‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೦) - ಸೇಡಿಯಾಪು ಕೃಷ್ಣಭಟ್ಟ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೦) - ಸೇಡಿಯಾಪು ಕೃಷ್ಣಭಟ್ಟ

‘ವಿದ್ಯಾನ್' ಸೇಡಿಯಾಪು ಕೃಷ್ಣಭಟ್ಟರು ಕನ್ನಡ-ಸಂಸ್ಕೃತ ಉಭಯಭಾಷಾ ವಿದ್ವಾನರು. ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ೧೯೨೪ರಲ್ಲಿಯೇ ಕಾವ್ಯರಚನೆ ಪ್ರಾರಂಭಿಸಿದವರು. “ಪುಣ್ಯಲಹರಿ", "ಅಶ್ವಮೇಧ" ಎಂಬೆರಡು ಕವನ ಗ್ರಂಥಗಳನ್ನೂ “ಪಳಮೆ", “ಕನ್ನಡ ನುಡಿಯ ಸುಧಾರಣೆ" ಎಂಬ ಗದ್ಯ ಗ್ರಂಥಗಳನ್ನೂ ಬರೆದಿದ್ದಾರೆ. ಇವರು ಉತ್ತಮ ಸಾಹಿತ್ಯ ವಿಮರ್ಶಕರು. ವಿಮರ್ಶೆಯ ಕುರಿತು ಅನೇಕ ವಿಸ್ತೃತ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಇವರ ‘ಕೃಷ್ಣ ಕುಮಾರಿ" ಎಂಬ ಕವನ ಪ್ರಕಟವಾಗಿದೆ. ಸುದೀರ್ಘ ಕವನವಾದ ಕಾರಣ ಅದರ ಮೊದಲರ್ಧವನ್ನು ಮಾತ್ರ ಪ್ರಕಟಿಸಿದ್ದೇವೆ. 

ಕೃಷ್ಣ ಕುಮಾರಿ

ಮೊಳೆದು ಮೊನೆಗಂಡಾಗಿ, ಕಳದಲಿ

ಬಳೆದು ಚಲಗಂಡಾಗಿ, ಸಮರವ

ಕುಡಿದು ಮುಳಿಗಂಡಾಗಿ, ಕಾಲನದವಡೆಯನು ನುರ್ಗಿ

ಸೆಳೆದು ಕೆನ್ನಾಲಗೆಯನದರಲಿ

ಮಲಗಿಮಲೆದರದಾರೊ ಮರುಭೂ-

ಮಿಯಲಿ ಜೀವನಬಿತ್ತಿ ಗಂಡಿನ ಸಿರಿಯ ಬೆಳೆಸಿದರು.

 

ಅವರ ಬಸಿರಲಿ ಹೇಡಿ ‘ಸಿಂಗ'ನೆ?

ಅಮರನಂದನದಲಿ ಪಲಾಂಡುವೆ?

ಸುರಪತಿಯ ಮೀಸೆಗೆ ನರೆಯೆ? ದಿಗ್ಗಜಕೆ ಕೂರಿಗೂಸೆ?

ಹರಿದನೇ ರಾಣೇಂದ್ರವಂಶದ

ಧವಲ ಮೌಕ್ತಿಕಸರವ ! ಹೆಸರಿನ !

ಹರೆಯನಗಿದನೆ ! ಪೌರುಷದ ಮಣಿಯನು ಬಿಸಾಡಿದನೇ !

 

ಮಗಳ ಕರಕಮಲಕ್ಕೆ ಹಾರುವ 

ಅಳಿಯೆದೆಯ ದುರುದುಂಬಿಗೊಬ್ಬಿನ

ನೊರಜುಗಳ ನೊಗ್ಗೊರಸಲಾರದೆ, ನೆಲಕೆ ಹೊರೆಯಾದಾ

ಶಿರವ ಮರಗೈಯಲ್ಲಿ ಮಲಗಿಸಿ

ಮಲಗಿರಲು, ಲಲಿತಾರುಣಾಂಬರೆ

ಅಪರಸಂಧ್ಯಾ ದೇವಿಯಂತಿರೆ, ಬಂದಳರಗುವರಿ

 

ಮೊಗಕೆ ಕತ್ತಲೆಯಾಯ್ತು, ನಯನದ

ಹೊಲಬು ಮಾಸಿತು, ಮನದ ಹೊದರಲಿ

ತಲೆಯ ಮರಸುತ ಸುರುಳಿತಬಲಾಘಾತಿದುರ್ಬುದ್ಧಿ ;

“ಮಗಳೇ, ಮಗಳೇ!” ಎನುತ ಮುಂದಿನ

ನುಡಿಯನರಿಯದೆ, ಕೊಲೆಯ ಕೊಂಡಾ

ಟದಲಿ ಹಿಡಿವಂತಪ್ಪಿದನು ಕೃಷ್ಣಾಕುಮಾರಿಯನು

 

“ತಂದೆ, ನಿನಗೇಕಿಂದು ಕಳವಳ?

ಬಂದುದೇನು ವಿಪತ್ತು? ಧೈರ್ಯದ

ಸಂದುಕಡಿದಂತಿದೆಯಲಾ? “ ಎನೆ, ತಡೆದು ಗದಗದಿಸಿ

“ನೊಂದಿಹೆನು, ಮಾತಾಡಲೇಂ ! ನಿ-

ನ್ನಿಂದ ಮೇವಾಡಕ್ಕೆ ವಿಲಯವೆ?

ಕಂದ! ಬರುತಿದೆ ಸಕಲ ರಾಜಸ್ಥಾನನೃಪಸೇನೆ !

 

ತನತನಗೆ ಕೊಡು ಕೊಡು ಎನುತಮದ-

ಮುದಿತ ನೃಪಕಲಭಗಳು ಕರವನು

ತುಡುಕುತಿರಲಾರ್ಗೀವೆನೋ! ಸುತೆ, ನಿನ್ನ ಹೆತ್ತೆನಗೆ

ಗತಿಮತಿಗಳಳಿದುವು; ಮಹಾಹವ-

ಕುದಯಪುರವಸ್ತಮಿಸದೇ? ಸುಂ-

ದರಿ! ವನಾಂತಕೆ ನಡೆವೆನಾದರೆ ನಿನ್ನನೆಲ್ಲಿಡಲಿ !”

 

ಎನುತ ಅಲೆಗುಸಿಯುತ್ತ, ಹರಣದ

ಭಯ ಕೊಳೆದು ನಂಜಾದ ದುರ್ಧರ -

ಹೃದಯ ದುರ್ಗಂಧವನು ಸೂಸಿದನಿಂತು ನಿರ್ಲಜ್ಜ-

“ಹೆಣವ ಹುಗಿಯದೆ ಹದ್ದುಗಳ ಹಾ-

ರಿಕೆಯ ತಡೆಯಲಿಕಹುದೆ? ವಿಷವನು

ಕುಡಿದು ಮಡಿ ! ಮರುನುಡಿಯದಿರು ಮಗಳಾದೊಡೆನಗೆಂದ”

 

ಬೆದರಿದಳೆ? ಕೆದರಿದಳೆ? ನಲ್ನುಡಿ

ತನುವ ಪಡೆದಂತುಸುರಿದಳು - “ನಗು-

ನಗುತ ಮಡಿವುದು ರಾಜಪುತ್ರಿಯನನ್ಯಸೌಭಾಗ್ಯ !

ಮಡಿವೆನಂಜದಿರಾದೊಡೊಂದನು

ನುಡಿವೆ ;- ನೇಮಗಳೊಡನೆ ಮಾನವ

ಮಡುಹೆದಿರು, ಕುಲದುರಿಗಳೆದು ಮಸಿಗೆಂಡವಾಗದಿರು

('ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)