‘ಸುವರ್ಣ ಸಂಪುಟ’ (ಭಾಗ ೨೫) - ಡಿ.ಎಸ್.ಕರ್ಕಿ

‘ಸುವರ್ಣ ಸಂಪುಟ’ (ಭಾಗ ೨೫) - ಡಿ.ಎಸ್.ಕರ್ಕಿ

ಈಶ್ವರ ಸಣಕಲ್ಲ ಅವರ ಬಗ್ಗೆ ಕಳೆದ ವಾರ ಬರೆದ ಮಾಹಿತಿ ಹಾಗೂ ಎರಡು ಕವನಗಳನ್ನು ನಮ್ಮ ಓದುಗರು ಆಸ್ವಾದಿಸಿದ್ದಾರೆ. ಸಣಕಲ್ಲ ಅವರ ‘ಕಾಂಚನ ಮೃಗ' ಎಂಬ ಮತ್ತೊಂದು ಸುದೀರ್ಘವಾದ ಕವನ ಈ ಸಂಪುಟದಲ್ಲಿದೆ. ಈ ವಾರ ನಾವು ‘ಹಚ್ಚೇವು ಕನ್ನಡದ ದೀಪ' ಎಂಬ ಖ್ಯಾತ ಗೀತೆಯನ್ನು ರಚಿಸಿದ ಕವಿ ಡಿ.ಎಸ್.ಕರ್ಕಿಯವರ ಬಗ್ಗೆ ಹಾಗೂ ಅವರ ಕವನದ ಬಗ್ಗೆ ತಿಳಿದುಕೊಳ್ಳೋಣ. ಈ ಸಂಪುಟದಲ್ಲಿ ಕರ್ಕಿಯವರ ಮೂರು ಕವನಗಳಿವೆ. ಮೋಡಗಳ ಹಾಡು, ಹಚ್ಚೇವು ಕನ್ನಡದ ದೀಪ ಹಾಗೂ ಗೋಲ ಗುಮ್ಮಟ ಎಂಬ ಕವನಗಳಿಂದ ಒಂದು ಕವನವನ್ನು ನಾವು ಆರಿಸಿ ಪ್ರಕಟಿಸಿದ್ದೇವೆ. ಓದುವ ಖುಷಿ ನಿಮ್ಮದಾಗಲಿ…

ಡಿ.ಎಸ್.ಕರ್ಕಿ: ಕನ್ನಡದ ಕಂಪು ಹರಡುವ ಅತ್ಯಂತ ಮನೋಹರ ಗೀತೆಯಾದ ‘ಹಚ್ಚೇವು ಕನ್ನಡದ ದೀಪ' ವನ್ನು ರಚಿಸಿದ ಕವಿಯೇ ದುಂಡಪ್ಪ ಸಿದ್ದಪ್ಪ ಕರ್ಕಿ. ಇವರು ನವೆಂಬರ್ ೧೫, ೧೯೦೭ರಲ್ಲಿ ಬೆಳಗಾವಿಯ ಹಿರೇಕೊಪ್ಪ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸಿದ್ದಪ್ಪ ಹಾಗೂ ತಾಯಿ ದುಂಡವ್ವ. ಬಾಲ್ಯದಲ್ಲೇ ತಮ್ಮ ತಾಯಿಯನ್ನು ಕಳೆದುಕೊಂಡ ಕರ್ಕಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಮುಂಬಯಿ ವಿಶ್ವ ವಿದ್ಯಾನಿಲಯದಿಂದ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಹಲವಾರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು. 

೧೯೪೯ರಲ್ಲಿ ಇವರ ಮೊದಲ ಕವನ ಸಂಕಲನ ‘ನಕ್ಷತ್ರ ಗಾನ' ಪ್ರಕಟವಾಯಿತು. ನಾಡಿನ ಮಹಾನ್ ವ್ಯಕ್ತಿಗಳ ಕುರಿತಾದ ಕವನಗಳು ‘ಕರ್ಕಿ-ಕಣಗಲು' ಸಂಕಲನದಲ್ಲಿ ಪ್ರಕಟವಾಗಿವೆ. ‘ಕನ್ನಡ ಛಂದೋವಿಕಾಸ' ಇವರು ಪಿ ಹೆಚ್ ಡಿ ಪದವಿಗೆ ಸಲ್ಲಿಸಿದ ಮಹಾಪ್ರಬಂಧ. 

ಕರ್ಕಿಯವರು ನಕ್ಷತ್ರಗಾನ, ಭಾವತೀರ್ಥ, ಗೀತಗೌರವ, ನಮನ, ಕರ್ಕಿ-ಕಣಗಲು (ಕವನ ಸಂಕಲನ), ಬಣ್ಣದ ಚೆಂಡು, ತನನ ತೋಂ (ಮಕ್ಕಳ ಕವನಗಳು), ನಾಲ್ದೆಸೆಯ ನೋಟ (ಪ್ರಬಂಧ ಸಂಕಲನ)ಗಳನ್ನು ರಚನೆ ಮಾಡಿದ್ದಾರೆ. ಇವರ ಗೀತ ಗೌರವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ‘ಕಾವ್ಯ ಗೌರವ' ಎಂಬ ಸಂಭಾವನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ. ಕರ್ಕಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಜನವರಿ ೧೬, ೧೯೮೪ರಲ್ಲಿ ನಿಧನ ಹೊಂದಿದರು.

ಡಿ.ಎಸ್.ಕರ್ಕಿಯವರ ಆಯ್ದ ಕವನ:

ಗೋಲ ಗುಮ್ಮಟ

ಗೋಲ ಗುಮ್ಮಟ ಬೋಲ ಗುಮ್ಮಟ

ಗುಮ್ಮ ಗೂಢವಿದು ಗುಮ್ಮಟ

ಬಯಲ ಬೊಮ್ಮದ ಸುಳುದೋರಿಹುದು

ನೆಟ್ಟ ದಿಟ್ಟೆಗಿದು ಗುಮ್ಮಟ.

ಗೆದ್ದು ನಿಂತಿಹುದು ಎಲ್ಲ ಗುಮ್ಮಟವ

ವಿಜಯಪುರದ ಈ ಗುಮ್ಮಟ

ಕಂಬಗಿಂಬಗಳ ಹಂಗ ಹರಿದು ಬಯ-

ಲನ್ನೆ ಅಪ್ಪಿಹುದು ಗುಮ್ಮಟ

ಅನ್ಯ ಸಂಸ್ಕೃತಿಯ ಮಾನ್ಯ ಕಾಣ್ಕೆ ಕೃತಿ -

ಗಿಳಿಯೆ ಮೂಡಿತಿದು ಗುಮ್ಮಟ

ಸರ್ವ ಧರ್ಮದಲಿ ಒಂದೆ ಮರ್ಮವನು

ಸೂಚ್ಯಗೈದಿಹುದು ಗುಮ್ಮಟ.

ರೂಪಬ್ರಹ್ಮದಲಿ ಶಬ್ದ ಬ್ರಹ್ಮವನು

ತುಂಬಿಕೊಂಡಿಹುದು ಗುಮ್ಮಟ

ಬೆರಗಿನೊಡನೆ ನಿಬ್ಬೆರಗ ನೆಯ್ದಿಹುದು

ತನ್ನ ಗರ್ಭದಲಿ ಗುಮ್ಮಟ

ಶಬ್ದ ಮಾಯೆಯಲಿ ಸಪ್ತಛಾಯೆಗಳ-

ನಿಟ್ಟು ಆಡಿಸಿದೆ ಗುಮ್ಮಟ

ಸುಳಿದ ಶಬ್ದ ನಿಶ್ಯಬ್ದಗೊಳಿಸುವುದು

ಗೂಢದೊಡಲಿನಲಿ ಗುಮ್ಮಟ.

ಬಯಲ ಬಗೆದು ನೋಡಲ್ಲಿ ಮುಗಿಲ ನೆಲ

ವನ್ನು ತಬ್ಬಿದೆಡೆ ಗುಮ್ಮಟ

ಏಕಮೇವ ಆಕಾರದಲ್ಲಿ ಸಾ-

ಕ್ಷಾತ್ತಿಗೈದಿಹುದು ಗುಮ್ಮಟ.

ಜಗದ ಪೀಠದಲಿ ಗಗನ -ದೇವ ನೆಲೆ-

ಗೊಂಡ ಪರಿಯೊಳಿದೆ ಗುಮ್ಮಟ

ಕಾಲ ದೇಶ ಮತ ಪಂಥದಾಚೆಗಿಹ

ಸ್ಪೂರ್ತಿಜನ್ಯವಿದು ಗುಮ್ಮಟ.

***

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)