‘ಸಂಪದ' ನಗೆ ಬುಗ್ಗೆ - ಭಾಗ ೬೯
ನಾಯಿಯ ನಿದ್ರೆ !
ಒಂದು ದಿನ ಮಧ್ಯಾಹ್ನ ಒಂದು ಸುಂದರವಾದ ನಾಯಿಮರಿ ಅಷ್ಟೇ ಸುಂದರವಾಗಿರೋ ಶ್ರೀಮತಿ ಮನೆಗೆ ಬಂತು. ಮನೆ ಬಾಗಿಲ ಹತ್ರಾನೇ ನಿಂತುಕೊಂಡಿದ್ದ ನಾಯಿ ಮರಿ ನೋಡಿ, ಅದರ ತಲೆ ಸವರಿದಳು ಶ್ರೀಮತಿ. ನಾಯಿ ಮೆಲ್ಲನೇ ಮನೆ ಒಳಗೆ ಬಂತು. ಆ ಕಡೆ ಈ ಕಡೆ ನೋಡಿ ಒಂದು ಪ್ರಶಸ್ತವಾದ ಮೂಲೆಯಲ್ಲಿ ಹೋಗಿ ಮಲಗಿ ಬಿಟ್ಟಿತು. ಒಂದೆರಡು ಗಂಟೆಗಳ ಮೇಲೆ ಎದ್ದು ನಿಂತ ನಾಯಿಯನ್ನು ನೋಡಿ ಶ್ರೀಮತಿ ಬಾಗಿಲು ತೆರೆದಳು. ಅವಳನ್ನೇ ಹಿಂಬಾಲಿಸಿದ ನಾಯಿಮರಿ ಬಾಗಿಲು ತೆರೆದ ಕೂಡಲೇ ಹೊರಟು ಹೋಯಿತು. ಮರುದಿನ ಪಕ್ಕಾ ಅದೇ ಸಮಯಕ್ಕೆ ಮತ್ತೆ ನಾಯಿ ಮರಿ ಶ್ರೀಮತಿಯ ಮನೆ ಮುಂದೆ ಹಾಜರು. ಬಾಗಿಲು ತೆರೆದ ಕೂಡಲೇ ಮುನ್ನಾ ದಿನ ಮಲಗಿದ್ದ ಅದೇ ಜಾಗಕ್ಕೆ ತೆರಳಿ ಎರಡು ಗಂಟೆ ಮಲಗಿ ಮತ್ತೆ ಮರಳಿ ಹೋಯಿತು. ಹೀಗೇ ಒಂದು ವಾರ ನಡೆಯಿತು. ನಾಯಿ ಮರಿ ಬಹಳ ಮುದ್ದಾಗಿತ್ತು, ಯಾವುದೇ ತಂಟೆ ತಕರಾರು ಮಾಡುತ್ತಿರಲಿಲ್ಲ. ಯಾರ ನಾಯಿ ಮರಿ ಎಂದು ತಿಳಿದುಕೊಳ್ಳುವ ಕುತೂಹಲದಿಂದ ಶ್ರೀಮತಿ ಒಂದು ಚೀಟಿಯಲ್ಲಿ ‘ನಾಯಿಯ ಮಾಲಕರ ಗಮನಕ್ಕೆ, ಈ ನಾಯಿ ಯಾರದ್ದೋ ಗೊತ್ತಿಲ್ಲ. ಇದು ಪ್ರತಿ ದಿನ ಮಧ್ಯಾಹ್ನ ನಮ್ಮ ಮನೆಗೆ ಬಂದು ನಿದ್ದೆ ಮಾಡಿ ಹೋಗುತ್ತದೆ. ನನಗೆ ಏನೂ ಅರ್ಥವಾಗುತ್ತಿಲ್ಲ" ಎಂದು ಬರೆದು ನಾಯಿ ಮರಿಯ ಕುತ್ತಿಗೆಗೆ ಕಟ್ಟಿ ಕಳಿಸಿದಳು. ಮರು ದಿನವೂ ಆ ನಾಯಿ ಮರಿ ಅದೇ ಸಮಯಕ್ಕೆ ಬಂತು. ಅದರ ಕುತ್ತಿಗೆಯಲ್ಲಿ ಇನ್ನೊಂದು ಚೀಟಿ ಇತ್ತು. ಅದರಲ್ಲಿ ಬರೆದಿತ್ತು “ಇದು ನಮ್ಮನೆ ನಾಯಿ ಮರಿ. ಮನೆಯಲ್ಲಿ ಸದಾ ವಟಗುಟ್ಟುವ ಮಾಡುವ ನನ್ನ ಹೆಂಡತಿಯ ಮಾತುಗಳನ್ನು ಕೇಳಲಾಗದೇ, ಮದ್ಯಾಹ್ನದ ನೆಮ್ಮದಿಯ ನಿದ್ರೆಗಾಗಿ ನಿಮ್ಮ ಮನೆಗೆ ಬರುತ್ತಿದೆ. ಅಂದ ಹಾಗೆ ನಿಮಗೆ ಅಭ್ಯಂತರ ಇಲ್ಲದೇ ಹೋದರೆ, ನಾಳೆಯಿಂದ ನಾಯಿ ಜೊತೆ ನಾನೂ ಬರ್ಲಾ?”
***
ಪ್ರಯೋಜನಕಾರಿ ಪುಸ್ತಕ
ಟೀಚರ್: ಗಾಂಪ ನಿನಗೆ ಯಾವ ಪುಸ್ತಕ ಜೀವನದಲ್ಲಿ ತುಂಬಾ ಮಹತ್ವದ್ದು ಹಾಗೂ ತುಂಬಾ ಪ್ರಯೋಜನಕಾರಿ ಅನಿಸುತ್ತದೆ?
ಗಾಂಪ: ಟೀಚರ್ ನನಗೆ ನಮ್ಮಪ್ಪನ ಚೆಕ್ ಪುಸ್ತಕ ತುಂಬಾ ಮಹತ್ವದ್ದು ಮತ್ತು ಪ್ರಯೋಜನಕಾರಿ ಅನಿಸುತ್ತದೆ!
***
ಹೆಬ್ಬಟ್ಟು ಸಹಿ!
ಶಿಕ್ಷಕಿ: ಗಾಂಪಾ, ಏನು ನಿನ್ನ ಅಪ್ಪ-ಅಮ್ಮ ಅಕ್ಷರ ಕಲಿತಿಲ್ವಾ?
ಗಾಂಪ: ಯಾಕೆ ಟೀಚರ್?
ಶಿಕ್ಷಕಿ: ನೋಡಿಲ್ಲಿ, ನಿನ್ನ ಅಮ್ಮ ನಿಮ್ಮ ಮಾರ್ಕ್ಸ್ ಕಾರ್ಡ್ ನಲ್ಲಿ ಸಹಿ ಮಾಡದೇ ಹೆಬ್ಬೆಟ್ಟು ಒತ್ತಿದ್ದಾರೆ.
ಗಾಂಪ: ಓ ಅದಾ, ಟೀಚರ್, ಅದು ಹಾಗಲ್ಲ, ಏನೂ ಓದಲು ಬರೆಯಲು ಬಾರದ ಅಪ್ಪ-ಅಮ್ಮ ಇದ್ದರೂ ಎಷ್ಟು ಒಳ್ಳೆಯ ಅಂಕಗಳನ್ನು ತೆಗೆದುಕೊಂಡಿದ್ದಾನೆ ಎಂದು ನೀವು ನನ್ನ ಮೆಚ್ಚಿಕೊಳ್ಳಲಿ ಅಂತ ನಾನೇ ಹೆಬ್ಬೆಟ್ಟು ಒತ್ತಿದ್ದು !
***
ಮನೆ ಮೇಲೆ ಲೋನ್ !
ತನ್ನ ಕರೆಗೆ ಓಗೊಟ್ಟು ಬಂದಿದ್ದ ಬ್ಯಾಂಕ್ ಅಧಿಕಾರಿಯನ್ನು ಗಾಂಪ ತಮ್ಮ ಮನೆಯ ಮೇಲೆ ಕರೆದುಕೊಂಡು ಹೋದ.
ಅಧಿಕಾರಿ: ಮನೆಯ ಒಳಗೇ ಕೂತು ಮಾತನಾಡಬಹುದಿತ್ತಲ್ಲ?
ಗಾಂಪ: ‘ನೀವು ಮನೆ ಮೇಲೆ ಲೋನ್ ಗೆ ಸಂಪರ್ಕಿಸಿ' ಅಂತ ಕರಪತ್ರದಲ್ಲಿ ಬರೆದಿದ್ರಲ್ಲಾ, ಅದಕ್ಕೇ ಮನೆ ಮೇಲೆ ಕರೆದುಕೊಂಡು ಬಂದೆ !
***
ಮತದಾನದ ಪ್ರಮಾಣ
ಮತದಾನದ ಪ್ರಮಾಣ ಐವತ್ತು ಶೇಕಡಾ ಮಾತ್ರ ಆಗಿತ್ತು. ಮತದಾನದ ಅಧಿಕಾರಿ ತನ್ನ ಸಿಬ್ಬಂದಿಯ ಸಭೆಯಲ್ಲಿ,”ಮತದಾನ ನೂರು ಶೇಕಡಾ ಆಗಲು ಏನು ಮಾಡಬೇಕು?” ಅಂತ ಕೇಳಿದ.
ಕೂಡಲೇ ಎದ್ದು ನಿಂತ ಗಾಂಪ “ಒಬ್ಬರಿಗೆ ಎರಡು ಮತ ಹಾಕಲು ಕೊಡ್ಬೇಕು ಸರ್. ಆಗ ಐವತ್ತು ಇರೋದು ನೂರು ಆಗುತ್ತೆ” ಎಂದು ಸಲಹೆ ನೀಡಿದ.
***
ನಿಯಮಗಳು
ಆರೋಗ್ಯಾಧಿಕಾರಿ: ಇನ್ನು ಮುಂದೆ ನಾವು-ನೀವು ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಅದರ ಜೊತೆಗೇ ಬದುಕಲು ಕಲಿಯಬೇಕು.
ಗಾಂಪ: ಅದೇನು ಮಹಾ, ಬಿಡಿ ಸರ್
ಆರೋಗ್ಯಾಧಿಕಾರಿ: ಯಾಕಯ್ಯಾ ಹೀಗೆ ಮಾತಾಡ್ತೀಯಾ?
ಗಾಂಪ: ಹೆಂಡ್ತಿ ಜೊತೆನೇ ಬದ್ಕೋದ್ ಕಲ್ತಿದ್ದೀನಿ ಅಂದ್ಮೇಲೆ ಕೋವಿಡ್ ಏನ್ ಮಹಾ ಅಂತ ಸರ್.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ