ಸಂಭ್ರಮಿಸುತ್ತೇನೆ ನಾನು ನನ್ನ ಸಾವನ್ನು 

 ಸಂಭ್ರಮಿಸುತ್ತೇನೆ ನಾನು ನನ್ನ ಸಾವನ್ನು 

ಸಂಭ್ರಮಿಸುತ್ತೇನೆ ನಾನು ನನ್ನ ಸಾವನ್ನು 
ಬೆತ್ತಲೆಯಾಗಿದ್ದ ಪ್ರಕೃತಿಯನು ಎಡೆಬಿಡದೆ 
ಅನುಭವಿಸಿದ ನನ್ನ ಗಂಡಸ್ತನ ಮಣ್ಣಾಯಿತೆಂದು 

ನನ್ನ ಗೋರಿಯ ಎದುರಲ್ಲಿ ತಮಟೆ ಬಾರಿಸಿ 
ಕುಣಿಯುತ್ತೇನೆ ನಾನು,,, ನನ್ನೊಳಗಿನ ಅಹಂಕಾರ 
ಹೇಳ ಹೆಸರಿಲ್ಲದಂತೆ ನಿರ್ನಾಮವಾಯಿತೆಂದು 

ನನ್ನ ಹೊರುವ ನಾಲ್ಕು ಜನರ ಹೆಗಲು ನೋವದಂತೆ 
ಸಾವಿನಲ್ಲಿ ದೇಹವನ್ನು ಸಂಪೂರ್ಣ ಧಾನಮಾಡಿ 
ಹಗುರಾಗುತ್ತೇನೆ ನಾನು- ನನ್ನದೇನಿಲ್ಲ ಎಂದು ಸಾರಲು 

ಸಕಲ ಚರಾಚರ ಜೀವರಾಶಿಗಳಿಗೆ ಸಾವೊಂದನ್ನೇ 
ಅರ್ಪಿಸುತ್ತೇನೆ ನಾನು ಮನದಾಳದಿಂದ, ನೀವಿಲ್ಲದೆ 
ನನ್ನದೆನ್ನುವ ಬದುಕು, ಬದುಕೇ ಅಲ್ಲವೆಂದು !

ನಾನು ನಿರ್ಗಮಿಸಿದ ಹನ್ನೊಂದು ದಿನಗಳಿಗೆ ನನ್ನ ಶ್ರಾದ್ಧದ 
ಅಡುಗೆಯನ್ನು, ನನ್ನದೇ ಮಾಂಸದಲ್ಲಿ ಮಾಡಿಸಿ ಕಾಡುಪ್ರಾಣಿಗಳಿಗೆ 
ಬಡಿಸುತ್ತೇನೆ, ಅವುಗಳ ಜಾಗವನ್ನು ಆಕ್ರಮಿಸಿಕೊಂಡ ತಪ್ಪಿಗಾಗಿ 

ಈ ಪುಣ್ಯಭೂಮಿಯಲ್ಲಿ ಸಾಯುತ್ತೇನೆ ನಾನು ಮತ್ತೆಂದು ಹುಟ್ಟದಂತೆ 
ದುರಾಸೆಗಳ ಕಿಚ್ಚಿಗಾಗಿ ಇನ್ನೊಬ್ಬರ ಆಸೆಗಳನ್ನು ಕೊಲ್ಲುವೆನೆಂದು 
ಮತ್ತೊಬ್ಬರ ಭಾವನೆಗಳನ್ನು ಹಿಂಡುವೆನೆಂಬ ವಿಚಿತ್ರ ಭಯದಲ್ಲಿ!

ಸಂಭ್ರಮಿಸುತ್ತೇನೆ ನಾನು ನನ್ನ ಸಾವನ್ನು 
ಎಂದಿಗಿಂತಾ ಮಿಗಿಲಾಗಿ, ಈ ಭೂಮಿಗೆ 
ನನ್ನ ಸಾವು ಸಮಾಧಾನ ನೀಡಲೆಂದು ಶರಣಾಗಿ 

-ಜೀ ಕೇ ನ  
 

Comments