‘ಸೋಲಾರ್ ನ್ಯಾನೋ ಕಾರ್’ ತಯಾರಿಸಿದ ಹುಬ್ಬಳ್ಳಿಯ ‘ಈಶಾನ್ ಅವಸ್ಥಿ’ಗಳು!

‘ಸೋಲಾರ್ ನ್ಯಾನೋ ಕಾರ್’ ತಯಾರಿಸಿದ ಹುಬ್ಬಳ್ಳಿಯ ‘ಈಶಾನ್ ಅವಸ್ಥಿ’ಗಳು!

ಬರಹ

ಪರಿಸರ ಸ್ನೇಹಿ ಸೋಲಾರ್ ನ್ಯಾನೋ ಕಾರ್ ತಯಾರಿಸಿದ ಹುಬ್ಬಳ್ಳಿ ರೋಟರಿ ಕನ್ನಡ ಮಾಧ್ಯಮ ಶಾಲೆಯ ಸಚಿನ್, ನಾಗರಾಜ್ ಹಾಗೂ ಮಂಜುನಾಥ.

 

ಜಪಾನಿ ಶಿಕ್ಷಣತಜ್ಞ ತೆತ್ಸುಕೊ ಕೊರೋಯೋನಾಗಿ ಬರೆದ ‘ತೊತ್ತೋಚಾನ್’ ಬಹುಚರ್ಚಿತ ಪುಸ್ತಕ. ನಮ್ಮ ಕಾಮಿಕ್ಸ್ ರಾಣಿ ‘ಪುಟಾಣಿ ಪುಟ್ಟಿ’ಯಂತೆ ಬಲು ಚೂಟಿ ಆ ತೊತ್ತೋಚಾನ್. ಆಕೆಗೆ ಮೇಷ್ಟ್ರು ರೈಲು ಬೋಗಿಯಲ್ಲಿ ಪಾಠ ಮಾಡಬೇಕು; ಗಿಡದ ಟೊಂಗೆಗೆ ನೇತಾಡುವಾಗ ಅಮ್ಮ ಊಟ ಮಾಡಿಸಬೇಕು, ನೂರಾರು ಟಿಕೇಟ್ ಕೈಯಲ್ಲಿ ಹಿಡಿಯುವ ಬಸ್ ಕಂಡಕ್ಟರ್ ಆಕೆ ಸದ್ಯ ಆಗಬೇಕು! ಆಕೆಯೊಂದಿಗೆ ಆಟವಾಡಲು ಹೆಡ್ ಮಾಸ್ತರ್ ಬರಬೇಕು..ಜೊತೆಗೆ ಗಿಳಿ, ಮೊಲ, ಜಿಂಕೆ ಎಲ್ಲ ಅವರು ಹಿಡಿದು ತರಬೇಕು!


ಅಂತಹ ಶಾಲೆಯಲ್ಲಿ ತೊತ್ತೋಚಾನ್ ಓದಬೇಕು ಎಂದು ಹಂಬಲಿಸುವವಳು! ಕೊರೋಯೋನಾಗಿ ಅವರು ಪ್ರತಿಪಾದಿಸುವ ಬಾಲಸ್ನೇಹಿ ಶಾಲೆಯ ಕಥಾ ನಾಯಕಿ ಆಕೆ. ‘ಬಾಲವನ’ದಲ್ಲಿ ಕಾರಂತಜ್ಜ ಕೈಗೊಂಡ ಶಿಕ್ಷಣ ಸಂಬಂಧಿ ಪ್ರಯೋಗಗಳು ಹಾಗೂ ಸದ್ಯ ಧಾರವಾಡದಲ್ಲಿ ಡಾ. ಸಂಜೀವ ಮಾಮಾ ನಡೆಸುವ ‘ಬಾಲ ಬಳಗ’ ಅರಳುವ ಮೊಗ್ಗುಗಳಿಗೆ ಕಲಿಕೆಯನ್ನು ಸಹ್ಯವಾಗಿಸುವ, ಶಿಕ್ಷಕರು ‘ಬಾಲ ವೈರಿ’  ಎನಿಸದೇ  ಪ್ರೀತಿಯ ಮಾಮಾ ಹಾಗೂ ಮಾಂವಶಿ ಎನಿಸಿಕೊಳ್ಳುವ ಕೆಲ ಉಲ್ಲೇಖನೀಯ, ಶೃದ್ಧೆಯ ಶೈಕ್ಷಣಿಕ ಪ್ರಯತ್ನಗಳು.


ಸೃಜನಶೀಲ ನಿರ್ದೇಶಕ ಹಾಗೂ ನಟ ಆಮೀರ್ ಖಾನ್ ಇಂತಹ ತೆರೆಮರೆಯ ಶೃದ್ಧೆಯ ಪ್ರಯೋಗಗಳಿಗೆ ‘ತಾರೆ ಜಮೀನ್ ಪರ್’ಹಾಗೂ ‘೩ ಈಡಿಯಟ್ಸ್’ಚಿತ್ರಗಳ ಮೂಲಕ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಜಾಗತಿಕವಾಗಿ ಚರ್ಚೆಗೆ ನಾಂದಿ ಹಾಡಿದರು. ಒಟ್ಟಾರೆ ಕಲಿಕೆ ಎಂಬುದು ವಿದ್ಯಾರ್ಥಿಗೆ ಶಿಕ್ಷೆಯಾಗಬಾರದು. ವಿದ್ಯಾರ್ಥಿಯ ಅಂತ:ಸತ್ವವನ್ನು ಪೋಷಿಸುವ, ಆತನ ಪ್ರತಿಭೆಯನ್ನು ಬೆಳಗುವ ನಲಿ-ಕಲಿ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ‘ರೇಸಿಂಗ್ ಹಾರ್ಸ್’ಗಳನ್ನಾಗಲಿ, ಉರು ಹೊಡೆದು ನೂರಕ್ಕೆ ನೂರು ಅಂಕ ದಾಖಲಿಸುವ ಮಶೀನ್ ಮಾದರಿ ರಾಂಕರ್ಸ್ ಗಳನ್ನಾಗಲಿ ಬೆಳೆಸುವ ಪಾಲನಾಲಯಗಳು ಶಾಲೆಗಳಾಗಬಾರದು ಎಂಬ ಚಿಂತನೆ ಅಲ್ಲಿ ಅಡಗಿದೆ. ಸ್ವತಂತ್ರವಾಗಿ ಚಿಂತಿಸುವ, ನಿರೂಪಿತ ಸಿದ್ಧಾಂತಗಳಿಗೆ ಹೊಸ ಹೊಳವು ನೀಡಿ ಮೌಲ್ಯವರ್ಧಿಸಬಲ್ಲ ಕೌಶಲ್ಯ, ಚಾಕಚಕ್ಯತೆ ಹಾಗೂ ಪ್ರೌಢಿಮೆ ವಿದ್ಯಾರ್ಥಿ ಜ್ಞಾನದ ಬಲದಿಂದ ಗಳಿಸಲು ಅನುವಾಗುವಂತೆ ಪಠ್ಯ ರೂಪುಗೊಳ್ಳಬೇಕು. ಯಶಸ್ವಿಯಾಗಲು ಓದುವುದಲ್ಲ; ಬದಲಾಗಿ ಬದುಕುವ ಕ್ಷಮತೆ ಅಥವಾ ಅರ್ಹತೆ ಗಳಿಸಲು ನಾವು ಕಲಿಯಬೇಕು ಎಂಬುದು ಶಿಕ್ಷಣದ ಧ್ಯೇಯವಾಗಬೇಕು.

ಟ್ರೈಮೆಸ್ಟರ್ ಪದ್ಧತಿಯ ಅಧ್ಯಯನ ಹಾಗೂ ಅಧ್ಯಾಪನ ವ್ಯವಸ್ಥೆಯಲ್ಲಿ ಕಲಿತದ್ದನ್ನು ಮನನ ಮಾಡಿಕೊಳ್ಳಲು ಗುರು-ಶಿಷ್ಯರಿಗೆ ಸಿಗುವ ಸಮಯವೆಷ್ಟು? ಟ್ಯೂಶನ್, ಒಪ್ಪಿತ ಕಾರ್ಯ,   ಪರೀಕ್ಷೆಗಳು, ಅನಾರೋಗ್ಯ ಹೀಗೆ ಸಮಯ ಹೊಂದಿಸಿಕೊಳ್ಳಲು ಮಕ್ಕಳಿಗೆ ಇರುವ ಕ್ಷಮತೆ ಏನು? ಈ ಹೊಂದಾಣಿಕೆಗೆ ಹೆಣಗುವಾಗ ಮಕ್ಕಳು ಅನುಭವಿಸುವ ಮಾನಸಿಕ ಹಾಗೂ ದೈಹಿಕ ಯಾತನೆ ಅಳೆಯಲು ಇರುವ ಮಾನದಂಡವೇನು? ಉತ್ತರ ರೂಪದಲ್ಲಿ ‘ಇಲ್ಲ’ ಎಂಬ ಪದವೇ ಬಹುತೇಕ ಆಳುವ ಈ ಜಗತ್ತಿನಲ್ಲಿ, ತಮ್ಮ ಕನಸುಗಳಂತೆ ಸ್ವಚ್ಛಂದವಾಗಿ ವಿಹರಿಸುವ ಛಾತಿ, ಮನೋಬಲ ಇನ್ನೂ ಕೆಲ ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ಉಳಿದುಕೊಂಡಿದೆ ಎಂದರೆ ನೀವು ನಂಬಬೇಕು. ‘ಸಾಮಾನ್ಯರು ರಸ್ತೆ ಗುಂಟ ನಡೆದರೆ ವಿಜ್ಞಾನಿ ಗಟಾರು ದಂಡೆ ಹಿಡಿದು ನಡೆಯುತ್ತಾನೆ’ ಎಂಬುದು ಪ್ರಚಲಿತ ವ್ಯಂಗ್ಯೋಕ್ತಿ. ಈ ಮಾತಿಗೆ ಅನ್ವರ್ಥಕ ನನ್ನ ಲೇಖನದ ಈ ಮೂವರು ಕಥಾನಾಯಕರು. ಇವರು ಉಳಿದ ವಿದ್ಯಾರ್ಥಿಗಳಂತೆ ಅಲ್ಲ ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ?

ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿರುವ ರೋಟರಿ ಕನ್ನಡ ಮಾಧ್ಯಮ ಶಾಲೆಯ ೧೦ ನೇ ವರ್ಗದ ವಿದ್ಯಾರ್ಥಿಗಳಾದ ಸಚಿನ್ ಸಿದ್ದಣ್ಣವರ, ನಾಗರಾಜ ತೋಟಿಗಾರ ಹಾಗೂ ಮಂಜುನಾಥ ತಮಟೆ ‘ವಿಶೇಷ ಜ್ಞಾನಿಗಳು’. ತಮ್ಮ ವಿಜ್ಞಾನ ಪಠ್ಯದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಕುರಿತಾದ ಪಾಠವೊಂದು ಅವರನ್ನು ಹೊಸ ಅನ್ವೇಷಣೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಸೌರ ವಿದ್ಯುತ್ ದೀಪಗಳು, ಒಲೆ, ಸೌರ ವಿದ್ಯುತ್ ಅಡುಗೆ ಪಾತ್ರೆ, ನೀರು ಕಾಯಿಸುವ ಯಂತ್ರ, ವಿಮಾನ, ದ್ವಿಚಕ್ರ ವಾಹನಗಳು.. ಹೀಗೆ ವಿವರಣೆಗಳನ್ನು ಓದಿ ಪುಳಕಗೊಂಡು ಕೇವಲ ೭೦ ರೂಪಾಯಿ ವೆಚ್ಚದಲ್ಲಿ ಸೌರ ವಿದ್ಯುತ್ ಚಾಲಿತ ಮಕ್ಕಳ ಪರಿಸರ ಸ್ನೇಹಿ ಕಾರ್ -‘ಪುಟಾಣಿ ನ್ಯಾನೋ’ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ! ‘ಅಭ್ಯಾಸ’ದೊಂದಿಗೆ ಬಾಲಕರ ಈ ‘ದುರಭ್ಯಾಸ’ ಹಲವರ ಹುಬ್ಬೇರಿಸಿದ್ದಂತೂ ನಿಜ. ಏಕೆಂದರೆ ಜಗತ್ತೇ ನಿಬ್ಬೆರಗಾಗುವ ಸಾಧನೆಯ ಹಿಂದಿನ ಪ್ರಥಮ ಹೆಜ್ಜೆ ಯಾವತ್ತೂ ಅತ್ಯಂತ ಪುಟ್ಟದಾಗಿರುತ್ತದೆ! ಹಾಗಾಗಿ ಈ ಅನ್ವೇಷಣೆ ಸಚಿನ್, ನಾಗರಾಜ ಹಾಗೂ ಮಂಜುನಾಥರ ಪುಟ್ಟ ಪಾದದ ಗುರುತು.

ಕಾರುಗಳ ವೈಫರ್, ಬಳಸಿದ ಆದರೆ ಪುನರ್ ಬಳಕೆಗೆ ಯೋಗ್ಯವಾದ ಬ್ಯಾಟರಿ, ಪರಿಚಯಸ್ಥರ ಮನೆಯಿಂದ ಕೇಳಿ ಪಡೆದ ಹಳೆಯ ಟಾಯ್ ಕಾರು, ಗೆಳೆಯ ನಾಗರಾಜ ತೋಟಿಗಾರ ಅವರ ತಂದೆಯ ಗ್ಯಾರೇಜ್ ನಲ್ಲಿ ಸಿಕ್ಕ ಪೇಂಟ್ ಬಳಿದು, ಜತೆಗೆ ಶೇಕಡ ೩೫ ರಷ್ಟು ಸುಟ್ಟು ಹೋಗಿರುವ ಸೌರ ವಿದ್ಯುತ್ ದಾಖಲಿಸುವ ಕೋಶ ಸಂಗ್ರಹ (ಸೋಲಾರ್ ಪೆನಲ್) ಅಳವಡಿಸಿ ಕೇವಲ ೩ ವಾರಗಳಲ್ಲಿ ‘ಪರಿಸರ ಸ್ನೇಹಿ ಪುಟಾಣಿ ನ್ಯಾನೋ’ತಯಾರಿಸುವಲ್ಲಿ ನಮ್ಮ ‘ಈಶಾನ್ ಅವಸ್ಥಿ’ ಕುಲದವರು ಯಶಸ್ವಿಯಾಗಿದ್ದಾರೆ. ದಿನಕ್ಕೆ ೬ ತಾಸು ಬಿಸಿಲಿನಲ್ಲಿ ಕಾರು ಎತ್ತಿಟ್ಟರೆ ಸುಮಾರು ೫ ಕಿಲೋ ತೂಕದ ಮಗು ೨ ತಾಸು ಇವರ ನ್ಯಾನೋ ಕಾರ್ ಡ್ರೈವ್ ಮಾಡಬಹುದು! ಮಗುವಿಗೆ ಬೇಸರವಾಗಬಾರದು ಹಾಗಾಗಿ ಹಾಡುಗಳನ್ನು ಸಹ ಕೇಳಿಸುವ ವ್ಯವಸ್ಥೆ ಮಾಡಲಾಗಿದೆ. ಗೇರ್ ಬದಲಿಸುವ, ಹಾರ್ನ್ ಬಾರಿಸುವ ಜಂಜಾಟವಿಲ್ಲ..ಎಲ್ಲವೂ ‘ಆಟೊಮ್ಯಾಟಿಕ್’! ಅಷ್ಟರಮಟ್ಟಿಗೆ ಮಕ್ಕಳಿಗೆ ಬಳಕೆ ಸ್ನೇಹಿ ಕೂಡ. ಪಾಲಕರ ಸುಪರ್ದಿಯಲ್ಲೇ ಈ ಕಾರು ಓಡಿಸುವ ಅಗತ್ಯವಿಲ್ಲ.

ಸಚಿನ್, ನಾಗರಾಜ ಹಾಗೂ ಮಂಜುನಾಥ ಮೊದಲು ಈ ಪ್ರಯೋಗ ಕೈಗೊಂಡಿದ್ದು ತಮ್ಮ ಸೈಕಲ್ ಗಳ ಮೇಲೆ. ಆದರೆ ಖರ್ಚು ಕೈಮೀರುವ ಸ್ಥಿತಿ ನಿರ್ಮಾಣವಾಗಿ ಸೈಕಲ್ ಪ್ರಯೋಗ ಅಲ್ಲಿಗೇ ನಿಲ್ಲಿಸಿ, ತಮ್ಮ ‘ಪಾಕೇಟ್ ಮನಿ’ ಬಜೆಟ್ ಗೆ ಸರಿಹೊಂದುವ ಮಕ್ಕಳ ಕಾರ್ ವಿನ್ಯಾಸಗೊಳಿಸಲು ಅಣಿಯಾದರು. ಶಾಲೆಯಲ್ಲಿ ಮೇಷ್ಟ್ರು, ಮನೆಯಲ್ಲಿ ಪಾಲಕರು ತುಸು ಆಕ್ಷೇಪಣೆಯೊಂದಿಗೆ, ಕೆಲ ಕಟ್ಟಳೆಗಳೊಂದಿಗೆ ಸಮ್ಮತಿ ಸೂಚಿಸಿ ಈ ಮಕ್ಕಳ ಪ್ರತಿಭೆಗೆ ಆಧಾರವಾದರು. ದೊಡ್ಡ ಕಾರಿಗೂ ಈ ತಂತ್ರಜ್ಞಾನ ಅಳವಡಿಸುವ ಸಂಶೋಧನೆ ಕೈಗೊಳ್ಳುವ ತವಕ ಈ ಮಕ್ಕಳದ್ದು. ಆದರೆ ಅವರು ಅಂದಾಜಿಸಿದಂತೆ ಈ ಪ್ರಯೋಗಕ್ಕೆ ಸುಮಾರು ೬೦ ರಿಂದ ೭೦ ಸಾವಿರ ರೂಪಾಯಿ ಖರ್ಚಾಗಬಹುದು ಹಾಗೂ ಅನುಭವ ಸಾಲದು ಎಂದು ತಮ್ಮ ಅರ್ಹತೆ ಸಾಬೀತುಪಡಿಸಲು ಈ ಮಾರ್ಗ ಅವರು ಆಯ್ದುಕೊಂಡರು.

ಶ್ರೀ ಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು, ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಬೇಡಿ ಎಂದು ಬದುಕಿನುದ್ದಕ್ಕೂ ಪ್ರತಿಪಾದಿಸಿದ ವಿಜ್ಞಾನಿ, ಹಿರಿಯ ಗಾಂಧಿವಾದಿ ಡಾ.ಎಚ್.ನರಸಿಂಹಯ್ಯ (ಎಚ್.ಎನ್) ಅವರು ಬದುಕಿದ್ದರೆ ಚಿಣ್ಣರ ಈ ಸಾಧನೆಗೆ ಅದೆಷ್ಟು ಖುಷಿ ಪಡುತ್ತಿದ್ದರೋ? ಬೆಂಗಳೂರಿನ ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಈ ಮಕ್ಕಳ ಅನುಭವ ಕಥನಕ್ಕಂತೂ ಏರ್ಪಾಟು ಮಾಡುತ್ತಿದ್ದರು! ಅವರ ವಯಸ್ಸಿಗೆ ಮೀರಿದ ತಿಳಿವಳಿಕೆ, ವೈಜ್ಞಾನಿಕ ಅರಿವಿಗೆ ಬೆರಗಾಗಿ ಬೆನ್ನು ತಟ್ಟುತ್ತಿದ್ದರು. ಆದರೆ ಎಚ್.ಎನ್ ಅವರ ಸದಾಶಯ ಜೀವಂತವಾಗಿಟ್ಟ ಈ ಮಕ್ಕಳಿಗೆ, ಸಹಕರಿಸಿದ ಪಾಲಕರಿಗೆ ವಿಶೇಷ ಅಭಿನಂದನೆಗಳು.