‘ಸುವರ್ಣ ಸಂಪುಟ' (ಭಾಗ ೧೦೦) - ಕೆ ಎನ್ ಶಿವಪ್ಪ

‘ಸುವರ್ಣ ಸಂಪುಟ' (ಭಾಗ ೧೦೦) - ಕೆ ಎನ್ ಶಿವಪ್ಪ

ಸರಿಯಾಗಿ ನೂರು ವಾರಗಳ ಹಿಂದೆ ನಾವು ‘ಸುವರ್ಣ ಸಂಪುಟ’ ಕೃತಿಯಿಂದ ಕನ್ನಡದ ಖ್ಯಾತ, ಅಪರೂಪದ ಕವಿಗಳನ್ನು ಹಾಗೂ ಅವರ ಕವಿತೆಗಳನ್ನು ಆಯ್ದು ಪ್ರಕಟಿಸಲು ಪ್ರಾರಂಭ ಮಾಡಿದೆವು. ಎಲ್ಲರಿಗೂ ತಿಳಿದಿರುವ ಖ್ಯಾತ ಕವಿಗಳ ಪರಿಚಯ ಮಾಡುವುದು ಅಷ್ಟೇನೂ ಕಷ್ಟಕರವಾಗಿರಲಿಲ್ಲ. ಆದರೆ ಕೆಲವು ಅಪರೂಪದ, ಎಲೆಮರೆಯ ಕಾಯಿಗಳಂತೆ ಬದುಕಿ ಬಾಳಿದ ಕವಿಗಳ ಬಗ್ಗೆ ಮಾಹಿತಿ ಹಾಗೂ ಅವರ ಭಾವಚಿತ್ರ ಸಂಗ್ರಹ ಬಹಳ ಕಷ್ಟಕರವಾಗಿತ್ತು. ೪-೫ ಕವಿಗಳ ಭಾವಚಿತ್ರವೂ ನಮಗೆ ದೊರೆಯಲಿಲ್ಲ. ಇಂತಹ ಕೆಲವು ಅನನುಕೂಲಗಳಿದ್ದರೂ ನಾವು ಇಂದು ನೂರು ವಾರಗಳನ್ನು ಪೂರೈಸಿ, ನೂರು ಕವಿಗಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. 

ಈ ವಾರ ನಾವು ಆಯ್ದುಕೊಂಡ ಕವಿ ಕೆ ಎನ್ ಶಿವಪ್ಪ ಇವರು. ಇವರೂ ಒಂದು ರೀತಿಯಲ್ಲಿ ಎಲೆಮರೆಯ ಕಾಯಿಯಂತಿದ್ದ ಕವಿ. ಎಲ್ಲೂ ಇವರ ಬಗ್ಗೆ ಮಾಹಿತಿಗಳು ದೊರೆಯುತ್ತಿಲ್ಲ. ಸಿಕ್ಕ ಮಾಹಿತಿಗಳ ಪ್ರಕಾರ ಇವರು ಎಂ ಎ, ಬಿ ಎಡ್ ಪದವೀಧರರು. ಮೈಸೂರಿನ ಮಹಾರಾಣಿ ಆರ್ಟ್ಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಇವರು ಏಕಾಂತ ಹಾಗೂ ಉತ್ತರ ಧ್ರುವ ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಉಳಿದಂತೆ ಯಾವ ಮಾಹಿತಿಗಳೂ ಲಭ್ಯವಿಲ್ಲ. 

ಕೆ ಎನ್ ಶಿವಪ್ಪ ಇವರ ಒಂದು ಕವನ ‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿದೆ. ಇದನ್ನು ನಾವು ಪ್ರಕಟಿಸಿದ್ದೇವೆ. ಇವರ ಬಗ್ಗೆ ಅಧಿಕ ಮಾಹಿತಿ ಓದುಗರಾದ ನಿಮ್ಮಲ್ಲಿ ಲಭ್ಯ ಇದ್ದರೆ ದಯವಿಟ್ಟು ಪ್ರತಿಕ್ರಿಯೆಯಲ್ಲಿ ಬರೆದು ತಿಳಿಸಬೇಕಾಗಿ ವಿನಂತಿ.

ಸಂತೆ

ನಾ ಹುಟ್ಟಿದ್ದು ನಮ್ಮೂರ ಸಂತೆಯಲೆ,

ತಾತ ಮುತ್ತಾತರ ಕಾಲದ

ಹೆಮ್ಮರಗಳ ದಪ್ಪ ಬುಡ ದಟ್ಟ ನೆರಳು ಗಟ್ಟಿ ಎಲುಬಿನ ಹಂದರದಲ್ಲೆ

ಅಂಬೆಗಾಲಿಕ್ಕಿ ಬೆಳೆದದ್ದು, ನಾ ನಡೆದದ್ದು,

ಹತ್ತು ಶತಮಾನಗಳ ಹಿಂದೆ ಅಡಿಯಿಟ್ಟ ಹಳೆ ಸಂತೆಯಲಿ

ತರತರದ ಭಾವಗಳ ಬಗೆಬಗೆಯ ನೋಟಗಳ

ಹಳತು ಹೊಸತರದ ತೂರಾಟ ಹಾರಾಟ,

ಅಲ್ಲಿ, ಮುಟ್ಟಿ ತೀಡುವ ಜಟ್ಟಿಪಟ್ಟುಗಳ ಉಸಿರುಗಟ್ಟುವ ಬಿಗಿತ

ಇಲ್ಲಿ, ಹಾವಾಡಿಗರು ಬಸವನೊಡನಾಡಿಗರು

ತಕಪಕನೆ ಕುಣಿಸುವರು ತಂಬೂರಿ ಹಿಡಿದವರು

ಜೋಳಿಗೆಯ ಹೊತ್ತವರು

ಸೊಗಸು ಬಲು ಸೊಗಸು ತಲೆಯ ತೂಗಲೆಬೇಕು.

ಸಾಕೆ?

ಮತ್ತಷ್ಟು ಬೇಕು.

ಹೊಸ ಹೊಸದೆ ಬೇಕೆಂದು ಅತ್ತಿತ್ತ ನೋಡಿದೆವು

ಹೊಸ ಬಗೆಯ ಹೊಸ ವೇಷ ಹೊತ್ತ ಪೈಲ್ವಾನ

ಕೂಗಿಕೊಂಡ-

‘ನವ್ಯವಿದು ಹಳತಲ್ಲ ಹೊಸತರದ ಸಾಧನೆ

ಬನ್ನಿ, ಕೊಳೆತ ಸಿಪ್ಪೆಯಿದಲ್ಲ,’

ಹೊಸ ಆಟ ಕಾಟ

ಕೂಡಿಕೊಂಡೆವು.

 

ಕಿರುಬಳೆಯ ತೋರಿಸಿದ ಆ ಕಡ್ಡಿ ಪೈಲ್ವಾನ

ಬಟ್ಟೆ ತೆಗೆದಾಗ ಲಂಗೋಟಿ ಮಾತ್ರ -ವಾಸ್ತವಿಕ

ಪುಟ್ಟ ಬಳೆ, ತೊಡೆತೂರುವಷ್ಟೇ ಸುತ್ತಳತೆ

‘ಇಲ್ಲೇನ ಮಾಡುವನು - ಸರ್ಕಸ್ಸು'

ಕೋಳಿ ಕಾಲೊಂದ ಅಡಿಬಳೆಗೆ ತೂರಿದ

ಇಂಗಿತವನರಿತು ಚಪ್ಪಾಳೆ ತಟ್ಟಿದೆವು

ಮತ್ತೊಂದು ಕಾಲು..ಅದೆಕು ಅದೆ ಮದ್ದು

ತುಸುಜಾಗದಲ್ಲಿ ತಲೆಸಿಕ್ಕಿಸಿಕೊಂಡ

ಅಯ್ಯೋ ಪಾಪ,

ಒದ್ದಾಟ, ಎದುಸಿರು

ನುಸಿಯಲಾರದೆ ಕುಳಿತ ತಾಯ್ ಬಸಿರ ಮಗು

ಹೊಟ್ಟೆ ಮೇಲಾಗಿ ಉರುಳಿ ಬೀಳುವ ಹಾವು

ಸೊಂಟ ದಾಟಲೆಯಿಲ್ಲ

ಎಷ್ಟೊಂದು ಸಂಕಟ

‘ಬಿಸುಡಬಾರದೆ ಉಸಿರು ಕಟ್ಟುವ ಹೊಸತನವ

ಮೂಳೆ ಇರಬಾರದಿತ್ತಿವಗೆ ‘

‘ಕೆಟ್ಟ ಸಂಸ್ಕಾರ

ನೋಡುವರ ತಲೆಭಾರ

ಹಿರಿಯ ಆಲವಿದಲ್ಲ ಕಿರಿಕುಂಡ ಮಾತ್ರ' ಎಂದ ಸುಸಂಸ್ಕೃತರು

ಮೆಚ್ಚ ಬೇಕೆಂಬ ಹಮ್ಮಿನಲೆ ನೋಡಿದರು

(ಪಾಪ, ಹೋಗಲಾರರು, ಇದ್ದು ನೋಡಲಾರರು)

ತುಸುಹೊತ್ತು ಕಳೆದಿತ್ತು

ಓ ! ಬಿತ್ತು, ಬಿತ್ತೇ ಬಿತ್ತು

ಸೊಂಟ ತೀಡಿಯೆ ಬಿಟ್ಟ, ಪೊರೆ ಉರುಚಿ ಬಿಟ್ಟ

ಕಿರುಬಳೆಯ ತೆಗೆದಿತ್ತ ಈಡಾಡಿಬಿಟ್ಟ

ಸೊಗಸು ಸೊಗಸೆಂದ ಚಪ್ಪಾಳೆ

ಮೂಲೆಮೂಲೆಯನು ಮೊಳಗಿದಾಗ

ಕತ್ತಿಹೊಳಪಿನ ತೋಳು ತೊಡೆತಟ್ಟಿ

ಜಿಗಿದೆದ್ದ ಹೊಚ್ಚ ಹೊಸ ಪೈಲ್ವಾನ.

(‘ಸುವರ್ಣ ಸಂಪುಟ ಕೃತಿಯಿಂದ ಆಯ್ದ ಕವನ) 

ಚಿತ್ರ ಕೃಪೆ: ಅಂತರ್ಜಾಲ ತಾಣ