‘ಸಂಪದ' ನಗೆ ಬುಗ್ಗೆ - ಭಾಗ ೭೭

‘ಸಂಪದ' ನಗೆ ಬುಗ್ಗೆ - ಭಾಗ ೭೭

ನತದೃಷ್ಟ

ಗಾಂಪ ಬಾರಿನಲ್ಲಿ ಒಂದು ಗ್ಲಾಸ್ ಬಿಯರ್ ಇಟ್ಟುಕೊಂಡು ಕೂತಿದ್ದ. ಎಷ್ಟು ಹೊತ್ತಾದರೂ ಅದರ ಒಂದಾದರೂ ಹನಿಯನ್ನು ಆತ ಕುಡಿದಿರಲಿಲ್ಲ. ಇದನ್ನು ದೂರದಲ್ಲಿ ನೋಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಸ್ವಲ್ಪ ಕೀಟಲೆ ಮಾಡಬೇಕು ಅನ್ನಿಸಿತು. ಅವನು ನೇರವಾಗಿ ಗಾಂಪ ಇದ್ದ ಟೇಬಲ್ ಬಳಿ ಬಂದು, ಆ ಗ್ಲಾಸನ್ನೆತ್ತಿ ಒಂದು ಹನಿಯನ್ನೂ ಉಳಿಸದಂತೆ ಗಟಗಟನೆ ಕುಡಿದು ಬಿಟ್ಟ. ಅದನ್ನು ನೋಡಿದ ಗಾಂಪ ಜೋರಾಗಿ ಬಾಯಿ ತೆರೆದು ಅಳಲು ಪ್ರಾರಂಭಿಸಿದ.

“ನನ್ನ ದಿನಾನೇ ಸರಿ ಇಲ್ಲ ಇವತ್ತು ! ಆಫೀಸಿಗೆ ತಡವಾಗಿ ಹೋದೆ. ಬಾಸ್ ಕೈಯಲ್ಲಿ ಬೈಯಿಸಿಕೊಂಡು ಕೆಲಸದಿಂದ ಹೊರ ಹಾಕಿಸಿಕೊಂಡೆ. ಪಾರ್ಕಿಂಗ್ ಜಾಗಕ್ಕೆ ಹೋದರೆ ನನ್ನ ಕಾರು ಕಳವಾಗಿತ್ತು. ಮೇಲಾಗಿ ನಾನು ಕಾರಿಗೆ ವಿಮೆ ಬೇರೆ ಮಾಡಿಸಿರಲಿಲ್ಲ. ಮನೆಗೆ ಹೋಗೋಣ ಎಂದು ಕ್ಯಾಬ್ ಮಾಡಿಕೊಂಡು ಮನೆಗೆ ಹೋದರೆ ಮನೆಯ ಕೀಯನ್ನು ಕ್ಯಾಬ್ ನಲ್ಲೇ ಮರೆತುಬಿಟ್ಟೆ. ಇಷ್ಟೆಲ್ಲಾ ಆದ ಮೇಲೆ ಜೀವನ ಬೇಸರವಾಗಿ ಇಲ್ಲಿ ಬಂದರೆ, ವಿಷ ಹಾಕಿಕೊಂಡಿದ್ದ ಬಿಯರನ್ನೂ ಇನ್ಯಾರೋ ಕುಡಿದುಬಿಟ್ರಲ್ಲಪ್ಪ !” ಗಾಂಪನ ಅಳು ಮುಂದುವರಿದಿತ್ತು…

***

ದೇವರ ದಯೆ

ಕತ್ತಲ ರಾತ್ರಿಯಲ್ಲಿ ಊರ ಮಧ್ಯದಲ್ಲಿದ್ದ ಒಂದು ಮನೆಗೆ ಬೆಂಕಿ ಹತ್ತಿತ್ತು. ಕಿಡಿಯಾಗಿ ಹುಟ್ಟಿದ್ದು ಶ್ರೀಘ್ರದಲ್ಲೇ ಮನೆಯೆಲ್ಲಾ ವ್ಯಾಪಿಸಿ ಧಗಧಗ ಉರಿಯತೊಡಗಿತು. ಬೆಂಕಿಯ ಕೆನ್ನಾಲಿಗೆ ಆಕಾಶಕ್ಕೆ ಚಾಚಿತು. ಕೂಡಲೇ ಜನ ಸೇರಿದರು. ಕೆಲವರು ಕಂಬಳಿ ಹೊಡೆದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಇನ್ನು ಕೆಲವರು ಬಾವಿಯಿಂದ ನೀರು ಸೇದಿ ಸೇದಿ ಬೆಂಕಿಯ ಮೇಲೆ ಎರಚಿದರು. ಅಂತೂ ಇಂತೂ ಸಾಕಷ್ಟು ಪ್ರಯತ್ನದ ಬಳಿಕ ಬೆಂಕಿ ತಹಬದಿಗೆ ಬಂತು.

ಅಷ್ಟರಲ್ಲೇ ಅಲ್ಲೇ ಕಲ್ಲಿನ ಕುರ್ಚಿಯ ಮೇಲೆ ನಿಂತಿದ್ದ ಅಧಿಕ ಪ್ರಸಂಗಿ ಗಾಂಪನಿಂದ ಉಪನ್ಯಾಸ ಪ್ರಾರಂಭವಾಯಿತು. “ಊರಿನ ಸಮಸ್ತರೇ, ಈ ಬೆಂಕಿ ಎನ್ನುವಂಥದ್ದು ದೇವರ ವರಪ್ರಸಾದ!”

“ಹೇಗೆ ಸ್ವಾಮಿ?” ಎಂದು ಕೆಲವರು ಕೇಳಿದರು.

“ನೀವೇ ಯೋಚಿಸಿ. ಈ ಬೆಂಕಿಗೆ ಜ್ವಾಲೆ ಎಂಬ ಅಂಶ ಇಲ್ಲದೇ ಹೋಗಿದ್ದರೆ ಈ ಕತ್ತಲೆಯಲ್ಲಿ ಅದನ್ನು ಹುಡುಕಿ ನಂದಿಸುವುದು ಅದೆಷ್ಟು ಕಷ್ಟವಾಗುತ್ತಿತ್ತು !” ಗಾಂಪನ ವಿವರಣೆ ಬಂತು.

***

ರೆಡ್ ಸಿಗ್ನಲ್

ಟೀಚರ್: ಯಾಕೋ ಗಾಂಪ, ಅಲ್ಲೆ ನಿಂತಿದ್ದೀಯಾ? ತರಗತಿ ಒಳಗೆ ಬಾ..

ಗಾಂಪ: ನೀವೇ ಹೇಳಿದ್ರಲ್ಲಾ ಟೀಚರ್ ರೆಡ್ ಸಿಗ್ನಲ್ ಕಂಡರೆ ನಿಲ್ಲಬೇಕು ಅಂತ.

ಟೀಚರ್: ಹೌದು ಹೇಳಿದ್ದೆ. ಏನೀಗ, ಇಲ್ಲಿಲ್ಲಿ ರೆಡ್ ಸಿಗ್ನಲ್ ಇಲ್ಲವಲ್ಲಾ?

ಗಾಂಪ: ಇದೆಯಲ್ಲಾ ಟೀಚರ್, ಆ ರೆಡ್ ಸಿಗ್ನಲ್ ನೋಡಿದ್ದಕ್ಕೇ ನಿಂತಿದ್ದು.

ಟೀಚರ್: ಎಲ್ಲಿದೆ ತೋರಿಸು.

ಗಾಂಪ: ನಿಮ್ಮ ಹಣೆಯ ಮೇಲಿದೆಯಲ್ಲಾ ಟೀಚರ್ !

ಟೀಚರ್: ಅಯ್ಯೋ ಮುಠಾಳ ಅದು ಕುಂಕುಮದ ಬೊಟ್ಟು. ರೆಡ್ ಸಿಗ್ನಲ್ ಅಲ್ಲ.!

***

ಆನೆ-ಇರುವೆ

ಆನೆ: ಇರುವೆ ಗೆಳೆಯಾ, ನಿನ್ನೊಂದಿಗೆ ಸ್ನೇಹ ಮಾಡಬಾರದು ಎಂದು ನನ್ನಮ್ಮ ಹೇಳಿದ್ದಾಳೆ

ಇರುವೆ: ಏಕೆ ಆನೆಯಣ್ಣಾ ಹಾಗೇಕೆ ಅಂದರು ನಿನ್ನಮ್ಮ?

ಆನೆ: ನನಗೆ ಏಕೆ ಅಂತಾ ಗೊತ್ತಿಲ್ಲ... ಅಯ್ಯೋ ಅಮ್ಮಾ ಇಲ್ಲಿಗೇ ಬರ್ತಾ ಇದ್ದಾಳೆ, ಏನು ಮಾಡ್ಲಿ?

ಇರುವೆ: ಅದಕ್ಕೆ ಏಕೆ ಹೆದರುತ್ತೀ? ಬೇಗ ಬಂದು ನನ್ನ  ಹಿಂದೆ ಅಡಗಿಕೋ ಮಾರಾಯ !

***

ಗೋಲಗುಮ್ಮಟ ಕಟ್ಟಿದ್ದು !

ಗಾಂಪ: ಸೂರಿ, ಈ ಗೋಲಗುಮ್ಮಟ ಎಷ್ಟು ದೊಡ್ಡದಿದೆಯಲ್ಲಾ?

ಸೂರಿ: ಹೌದು, ಅದನ್ನು ನೋಡುವಾಗ ಹೇಗೆ ಕಟ್ಟಿರಬಹುದು ಎಂಬ ಯೋಚನೆ ಬರುತ್ತೆ?

ಗಾಂಪ: ಏಕೆ ಏನಾಯಿತು?

ಸೂರಿ: ಏನಿಲ್ಲ ಎಷ್ಟು ದೊಡ್ಡ ಗುಮ್ಮಟ ಕಟ್ಟಿದ ನಂತರ ಕೆಲಸಗಾರರೆಲ್ಲಾ ಹೇಗೆ ಕೆಳಗೆ ಇಳಿದರು ಅಂತಾ?

ಗಾಂಪ: ಅದೇನೂ ದೊಡ್ದ ಸಂಗತಿಯಲ್ಲ. ಕೆಲಸಗಾರರೆಲ್ಲಾ ಮೇಲಿನಿಂದ ಕಟ್ಟೋಕೆ ಪ್ರಾರಂಭಿಸಿ ಕೆಳಗಡೆ ಇಳಿದಿರಬೇಕು. ಅಷ್ಟೇ !

***

ಯೋಗ ದಿನ !

ಜೂನ್ ೨೨ರ ಮದ್ಯಾಹ್ನ ಮೆಡಿಕಲ್ ಸ್ಟೋರಿನ ಮಾಲೀಕ ಗಾಂಪ ತುಂಬಾ ಖುಷಿಯಲ್ಲಿದ್ದ. ಕಾರಣವೇನೆಂದು ಗೆಳೆಯ ಸೂರಿ ಕೇಳಿದಾಗ ಆತ ಹೇಳಿದ

“ನಿನ್ನೆ ಅಂತರಾಷ್ಟ್ರೀಯ ಯೋಗ ದಿನವಾಗಿತ್ತು ತಾನೇ? ಇವತ್ತು ಮುಂಜಾನೆ ನನ್ನ ಸ್ಟೋರಿನಲ್ಲಿದ್ದ ಅಯೋಡೆಕ್ಸ್, ಟೈಗರ್ ಬಾಮ್, ರೆಲಿಸ್ಪೇ, ವೋಲಿನಿ, ನೋವಿನ ಮಾತ್ರೆಗಳೆಲ್ಲಾ ಖಾಲಿಯಾದುವು ಕಣೋ!

***

ಪರೀಕ್ಷೆ

ಶ್ರೀಮತಿ: ಈ ಬಾರಿ ಪರೀಕ್ಷೆಯಲ್ಲಿ ಫೇಲಾದರೆ ರಿಕ್ಷಾವಾಲಾನ ಜೊತೆ ನನ್ನ ಮದುವೆ ಮಾಡಿಸುವುದಾಗಿ ಅಪ್ಪ ಎಚ್ಚರಿಸಿದ್ದಾರೆ.

ಗಾಂಪ: ನಾನು ಫೇಲಾದರೆ ನನಗೆ ರಿಕ್ಷಾ ಖರೀದಿಸಿ ಕೊಡುವುದಾಗಿ ನನ್ನಪ್ಪ ಹೇಳಿದ್ದಾರೆ.

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ