‘ಸಂಪದ’ ನಗೆ ಬುಗ್ಗೆ - ಭಾಗ ೩೭

‘ಸಂಪದ’ ನಗೆ ಬುಗ್ಗೆ - ಭಾಗ ೩೭

ಜಗಳ

ಜಗಳವಾಡಿ ಮೂರ್ ದಿನ ಆಗಿತ್ತು. ಶ್ರೀಮತಿ ತನ್ನ ಗಂಡ ಗಾಂಪನ ಜೊತೆ ಮಾತು ಬಿಟ್ಟಿದ್ದಳು. ಎಷ್ಟೂಂತ ಬಾಯಿ ಮುಚ್ಕೊಂಡಿರಕಾಗುತ್ತೆ ಪಾಪ ಶ್ರೀಮತಿಗೆ. ಬಾಯಿ ನೋಯಕ್ಕೆ ಶುರುವಾಯ್ತು.

ಕಡೆಗೆ ಶ್ರೀಮತಿ ಅಂದ್ಲು: "ಏನೋ ಗಂಡ ಹೆಂಡತಿ ಅಂದ್ರೆ ಒಂದ್ ಮಾತು ಬರುತ್ತೆ ಒಂದು ಹೋಗುತ್ತೆ. ಅದಕ್ಕೇ ಇಷ್ಟ್ ದಿನ ಬಾಯ್ಮುಚ್ಕೊಂಡಿರ್ಬೇಕಾ? ಇವಾಗ ನಾನು ಹತ್ತರವರೆಗೂ ಎಣಿಸ್ತೀನಿ. ಮಾತಾಡಿಲ್ಲಾಂದ್ರೆ ನಮ್ಮಮ್ಮನ ಮನೆಗೆ ಹೋಗ್ತೀನಿ ಅಷ್ಟೇ”

ಹತ್ ನಿಮಿಷ ಆದ್ರೂ ಗಂಡ ಕಮಕ್ ಕಿಮಕ್ಕನ್ಲಿಲ್ಲ. ಶ್ರೀಮತಿ ಎಣಿಸೋಕೆ ಶುರು ಹಚ್ಕೊಂಡ್ಲು.

ಒನ್.. ಟೂ.. ಥ್ರೀ..

ಉಹೂಂ. ಗಾಂಪ ಗಪ್ ಚುಪ್ 

ಶ್ರೀಮತಿ ಹತ್ತು ನಿಮಿಷ ಬಿಟ್ಟು.. 

ಫೋರ್.. ಫೈವ್.. ಅಂದ್ಲು. 

ಗಾಂಪ.. ಉಹೂಂ. ಬಾಯಿ ಬಿಡಲಿಲ್ಲ. 

ಸಿಕ್ಸ್.. ಸೆವೆನ್.. 

(ಗಾಂಪ ಒಳಗೊಳಗೇ ಹಿಗ್ಗಿ ಹೀರೇಕಾಯಿ ಆಗಿದ್ದರೂ ತೋರಿಸಿಕೊಳ್ಳಲಿಲ್ಲ). 

ಕ್ಲೈಮ್ಯಾಕ್ಸು.. ಕೊನೆಯ ಹಂತಕ್ಕೆ..  ಎಯ್ಟ್ ಅಂದ್ಲು ಶ್ರೀಮತಿ.. 

ಉಹೂಂ.. ಗಾಂಪ ಚುಪ್ ಚಾಪ್.

ನೈನ್..

(ಗಾಂಪನಿಗೆ ಎದ್ದು ಕುಣಿಯೋವಷ್ಟು ಖುಷಿ).

ಶ್ರೀಮತಿ ಏನ್ಮಾಡಿದ್ಲು ಅಂದ್ರೆ..

ಎಲೆವನ್ ಅಂತ ಅಂದ್ಲು

ಗಾಂಪಂಗೆ ಕೋಪ ಬಂತು "ಲೇಯ್ ಸರಿಯಾಗಿ ಎಣಿಸೋಕು ಬರಲ್ವಲ್ಲೆ, ನಿನಗೆ  ನೈನ್ ಆದಮೇಲೆ ಟೆನ್ ಬರುತ್ತೆ ಅಷ್ಟು ಗೊತ್ತಾಗಲ್ವೆ" ಅಂತ ಕಿರುಚಿದ,

ಶ್ರೀಮತಿ ಅಂದ್ಲು.. "ಅಬ್ಬಾ!! ದೇವ್ರು ದೊಡ್ಡೋನು ಕಂಡ್ರೀ.. ಟೆನ್ ಅಂತ ಹೇಳುವುದರ ಒಳಗೇ ನೀವು ಬಾಯಿ ಬಿಟ್ರಿ. ಇಲ್ದಿದ್ದರೆ ನಮ್ಮಮ್ಮನ ಮನೆಗೆ ಹೋಗ್ತಿದ್ದೆ. ಪಾಪ ನಿಮಗೆಷ್ಟು ತೊಂದರೆ ಆಗ್ತಿತ್ತು ಅಲ್ವಾ! ಸ್ವಲ್ಪತಾಳಿ ಇದೇ ಖುಷೀಲಿ ಒಳ್ಳೆಯ ಪಾಯಸ ಮಾಡ್ತೀನಿ" ಅಂತ ಕಿಚನ್ನಿಗೆ ಓಡಿ ಹೋದ್ಲು..! 

ಗಾಂಪ ಈ ಘಟನೆಯನ್ನು ತನ್ನ ಆತ್ಮಚರಿತ್ರೆಯಲ್ಲಿ "ತಾಳ್ಮೆ ಕಳೆದುಕೊಳ್ಳುವುದರಿಂದ ಆಗುವ ಅನಾಹುತಗಳು" ಎಂಬ ಅಧ್ಯಾಯದಲ್ಲಿ ಸೇರಿಸಿದ್ದಾನಂತೆ. 

***

ಅದೃಷ್ಟಶಾಲಿ

ಹೆಂಡತಿ: ರೀ, ನನ್ನನ್ನು ಮದುವೆ ಆದ ಮೇಲೆ, ನಿಮಗಿಂತ ತುಂಬಾ ಅದೃಷ್ಟಶಾಲಿಗಳು ಬೇರೆ ಯಾರಾದ್ರೂ ಇದ್ದಾರೆ ಅಂತಾ ಅನಿಸುತ್ತಾ ನಿಮಗೆ?

ಗಂಡ: ಒಬ್ಬನು ಇದ್ದಾನೆ ಕಣೇ, ನನಗಿಂತ ಮೊದಲು ನಿನ್ನನ್ನು ನೋಡಿ ನಿರಾಕರಿಸಿದನಲ್ಲಾ ಅವನು!

***

ನೈಟ್ ವಾಚ್ ಮೆನ್

ಸೂರಿ: ಸಾರ್ ನೈಟ್ ವಾಚ್‌ಮೆನ್ ಕೆಲಸಕ್ಕೆ ಜನ ಬೇಕು ಅಂತಿದ್ರಲ್ಲಾ ಕರೆದುಕೊಂಡು ಬಂದಿದ್ದೇನೆ ನೋಡಿ.

ಯಜಮಾನ: ರಾತ್ರಿ ಮಲಗಿಕೊಳ್ಳದೇ ಡ್ಯೂಟಿ ಮಾಡುತ್ತಾನೆ ಅನ್ನೋದಕ್ಕೆ ಏನು ಗ್ಯಾರಂಟಿ ಇದೆ?

ಸೂರಿ: ಎಲ್ಲಾ ವಿವರಗಳನ್ನು ಚೆಕ್ ಮಾಡಿಕೊಂಡೇ ಬಂದಿದ್ದೇನೆ ಸರ್

ಯಜಮಾನ: ಏನು ವಿವರ?

ಸೂರಿ: ಕಳೆದ ಮೂರು ವರ್ಷದ ವಾಟ್ಸಪ್ ಮೆಸೇಜ್, ಫೇಸ್‌ಬುಕ್ ಕಮೆಂಟ್ಸ್ ಎಲ್ಲವೂ ರಾತ್ರಿ ೧೦ ರಿಂದ ಬೆಳಿಗ್ಗೆ ೬ ಗಂಟೆಯ ಒಳಗೇ ಮಾಡಿದ್ದಾನೆ ಸರ್!

***

ಒಳ್ಳೇ ಸಮಯ

ಹುಡುಗಿ: ಸಾರಿ ಕಣೋ, ನನಗೆ ಬೇರೆ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿದೆ. ನನ್ನ ಮರೆತು ಬಿಡು.

ಹುಡುಗ: ಏನೂ ಪರವಾಗಿಲ್ಲ ಕಣೇ, ನನಗಿದು ಮೊದಲೇ ಗೊತ್ತಿತ್ತು.

ಹುಡುಗಿ: ಹೇಗೆ ಗೊತ್ತಾಯ್ತು?

ಹುಡುಗ: ನನಗೆ ಒಬ್ಬ ಜ್ಯೋತಿಷಿ ಹೇಳಿದ್ದ ನಿನ್ನ ಕೆಟ್ಟ ದಿನಗಳೆಲ್ಲಾ ಮುಗಿದವು, ಇನ್ನು ಒಳ್ಳೆ ಸಮಯ ಪ್ರಾರಂಭವಾಗುತ್ತೆ ಅಂತ!

***

ಕವನ !

ಹುಡುಗಿ: ಒಂದು ಕವನ ಹೇಳು ಪ್ಲೀಸ್,

ಹುಡುಗ: ನಿನ್ನ ನೋಡಿದಾಗ ನಾನನ್ನ ಮರೆತೆ..

ಹುಡುಗಿ: ವಾಹ್, ಸೂಪರ್ ಮುಂದೆ?

ಹುಡುಗ: ನಿನ್ನ ತಂಗಿಯನ್ನು ನೋಡಿದ್ಮೇಲೆ ನಿನ್ನನ್ನೇ ಮರೆತೆ!!

***

ಇಷ್ಟವಾದ ವಸ್ತು !

ಕಾಶಿ ಯಾತ್ರೆಯ ಪ್ರವಾಸದ ಬಸ್‌ನಲ್ಲಿ ಟೂರ್ ಮೇನೇಜರ್ ಪ್ರವಾಸಿಗರನ್ನು ಉದ್ದೇಶಿಸಿ ಹೇಳಿದ: ನಿಮಗೆಲ್ಲಾ ಇಷ್ಟವಾದ ವಿಷಯ, ವಸ್ತುಗಳನ್ನು ಒಂದು ಪೇಪರ್‌ನಲ್ಲಿ ಬರೆದು ಮುಚ್ಚಿಡಿ.

ಎಲ್ಲರೂ ಐಸ್‌ಕ್ರೀಂ, ಟೀ, ಮಸಾಲೆ ದೋಸೆ, ಬಾಳೆಹಣ್ಣು... ಹೀಗೆ ಬರೆದರು. ಆ ಚೀಟಿಗಳನ್ನೆಲ್ಲಾ ತೆಗೆದುಕೊಂಡ ಮೇನೇಜರ್ ಹೇಳಿದ ನೀವು ಬರೆದ ನಿಮಗೆ ಇಷ್ಟವಾದ ವಸ್ತುವನ್ನು ನೀವು ಕಾಶಿಯಲ್ಲಿ ಬಿಟ್ಟು ಹೋಗಿ.

ಇದನ್ನು ಕೇಳುತ್ತಲೇ ಸೂರಿ ಖುಷಿಯಿಂದ ಕುಣಿದಾಡಿದ, ಯಾಕೆಂದರೆ ಅವನು ಚೀಟಿಯಲ್ಲಿ ಬರೆದದ್ದು-ಹೆಂಡತಿ!

***

(ಸಂಗ್ರಹ) ಚಿತ್ರ ಕೃಪೆ: ಅಂತರ್ಜಾಲ ತಾಣ