‘ಸುವರ್ಣ ಸಂಪುಟ' (ಭಾಗ ೧೦೧) - ಚಂದ್ರಶೇಖರ ಕಂಬಾರ
ಕನ್ನಡ ನಾಡು ಕಂಡ ಖ್ಯಾತ ಕವಿ, ನಾಟಕಕಾರ, ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರ ಕವನವೊಂದನ್ನು ಈ ವಾರ ನಾವು ಆಯ್ದುಕೊಂಡಿದ್ದೇವೆ. ಚಂದ್ರಶೇಖರ ಕಂಬಾರರು ಜನಿಸಿದ್ದು ಜನವರಿ ೨, ೧೯೩೭ರಲ್ಲಿ. ಇವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಘೋಡಿಕೇರಿ ಗ್ರಾಮ. ಬಸವಣ್ಣೆಪ್ಪ ಕಂಬಾರ ಮತ್ತು ಚೆನ್ನಮ್ಮ ಇವರ ಹೆತ್ತವರು. ಇವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಪಡೆದರು. ಬಳಿಕ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ ಎ ಪದವಿಯನ್ನು ಗಳಿಸಿದರು. ೧೯೬೨ರಲ್ಲಿ ಕರ್ನಾಟಕ ವಿವಿಯಿಂದ ಎಂ ಎ ಪದವಿ ಹಾಗೂ ಪಿ ಎಚ್ ಡಿ ಪದವಿಯನ್ನು ಪಡೆದಿದ್ದಾರೆ.
ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಕಂಬಾರರು ಕೈಯಾಡಿಸದ ಕ್ಷೇತ್ರವಿಲ್ಲ. ಕಥೆ, ಕಾದಂಬರಿ, ನಾಟಕ, ಕವನ, ಜಾನಪದ ಗೀತೆ, ಸಂಶೋಧನಾ ಪ್ರಬಂಧಗಳು ಹೀಗೆ ಎಲ್ಲಾ ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಲವಾರು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನವನ್ನು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗುವುದರ ಮೂಲಕ ಕಳೆಯುತ್ತಿದ್ದಾರೆ. ಇವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವರಕವಿ ದ ರಾ ಬೇಂದ್ರೆಯವರ ಬಳಿಕ ಗೋಕಾಕ, ಬೆಳಗಾವಿ, ಧಾರವಾಡದ ಗಂಡು ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಸಮರ್ಥವಾಗಿ ಬಳಸಿಕೊಂಡ ಹಿರಿಮೆ ಕಂಬಾರರಿಗೆ ಸಲ್ಲುತ್ತದೆ. ಜಾನಪದ ಹಾಡು, ನೃತ್ಯ, ಕುಣಿತ, ನಾಟಕಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಇವರು ಬರೆದ ಕಾದಂಬರಿಗಳಾದ ಕರಿಮಾಯೆ, ಸಂಗೀತಾ, ಕಾಡುಕುದುರೆ, ಸಿಂಗಾರವ್ವ ಮತ್ತು ಅರಮನೆ ಚಲನ ಚಿತ್ರಗಳಾಗಿವೆ. ಉತ್ತಮವಾಗಿ ಜಾನಪದ ಹಾಡುಗಳನ್ನು ಹಾಡುವುದರಲ್ಲೂ ಕಂಬಾರರದ್ದು ಎತ್ತಿದ ಕೈ.
ಚಂದ್ರಶೇಖರ ಕಂಬಾರರು ೧೦ ಕಾವ್ಯ ಸಂಕಲನ, ೨೫ ನಾಟಕ, ಒಂದು ಮಹಾಕಾವ್ಯ, ಐದು ಕಾದಂಬರಿ, ಅ೭ ಬೇರೆ ಬೇರೆ ಗದ್ಯ ಸಂಪಾದನೆ, ಪ್ರಬಂಧ ಸಂಕಲನ, ಸಂಶೋಧನಾ ಗ್ರಂಥಗಳನ್ನು ರಚನೆ ಮಾಡಿದ್ದಾರೆ. ಇವರ ಪ್ರಮುಖ ಕಾವ್ಯಗಳು - ಮುಗುಳು, ಹೇಳತೀನ ಕೇಳ, ಸಾವಿರಾರು ನೆರಳು, ಹಂಪಿಯ ಕಲ್ಲುಗಳು, ಎಲ್ಲಿದೆ ಶಿವಾಪುರ ಇತ್ಯಾದಿ. ಇವರ ನಾಟಕಗಳು - ಬೆಂಬತ್ತಿದ ಕಣ್ಣು, ಋಷ್ಯ ಶೃಂಗ (ಚಲನ ಚಿತ್ರವಾಗಿದೆ), ಜೋಕುಮಾರ ಸ್ವಾಮಿ, ಸಂಗ್ಯಾಬಾಳ್ಯಾ, ಕಿಟ್ಟಿಯ ಕಥೆ, ಕಾಡುಕುದುರೆ (ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ), ನಾಯಿಕಥೆ (ಪ್ರಶಸ್ತಿ ವಿಜೇತ ಸಿನೆಮಾ), ಮತಾಂತರ, ಹರಕೆಯ ಕುರಿ (ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ), ಸಿರಿಸಂಪಿಗೆ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ಹುಲಿಯ ನೆರಳು, ತಿರುಕನ ಕನಸು, ಮಹಾಮಾಯಿ ಇತ್ಯಾದಿ.
‘ಚಕೋರಿ’ ಎಂಬುದು ಇವರು ಬರೆದ ಮಹಾಕಾವ್ಯ. ಅಣ್ಣ ತಂಗಿ, ಕರಿಮಾಯಿ (ಚಲನ ಚಿತ್ರವಾಗಿದೆ), ಜಿ ಕೆ ಮಾಸ್ತರ್ ಪ್ರಣಯ ಪ್ರಸಂಗ ( ದೂರದರ್ಶನದಲ್ಲಿ ಚಲನಚಿತ್ರವಾಗಿದೆ), ಸಿಂಗಾರವ್ವ ಮತ್ತು ಅರಮನೆ ( ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ಶಿಖರ ಸೂರ್ಯ, ಶಿವನ ಡಂಗುರ ಇವರ ಕಾದಂಬರಿಗಳು. ಇವರ ಕೆಲವು ಸಂಶೋಧನಾ ಗ್ರಂಥಗಳೆಂದರೆ ಬಯಲಾಟಗಳು, ಮಾತಾಡೊ ಲಿಂಗವೆ, ನಮ್ಮ ಜಾನಪದ, ಜಾನಪದ ವಿಶ್ವಕೋಶ, ಕಾಸಿಗೊಂದು ಸೇರು, ನೆಲದ ಮರೆಯ ವಿಧಾನ ಇತ್ಯಾದಿ.
ಕಂಬಾರರ ಸಾಧನೆಗಳಿಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರ ಗೌರವಗಳು ಸಂದಿವೆ. ಕೇಂದ್ರ ಸರಕಾರದ ಪದ್ಮಭೂಷಣ (೨೦೨೧) ಕೇಂದ್ರ ಸಂಗೀತ ನಾಟಕ ಅಕಾಡೆಮಿ ವತಿಯಿಂದ ಅಕಾಡೆಮಿ ರತ್ನ ಪ್ರಶಸ್ತಿ (೨೦೧೧), ಜ್ಞಾನಪೀಠ ಪ್ರಶಸ್ತಿ (೨೦೧೦). ದೇವರಾಜ್ ಅರಸು ಪ್ರಶಸ್ತಿ (೨೦೦೭), ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ (೨೦೦೪), ಪಂಪ ಪ್ರಶಸ್ತಿ (೨೦೦೪), ಸಂತ ಕಬೀರ ಪ್ರಶಸ್ತಿ (೨೦೦೨), ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆ (೨೦೦೬), ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯರು (೨೦೦೪-೨೦೧೦), ಕೇಂದ್ರ ಸರಕಾರದ ಪದ್ಮಶ್ರೀ ಗೌರವ (೨೦೦೧), ಮಾಸ್ತಿ ಪ್ರಶಸ್ತಿ (೧೯೯೭), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೮) ಮುಂತಾದ ಗೌರವ ಲಭಿಸಿದೆ. ಇವರು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೧೯ರಲ್ಲಿ ಧಾರವಾಡದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಚಂದ್ರಶೇಖರ ಕಂಬಾರರ ಮೂರು ಕವನಗಳು ‘ಸುವರ್ಣ ಸಂಪುಟ' ಕೃತಿಯಲ್ಲಿದೆ. ಅವುಗಳೆಂದರೆ ನೀನು-ನಾನು, ಶ್ರಾವಣದ ಒಂದು ದಿನ, ಹೋರಿ. ಈ ಕವನಗಳಿಂದ ಒಂದು ಕವನವನ್ನು ಆಯ್ದು ಪ್ರಕಟಿಸಿದ್ದೇವೆ.
ನೀನು-ನಾನು
ಆಣೆಯಲಿ ಮಾತಾಡಿ ಭರವಸೆಯನುಸಿರಾಡಿ
ತೆಕ್ಕೆಗೆಟುಕದ ತೆರೆಯ ನೆರಳು ನೀನು ;
ನಂಬಿರುವ ಬರಿ ತೋಳ ಹುಂಬ ನಾನು.
ಗೀಸಿ ಅಗಲಿಸಿದ ತುಟಿ, ಅದರೊಳಚ್ಚೇರು ಬೆಳ-
ದಿಂಗಳನು ಸುರಿವ ಹುಸಿನಗೆಯು ನೀನು ;
ಎರಡು ಕಣ್ಣುಳ್ಳ ಬಿಕನೇಸಿ ನಾನು.
ಮಲೆನಾಡ ಸಿರಿಮೈಗೆ ಹಸಿರೊರಸಿ, ಹೂ ಮೆತ್ತಿ
ಮುದ್ದಿಡುವ ಮನ್ಸೂನ ಮಳೆಯು ನೀನು ;
ಬೆಳವಲದ ಉಸುಬಿನ ಮಸಾರಿ ನಾನು.
ಬ್ರಹ್ಮ ಮಗುವಿದ್ದಾಗ ಥೇಟು ಹೆಣ್ಣಿನ ಹಾಗೆ
ಪಾಟಿಯಲಿ ಬರೆದ ಹುಸಿ ಚಿತ್ರ ನೀನು ;
ಅಂಕಲಿಪಿ ಓದಿರುವ ಜ್ಞಾನಿ ನಾನು.
ಇದ್ದಿಲ್ಲ, ಈಗಿಲ್ಲ, ಹಗಲೆಲ್ಲ ವರ್ಣಿಸಿದ
ಹಳೆಯ ಕಾವ್ಯಗಳ ಕವಿ ಸಮಯ ನೀನು ;
ಏನೆ ಆದರು ಹೌದು ರಸಿಕ ನಾನು.
ಈಗಿದ್ದ ನದಿ ಮತ್ತೆ ಇನ್ನೊಂದು ಕ್ಷಣಕುಂಟೆ ?
ಓ ಅದರ ಜೀವಂತ ವ್ಯಾಖ್ಯೆ ನೀನು ;
ಅದ ಬರೆದ ಇಷ್ಟಗಲ ಹಾಳೆ ನಾನು.
ತುಟಿ ನೀಡಿ, ಮೈಸವರಿ, ನವಿರು ನವಿರಿಗೆ ಹೊಸೆದು,
ಮಾತಾಡಿ, ಮಟಾಮಾಯ-ಕನಸು ನೀನು ;
ತುಟಿನೆಕ್ಕಿ ತುರುಸುತಿಹೆ ಪ್ರಾಯ ನಾನು.
ನೀ ಯಾರೊ, ಎಂತೊ, ಹೆಸರೇನೊ, ಸರಿ ಇತ್ತೀಚೆ
ನಾನೂನು ಅರಿತೆ : ಮೃತ ಸ್ಮರಣೆ ನೀನು ;
ಅದ ಹುಗಿದು ಕಟ್ಟಿರುವ ಗೋರಿ ನಾನು.
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)