅವರ ದುಡಿಮೆ ಕೈಗೆ-ಬಾಯಿಗೆ ಸಮ. ಮೂಲ ವೃತ್ತಿ ಕೃಷಿ ಅಥವಾ ಕೃಷಿ ಕೂಲಿ. ನಾಟಿ ವೈದ್ಯಕೀಯ ಅರೆಕಾಲಿಕ. ಅದು ಅವರ ಸಮಾಜಸೇವೆಯ ಭಾಗ. ಹಣಗಳಿಸುವ ಮಾರ್ಗವಲ್ಲ. ಹಣವಿರಲಿ, ಇಲ್ಲದಿರಲಿ ಚಿಕಿತ್ಸೆ ಇಲ್ಲ ಎಂಬುದಿಲ್ಲ. ಅನುಕೂಲ ಅನಾನುಕೂಲ ಲೆಕ್ಕಿಸಿ ರೋಗಿಯ ಮನೆಗೂ ಸ್ವತ: ಹೋಗಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆಯುವ ಉದಾರ ಹೃದಯಿಗಳು ಇವರು. ಕಪಟತನದ ಮಾತೇ ಇಲ್ಲ. ‘ಇದು ನನ್ನ ಕೈಯಿಂದಾಗುವ ಕೆಲಸವಲ್ಲ. ಪಂಢರಾಪುರದ ಚಂದ್ರಭಾಗಾ ನದಿ ತೀರದ ವಿಠೋಬನ ಕೃಪೆ. ಎಂದು ಹಣಕ್ಕೆ ಇದನ್ನು ಮಾರಿಕೊಳ್ಳುತ್ತೇನೆಯೋ ಅಂದಿಗೆ ರೋಗ ಗುಣಪಡಿಸಬಲ್ಲ ನನ್ನ ಶಕ್ತಿ ಉಡುಗಿ ಹೋಗುತ್ತದೆ’ ಎಂದು ವಿನೀತರಾಗಿ ವಿವರಿಸುವ ವೈದ್ಯ ನಾರಾಯಣರು. (ಕಣ್ಣು, ಕಿಡ್ನಿ, ಕರುಳು ಕದಿಯುವ ನಮ್ಮ ಶಿಷ್ಠ, ಶಾಸ್ತ್ರೀಯ ಅಧ್ಯಯನ ಕೈಗೊಂಡಿರುವ ವೈದ್ಯರ ಜೊತೆ ಒಮ್ಮೆ ತುಲನೆ ಮಾಡಿ!)

ಇವರು ನೀಡುವ ಚಿಕಿತ್ಸೆಗಳಿಗೆ ಅಡ್ಡ ಪರಿಣಾಮಗಳಿಲ್ಲ. ಹೆಚ್ಚೆಂದರೆ ವಾಂತಿ, ಬೇಧಿ, ತಲೆ ಸುತ್ತುವುದು ಮಾತ್ರ. ಆಯಾ ಪ್ರದೇಶದಲ್ಲಿ ಹವಾಗುಣ ಮತ್ತು ವಾತಾವರಣಕ್ಕೆ ಅನುಗುಣವಾಗಿ ರೋಗಗಳು ಬರುತ್ತವೆ. ಆಯಾ ರೋಗಗಳಿಗೆ ಸ್ಥಳೀಯವಾಗಿ ಲಭ್ಯವಿರುವ ಔಷಧೀಯ ಸಸ್ಯಗಳೆ ಪರಿಣಾಮಕಾರಿ ಮದ್ದು ಎಂದು ನಂಬಿದವರು ನಾಟಿ ವೈದ್ಯರು. ಮನೆ ಮದ್ದು, ಪಾರಂಪರಿಕ ವೈದ್ಯಕೀಯ ಪದ್ಧತಿಯೇ ಶಾಸ್ತ್ರಬದ್ಧ ಅಥವಾ ಶಿಸ್ತುಬದ್ಧ ಇಂದಿನ ವೈದ್ಯಕೀಯ ವ್ಯಾಸಂಗದ ಅಡಿಪಾಯ ಎಂದು ಬಲವಾಗಿ ಪ್ರತಿಪಾದಿಸುವವರು ಇವರು.

ಅಂದಿನ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆ ಶಿಬಿರದಲ್ಲಿ ಗದುಗಿನ ವೈದ್ಯ ಬಸವರಾಜ ಕೊಂಚಿಗೇರಿ ಅರ್ಧ ತಲೆನೋವು ಶಮನಕ್ಕೆ, ಹುಬ್ಬಳ್ಳಿಯ ಬುಡ್ನಾಳ ಬಳಿಯ ವೈದ್ಯ ವಿ.ಡಿ.ಕಾಂಬ್ಳೆ ಪಿತ್ತ ವಾಯು ವಿಕಾರಕ್ಕೆ, ಸಕ್ಕರೆ ಖಾಯಿಲೆಗೆ ಗುಂಡೋಳ್ಳಿಯ ವೈದ್ಯ ಅರುಣ ಮಿರಾಶಿ, ಎಲುವು-ಕೀಲು ನೋವು ಹಾಗು ಮುರಿತಕ್ಕೆ ಹಳಿಯಾಳದ ವೈದ್ಯ ನಕುಲ ಜಾವಳೆಕರ, ವೈದ್ಯ ಈರಯ್ಯಾ ತಿಮ್ಮಾಪೂರ, ವೈದ್ಯ ಭೀಮರಾವ್ ಕೊರ್ವೇಕರ್, ವೈದ್ಯ ಶಿವಾಜಿ ಸಿಮ್ಮನಗೌಡಾ, ವೈದ್ಯ ಮಹಾದೇವ ಓಲೇಕಾರ್, ಚರ್ಮ ರೋಗಗಳಿಗೆ ಚಿಬ್ಬಲಗೇರಿಯ ವೈದ್ಯ ಶ್ರೀ ಮಾರುತಿ ಶಿಂಧೆ, ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಕಾಳಗಿನಕೊಪ್ಪಾದ ವೈದ್ಯ ಆನಂದ ಸಿಮ್ಮನಗೌಡ, ಶೇಖನಕಾಟ್ಟಾದ ವೈದ್ಯ ಬೂದಪ್ಪ ಕುದತಕರ ಹಾಗು ಕಾಮಾಲೆ ರೋಗಕ್ಕೆ ವೈದ್ಯ ಅಪ್ಪಯ್ಯಾ ಯ.ಗೌಡಾ ಸುಮಾರು ೪೦೦ ಜನ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಔಷಧಿ ವಿತರಿಸಿದರು.

ಹಳಿಯಾಳದ ಶ್ರೀ ಆದಿಶಕ್ತಿ ಪೀಠದ ಸ್ವಾಮೀಜಿ ಕೃಷ್ಣಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದ ಸಮಾರಂಭವನ್ನು ಹಳಿಯಾಳ ಶಾಸಕ ಸುನೀಲ್ ಹೆಗ್ಗಡೆ ಉದ್ಗಾಟಿಸಿದರು. ಕರ್ನಾಟಕ ವೈದ್ಯ ಪರಿಷತ್ ರಾಜ್ಯಾಧ್ಯಕ್ಷ ಬಸವರಾಜ್ ಕೊಂಚಿಗೇರಿ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಚಿಕ್ಕಪ್ಪಯ್ಯ ವಿಶೇಷ ಆಹ್ವಾನಿತರಾಗಿದ್ದರು. ಮುಖ್ಯ ಅತಿಥಿಗಳಾಗಿ ಗುಂದ ಸೇವಾಳಿಯ ರಾಜ ವೈದ್ಯ ಶ್ರೀಧರ ದೇಸಾಯಿ, ಕ್ರಿಯಾಶೀಲ ಗೆಳೆಯರು ಬಳಗದ ಅಧ್ಯಕ್ಷ ಮುಕುಂದ ಮೈಗೂರ್, ಪರಿಷತ್ತಿನ ಕಾರ್ಯದರ್ಶಿ, ಗದುಗಿನ ವೈದ್ಯ ಶ್ರೀಧರ ದೇಶಪಾಂಡೆ, ಕೋಶಾಧ್ಯಕ್ಷ ಚಿಕ್ಕಮಗಳೂರಿನ ವೈದ್ಯ ಮಲ್ಲಪ್ಪ ಪಾಲ್ಗೊಂಡಿದ್ದರು. ವಿಶೇಷ ಆಮಂತ್ರಿತರಾಗಿ ಯಲಾಪೂರದ ವೈದ್ಯ ನರಸಿಂಹ ಗೇರಗದ್ದೆ, ಹೊನ್ನಾವರ ಖರವಾದ ವೈದ್ಯ ಗೋಪಾಲ್ ಭಟ್, ಯಲಾಪೂರ ಹಳೆಮನೆಯ ವೈದ್ಯ ವಿಶ್ವನಾಥ ಮಾ. ಭಟ್, ಗೋಕರ್ಣ ಅಶೋಕವನದ ವೈದ್ಯ ಏ.ಎಸ್.ಶರ್ಮಾ, ಶಿರಸಿಯ ಕೇಸರಕೊಪ್ಪದ ವೈದ್ಯ ವಿಶ್ವನಾಥ ಹೆಗ್ಗಡೆ ಉಪಸ್ಥಿತರಿದ್ದರು.

ವಿಷಯ ಪ್ರವೇಶ ಭಾಷಣ ಮಾಡಿದ ಮುಕುಂದ ಮೈಗೂರ್ ಅವರು, ನಮ್ಮ ಪಾರಂಪರಿಕ ವೈದ್ಯಕೀಯ ಪದ್ಧತಿಯ ವೈದ್ಯರ ಜ್ನಾನಕ್ಕೆ ‘ಪೇಟೆಂಟ್’ ದೊರಕಿಸಿಕೊಡುವ ತುರ್ತು ಕಾರ್ಯ ನಡೆಯಬೇಕಿರುವುದರಿಂದ ಚಿಕಿತ್ಸೆ ಹಾಗು ಔಷಧಿ ಮಾಹಿತಿಯ ದಾಖಲೀಕರಣ ಪ್ರಕ್ರಿಯೆ ಚಾಲನೆಯಲ್ಲಿದೆ. ವೈದ್ಯರು ತಮ್ಮಲ್ಲಿರುವ ಜ್ನಾನವನ್ನು ತಮ್ಮ ಮನೆಯ ಒಬ್ಬ ವಾರುಸುದಾರನಿಗಾದರೂ ಅಕಲಿಸಿ ಕೊಟ್ಟಲ್ಲಿ ಈ ಪದ್ಧತಿ ಬದುಕಿಕೊಳ್ಳುತ್ತದೆ. ಸರಕಾರದ ಹಂತದಲ್ಲಿ ಈ ಪ್ರಕ್ರಿಯೆಗೆ ಚಾಲನೆ ಕೊಡುವ ಬದಲು ನಾಟಿ ವೈದ್ಯರೇ ಸಂಘಟಿತರಾಗಿ ಈ ಪ್ರಯತ್ನಕ್ಕೆ ಚಾಲನೆ ನೀಡಲಿ. ಯಾರಾದರೂ ಪೇಟೆಂಟ್ ನೆಪದಲ್ಲಿ ಹಕ್ಕು ಸಾಧಿಸಲು ಹೊರಟರೆ ಮೂಗುದಾರ ಹಾಕಲು ಈ ಮೌಲ್ಯವರ್ಧಿತ ಕಾರ್ಯ ಪೂರಕವಾಗಿ ಸ್ಪಂದಿಸಲಿದೆ. ಇಲ್ಲದಿದ್ದರೆ ಕ್ರಮೇಣ ಪಶ್ಚಿಮ ಘಟ್ಟದ ಕಾಡುಗಳು ಕ್ಷೀಣಿಸಿದ ರೀತಿಯಲ್ಲಿ ಇದು ಕೂಡ ಅಂತ್ಯಕಾಣಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಉದ್ಘಾಟನಾ ಭಾಷಣ ಮಾಡಿದ ಶಾಸಕ ಸುನೀಲ್ ಹೆಗಡೆ ಅವರು, ಸರಕಾರಕ್ಕೆ ಹಾಗು ಅಲ್ಲಿನ ಮಂತ್ರಿಗಳಿಗೆ ಯೋಜನೆ ರೂಪಿಸುವಾಗ ಸಲಹೆ, ಸೂಚನೆ ನೀಡಿ ಕಾಯ್ದೆ-ಕಾನೂನುಗಳ ಬಗ್ಗೆ ಮಾರ್ಗದರ್ಶನ ಮಾಡುವವರು ಐ.ಎ.ಎಸ್ ಅಧಿಕಾರಿಗಳು. ದುರದೃಷ್ಠವಶಾತ್ ಅವರಿಗೆ ಈ ಪದ್ಧತಿಗಳಲ್ಲಿ ನಂಬಿಕೆ ಇಲ್ಲ. ಗ್ರಾಮೀಣ ಭಾರತದ ಆರೋಗ್ಯ ಕಾಪಾಡುವ ಈ ನಾಟಿ ವೈದ್ಯರ ಕೊಡುಗೆ ಅವರಿಗಿನ್ನೂ ಅರ್ಥವಾದಂತಿಲ್ಲ. ಅವರಿಗೆ ಅರ್ಥ ಮಾಡಿಸುವ ಪ್ರಯತ್ನಗಳಿಗೂ ಚಾಲನೆ ಸಿಕ್ಕಿಲ್ಲ. ಜನಪ್ರತಿನಿಧಿಗಳಾದ ನಮಗೆ ಇದು ನುಂಗಲಾಗದ ಬಿಸಿ ತುಪ್ಪ. ವ್ಯವಸ್ಥೆ ಹೇಗೆ ರೂಪುಗೊಂಡಿದೆ ಎಂದರೆ ಬ್ರಿಟೀಷ್ ಪದ್ಧತಿಯ ಆಲೋಪಥಿ ಔಷಧಿಯೊಂದೇ ಮದ್ದು ಬಾಕಿ ಎಲ್ಲ ಯುನಾನಿ, ಟಿಬೇಟಾನ್, ಸಿದ್ಧ, ಆಯುರ್ವೇದ, ಹೋಮಿಯೋಪಥಿ ಪದ್ಧತಿಗಳು ಢೋಂಗಿ ಎಂದು ಬಿಂಬಿಸುವ, ವೈದ್ಯರು ನಕಲಿ ಎಂದು ಪ್ರತಿಪಾದಿಸುವ ಕೆಲಸ ಹೇರಳವಾಗಿ ನಡೆದಿದೆ. ಅವರ ಚಿಕಿತ್ಸೆ ಪದ್ಧತಿ ಹಾಗು ಔಷಧೀಯ ಮೌಲ್ಯಗಳ ಧೃಢೀಕರಣಕ್ಕೆ ನಮ್ಮಲ್ಲಿ ಸರಿಯಾದ ಅಳತೆಗೋಲುಗಳಿಲ್ಲ. ಈ ಹಂತದಲ್ಲಿ ಸರಕಾರದೊಂದಿಗೆ, ಸಂಬಂಧಪಟ್ಟ ಇಲಾಖೆಗಳೊಂದಿಗೆ ನಾಟಿ ವೈದ್ಯರು ಮುಂದೆ ಬಂದು ಕೈಜೋಡಿಸಿ ನಿಂತರೆ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಬೌದ್ಧಿಕವಾಗಿಯೂ ಸಬಲರಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಹಳಿಯಾಳ ತಾಲ್ಲೂಕು ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ, ಸಮಾವೇಶದ ರುವಾರಿ, ಮಂಗಳವಾಡದ ವೈದ್ಯ ಓಮಣ್ಣ ವಾಲೇಕರ್ ಈ ಸಂದರ್ಭದಲ್ಲಿ ಶಾಸಕರಿಗೆ ವೈದ್ಯರುಗಳ ಪರವಾಗಿ ಮನವಿ ಸಲ್ಲಿಸಿ, ಹಳೆಯ ರೋಗಗಳಿಗೆ ಮಾತ್ರವಲ್ಲದೇ ಈ ಕಾಲದ ಹೊಸ ರೋಗಗಳಿಗೆ ಸಮರ್ಥವಾಗಿ ಚಿಕಿತ್ಸೆ ನೀಡಬಲ್ಲವರಾಗಿದ್ದಾರೆ. ನಶಿಸಿ ಹೋಗುತ್ತಿರುವ ಈ ವೈದ್ಯ ಪದ್ಧತಿ ಉಳಿಸಿ ಬೆಳೆಸಲು ರಾಜಾಶ್ರಯ ಲಭ್ಯವಿಲ್ಲದ ಕಾರಣ ಸರಕಾರಿ ಆಶ್ರಯ ಬೇಡುತ್ತಿರುವುದಾಗಿ ಹೇಳಿದರು. ಅವರು ಪಟ್ಟಿ ಮಾಡಿದ ಬೇಡಿಕೆಗಳು.. *ಔಷಧೀಯ ಸಸ್ಯಗಳನ್ನು ನಾಟಿ ವೈದ್ಯರು ಬೆಳೆಸಿಕೊಳ್ಳಲು ಸ್ಥಳಾವಕಾಶ ಪೂರೈಸುವುದು. *ವೈದ್ಯರಿಗೆ ಬೇರೆ ಬೇರೆ ಜಾತಿಯ ವಿವಿಧ ಪ್ರದೇಶದ ಔಷಧೀಯ ಸಸ್ಯಗಳ ಪರಿಚಯ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು. *ಹಳಿಯಾಳದಲ್ಲ್ಲಿ ಆಯುರ್ವೇದ ಸೇವಾ ಭವನ ನಿರ್ಮಿಸುವುದು. *ಫಲಾಪೇಕ್ಷೆಯಿಲ್ಲದೇ ಕಳೆದ ಹಲವಾರು ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತ ಬಂದಿರುವ ವಯೋವೃದ್ಧ, ಜ್ನಾನವೃದ್ಧ ಪಾರಂಪರಿಕ ವೈದ್ಯರಿಗೆ ಗೌರವಧನ, ಮಾಸಾಶನ ಮಂಜೂರು ಮಾಡುವುದು. *ವರ್ಷಕ್ಕೊಮ್ಮೆ ನಾಟಿ ವೈದ್ಯರ ಸಮ್ಮೇಳನ, ಸಮಾವೇಶ, ಕಾರ್ಯಾಗಾರಗಳನ್ನು ನೆರವೇರಿಸಲು ಸರಕಾರದಿಂದ ಧನ ಸಹಾಯ ಪರಿಷತ್ತಿಗೆ ಒದಗಿಸಿಕೊಡುವುದು.

ಪಾಲ್ಗೊಂಡ ಎಲ್ಲರಿಗೂ ಊಟ, ವಸತಿಯ ವ್ಯವಸ್ಥೆ, ಎಲ್ಲ ನಾಟಿ ವೈದ್ಯರಿಗೆ ಹೆಸರು ನೋಂದಾಯಿಸಿದ ಪ್ರಮಾಣಪತ್ರ ವಿತರಣೆ ಹಾಗು ಅವರ ಸೇವಾತತ್ಪರತೆ ಗುರುತಿಸಿ ಶಾಲು ಹೊದಿಸಿ ಸನ್ಮಾನಿಸುವ ವಿಶೇಷ ಕಾರ್ಯಕ್ರಮ ಜರುಗಿತು. ಮಾಧ್ಯಮದವರು ಒಬ್ಬರೂ ಅಲ್ಲಿ ಕಾಣಿಸಲಿಲ್ಲ. ಯಾರೋ ಖಾಸಗಿ ಛಾಯಾಗ್ರಾಹಕ ಬಂದು ಕೆಲ ಛಾಯಾಚಿತ್ರ ದಾಖಲಿಸಿಕೊಂಡರು. ಮಾರನೆಯ ದಿನ ಸೋಮವಾರ ಸ್ಥಳೀಯ ಪತ್ರಿಕೆಗಳಲ್ಲಿ ಸಂಕ್ಷಿಪ್ತ ಸುದ್ದಿಯಾಗಿ ಇದು ಪ್ರಕಟಗೊಂಡಿತ್ತು. ಕೆಲವರು ಉದ್ಘಾಟನೆಯ ಛಾಯಾಚಿತ್ರ ಮಾತ್ರ ಪ್ರಕಟಿಸಿ ಕೈ ತೊಳೆದುಕೊಂಡರು. ಅಂತೂ ರಾಜ್ಯವ್ಯಾಪಿ ಸುದ್ದಿಯಾಗಬೇಕಿದ್ದ ಪಾರಂಪರಿಕ ವೈದ್ಯರ ಹಕ್ಕೊತ್ತಾಯದ ಸಮಾವೇಶ ಮಾಧ್ಯಮಗಳಲ್ಲಿ ಸಮಾಧಿಯಾಯಿತು. ಇದು ನನ್ನ ಸಮಾಧಾನಕ್ಕೆ ಸಂಪದದಲ್ಲಿ. ಛಾಯಾಚಿತ್ರಗಳನ್ನು ಸಹೃದಯ ಸಂಪದಿಗರು ಪರಾಮರ್ಶಿಸಿದರೆ ಸಮಾವೇಶದ ಭವ್ಯತೆ, ವೈದ್ಯರ ಸಂಘಟನಾ ಶಕ್ತಿ ಗೋಚರಿಸುತ್ತದೆ ಎಂಬ ನಂಬಿಕೆ ನನ್ನದು.

ಈ ಸಮಾವೇಶದ ರುವಾರಿ ಮುಕುಂದ ಮೈಗೂರ್ ಅವರ ಉಮ್ಮೇದಿ ನೋಡಬೇಕಿತ್ತು. ತಮ್ಮ ಕಾಲುಗಳ ಮೇಲೆ ತಾವು ಸಮರ್ಥರಾಗಿ ಪಾರಂಪರಿಕ ವೈದ್ಯರು ನಿಲ್ಲುವಷ್ಟು ಎತ್ತರಕ್ಕೆ ಬೆಳೆದಿದ್ದು, ಬೆಳಗಿದ್ದು ಅವರ ಕಣ್ಣುಗಳಲ್ಲಿ ಹೊಸ ವಿಶ್ವಾಸವನ್ನು ಹುಟ್ಟುಹಾಕಿತ್ತು. ನಮ್ಮಮ್ಮ ಸೂಲಗಿತ್ತಿ ಹುಣಸವಾಡಿಯ ಮಲ್ಲಮ್ಮ ಪೂಜಾರಿ ಸಹ ಪಾಲ್ಗೊಂಡಿದ್ದು ವಿಶೇಷ.