‘ಸಂಪದ' ನಗೆ ಬುಗ್ಗೆ - ಭಾಗ ೭೫

‘ಸಂಪದ' ನಗೆ ಬುಗ್ಗೆ - ಭಾಗ ೭೫

ನಿಮಗಲ್ಲ

ಶ್ರೀಮತಿಗೂ ಗಾಂಪನಿಗೂ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಒಂದು ದಿನ ಮುಂಚೆ ಶ್ರೀಮತಿಯಿಂದ ಗಾಂಪನಿಗೆ ಒಂದು ಸಂದೇಶ ಬಂತು. “ನಾನು ನಿಮ್ಮನ್ನು ಮದುವೆ ಆಗಲು ಆಗುವುದಿಲ್ಲ. ನನ್ನ ಮದುವೆ ಬೇರೆ ಕಡೆ ನಿಶ್ಚಯವಾಗಿದೆ. ದಯವಿಟ್ಟು ಆಗಿದ್ದನ್ನೆಲ್ಲಾ ಮರೆತು ಹಾಯಾಗಿರಿ, ನನ್ನನ್ನು ಕ್ಷಮಿಸಿಬಿಡಿ" ಗಾಂಪನಿಗೆ ತುಂಬಾ ಚಿಂತೆಯಾಯಿತು. ಏನು ಮಾಡುವುದು ಎಂದು ಆಲೋಚಿಸುತ್ತಿರುವಾಗಲೇ ಶ್ರೀಮತಿಯಿಂದ ಮತ್ತೊಂದು ಮೆಸೇಜ್ ಬಂತು. ‘ಸಾರಿ, ಆ ಮೆಸೇಜ್ ನಿಮಗಲ್ಲ. ತಪ್ಪಾಗಿ ನಿಮಗೆ ಕಳಿಸಿಬಿಟ್ಟೆ.’ ಗಾಂಪನಿಗೆ ಚಿಂತೆ ಜಾಸ್ತಿ ಆಯ್ತು. !

***

ಉಪಾಯ

ವಿಮಾನವೊಂದು ಆಕಸ್ಮಿಕವಾಗಿ ಸಮುದ್ರದ ನೀರಿನ ಮೇಲೆ ಇಳಿಯಿತು. ಇದನ್ನು ಗಮನಿಸಿದ ಗಗನಸಖಿ ಗಾಬರಿಯಿಂದ ಜೀವರಕ್ಷಕ ದೋಣಿಗೆ ಕೂಡಲೆ ಜಾರಿಕೊಂಡು ನಿಮ್ಮ ಜೀವ ಉಳಿಸಿಕೊಳ್ಳಿ ಎಂದು ವಿಮಾನದ ಪ್ರಯಾಣಿರಿಗೆ ಕೂಗಿ ಹೇಳಿದಳು. ಆದರೆ ವಿಮಾನದಲ್ಲಿದ್ದ  ಪ್ರಯಾಣಿಕರು ಯಾರೂ ಸಹ ಜಪ್ಪಯ್ಯ ಅಂದರೂ ಅಲುಗಾಡಲಿಲ್ಲ. 

ಇನ್ನೂ ಗಾಬರಿ ಬಿದ್ದ ಗಗನಸಖಿ ಪೈಲೆಟ್ ಗಾಂಪನ ಬಳಿ ಓಡಿಬಂದಳು. ಏನು ಮಾಡುವುದು ಅಂತ ಪೈಲೆಟ್ ರವರ ಸಲಹೆಯನ್ನು ಕೇಳಿದಳು. ವಿಮಾನದ ಪೈಲೆಟ್ ಕ್ಯಾಪ್ಟನ್ ಗಾಂಪ ತುಂಬಾ ತಿಳಿದುಕೊಂಡವ ಮತ್ತು ಅನುಭವಸ್ಥ, ಆತ ಗಗನಸಖಿಗೆ ಏನು ಮಾಡಬೇಕೆಂದು ಮಾರ್ಗೋಪಾಯ ತಿಳಿಸಿದ. 

* ಅಮೇರಿಕಾ ದೇಶದ ಪ್ರಯಾಣಿಕರಿದ್ದರೆ ಅವರಿಗೆ "ಇದು ಒಂದು ಅದ್ಭುತ ಸಾಹಸ ಕಾರ್ಯ" ಎಂದು ತಿಳಿಸು. 

* ಬ್ರಿಟನ್ ದೇಶದ ಪ್ರಯಾಣಿಕರಿದ್ದರೆ ಅವರಿಗೆ "ಇದು ಒಂದು ಘನತೆ ಗೌರವ" ಎಂದು ತಿಳಿಸು,

* ಫ್ರಾನ್ಸ್ ದೇಶದ ಪ್ರಯಾಣಿಕರಿದ್ದರೆ ಅವರಿಗೆ "ಇದು ಒಂದು ಕಲ್ಪನಾಮಯವಾದ ರಮ್ಯ ಚಟುವಟಿಕೆ" ಎಂದು ತಿಳಿಸು. 

* ಜರ್ಮನಿ ದೇಶದ ಪ್ರಯಾಣಿಕರಿದ್ದರೆ ಅವರಿಗೆ "ಇದು ಒಂದು ಕಾನೂನು" ಎಂದು ತಿಳಿಸು, 

* ಜಪಾನ್ ದೇಶದ ಪ್ರಯಾಣಿಕರಿದ್ದರೆ ಅವರಿಗೆ "ಇದು ಒಂದು ಆಜ್ಞೆ, ಇದನ್ನು ಎಲ್ಲರೂ ತಪ್ಪದೇ ಪಾಲಿಸಬೇಕು" ಎಂದು ತಿಳಿಸು.

* ಪಾಕಿಸ್ತಾನ ದೇಶದ ಪ್ರಯಾಣಿಕರಿದ್ದರೆ ಅವರಿಗೆ "ಇದು ಒಂದು ಆತ್ಮಾಹುತಿಯ ಕೆಲಸ " ಎಂದು ತಿಳಿಸು, ಆಗ ನೋಡು ಅವರುಗಳು ತಕ್ಷಣವೇ ದೋಣಿಗಳಿಗೆ ಜಾರಿಕೊಳ್ಳುತ್ತಾರೆ ಎಂದನು. 

ಸಾರ್, ಸಿಂಗಪೂರ್ ದೇಶದವರಿಗೆ ಏನು ಹೇಳಬೇಕೆಂದು ತಿಳಿಸಿ ಎಂದು ಗಗನಸಖಿ ಒತ್ತಾಯಿಸಿದಳು. 

ಕ್ಯಾಪ್ಟನ್ ಗಾಂಪ ಕೊಂಚ ಗಂಭೀರನಾದ, ಸ್ವಲ್ಪ ಕಾಲ ಮೌನವಹಿಸಿದ, ನಂತರ ದೀರ್ಘ ಉಸಿರೆಳೆದುಕೊಂಡು ನಿಧಾನವಾಗಿ ಹೇಳಿದ, ಸಿಂಗಪೂರ್ ದೇಶದವರಿಗೆ ನೀನು ಏನನ್ನೂ ಹೇಳಬೇಡ. ಅವರಿಗೆ "ಸುಮ್ಮನೆ ಜನರು ನಿಂತಿರುವ ಸಾಲು" ತೋರಿಸು ಸಾಕು. ಅವರೇ ಹೋಗಿ ಆ ಸಾಲಿನಲ್ಲಿ ನಿಲ್ಲುತ್ತಾರೆ. 

ಗಗನಸಖಿ ಜ್ಞಾಪಕ ಮಾಡಿಕೊಂಡು ''ಇನ್ನೂ ಕೆಲವರು ಪ್ರಯಾಣಿಕರಿದ್ದಾರೆ. ಅವರು ಭಾರತ ದೇಶದವರು. ಅವರಿಗೆ ಏನು ಹೇಳುವುದು ಸಾರ್'' ಎಂದು ಕೇಳಿದಳು. 

ಆಗ ಕ್ಯಾಪ್ಟನ್ ಗಾಂಪ ಜೋರಾಗಿ ನಗಲು ಶುರು ಮಾಡಿದ. ''ಅವರಿಗಾ, ಅವರಿಗಾ,'' ಮತ್ತೆ ಇನ್ನಷ್ಟು ಜೋರು ನಗು.... ನಗುತ್ತಲೇ ಹೇಳಿದ, "ಯಾರನ್ನು ಬೇಕಾದರೂ ಕೆಳಗೆ ಇಳಿಸಲು ಕಷ್ಟವಾಗಬಹುದು. ಆದರೆ ಭಾರತೀಯರನ್ನು ಕೆಳಗಿಳಿಸುವುದು ಕಷ್ಟವೇನಿಲ್ಲ. ಅವರ ಮುಂದೆ ಹೋಗಿ “ಫ್ರೀ ಬೋಟಿಂಗ್, ನಂಗೂ ಫ್ರೀ, ನಿಂಗು ಫ್ರೀ, ಎಲ್ಲರಿಗೂ ಫ್ರೀ,   ಉಚಿತ" ಎಂದು ಹೇಳು ಸಾಕು. ಅವರೆಲ್ಲ ನಾ ಮುಂದು ತಾ ಮುಂದು ಎನ್ನುತ್ತಾ ಒಬ್ಬರನ್ನೊಬ್ಬರು ನೂಕಾಡುತ್ತಾ ತಳ್ಳಾಡಿಕೊಂಡು ದೋಣಿಯೊಳಗೆ ಬಂದು  ಕುಳಿತುಕೊಂಡುಬಿಡುತ್ತಾರೆ. ಕಷ್ಟವೇನಿಲ್ಲ"!

***

ಸರಿ ಉತ್ತರ

ಶಾಲೆಯಲ್ಲಿ ಮೇಸ್ಟ್ರು ಕೇಳುವ ಪ್ರಶ್ನೆಗಳಿಗೆ ಚಿತ್ರ ವಿಚಿತ್ರವಾದ ಉತ್ತರ ಕೊಡುವಲ್ಲಿ ಗಾಂಪ ನಿಸ್ಸೀಮ. ಹೀಗಾಗಿ, ಈ ಬಾರಿ ಪ್ರಶ್ನೆಯನ್ನು ಮೇಷ್ಟ್ರು ಮೊಟ್ಟ ಮೊದಲು ಗಾಂಪನಿಗೇ ಕೇಳಿದರು. ಪ್ರಶ್ನೆ ಸರಳವಾಗಿತ್ತು. ‘ಗಂಡಾಂತರಕಾರಿ ಕೆಲಸ' ಇದನ್ನು ಇಂಗ್ಲೀಷ್ ಗೆ ಅನುವಾದ ಮಾಡಿ ಹೇಳು ಎಂದರು. ತಕ್ಷಣ ಆಲೋಚನೆಯಲ್ಲಿ ತೊಡಗಿದ ಗಾಂಪ “Husband brings vegetables’ ಎಂದು ಹೇಳಿದ. ಉತ್ತರ ಸರಿಯೊ ತಪ್ಪೋ ಎನ್ನುವುದನ್ನು ನಿರ್ಧರಿಸಲಾಗದೆ ಮೇಷ್ಟು ಬೆಪ್ಪಾದರು.

***

ಡೈವೋರ್ಸ್

ಶ್ರೀಮತಿ: ಹೇಗಾದ್ರೂ ಮಾಡಿ, ನಮ್ಮ ಡೈವೋರ್ಸ್ ಕ್ಯಾನ್ಸಲ್ ಮಾಡಿಸಿ ಮತ್ತೆ ನಮ್ಮಿಬ್ಬರನ್ನು ಒಗ್ಗೂಡಿಸಿ ಲಾಯರ್ ಸಾಹೇಬ್ರೇ.

ಲಾಯರ್: ಅಲ್ಲಮ್ಮಾ, ಆದಷ್ಟು ಬೇಗ ಡೈವೋರ್ಸ್ ಕೊಡಿಸಿ ಅಂತ ದುಂಬಾಲು ಬಿದ್ದು ತಗೊಂಡಿದ್ದೆ. ಈಗ ಉಲ್ಟಾ ಹೊಡೀತಾ ಇದ್ದೀಯಾ. ಯಾಕೆ ಏನಾಯ್ತು?

ಶ್ರೀಮತಿ: ಡೈವೋರ್ಸ್ ತಗೊಂಡ ಮೇಲೆ ಅವರು ಸಿಕ್ಕಾಪಟ್ಟೆ ಖುಷಿಯಾಗಿ ತಿರುಗಾಡುತ್ತಿದ್ದಾರೆ. ಅದನ್ನ ನನ್ನ ಕಣ್ಣಿಂದ ನೋಡೋಕೆ ಆಗ್ತಿಲ್ಲ ಅದಕ್ಕೆ. !

***

ತಲೆ ತಗ್ಗಿಸಿ ಹೋಗಲು…

ಗಾಂಪ: ನನ್ನ ಮಗಳು ರಸ್ತೆಯಲ್ಲಿ ಯಾವಾಗಲೂ ತಲೆ ತಗ್ಗಿಸಿಹೊಂಡು ಹೋಗುವ ಹಾಗೆ ಏನಾದರೂ ಔಷಧಿ ಅಥವಾ ಉಪಾಯ ಇದ್ರೆ ಹೇಳಿ ಸರ್

ಡಾಕ್ಟರ್: ಅಯ್ಯೋ ಅದಕ್ಕೆಲ್ಲಾ ಔಷಧಿಯೆಲ್ಲಾ ಏಕೆ? ಒಂದು ಸಲಹೆ ಕೊಡ್ತೇನೆ.

ಗಾಂಪ: ಏನು ಡಾಕ್ಟರೇ?

ಡಾಕ್ಟರ್: ಒಂದು ಕೆಲಸ ಮಾಡಿ. ನಿಮ್ಮ ಮಗಳಿಗೆ ಐಫೋನ್ ಕೊಡಿಸಿ. ಅನ್ ಲಿಮಿಟೆಡ್ ಇಂಟರ್ ನೆಟ್ ಪ್ಯಾಕ್ ಹಾಕಿ ಬಿಡಿ. ಆಗ ಅವಳು ತಲೆ ಎತ್ತಿ ಯಾರನ್ನೂ ನೋಡುವುದಿಲ್ಲ. !

***

ತಡವಾಗಲು ಕಾರಣ

ಗಾಂಪ: ಏಯ್.. ಮನೆಗೆ ಬರೋಕೆ ಎಷ್ಟು ಹೊತ್ತು ಮಾಡ್ತೀಯಾ? ಕಾಲೇಜು ಬಿಟ್ಟು ಈಗಲೇ ನಾಲ್ಕು ಗಂಟೆ ಆಯ್ತು. ಇಷ್ಟೊತ್ತು ಎಲ್ಲಿದ್ದೆ, ಏನು ಮಾಡುತ್ತಿದ್ದೆ?

ಮರಿ ಗಾಂಪ: ಅದಾ.. ದಾರೀಲಿ ಬರೋವಾಗ ನನ್ನ ಗೆಳೆಯ ಸಿಕ್ಕಿ ನಾನೇ ನಿಮ್ಮ ಮನೆಗೆ ಡ್ರಾಪ್ ಕೊಡ್ತೀನಿ ಅಂತ ಬಲವಂತ ಮಾಡಿ ಅವನ ಗಾಡಿಯಲ್ಲೇ ಕರೆದುಕೊಂಡು ಬಂದ.

ಗಾಂಪ: ಗಾಡೀಲಿ ಬಂದ್ರೂ ಇಷ್ಟು ಹೊತ್ತಾ? ಅದ್ಯಾವ ಸೀಮೆ ಗಾಡಿನೋ ಅದು?

ಮರಿ ಗಾಂಪ: ರೋಡ್ ರೋಲರ್ !

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ